೧. ಭೂತವೊಂದರ ನಿಗ್ರಹ
ಚಿಕ್ಕ ವಯಸ್ಸಿನ ಪತ್ನಿಯೊಬ್ಬಳು ರೋಗಪೀಡಿತಳಾಗಿ ಸಾಯುವ ಹಂತ ತಲುಪಿದ್ದಳು. ಅವಳು ತನ್ನ ಪತಿಗೆ ಇಂತೆಂದಳು: “ನಾನು ನಿನ್ನನ್ನು ಬಹುವಾಗಿ ಪ್ರೀತಿಸುತ್ತೇನೆ. ನಿನ್ನನ್ನು ಬಿಟ್ಟು ಹೋಗಲು ನಾನು ಬಯಸುವುದಿಲ್ಲ. ನನ್ನ ನಂತರ ಬೇರೆ ಯಾವ ಹೆಂಗಸಿನ ಹತ್ತಿರವೂ ಹೋಗಬೇಡ. ಹಾಗೇನಾದರೂ ಹೋದರೆ ನಾನು ಭೂತವಾಗಿ ಹಿಂದಿರುಗಿ ನಿನ್ನ ಅಂತ್ಯವಿಲ್ಲದ ತೊಂದರೆಗಳಿಗೆ ಕಾರಣಳಾಗುತ್ತೇನೆ.”
ಇದಾದ ನಂತರ ಅನತಿಕಾಲದಲ್ಲಿಯೇ ಆಕೆ ಸತ್ತಳು. ತದನಂತರದ ಮೊದಲ ಮೂರು ತಿಂಗಳ ಕಾಲ ಅವಳ ಇಚ್ಛೆಯನ್ನು ಪತಿ ಗೌರವಿಸಿದನಾದರೂ ಆನಂತರ ಸಂಧಿಸಿದ ಇನ್ನೊಬ್ಬ ಹೆಂಗಸನ್ನು ಪ್ರೀತಿಸಲಾರಂಭಿಸಿದ. ಅವರೀರ್ವರೂ ಮದುವೆಯಾಗಲು ನಿಶ್ಚಯಿಸಿದರು.
ನಿಶ್ಚಿತಾರ್ಥವಾದ ಕೂಡಲೆ ಪ್ರತೀ ದಿನ ರಾತ್ರಿ ಅವನಿಗೆ ಭೂತವೊಂದು ಕಾಣಿಸಿಕೊಂಡು ಕೊಟ್ಟ ಮಾತನ್ನು ಉಳಿಸಿಕೊಳ್ಳದಿರುವುದಕ್ಕೆ ನಿಂದಿಸಲಾರಂಭಿಸಿತು. ಅದೊಂದು ಜಾಣ ಭೂತವೂ ಆಗಿತ್ತು. ಅವನ ಮತ್ತು ಅವನ ಹೊಸ ಪ್ರೇಮಿಯ ನಡುವೆ ಏನೇನು ನಡೆಯಿತೆಂಬುದನ್ನು ಯಥಾವತ್ತಾಗಿ ಹೇಳುತ್ತಿತ್ತು. ಬಾವೀ ಪತ್ನಿಗೆ ಉಡುಗೊರೆಯೊಂದನ್ನು ಅವನು ಕೊಟ್ಟಾಗಲೆಲ್ಲ ಭೂತ ಅದರ ಸವಿವರ ವರ್ಣನೆ ನೀಡುತ್ತಿತ್ತು. ಅವರ ನಡುವಿನ ಸಂಭಾಷಣೆಯನ್ನೂ ಅದು ಪುನರುಚ್ಚರಿಸುತ್ತಿತ್ತು. ತತ್ಪರಿಣಾಮವಾಗಿ ಅವನಿಗೆ ಸಿಟ್ಟು ಬರುತ್ತಿತ್ತು, ಸರಿಯಾಗಿ ನಿದ್ದೆ ಬರುತ್ತಿರಲಿಲ್ಲ. ಆ ಹಳ್ಳಿಗೆ ಸಮೀಪದಲ್ಲಿ ವಾಸಿಸುತ್ತಿದ್ದ ಝೆನ್ ಗುರುವಿಗೆ ಸಮಸ್ಯೆಯನ್ನು ತಿಳಿಸುವಂತೆ ಯಾರೋ ಒಬ್ಬರು ಅವನಿಗೆ ಸಲಹೆ ನೀಡಿದರು. ಹತಾಶನಾಗಿದ್ದ ಆ ಬಡಪಾಯಿ ಕೊನೆಗೆ ಝೆನ್ ಗುರುವಿನ ಸಹಾಯ ಕೋರಿದ.
ಗುರು ವ್ಯಾಖ್ಯಾನಿಸಿದರು: “ನಿನ್ನ ಮೊದಲಿನ ಹೆಂಡತಿ ಭೂತವಾಗಿದ್ದಾಳೆ. ನೀನು ಮಾಡುವ ಎಲ್ಲವೂ ಅವಳಿಗೆ ತಿಳಿಯುತ್ತದೆ. ನೀನೇನು ಮಾಡಿದರೂ ಹೇಳಿದರೂ ನಿನ್ನ ಪ್ರೀತಿಪಾತ್ರಳಿಗೆ ಏನು ಕೊಟ್ಟರೂ ಅವಳಿಗೆ ತಿಳಿಯುತ್ತದೆ. ಅವಳು ಬಲು ಬುದ್ಧಿವಂತ ಭೂತವಾಗಿರಬೇಕು. ನಿಜವಾಗಿಯೂ ಇಂಥ ಭೂತವನ್ನು ನೀನು ಮೆಚ್ಚಬೇಕು. ಮುಂದಿನ ಸಲ ಕಾಣಿಸಿಕೊಂಡಾಗ ಅವಳೊಂದಿಗೆ ಒಂದು ಒಪ್ಪಂದ ಮಾಡಿಕೊ. ಅವಳಿಂದ ಏನನ್ನೂ ಮುಚ್ಚಿಡಲಾಗದಷ್ಟು ನಿನ್ನ ಕುರಿತಾದ ವಿಷಯಗಳನ್ನು ಅವಳು ತಿಳಿದಿರುವಳೆಂದು ಹೇಳು. ನಿನ್ನ ಒಂದು ಪ್ರಶ್ನೆಗೆ ಅವಳು ಉತ್ತರ ಕೊಟ್ಟರೆ ನಿಶ್ಚಿತಾರ್ಥದಲ್ಲಿ ಮಾಡಿಕೊಂಡ ಒಪ್ಪಂದವನ್ನು ಮುರಿದು ಒಂಟಿಯಾಗಿಯೇ ಉಳಿಯುವುದಾಗಿ ಆಶ್ವಾಸನೆ ಕೊಡು”
“ನಾನು ಅವಳನ್ನು ಕೇಳಬೇಕಾದ ಪ್ರಶ್ನೆ ಏನು?” ಕೇಳಿದನಾತ.
ಗುರು ಹೇಳಿದರು: “ಎಣಿಸದೆಯೇ ಒಂದು ಮುಷ್ಟಿ ತುಂಬ ಸೋಯಾ ಅವರೆ ಕಾಳುಗಳನ್ನು ತೆಗೆದುಕೊಂಡು ಮುಷ್ಟಿಯಲ್ಲಿ ಎಷ್ಟು ಸೋಯಾ ಅವರೆ ಕಾಳುಗಳು ಇವೆಯೆಂದು ಕೇಳು. ಅವಳು ಹೇಳಲಿಲ್ಲ ಎಂದಾದರೆ ಆ ಭೂತವು ನಿನ್ನ ಕಲ್ಪನೆಯ ಪರಿಣಾಮ ಎಂಬುದು ನಿನಗೆ ತಿಳಿಯುತ್ತದೆ. ತದನಂತರ ಅದು ನಿನಗೆಂದೂ ತೊಂದರೆ ಕೊಡುವುದಿಲ್ಲ.”
ಮಾರನೆಯ ರಾತ್ರಿ ಭೂತ ಕಾಣಿಸಿಕೊಂಡಾಗ ಅವನು ಅದನ್ನು ತುಂಬ ಹೊಗಳಿ ಅವಳಿಗೆ ಎಲ್ಲವೂ ತಿಳಿದಿದೆ ಎಂಬುದಾಗಿ ಹೇಳಿದ.
“ಹೌದು. ನೀನು ಇವತ್ತು ಝೆನ್ ಗುರುವನ್ನು ನೋಡಲು ಹೋದದ್ದೂ ನನಗೆ ಗೊತ್ತಿದೆ,” ಹೇಳಿತು ಭೂತ.
“ನಿನಗೆ ಇಷ್ಟೆಲ್ಲ ವಿಷಯ ತಿಳಿದಿದೆ, ಅಂದ ಮೇಲೆ ನನ್ನ ಈ ಮುಷ್ಟಿಯಲ್ಲಿ ಎಷ್ಟು ಸೋಯಾ ಅವರೆ ಕಾಳುಗಳಿವೆ? ಹೇಳು ನೋಡೋಣ” ಸವಾಲು ಹಾಕಿದ ಆತ.
ಆ ಸವಾಲಿಗೆ ಉತ್ತರ ನೀಡಲು ಅಲ್ಲಿ ಯಾವ ಭೂತವೂ ಇರಲಿಲ್ಲ.
*****
೨. ಜಗತ್ತಿನಲ್ಲಿ ಅತ್ಯಮೂಲ್ಯವಾದ ವಸ್ತು
ಚೀನೀ ಝೆನ್ ಗುರು ಸೋಝನ್‌ಅನ್ನು ವಿದ್ಯಾರ್ಥಿಯೊಬ್ಬ ಕೇಳಿದ: “ಈ ಜಗತ್ತಿನಲ್ಲಿ ಅತ್ಯಮೂಲ್ಯವಾದ ವಸ್ತು ಯಾವುದು?”
ಗುರು ಉತ್ತರಿಸಿದ: “ಸತ್ತ ಬೆಕ್ಕಿನ ತಲೆ.”
ವಿದ್ಯಾರ್ಥಿ ವಿಚಾರಿಸಿದ: “ಸತ್ತ ಬೆಕ್ಕಿನ ತಲೆ ಏಕೆ ಈ ಜಗತ್ತಿನಲ್ಲಿ ಅತ್ಯಮೂಲ್ಯವಾದ ವಸ್ತು?”
ಸೋಝನ್ ಉತ್ತರಿಸಿದ: “ಏಕೆಂದರೆ ಅದರ ಬೆಲೆ ಎಷ್ಟೆಂಬುದನ್ನು ಯಾರೂ ಹೇಳಲಾರರು.”
*****
೩. ಮೌನವಾಗಿರಲು ಕಲಿಯುವುದು
ಜಪಾನಿಗೆ ಝೆನ್ ಬರುವುದಕ್ಕೆ ಮುನ್ನವೇ ಬೌದ್ಧಮತದ ಟೆಂಡೈ ಶಾಖೆಯ ವಿದ್ಯಾರ್ಥಿಗಳು ಧ್ಯಾನ ಮಾಡುವುದನ್ನು ಅಭ್ಯಸಿಸುತ್ತಿದ್ದರು. ಅವರ ಪೈಕಿ ನಾಲ್ಕು ಮಂದಿ ಆತ್ಮೀಯ ಮಿತ್ರರು ಏಳು ದಿನ ಮೌನವಾಗಿರಲು ನಿರ್ಧರಿಸಿದರು.
ಮೊದಲನೆಯ ದಿನ ಎಲ್ಲರೂ ಮೌನವಾಗಿದ್ದರು. ಅವರ ಧ್ಯಾನವೂ ಮಂಗಳಕರವಾಗಿಯೇ ಆರಂಭವಾಯಿತು. ರಾತ್ರಿಯ ಕತ್ತಲು ಆವರಿಸುತ್ತಿದ್ದಂತೆಯೇ ಎಣ್ಣೆ ದೀಪಗಳ ಬೆಳಕು ಕ್ಷೀಣವಾಗತೊಡಗಿತು. ವಿದ್ಯಾರ್ಥಿಗಳ ಪೈಕಿ ಒಬ್ಬ ತಡೆಯಲಾಗದೆ ಸೇವಕನೊಬ್ಬನಿಗೆ ಹೇಳಿದ: “ದೀಪಗಳನ್ನು ಸರಿ ಮಾಡು.”
ಮೊದಲನೆಯ ವಿದ್ಯಾರ್ಥಿ ಮಾತನಾಡಿದ್ದನ್ನು ಕೇಳಿ ಎರಡನೆಯವನಿಗೆ ಆಶ್ಚರ್ಯವಾಯಿತು. “ನಾವು ಒಂದು ಪದವನ್ನೂ ಮಾತನಾಡುವಂತಿಲ್ಲ” ಎಂಬುದಾಗಿ ಅವನು ಉದ್ಗರಿಸಿದ.
“ನೀವಿಬ್ಬರೂ ಮೂರ್ಖರು. ನೀವೇಕೆ ಮಾತನಾಡಿದಿರಿ?” ಕೇಳಿದ ಮೂರನೆಯವನು.
“ನಾನೊಬ್ಬ ಮಾತ್ರ ಮಾತನಾಡಲಿಲ್ಲ” ಎಂಬುದಾಗಿ ಘೋಷಿಸಿದ ನಾಲ್ಕನೆಯವನು.
*****
೪. ಚೀನೀ ಕವಿತೆಯನ್ನು ಬರೆಯುವುದು ಹೇಗೆ
ಚೀನೀ ಕವಿತೆಯನ್ನು ಬರೆಯುವುದು ಹೇಗೆ ಎಂಬುದಾಗಿ ಸುವಿಖ್ಯಾತ ಜಪಾನೀ ಕವಿಯೊಬ್ಬನನ್ನು ಯಾರೋ ಕೇಳಿದರು.
“ಸಾಮಾನ್ಯವಾಗೀ ಚೀನಿ ಪದ್ಯದಲ್ಲಿ ನಾಲ್ಕು ಪಂಕ್ತಿಗಳಿರುತ್ತವೆ,” ಆತ ವಿವರಿಸಿದ. “ವಿಷಯ ಪ್ರತಿಪಾದನೆಯ ಮೊದಲನೇ ಮಜಲು ಒಂದನೇ ಸಾಲಿನಲ್ಲಿ ಇರುತ್ತದೆ; ಆ ಮಜಲಿನ ಮುಂದುವರಿದ ಭಾಗವಾಗಿರುತ್ತದೆ ಎರಡನೇ ಸಾಲು; ಮೂರನೇ ಸಾಲು ಆ ವಿಷಯವನ್ನು ಬಿಟ್ಟು ಬೇರೆ ಒಂದನ್ನು ಆರಂಭಿಸುತ್ತದೆ; ಮತ್ತು ನಾಲ್ಕನೇ ಸಾಲು ಮೊದಲಿನ ಮೂರು ಸಾಲುಗಳನ್ನು ಒಗ್ಗೂಡಿಸುತ್ತದೆ. ಈ ಜನಪ್ರಿಯ ಜಪಾನೀ ಹಾಡು ಇದನ್ನು ವಿಶದೀಕರಿಸುತ್ತದೆ:
ರೇಷ್ಮೆ ವ್ಯಾಪಾರಿಯೊಬ್ಬನ ಹೆಣ್ಣುಮಕ್ಕಳಿಬ್ಬರು ವಾಸಿಸುತ್ತಿದ್ದಾರೆ ಕ್ಯೋಟೋದಲ್ಲಿ.
ಹಿರಿಯವಳಿಗೆ ಇಪ್ಪತ್ತು, ಕಿರಿಯವಳಿಗೆ ಹದಿನೆಂಟು.
ಸೈನಿಕನೊಬ್ಬ ತನ್ನ ಖಡ್ಗದಿಂದ ಕೊಲ್ಲಬಲ್ಲ.
ಈ ಹುಡುಗಿಯರಾದರೋ ಪುರುಷರನ್ನು ಕೊಲ್ಲುತ್ತಾರೆ ತಮ್ಮ ಕಣ್ಣುಗಳಿಂದ.
*****
೫. ನಿಶ್ಶಬ್ದ ದೇವಾಲಯ
ಜ್ಞಾನೋದಯವಾಗಿ ಥಳಥಳಿಸುತ್ತಿದ್ದ ಶೋಯ್ಚಿ ಒಬ್ಬ ಒಕ್ಕಣ್ಣಿನ ಝೆನ್ ಗುರು. ತೋಫುಕು ದೇವಾಲಯದಲ್ಲಿ ಅವನು ಬೋಧಿಸುತ್ತಿದ್ದ.
ಅಹರ್ನಿಶಿ ದೇವಾಲಯ ನಿಶ್ಶಬ್ದವಾಗಿರುತ್ತಿತ್ತು. ಯಾವ ಸದ್ದೂ ಇರುತ್ತಿರಲಿಲ್ಲ.
ಶ್ಲೋಕ ಪಠನವನ್ನೂ ಅವನು ನಿಷೇಧಿಸಿದ್ದ. ಧ್ಯಾನ ಮಾಡುವುದರ ಹೊರತಾಗಿ ಬೇರೇನನ್ನೂ ಮಾಡುವಂತಿರಲಿಲ್ಲ.
ಗುರು ವಿಧಿವಶನಾದಾಗ, ವೃದ್ಧ ನೆರೆಯವಳೊಬ್ಬಳಿಗೆ ಗಂಟೆ ಬಾರಿಸಿದ ನಾದವೂ ಶ್ಲೋಕಗಳನ್ನು ಪಠಿಸುತ್ತಿರುವುದೂ ಕೇಳಿಸಿತು. ಆದ್ದರಿಂದ ಶೋಯ್ಚಿ ಸತ್ತಿದ್ದಾನೆ ಎಂಬುದು ಅವಳಿಗೆ ತಿಳಿಯಿತು.
*****