ಜ್ಯೋತಿಷ್ಯದ ದುರುಪಯೋಗ: ಶ್ರೀನಿವಾಸ್ ಪ್ರಭು

ಜ್ಯೋತಿಷ್ಯ  ಎಂಬ ಪದ ಹುಟ್ಟಿದ್ದು ಸೂರ್ಯನನ್ನು ಕೇಂದ್ರೀಕರಿಸಿ. ಸೂರ್ಯನನ್ನು ಪ್ರಧಾನವಾಗಿರಿಸಿ ಇತರ ಗ್ರಹಗಳು ಸುತ್ತುವ ವಾಗ ಚಂದ್ರನ  ಮೇಲೆ ಬೀಳುವ ಸೂರ್ಯನ ಬೆಳಕಿನ ಛಾಯಾ ಬಿಂಬ ಆರೋಹ ಮತ್ತು ಅವರೋಹ ಪರಿಕ್ರಮದಲ್ಲಿ ಪುನರಾವರ್ತನೆ ಯಾಗುವ ದಿನದ ಗಣಿತ. ಮನುಕುಲ ಭೂಮಿಯ ಮೇಲೆ ಹುಟ್ಟಿದಂದಿನಿಂದ ಆಕಾಶಕಾಯದಲ್ಲಿ ಕಾಣುವ ಸೂರ್ಯ, ಚಂದ್ರ, ನಕ್ಷತ್ರ ಹಾಗೂ ಇತರ ಆಕಾಶ ಕಾಯಗಳ ಬಗ್ಗೆ ಕೂತೂಹಲಗೊಂಡು, ಕೆಲವು ಬುದ್ಧಿವಂತ ಸನ್ಯಾಸಿಗಳು ಸಂಶೋಧನೆ ಮಾಡುತ್ತಾ, ಸೂರ್ಯನ ಬೆಳಕು ಚಂದ್ರನ ಮೇಲೆ ಬೀಳುವ ಪರಿಯನ್ನು ಲೆಕ್ಕ ಹಾಕತೊಡಗಿ ಸಂಪೂರ್ಣ ಚಂದ್ರನನ್ನು ಪೂರ್ಣಿಮೆ ಅಂತಲೂ, ನಂತರ ಕ್ಷೀಣಿಸಿ ಮರೆಯಾಗುವ ದಿನವನ್ನು ಅಮಾವಾಸ್ಯೆ ಅಂತ ನಿರ್ಣಯಿಸಿ ಈ ಎರಡು ಘಟನೆಗಳನ್ನು ಕೇಂದ್ರೀಕರಿಸಿ ಅಮಾವಾಸ್ಯೆಯಿಂದ ಹುಣ್ಣಿಮೆಗೆ ತಗಲುವ ದಿನಗಳನ್ನು ಮತ್ತೆ ಹುಣ್ಣಿಮೆಯಿಂದ ಅಮಾವಾಸ್ಯೆಗೆ ತಗಲುವ ದಿನಗಳನ್ನು ದಾಖಲಿಸುತ್ತಾ ನಮಗೆ ಇವತ್ತಿನ ದಿನ ಸೂಚಿ ಪಟ್ಟಿ (ಪಂಚಾಂಗ – ಕ್ಯಾಲೆಂಡರ್ ) ಕೊಡುವಲ್ಲಿ ಸಫಲರಾಗಿದ್ದರ ಹಿಂದೆ ಇದ್ದದ್ದು ಇದೇ ಜ್ಯೋತಿಷ್ಯ! ಇಂದಿಗೂ ಸರಿಯಾದ ಜ್ಯೋತಿಷಿ  ಮಾತ್ರ ಪಂಚಾಗ ರಚಿಸಬಲ್ಲ. ಇವತ್ತಿನ ತಾರೀಕುಪಟ್ಟಿಯಲ್ಲಿ ಅಮಾವಾಸ್ಯೆ – ಹುಣ್ಣಿಮೆ, ನಕ್ಷತ್ರಗಳ ಇರುವಿಕೆ, ಭರಣಿ-ಕೃತಿಕ, ಏಕಾದಶಿ-ದ್ವಾದಶಿ, ಹಬ್ಬ-ಹರಿದಿನಗಳ ದಿನಗಳನ್ನು ಹಾಗೂ ಕರಾರುವಕ್ಕಾಗಿ ಮುಂದೆ ಬರುವ ಸೂರ್ಯಗ್ರಹಣ, ಚಂದ್ರಗ್ರಹಣಗಳ ಸೂಚ್ಯಾಂಕ ದಿನಗಳನ್ನು ಬರೆಯುವವರು ಕೂಡಾ ಈ ಜ್ಯೋತಿಷಿಗಳೆ! ಇದಕ್ಕಾಗಿಯೇ ಇವರು ವರ್ಷಾನುಗಟ್ಟಲೆ ಜ್ಯೋತಿಷ್ಯ ಶಾಸ್ತ್ರವನ್ನು ಅಭ್ಯಾಸ ಮಾಡಿರುತ್ತಾರೆ. ಜ್ಯೋತಿಷ್ಯ ಅನ್ನುವಂತದ್ದು ಹಿಂದೆಯೂ ಸುಳ್ಳಾಗಿಲ್ಲ, ಇಂದೂ ಸುಳ್ಳಾಗುತ್ತಿಲ್ಲ, ಮುಂದೆಯೂ ಸುಳ್ಳಾಗುವುದಿಲ್ಲ. ಯಾಕೆಂದರೆ ಇದೊಂದು ಕರಾರುವಕ್ಕಾದ ಪೂರ್ಣ ಗಣಿತ.

ಇಂದು ಜ್ಯೋತಿಷ್ಯ ಎಂಬ ಪದದ ಅರ್ಥ ಸರಿಯಾಗಿ ಗೊತ್ತಿರದ ಕೆಲವು ಮೂಢರು ಟಿವಿ ವಾಹಿನಿಗಳಲ್ಲಿ ಫಲಜ್ಯೋತಿಷ್ಯ ಹೇಳುವ ಮೂಲಕ ಜನರನ್ನು ವಂಚಿಸುತ್ತಿದ್ದು, ಜ್ಯೋತಿಷ್ಯದ ಗಂಧ-ಗಾಳಿ ಗೊತ್ತಿರದೆಯೂ ಅಲ್ಪ ಕಾಲದಲ್ಲಿ ಜನ ಪ್ರಸಿದ್ಧಿ ಪಡೆದು ನಿಜ ಜ್ಯೋತಿಷಿಗಳ ಹಾಗೂ ನಿಜ ಜ್ಯೋತಿಷ್ಯದ ಕೊಲೆ ಮಾಡುತ್ತಿದ್ದಾರೆ. ಈ ಮೈಗಳ್ಳ ಢೋಂಗಿ ವಂಚಕ ಭಯೋತ್ಪಾದಕ ಕ್ರಿಮಿನಲ್ ಕ್ರಿಮಿ ಜ್ಯೋತಿಷಿಗಳಿಗೆ ಹಾಗೂ ಅವರ ವ್ಯಾಪಾರಕ್ಕೆ ಅಂಕುಶ ಹಾಕಲು ನಮ್ಮ ಸಮಾಜ ಕೈ ಜೋಡಿಸಿ, ಋಷಿ ಮುನಿಗಳಿಂದ ನಮಗೆ ಬಳುವಳಿಯಾಗಿ ಬಂದ ನಿಜ ಜ್ಯೋತಿಷ್ಯ ತನ್ನ ಮೂಲ ಪಾವಿತ್ರ್ಯ ಕಳೆದುಕೊಳ್ಳದಂತೆ ಹಾಗೂ ಅದನ್ನು ನಮ್ಮ ಮುಂದಿನ ಪೀಳಿಗೆಗೆ ನೈಜ್ಯ ಹಾಗೂ ಕರಾರುವಕ್ಕಾದ ಮೂಲ ಗಣಿತದ ಕಲಿಕೆಯೊಂದಿಗೆ ಉಳಿಸಿಕೊಳ್ಳಬೇಕಾಗಿದೆ.

ಇಲ್ಲಿ ಜ್ಯೋತಿಷ್ಯ ಹಾಗೂ ಫಲ ಜ್ಯೋತಿಷ್ಯ ಬೇರೆ ಬೇರೆ. ಜ್ಯೋತಿಷ್ಯ ಅಂದರೆ ಅದು ಭಾರತೀಯರ ಕ್ಯಾಲೆಂಡರ್ (ಪಂಚಾಗ) ಕರಾರುವಕ್ಕಾಗಿ ಗುಣಿಸಿ ತಯಾರಿಸುವ ವಿದ್ಯೆ. ಜ್ಯೋತಿಷಿ ಅಲ್ಲದವನಿಗೆ ಇದನ್ನು ತಯಾರಿಸಲು ಆಗುವುದಿಲ್ಲ. ಇದೇ ರೀತಿ ಜಾತಕ ಅನ್ನುವುದು ಹಿಂದೂಗಳ ಬರ್ತ್ ಸರ್ಟಿಫಿಕೇಟ್. ಇಂಗ್ಲಿಷ್ ಕ್ಯಾಲೆಂಡರ್ ಕಂಡು ಹಿಡಿಯುವ ಮೊದಲು ಮಗು ಹುಟ್ಟಿದ ದಿನಾಂಕ ಬರೆದಿಡುವ ಕ್ರಮವೇ ಜಾತಕ. ನಮ್ಮ ಕ್ಯಾಲೆಂಡರ್ ಜ್ಯೋತೀರ್ ಆಧಾರದಲ್ಲಿರುವುದರಿಂದ ಇಲ್ಲಿ ಮಾಸ, ಗ್ರಹ, ನಕ್ಷತ್ರ ಇತ್ಯಾದಿ ಸೂಚಿಸಲಾಗುತ್ತೆ. ಹನ್ನೆರಡು ಮಾಸಗಳ (ತಿಂಗಳು) ಚೌಕಟ್ಟು ರಚಿಸಿ, ಆಯಾ ತಿಂಗಳುಗಳಲ್ಲಿ ಯಾವ ಯಾವ ಗ್ರಹಗಳು ( ಏಳು ವಾರಗಳ ಹೆಸರು ಹಾಗೂ ರಾಹು ಕೇತು ಎರಡು ಕ್ಷುದ್ರ) ಯಾವ ಯಾವ ತಿಂಗಳಲ್ಲಿ ಇರುತ್ತವೆಯೋ ಆ ಚೌಕಟ್ಟಿನಲ್ಲಿ ನಮೂದಿಸಲಾಗುತ್ತೆ. ಅದೇ ರೀತಿ ಹುಟ್ಟಿದ ದಿನ ಯಾವ ಯಾವ ನಕ್ಷತ್ರ ಯಾವ ಯಾವ ರಾಶಿ (ತಿಂಗಳು)ಯಲ್ಲಿ ಗೋಚರದಲ್ಲಿ ಇರುತ್ತದೆಯೋ ಅಲ್ಲಿ ನಮೂದಿಸಲಾಗುತ್ತೆ. ಇದನ್ನು ಸರಿಯಾಗಿ ಜ್ಯೋತಿಷ್ಯ ಬಲ್ಲ ಜ್ಯೋತಿಷಿ ಮಾತ್ರ ಪಂಚಾಗ (ಕ್ಯಾಲೆಂಡರ್) ರಚಿಸಿದಂತೆ ರಚಿಸಬಲ್ಲ. ಇದರಿಂದ ಜಾತಕನು ಹುಟ್ಟುವಾಗ ಯಾವ ಯಾವ ರಾಶಿಯಲ್ಲಿ ಯಾವ ಯಾವ ಗ್ರಹ-ನಕ್ಷತ್ರಗಳು ಗೋಚರದಲ್ಲಿದ್ದವು ಎಂಬುದನ್ನು ತಿಳಿಯಬಹುದು. ಹಾಗಾಗಿ ಜಾತಕ ಹಿಂದೂಗಳ ಬರ್ತ ಸರ್ಟಿಫಿಕೇಟ್ ಹೊರತು ಸರಿಯಾದ ಭವಿಷ್ಯವಲ್ಲ.

ಜಾತಕ ಜ್ಯೋತೀರ್  ಆಧಾರದಲ್ಲಿ ಇರುವುದರಿಂದ ಸಾವಿರಾರು ವರ್ಷಗಳ ಹಿಂದೆ ಆಯಾ ರಾಶಿ, ಗ್ರಹ, ನಕ್ಷತ್ರಗಳಲ್ಲಿ ಹುಟ್ಟಿದವರು ಹೇಗೆ ಬಾಳಿದ್ದಾರೆ? ಯಾವ ಯಾವ ತೊಂದರೆಗೆ ಒಳಗಾಗಿದ್ದಾರೆ, ಘಟನೆಗಳು ನಡೆಯುವಾಗ ಯಾವ ಯಾವ ರಾಶಿಯಲ್ಲಿ ಯಾವ ಯಾವ ಗ್ರಹ-ನಕ್ಷತ್ರಗಳು ಗೋಚರದಲ್ಲಿದ್ದವು ಎಂಬ ಅಧ್ಯಯನ ನಡೆಸಿ, ಮುಂದೆ ಅದೇ ರಾಶಿಯಲ್ಲಿ ಆಯಾ ಗ್ರಹ – ನಕ್ಷತ್ರಗಳು ಬರುವಾಗ ಇವು ಪುನಾರಾವರ್ತನೆಗೊಂಡಿದೆಯೇ? ಹಾಗಾದರೆ ಅದರ ಪರಿಣಾಮ ಏನಾಗಿತ್ತು? ಎಂಬಿತ್ಯಾದಿಗಳ ಬಗ್ಗೆ ಋಷಿ ಮುನಿಗಳು ಬರೆದಿಟ್ಟ ಗ್ರಂಥ ಆದರಿಸಿ ಇಂದಿನ ಜ್ಯೋತಿಷಿಗಳು ಫಲ ಜ್ಯೋತಿಷ್ಯ ಹೇಳುವ ಕ್ರಮವಿದೆ. ಇದು ಕೇವಲ ಒಂದು ಸಂಭವನೀಯತೆ ಅಷ್ಟೆ. ಆದರೂ ಇದನ್ನು ಸಂಪೂರ್ಣ ಅಲ್ಲಗಳೆಯುವಂತಿಲ್ಲ. ಸರಿಯಾದ ವಿದ್ವತ್ತು ಇರುವ ಜ್ಯೋತಿಷಿಗಳು ಮಾತ್ರ ಜಾತಕ ನೋಡಿ, ಹಿಂದಿನವರು ಬರೆದಿಟ್ಟ ಫಲ ಜ್ಯೋತಿಷ್ಯ ಗ್ರಂಥಗಳ ಆಧಾರದ ಮೇಲೆ ಜಾತಕನಿಗೆ ಮುಂದೆ ಬರಬಹುದಾದ ಒಳಿತು ಕೆಡುಕುಗಳ ಮುನ್ಸೂಚನೆ ಕೊಡಬಹುದು(ವಿಜ್ಞಾನಿಗಳು ಮಳೆ ಸೂಚನೆ ಕೊಟ್ಟಂತೆ). ಇಲ್ಲಿ ಸಂಭಾವ್ಯತೆ ಇಲ್ಲಾ ಎಂದು ಸರಿ ಸುಮ್ಮನೆ ಇರುವಂತೆಯೂ ಇಲ್ಲ. ರಸ್ತೆಗಳ ತಿರುವುಗಳಲ್ಲಿ ಆಗಾಗ ಅಪಘಾತ ಸಂಭವಿಸುತ್ತಿದ್ದರೆ ಅಲ್ಲಿ ‘’ಮುಂದೆ ತಿರುವು ಇದೆ ನಿಧಾನವಾಗಿ ಚಲಿಸಿ’’ ಎಂಬ ಫಲಕ ಹಾಕಲಾಗುತ್ತೆ. ಇದು ಚಾಲಕನ ಜಾಗ್ರತೆಗಾಗಿ. ನಮ್ಮ ಬಾಳೂ ಇದಕ್ಕೆ ಹೊರತಾಗಿಲ್ಲ.

ಇವತ್ತು ಸರಿಯಾದ ವಿದ್ವತ್ತು ಇರುವ ಜ್ಯೋತಿಷಿಗಳು ಮನೆಯೊಳಗೆ ಇದ್ದರೆ ಕಪಟ ಜ್ಯೋತಿಷಿಗಳು ರಸ್ತೆಯಲ್ಲಿ, ದೊಡ್ಡ ದೊಡ್ಡ ಹೋಟೆಲುಗಳಲ್ಲಿ ರೂಂ ಮಾಡಿ, ಟಿವಿ, ದಿನ ಪತ್ರಿಕೆಗಳಲ್ಲಿ ದೊಡ್ಡ ದೊಡ್ಡ ಜಾಹೀರಾತು ಕೊಟ್ಟು, ತಮ್ಮಲ್ಲಿ ನಯಾ ಪೈಸೆಯ ವಿದ್ವತ್ತು ಇಲ್ಲದೆ ಜನರನ್ನು ಮೋಸ, ವಂಚನೆ ಮಾಡಿ ಇಲ್ಲ ಸಲ್ಲದ ಭಯ ಹುಟ್ಟಿಸುವ ಭವಿಷ್ಯ ಹೇಳಿ ಜನರನ್ನು ವಂಚಿಸುತ್ತಿದ್ದಾರೆ. ಜನರ ಕಷ್ಟ, ನೋವು, ಹಣಕಾಸು,ವಿದ್ಯೆ, ಉದ್ಯೋಗ, ದಾಂಪತ್ಯಕಲಹ, ಶತ್ರುಕಾಟ, ಪ್ರೀತಿ-ಪ್ರೇಮ, ವಶೀಕರಣವೇ ಮೊದಲಾದ ಬೇಕುಗಳನ್ನು ಮುಂದಿಟ್ಟುಕೊಂಡು ಅದಕ್ಕೆ ಜ್ಯೋತಿಷ್ಯದ ಮೂಲಕ ಕಾರಣ ತಿಳಿದು ಪರಿಹಾರ ಮಾಡಿಕೊಡುತ್ತೇವೆ ಎಂಬ ಆಶೆಯ ಬೀಜ ನೊಂದವರ ಮನಸ್ಸಿನಲ್ಲಿ ನೆಟ್ಟು ಅದನ್ನು ಹೆಮ್ಮರವಾಗಿ ಬೆಳಿಸಿ ಅದರ ಫಸಲನ್ನು ಕಿತ್ತು ತಿನ್ನುವ ಈ ಕಟುಕ ರಕ್ತ ಬೀಜಾಸುರರು ಬೇಕಾದಷ್ಟು ಇದ್ದಾರೆ. ಹದಿಹರೆಯದವರನ್ನು ಪ್ರೀತಿ ಪ್ರೇಮ, ವಶೀಕರಣ ಅಂತ ನಂಬಿಸಿ ಅವರಿಂದ ಸಾಕಷ್ಟು ದುಡ್ದು ಕೀಳಿ ಕೊನೆಗೊಮ್ಮೆ ಬೀದಿ ಭಿಕಾರಿ ಮಾಡಿ ವಂಚನೆಯ ಮಾರ್ಗದಿ ದುಡ್ದು ದೋಚುವ ಈ ಜ್ಯೋತಿಷಿಗಳ ಜಾಲದಲ್ಲಿ ಒಮ್ಮೆ ಸಿಕ್ಕಿ ಬಿದ್ದರೆ ಹೊರಬರುವುದು ಕಷ್ಟ.  ಇಂದಿನ ಫೈವ್ ಸ್ಟಾರ್ ಜ್ಯೋತಿಷಿಗಳ ಹಿಂದೆ ಒಂದು ದೊಡ್ಡ ಹೈ ಫೈ ವಂಚನಾ ಜಾಲ ಕೆಲಸ ಮಾಡುತ್ತಿದೆ. ಈ ಜಾಲ ಜನರನ್ನು ಹೇಗೆ ನಂಬಿಸಬೇಕು ಎಂಬುದರ ಬಗ್ಗೆ ಸರಿಯಾದ ರೀತಿಯ ಮಾರ್ಕೆಟಿಂಗ್ ತಂತ್ರಜ್ಞಾನ ಹೊಂದಿದ್ದು, ಕ್ಷಣಮಾತ್ರದಲ್ಲಿ ಗಿರಾಕಿಗಳನ್ನು ನಂಬಿಸಿ ಜ್ಯೋತಿಷಿಗಳ ಬಳಿಗೆ ಸೆಳೆಯುವಂತೆ ಮಾಡುತ್ತಾರೆ. ಒಮ್ಮೆ ಈರೀತಿಯ ವಂಚನೆಯ ಜಾಲದಲ್ಲಿ ಸಿಲುಕಿದರೆ ಸಾಕು ಮತ್ತೆ ಹೊರಬರುವ ಮಾರ್ಗ ಆ ದೇವರಿಗೂ ಗೊತ್ತಾಗದು. ನಿಮ್ಮಲ್ಲಿ ದುಡ್ದು ಇಲ್ಲ ಅಂತ ಹಿಂದೆ ಸರಿಯಬೇಕಾಗಿಲ್ಲ ಬಡ್ಡಿಗೆ ದುಡ್ದು ಕೊಡುವವರೂ ಇದೆ ಜಾಲದ ಕೊಂಡಿಯಲ್ಲಿದ್ದಾರೆ. ನಿಮಗೆ ನಿಮ್ಮನ್ನು ಬರ್ಬಾತ್ ಮಾಡುವಷ್ಟು ಬಡ್ಡಿಗೆ ಹಣ ಕೊಟ್ಟು ಜ್ಯೋತಿಷಿಗಳಿಂದ ಕಾಪಾಡುತ್ತಾರೆ! ಮೋಸ ಹೋಗುವವರು ಇರುವವರೆಗೂ ಮೋಸ ಮಾಡುವವರೂ ಇರಲೇ ಬೇಕಲ್ಲವೆ? ನಮ್ಮ ಭವಿಸ್ಯ ನಮ್ಮ ಕೈಯಲ್ಲಿದೆ. ಅದನ್ನು ಇನ್ನೊಬ್ಬರ ಕೈವಶ ಮಾಡದಿರುವುದೇ ಬುದ್ದಿವಂತರ ಲಕ್ಷಣ. 

ಶ್ರೀನಿವಾಸ್ ಪ್ರಭು
(ಸ್ಪೂರ್ತಿ, ಬಂಟಕಲ್ಲು)
ಶಾರ್ಜಾ, ಯು.ಎ.ಇ. 

******

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

2 Comments
Oldest
Newest Most Voted
Inline Feedbacks
View all comments
ದತ್ತಾತ್ರಿ
ದತ್ತಾತ್ರಿ
10 years ago

ಸರಿಯಾದ ಮಾತು. ಡೋಂಗಿ ಜ್ಯೋತಿಷಿಗಳಿಗೆ ಬಹಿಷ್ಕಾರ ಬೀಳಲೇಬೇಕು…

ಗುರುಪ್ರಸಾದ ಕುರ್ತಕೋಟಿ

ಶ್ರೀನಿವಾಸ್, ತುಂಬಾ ಮಾಹಿತಿಪೂರ್ಣ ಲೇಖನ. ಅಂದಹಾಗೆ, ಮೋಸ ಹೋಗುವವರು ಇರುವವರೆಗೂ ಮೊಸ ಮಾಡುವವರೂ ಇರುತ್ತಾರೆ ಅಲ್ಲವೆ? 🙂

2
0
Would love your thoughts, please comment.x
()
x