ಟೆಲಿವಿಷನ್: ಬಂಡವಾಳಶಾಹಿಯ ಹೊಸ ಆಯುಧ: ಕು.ಸ.ಮಧುಸೂದನ್ ನಾಯರ್

ಇವತ್ತು ಟೆಲಿವಿಷನ್ ಕೇವಲ ಒಂದು ಸಂವಹನಾ ಮಾಧ್ಯಮವಾಗಿ ಉಳಿದಿಲ್ಲ. ಬದಲಿಗೆ ಅದೊಂದು ಉದ್ಯಮವಾಗಿ ಬೆಳೆಯುತ್ತ,ಬಂಡವಾಳಶಾಹಿ ಶಕ್ತಿಗಳ ಕೈಯಲ್ಲಿನ ಒಂದು ಪ್ರಬಲ ಅಸ್ತ್ರವಾಗಿ ಪರಿವರ್ತನೆಯಾಗಿ ವಿಶ್ವದ ಅರ್ಥವ್ಯವಸ್ಥೆಯನ್ನು ನಿಯಂತ್ರಿಸುವ ಮಟ್ಟಕ್ಕೆ ಬೆಳೆದು ನಿಂತಿದೆ. 

ವಸಾಹತುಶಾಹಿಯ ಮೂಲಭೂತಗುಣವೇ ಅಂತಾದ್ದು. ಆಯಾ ಕಾಲಘಟ್ಟದಲ್ಲಿ ಅನ್ವೇಷಿಸಲ್ಪಡುವ ವೈಜ್ಞಾನಿಕ ಉಪಕರಣಗಳನ್ನು ತನ್ನ ಹಿತಾಸಕ್ತಿಗಳಿಗನುಗುಣವಾಗಿ ಬಳಸಿಕೊಳ್ಳುವಲ್ಲಿ ಅದನ್ನು ಮೀರಿಸುವವರಿಲ್ಲ. ಇತಿಹಾಸವನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಿದರೆ ಈ ಸತ್ಯ ಅರ್ಥವಾಗುತ್ತದೆ.

ಹದಿನಾಲ್ಕು ಹದಿನೈದನೇ ಶತಮಾನದಲ್ಲಿ  ಅನ್ವೇಷಿಸಲ್ಪಟ್ಟ ನಾವಿಕರ ದಿಕ್ಸೂಚಿ, ಇದಕ್ಕೊಂದು ಅತ್ಯುತ್ತಮ ಉದಾಹರಣೆ. ದಿಕ್ಸೂಚಿಯ ಅನ್ವೇಷಣೆಯ ನಂತರ ಯೂರೋಪಿನ ಬಹುತೇಕ ರಾಜಸತ್ತೆಗಳು ವಿಶ್ವದಲ್ಲಿನ ಹೊಸ  ಭೂಭಾಗಗಳನ್ನು ಅನ್ವೇಷಿಸಲು ತಂಡೋಪತಂಡವಾಗಿ ನಾವಿಕರನ್ನು ಕಡಲಿಗಟ್ಟಿದವು.  ಅದರ ಪರಿಣಾಮವಾಗಿ ಕಂಡು ಹಿಡಿಯಲ್ಪಟ್ಟ ಹೊಸ ಖಂಡಗಳನ್ನು ಅವು ನೂರಾರು ವರ್ಷಗಳ ಕಾಲ ತಮ್ಮ ವಸಾಹತುಗಳನ್ನಾಗಿ ಮಾಡಿಕೊಂಡಿದ್ದವು. ಅವತ್ತು ಪ್ರಾರಂಭವಾದ ವಸಾಹತುಶಾಹಿ ಆಕ್ರಮಣ ಇವತ್ತಿಗೂ ಬೇರೆ ಬೇರೆ ರೂಪಗಳಲ್ಲಿ ನಡೆಯುತ್ತಲೇ ಇದೆ. ಆ ನಂತರದ ದಿನಗಳಲ್ಲಿ ಕಂಡುಹಿಡಿಯಲ್ಪಟ್ಟ ಸಿಡಿಮದ್ದುಗಳನ್ನು( ಬಂದೂಕು, ಫಿರಂಗಿ ಇತ್ಯಾದಿ) ಬಳಸಿಕೊಂಡ  ಈ ಶಕ್ತಿಗಳು ತಾವು ಹೊಸದಾಗಿ ಆಕ್ರಮಿಸಿಕೊಂಡ ಭೂಭಾಗಗಳ ಮೂಲನಿವಾಸಿಗಳನ್ನು ಹಣಿಯಲು ಮತ್ತು ಅಲ್ಲಿ ತಮ್ಮ ಅಧಿಪತ್ಯವನ್ನು ಅಧಿಕೃತವಾಗಿ ಸ್ಥಾಪಿಸಿಕೊಳ್ಳಲು ಯಶಸ್ವಿಯಾದವು. 

ನಂತರದ ಸರದಿ ಹಬೆಯಂತ್ರ ಮತ್ತು ಸ್ಪಿನ್ನಿಂಗ್ ಮಿಲ್‌ಗಳದು!. ತಮ್ಮ ವಸಾಹತುಗಳಲ್ಲಿ ರೈಲು ಸಂಚಾರವನ್ನು ಆರಂಭಿಸಿ ತಮಗೆ ಬೇಕಾದ ಕಚ್ಛಾ ವಸ್ತುಗಳನ್ನು ಒಳನಾಡಿನಿಂದ ಬಂದರುಗಳಿಗೆ ಸಾಗಿಸುವ ಕಾರ್ಯವನ್ನು ಸುಗಮಗೊಳಿಸಿಕೊಂಡವು. ಜೊತೆಗೆ ತಮ್ಮ ದೇಶದಲ್ಲಿ ಸ್ಥಾಪಿಸಿದ್ದ ಕೈಗಾರಿಕೆಗಳಿಗೆ ನಿರಂತರವಾಗಿ ಕಚ್ಛಾವಸ್ತುಗಳು ಪೂರೈಕೆಯಾಗುವಂತೆ ನೋಡಿಕೊಂಡವು.

ಆಮೇಲೆ ಬಂದ ವಿಮಾನಗಳು ವಸಾಹತುಶಾಹಿ ಬಂಡವಾಳಶಾಹಿ ಶಕ್ತಿಗಳ ಆಕ್ರಮಣಶಾಲಿ ನೀತಿಗೆ ಇನ್ನಷ್ಟು ವೇಗ-ಹುರುಪು ತಂದುಕೊಟ್ಟವು. ನಂತರ ಇಪ್ಪತ್ತನೇ ಶತಮಾನದಲ್ಲಿ ಕಂಡುಹಿಡಿಯಲ್ಪಟ್ಟ ಪರಮಾಣು ಬಾಂಬಿನಿಂದ ಇಡೀ ವಿಶ್ವದಲ್ಲಿ ಒಂದು ಭಯಬೀತ ವಾತಾವರಣ ನಿರ್ಮಿಸಲು ಸಾದ್ಯವಾಯಿತು. ತೀರಾ ಇತ್ತೀಚೆಗಿನ ದಿನಗಳಲ್ಲಿ ಅವಿಷ್ಕಾರವಾದ ಕಂಪ್ಯೂಟರ್,ಟೆಲಿವಿಷನ್ನುಗಳನ್ನು ಬಳಸಿಕೊಂಡ ಪಶ್ಚಿಮದ ಬಂಡವಾಳಶಾಹಿ ಶಕ್ತಿಗಳು ತಮ್ಮ ಹೊಸ ಆರ್ಥಿಕ ನೀತಿಯನ್ನು ಇಡೀ ವಿಶ್ವದ ಮೇಲೆ ಹೇರಲು ಭಾಗಶ: ಯಶಸ್ವಿಯಾಗಿದೆ.

ಈ ಹಿನ್ನೆಲೆಯಲ್ಲಿ  ಟೆಲಿವಿಷನ್ ಎಂಬ ಒಂದು ಸಂವಹನಾ ಮಾಧ್ಯಮವನ್ನು ಹೇಗೆ ಬಂಡವಾಳಶಾಹಿ ಶಕ್ತಿಗಳು ತಮ್ಮ ಮುಕ್ತ ಆರ್ಥಿಕನೀತಿಯನ್ನು ವಿಶ್ವದಾದ್ಯಂತ ಜಾರಿಗೆ ತರುವ ಉದ್ದೇಶಕ್ಕೆ ಆಯುಧವನ್ನಾಗಿ ಬಳಸುತ್ತಿದೆ ಎಂಬುದನ್ನು ಮಾತ್ರ ಇಲ್ಲಿ ಹೇಳ ಬಯಸಿದ್ದೇನೆ.

ಇಂಡಿಯಾಕ್ಕೆ ಟೆಲಿವಿಷನ್ ಕಾಲಿಟ್ಟು ಅರ್ಧ ಶತಮಾನದ ಮೇಲಾಯಿತು. ಪ್ರಾರಂಭದಲ್ಲಿ ಶಿಕ್ಷಣ, ಮಾಹಿತಿಯ ಹೆಸರಿನಲ್ಲಿ ಬಂದ ಟೆಲಿವಿಷನ್ ತದನಂತರದ ವರ್ಷಗಳಲ್ಲಿ ಯಾರೂ ಊಹಿಸಿರದ ಪ್ರಮಾಣದಲ್ಲಿ ಬೆಳೆದು ನಿಂತಿದೆ. ಎಂಭತ್ತರ ದಶಕದ ಅಂತ್ಯಕ್ಕೆ ಮೂರೋ ನಾಲ್ಕೋ ಇದ್ದ ವಾಹಿನಿಗಳ ಸಂಖ್ಯೆ ಇವತ್ತು ನಾಲ್ಕುನೂರಾ ಐವತ್ತನ್ನೂ ದಾಟಿದೆ. ( ಸದ್ಯದ ಒಂದು ಅಂದಾಜಿನ ಪ್ರಕಾರ ಇಂಡಿಯಾದಲ್ಲಿನ ಟೆಲಿವಿಷನ್‌ನ ವಾರ್ಷಿಕ ವಹಿವಾಟು ಇಪ್ಪತ್ತೈದು ಸಾವಿರ ಕೋಟಿಗಳನ್ನೂ  ಮೀರಿದೆ) ಹೀಗೆ ನಾವ್ಯಾರು ಕಲ್ಪಿಸಿಕೊಳ್ಳಲಾಗದ ರೀತಿಯಲ್ಲಿ ಟೆಲಿವಿಷನ್ ಬೆಳೆದು ನಿಲ್ಲಲು ಕಾರಣಗಳೇನು ಎಂದು ಹುಡುಕುತ್ತಾ ಹೋದರೆ ಸಿಗುವದು ಮತ್ತದೆ ಪಶ್ಚಿಮದ ಜಾಗತೀಕರಣ ಮತ್ತು ಮುಕ್ತ ಆರ್ಥಿಕ ನೀತಿಯೆಂಬ ಭೂತಗಳು.

ನೀವೇ ಗಮನಿಸಿ:ತೊಂಭತ್ತರ ದಶಕದಲ್ಲಿ ಆರಂಭಗೊಂಡ ಮುಕ್ತ ಆರ್ಥಿಕನೀತಿಯ ಪ್ರಕ್ರಿಯೆಗೂ ಹೆಚ್ಚುತ್ತಾ ಬಂದ ವಾಹಿನಿಗಳ ಸಂಖ್ಯೆಗೂ ಅವಿನಾಬಾವ ಸಂಬಂದವಿರುವುದನ್ನು!.

ಮುಕ್ತ ಆರ್ಥಿಕ ನೀತಿಯ ಮೂಲಮಂತ್ರವೇ ಇಡೀ ವಿಶ್ವವನ್ನು ಒಂದು ವರ್ಣರಂಜಿತ ಮಾರುಕಟ್ಟೆಯನ್ನಾಗಿ ಪರಿವರ್ತಿಸುವುದಾಗಿದೆ. ಈ ಮಾರುಕಟ್ಟೆಯಲ್ಲಿ ಮಾರಾಟಗಾರ ಮತ್ತು ಕೊಳ್ಳುವವನ ನಡುವೆ ಸೇತುವೆಯಗಿ ಕಾರ್ಯನಿರ್ವಹಿಸಲು ಬಂಡವಾಳಶಾಹಿ ಶಕ್ತಿಗಳಿಗೆ ದೊರೆತ ಆಯುಧವೆ ಈ ಟೆಲಿವಿಷನ್ ಎನ್ನುವ ಮಾಯಾಪೆಟ್ಟಿಗೆ! ವಿಶ್ವದ ಎಲ್ಲ ರಾಷ್ಟ್ರಗಳನ್ನು,ಸರಕಾರಗಳನ್ನು, ವ್ಯಕ್ತಿಗಳನ್ನೂ ಒಂದೇ ಮಾರುಕಟ್ಟೆಯ ಜಾಲದಲ್ಲಿ ಸೇರಿಸಲು ಮತ್ತು ಮತ್ತು ಅವುಗಳ ನಡುವೆ ಸಮನ್ವಯ ಸಾದಿಸಲು ಟೆಲಿವಿಷನ್ನಿನ ನೆರವು ಪಡೆದ ಬಂಡವಾಳಶಾಹಿ ಶಕ್ತಿಗಳು ದಿನದಿನಕ್ಕೆ ಯಶಸ್ವಿಯಾಗುತ್ತಬಂದಿವೆ. ಮಾರುಕಟ್ಟೆಅಂದ ಮೇಲೆ ಮಾರುವವರು,ಕೊಳ್ಳುವವರು, ಸೇವೆ-ಸರಕುಗಳು ಇರಬೇಕಾಗುತ್ತದೆ. ಇವೆಲ್ಲವನ್ನೂ ಒಂದೆಡೆ ತಂದು ಪ್ರದರ್ಶನಕ್ಕಿಟ್ಟು ವ್ಯಾಪಾರ ಕುದುರಿಸಲು ಟೆಲಿವಿಷನ್ ಅತ್ಯುತ್ತಮ ಮಾದ್ಯಮವೆಂದು ತಿಳಿದ ಕೂಡಲೆ ಬಂಡವಾಳಶಾಹಿ ಶಕ್ತಿಗಳು ಟೆಲಿವಿಷನ್  ಅನ್ನು ತಮ್ಮ ಆಧ್ಯತೆಯನ್ನಾಗಿ ಮಾಡಿಕೊಂಡವು.ತದನಂತರವೆ ಅವು ಈ ಮಾದ್ಯಮದ ಮೆಲೆ ಹಿಡಿತ ಸಾದಿಸಲು ಹೆಚ್ಚೆಚ್ಚು ಬಂಡವಾಳವನ್ನು ಹೂಡತೊಡಗಿದವು. ಈ ಹೊತ್ತಿಗಾಗಲೇ ಮುಂದುವರೆದ ರಾಷ್ಟ್ರಗಳು ಬಾಹ್ಯಾಕಾಶ ಕ್ಷೇತ್ರದಲ್ಲಿ ಸಾದಿಸಿದ ಯಶಸ್ಸು ಇದಕ್ಕೆ ಪೂರಕವಾಯಿತು. ಉಪಗ್ರಹಗಳನ್ನು ಬಳಸಿಕೊಂಡು ಸಂಪರ್ಕ ಸಾದಿಸುವ ಸೇವೆಗಳನ್ನು ಟೆಲಿವಿಷನ್ನಿನ ಬಂಡವಾಳಶಾಹಿ ಕಂಪನಿಗಳಿಗೆ ಮಾರಿಕೊಂಡವು.

ಹೀಗೆ ಬಂಡವಾಳಶಾಹಿಗಳ ಆಯುಧವಾಗಿ ಮಾರ್ಪಾಡಾದ ಟೆಲಿವಿಷನ್ ಇವತ್ತು ಎಷ್ಟು ಪರಿಣಾಮಕಾರಿಯಾಗಿ ಬೆಳೆದು ನಿಂತಿದೆಯೆಂದರೆ,ದೂರದ ಅಮೇರಿಕಾದಲ್ಲಿ ತಯಾರಾದ ಉತ್ಪನ್ನವೊಂದನ್ನು ಚಿಕ್ಕಮಗಳೂರಿನ ಮಲೆನಾಡಿನ ಹಳ್ಳಿಯೊಂದರಲ್ಲಿ ಕೂತು ಟಿ.ವಿ.ನೋಡುವ ಮಹಿಳೆಯೊಬ್ಬಳು ನೋಡುತ್ತಾಳೆ. ಮತ್ತು ತನಗದು ಬೇಕೆನಿಸಿದರೆ, ತನ್ನಕೊಳ್ಳುವ ಶಕ್ತಿಗೆ ಸಾದ್ಯವೆನಿಸಿದರೆ, ತಕ್ಷಣ ಅದನ್ನು ಖರೀದಿಸಲು ಅದೇ ಟಿ.ವಿ.ಯಲ್ಲಿ  ತೋರಿಸಲಾಗುವ ದೂರವಾಣಿ ಸಂಖ್ಯೆಗೆ ಕರೆಮಾಡಿ ಬೇಡಿಕೆ ಸಲ್ಲಿಸಿ ಎರಡು ದಿನದಲ್ಲಿ ಪಡೆಯಬಲ್ಲಳು.

ಹೀಗೆ ಇಡೀ ವಿಶ್ವವನ್ನು ಒಂದು ಬೃಹತ್ ಮಾರುಕಟ್ಟೆಯನ್ನಾಗಿಸುವ ಪ್ರಯತ್ನದ ಹಿಂದೆ ಇಡೀ ವಿಶ್ವದ ಆರ್ಥಿಕ ವ್ಯವಸ್ಥೆಯನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಹುನ್ನಾರವಡಗಿದೆ.  ಈ ಕಾರಣದಿಂದಾಗಿಯೇ ಇವತ್ತು ಟೆಲಿವಿಷನ್ನಿನ ಮೂಲ ಉದ್ದೇಶಗಳಾದ ಶಿಕ್ಷಣ,ಮಾಹಿತಿ,ಮನೊರಂಜನೆಗಳು ನೇಪಥ್ಯಕ್ಕೆ ಸರಿದಿವೆ. ಬದಲಿಗೆ ವ್ಯಾಪಾರ-ಲಾಭಬಡುಕುತನಗಳು ಮುಂಚೂಣಿಗೆ ಬಂದುನಿಂತಿವೆ.

ದೊಡ್ಡ ದೊಡ್ಡ ಮಾಲುಗಳಲ್ಲಿ ಗ್ರಾಹಕರನ್ನು ಸೆಳೆಯಲು ಹೇಗೆ ಮನುಷ್ಯರಿಗೆ ವಿವಿಧ ರೀತಿಯ ಪ್ರಾಣಿಗಳ ವೇಷ ಹಾಕಿ ಕುಣಿಸಲಾಗುತ್ತದೆಯೊ ಅದೆ ರೀತಿಯಲ್ಲಿ ವಾಹಿನಿಗಳಲ್ಲಿ ಮಹಿಳಾ ಕೇಂದ್ರಿತ ದಾರಾವಾಹಿಗಳನ್ನು, ವಿವಿಧ ರೀತಿಯ ರಿಯಾಲಿಟಿ ಶೋಗಳನ್ನು ಪ್ರಸಾರ ಮಾಡಲಾಗುತ್ತಿದೆ. ಭಿನ್ನರುಚಿಯ ಜನರನ್ನು ಸೆಳೆಯಲು ಆಯಾ ವಯೋಮಾನದವರಿಗನುಗುಣವಾಗಿ ವಿವಿದ ತೆರನಾದ ವಾಹಿನಿಗಳನ್ನು ಸುರು ಮಾಡಲಾಗಿದೆ.  

ಕ್ರೀಡಾಪ್ರೇಮಿಗಳಿಗೆ ಕ್ರೀಡಾವಾಹಿನಿಗಳು, ಮಕ್ಕಳಿಗೆ ಕಾರ್ಟೂನ್ ವಾಹಿನಿಗಳು,ದುಡಿಯುವ ಗಂಡಸರಿಗೆ ವಾರ್ತಾ ವಾಹಿನಿಗಳು, ಮಹಿಳೆಯರಿಗೆ ಕೌಟುಂಬಿಕ ದಾರಾವಾಹಿಗಳ ವಾಹಿನಿಗಳು, ಹೀಗೆ ದಿನದ ಎಲ್ಲ ಸಮಯದಲ್ಲಿಯೂ ಒಂದಲ್ಲ ಒಂದು ವಾಹಿನಿಗಳನ್ನು ನೋಡುತ್ತಲೇ ಇರುವ ಹಾಗೆ ಜನರನ್ನು ಸಮ್ಮೋಹಿನಿಗೊಳಿಸಿವೆ.

ಇದರ ಜೊತೆಗೆ ಇತ್ತೀಚೆಗೆ ಎಲ್ಲ ಭಾಷೆಗಳಲ್ಲೂ ವಾರ್ತಾವಾಹಿನಿಗಳ ಭರಾಟೆ ಹೆಚ್ಚಾಗ್ತಿದೆ. ಬಂಡವಾಳಶಾಹಿಗಳ ಕೃಪಾಕಟಾಕ್ಷದಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ವಾಹಿನಿಗಳು ತಮ್ಮನ್ನ ಸಲಹುತ್ತಿರುವ  ಶಕ್ತಿಗಳಿಗೆ ಪೂರಕವಾದ ವಿಷಯಗಳನ್ನು ಮಾತ್ರ ಪ್ರಸಾರ ಮಾಡುತ್ತ ಬಂಡವಾಳಶಾಹಿಗಳಪರವಾದ ಜನಾಭಿಪ್ರಾಯವೊಂದನ್ನು ರೂಪಿಸಲು ಸದಾ ಪ್ರಯತ್ನಿಸುತ್ತಿರುತ್ತವೆ. ಈಗಂತೂ ಇವು ಎಷ್ಟು ಪ್ರಬಲವಾಗಿ ಬೆಳೆದಿವೆಯೆಂದರೆ ಸರಕಾರಗಳನ್ನೆ ಬದಲಾಯಿಸುವ ಮಟ್ಟಿಗೆ. ಇದಕ್ಕೆ ಕಳೆದ ಲೋಕಸಭಾ ಚುನಾವಣೆಗಳನ್ನು ಉದಾಹರಣೆಯಾಗಿ ನೋಡಬಹುದಾಗಿದೆ.

ಬಂಡವಾಳಶಾಹಿಗಳು ಮುಕ್ತ ಆರ್ಥಿಕ ನೀತಿಯನ್ನು ವಿಶ್ವದೆಲ್ಲೆಡೆ ಜಾರಿಗೆ ತಂದು ತಮ್ಮ ಹಿತ ಕಾಪಾಡಿಕೊಳ್ಳಲು ಟೆಲಿವಿಷನ್ ಒಂದೇ ಅಲ್ಲ , ಎಲ್ಲ ರೀತಿಯ ಹೊಸ ವೈಜ್ಞಾನಿಕ ಆವಿಷ್ಕಾರಗಳನ್ನು ಬಳಸಿಕೊಳ್ಳಲು ತಯಾರಾಗಿರುತ್ತವೆ.

ಆದ್ದರಿಂದಲೇ ಟೆಲಿವಿಷನ್ ಎಂಬುದಿವತ್ತು ಒಂದು ಕಲಾಪ್ರಕಾರವಾಗಿಯೋ,ಸಂವಹನ ಮಾದ್ಯಮವಾಗಿಯೊ ಉಳಿದಿಲ್ಲವೆಂದು ನಾನು ಲೇಖನದ ಮೊದಲಿಗೆ ಹೇಳಿದ್ದು.

ಆದರೆ ಬದಲಾಗುತ್ತಿರುವ ನಮ್ಮ ನೆಲದ  ಮೌಲ್ಯಗಳನ್ನು ಸಂಸ್ಕೃತಿಯನ್ನು ಕಾಪಾಡಿಕೊಳ್ಳಲು ಟೆಲಿವಿಷನ್ ಅನ್ನು ಒಂದು ಕಲಾಪ್ರಕಾರವನ್ನಾಗಿ ,ಸೃಜನಶೀಲ ಮಾಧ್ಯಮವನ್ನಾಗಿ ಉಇಸಿಕೊಳ್ಳಬೇಕಾದ ಅಗತ್ಯ ನಮಗಿದೆ. ಈದಿಸೆಯಲ್ಲಿ ಅದನ್ನು ದುಡಿಸಿಕೊಳ್ಳುವ ಹೊಸ ದಾರಿಗಳನ್ನು  ಆ ಮಾಧ್ಯಮದ ಒಳಗಿರುವವರು ಹುಡುಕ ಬೇಕಿದೆ.

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
ಶ್ರೀನಿವಾಸ್ ಪ್ರಭು

''ಬದಲಾಗುತ್ತಿರುವ ನಮ್ಮ ನೆಲದ  ಮೌಲ್ಯಗಳನ್ನು ಸಂಸ್ಕೃತಿಯನ್ನು ಕಾಪಾಡಿಕೊಳ್ಳಲು ಟೆಲಿವಿಷನ್ ಅನ್ನು ಒಂದು ಕಲಾಪ್ರಕಾರವನ್ನಾಗಿ ,ಸೃಜನಶೀಲ ಮಾಧ್ಯಮವನ್ನಾಗಿ ಉಳಿಸಿಕೊಳ್ಳಬೇಕಾದ ಅಗತ್ಯ ನಮಗಿದೆ'' ನಿಜ, ಇಂದು ಟೆಲಿವಿಷನ್ ಮೆಲ್ಲಗೆ ನಮ್ಮ ಮೌಲ್ಯಗಳನ್ನು ಸಂಸ್ಕ್ರುತಿಯನ್ನು ನುಂಗುತ್ತಿದೆ. ನಮ್ಮ ಕಿರಿ ಜನಾಂಗದ ಮೇಲೆ ಇದರ ಪ್ರಭಾವ ನೋಡಿದರೆ ಭಯ ಹುಟ್ಟಿಸುತ್ತದೆ. ಅದೇ ರೀತಿ ಇಂದಿನ ಇತರ ಸಾಮಾಜಿಕ ಅಂತರ್ಜಾಲ ತಾಣಗಳು! ಕೆಲಸ ಇಲ್ಲದ ಕೆಲಸದಲ್ಲಿ ಇವತ್ತು ಎಲ್ಲರೂ ಬಿಜಿ. ಮುಂದೆ ಇದರ ಫಲ ಊಹಿಸಲೂ ಸಾದ್ಯವಿಲ್ಲ. ಸಮೊಯೋಚಿತ ಬರಹ.

1
0
Would love your thoughts, please comment.x
()
x