ಗಡಿನಾಡ ಊರುಗಳಲ್ಲಿರುವ ಒಂದು ಉಪಯೋಗವೆಂದರೆ, ಅದು ಒಂದಕ್ಕಿಂತ ಹೆಚ್ಚು ಭಾಷಾ ಕಲಿಕೆ ಮತ್ತು ಸರಾಗವಾಗಿ ಮಾತಾಡುವ ರೂಢಿಯಾಗುವುದು. ಕನ್ನಡ – ತೆಲುಗು, ಕನ್ನಡ-ತಮಿಳು, ಕನ್ನಡ-ತುಳು, ಕನ್ನಡ- ಮರಾಠಿ, ಹೀಗೆ. ಅದಲ್ಲದೇ ಹಿಂದಿ ಉರ್ದು ಕೂಡ. ಚೂರು ಇಂಗ್ಲೀಷು ಬೆರೆತರಂತೂ ಬಹುಭಾಷಾ ವಿದ್ಯೆ. ಅಂಥದೊಂದು ಸೌಕರ್ಯ ನಮ್ಮ ಭಾಗದಲ್ಲೂ ಇದೆ. ಬಳ್ಳಾರಿ ರಾಯಚೂರು ಆಂಧ್ರ ಸೀಮೆಯ ಅಂಚಿನಲ್ಲಿರುವುದರಿಂದಲೂ ಜೊತೆಗೆ ತಮಿಳುನಾಡು ಆಂಧ್ರದಿಂದ ತುಂಗಭದ್ರ ಆಣೆಕಟ್ಟು ನಿರ್ಮಾಣ ಹಂತದಲ್ಲಿಂದ ಬಂದು ಸೆಟ್ಲ್ ಆದಂಥ ತಮಿಳಿಗರು, ತೆಲುಗರು ಇಲ್ಲೇ ನೆಲೆ ಊರಿರುವುದರಿಂದ ತೆಲುಗು ತಮಿಳು ಜೊತೆಗೆ ಹಿಂದಿ ಉರ್ದುವಂತೂ ಸರಿಯೇ ಸರಿ ನಾಲ್ಕು ಭಾಷೆಗಳಲ್ಲೂ ಮಾತಾಡುವ ರೂಢಿ ನಮ್ಮ ಭಾಗದ ಬಹುತೇಕ ಜನರಲ್ಲಿದೆ.
ನಾವಿದ್ದ ವಾಸದ ಮನೆ ಬರೀ ಮುಸ್ಲೀಮರಿದ್ದಂಥ ಏರಿಯಾ. ಅಪ್ಪನಿಗೆ ಉರ್ದು, ತೆಲುಗು ಕನ್ನಡ ಮತ್ತೆರಡು ಭಾಷೆ, ಮಾತು ಸರಾಗ ಸರಾಗ. ಒಮ್ಮೆ ಅಪ್ಪನ ಗೆಳೆಯ ಅಕ್ಕಸಾಲಿಗನೊಬ್ಬ ಅಪ್ಪನನ್ನು ಜೊತೆ ಮಾಡಿಕೊಂಡು ಆಂಧ್ರ, ತಮಿಳುನಾಡಿನ ಕನ್ಯಾಕುಮಾರಿ, ಶಿವಕಾಸಿ ಹೀಗೆ ಸುತ್ತಾಡಿ ಬಂದಿದ್ದರು. ಮೊದಲೇ ಶಿವಕಾಸಿ ಪಟಾಕಿ ತಯಾರಿಸುವ ತವರು. ಬರುವಾಗ ಪುಡಿಗಾಸಿಗೇ ಚೀಲಗಟ್ಟಲೇ ಪಟಾಕಿಗಳನ್ನು ಅಲ್ಲಿಂದ ತಂದಿದ್ದ. ಪ್ರತಿವರ್ಷ ಬೇಸಿಗೆ ಮತ್ತು ದಸರಾ ರಜೆಗೆ ಮಾತ್ರ ನಾವು ಅಪ್ಪ ಅಮ್ಮನಿದ್ದ ಗಂಗಾವತಿಗೆ ಹೋಗುತ್ತಿದ್ದುದು ರೂಢಿ. ಅದೊಮ್ಮೆ ಅಂಥ ದಸರೆಗೆ ಬಿಟ್ಟ ರಜೆಯಲ್ಲೇ ದೀಪಾವಳಿಯೂ ಇತ್ತು. ಆಗತಾನೇ ಚೀಲಗಟ್ಟಲೇ ತಂದ ಪಟಾಕಿ ಬೇರೆ ಇದ್ದವು. ಇದ್ದ ತಟಗು ಫೋಟೋ ಫ್ರೇಮ್ ವರ್ಕ್ಸ್ ಅಂಗಡಿಯಲ್ಲಿ ಲಕ್ಷ್ಮಿ ಪೂಜೆಗೆಲ್ಲಾ ತಯಾರಾಗಿದೆ. ಇನ್ನೇನು ಪೂಜೆ ಆರಂಭಿಸಬೇಕು, ಪಟಾಕಿ ಹೊಡೆಯಲು ಶುರು ಮಾಡಿದೆವು; ಅಕ್ಕ, ನಾನು ಮತ್ತು ತಮ್ಮ ವಿಜಿ. ಹೂಕುಂಡ ಒಂದಾದ ಮೇಲೊಂದರಿಂದ ಬೆಂಕಿ ಕಿಡಿಗಳು ಹಾರುತ್ತಲೇ ಇವೆ. ನಾವೂ ನೋಡುತ್ತೇವೆ, ಕಣ್ಣರಳಿಸುತ್ತೇವೆ.
ಒಂದ್ಯಾಕೋ ಎಷ್ಟು ಕಿಡಿ ಹಚ್ಚಿದರೂ ಹೂಕುಂಡ ಹೂ ಬಿಡಲೇ ಇಲ್ಲ. ನಮ್ಮ ಕಡೆ ಅತಿ ಬುದ್ಧಿವಂತಿಕೆ ಉಪಯೋಗಿಸುವವರನ್ನು “ದೀಡ್ ಪಂಡಿತ” ಅನ್ನುತ್ತಾರೆ. ಅಂತ ದೀಡ್ ಪಂಡಿತರು ನಾವೂ ಆಗಿದ್ದೆವು. ದೊಡ್ಡದೊಂದು ಪೇಪರ್ ಹರವಿ ಅದರ ಮಧ್ಯೆ ಹೂಕುಂಡವಿಟ್ಟು ಪೇಪರ್ ನಾಲ್ಕೂ ಮೂಲೆಗೆ ಕಡ್ಡಿ ಗೀರಿದೆವು. ಗೊತ್ತಾಗುವುದರಲ್ಲಿ ದೊಡ್ಡದೊಂದು ಸೌಂಡು, ಕಣ್ಣು ಕತ್ತಲೆ ಮತ್ತು ಬಲ ಅಂಗೈಯೆಲ್ಲಾ ಸುಟ್ಟು ಆಗಾಧ ನೋವು. ಚಿಕಿತ್ಸೆ ನಂತರ ಆ ರಾತ್ರಿಯೆಲ್ಲಾ ತೆರದರೂ ಕಣ್ಣು ಕಾಣದೇ ಒದ್ದಾಡಿದ್ದೆ. ಮುಗೀತು, ಆ ದೀಪಾವಳಿಯೇ ಕೊನೆ ನಾನು ಪಟಾಕಿ ಕಡೆಗೆ ತಿರುಗಿ ನೋಡುವುದಿಲ್ಲ. ಇಲ್ಲಿ ಪಟಾಕಿ ಸಿಡಿತ, ಅಂಗೈ ಸುಟ್ಟ ಗಾಯ ಮತ್ತು ದೀಪಾವಳಿ ಒಂದು ನೆಪವಾಗಿ ಮಾತ್ರವೇ ನಾನು ಹೇಳಲು ಹೊರಟಿದ್ದು. ಸರಿ ಸುಮಾರು ಮೂವತ್ತು ವರ್ಷವಾಯ್ತು. ಅಲ್ಲಿಂದ ಇದೇ ದಸರಾ ದೀಪಾವಳಿ ಮುಂಚೆ ಅಥವಾ ನಂತರ ಹಾಗೂ ಆಸುಪಾಸು ನನ್ನ ಅನುಭವಕ್ಕೆ ಬಂದಂತೆ ಸುಮಾರು ಘಟನೆಗಳು ಒಳ್ಳೆಯವೂ ಆಗಿವೆ. ಮುಟ್ಟಿ ನೋಡಿಕೊಂಡು ಬರೆಯುವಂಥವೂ ಇವೆ.
ಒಳ್ಳೆಯವು ಬಿಡಿ ಅಷ್ಟು ಕಾಡುವುದಿಲ್ಲ, ನೆನಪಾಗುತ್ತವೆ, ನಮ್ಮ ಮನೆಯಲ್ಲಿ ಮಕ್ಕಳ ಜನನ, ನಾಮಕರಣ, ಖುಷಿಯ ಕಾರ್ಯಕ್ರಮ, ಗೃಹ ಪ್ರವೇಶ, ಹೀಗೆ. ಆದರೆ, ಕಾಡುವ ಘಟನೆಗಳಿವೆಯಲ್ಲಾ, ಅವು ನೆನಪಾಗುವುದಿಲ್ಲ, ಬದಲಾಗಿ ಕಾಡುತ್ತವೆ. ನೆನಪಾಗುವುದಿಲ್ಲವೆಂದ ಕಾರಣ ಅವು ಮರೆವಾಗಿದ್ದರೆ ತಾನೇ? ಅದು ಸಾವಾಗಿರಬಹುದು. ಯಾರೋ ದೂರಾಗಿರಬಹುದು. ಮಾತು ಬಿಟ್ಟು ಮುನಿಸಿಕೊಂಡಿರಬಹುದು. ಅದಕ್ಕೂ ಮೊದಲು ಅವರು ನಮ್ಮಿಂದ ದೂರಾಗುವ ಯಾವುದೇ ಸೂಚನೆ, ಜಗಳ, ಮಾತು, ಮುನಿಸು, ದುಡ್ಡಿನ ಲಫಡಾ ಯಾವುದೂ ಇಲ್ಲ ಅಂದುಕೊಳ್ಳೋಣ. ಆದರೆ, ಏಕಾಏಕಿ ಒಂದು ಮಾತು ಹೇಳದೇ, ಕಾರಣವೇ ಹೇಳದೇ, ನಮ್ಮಿಂದ ದೂರಾಗಿರಬಹುದು. ಸೂಕ್ಷ್ಮವಾಗಿ ಗಮನಿಸಿದರೆ, ದೂರ ಸರಿಯವ ಮುನ್ನ ಸಾಕಷ್ಟು ಸುಳಿವು, ಸೂಚನೆಯನ್ನು ನೀಡಿರುತ್ತಾರೆ. ನಮಗದು ಅರ್ಥವಾಗಿರುವುದಿಲ್ಲ ಅಥವಾ ಅರ್ಥ ಮಾಡಿಕೊಳ್ಳಲಾರದಂಥ ಗಾಢವಾದ ನಂಬಿಕೆಯನ್ನು ಇಟ್ಟುಕೊಂಡಿರುತ್ತೇವೆ.
ಸೂಕ್ಷ್ಮವಾಗಿ ಗಮನಿಸಿ ನೋಡಿ, ಎದುರಿಗೆ ಸಿಕ್ಕರೆ ಗಕ್ಕನೆ ತಪ್ಪಿಸಿಕೊಂಡಿರುತ್ತಾರೆ. ಮಾತಾಡಿದರೆ ಸ್ವಲ್ಪ ಬಿಜಿ ಎಂದಿರುತ್ತಾರೆ. ಕಾಲ್ ಮಾಡಿದರೆ, ಪಿಕ್ ಮಾಡಿರುವುದಿಲ್ಲ. ಒಂದು ರೀತಿಯಲ್ಲಿ ಇದೆಲ್ಲಾ ನಾನು ಇತ್ತೀಚೆಗೆ ಗಮನಿಸಿದಂತೆ ಹಣಕಾಸಿನ ವಿಚಾರಕ್ಕೆ ನನ್ನ ಹತ್ತಿರದವನೊಬ್ಬನ ವರ್ತನೆಯಾಗಿತ್ತು, ಅದು ಸಾಮಾನ್ಯ. ಆದರೆ, ನಾನದಲ್ಲ ಹೇಳುತ್ತಿರುವುದು. ನಮ್ಮಿಂದ ಯಾವುದೇ ದುಡ್ಡಿನ ಡಿಮಾಂಡ್ ಇರುವುದಿಲ್ಲ, ಯಾವತ್ತೂ ಅವರನ್ನು ನೆಗ್ಲೆಕ್ಟ್ ಮಾಡಿರುವುದಿಲ್ಲ. ಬದಲಾಗಿ ಅವರು ಒಂದು ಮಾತು ಹೇಳಿದರೂ ಸಾಕು ನಮ್ಮ ಕೈಲಾಗುವ, ಬುದ್ಧಿಗೆ ತೋಚುವ ಯಾವುದೋ ಒಂದು ಕೆಲಸವನ್ನು ಮಾಡಿಕೊಟ್ಟಿರುತ್ತೇವೆ, ಅವರಿಗೆ ಅಗತ್ಯವಿರುವ ಸಲಹೆ ನೀಡಿರುತ್ತೇವೆ. ಎಲ್ಲದಕ್ಕಿಂತ ಹೆಚ್ಚಾಗಿ ಅವರನ್ನು ತುಂಬಾ ಹಚ್ಚಿಕೊಂಡಿರುತ್ತೇವೆ, ಗೌರವಿಸಿರುತ್ತೇವೆ, ಪ್ರೀತಿಸುತ್ತಿರುತ್ತೇವೆ. “ನಿಂಗ್ ಗೊತ್ತಿಲ್ಲ ಗುರು, ಅವರಿಗೆ ಸಿಕ್ಕಾಪಟ್ಟೆ ಇಗೋ, ನಂಗೆಲ್ಲಾ ಗೊತ್ತು ಅನ್ನೋ ಅಹಂಕಾರ” ಅಂತೆಲ್ಲಾ ಅವರ ಬಗ್ಗೆ ಯಾರೋ ಏನೋ ಹೇಳಿರುತ್ತಾರೆ. ಆದರೆ, ವೈಯುಕ್ತಿಕವಾಗಿ ನಮಗೆ ಅಂಥ ಯಾವ ಅನುಭವವೂ ಆಗಿರುವುದಿಲ್ಲ. ಬದಲಾಗಿ ನಮ್ಮೊಂದಿಗೆ ಬಹಳ ಮುಕ್ತವಾಗಿ ಸರಿಯಿದ್ದರೂ ತಪ್ಪಿದ್ದರೂ ಎಲ್ಲವನ್ನೂ ಅವರು ಹೇಳಿಕೊಂಡು ಹಗುರಾಗಿರುತ್ತಾರೆ.
ಅವರಿಗೆ ದುಡ್ಡಿನ ಅವಶ್ಯಕತೆ ಇರುವುದಿಲ್ಲ. ಆದರೆ, ಮನಸ್ಸಿನ ಒಂದಷ್ಟು ತುಮುಲಗಳನ್ನು ಹೇಳಿಕೊಳ್ಳಬೇಕಿರುತ್ತದೆ. At times loneliness feel ನಿಂದ ಹೊರ ಬರುವ ಸಮಯದಲ್ಲಿ ನಮ್ಮ ಚೂರು ಸಮಯವನ್ನಷ್ಟೇ ಬಯಸಿರುತ್ತಾರೆ. ವ್ಯವಹಾರ ದೃಷ್ಟಿಯಿಂದ ನೋಡಿದರೆ ಲಾಭದ ಮುಖ ನೋಡಬೇಕಾಗುತ್ತದೆ. ನಮಗೆ ಆ ಕ್ಷಣಕ್ಕೆ ನಿರೀಕ್ಷೆಯಿರದ ಅಟ್ಯಾಚ್ ಮೆಂಟ್ ಇದ್ದ ಕಾರಣಕ್ಕೆ ನಾವೂ ಅವರ ಮಾತಿಗೆ ಕಿವಿಯಾಗಿರುತ್ತೇವೆ. ನೋವಿಗೆ ಸ್ಪಂದಿಸಿರುತ್ತೇವೆ. ಏನೋ, ನಮ್ಮ ಯೋಗ್ಯತೆಗೆ ನಾಲ್ಕು ಮಾತು ಸಮಾಧಾನವನ್ನೂ ಹೇಳಿರುತ್ತೇವೆ.
ಒಂದೇ ಒಂದು ಮಾತು ಹೇಳದೇ ಕೊನೆಗೆ, ನಾವಂದುಕೊಂಡಿರದೇ ಇದ್ದ ಮಧ್ಯದ ಸಮಯದಲ್ಲೇ ಆ “ಅವರೇ” ನಮ್ಮನ್ನು ಡಿಚ್ ಮಾಡಿರುತ್ತಾರೆ. ನಮ್ಮ ಸಮಯ, ಸಲಹೆ, ಮಾತು, ಅಟ್ಯಾಚ್ ಮೆಂಟು ಎಲ್ಲವಕ್ಕೂ ನಾವು ಲೆಕ್ಕವೇ ಇಟ್ಟಿರುವುದಿಲ್ಲ. ಆದರೆ, ಅವೆಲ್ಲವನ್ನೂ ಕರಾರುವಕ್ಕಾಗಿ ಉಪಯೋಗ ಪಡೆದವರಿರುತ್ತಾರೆ. ಕೇಳಿ ನೋಡಿ ಅವರಿಂದ ಯಾವ ಸಮಂಜಸ ಉತ್ತರವೂ ಸಿಗುವುದಿಲ್ಲ.
ತೀರ ಒತ್ತಾಯಿಸಿ “ಏನಾಯ್ತು, ಯಾಕೆ ಹೀಗೆ?” ಎಂದು ಕೇಳಿ ನೋಡಿ “ ಅರೆ, ನೀನೇನ್ ದೊಡ್ ಘನಂಧಾರಿ ಉಪ್ಕಾರ ಮಾಡಿರೋದು, ಆ ಟೈಮಲ್ಲಿ ನಿನ್ನನ್ನ ಕೇಳಿದ್ದಕ್ಕೆ ನೀನ್ ಮಾಡಿದಿಯ ! ನಾನು ಬೇರೆಯವರನ್ನೇ ಕೇಳಿದ್ರೆ ಯಾರಾದ್ರೂ ನಂಗೆ ಹೆಲ್ಪ್ ಮಾಡಿರೋರು” ಅಂದುಬಿಡುತ್ತಾರೆ. ಉಪಕಾರ ಮಾಡಿದ್ದೀನಿ ಅನ್ನುವ ಕಾರಣಕ್ಕಲ್ಲ, ಒಡನಾಟ ಚೆನ್ನಾಗಿದ್ದ ಕಾಲಕ್ಕೆ, ಇಬ್ಬರ ಮಧ್ಯೆ ಒಂಟಿ ಅಕ್ಷರಗಳಲ್ಲಿ ಕರೆದುಕೊಳ್ಳುವ ಆಪ್ತತೆ ಇತ್ತೆಂಬ ಕಾರಣಕ್ಕೆ “ ನಾನು ನಿನಗೇನೂ ಅಲ್ವ?” ಅಂದು ನೋಡಿ. “ನನಗೇನಾಗಿದ್ದೆ ನೀನು”? ಎಂದು ಕೇಳಿದರೆ ಆಶ್ಚರ್ಯ ಪಡಬೇಡಿ. ಇದು ಪೂರ್ತಿ ಸಂಭಂಧ, ಆಪ್ತತೆ ಮುರಿದಕೊಳ್ಳುವ ಸ್ಪಷ್ಟ ದಾರಿ. ಹಾಗಂತ ಅದು ಅವರ ಸ್ವಂತ ನಿರ್ಧಾರವೂ ಆಗಿರಬಹುದು ಅಥವಾ ನಮ್ಮ ಬಗ್ಗೆ ಕೇಳಿದ, ಇನ್ಯಾರೋ ಹೇಳಿದ hearsay ಆಗಿರಬಹುದು. ಯಾರಿಗ್ಗೊತ್ತು, ಅತಿಯಾದ ಕಾಳಜಿ, ತೋರಿಸುವುದನ್ನು ಭರಿಸಲಿಕ್ಕಾಗದ ಸಂಧಿಗ್ಧತೆ ಆಗಿರಬಹುದು.
ವಿನಾಕಾರಣ ಒಂದು ಸಂಭಂಧ ಹೀಗೆ ಕಳಚಿಕೊಳ್ಳುತ್ತದೆ. ಹರ್ಟ್ ಆಗಿದೀವಿ ಅನ್ನುವ ಕಾರಣಕ್ಕೆ “ಅವರಿಗೆ ನಮ್ಮಿಂದ ಉಪಯೋಗ ಇರೋವರೆಗೂ ಮಾತ್ರ ನಾವು ಬೇಕಾಗಿತ್ತು” ಅಂತ ನಾವು ತಿಳಿದು ಕೊರಗುತ್ತೇವೆ. ಹೇಳಲಾಗದ್ದೋ ಅಥವಾ ಹೇಳಬಾರದ್ದೋ, ಅವರದಿನ್ನೆಂಥ ಅನಿವಾರ್ಯವಿರುತ್ತದೋ ಯಾರಿಗೆ ಗೊತ್ತು? ಒಂದಂತೂ ಸತ್ಯ ಒಮ್ಮೆ ಬಿದ್ದ ಗಾಡಿಯನ್ನು “ಕಂಡೀಷನ್” ನಲ್ಲಿದೆ ಎಂದು ಮೆಕಾನಿಕ್ ಮಾತ್ರ ರಿಪೇರಿ ನಂತರ ಹೇಳಬಲ್ಲ. ಹಾಗೆ ಆಪ್ತತೆಯನ್ನು ಮುರಿದುಕೊಂಡವರಿಗಿಂತ ಅದನ್ನು ಎದುರಿಸಿ ಮುಕ್ಕಾದ ಮನಸ್ಸು ಮಾತ್ರ ನಿರ್ಧರಿಸಬಲ್ಲದು; ಅಪ್ತತೆ ಉಳಿದಿದೆಯಾ? ಎಂದು.
ಅಂಥ ಮುಕ್ಕಾದ ಪರಿಸ್ಥಿತಿಗಳನ್ನು ನಾನೂ ಎದುರಿಸಿದ್ದೇನೆ. ಮತ್ತದಲ್ಲೆವೂ ದೀಪಾವಳಿಯ ಹಬ್ಬದ ಆಸುಪಾಸಿನಲ್ಲೇ ಆಗಿತ್ತೆಂಬುದು ಆಕಸ್ಮಿಕ. ಮುಗಿಯದ ಆಪ್ತತೆ ನಿರಂತರವಾಗಿರುತ್ತದೆಂದು ನನಗೆ ವರ್ಷಗಳ ಹಿಂದೆ ನವೆಂಬರ್ -22ರ ದಿನ ಭರವಸೆ ನೀಡಿತ್ತು. ಅದೇ ದೀಪಾವಳಿ ದಿನಗಳು ಅದನ್ನು ಹುಸಿಯಾಗಿಸಿದೆ. ಅಪ್ಪ ಎಂದೋ ತಂದ ಪಟಾಕಿಯಿಂದ ಸುಟ್ಟಕೊಂಡ ನನ್ನ ಅಂಗೈದೇನೋ ಗಾಯ ವಾಸಿಯಾಗಿ ವರ್ಷಗಳೇ ಆಗಿವೆ. ಈಗ ಅದೇ ಕೈಯಿಂದ ಜೇನು ಮುಟ್ಟಿ ತುಟಿ ಕಚ್ಚಿಸಿಕೊಂಡಂತೆ ಭಾಸವಾಗುತ್ತದೆ. ಮಾತೇ ಬರುತ್ತಿಲ್ಲ, ದೃಶ್ಯ ಅಸ್ಪಷ್ಟ…
-ಪಿ.ಎಸ್. ಅಮರದೀಪ್.