ಅಮರ್ ದೀಪ್ ಅಂಕಣ

ಟನ್ನು ಭಾರದ ಖುಷಿ ಹೊರುವಂತಿರಬೇ​ಕು ಟ್ರಿಪ್ಪು: ಅಮರ್ ದೀಪ್ ಪಿ.ಎಸ್.

ಒಂದೇ ಕಡೆ ಅದೇ ಕೆಲಸ, ಅದೇ ರಸ್ತೆ, ಓಡಾಟ, ಮನೆ, ಮಂದಿ, ಮಾತು, ಜೀವನ ಕ್ರಮ ಒಮ್ಮೊಮ್ಮೆ ಬೋರಾಗುತ್ತೆ.   ಆಗಾಗ ಒಂದೆರಡು ದಿನಗಳ ಮಟ್ಟಿಗಾದರೂ ಹೊರಗಡೆ ತಿರುಗಾಡಿ ಬರಬೇಕು. ಹೋಗಿ ಬಂದೆವೆಂದರೆ, ಮನಸ್ಸು ದಿಗ್ಗನೇ ಎದ್ದು "ನಾನ್ ಫ್ರೆಶ್ ಆದ್ನೆಪ್ಪಾ" ಅಂತೇನೂ ಹೇಳುವುದಿಲ್ಲ.  ಆದರೆ, ಗೆಳೆಯರು ಸೇರಿ ರುಟೀನು ತಪ್ಪಿಸಿಕೊಂಡ ಖುಷಿಗೋ ಅಥವಾ ಹೊಸ ಜಾಗ,  ಸಧ್ಯಕ್ಕೆ ಹತ್ತಿರವಿಲ್ಲದ ಕೆಲಸ, ದುಡಿಮೆ, ಟೆನ್ಶನ್ ಎಲ್ಲಾನು ಮರೆತು ಖುಷ್ ಖುಷಿಯಾಗಿ  ಪರಿಸರ, ನದಿ ತೀರ, ಐತಿಹಾಸಿಕ ಸ್ಥಳ, ಮೂಕ ಬಂಡೆಗಳು,  ಕಥೆ ಹೇಳುವ ಶಿಲೆಗಳು, ಇತಿಹಾಸ ನೆನಪಿಸುವ ಸ್ಮಾರಕಗಳು, ಹೀಗೆ  ನೋಡಿ ಬರುವ ಹೊತ್ತಿಗೆ ಮನಸು ಪ್ರಪ್ಹುಲ್ಲವಾಗಿರುತ್ತೆ.  ಊರ  ಒಳಗಿರುವ ಸಿನೆಮಾ, ಪಾರ್ಕು, ಶಾಪಿಂಗ್, ಟೀವಿ, ರಿಯಾಲಿಟಿ ಷೋ, ಸೀರಿಯಲ್ಲು, ಯಾವುದೂ ನಮ್ಮನ್ನು ಅಷ್ಟು ಸಂತುಷ್ಟಗೊಳಿಸಲಾರವು.  (ಕ್ಷಮಿಸಿ, ಶಾಪಿಂಗು, ಟೀವಿ ಸೀರಿಯಲ್ಲೂ ಅಂದದ್ದು ಬರೀ ಗಂಡಸರಿಗೆ ಮಾತ್ರ )… 
  
ಚಿಕ್ಕಂದಿನಿಂದ ನಾನು ಕಲಿಯದಿರುವುದೆಂದರೆ ಈಜು. ಅದೊಂದೇ ಅಲ್ಲ ಇನ್ನು ಕಲಿಯಲು ಬಾಕಿ ಇರುವ ಎಷ್ಟೋ ಕ್ರಮಗಳಿವೆ.  ಸುಮ್ಮನೆ ಕುಳಿತು ಕೇಳಿಸಿಕೊಳ್ಳುವುದು, ತಾಳ್ಮೆಯಿಂದಿರುವುದು, ಹೆಚ್ಚು ಏಕಾಗ್ರತೆ ಯಿಂದ ಹೆಚ್ಚೆಚ್ಚು ಓದುವುದು, ಅರ್ಥೈಸಿಕೊಳ್ಳುವುದು, ಮಕ್ಕಳ ಎದುರಿಗೆ ದಡ್ದನಾಗುವುದು, ಎದುರಿಗೆ ಕುಳಿತ ವ್ಯಕ್ತಿ ನನ್ನ ಬಗ್ಗೆ ತುಸು ಹೆಚ್ಚೇ ಅಥವಾ ನನ್ನನ್ನು ಓಲೈಸಿ ಮಾತಾಡುವಾಗ ಯಾವ ಉದ್ದೇಶದಿಂದ ಎಂಬ ಸಣ್ಣ ಸುಳಿವು ಹಿಡಿಯುವುದು.  ಈ ವಯಸ್ಸಿನಲ್ಲಿ  ಏನೆಲ್ಲಾ ಮನನ ಮಾಡಿಕೊಂಡು ಬೆನ್ನಿಗೆ ಒಂದು ಮೂಟೆ ಆಗು ವಷ್ಟು ಅನುಭವ, ತಿಳುವಳಿಕೆ ಕಟ್ಟಿಕೊಂಡು ಜೀವನದಲ್ಲಿ ಗುರುತಿಸಲ್ಪಟ್ಟು ಜೀವಿಸುತ್ತಿರುವವರನ್ನು ನೋಡಿ ದರೆ, ಹೌದು ನಾನಿನ್ನು ಕಲಿಯುವುದು ಸಾಕಷ್ಟಿದೆ ಅನ್ನಿಸದಿರಲಾರದು.  ಹಲವು ಬಾರಿ ಈ ಕಾಂಪ್ಲೆಕ್ಸ್ ನನ್ನನ್ನು ಕಾಡಿದ್ದಿದೆ, ಕಾಡುತ್ತಲೇ ಇದೆ.  ಕೆಲವು ಕಲಿಕೆಗಳು ಎಟುಕಿವೆ.  ಹಲವು ದಕ್ಕಿಲ್ಲ. 
 
ದಿನಂಪ್ರತಿ ಹೀಗೆ ಯೋಚನೆ ಬರುವುದಿಲ್ಲ.   ಆದರೆ ಯಾವತ್ತಾದರೊಂದು ದಿನ ತಗುಲಿಕೊಂಡರೆ ಅದು ದಿನಗಟ್ಟಲೇ, ಕೆಲವೊಮ್ಮೆ ತಿಂಗಳು ಗಟ್ಟಲೇ ಕಾಡುತ್ತಲೇ ಇರುತ್ತದೆ.  ಆದ್ದರಿಂದ ಅದನ್ನು ಕೊಡವಿಕೊಳ್ಳಲು ಇದ್ದ ಊರು, ಕೆಲಸ, ದಾರಿ, ಮನೆ, ರೇಷನ್ನು, ಗ್ಯಾಸ್, ತರಕಾರಿ, ರಿಪೇರಿ, ಮನೆ ಬಾಡಿಗೆ, ಮಗನ ಸ್ಕೂಲ್ ಫೀಸ್, ಆಟೋ ದುಡ್ಡು ಎಲ್ಲದಕ್ಕೂ ತಾತ್ಕಾಲಿಕ ವ್ಯವಸ್ಥೆ ಮಾಡಿಟ್ಟು ದೂರದ ಒಂದು ಕೆರೆ, ಹೊಳೆ,ನದಿ ದಂಡೆ ಹುಡುಕಿ ಬರೀ ಒಂದು ಬರ್ಮುಡಾ, ಮೇಲೆ ಟೀ ಶರ್ಟು ಹಾಕಿ ದಿನಗಟ್ಟಲೇ ಬರಿಗಾಲಲ್ಲೇ ಬಿಸಿಯಿದ್ದರೂ ಹಸಿಯಾದರೂ ಮರಳಲ್ಲಿ  ತಿರುಗ ಬೇಕೆನಿಸುತ್ತೆ.   ನೀರಲ್ಲಿ ಕಾಲು ಇಳಿ ಬಿಟ್ಟು ಭರ್ರ್ ಎನ್ನುವ ಝರಿ ಸದ್ದು ಕೇಳುತ್ತಲೇ ಇದ್ದು ಬಿಡಬೇಕೆನಿಸುತ್ತೆ.   ಅಂದುಕೊಳ್ಳಲಿಕ್ಕೇನು ಬೇಕಾದ್ದು ಬರುತ್ತೆ.  ನಾವು ಹೋಗುತ್ತೇವಾ?  ಇಲ್ಲವಾ?  ಬೇಸರ ಕಳೆಯಿತಾ ಇಲ್ಲವಾ?  ಅದು ಮುಖ್ಯ. 
 
ಸಣ್ಣವನಿದ್ದಾಗಿನಿಂದ ಗಮನಿಸುತ್ತಲೇ ಬಂದ ನಾನು ಯಾವುದಕ್ಕೂ ಒಂದು ನಿರ್ಧಾರವನ್ನು ಏಕಾಏಕಿ ತೆಗೆದು ಕೊಂಡಿಲ್ಲ.  ಸುಲಭದ್ದಾದರೂ ಉಹೂ… ಹಿಂಜರಿಕೆ.  ಈಜು ಕೂಡ ನಾನು ಕಲಿಯದೇ ಇರಲು ಕಾರಣವೂ ಅದೇ.  ನೀರು, ಕಾಡು, ಪ್ರಯಾಣ, ಪ್ರವಾಸ, ಎಲ್ಲವು  ಇಷ್ಟವೇ.   "ಇಗೋ ನಾನು ಹೊರಟೆ" ಎಂದು  ಸಡನ್ನಾಗಿ ಗಂಟು ಕಟ್ಟಿಕೊಂಡು ಹೋದದ್ದು ಮಾತ್ರ ಕೆಲವೇ ಸಲ ಮಾತ್ರ.  ಈಗ ಬಿಡಿ ನೌಕರಿ, ಕೆಲಸ, ಜವಾಬ್ದಾರಿ, ಮನೆ, ಅವ್ವ, ಹೆಂಡತಿ, ಮಕ್ಕಳು, ಖಾಯಿಲೆ, ಮಕ್ಕಳ ಶಾಲೆ, ಹೋಂ ವರ್ಕ್, ಇದ್ದಕ್ಕಿದ್ದಂತೆ ಬಿಟ್ಟು ಹೋಗುವುದು ಕಷ್ಟವಾಗಿರಬಹುದು.  ಆದರೂ ಬಿಡುವು ಮಾಡ್ಕೊಂಡು ರಜೆ ಪಡೆದು ಹೊರಡುತ್ತೇನೆ. ಆಗಿನ್ನೂ ಚಿಕ್ಕ ವಯಸ್ಸು, ದೊಡ್ಡ ಬೆರಗು, ಸ್ವತಂತ್ರವಾಗಿ, ಮನೆ ಮಂದಿಯ ಕೈ ಬೆರಳಿಲ್ಲದೇ ಮೇಷ್ಟ್ರು ಗದರಿಕೆಯ ನೆರಳಲ್ಲೇ ಆದರೂ ಕೆಲವೇ  ಗೆಳೆಯರ ಜೊತೆ ಕೇಕೆ ಹಾಕುತ್ತಾ, ಆಕರ್ಷಿಸುತ್ತಿದ್ದ "ಹೊರಗಿನ ಪ್ರಪಂಚ"ದ ನಿರೀಕ್ಷೆ ನೋಟಕ್ಕೆ ಹೆಚ್ಚು ಒಲವಿತ್ತು.  ಕುತೂಹಲವಿತ್ತು.  ದುಡ್ಡು ಕೆಲವೇ ರುಪಾಯಿಯದಾದರೂ ಪಿಕ್ನಿಕ್ ಗೆ ಅದರದೇ ಆದ ಖುಷಿಯೂ  ಇರುತ್ತಿತ್ತು.   ಹೆಚ್ಚೆಂದರೆ ಕೈಯಲ್ಲಿ ಹತ್ತಿಪ್ಪತ್ತು ರುಪಾಯಿ ಜೊತೆಗೆ  ಮನೆಯಿಂದ ತಂದ ತಿಂಡಿ, ತಿನಿಸು. ಆಗೆಷ್ಟು ಖುಷಿ ಇತ್ತಲ್ಲವಾ? ಪ್ರವಾಸದ ಅವಕಾಶ ಸಿಕ್ಕಾಗೆಲ್ಲಾ  ನನ್ನ  ಅದೃಷ್ಟಕ್ಕೆ ಅಂಗವೈಕಲ್ಯ.  ಮತ್ತೊಮ್ಮೆ ಹಸನ್ಮುಖಿ ಲಕ್ಷ್ಮಿಗೆ  ಧಾರಾಳಿ ಮನಸ್ಸಿರುತ್ತಿದ್ದಿಲ್ಲ. ಈ ವಯಸ್ಸಲ್ಲಿ ನನಗದು ಎಷ್ಟೇ ಸಂತೋಷ, ಹುಮ್ಮಸ್ಸು, ನೀಡಿದರೂ  ಸಣ್ಣ ವಯಸ್ಸಿನಲ್ಲಿ ಹಿಗ್ಗಿ ಹೀರೆಕಾಯಿ ಆಗಬೇಕಿದ್ದ  ಕುತೂಹಲ ವನ್ನು ಹಾಗೆ ಸಪ್ರೆಸ್ ಮಾಡಿಬಿಟ್ಟಿದೆ.  
 
ಕಳೆದೆರಡು ಮೂರು ತಿಂಗಳಲ್ಲಿ ಸುಮಾರು ಐದುವರೆ ಆರು ಸಾವಿರ ಕಿಲೋಮೀಟರ್ ತಿರುಗಾಡಿದ್ದೇನೆ.  ಸುಮಾರು ಊರುಗಳು, ಧಾರ್ಮಿಕ, ಐತಿಹಾಸಿಕ  ಸ್ಥಳಗಳು, ಪರಿಸರ, ನದಿ ನೀರ ಹರಿವು ಎಲ್ಲ ಖುಷಿ ಅನುಭವಿಸಿದೆ.  ಧುಮ್ಮಿಕ್ಕುವ ಜಲಪಾತ, ಅದರಡಿ ತೆಪ್ಪದಲ್ಲಿ ತೇಲುತ್ತಾ, ಸಾಗುತ್ತಾ, ಈಜು ಬಾರದೇ  ಬಿಗ್ಗ ಬಿಗಿ ಹಿಡಿದದ್ದು ಉಸಿರಾದರೂ ಜೀವ ನನ್ನ ಗಂಟಲಲ್ಲಿತ್ತು; ತಮಾಷೆ, ಗೇಲಿ ಗೆಳೆಯರ ನಗುವಲ್ಲಿ. ಒಂದಷ್ಟು ಫೋಟೋಗಳಲ್ಲಿ  ನಾನು ನಕ್ಕಂತೆ ಕಂಡೆ.  ದೇಗುಲದ ದೇವರ ಮುಂದೆ ಕಣ್ಣು ಮುಚ್ಚಿದ ಭಕ್ತಿಗಿಂತ ನೇಸರದ ಮಡಿಲಲ್ಲಿ ಬಿಟ್ಟ ಗಣ್ಣಿನಲ್ಲಿ ಮಿನುಗಿದ ಆನಂದವೇ ಹೆಚ್ಚು ಪ್ರಿಯವಾಗಿತ್ತು.   ಬಯಲುಸೀಮೆಯ  ಚುರುಕ್ಕೆನ್ನುವ ಬಿಸಿಲಿಗೆ ಕಣ್ಣು ಕಿರಿದಾಗಿಸಿ ಕಿತ್ತು ಬರುವ ಬೆವರ ಹನಿಗಳಲ್ಲೇ ಚುರುಕಾಗಿರುವ ನಾವು ಹೊತ್ತು ಅಳೆಯಲು ಗಡಿಯಾರವನ್ನೇ ನೋಡುವುದಿಲ್ಲ.  ಅಂಥಾದ್ದರಲ್ಲಿ ಸದಾ ಮುಸುಕು ಹೊದ್ದ ಮೋಡದ ಮಬ್ಬಿನಲ್ಲಿ ಎಷ್ಟು ಅಲೆದರೂ ತೂತು ಬಿದ್ದ ಚೀಲದಂತೆ ಯಾವಾಗಲೂ ಸೋರುವ, ತುಂತುರು ಸುರಿವ ಮಳೆಯಲ್ಲೇ ಕಾಲ ಕಳೆದೆವು. ವಿಶೇಷವಾದ ಸ್ಥಳವಲ್ಲದಿದ್ದರೂ  ಆಕರ್ಷಕ ಜಾಗ ಅದಾಗಿತ್ತು.   
 
ಏನು ಹಂಗೆ ಓದಿ ಮುಗಿಸಿಬಿಡುತ್ತೇನೋ ಅನ್ನುವಂತೆ ಒಂದ್ನಾಲ್ಕು ಪುಸ್ತಕ.  ಹಿಂಗೇ ಫೋಟೋಗಳನ್ನು ತೆಗೆದುಬಿಡುವೆನೆಂದು ಹಿಡಿದ  ಕೊರಳಲ್ಲಿ ಹಿರಿಯ ಗೆಳೆಯರಿಂದ ಖರೀದಿಸಿದ ಸೆಕೆಂಡ್ ಹ್ಯಾಂಡ್ ಕ್ಯಾಮೆರಾ ಹೊತ್ಯೊದಿದ್ದೆ. ಎಲ್ಲಿದೆ ಪುರುಸೊತ್ತು?  ಮಳೆ  ಹನಿಯುತ್ತಲೇ ಇದೆ.  ಹನಿಗಳಲ್ಲೇ ಸುತ್ತಿದೆ.  ನದಿ ತೀರದಲ್ಲಿ ತೋಯಿಸಿಕೊಂಡೆ.   ಅಲ್ಲಿಂದ ಬರುವ  ಅಲೆಗಳಲ್ಲಿ ಅಂಗಾಲು ಇಳಿ ಬಿಟ್ಟು ಕುಳಿತೆ.  ಮುಖ ಅದ್ದಿದೆ.  ಓದು ರುಚಿಸಲಿಲ್ಲ. ಕ್ಯಾಮೆರಾಕ್ಕೆ ಕಣ್ಣಿಗೆ  ಮಂಜು ತುಂಬಿದೆ. ಮನಸ್ಸು ಅಲೆಯುತ್ತಲೇ ಇದೆ, ಅಲೆಗಳಲ್ಲಿ. ಕಚೇರಿ ಯಲ್ಲಿದ್ದರೆ ಕರೆಕ್ಟಾಗಿ ಒಂದೊವರೆಗೆ ಪಕ್ಕದ ಮಸೀದಿಯಲ್ಲಿ ನಮಾಜು ಶುರುವಾದರೆ ಸಾಕು, ಹೊಟ್ಟೆಗೆ ತಟ್ಟೆಯ ಚಿಂತೆ. ಇಲ್ಲಿ ನಮಾಜೂ  ಇಲ್ಲ, ಹಸಿವು ಇಲ್ಲ.  ಏಕ್ದಂ ಒಂದೇ ಯೋಚನೆ.  ಅಲ್ಲಾ, ಸಣ್ಣವನಿದ್ದಾಗ ಅಜ್ಜಿ ಊರು ಬಿಟ್ರೆ ಅಪ್ಪನ ಊರು ಅಂತಷ್ಟೇ ಆರು ತಿಂಗಳಿಗೋ  ವರ್ಷಕ್ಕೆ ಒಮ್ಮೆ  ತಿರುಗಿದ್ದ ನನಗೆ, ತಿರುಗು ವುದೆಂದರೆ, ಪ್ರಯಾಣವೆಂದರೇನೇ  ವಾಂತಿ  ಮಾಡ್ಕೊಳ್ತಿದ್ದ ನಾನು ಇಷ್ಟು ಊರುಗಳನ್ನು ನೋಡಿ , ತಿರುಗು ತ್ತೇನೆನ್ನುವ ಅಂದಾಜೇ ಇದ್ದಿಲ್ಲ. 
 
ಹಂಪಿ ಸುತ್ತ  ತುಂಗಭದ್ರಾ ನದಿ ದಂಡೆಯಲ್ಲಿ ಹುಚ್ಚನಂತೆ ಪ್ರೀತಿಯಿಂದ ಅಲೆದ ತೆಲುಗು ಕವಿ ಚಲಂ ಬಗ್ಗೆ ಓದಿದ್ದು ನೆನಪಾಯ್ತು.   ಅವರು ರವೀಂದ್ರನಾಥ್ ಟ್ಯಾಗೋರ್ ಅವರ "ಗೀತಾಂಜಲಿ" ಯನ್ನು ತೆಲುಗಿಗೆ ಅನು ವಾದಿಸಿದ್ದರು.  ಹೆಂಗಸರನ್ನು , ಮಕ್ಕಳನ್ನು ಹಿಡಿ ಹಿಡಿಯಾಗಿ ಇಷ್ಟಪಟ್ಟು ಪ್ರೀತಿಸಿದರು.  ಯತ್ಹೇಚ್ಹ ಕಾಮವನ್ನು ಅನುಭವಿಸಿದರು.  ಅವರ ಅಕ್ಷರ ಪ್ರೀತಿಯನ್ನು ಮಾತ್ರವೇ ಅನುಕರಿಸಲು ಸಾಧ್ಯ, ಅವರ ಜೀವನ ಕ್ರಮವನ್ನು ಅವರಂತೆ ಇನ್ನೊಬ್ಬ ಅನುಸರಿಸಿದ್ದೇ ಆದಲ್ಲಿ ಸಮಾಜದಲ್ಲಿ ಬದುಕುವುದು ಕಷ್ಟವೆನಿಸುವಂಥ ಮಾತುಗಳನ್ನು ರವಿ ಬೆಳಗೆರೆಯವರು ಚಲಂ ಬಗ್ಗೆ ಬರೆದ ಪುಸ್ತಕದಲ್ಲಿ ಓದಿದ್ದು ಮರುಕಳಿಸಿತು.   ಒಂದಷ್ಟು ಹಾಡುಗಳು ನಾಲಗೆಗೆ ಅಂಟಿದವು.   "ಮೊದಲ ಸಲಾ"  ಘಟಿಸಿದ  ಪ್ರೀತಿ, ಅವಮಾನ, ಅಭಿಮಾನ, ಅಪ್ಯಾಯಮಾನ, ಚುಂಬನ, ಸ್ಪರ್ಶ, ಏಟು ಎದುರೇಟು, ಬಾಟಲಿ ಮುಚ್ಚಳ, ಹವಾಯಿ ಚಪ್ಪಲಿ, ಉಸಿರುಕಟ್ಟಿಸುವಂತೆ ಕಟ್ಟಿ ಕೊಂಡ ಬೂಟು, ನಂಬಿ ಕೆಟ್ಟ ಸ್ನೇಹ, ಅನುಮಾನವೇ ಬಾರದೇ ಮುರಿದ ಸಂಭಂಧ, ನೂರಾ ನಾಲ್ಕು ಡಿಗ್ರಿ ಜ್ವರ  ಎಲ್ಲವೂ ಜರ್ರನೆ ಎದೆಯೇರಿ ಸದ್ದಿಲ್ಲದೇ ಹೆಜ್ಜೆ ಗುರುತು ಉಳಿಸಿ ಇಳಿದು ಹೋದವು. 
 
ಕುಟುಂಬ ಸಮೇತವಾಗಿ ತಿರುಗಿ ಬಂದ ಪ್ರವಾಸದಲ್ಲಿ ನನ್ನ ಮಕ್ಕಳ ಕುತೂಹಲವನ್ನೇ ಗಮನಿಸಿದ್ದೆನು. ಉಳಿದ  ಪ್ರವಾಸಗಳಲ್ಲಿ  ಕೇವಲ ಗೆಳೆಯರೇ  ಗೆಳೆಯರು. ಹುಡುಗರಂತಾಗಿದ್ದೆವು. ಈ ಟ್ರಿಪ್ಪಿನಲ್ಲೂ ಅದೇ ಕತೆ. ಸೆನ್ಸಾರ್ ಇಲ್ಲದ ಮಾತಗಳು, ಪೋಲಿ ಪ್ರಸಂಗಗಳ ಗೇಲಿ, ಒದೆ ತಿಂದು ಅತ್ತಿದ್ದ ಸಂಗತಿಯೂ ಇಲ್ಲಿ ನಗುವಿಗೆ ಸರಕು.  ಗುಲಾಬಿ ಹಿಡಿದು ಹೇಳದ "ಐ ಲವ್ ಯೂ" ಕೂಡ  ಕೈ ಹಿಚುಕಿ ಕರುಬುವ  "ಆಗಿದ್ದ"  ಕನಸು.  ಆ ಸಮಯಕ್ಕೆ ನಲವತ್ತರ ಹತ್ತಿರಕ್ಕಿದ್ದ ವಯಸ್ಸು ಇಪ್ಪತ್ತರಷ್ಟು ಸವೆದು ಸ್ಲಿಮ್ ಆಯ್ತು. ಮದುವೆ ನಂತರ ಹೆಂಡತಿಗೆ ಅದೆಷ್ಟು ಬಾರಿ "ಐ ಲವ್ ಯೂ" ಹೇಳಿದರೂ ಮೊದಲಾ ಸಲಾ ಹೇಳುವ ವಯಸ್ಸಿಗೆ ಸಿಗದ ಅವಕಾಶ ಇಂದಿಗೆ ಬರೀ "ಅಲ್ಪಾವಧಿ ಕಾಲಮಿತಿ  ವಿಲೆಯ ಗುಂಪಿಗೆ ಸೇರಿದ" ಷರಾ ಬರೆದಿಟ್ಟು ಅಭಿಲೇಖಾ ಲಯದಲ್ಲಿ ಭದ್ರಪಡಿಸಿಟ್ಟ ಕಡತ.  ಅಲ್ಲಿ ಬಂದಿದ್ದ ಪ್ರವಾಸಿಗರಲ್ಲಿ ಲವಲವಿಕೆಯ ಒಂದು  ಜೋಡಿ ಚೇಷ್ಟೆ ನೋಡಿ, ಬೆನ್ನ ಮೇಲೆ ಬೆರಳಾಡಿಸಿದ ಪುಳಕವಾಗಿ  ಹೆಂಡತಿಗೆ  ದೂರದಿಂದಲೇ ಹಳೇ ಗೆಳತಿ ಸಿಕ್ಕಷ್ಟೇ ಖುಷಿಯಿಂದ   "ಹಲೋ"  ಹೇಳಿದೆ. ಮಾತು ಶಾಂತವಾಗಿದ್ದವು.  ಯಾಕೆಂದರೆ, ಇದ್ದೂರಲ್ಲಿದ್ದಂತೆ  "ಎಲ್ಲದೀರಿ? ಎಷ್ಟೊತ್ತಾಗುತ್ತೆ? ಬರ್ತಾ ಇದನ್ನ ತಗಂಬನ್ನಿ, ಲೇಟಾದ್ರೆ ಬಾಗ್ಲು ತೆಗೆಯಲ್ಲ" ಅಂತೆಲ್ಲಾ ಗುಯ್ಗುಡುವಂತಿಲ್ಲ. ಹೆಂಗಸರಿಗೆ ಒಂದು ಕುತೂಹಲವಿದ್ದೇ ಇರುತ್ತದೆ.  "ಯಾರಿದ್ದಾರೆ ಜೊತೇಲಿ, ಏನ್ ಟ್ರಿಪ್ಪು ಫುಲ್ಲು ಎಂಜಾಯ್ ಮಾಡ್ತಿದೀರಾ?" ಅಂತ ಕೇಳುವುದನ್ನು ಅಪ್ಪಿ ತಪ್ಪಿ ಮರೆಯುವುದಿಲ್ಲ.  ಆಕೆ ಮಾಡಿದ್ದೂ ಅದೇ.  ಆದರೆ, ನಿಜವಾಗಿಯೂ ನೆನಪಾದವಳು  ಹಳೆಯ ಗೆಳತಿ. 
 
ಆರು ತಿಂಗಳಿಗೆ, ವರ್ಷಕ್ಕೊಮ್ಮೆ ರಜೆಗೆ ಹೋಗುವಾಗ ಬಸ್ಸು ಹತ್ತುತ್ತಿದ್ದ ನಾನು ಬಸ್ಸು ಹತ್ತಿದರೆ ಸಾಕು; ಸ್ವಲ್ಪ ಹೊತ್ತಿಗೆ ಕರುಳು ಬಾಯಿಗೆ ಬರುವಂತೆ ವಾಂತಿ ಮಾಡಿಕೊಳ್ಳುತ್ತಿದ್ದೆ.   ಕಾಲೇಜಿನಲ್ಲಿ ಗಾಜನೂರು ಡ್ಯಾಮ್, ಕಲ್ಲೆತ್ತಗಿರಿ ಫಾಲ್ಸ್, ಬಾಬಾಬುಡೇನ್ ಗಿರಿಗೆ ಟ್ರಿಪ್ ಗೆ ಬಲವಂತವಾಗಿ ಬರೀಗೈಯಲ್ಲೇ ಇದ್ದ ನನ್ನನ್ನು, ಸ್ಟಂಟ್ ಸ್ವಾಮೀ( ಕ್ರೀಡಾಪಟುವಾದ ಸಿದ್ದಲಿಂಗಸ್ವಾಮಿ)ಯನ್ನು ಗೆಳೆಯರು ದುಡ್ಡು ಜೋಡಿಸಿಕೊಟ್ಟು ಕರೆದೊಯ್ದಿ ದ್ದರು, ಅದು ವ್ಯಾನ್ ನಲ್ಲಿ.  ಕಿಟಕಿ ಸಿಗಲಿಲ್ಲ.  ಸಿಕ್ಕ ಜಾಗದಲ್ಲೇ ಕುಂತು ಕುಲುಕಾಡಿದೆ.  ನಲವತ್ತು ಕಿಲೋ ಮೀಟರ್ ಕೂಡ ಸಾಗಿದ್ದಿಲ್ಲ.   ವಾಂತಿ ಬಂದು ಬಿಟ್ಟಿತು.  ದಿನ ಬೆಳಗಾದರೆ ಮೂವತ್ತು ಕಿಲೋಮೀಟರ್ ಅಪ್ ಅಂಡ್ ಡೌನ್ ಮಾಡುವ ಹುಡುಗ ಹುಡುಗಿಯರಲ್ಲಿ ಹರಿಹರದ ರವಿಶಂಕರ್, ಸೋಡಾ ಬುಡ್ಡಿ ಹಬೀಬ್, "ಕಿಂಗ್"  ಸೈಜ್ ಅಂಡ್  ಸ್ಟೈಲ್ ಮಹೇಶ, ಆರಾಧನಾ, ವೀಣಾ, ನೇತ್ರಾವತಿ, ಮಂಜುಳಾ ಮುಂತಾದವ ರೊಂದಿಗೆ  ಇನ್ನೊಬ್ಬಳಿದ್ದಳು ಪೂರ್ಣಿಮಾ ಅಂತ.  ಆಕೆಯನ್ನು ಮೂರು ವರ್ಷದಲ್ಲಿ ಅಬ್ಬಬ್ಬಾ ಅಂದ್ರು ಮಾತಾಡಿಸಿದ್ದು ಕೇವಲ ಮೂರು ಸಲವಿರಬಹುದು. ಆ ದಿನ ವ್ಯಾನ್ ನಲ್ಲಿ ತಲೆ ತಿರುಗಿ ತಕ್ಷಣಕ್ಕೆ ಸಿಕ್ಕ ಕಿಟಕಿಗೆ ಗೋಣು ಹಾಕಿ ವಾಂತಿ ಮಾಡಿದೆ.  ನರಪೇತಲನಾದರೂ ಕೂಡಲು ಜಾಗ ಸಿಗದೇ ಒದ್ದಾಡುತ್ತಿದ್ದೆ. ಫುಟ್ ರೆಸ್ಟ್ ನಲ್ಲಿ ಸುಸ್ತಾಗಿ ಮೊಣಕಾಲೂರಿ ಕುಳಿತ ನಾನು. ತಲೆ ನೇವರಿಸುತ್ತಾ ನನ್ನ ಮುಖವನ್ನು ತನ್ನ ತೊಡೆ ಮೇಲೆ ಒರಗಿಸಿಕೊಂಡ ಅವಳು. ಆ ದಿನದವರೆಗೂ ನಾನು ಆ ಹುಡುಗಿಯನ್ನು ಮಾತೇ ಆಡಿಸಿದ್ದಿಲ್ಲ. ಆ ಹೊತ್ತಲ್ಲಿ  ಆಕೆಯ ಕೈ ಬೆರಳಲ್ಲಿ ಒಬ್ಬ ಹೃದಯ ವೈಶಾಲ್ಯವುಳ್ಳ  ಹೆಂಗಸಿನ ಆರೈಕೆಯ ಗುಣವಿತ್ತು.      
 
ನೆನಪುಗಳನ್ನು ನೀರಿಗುಂಟ ಹರಿಯ ಬಿಟ್ಟು ಟ್ರಿಪ್ಪು ಮುಗಿಸಿ ವಾಪಾಸು ಬರುವಾಗ ನಾನು ಒಬ್ಬಂಟಿ ಮತ್ತು ಟನ್ನು ಭಾರದ ಖುಷಿ;  ನನ್ನ ಬೆನ್ನಿಗೆ.  ಬೆನ್ನಿಗೇ ಅಂತೇಕೆ ಅಂದೆನೆಂದರೆ, ಎದೆಗೆ ಅದಕ್ಕಿಂತ ಹೆಚ್ಚು ಭಾರದ ದುಃಖದ ಹೊರೆಯನ್ನು ಅವುಚಿಡುವ ಕಲೆ ಚೆನ್ನಾಗಿ ಗೊತ್ತಿದೆ.  ಆದರದು ತೋರಿಸಿಕೊಳ್ಳುವುದಿಲ್ಲ. ದುಃಖವನ್ನು ಯಾವ ಹೊತ್ತಿನಲ್ಲೂ ಕರೆದರೂ ಕಣ್ಣಿನಿಂದ ಬೇಗನೇ ಇಣುಕುತ್ತೆ.   ಅದೇ ಸಂತೋಷವಿದೆಯಲ್ಲಾ?  ಅದನ್ನು ಆ ಕ್ಷಣಕ್ಕೆ ಮಾತ್ರ ಅನುಭವಿಸಿಬಿಡಬೇಕು.  ಇನ್ಯಾವತ್ತೋ ಜ್ಞಾಪಿಸಿಕೊಂಡು  ನಕ್ಕರೆ ಅದಕ್ಕೆ ಬೇರೆಯದೇ ರೀತಿಯಲ್ಲಿ ಉಳಿದವರು ಪದವಿ ದಾನ ಮಾಡಿಬಿಡುವ ಚಾನ್ಸ್ ಇದೆ.    ಹೌದಲ್ವಾ? 

*****

ಕನ್ನಡದ ಬರಹಗಳನ್ನು ಹಂಚಿ ಹರಡಿ

6 thoughts on “ಟನ್ನು ಭಾರದ ಖುಷಿ ಹೊರುವಂತಿರಬೇ​ಕು ಟ್ರಿಪ್ಪು: ಅಮರ್ ದೀಪ್ ಪಿ.ಎಸ್.

  1. ಅಮರ್, ತುಂಬಾ ಚೆನ್ನಾಗಿದೆ. ಹೌದು, ನಮ್ಮ ದಿನಚರಿಯಲ್ಲಿ ಆಗಾಗ ಮಾಡಿಕೊಳ್ಳುವ ಬದಲಾವಣೆ ನಮ್ಮಲ್ಲಿ ಹುರುಪು ತರುವುದಂತೂ ನಿಜ.

  2. ಉತ್ತಮ ಬರಹ, ಕಳೆದ ಜೀವನದ ಒಟ್ಟಾರೆ ಾನುಬವ ೧೦ ಪ್ಯಾರಗಳಲ್ಲಿ, ಗುಡ್ ಚೆನ್ನಾಗಿದೆ ,

    ರವಿ

Leave a Reply

Your email address will not be published. Required fields are marked *