ಬೆಂಬಿಡದ ಭೂತ: ಗುರುಪ್ರಸಾದ ಕುರ್ತಕೋಟಿ

(ಅತೀಂದ್ರಿಯ ಅನುಭವದ ಕಥೆಗಳು – ಭಾಗ ೬)

ಈ ಕಥೆ ನನ್ನ ಸಹೋದ್ಯೋಗಿ ರಮೇಶ ನಾಯಕ ಅವರಿಗಾದ ಅನುಭವದ ಎಳೆಯ ಮೇಲೆ ಹೆಣೆದದ್ದು

ನಾನು ಹುಟ್ಟಿ ಬೆಳೆದು ದೊಡ್ಡವನಾಗಿದ್ದು ಭಟ್ಕಳದಲ್ಲಿ. ನಮ್ಮ ಮನೆಯಿಂದ ಎಡವಿ ಬಿದ್ದರೆ ಸಮುದ್ರ! ಅಂದರೆ ಅದು ಅಷ್ಟು ಹತ್ತಿರದಲ್ಲಿದೆ ಅಂತ ಅರ್ಥ. ಅದು ಬೇರೆಯವರಿಗೆ ಕೇಳೋಕೆ ಚಂದ. ಪರ ಊರಿನಿಂದ ಒಂದೆರಡು ದಿನಕ್ಕೆ ಅಂತ ನಮ್ಮೂರಿಗೆ ಬಂದವರಿಗೆ ಸಮುದ್ರಕ್ಕೆ ಹೋಗಿ  ಸ್ನಾನ ಮಾಡಲು ಅಡ್ಡಿ ಇಲ್ಲ. ಅಲ್ಲೇ ಇರೋವ್ರಿಗೆ ಕಷ್ಟ. ಅದರ ಪಾಡಿಗೆ ಅದಿರುತ್ತೆ ಆದರೂ, ಸಮುದ್ರ ತೀರದಲ್ಲಿಯ ಊರಿನಲ್ಲಿದ್ದು, ಬಿಸಿಲಿನ ಝಳದಲ್ಲಿ ಬಸಿಯುವ ಬೆವರಿನಲ್ಲಿ ನಿತ್ಯ ಸ್ನಾನ ಮಾಡುವವರಿಗೇ ಗೊತ್ತು ಅದರ ಬವಣೆ. ಅದೇನೆ ಇರಲಿ ನನಗಂತೂ ನನ್ನ ಊರು ಇಷ್ಟ! 

ನಮ್ಮೂರಿನ ಬದಿ ಬೇಸಿಗೆಯ ಝಳ ಶುರು ಆಗೋದರ ಜೊತೆ  ಜೊತೆಗೆ ಇನ್ನೊಂದು ಸೆಕೆ ಶುರು ಆಗುತ್ತೆ…. ಅದು ಯಕ್ಷಗಾನದ್ದು! ಅದೂ ಒಂದು ಸೀಸನ್ ತರಹವೇ! ಅದು ಬಂತೆಂದರಂತೂ ಬಣ್ಣ ಹಚ್ಚುವವರ ಸಡಗರ ಹೇಳತೀರದ್ದು.  ಬಾಯಲ್ಲಿ ಕವಳ (ಎಲೆ, ಅಡಿಕೆ ಮತ್ತು ತಂಬಾಕುಗಳ ರಸಾಯನ!), ಅದನ್ನು ಜಗಿದು ಜಗಿದು ಬಾಯಿಯ ಎರಡೂ ಬದಿಗೆ ವಸರುತ್ತಿರುವ ಕೆಂಪು ರಸ, ಅದಕ್ಕೆ ಪೂರಕವಾದ ಮುಖಕ್ಕೆ ಲೇಪಿಸಿಕೊಂಡ ಯಕ್ಷನ ಪಾತ್ರದ ಬಣ್ಣ, ಅದರ ಜೊತೆಗೆ ಸ್ವಲ್ಪ ಜಾಸ್ತಿಯೇ ಹಾವ ಭಾವದೊಂದಿಗೆ ಮಾತಾಡುವ ನಟ ಶಿರೋಮಣಿಗಳ ಹರಟೆಗಳು! ಅದನ್ನು ನೋಡಲು ಎರಡು ಕಣ್ಣು ಸಾಲದು. ಬರೀ ಬಣ್ಣ ಹಚ್ಚುವವರಷ್ಟೇ ಆಲ್ಲ, ಅದನ್ನು ನೋಡಿ ಆನಂದಿಸುವವರೂ ಅದೇ ಸಡಗರದಲ್ಲಿರುತ್ತಾರೆ. ಸಣ್ಣ ಹುಡುಗರಿಂದ ಮುದುಕರವರೆಗೆ ಎಲ್ಲರಿಗೂ ಅದು ಪ್ರಿಯವೇ. ಯಕ್ಷಗಾನ ನಮ್ಮ ಜನರ ರಕ್ತದಲ್ಲಿದೆ. ಅದರ ಬಗೆಗಿನ ಪ್ರೀತಿ ಅವರ ಮುಖದಲ್ಲಿ ಕಣ್ಣಿಗೆ ಕಾಣುವಂತೆ ಕುಣಿಯುತ್ತಿರುತ್ತದೆ. ನನಗಂತೂ ಚಿಕ್ಕಂದಿನಿಂದಲೂ ಅದರ ಬಗ್ಗೆ ಒಲವು ಜಾಸ್ತಿ. 

ಒಂದು ಸಲ, ನಮ್ಮ ಊರಿನ ಹತ್ತಿರವೇ ಇರುವ ಶಿರೂರಿನಲ್ಲಿ ಯಕ್ಷಗಾನದ ಆಟವಿತ್ತು. ನಾನಾಗ ಎಂಟನೇ ತರಗತಿಯಲ್ಲಿದ್ದೆನೆಂದು ಕಾಣುತ್ತೆ. ಸಾಮಾನ್ಯವಾಗಿ ಯಕ್ಷಗಾನದ ಆಟ ಶುರುವಾಗೋದು ರಾತ್ರಿನೇ. ಅಮೇಲೆ ಬೆಳಗಿನ ಜಾವದ ವರೆಗೆ ನಡೆಯುತ್ತದೆ. ಶಿರೂರು, ನಮ್ಮೂರಿನಿಂದ ಸುಮಾರು ೧೦ ಕಿಲೋಮೀಟರ್ ಅಂತರದಲ್ಲಿದೆ. ಅದು ದಕ್ಷಿಣ ಕನ್ನಡ ಜಿಲ್ಲೆಗೆ ಸೇರಿದ್ದಾದರೂ ನಮ್ಮ ಊರಿಗೆ ಹತ್ತಿರದಲ್ಲಿದೆ. ಒಂಥರ ನಮಗೆ ಗಡಿ ಪ್ರದೇಶವಿದ್ದಂತೆ! ಆ ರಾತ್ರಿಯ ಆಟಕ್ಕೆ ಹೋಗುವುದೆಂದು ನಿರ್ಧರಿಸಿಯಾಗಿತ್ತು. ನನ್ನ ಜೊತೆಗೆ, ನನಗಿಂತ ವಯಸ್ಸಿನಲ್ಲಿ ಎರಡರಿಂದ ಮೂರು ವರ್ಷಗಳ ಅಂತರದಲ್ಲಿ ಹಿರಿಯರಾದ  ನಾಲ್ಕೈದು ಜನ ಹುಡುಗರೂ ಬರುವವರಿದ್ದರು. ನನಗಿಂತ ಎರಡು ವರ್ಷ ಚಿಕ್ಕವನಾದ ನನ್ನ ತಮ್ಮನೂ ಬರುವೆನೆಂದ. ಈ ತಮ್ಮಂದಿರನ್ನು ಸಂಭಾಳಿಸುವುದು ಕಷ್ಟವೇ ಆದರೂ , ಇರಲಿ ಅಂತ ನಾನು ರಿಸ್ಕ್ ತೊಗೊಂಡಿದ್ದೆ. ಯಾಕೆಂದರೆ, ನಮ್ಮ ತಂಡದಲ್ಲಿ ಅವನೇ ಎಲ್ಲರಿಗಿಂತ ಚಿಕ್ಕವನು.

ರಾತ್ರಿ ಎಂಟು ಗಂಟೆಗೆಲ್ಲಾ ಊಟ ಮುಗಿಸಿ ನಡೆಯುತ್ತಾ ಹೊರಟೆವು. ಆಗೆಲ್ಲಾ ಕಾರಿಗಿಂತ ಕಾಲಿನ ಬಳಕೆಯೇ ಜಾಸ್ತಿ ಇತ್ತು. ನಡೆಯುತ್ತ ಆ ದೂರ ಕ್ರಮಿಸಲು ಒಂದು ಗಂಟೆಯ ಮೇಲೆ ಬೆಕಿತ್ತು. ಎಲ್ಲರೂ ಬಿಸಿ ರಕ್ತದ ಹುಡುಗರೇ. ಅದು ಇದು ಹರಟೆ ಹೊಡೆಯುತ್ತಾ ಸಾಗಿತ್ತು ನಮ್ಮ ಪಯಣ. ನನ್ನ ನಿರೀಕ್ಷೆಯಂತೆ ಸ್ವಲ್ಪ ದೂರ ಹೋಗುತ್ತಲೇ ನನ್ನ ತಮ್ಮನ ಕಿರಿ ಕಿರಿ ಶುರುವಾಯ್ತು. ಎಷ್ಟಂದ್ರು ಚಿಕ್ಕವನು. ನಡೆದು ಬರುತ್ತಿದ್ದನಾದ್ದರಿಂದ ಅವನ ಕಾಲು ನೋಯಲು ಶುರುವಾಗಿತ್ತೆಂದು ಕಾಣುತ್ತೆ. ಆದರೆ ನಾವಾಗಲೇ ಊರಿನಿಂದ ಸುಮಾರು ದೂರ ಬಂದಿದ್ದೆವಾದ್ದರಿಂದ ಅವನನ್ನು ವಾಪಸ್ಸು ಮನೆಗೆ ಬಿಟ್ಟು ಬರುವ ಪರಿಸ್ಥಿತಿಯೂ ಇರಲಿಲ್ಲ. ನನಗೋ ಅದು ಬಿಸಿ ತುಪ್ಪದಂತೆ ಉಗುಳಲೂ ಆಗದೇ ನುಂಗಲೂ ಆಗದಂತಹ ಧರ್ಮಸಂಕಟ! ಅವನಿಗೆ ಏನೋ ಪುಸಲಾಯಿಸಿ ಕರೆದೊಯ್ಯುತ್ತಿದ್ದೆ. ಆದರೂ ಅವನು ಎಲ್ಲರಿಗಿಂತ ಹಿಂದೆಯೇ ಉಳಿದಿದ್ದ.  ಕಾಲೆಳೆಯುತ್ತ ನಡೆಯುತ್ತಿದ್ದ. ಇವನ ಜೊತೆಗೆ ನನಗಿಂತ ವಯಸ್ಸಿನಲ್ಲಿ ದೊಡ್ಡವರಾದ ಹುಡುಗರ ಜೊತೆಗೆ ನಾನೂ ಹರಟೆ ಹೊಡೆಯುತ್ತ ಸಾಗಿದ್ದೆನಾದರೂ ತಮ್ಮನ ಮೇಲೊಂದು ಕಣ್ಣಿಟ್ಟಿದ್ದೆ. ನಾವು ನಡೆಯುತ್ತಿದ್ದುದು ಹೆದ್ದಾರಿ ಆಗಿತ್ತು, ಕತ್ತಲು ಬೇರೆ. ಆದರೆ ಹುಣ್ಣಿಮೆಯಾದ್ದರಿಂದ ಸ್ವಲ್ಪ ಬೆಳಕು ಇತ್ತಾದರೂ ಆ ದಾರಿಯಲ್ಲಿ ಆಗಾಗ ಓಡಾಡುವ ಟ್ರಕ್ಕುಗಳೇ ನಮಗೆ ದಾರಿ ದೀಪಗಳು. 

ಹಾಗೆ ಸ್ವಲ್ಪ ಮುಂದೆ ಸಾಗಿದರೆ ಅಲ್ಲಿ ಒಂದು ದಿಬ್ಬ ಇದೆ. ಅದಕ್ಕೆ ಗೋಳಿ ಮರದ ಏರು ಅಂತಾರೆ. ಅಲ್ಲಿ ಮೊದಲೇ ಕೆಲವು ದುರ್ಘಟನೆಗಳು ಜರುಗಿ ಕೆಲವು ಜನ ದುರ್ಮರಣ ಹೊಂದಿದ್ದರು. ಅವರಲ್ಲಿ ಕೆಲವರು ಭೂತಗಳಾಗಿದ್ದಾರೆ ಎಂಬ ವದಂತಿಯೂ ಇತ್ತು. ನಾವಾಗಲೇ ಆ ಜಾಗಕ್ಕೆ ಬಂದಾಗಿತ್ತು. ಹಾಗೆ ಕುಂಟುತ್ತ ಸಾಗಿದ್ದ ನನ್ನ ತಮ್ಮ ತನ್ನ ಹಿಂದೆ ಯಾರೋ ಬರುತ್ತಿದ್ದಾರೆ ಎಂಬ ಹೊಸ ರಗಳೆ ಶುರು ಮಾಡಿದ್ದ. ಅದೆಲ್ಲಾ ನಿನ್ನ ನೆಪ ಸುಮ್ಮನೆ ಬಾ ಅಂತ ಗದರಿದೆನಾದರೂ, ಭೂತದ ಭಯವಿದ್ದುದರಿಂದ ಒಂದು ಸಲ ಅವನ ಹಿಂದೆ ತಿರುಗಿ ನೋಡಿದವನಿಗೆ ಎದೆ ಧಸಕ್ಕೆಂದಿತು. ಆ ಬೆಳದಿಂಗಳ ಮಸುಕು ಮಸುಕಾದ ಬೆಳಕಿದ್ದ ಕತ್ತಲಲ್ಲಿ ನನ್ನ ಕಣ್ಣಿಗೆ ಕಂಡದ್ದು ಒಂದು ಬಿಳಿ ಅಕೃತಿ! ನಾನು ನನ್ನ ಮುಂದಿದ್ದ ಹುಡುಗರಿಗೂ ಅದನ್ನು ತಿಳಿಸಿ, ತಮ್ಮನ ಕೈ ಹಿಡಿದು ಲಗು ಬಗೆಯಿಂದ ಎಲ್ಲರೂ ನಡೆಯತೊಡಗಿದೆವು. ಎಲ್ಲರಿಗೂ ಭಯ ಶುರುವಾಗಿತ್ತು. ಆ ದಿಬ್ಬದ ಮೇಲೆ ತಲುಪಿದ್ದೆವು. ಅಲ್ಲಿಂದ ದೂರದಲ್ಲಿ ಯಕ್ಷಗಾನ ನಡೆಯುವ ಸ್ಥಳ ಕಾಣತೊಡಗಿತ್ತು. ಅಲ್ಲಿನ ಸ್ಪೀಕರಿನಲ್ಲಿ ಹಾಕಿದ್ದ ಹಾಡು ಕೇಳುತ್ತಿತ್ತಾದರೂ ಇನ್ನೂ ಸುಮಾರು ದೂರ ನಡೆಯುವುದು ಬಾಕಿ ಇತ್ತು. ಆ ಬೆಂಬಿಡದ ಭೂತವನ್ನು ತಪ್ಪಿಸಿಕೊಳ್ಳಲು ನಾವೆಲ್ಲಾ ಓಡಲು ತೊಡಗಿದೆವು. ಅದರಿಂದ ತಪ್ಪಿಸಿಕೊಂಡೆವಾ ಎಂದು ತಿರುಗಿ ನೋಡಿದರೆ ಅದೂ ಕೂಡ ನಮ್ಮ ಹಿಂದೆಯೇ ಓಡಿ ಬರುತ್ತಿತ್ತು! ಇದು ನಮ್ಮ ಬೆನ್ನ ಬಿಡಲಾರದೆಂದು ನಮಗೆ ಅರಿವಾಯ್ತು. ಈಗ ಓಡುವುದರ ಜೊತೆಗೆ ಎಲ್ಲರೂ ಕೂಗುವುದಕ್ಕೆ ಶುರು ಮಾಡಿದ್ದೆವು. ಹಾಗೆ ಸುಮಾರು ದೂರ ಓಡಿರಬೇಕು. ನಮ್ಮ ಅದೃಷ್ಟಕ್ಕೆ ಮುಂದಿನಿಂದ ಒಂದು ಟ್ರಕ್ಕು ಬರುವುದು ಕಂಡಿತು. ಅದರ ಬೆಳಕಿಗೆ ನಮಗೆ ಸ್ವಲ್ಪ ಧೈರ್ಯ ಬಂತು. ಟ್ರಕ್ಕು ನಮಗೆ ಸ್ವಲ್ಪ ಹತ್ತಿರಕ್ಕೆ ಬರುತ್ತಿದ್ದಂತೆ ಸ್ವಲ್ಪ ಹಿಂತಿರುಗಿ ನೋಡಿದೆವು. ಈಗ ದೆವ್ವದ ಮುಖ ಸ್ಪಷ್ಟವಾಗಿ ಕಾಣುತ್ತಿತ್ತು! 

ಅದೇನಾಗಿತ್ತೆಂದರೆ, ಒಂದು ಪ್ಲ್ಯಾಸ್ಟಿಕ್ಕಿನ ಚೀಲಕ್ಕೆ ಗಾಳಿ ಊದಿ ಯಾವನೋ ಪುಣ್ಣ್ಯಾತ್ಮ ಗಾಳಿ ಪಟದ ತರಹ ಮಾಡಿ ಅದಕ್ಕೊಂದು ದಾರ ಕಟ್ಟಿ ಬಿಟ್ಟಿದ್ದನೆಂದು ಕಾಣುತ್ತೆ. ಆ ಪಟ ಗಾಳಿಗೆ ತಪ್ಪಿಸಿಕೊಂಡು ಅಲ್ಲಿಲ್ಲಿ ಅಲೆದಾಡಿ, ಅದರ ದಾರದ ತುದಿ ಹೇಗೋ ನನ್ನ ತಮ್ಮನ ಚಪ್ಪಲಿಗೆ ಸಿಕ್ಕಿಕೊಂಡು ತೊಡಕಾಗಿದ್ದು ಅವನ ಅರಿವಿಗೆ ಬಾರದೇ ಹೋಗಿತ್ತು. ಅದು ಸಹಜವಾಗಿಯೇ ಇವನು ಹೋದಲ್ಲೇ ಇವನ ಬೆನ್ನಟ್ಟಿತ್ತು. ಅದೂ ಬಿಳಿಯ ಬಣ್ಣದ್ದಾಗಿದ್ದರಿಂದ ಆ ಕತ್ತಲಲ್ಲಿ ಯಾವುದೋ ಭೂತದ ತಲೆಯಂತೆ ಭಾಸವಾಗಿ ನಮ್ಮ ಬೆವರಿಳಿಸಿತ್ತು! ಕೊನೆಗೂ ಅವನ ಕಾಲಿನಿಂದ ಅದನ್ನು ಬಿಡಿಸಿ ನಮ್ಮ ತಲೆಯಿಂದ ಆ ಭೂತವನ್ನು ಓಡಿಸಿ ಯಕ್ಷಗಾನವನ್ನು ಸವಿದು ಬಂದೆವೆನ್ನಿ!                          

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

24 Comments
Oldest
Newest Most Voted
Inline Feedbacks
View all comments
ವಿನೋದ್ ಕುಮಾರ್ ವಿ.ಕೆ.

ಹಹಹಹಹಹ.. ಒಳ್ಳೆ ಮಜವಾದ ಅನುಭವ ನಿಮ್ಮದು.. ನಾನು ಈಗ ಅರಣ್ಯ ಇಲಾಖೆಯಲ್ಲಿ ಬೈಂದೂರುವಿನಲ್ಲ ಕೆಲಸ ನಿರ್ವಹಿಸುತ್ತಿದ್ದೇನೆ.. ಶಿರೂರು ಆಗಾಗ ಹೋಗ್ತಿರ್ತೇನೆ..ಮುಂದಿನ ಸಲ ಗೋಳಿಬೇರು ಏರು ನೋಡೇಬಿಡ್ತೀನಿ.. ಒಳ್ಳೆಯ ಲೇಖನ

Guruprasad Kurtkoti
9 years ago

ವಿನೋದ್, ಬರಹವನ್ನು ಓದಿ ಮೆಚ್ಚಿದ್ದಕ್ಕೆ ಧನ್ಯವಾದಗಳು! ನಿಜವಾಗಿ ಹೇಳಬೇಕೆಂದರೆ, ರಮೇಶ್ ಬೈಂದುರಿನ ಬಗ್ಗೆ ಪ್ರಸ್ತಾಪಿಸಿದ್ದರು. ಎರಡು ಊರುಗಳ ಹೆಸರು ಬಳಸುವುದು ಅನಾವಶ್ಯಕವೆನಿಸಿ ನಾನು ಬರೀ ಶಿರೂರಿನ ಬಗ್ಗೆ ಬರೆದೆ. ಗೋಳಿ ಮರದ ಏರಿಗೆ ಖಂಡಿತ ಹೋಗಿ ಬನ್ನಿ. ನಿಮ್ಮ ಅನುಭವ ತಿಳಿಸಿ 🙂

Vitthal Kulkarni
Vitthal Kulkarni
9 years ago

ಮಸ್ತದ ರಮೇಶ ನಿಮ್ಮ್ ಅನುಭವ… ಗುರು ಇನ್ನು ಸಲ್ಪ ಬಿಗಿ ಆಗಬೆಕಿತ್ತು ನಿರುಪಣೆ… 

Guruprasad Kurtkoti
9 years ago

ವಿಟ್ಠಲ, ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು! ಮುಂದಿನ ಸಲ ಇನ್ನೂ ಬಿಗಿಗೊಳಿಸುವ ಪ್ರಯತ್ನ ಮಾಡುವೆ 🙂

ಶ್ರೀಧರ್ ಗೋಪಾಲ ಕೃಷ್ಣ ರಾವ್ ಮುಳಬಾಗಲು
ಶ್ರೀಧರ್ ಗೋಪಾಲ ಕೃಷ್ಣ ರಾವ್ ಮುಳಬಾಗಲು
9 years ago

ನಿಮ್ಮ ಭೂತಾನುಭವಕ್ಕೆ ಹೆದರುವಂತೆ ನಿಮ್ಮ ಬರವಣಿಗೆ ಶೈಲಿ ಮನೋಹರವಾಗಿದೆ . ಗಾಳಿ -ಹನುಮಂತ ದೇವರು ನಿಮ್ಮನ್ನು ಗಾಳಿ-ಪಟದ ಮುಖಾಂತರ ಹೆದರಿಸಿ,ಯಕ್ಷಗಾನ ಸವಿಯುವ ಹಾಗೆ
ಮಾಡಿದ್ದು  ಚೆನ್ನಾದ ಅನುಭವ .

Guruprasad Kurtkoti
9 years ago

ಗುರುಗಳೆ, ತಪ್ಪದೆ ಒದಿ ನನ್ನ ಬೆನ್ನು ತಟ್ಟುವ ನಿಮ್ಮ ಅಭಿಮಾನಕ್ಕೆ ಧನ್ಯವಾದಗಳು! ಯಕ್ಷಗಾನ ನನಗೆ ತುಂಬಾ ಇಷ್ಟ. ದೆವ್ವದ ಕಥೆ ಬರೆಯುವ ನೆಪದಲ್ಲಿ, ಆ ಅದ್ಭುತ ಕಲೆಯ ಸ್ವಲ್ಪ ಬರೆದೆ. ನಿಮಗೆ ಇಷ್ಟವಾಗಿದ್ದು ಕೇಳಿ ಖುಷಿಯಯ್ತು.

umesh desai
umesh desai
9 years ago

guru, as usual super narrative.

Guruprasad Kurtkoti
9 years ago
Reply to  umesh desai

ಉಮೇಶ, ಓದಿ ಮೆಚ್ಚಿದ್ದಕ್ಕೆ ಧನ್ಯವಾದಗಳು!

Akhilesh Chipli
Akhilesh Chipli
9 years ago

ಕಡೆಯವರೆಗೂ ಕುತೂಹಲ ಹುಟ್ಟಿಸಿ
ಬಲೂನ್ ಒಡೆದಾಗ ನಗು ತಡೆಯಲಾಗಲಿಲ್ಲ.
ಬರೀ ಪ್ಲಾಸ್ಟಿಕ್ ಕೊಟ್ಟೆ ನಿಮ್ಮ ತಂಡವನ್ನೇ
ಹೆದರಿಸಿದ್ದು, ಅಬ್ಬಾ! ಅದಕ್ಕೆ ಹಿರಿಯರು
ಹೇಳಿದ್ದು, ದೈರ್ಯಂ ಸರ್ವತ್ರ ಸಾಧನಂ.
ಚೆನ್ನಾಗಿದೆ. ಧನ್ಯವಾದಗಳು ಕುರ್ತಕೋಟಿ.

Guruprasad Kurtkoti
9 years ago

ಅಖಿಲೇಶ, ಬರಹ ನಿಮಗೆ ಇಷ್ಟವಾಗಿದ್ದು ಕೇಳಿ ಖುಷಿಯಾಯ್ತು! ಹೌದು, ಧೈರ್ಯದಿಂದಿದ್ದರೆ ಎಂತಹ ಪರಿಸ್ಥಿತಿಯನ್ನೂ ಎದುರಿಸಬಹುದು. ಹೆದರಿಕೆಯಿಂದಲೇ ಜೀವ ಹಾನಿ ಸಂಭವಿಸಿದ ಉದಾಹರಣೆಗಳೇ ಜಾಸ್ತಿ.

ramesh
ramesh
9 years ago

ಗುರುಗಳೆ,
ತು೦ಬಾ ಅದ್ಬುತವಾಗಿ ಮೂಡಿ ಬ೦ದಿದೆ !!!!  ಹತ್ತಾರು ವರುಷಗಳ ಮಸುಕಾದ ಅನುಭವ , ಇಗ ತಾನೆ ಅನುಭವಿಸಿದ೦ತೆ ಅನಿಸಿತು…
 ಕಳೆದು ಹೊದ "ಭೂತ(ದ) ನೆರಳು …. "ವರ್ತಮಾನಕ್ಕೆ" ಬ೦ದ೦ತೆ  ಆಯ್ತು… 🙂

-ರಮೆಶ್…

Guruprasad Kurtkoti
9 years ago
Reply to  ramesh

ರಮೆಶ, ಅನುಭವವನ್ನು ಹಂಚಿಕೊಂಡು ನನ್ನ ಕಥೆಗೊಂದು ಸ್ಪೂರ್ತಿಯಾಗಿದ್ದಕ್ಕೆ ನಿಮಗೆ ಋಣಿ :). ಓದಿ ಮೆಚ್ಚಿದ್ದಕ್ಕೆ ಧನ್ಯವಾದಗಳು!

ಡಾ.ಆದರ್ಶ
ಡಾ.ಆದರ್ಶ
9 years ago

ನಿಮ್ಮ ಮೇಲೊ೦ದು ದೂರು !!!

ಓದುವಾಗ ಬಿಗಿ ಉಸಿರು ಹಿಡಿದು, ಓದಿದರೆ ಶ್ವಾಸಕೋಶ ಸ೦ಬಧಿ ರೋಗಗಳು ಉಲ್ಪಣಗೊಳ್ಳುತ್ತವೆ. 🙂
ಅನುಭವದ ಈ ನಿರೂಪಣೆ, ಬಿಗಿ ಉಸಿರು ಕಟ್ಟಿಸಿ ಓದಿಸಿಕೊ೦ಡು ಹೋಗುತ್ತದೆ. ನ೦ತರ, ಕೊನೆಯ ಸಾಲುಗಳಲ್ಲಿ ನಿರಾಳವಾದ ಉಸಿರು ಬಿಡಿಸಿ, ಮುಖದಲ್ಲಿ ಸಣ್ಣ ನಗೆ ಚಿಮ್ಮಿಸುತ್ತದೆ.

ಚೆನ್ನಾಗಿದೆ, ಈ ಸರಣಿಯ ಮು೦ದಿನ ಲೇಖನಕ್ಕೆ ಕಾಯುವ೦ತೆ ಮಾಡಿದಿರಿ. ಧನ್ಯವಾದಗಳು.

 

 

Guruprasad Kurtkoti
9 years ago

ಆದರ್ಶ, ಹೀಗೆ ಬರೆದು ಡಾಕ್ಟರ್ ಗಳ ಆದಾಯ ಹೆಚ್ಚಿಸುವ ಉಪಾಯ ನನ್ನದು ;). ಲೇಖನ ನಿಮಗೆ ಇಷ್ಟವಾಗಿದ್ದು ಕೇಳಿ ಖುಷಿಯಯ್ತು!

Prashant Kulkarni
Prashant Kulkarni
9 years ago

Guru, No second thought now to accept that you are "Barahagararu'. Very Nice and can be used for something like Short Stories!

Ramesh, seriously nice experience to you!

Guruprasad Kurtkoti
9 years ago

ಪ್ರಶಾಂತ, ಬರಹ ಇಷ್ಟವಾಗಿದ್ದು ಕೇಳಿ ಖುಷಿಯಾಯ್ತು! ನಿನ್ನಿಂದ 'ಬರಹಗಾರ'ನೆಂಬ ಅಧಿಕೃತ ಪ್ರಮಾಣಪತ್ರ ಸಿಕ್ಕಿದ್ದು ಇನ್ನೂ ಖುಷಿ 🙂

amardeep.p.s.
amardeep.p.s.
9 years ago

ಚೆನ್ನಾಗಿದೆ ಸರ್……

Guruprasad Kurtkoti
9 years ago
Reply to  amardeep.p.s.

ಅಮರ್, ಓದಿ ಮೆಚ್ಚಿದ್ದಕ್ಕೆ ಧನ್ಯವಾದಗಳು!

sangeeta
sangeeta
9 years ago

Lol…what an ending. Unexpected climax.very nice story.

Guruprasad Kurtkoti
9 years ago
Reply to  sangeeta

ಸಂಗೀತಾ, ಓದಿ, ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದಗಳು!

Gaviswamy
9 years ago

ಲೇಖನ ಚೆನ್ನಾಗಿದೆ ಸರ್

Guruprasad Kurtkoti
9 years ago
Reply to  Gaviswamy

ಗವಿಸ್ವಾಮಿ, ಬರಹವನ್ನು ಓದಿ, ಮೆಚ್ಚಿದ್ದಕ್ಕೆ ಧನ್ಯವಾದಗಳು!

Narayan Sankaran
Narayan Sankaran
9 years ago

ಯಾಕೋ ಈ ಸೀರೀಸ್ ಸ್ವಲ್ಪ ಪ್ರೆಡಿಕ್ಟಬಲ್ ಪ್ಯಾಟ್ಟೆರ್ನ್ ಆಗ್ತಿದೆ ಅನ್ನಿಸು ಗುರುಗಳೇ

Guruprasad Kurtkoti
9 years ago

ನಾರಾಯಣ್, ನನಗೂ ಹಾಗೆ ಅನಿಸ್ತಿದೆ! ಆದ್ರೆ, ನಿಲ್ಲಿಸೋಕೆ ನಮ್ಮ ಪಂಜು ಸಂಪಾದಕರು ಬಿಡ್ತಾ ಇಲ್ವೆ! ಇನ್ನೂ ಕೆಲವು ಕಂತು ಮುಂದುವರಿಸಿ ಅಂತ ಅಪ್ಪಣೆ ಹೊರಡಿಸಿದ್ದಾರೆ 🙂

ಅಂದ ಹಾಗೆ ನನ್ನ ಇನ್ನೊಬ್ಬ ಓದುಗ ಗೆಳೆಯ ಹೇಳಿದ್ದೇನೆಂದರೆ, 'ಇದು predictable ಇದ್ರುನೂ, ಯಾವ ತರಹದ ಗೊಂದಲ ಆಗಿರಬಹುದು ಎಂದು ಕೊನೆಯವರೆಗೂ ಓದುತ್ತೇನೆ' ಅಂತ… ಇನ್ನೊಂದು ಕೆಲವು ಕಂತು ಬರೆಯುವೆ, ಸಹಿಸಿಕೊಳ್ಳಿ. ಮುಂದಿನ ಸಲದ್ದು ಖಂಡಿತ predict ಮಾಡಲು ಆಗದು! 🙂

24
0
Would love your thoughts, please comment.x
()
x