ಮೂರು ಕವಿತೆಗಳು: ಜಯಶ್ರೀ ದೇಶಪಾಂಡೆ, ಶ್ರೀದೇವಿ ಕೆರೆಮನೆ, ರಮೇಶ್ ನೆಲ್ಲಿಸರ

ಪ್ಯಾರಾಡೈಸ್ ಲಾಸ್ಟ್….!                                                              

ಜುಳುಜುಳು ಹರಿದ ಮಳೆಯ ತಿಳಿ ನೀರಲ್ಲಿಳಿದ   
 ಹಳೇ ಪೇಪರಿನ ಹಡಗು, ಆ ದಂಡೆ ಈ ದಂಡೆ
ವಾಲಿ ತೇಲಿ ಕೊನೆಗೆ ಹೊಡೆದ ಗೋತ,
ಕಳಕೊಂಡ ಹಡಗಿನ ದ:ಖ ಮರೆಸಲು
ಇನ್ನೊ೦ದು ….ಮತ್ತೊಂದು …ಮಗುದೊಂದು..

ಲಂಗದಂಚಿಗೆ ಹತ್ತಿದ ಕೆಮ್ಮಣ್ಣು ಕೊಡವಿ, ಒದ್ದೆಯ ಹಿಂಡಿ ತೆಗೆದ ನೀರು,
ಹರಿವ ನೀರಿಗೆ ಬಿದ್ದು ಟಪ್ಪೆ೦ದ  ಬಿರುಗುಳ್ಳೆಗಳ
ಹಿಡಿಯುವ ಮನಸು….ಕೈಗೆಟುಕದ ಕನಸು.
ಗಿಡಮರದ ಸಂದಿ ಗೊಂದಿಯಲವಿತು
ಕಣ್ಣಾಮುಚ್ಚಾಲೆಯಾಟಕ್ಕೆ ಮೈಮರೆವ ಹೊತ್ತು…
ಮತ್ತ ಮರದ ಮೇಲೇರಿ ಕೋತಿಗಳ ಅಣಗಿಸೆ  ಹುಯಿಲೆದ್ದ
ನಗೆಮಲ್ಲಿಗೆ….ಅಷ್ಟರಲಿ ಅಣ್ಣನಿಂದೊಂದು ಗುದ್ದು!!

ಪಾಠಶಾಲೆಗೊಂದು ಪಾಟೀಚೀಲ…ಎರಡೆರಡಲೆ ನಾಕು
ಇವನು ಬಸವ…ಇವಳು ಕಮಲ
ನಾನೆಲ್ಲಿ ಮತ್ತೆ? ?
ಕಳ್ಳೇ  ಮಳ್ಳೇ..ಕಪಾಟ ಮಳ್ಳೇ 
ಬಾರೀಗಿಡದಾಗ ನಾ ಕೂತೇ ..ಬಸ್ರಿ ಗಿಡದಾಗ ನೀ ಕೂತಿ….
ಸುತ್ತಿ ಸುತ್ತಿ ತಲೆಸುತ್ತು..

ಬೇಸಿಗೆಯ ಬಿಸಿಲಬ್ಬರ..ಅಣ್ಣ ನಡೆ ನದಿದಂಡೆಗೆ
ಈಜಿ ತೇಲಿ ಹೋಗಲಾಚೆ   ಕಣ್ಮುಚ್ಚಿ ಧ್ಯಾನದಲ್ಲಿಳಿದ
ಮುಕ್ಕಣ್ಣನಿಗೊಂದು ನಮೋ……
ಅಮ್ಮಕರೆದ  ಗೌರಿ ಗಣೇಶ….ಕೇದಗೆ, ಮಲ್ಲಿಗೆ,  ಜಾಜಿ, 
ಮೊಳದುದ್ದ ಹಾರಕ್ಕೆ ದವನ..ಮರುಗದ ಘಮ!!
ಬಿಸಿಕಡುಬು, ಹೊಸಹಾಲು, ಅಮೃತವೀ ಪಾಯಸ…
ಅಮ್ಮನುಟ್ಟ ಜರೀಕಂಚಿ ಅದರೊಳಗೆ ಕೇದಗೆ…

ರಾತ್ರಿ ಅವಳ ತಬ್ಬಿ ಕೊರಳು ಬಳಸಿ ರಾಜ,ರಾಣಿ ಮಾಂತ್ರಿಕ
ಅವನೊಡನೆ ಮಾಟಗಾತಿ!  ಛೀ ದೂರ…ನನ್ನ ಕನಸಲ್ಲಿ ನೀನೇಕೆ??
ಬಂದಾನು..ಅ ಚೆಲುವ ಬಿಳಿಯ ಹಯದ ಬೆನ್ನೇರಿ!!
ಕನಸಿಗೂ ಉ೦ಟೆ ? ಆಯ್ದುಕೊಳ್ಳುವ ಹಕ್ಕು…

ಅಪ್ಪ ಬಂದೆಯಾ ಊರಿ೦ದ…ನೀನಿಲ್ಲದೆ ಬೇಜಾರು.
ಇನ್ನೀಗ ನನ್ನ ಸಮನಾರು….ಹ್ಹ..ಹ್ಹಹ..ಹ್ಹಾ..!
ಚಂದ್ರ ಮಂಡಲದಿ ಇರಲೆನ್ನ ಪುಟ್ಟ ಜಗ
ದೃಷ್ಟಿ ತಾಗದಿರಲಿ ಈ ಚೆಲುವಿಗೆ…ಕಾಲನಿಗೊಂದು
ಒಸಗೆ ಬರೆದ ಕಾಲ..ಸಂತಸ…ಸಂಭ್ರಮ…ನಿರಾಮಯವೀ ಸಮಯ!!
ಎಲ್ಲಿ ಹೋಯಿತು ಗೆಳತಿ ಹೇಳೇ…ಎಲ್ಲಿ ಹೋಯಿತೇ!?
ಇ೦ದು ಜೀವನಕೆ ಅರ್ಥ ಜ೦ಜಾಟದ ಯುಗವ೦ತೆ,
ಅದಕೆಂದೇ ಬರೆದಿಟ್ಟೆ  ಮನದಾಳದ ನೋವ.
ಕಳೆದು ಹೋದ ಸ್ವಗ೯ ಅದೇ…..
ಪ್ಯಾರಡೈಸ್ ಲಾಸ್ಟ್ ..
ಪ್ಯಾರಡೈಸ್ ಲಾಸ್ಟ್….!!
                                       
-ಜಯಶ್ರೀ ದೇಶಪಾಂಡೆ.

 

 

 

 


ನಾನು ಸೋಲಬೇಕಿಲ್ಲ
ನನಗೆ ಗೆಲ್ಲುವುದೂ ಬೇಕಾಗಿಲ್ಲ
ಈ ಜಗತ್ತೇ ನನ್ನದಾಗಿರುವಾಗ
ಸೋಲು ಗೆಲವುಗಳ ಹಂಗಿಲ್ಲ

ನನ್ನದಲ್ಲದ ಪ್ರಪಂಚದಲ್ಲಿ 
ಸೋಲಿನ ಭಯವಿರುತ್ತದೆ
ಗೆಲುವಿನ ಹಪಾಹಪಿಯಿರುತ್ತದೆ
ಗೆಲುವಿಗಾಗಿ ಎದುರು ಬಂದವರನ್ನು
ನಾಶ ಮಾಡಲೇ ಬೇಕಾದ ಅನಿವಾರ್‍ಯತೆಯಿರುತ್ತದೆ
ಸೋತ ನೋವನ್ನು ಮರೆಯಲು
ಇನ್ನೊಬ್ಬರ ಬಾಳನ್ನು ಚಿಂದಿ ಉಡಾಯಿಸಬೇಕಾಗುತ್ತದೆ
ಅವರ ಗೆಲುವಿನ ನಗೆಯನ್ನು
ಕಿತ್ತು ಕೊಂಡು ನಮ್ಮ ಮುಖಕ್ಕೆ
ಬಲವಂತವಾಗಿಯಾದರೂ ಅಂಟಿಸಿಕೊಳ್ಳಬೇಕಾಗುತ್ತದೆ
ಸೋತು ಶರಣಾದವರ ಕಣ್ಣೀರನ್ನು
ನಮ್ಮ ವಿಜಯೋತ್ಸಾಹದ ಮದ್ಯಕ್ಕೆ
ಅಮಲಿನ ಬೆರಕೆಯಾಗಿಸಬೇಕಾಗುತ್ತದೆ
ಸೋಲು ಗೆಲುವಿನ ಹಾವು-ಏಣಿ ಆಟದಲ್ಲಿ
ಮೇಲೇರಿದಂತೆ ಕೆಳಗಿಳಿಯಲೂ ಕಲಿಯಬೇಕಾಗುತ್ತದೆ
ಕೆಳಗಿಳಿದರೂ ಏನೂ ಆಗದಂತೆ 
ಮುಖವಾಡ ಧರಿಸಿ ನಗಬೇಕಾಗುತ್ತದೆ

ಆದರೆ ಎಲ್ಲವೂ ನಾನೇ ಆಗಿರುವಾಗ
ನಾನು ಗೆಲ್ಲ ಬಯಸುವುದಿಲ್ಲ
ಸೋಲು ನನ್ನದಾಗಿರುವುದಿಲ್ಲ

-ಶ್ರೀದೇವಿ ಕೆರೆಮನೆ

 

 

 

 


ಸಮಸ್ಯೆಯಿರುವುದು ಈ ತೆಳುಗೆರೆಯಲ್ಲೆ!

ದಪ್ಪ ವಿಸ್ತಾರ ಗೋಡೆಗಳನು
ಇತಿಹಾಸ ಮುಲಾಜಿಲ್ಲದೆ
ಕೆಡವಿ ಹಾಕಿದೆ
ದೀರ್ಘ ಸಮುದ್ರಗಳು ನಾವಿಕನ
ದಡ ತಲುಪಿಸಿವೆ

ಆದರೆ, ಈ ತೆಳುಗೆರೆಗಳು?

ಪಾರದರ್ಶಕ ಬೆಳಕು ಇಲ್ಲಿ
ಹೆದರಿ ನಿಲ್ಲುತ್ತದೆ
ಮಾತು ಮೈಲಿಗೆಯಾಗಿ
ಕೆಂಪು ರಕ್ತವೂ ವಿಭಜನೆಯ
ಗುರುತಾಗಿ ಎದುರಾಗುತ್ತದೆ

ಗಾಳಿ ನಿಲ್ಲಿಸದ ಗಡಿ, ದಯೆ ಮರೆತ ಧರ್ಮ, ಅರ್ಥವಿರದ ಜಾತಿ
ಇವೆಲ್ಲವೂ ತೆಳು ಗೆರೆಗಳೇ
ರಕ್ತದಿಂದ ಎಳೆದಿದ್ದು!

ದಾಟಲು ನೆಲ ಅಡ್ಡಿಯಾದರೇನು?

ಮಾನವೀಯತೆಯ ರೆಕ್ಕೆಗಳಿಗೆ
ಜೀವ ಬೆರೆತಾಗ
ಮನಸುಗಳು ಬೆರೆಯಿದಿರದೆ?

ನಿಮ್ಮ ನಿಯಮಗಳು
ಭೂಮಿಗಷ್ಟೆ….!

-ರಮೇಶ್ ನೆಲ್ಲಿಸರ.

 

 

 

 

 

******

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
ಶ್ರೀಕಾಂತ
ಶ್ರೀಕಾಂತ
9 years ago

ಮೂರೂ ಹದವಾದ ಕವನಗಳು…

1
0
Would love your thoughts, please comment.x
()
x