ಝೆನ್ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ಪ್ರತಿಯೊಂದು ಕ್ಷಣವೂ ಝೆನ್‌

ಝೆನ್‌ ವಿದ್ಯಾರ್ಥಿಗಳು ತಾವು ಇತರರಿಗೆ ಬೋಧಿಸುವ ಮುನ್ನ ತಮ್ಮ ಗುರುಗಳೊಂದಿಗೆ ಕನಿಷ್ಠ ಎರಡು ವರ್ಷ ಕಾಲ ತರಬೇತಿ ಪಡೆಯಬೇಕಿತ್ತು. ತರಬೇತಿಯನ್ನು ಯಶಸ್ವಿಯಾಗಿ ಮುಗಿಸಿ ಬೋಧಕನಾಗಿದ್ದ ಟೆನ್ನೋ ಗುರು ನ್ಯಾನ್‌-ಇನ್ ಅನ್ನು ಭೇಟಿ ಮಾಡಿದ. ಆ ದಿನ ಮಳೆ ಬರುತ್ತಿತ್ತು, ಟೆನ್ನೋ ಮರದ ಚಡಾವುಗಳನ್ನು ಹಾಕಿದ್ದ ಮತ್ತು ಛತ್ರಿಯನ್ನೂ ಒಯ್ದಿದ್ದ. ಕುಶಲ ಪ್ರಶ್ನೆ ಮಾಡಿದ ನಂತರ ನ್ಯಾನ್‌-ಇನ್ ಹೇಳಿದ: “ನೀನು ನಿನ್ನ ಮರದ ಚಡಾವುಗಳನ್ನು ಮುಖಮಂಟಪದಲ್ಲಿ ಬಿಟ್ಟಿರುವೆ ಎಂಬುದಾಗಿ ಭಾವಿಸುತ್ತೇನೆ. ನಿನ್ನ ಛತ್ರಿಯು ಚಡಾವುಗಳ ಎಡ ಬಾಗದಲ್ಲಿದೆಯೋ ಬಲ ಭಾಗದಲ್ಲಿದೆಯೋ ಎಂಬುದನ್ನು ನಾನು ತಿಳಿಯಲು ಇಚ್ಛಿಸುತ್ತೇನೆ” 
ಗೊಂದಲಕ್ಕೀಡಾದ ಟೆನ್ನೊಗೆ ತಕ್ಷಣ ಉತ್ತರ ನೀಡಲಾಗಲಿಲ್ಲ. ಜೀವನದ ಪ್ರತೀ ಕ್ಷಣದಲ್ಲಿಯೂ ಝೆನ್‌ಧಾರಿಯಾಗಿ ಇರಲು ತಾನು ಅಸಮರ್ಥನಾಗಿದ್ದೇನೆ ಎಂಬ ಅರಿವು ಆತನಿಗೆ ಉಂಟಾಯಿತು. ಈ ಸಿದ್ಧಿ ಗಳಿಸಲೋಸುಗ ಅವನು ನ್ಯಾನ್‌-ಇನ್‌ನ ವಿದ್ಯಾರ್ಥಿಯಾಗಿ ಇನ್ನೂ ಆರು ವರ್ಷಗಳ ಕಾಲ ಅಧ್ಯಯನ ಮಾಡಿದ.

೨. ಹಗಲುಹೊತ್ತು ನಿದ್ರಿಸುವಿಕೆ

ಗುರು ಸೋಯೆನ್‌ ಶಾಕು ತಮಗೆ ೬೧ ವರ್ಷ ವಯಸ್ಸು ಆದಾಗ ಈ ಪ್ರಪಂಚದಿಂದ ತೆರಳಿದರು. ತಮ್ಮ ಜೀವನದ ಕೆಲಸವನ್ನು ಪೂರೈಸಿದ ಅವರು ಇತರ ಝೆನ್‌ ಗುರುಗಳ ಪೈಕಿ ಬಹಳಷ್ಟು ಮಂದಿಗಿಂತ ಎಷ್ಟೋ ಪಟ್ಟು ಹೆಚ್ಚು ಶ್ರೀಮಂತವಾದ ಮಹಾನ್‌ ಬೋಧನೆಗಳನ್ನು ಬಿಟ್ಟು ಹೋಗಿದ್ದಾರೆ. ಅವರ ಶಿಷ್ಯರು ನಡುಬೇಸಗೆಯಲ್ಲಿ ಹಗಲು ಹೊತ್ತು ಮಲಗುತ್ತಿದ್ದರು. ಗುರುಗಳು ಅದನ್ನು ನಿರ್ಲಕ್ಷಿಸುತ್ತಿದ್ದರಾದರೂ ತಾವು ಒಂದು ಕ್ಙಣವನ್ನೂ ಹಾಳು ಮಾಡುತ್ತಿರಲಿಲ್ಲ.

ಅವರು ತಮ್ಮ ೧೩ ನೆಯ ವಯಸ್ಸಿನಲ್ಲಿಯೇ ಟೆಂಡೈ ದಾರ್ಶನಿಕ ಚಿಂತನೆಯನ್ನು ಅಧ್ಯಯಿಸುತ್ತಿದ್ದರು. ಬೇಸಗೆಯಲ್ಲಿ ಉಸಿರುಗಟ್ಟಿಸುವ ಧಗೆ ಇದ್ದ ಒಂದು ದಿನ ಗುರುಗಳು ಹೊರಗೆಲ್ಲಿಗೋ ಹೋಗಿದ್ದಾಗ ಬಾಲಕ ಸೋಯೆನ್‌ ಕಾಲು ಚಾಚಿ ಮಲಗಿದವ ಹಾಗೇ ನಿದ್ದೆ ಮಾಡಿದ.

ಮೂರು ಗಂಟೆಗಳ ನಂತರ ದಿಢೀರನೆ ಎಚ್ಚರವಾದಾಗ ಅವನ ಗುರುಗಳು ಒಳಗೆ ಬರುತ್ತಿರುವ ಸಪ್ಪಳ ಕೇಳಿಸಿತಾದರೂ ತುಂಬ ತಡವಾಗಿತ್ತು. ಅವನು ಬಾಗಿಲಿಗೆ ಅಡ್ಡಲಾಗಿ ಒಡ್ಡೊಡ್ಡಾಗಿ ಕೈಕಾಲು ಚಾಚಿಕೊಂಡು ಮಲಗಿಯೇ ಇದ್ದ.

“ನಾನು ನಿನ್ನ ಕ್ಷಮೆ ಕೋರುತ್ತೇನೆ, ನಾನು ನಿನ್ನ ಕ್ಷಮೆ ಕೋರುತ್ತೇನೆ” ಎಂಬುದಾಗಿ ಪಿಸುಧ್ವನಿಯಲ್ಲಿ ಹೇಳುತ್ತಾ ಗುರುಗಳು ಅವನು ಒಬ್ಬ ಗೌರವಾನ್ವಿತ ಅತಿಥಿಯೋ ಎಂಬಂತೆ ಬಲು ಜಾಗರೂಕತೆಯಿಂದ ಅವನನ್ನು ದಾಟಿದರು. ಸೋಯೆನ್‌ ಅಂದಿನಿಂದ ಎಂದೂ ಮಧ್ಯಾಹ್ನದ ವೇಳೆಯಲ್ಲಿ ಮಲಗಲೇ ಇಲ್ಲ.

೩. ಸರಿ ಮತ್ತು ತಪ್ಪು

ಏಕಾಂಗೀ ಧ್ಯಾನ ಸಪ್ತಾಹಗಳನ್ನು ಬಾಂಕೈ ನಡೆಸುತ್ತಿದ್ದಾಗ ಜಪಾನಿನ ಅನೇಕ ಭಾಗಗಳಿಂದ ವಿದ್ಯಾರ್ಥಿಗಳು ಭಾಗವಹಿಸಲೋಸುಗ ಬರುತ್ತಿದ್ದರು. ಇಂತಹ ಒಂದು ಸಪ್ತಾಹದಲ್ಲಿ ಕಳ್ಳತನ ಮಾಡುತ್ತಿದ್ದ ವಿದ್ಯಾರ್ಥಿಯೊಬ್ಬ ಇತರರ ಕೈಗೆ ಸಿಕ್ಕಿ ಹಾಕಿಕೊಂಡ. ವಿಷಯವನ್ನು ಬಾಂಕೈಗೆ ವರದಿ ಮಾಡಲಾಯಿತು ಮತ್ತು ಅಪರಾಧಿಯನ್ನು ಹೊರಹಾಕುವಂತೆ ವಿನಂತಿಸಲಾಯಿತು. ಬಾಂಕೈ ಇಡೀ ವಿದ್ಯಮಾನವನ್ನು ನಿರ್ಲಕ್ಷಿಸಿದ.

ಅದೇ ವಿದ್ಯಾರ್ಥಿ ಮತ್ತೊಮ್ಮೆ ಕಳ್ಳತನ ಮಾಡುವಾಗ ಸಿಕ್ಕಿಹಾಕಿಕೊಂಡಾಗಲೂ ಬಾಂಕೈ ನಿರ್ಲಕ್ಷಿಸಿದ. ಇದರಿಂದ ಕೋಪಗೊಂಡ ಇತರ ವಿದ್ಯಾರ್ಥಿಗಳು ಆ ಕಳ್ಳನನ್ನು ಹೊರಹಾಕುವಂತೆಯೂ, ಹಾಕದೇ ಇದ್ದರೆ ತಾವೆಲ್ಲರೂ ಒಟ್ಟಾಗಿ ಬಿಟ್ಟು ಹೋಗುವುದಾಗಿಯೂ ಅರ್ಜಿಯೊಂದನ್ನು ಬರೆದು ಕೊಟ್ಟರು.

ಅರ್ಜಿಯನ್ನು ಓದಿದ ಬಾಂಕೈ ಎಲ್ಲರನ್ನೂ ತನ್ನೆದುರು ಒಟ್ಟು ಸೇರಿಸಿ ಇಂತೆಂದ: “ನೀವೆಲ್ಲರೂ ವಿವೇಕೀ ಸಹೋದರರು. ನಿಮಗೆ ಯಾವುದು ದರಿ ಯಾವುದು ತಪ್ಪು ಎಂಬುದು ತಿಳಿದಿದೆ. ನೀವು ಇಷ್ಟಪಟ್ಟರೆ ಬೇರೆ ಎಲ್ಲಿಯಾದರೂ ಹೋಗಿ ಅಧ್ಯಯನ ಮಾಡಬಹುದು. ಈ ಬಡಪಾಯಿ ಸಹೋದರನಾರೋ ಯಾವುದು ಸರಿ ಯಾವುದು ತಪ್ಪು ಎಂಬುದನ್ನೇ ತಿಳಿದುಕೊಂಡಿಲ್ಲ. ನಾನು ಅವನಿಗೆ ಹೇಳಿಕೊಡದೇ ಇದ್ದರೆ ಬೇರೆ ಯಾರು ತಾನೇ ಅವನಿಗೆ ಬೋಧಿಸುತ್ತಾರೆ? ಅವನನ್ನು ನಾನು ಇಲ್ಲಿಯೇ ಇಟ್ಟುಕೊಳ್ಳುತ್ತೇನೆ, ಉಳಿದ ನೀವೆಲ್ಲರೂ ಬಿಟ್ಟು ಹೋದರು ಕೂಡ.”

ಕಳ್ಳತನ ಮಾಡಿದ್ದ ಸಹೋದರನ ಕಣ್ಣುಗಳಿಂದ ಧಾರಾಕಾರವಾಗಿ ಕಣ್ಣೀರು ಸುರಿದು ಅವನ ಮುಖವನ್ನು ಸ್ವಚ್ಛಗೊಳಿಸಿತು. ಕದಿಯಬೇಕೆಂಬ ಬಯಕೆ ಸಂಪೂರ್ಣವಾಗಿ ಮಾಯವಾಯಿತು. 

೪. ಕಪ್ಪು ಮೂಗಿನ ಬುದ್ಧ

ಜ್ಞಾನೋದಯಕ್ಕಾಗಿ ಹುಡುಕಾಡುತ್ತಿದ್ದ ಸನ್ಯಾಸಿನಿಯೊಬ್ಬಳು ಬುದ್ಧನ ವಿಗ್ರಹವೊಂದನ್ನು ತಯಾರಿಸಿ ಅದನ್ನು ಚಿನ್ನದ ತಗಡಿನ ಹೊದಿಕೆಯಿಂದ ಮುಚ್ಚಿದಳು. ತಾನು ಹೋಗುವೆಡೆಗಳಿಗೆಲ್ಲಾ ಆ ಚಿನ್ನದ ಬುದ್ಧನ ವಿಗ್ರಹವನ್ನೂ ಒಯ್ಯುತ್ತಿದ್ದಳು. 

ವರ್ಷಗಳು ಉರುಳಿದವು. ತನ್ನ ಬುದ್ಧನ ಸಹಿತ ದೇಶ ಪರ್ಯಟನೆ ಮಾಡುತ್ತಾ ಆ ಸನ್ಯಾಸಿನಿಯು ಅನೇಕ ಬುದ್ಧ ವಿಗ್ರಹಗಳಿದ್ದ ಚಿಕ್ಕ ದೇವಾಲಯವೊಂದನ್ನು ತಲುಪಿ ಅಲ್ಲಿ ವಾಸಿಸತೊಡಗಿದಳು. ಆ ದೇವಾಲಯದಲ್ಲಿದ್ದ ಪ್ರತಿಯೊಂದು ಬುದ್ಧ ವಿಗ್ರಹಕ್ಕೂ ಅದರದ್ದೇ ಆದ ಪೂಜಾಮಂದಿರವಿತ್ತು.

ತನ್ನ ಚಿನ್ನದ ಬುದ್ಧನ ಎದುರು ಧೂಪ ಉರಿಸಬೇಕೆಂಬ ಬಯಕೆ ಆ ಸಂನ್ಯಾಸಿನಿಗೆ ಇತ್ತು. ತಾನು ಉರಿಸಿದ ಧೂಪದ ಸುಗಂಧಯುತ ಧೂಮ ಚದುರಿ ಇತರ ವಿಗ್ರಹಗಳನ್ನು ತಲುಪುವುದು ಅವಳಿಗೆ ಇಷ್ಟವಿರಲಿಲ್ಲ. ಎಂದೇ, ತನ್ನ ವಿಗ್ರಹದತ್ತ ಮಾತ್ರ ಧೂಮವು ಮೇಲೇರುವಂತೆ ಮಾಡುವ ಆಲಿಕೆಯೊಂದನ್ನು ಆಕೆ ರಚಿಸಿದಳು. ತತ್ಪರಿಣಾಮವಾಗಿ ಚಿನ್ನದ ಬುದ್ಧನ ಮೂಗು ಕಪ್ಪಾಗಿ ನೋಡಲು ವಿಪರೀತ ಅಸಹ್ಯವಾಯಿತು.

೫. ರ್ಯೋನೆನ್‌ನ ಸ್ಪಷ್ಟ ಅರಿವು

ಬೌದ್ಧ ಸನ್ಯಾಸಿನಿ ರ್ಯೋನೆನ್‌ ೧೭೯೭ ನೇ ಇಸವಿಯಲ್ಲಿ ಜನಿಸಿದಳು. ಆಕೆ ಜಪಾನಿನ ಪ್ರಖ್ಯಾತ ಯೋಧ ಶಿಂಗೆನ್‌ ನ ಮೊಮ್ಮಗಳು. ಅವಳ ಕವಿಯೋಗ್ಯ ಮೇಧಾವೀತನ ಮತ್ತು ಮನಮೋಹಕ ರೂಪ ಎಂತಹುದು ಆಗಿತ್ತೆಂದರೆ ೧೭ ನೆಯ ವಯಸ್ಸಿನಲ್ಲಿಯೇ ಆಕೆ ಆಸ್ಥಾನ ಸ್ತ್ರೀಯರ ಪೈಕಿ ಒಬ್ಬಳಾಗಿ ಸಾಮ್ರಾಜ್ಞಿಗೆ ಸೇವೆ ಸಲ್ಲಿಸುತ್ತಿದ್ದಳು.  ಅಷ್ಟು ಚಿಕ್ಕ ವಯಸ್ಸಿನಲ್ಲಿಯೇ ಖ್ಯಾತಿ ಅವಳದಾಗಲು ಕಾಯುತ್ತಿತ್ತು. 

ಇದ್ದಕ್ಕಿದ್ದಂತೆಯೇ ಸಾಮ್ರಾಜ್ಞಿ ಸತ್ತು ಹೋದಳು. ರ್ಯೋನೆನ್‌ಳ ಆಶಾಭರಿತ ಕನಸುಗಳು ಅದೃಶ್ಯವಾದವು. ಈ ಪ್ರಪಂಚದಲ್ಲಿನ ಜೀವನದ ನಶ್ವರತೆಯ ಸೂಕ್ಷ್ಮ ಅರಿವು ಅವಳಿಗಾಯಿತು. ಆಗ ಆಕೆ ಝೆನ್‌ ಅಧ್ಯಯಿಸಲು ಬಯಸಿದಳು.

ಆದರೂ ಅವಳ ಬಂಧುಗಳು ಅದನ್ನು ಒಪ್ಪಲಿಲ್ಲ ಮತ್ತು ಮದುವೆ ಆಗುವಂತೆ ಅವಳನ್ನು ಬಲು ಒತ್ತಾಯಿಸಿದರು. ಮೂರು ಮಕ್ಕಳು ಆದ ತರುವಾಯ ಆಕೆ ಸನ್ಯಾಸಿ ಅಗಲು ತಾವು ಅಡ್ಡಿಯಾಗುವುದಿಲ್ಲ ಎಂಬ ಆಶ್ವಾಸನೆಯನ್ನು ಅವರಿಂದ ಪಡೆದು ನಂತರ ಮದುವೆ ಆಗಲು ಒಪ್ಪಿದಳು. ೨೫ ವರ್ಷ ವಯಸ್ಸು ತುಂಬುವ ಮೊದಲೇ ಕರಾರಿನಂತೆ ತಾನು ಮಾಡಬೇಕಾದದ್ದನ್ನು ಮಾಡಿ ಮುಗಿಸಿದಳು. ಆ ನಂತರ ಅವಳು ತನ್ನ ಬಯಕೆಯನ್ನು ಪುರೈಸಿಕೊಳ್ಳುವುದನ್ನು ಅವಳ ಗಂಡನಿಂದಲೇ ಆಗಲಿ ಬಂಧುಗಳಿಂದಲೇ ಆಗಲಿ ತಡೆಯಲು ಸಾಧ್ಯವಾಗಲಿಲ್ಲ. ತನ್ನ ತಲೆ ಬೋಳಿಸಿಕೊಂಡು, ರ್ಯೋನೆನ್‌, ಅರ್ಥಾತ್ ಪೂರ್ಣವಾಗಿ ಅರಿತುಕೊಂಡವಳು ಎಂಬುದಾಗಿ ಹೆಸರು ಬದಲಿಸಿಕೊಂಡು ಯಾತ್ರೆ ಆರಂಭಿಸಿದಳು.

ಎಡೋ ನಗರಕ್ಕೆ ಬಂದು ತನ್ನನ್ನು ಶಿಷ್ಯಳನ್ನಾಗಿ ಸ್ವೀಕರಿಸುವಂತೆ ಗುರು ಟೆಟ್ಸುಗ್ಯರನ್ನು ವಿನಂತಿಸಿಕೊಂಡಳು. ಬಲು ಸುಂದರಿ ಅನ್ನುವ ಕಾರಣಕ್ಕಾಗಿ ನೋಡಿದ ತಕ್ಷಣ ಆಕೆಯ ಮನವಿಯನ್ನು ಆತ ತಿರಸ್ಕರಿಸಿದ. ‌ಇನ್ನೊಬ್ಬ ಗುರು ಹಕುಒ ಬಳಿಗೆ ರ್ಯೋನೆನ್ ಹೋದಳು. ಅವಳ ಸೌಂದರ್ಯವು ತೊಂದರೆಯ ವಿನಾ ಬೇರೇನನ್ನೂ ಉಂಟುಮಾಡಲಾರದು ಎಂಬುದಾಗಿ ಹೇಳಿ ಅವನೂ ಅವಳ ಮನವಿಯನ್ನು ತಿರಸ್ಕರಿಸಿದ. 

ರ್ಯೋನೆನ್ ಒಂದು ಕೆಂಪಗೆ ಕಾದ ಕಬ್ಬಿಣದ ಸಲಾಕೆಯನ್ನು ತೆಗೆದುಕೊಂಡು ತನ್ನ ಮುಖದ ಮೇಲೆ ಇಟ್ಟುಕೊಂಡಳು. ಕೆಲವೇ ಕ್ಷಣಗಳಲ್ಲಿ ಅವಳ ಸೌಂದರ್ಯ ಮಾಯವಾಯಿತು. ತದನಂತರ ಹಕುಒ ಅವಳನ್ನು ಶಿಷ್ಯಳನ್ನಾಗಿ ಸ್ವೀಕರಿಸಿದ.

ಈ ಸನ್ನಿವೇಶದ ನೆನಪಿನಲ್ಲಿ ಪುಟ್ಟ ಕನ್ನಡಿಯ ಹಿಂಬದಿಯಲ್ಲಿ ಪದ್ಯವೊಂದನ್ನು ಆಕೆ ಬರೆದಳು:

ಸಾಮ್ರಾಜ್ಞಿಯ ಸೇವೆಯಲ್ಲಿ ಬಲು ಅಂದವಾದ ನನ್ನಉಡುಗೆಗಳನ್ನು ಕಂಪುಗೊಳಿಸಲೋಸುಗ ನಾನು ಧೂಪ ಸುಡುತ್ತಿದ್ದೆ, ಮನೆ ಇಲ್ಲದ ಭಿಕ್ಷುಕಿಯಾಗಿ ಈಗ ನನ್ನ ಮುಖ ಸುಡುತ್ತಿದ್ದೇನೆ ಝೆನ್‌ ದೇವಾಲಯ ಪ್ರವೇಶಿಸಲೋಸುಗ.

ಈ ಪ್ರಪಂಚಕ್ಕೆ ವಿದಾಯ ಹೇಳುವ ಸಮಯ ಸಮೀಪಿಸಿದಾಗ ರ್ಯೋನೆನ್‌ ಇನ್ನೊಂದು ಪದ್ಯ ಬರೆದಳು:

ಅರುವತ್ತಾರು ಸಲ ನೋಡಿವೆ ಈ ಕಣ್ಣುಗಳು ಶರತ್ಕಾಲದ ಬದಲಾಗುತ್ತಿರುವ ದೃಶ್ಯಗಳನ್ನು. ಬೆಳದಿಂಗಳ ಕುರಿತು ನಾನು ಸಾಕಷ್ಟು ಹೇಳಿದ್ದೇನೆ, ಈ ಕುರಿತು ಇನ್ನೂ ಕೇಳದಿರಿ. ಗಾಳಿ ಅಲುಗಾಡದಿರುವಾಗ ದೇವದಾರು ಮತ್ತು ಪೀತದಾರು ಮರಗಳ ಧ್ವನಿಯನ್ನು ಮಾತ್ರ ಕೇಳಿ.

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
D.Ravivarma
D.Ravivarma
9 years ago

alochane havhhuva manakaaduva kathegalu…

1
0
Would love your thoughts, please comment.x
()
x