“ಜ಼ೀರೋ ಬ್ಯಾಲೆನ್ಸ್- ಒಂದು ಚೌಕಟ್ಟಿನೊಳಗೆ ಹುದುಗಿರುವ ವಿಷಾದ ಹಾಗು ಜೀವಗಳ ತೀವ್ರ ಸತ್ಯದ ಶೋಧ”: ಎಂ.ಜವರಾಜ್

ಕವಿತೆ, ಕವನ, ಕಾವ್ಯ, ಪದ್ಯ, ಕಥನ ಕಾವ್ಯ, ನೀಳ್ಗಾವ್ಯ ಹೀಗೆ ಗುರುತಿಸುವ ವಿವಿಧ ರೂಪದ ಬಾಹ್ಯ ಮತ್ತು ಆಂತರಿಕ ಭಾವದ ರಚನೆ ಒಂದೇ ತರಹದ್ದೆನಿಸುವ ಕನ್ನಡದ ಸಾಂಸ್ಕೃತಿಕ ಆಸ್ಮಿತೆ ಹೆಚ್ವಿಸಿದ ಸಾಹಿತ್ಯ ಪ್ರಕಾರವಿದು.

ಕಾಲಗಳುರುತ್ತ ಭಾಷೆಯ ಅಸ್ತಿತ್ವದ ಪ್ರಶ್ನೆ ಎದುರಾಯಿತು. ಜನರ ಭಾವನೆಗಳ ಮೇಲೆ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾಯ್ತು. ಧಾರ್ಮಿಕವಾದ ಜಟಿಲ ಸಮಸ್ಯೆಗಳೂ ಸೃಷ್ಟಿಯಾದವು. ಅಸಮಾನ ಸಾಮಾಜಿಕ ವ್ಯವಸ್ಥೆ ವಿರುದ್ಧ ಸಾಹಿತ್ಯದ ಮನಸ್ಸುಗಳು ಕವಿತೆಗಳನ್ನು ಬರೆದು ರಾಗ ಕಟ್ಟಿ ಕೆಚ್ಚೆದೆಯಲ್ಲಿ ದನಿಯೇರಿಸಿ ಹಾಡಿ ಜನ ಸಮೂಹವನ್ನು ಎಚ್ಚರಿಸಿದವು. ಆಳುವ ಪ್ರಭುತ್ವವನ್ನು ಪ್ರಶ್ನಿಸುವ ಚಳುವಳಿ ಹೋರಾಟಗಳ ಕಾಲದಲ್ಲಿ ಸಾಹಿತ್ಯದೊಳಗೆ ಸೈದ್ಧಾಂತಿಕ ಪಲ್ಲಟಗಳಾಗಿ, ಪಲ್ಲಟಗಳು ವಿಘಟನೆಯಾಗಿ
ನವ್ಯ, ನವೋದಯ , ದಲಿತ, ಬಂಡಾಯ ಸಾಹಿತ್ಯ ಆಯಾ ಕಾಲಕ್ಕೆ ಅನುಸರಣೆಗೆ ಅನುಸಾರವಾಗಿ ತನ್ನದೇ ಆದ ಹೊಸ ಹುಟ್ಟು ಪಡೆದು ರಚಿತವಾಗಿ ತನ್ನ ಅಸ್ತಿತ್ವವನ್ನು ಉಳಿಸಿಕೊಂಡು ಬಂದಿದೆ.

ಎಪ್ಪತ್ತು ಎಂಬತ್ತರ ದಶಕದಲ್ಲಿ ದಲಿತ ಚಳುವಳಿಯಲ್ಲಿ ಪ್ರತಿಧ್ವನಿಸಿದ್ದು ಇದೇ ‘ಕವಿತೆ’ ಎನುವ ‘ಕಾವ್ಯ- ಕವನ’ ರೂಪದ ಸಿದ್ದಲಿಂಗಯ್ಯನವರ ಬಂಡಾಯ ಕಾವ್ಯಶೈಲಿ.
ಅವು, ‘ಯಾರಿಗೆ ಬಂತು ಎಲ್ಲಿಗೆ ಬಂತು ನಲವತ್ತೇಳರ ಸ್ವಾತಂತ್ರ್ಯ’
ಹಾಗೆ
‘ಇಕ್ಕುರ್ಲ ಒದಿರ್ಲ’ ಎಂಬುದೇ ಆಗಿತ್ತು.

ಇದರೊಂದಿಗೆ ನವ್ಯ, ನವ್ಯಕ್ಕು ಮುನ್ನ ಮತ್ತು ನವ್ಯೋತ್ತರದಲ್ಲು ರೊಮ್ಯಾಂಟಿಕ್ ಕಾವ್ಯವೂ ಚರ್ಚಿತ ವಿಷಯವಾಗಿ ಸದ್ದು ಮಾಡಿತು. ಈ ಬಗ್ಗೆ ಜಿ.ಎಸ್.ಶಿವರುದ್ರಪ್ಪ ತಮ್ಮ ‘ಕಾವ್ಯ ದರ್ಶನ’ದಲ್ಲಿ ಸೊಗಸಾಗಿ ವಿವರಿಸಿದ್ದಾರೆ.

ಹಾಗೆ ಒಂದು ಪದ್ಯ, ಕಾವ್ಯ, ಕವಿತೆ, ಕವನ ರಚನೆಗೆ ತನ್ನದೇ ಆದ ಒಂದು ಚೌಕಟ್ಟು, ಶಿಸ್ತು ಆವರಿಸಿಕೊಂಡಿತ್ತು. ಶಿಷ್ಟ ಸಾಹಿತ್ಯ ಅನ್ನುವುದೂ, ಅವು ಬಳಸುವ ನುಡಿಗಟ್ಟಿನ ಹಂಗಿತ್ತು. ಈ ಹಂಗು ಸಾಹಿತ್ಯ ರಚನೆ ಮಾಡುವ ಹಲವರಿಗೆ ತೊಡಕಿನದಾಗಿತ್ತು. ಈ ಕಾರಣ ಕಾವ್ಯ ರಚನೆ ಎನ್ನುವುದು ಇತರರಿಗೆ ಒಗ್ಗುವುದಿಲ್ಲವೇನೋ ‘ಇಂಥವರಿಂದ ಮಾತ್ರವೇ ಕವಿತೆ ರಚನೆ ಸಾಧ್ಯ’ ಎನುವ ಸಾಂಪ್ರದಾಯಿಕವಾದ ಮಿಥ್ ನ್ನು ಒಡೆದು ಕಟ್ಟುವ ಪರಂಪರೆಯೂ ಶುರುವಾಯ್ತು. ಹೀಗೆ ಒಡೆದು ಕಟ್ಟುವಲ್ಲಿ ಹೊಸದೊಂದು ಮಾದರಿಯ ಕಾವ್ಯಶೈಲಿ ತೀವ್ರತರವಾದ ಸಂಚಲನ ಸೃಷ್ಟಿಸಿತು.

ಹೀಗೆ ಕವಿತೆ ಎನ್ನುವುದು ಅನೇಕ ಮಿಥ್ ಗಳನ್ನು ದಾಟಿ ಹೊಸ ಹೊಸ ಶೈಲಿಯ ಕಾವ್ಯ ಸೃಷ್ಟಿಗೆ ಕಾರಣವಾಯ್ತು. ಈ ಹೊಸ ಸೃಷ್ಟಿಯ ತಾಜಾತನದಿಂದಲೇ ವಿವಿಧ ತಲೆಮಾರನ್ನು ಪ್ರಭಾವಿಸಿದ ಕಾವ್ಯ, ಪದ್ಯ, ಕವಿತೆ ಎನುವ ಫೋರ್ಸಬಲ್ ಕವನಗಳ ಬಗ್ಗೆ ಈಚೀಚೆಗೆ ಕೆಲವರಿಗೆ ಅಪಥ್ಯವಾದಂತೆ ಅಪಥ್ಯದ ವಿಸ್ತೃತತೆ ಹೊಸ ಕವಿತೆಗಳ ಹುಟ್ಟಿನ ಮೇಲೆ ಒಂದು ಮಟ್ಟದ ಪರಿಣಾಮ ಉಂಟು ಮಾಡಿದೆ ಎಂದರೆ ಆಶ್ಚರ್ಯ!

ಇದಕ್ಕೆ ಪುಷ್ಠಿ ಒದಗಿಸುವಂತೆ ಸಾಕಷ್ಟು ಪ್ರಕಾಶಕರು ಕವಿತೆಗಳನ್ನು ಹೊರತು ಪಡಿಸಿ ಉಳಿದ ಕತೆ, ಕಾದಂಬರಿ, ವಿಚಾರ ಸಾಹಿತ್ಯ ಪ್ರಕಾರಗಳ ಪ್ರಕಾಶನಕ್ಕೆ ಹೆಚ್ವು ಒತ್ತು ಕೊಟ್ಟಂತಿದೆ. ಪ್ರಕಾಶಕರೇ ಏಕೆ, ನಮಗೆ ಹತ್ತಿರದ ಸಾಕಷ್ಟು ಲೇಖಕರೇ ಕವನಗಳನ್ನು ಯಾರು ಓದ್ತಾರೆ? ಅದು ಯಾರಿಗೆ ಅರ್ಥ ಆಗುತ್ತೆ? ಎಂದು ತಿರಸ್ಕಾರ ಮತ್ತು ನಿರಾಸೆ ದನಿಯಿಂದ ಮಾತಾಡಿದವರೇ ಹೆಚ್ಚು! ಅದನ್ನು ಪ್ರಕಟಿಸಿದರೆ ಲಾಭಕ್ಕಿಂತ ನಷ್ಟವೇ ಹೊರತು ಬೇರೇನಿಲ್ಲ. ಕತೆ ಕಾದಂಬರಿ ಆದ್ರೆ ಓದ್ತಾರೆ. ಜೊತೆಗೆ ಲಾಭವೂ ಇದೆ ಎಂಬಲ್ಲಿಗೆ ಬಂದು ನಿಂತಿದೆ.

ಅಂದರೆ ಇಲ್ಲಿ ಒಂದು ವರ್ಗದ ಓದುಗ ವಲಯ ಮತ್ತು ಪ್ರಕಾಶಕ ವಲಯ ಏಕ ಕಾಲಕ್ಕೆ ಒಂದು ಭಾಷೆಯ ನೆಲದ ಸಾಂಸ್ಕೃತಿಕ ಶ್ರೀಮಂತಿಕೆ ಪ್ರತೀಕವಾಗಿ ಬದುಕಿನ ಮೌಲ್ಯವಾಗಿಸಬೇಕಿದ್ದ ಪದ್ಯ ಪ್ರಕಾರದ ಸಾಹಿತ್ಯವನ್ನು ‘ಓದಲು ಅನರ್ಹ/ಅರ್ಥವಾಗದ್ದು’ ಎಂಬುದರ ಹಿಂದೆ ಬದಲಾದ ಕಾಲಘಟ್ಟದಲ್ಲಿ ಅರ್ತಾಕಿಕ ಬುದ್ದಿ ಮತ್ತು ಮನಸ್ಸು ಪ್ರಸ್ತುತ ವ್ಯಾಪಾರೀಕರಣವಾಗಿರುವುದರ ದ್ಯೂತಕವಾಗಿದೆ!

ಕುವೆಂಪು, ಬೇಂದ್ರೆ, ಪು.ತಿ‌.ನ, ಕೆ.ಎಸ್.ನ, ಜಿ.ಎಸ್.ಎಸ್, ಕೆ.ಎಸ್. ನಿಸಾರ್ ಅಹಮದ್, ತರಹದ ಬಹುತೇಕ ಹಿರಿ ತಲೆಮಾರಿನ ಕವಿಗಳು ತಮ್ಮ ಕವಿತೆಗಳ ಮೂಲಕವೇ ಒಂದಿಡೀ ತಲೆಮಾರನ್ನು ಪ್ರಭಾವಿಸಿದವರು. ಇವತ್ತಿಗೂ ಆ ಕವಿಗಳ ಕವಿತೆಗಳಿಗೆ ಭಾವಪೂರ್ಣ ಸುಶ್ರಾವ್ಯ ಗುಣಗಳಿವೆ. ಪಿ.ಲಂಕೇಶ್ ತರಹದವರು ಪದ್ಯ ಸಾಹಿತ್ಯವನ್ನು ಬಿಟ್ಟು ಕೊಡದೆ ಉತ್ತಮ ಪದ್ಯ ರಚಿಸಿರುವುದಲ್ಲದೆ ಚಾರ್ಲ್ಸ್ ಬೋದಿಲೇರನ ‘ಲೆ ಫ್ಲೂರ್ ದು ಮಾಲ್’ ; ಪಾಪದ ಹೂವುಗಳು – ಎಂಬ ಪಾಶ್ಚಾತ್ಯ ಗದ್ಯ ಮಿಶ್ರಿತ ಕವಿತೆಗಳನ್ನು ಕನ್ನಡಕ್ಕೆ ತಂದಿರುವುದು ಕವಿತೆಗಳಿಗಿದ್ದ ಒಲವನ್ನು ಕಾಣಬಹುದು. ಇದರೊಂದಿಗೆ ಗಜ಼ಲ್ ಸಾಹಿತ್ಯದೆಡೆಗೂ ಒಲವು ಹರಿಸಬಹುದು!

ಇಂಥ ಒಲವಿನ ಪದ್ಯ ಸಾಹಿತ್ಯ ಪ್ರಕಾರವನ್ನು ಅತಾರ್ಕಿಕ ವ್ಯಾಪಾರಿ ಬುದ್ದಿಯ ಮನಸ್ಸುಗಳು ಈ ಕಾಲಘಟ್ಟದಲ್ಲಿ ಓದಲು ಅನರ್ಹ/ ಅರ್ಥವಾಗದ ಪರಿಭಾಷೆಯಲ್ಲಿ ಕೊಂಕು ನುಡಿಯುತ್ತಿರುವುದು!

ಇಂಥ ಸಂದಿಗ್ಧತೆಯಲ್ಲು ಬರೆಯಲು ಓದಲು ಪ್ರತಿಕ್ರಿಯಿಸಲು ಮುಕ್ತತೆ ಒದಗಿಸಿರುವ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಯುವ ಬರಹಗಾರರು ಕಾಣಿಸಿಕೊಂಡಿದ್ದಾರೆ. ಅದರಲ್ಲು ಪದ್ಯಗಳು ಅತಿ ಹೆಚ್ಚು ಪೋಸ್ಟ್ ಗಳಾಗುತ್ತಿರುವುದು. ಪ್ರಿಂಟ್ ಮೀಡಿಯಾಗಳಲ್ಲಿ ಅವಕಾಶ ಸಿಗದವರು ಅಂತರ್ ಜಾಲತಾಣಗಳಲಿ ಕಾವ್ಯ/ ಕವಿತೆ/ ಕವನ/ ಚುಟುಕುಗಳ ಮೂಲಕ ಕಿರಿದರಿಂದ ಹಿರಿದಾದುದ ಕೊಟ್ಟಿದ್ದಾರೆ. ಬಹುಶಃ ಇಷ್ಟು ಪ್ರಮಾಣದ ಸಾಹಿತ್ಯ ಬರಹಗಾರರು ತಮ್ಮ ಕವಿತೆಗಳ ಮೂಲಕ ಪ್ರಸ್ತುತ ಎಲ್ಲ ವಿಚಾರಗಳ ಮೇಲೂ ಪಾರಮ್ಯ ಮೆರೆಯುತ್ತಿರುವುದು ಈ ಪ್ರಕಾರದ ಸಾಹಿತ್ಯದ ಗಟ್ಟಿತನಕ್ಕೆ ಸಾಕ್ಷ್ಯ ಒದಗಿಸಿದೆ.

ಆ ಕಾಲಘಟ್ಟದಲ್ಲಿನ ಪದ್ಯ ಸಾಹಿತ್ಯದ ಝಲಕ್,
“ಬಾ ಹತ್ತರಕೆ/ಪ್ರಶ್ನೋತ್ತರಕೆ/ನಿನ್ನುತ್ತುರಕೆ/
ನಿನ್ನೆತ್ತರಕೆ; /ನನ್ನೆತ್ತರಕೆ” /
ಎನುತೆನುತ, “ಕವಿಯು ಭಾವಜೀವಿ. ಆ ಭಾವವು ನೋವಿನದಾಗಲಿ, ನಲಿವಿನದಾಗಲಿ ಇರಬಹುದು. ಅದು ರಸಪಾಕಕ್ಕೆ ಇಳಿದು ಕವಿಯ ಕವನದಲ್ಲಿ ಸುಂದರವಾದ ಅಭಿವ್ಯಕ್ತಿಯ ರೂಪವನ್ನು ತಾಳುತ್ತದೆ” ಎಂದು ಬೇಂದ್ರೆ ಅವರು ತಮ್ಮ ‘ಬಾ ಹತ್ತರ’ ಕೃತಿಯ ಹಿನ್ನುಡಿಯ ‘ಭಾವ’ ಅಧ್ಯಾಯದಲ್ಲಿ ಬಹು ಸೂಚ್ಯವಾಗಿ ಹೇಳುತ್ತಾರೆ. ಇಲ್ಲಿ ಕವಿ ಮತ್ತು ಕವಿತೆಯ ಹೆಚ್ಚುಗಾರಿಕೆ ಮತ್ತು ಒಂದು ಪದ್ಯ ಸಾಹಿತ್ಯ ಎಷ್ಟು ಭಾವುಕವಾಗಿ ಆಪ್ತವಾಗಿ ಆಸ್ಮಿತೆಯಾಗಿ ಇತ್ತೆಂಬುದನ್ನು ಹೇಳಿರುವುದರಲ್ಲಿ ಅದರ ಶಕ್ತತೆ ಇದೆ.

ಇಂಥ ಶಕ್ತ ಸಾಹಿತ್ಯವನ್ನು- ಅನರ್ಹ/ ಅರ್ಥವಾಗದ/ ವ್ಯಾಪಾರಿ ಮನಸ್ಥಿತಿ ನಡುವೆಯೂ ಇದೆಲ್ಲವನ್ನು ನೂಕಿ ಆಗಾಗ ಸಾಕಷ್ಟು ಕವಿತೆಗಳು ದೀರ್ಘ ಕಾವ್ಯಗಳು ಮುಖ್ಯವಾಹಿನಿಗೆ ಬಂದು ಚಿಲುಮೆಯಂತೆ ಚಿಮ್ಮುತ್ತ ‘ಕವಿತೆಗಳಿಗೆ ಸಾವಿಲ್ಲ ನಾನೂ ಎಲ್ಲರೊಳಗೆ’ ಎನುವಂತೆ ಪ್ರತ್ಯಕ್ಷವಾಗುತ್ತಿವೆ!

ಹೀಗೆ ಪ್ರತ್ಯಕ್ಷವಾದವುಗಳಲ್ಲಿ ಶ್ರುತಿ ಬಿ.ಆರ್. ಅವರ ‘ಜ಼ೀರೊ ಬ್ಯಾಲೆನ್ಸ್’ ಕವಿತೆಗಳು. ಇಲ್ಲಿರುವ ಕವಿತೆಗಳು, ಪ್ರಸ್ತುತ ಎಲ್ಲ ಆಯಾಮಗಳನ್ನು ಒಳಗೊಂಡಿರುವ ‘ಪರಿಪೂರ್ಣ ಸಂಕಲನ’ ಗುಚ್ಛ ಅನ್ನಬಹುದು!

ಶ್ರುತಿ ತಮ್ಮೊಳಗಿನ ನೋವು ನಿರಾಸೆ ಭಾಗಶಃ ಜೀವನೋತ್ಸದೊಳಗಿನ ಬಳಲಿಕೆ ಕನವರಿಕೆ ಬತ್ತಳಿಕೆಯಿಂದ ಹೊಮ್ಮಿ ದುಮ್ಮಿಕ್ಕುವಂತೆ ಭಾಸವಾಗುವ ಇಲ್ಲಿರುವ ಕವಿತೆ ಓದುತ್ತಾ ಹೋದಂತೆ ‘ಅರೆ, ಎಷ್ಟು ಚೆಂದದ (ಬದುಕಿನ ಗಾಢತೆ) ಕವಿತೆ ಕಟ್ಟಿ ಕೊಟ್ಟಿದ್ದಾರೆ’ ಎನಿಸದೆ ಇರದು!

ಹಾಗೆ,
“ಅಜ್ಜ, ಕವಿ ಆಗಾಕ/ಎಷ್ಟ್ ಬರೀಬೇಕು./
ಮಗಳಾ, ತಾಯಿ ಆಗಾಕ/ಎಷ್ಟ್ ಹಡೀಬೇಕು..”
ಎಂಬ ಬೇಂದ್ರೆಯವರ ಸಾಲುಗಳು, ಹೆಣ್ಣು ಮಗಳೊಬ್ಬಳು ಕವಿಯೊಬ್ಬನ ಮುಂದೆ ನಿಂತು ಕೇಳುವ ಪ್ರಶ್ನೆಗೆ ಆ ಕವಿಯ ಸರಳ ಉತ್ತರವೂ! ಹಾಗೇ ಆ ಹೆಣ್ಣು ಮಗಳಿಗೇ ಸರಳವಾಗಿ ಮನವರಿಕೆಯಾಗುವಂಥ ಪ್ರಶ್ನೆಯೂ..!

ಬೇಂದ್ರೆಯವರ ಈ ಸಾಲುಗಳಂತೆ ಸರಳವಾಗಿ ಸಾಮಾನ್ಯ ಓದುಗನಿಗೂ ಅರ್ಥವಾಗಿ ದಕ್ಕಬಲ್ಲ ಬಹುತೇಕ ಕವಿತೆಯ ಸಾಲುಗಳು ಶ್ರುತಿಯವರ ‘ಜ಼ೀರೋ ಬ್ಯಾಲೆನ್ಸ್’ ಕವಿತೆಗಳಲ್ಲಿವೆ.
ಅದು,

“ಮೈ ತುಂಬ ಸೆರಗೊದ್ದಿದ್ದರೂ
ಮೆಸೇಜುಗಳಲ್ಲೇ
ಮೈ ಸವರಿ, ಆನ್ ಲೈನಿನಲ್ಲೇ
ಸ್ಖಲಿಸಿ ಸುಖಿಸುವ
ಇಂದ್ರರ ಕಂಡ ಅಸಹ್ಯದಿಂದ,
ಮತ್ತೆ ಕಲ್ಲಾಗಬೇಕಂತೆ
ಅಹಲ್ಯೆ!

ಇದು ಸರಳವಾಗಿ ಎದೆಯ ಭಾಷೆಗೆ ತಾಕುವಂಥ ಈ ಸಂಕಲನದ ಮೊದಲ ಕವಿತೆ “ಭೇಟಿಯಾಗಿದ್ದರು.. ಆ ಹುಡುಗಿಯರು..” ಕವಿತೆಯ ಸಾಲುಗಳಲ್ಲಿ ಕಂಡು ಬರುವ ಕಾವ್ಯದ ತೀವ್ರತೆ ಶ್ರುತಿಯವರ ಕಾವ್ಯ ಕಟ್ಟುವ ಕಲೆಯ ಜೀವಂತಿಕೆ. ಇವು ಹೆಣ್ಣಿನ ಒಳನೋಟದಲ್ಲಿ ವ್ಯವಸ್ಥೆಯನ್ನು ನೋಡುವ ಪರಿ.

ಈ ಸಂಕಲನದಲ್ಲಿ ಸೂಕ್ಷ್ಮ ಒಳನೋಟವಿರುವ ಜೀವಸೆಲೆ ಉಕ್ಕಿಸುವ ಮೂವ್ವತ್ತೇಳು ಕವಿತೆಗಳಿವೆ. ಅಂದರೆ ಕವಿ ಕಟ್ಟುವ ಕವಿತೆಗಳು ಓದುಗನ ಅಥವಾ ಕೇಳುಗನ ಎದೆಯ ಭಾಷೆಗೆ ಹತ್ತಿರವಿರಬೇಕು. ಹಾಗೆ ಎದೆಯ ಭಾಷೆಗೆ ಹತ್ತಿರವಿರುವ ಕವಿತೆಗಳನ್ನು “ಜ಼ೀರೋ ಬ್ಯಾಲೆನ್ಸ್” ನಲ್ಲಿ ಶ್ರುತಿ ಅವರು ಕಟ್ಟಿರುವ ರೀತಿಯಲ್ಲಿದೆ!

“ಯಾವುದೋ ಎರಡು ಭಿನ್ನ ಅಂಶಗಳ ನಡುವಿನ ಅಸಂತುಲನಗಳು ಸಮತೋಲನಕ್ಕಾಗಿ ನಿರಂತರ ಯತ್ನಗಳು ಕಟ್ಟಿಕೊಡುವ ಕವಿತೆಗಳು, ಎಲ್ಲವೂ ಇದ್ದು ಏನೂ ಇರದಿರುವ ಅನೂಹ್ಯ ಖಾಲಿತನಗಳು, ಯಾವುದನ್ನೂ ಉಳಿಸಿಕೊಳ್ಳಲಾಗದಿದ್ದಾಗಲೂ ಮನಸ್ಸು ಅನುಭವಿಸುವ ನಿರಾಳ ಭಾವ, ಎಲ್ಲವನ್ನೂ ಹೇಳದೆಯೂ ಹೇಳಿ ಹಗುರವಾಗುವ ಕವಿತೆಯ ಚಾಳಿ, ನಾವು ಬೆಳೆದಂತೆಲ್ಲಾ ಏರುಪೇರಾಗುತ್ತಲೇ ಹೋಗುವ ಅಭಿಪ್ರಾಯ, ಆಯ್ಕೆಗಳ ವೈಚಿತ್ರ್ಯಗಳು, imbalance ನಲ್ಲೂ ಇರಬಹುದಾದ ಮಾರ್ದವತೆಗಳೇ (“ವಕ್ರತೆಯಲ್ಲಿ ಕಾವ್ಯ ಸೌಂದರ್ಯ”) ಈ ಸಂಕಲನವನ್ನು ” ಜ಼ೀರೋ ಬ್ಯಾಲೆನ್ಸ್” ಎಂದು ಕರೆಯಲು ಕಾರಣ” ಎಂದು ಈ ಕೃತಿಯ ಶೀರ್ಷಿಕೆಯ ಒಟ್ಟು ತಾರ್ಕಿಕತೆಗೆ ಸಕಾರಣವನ್ನು ಉದಾಹರಣೆ ರೂಪದಲ್ಲಿ ಲೇಖಕಿ ಈ ಕೃತಿಯ ಓದುಗರಿಗೆ ಮನದಟ್ಟು ಮಾಡುತ್ತಾರೆ.

ಲೇಖಕಿಯ ಈ ತಾರ್ಕಿಕ ದಾಖಲನ್ನು ನನ್ನಂಥ ಸಾಮಾನ್ಯ ಓದುಗ ಬ್ಯಾಲೆನ್ಸ್ ಮಾಡುತ್ತ ಪುಟ ತಿರುವಿದರೆ ‘ಜ಼ೀರೋ ಬ್ಯಾಲೆನ್ಸ್’ ಕೃತಿ ಶೀರ್ಷಿಕೆ ಕವಿತೆ,

“ದಾನಿಯಾಗಲು ಮನಸಾರೆ ಹೊರಡುತ್ತೇನೆ”
“ಏನೋ ಖರೀದಿಸಲು ಮುಂದಾಗಿ
ಅದರ ಬೆನ್ನಿಗಂಟಿದ ಬೆಲೆಗೆ ಮುದುಡುತ್ತೇನೆ!”
“ಅಮ್ಮನ ಕನ್ನಡಕದ ಒಡೆದ ಗಾಜು ಕಣ್ಣು ಕುಕ್ಕುತ್ತದೆ”

ಎಂಬ ಮೊದಲ, ನಡುವೆ ಹಾಗು ಅಂತ್ಯದ ಸಾಲುಗಳಲ್ಲಿ ಅಪರೂಪವೆನಿಸುವ ಆಪ್ತ ಚಿತ್ರಣವಿದೆ. ‘ಬೆಟ್ಟದ ಹೂ’ ಸಿನಿಮಾದಲ್ಲಿ ಹುಡುಗ ತನ್ನ ಆಸೆಗೆ ಅಂಕುಶ ಹಾಕಿ ರಾತ್ರಿಯ ಚಳಿಯಲಿ ಅಮ್ಮ ತಂಗಿಯೊಂದಿಗೆ ಇಷ್ಟೇ ಇಷ್ಟು ಅಗಲದ ಪರಿಪೂರ್ಣ ಹರಕು ಹೊದಿಕೆಯಲಿ ಮಂಡಿಸಹಿತ ದೇಹ ಉಂಡುಂಡೆ ಮಾಡಿ ಮಲಗುವ ನೆನಪಾಗಿ ಪುಸ್ತಕದಂಗಡಿಯ ಮುಂದೆ ಹೊಸ ಕಂಬಳಿ ತಬ್ಬಿಡಿದು ಪುಸ್ತಕದಂಗಡಿಯವನ ಮಾತಿಗೂ ಪ್ರತಿಕ್ರಿಯಿಸದೆ ನೋಡುತ್ತ ಮೌನವಾಗಿ ಹಾಗೇ ಹಾದು ಹೋಗುತ್ತ ಹೋಗುವ ಪರದೆ ಮೇಲಿನ ದೃಶ್ಯದಂತೆ ಈ ಕವಿತೆಯಲ್ಲಿ ತೀರ ವಿಷಾದ ಮತ್ತು ಗಾಢವಾದ ಭಾವ ತೀವ್ರತೆ ಇದೆ.

ಲೇಖಕಿಯ ತಾರ್ಕಿಕ ದಾಖಲನ್ನೇ ಇನ್ನೊಂದು ಮಗ್ಗುಲಿಗೆ ತಿರುಗಿಸಿದರೆ, ಇಲ್ಲಿ ಶೂನ್ಯದಿಂದ ಶೂನ್ಯದೆಡೆಗೆ ಅಥವಾ ಶೂನ್ಯದೊಳಗಿನ ಲಯದ ಬದುಕಿನ ರೀತಿ ರಿವಾಜು ಒಂದು ತೆರನ ‘ರೂಪಾಂತರ’ ವಾಗಿ ನಿಲ್ಲುತ್ತದೆ!

ಶ್ರುತಿ, ‘ರೂಪಾಂತರ’ ಕವಿತೆಯಲ್ಲಿ ಕಿರಿದರಿಂದ ಹಿರಿದಾಗುವುದರ ಬಗ್ಗೆ ಒಂದು ಹೊಸ ರೂಪದಲ್ಲಿ ಹೇಳುತ್ತಾ ಹೋಗುತ್ತಾರೆ. ಇಲ್ಲಿ ಇರುವೆ ರೂಪದಲ್ಲಿ ಸಣ್ಣದಾಗಿ ತೀಕ್ಷ್ಣವಾಗಿ ಹರಿಯುತ್ತಾ ಸಾಗುತ್ತದೆ. ಹೀಗೆ ಸಾಗುತ್ತ ಕವಿತೆಯ ರೂಪವು ಬದಲಾಗುತ್ತದೆ. ಅದು ಬಾಹ್ಯ ರೂಪಕಗಳ ಮೂಲಕ ಕಟ್ಟಿಕೊಡುವ ಈ ಥಾಟ್ ಡೈನೋಸಾರ್ ಹಂತ ಮುಟ್ಟುವ ಭಿನ್ನ ರೂಪಕದಲ್ಲಿ ಕವಿತೆ ತನ್ನ ಸ್ಥಿತಿ – ಲಯದ ಸಂಕೇತವನ್ನು ಒಂದು ಗುಚ್ಛವಾಗಿ ಬಿಚ್ಚಿಡುತ್ತದೆ. ಇದು ಹಳೆಯದನ್ನು ಬೆದಕಿ ಹೊಸದರೊಳಗೆ ಬೆಸೆದು ಕಟ್ಟಿಕೊಳ್ಳುವ ಕ್ರಮವಾಗಿದೆ.

“ಬರುವಾಗ ಬೆತ್ತಲೆ ಹೋಗುವಾಗ ಬೆತ್ತಲೆ
ಬಂದು ಹೋಗುವ ನಡುವೇ..”ಎಂಬ ಕನಕದಾಸರ ಕೀರ್ತನೆಯಂತೆ ‘ಜ಼ೀರೋ ಬ್ಯಾಲೆನ್ಸ್’ ಕೃತಿ ಒಟ್ಟು ಆಶಯವನ್ನು ಕಟ್ಟಿಕೊಡುವ ರೀತಿಯೇ ಅಚ್ಚರಿ. ಈ ಅಚ್ಚರಿ ಕವಿತೆಯಿಂದ ಕವಿತೆಗೆ ಎಡತಾಕುತ್ತ ಎ.ಕೆ.ರಾಮಾನುಜನ್ ಅವರ ಕವಿತೆಯೊಂದನ್ನು ಕಣ್ಣ ಮುಂದೆ ತರುವಷ್ಟು ಹತ್ತಿರತ್ತಿರ ನಿಲ್ಲುತ್ತದೆ.
ಅದು ‘ಕುಂಟೋ ಬಿಲ್ಲೆ’ !

ಎ.ಕೆ.ರಾಮಾನುಜನ್ ಅವರ ‘ಕುಂಟೋ ಬಿಲ್ಲೆ’ ಕವಿತೆಯಲ್ಲಿ ಹೆಣ್ಣು ಮಕ್ಕಳ ಬೀದಿ ಬದಿಯ ನೆಲದ ಆಟವೊಂದಿದೆ. ನೆಲದಲ್ಲಿ ರಚಿಸಿದ ಎರಡೂ ಭಾಗದ ಎಂಟು ಮನೆ. ಅಥವಾ ಇನ್ನೊಂದು ಭಿನ್ನ ಬಗೆಯ ಏಳು ಮನೆ. ಜೊತೆಗೆ ಆರು ಮನೆ ಆಟ. ಈ ಬಗೆಯ ಮನೆಯೊಳಗಿನ ಕಾಲಾಟದಲ್ಲಿ ತನ್ನ ಹುಟ್ಟಿನ ನೆಲದ ಸಂಸ್ಕೃತಿ ಅವಳು ಬೆಳೆದು ಬಂದ ಹಾದಿ, ತವರು, ತಾಯಿ ತಂದೆ, ಸೋದರ ಸೋದರಿ, ಬಂಧು ಬಳಗ ಇವೆಲ್ಲವನ್ನು ದಾಟಿ ಕೈ ಹಿಡಿದ ಗಂಡನ ಮನೆಯ ವಾತಾವರಣದಲ್ಲಿ ಅವಳು ಕಂಡುಕೊಳುವ, ತನ್ನದೇ ಬದುಕನ್ನು ಕಟ್ಟಿಕೊಳುವ ಬಗೆಯನ್ನ ಧ್ಯಾನಿಸುವಂತೆ, ಕವಯಿತ್ರಿ ಶ್ರುತಿ ‘ಗುರುತುಗಳು ಉಳಿದಿಲ್ಲ’ ಕವಿತೆಯಲ್ಲಿ,

‘ಊರಿನ ಪುಟ್ಟ ಮಣ್ಣಿನ ಬೀದಿಗಳಲ್ಲಿ, ಅಂಗಳದ ಒದ್ದೆ ಮಣ್ಣಿನಲ್ಲಿ ಕೊರೆದ ಕುಂಟೆಪಿಲ್ಲೆ ಮನೆಗಳು..’ ಎನುತಾ,
‘ಅವರು ಮತ್ತೊಂದು ಮನೆಗೆ ಕಣ್ಣೀರು ಸುರಿಸುತ್ತಾ ನಡೆದಾಗ ಬಿಕ್ಕಿಬಿಕ್ಕಿ ಅತ್ತಿದ್ದವು ಊರುಮನೆ..’ ಯ ಸಾಲುಗಳಲ್ಲಿ ಹೆಣ್ಣಿನ ಧ್ಯಾನಸ್ಥ ಮನಸ್ಥಿತಿಯನ್ನು ಸಾರಿ ಸಾರಿ ಹೇಳುತ್ತಾ ಒಳಗೇ ಧ್ಯೇನಿಸಿದ ಸಾಲುಗಳಿವೆ.

‘ಜಗವೆಲ್ಲ ನಗುತಿರಲಿ ಜಗದಳಲು ನನಗಿರಲಿ
ನಾ ನಕ್ಕು ಜಗವಳಲು ನೋಡಲಹುದೇ..?’ ಎಂದು ಈಶ್ವರ ಸಣಕಲ್ಲರ ಕವಿತೆಯ ಸಾಲುಗಳು ನಗುವಿನಲ್ಲೂ ನಗು, ದುಃಖದೊಳಗೂ ನಗು, ಎಲ್ಲರೊಳಗೊಂದಾಗಿ ಸುಖಾನುಭವ ಕಂಡುಕೊಳುವ ಬಗೆ ‘ಜ಼ೀರೊ ಬ್ಯಾಲೆನ್ಸ್’ ನ
‘ಕೋರಿಕೆ’ ಕವಿತೆಯಲ್ಲಿದೆ.

‘ನನ್ನವರು ನನ್ನ ಕಾಲು ಕತ್ತರಿಸಿದರೂ
ಅವರಾದರೂ ನಡೆಯುತಿರಲಿ’

‘ನನ್ನವರು ನನ್ನ ನೇಣಿಗೇರಿಸಿದರೂ
ಅವರ ಗೋಣು ಮುರಿಯದಂತಿರಲಿ..’

ಎಂಬ ಉದಾತ್ತತೆ ಕವಯಿತ್ರಿ ಶ್ರುತಿಯವರ ಕಾವ್ಯದ ಶ್ರೇಷ್ಠತೆ.

‘ಒಂದು ಜೊತೆ ಪಾದ’ ಓದುವಾಗ ಆಗುವ ಅನುಭವವೇ ಬೇರೆ.

ಬೆನ್ನುಡಿಕಾರ್ತಿ ಎಚ್.ಎಲ್.ಪುಷ್ಪಾ ‘ಪಾದಗಳ ಜೊತೆಯಲ್ಲಿಯೇ ಸಮಾಜದ ವಿವಿಧ ವರ್ಗದ ಶೋಧವೊಂದು ಆಭವಾಗುತ್ತದೆ’ ಹಾಗೆ ‘ಆ ರಕ್ತದ ಬಿಂದು ವಿವಿಧ ವರ್ಗ, ವರ್ಣ, ಲಿಂಗಗಳಲ್ಲಿನ ಶರೀರದಲ್ಲಿ ಅಡಗಿರುವ ಕ್ರಮ, ದುಮದುಮನೆ ಒಳಗೇ ಕುದಿಯುವ ಕ್ರಮವನ್ನೂ ಸಹ ಅರಿತಿರಬೇಕು’ ಎಂದು ಕರಾರುವಾಕ್ಕು ಗುರುತಿಸುವಲ್ಲಿ ಸಫಲತೆಯ ಒಂದು ಸತ್ಯವನ್ನು ಶ್ರುತಿಯವರ ಕಾವ್ಯದಲ್ಲಿ ಗುರುತಿಸುತ್ತಾರೆ.

ಓದುಗ ಮಹಾಶಯ ಶ್ರುತಿಯವರ ಕವಿತ್ವದಲ್ಲಿ,

“ಋತುಚಕ್ರದಲ್ಲಿ ಹಣ್ಣಾಗದೇ
ಮುದುಡಿ ಉದುರಿದ ಡಿಂಬ!
ಮಾಸಗಳು ಉರುಳಿದರೂ
ಫಲಿತವಾಗದ ಅಂಡ..
ಕಾಯದೊಳಗಿನ ಗುಟ್ಟು
ಹಾರ್ಮೋನುಗಳ ಒಳಸಂಚು!”

-ಹೂಡುವ ಮೂಲಕ ಗುರುತಿಸಬಹುದಾಗಿದೆ.

ಇಲ್ಲಿ ಅಂತರಂಗದ ಪ್ರಶ್ನೆಗಳು ಕಲ್ಲೋಲಗೊಂಡು
ಧೂಳೆಬ್ಬಿಸುತ್ತವೆ. ಹಾಗೆ ಅಲ್ಲೆ ‘ಋತು ಸಂಕಟ’ ದಲ್ಲಾದ ಪಲ್ಲಟದಲ್ಲಿ ಅಚಾನಕ್ ನುಗ್ಗಿ
‘ಕ್ಷಮಿಸಿ, ನಾನು ಅಂತವಳಲ್ಲ..’ ಎನುವಲ್ಲಿ ಸಫಲತೆ ಕಾಣುವ ಹಂತದೊಳಗೆ,

“ಕಾಲು ದಾರಿಯಲ್ಲಿ ಕಂಡು,
ಕರೆದೊಯ್ಯೆಂದು ರಚ್ಚೆಹಿಡಿದ
ಕವಿತೆಗೆ ಕರಗದ
ನಿಷ್ಕರುಣಿ ಕವಿ!
ಇನ್ನಾರದೋ ಅಂಗಳದಿ
ಹೂವಾಗಿ ಅಣಕಿಸುವಾಗ
ಕಿಡಿಕಿಡಿಯಾದ!”

“ಎಂದೋ ಮರೆತ ಉಪಮೆಗಳು” ಸಾಕ್ಷ್ಯ ಒದಗಿಸುತ್ತವೆ.

ಕವಯಿತ್ರಿ ಶ್ರುತಿ “ನನ್ನ ಪಾಲಿಗೆ ಕವಿತೆಯೆಂಬುದು ಪ್ರಜ್ಞಾಪೂರ್ವಕವಾಗಿ ರೂಪುಗೊಂಡದ್ದಲ್ಲ, ಅದೊಂದು ತೀರಗಳ ಹಂಗಿರದ ಸ್ವಚ್ಛಂದವಾಗಿ ಹರಿವ ನದಿ. ಒಮ್ಮೊಮ್ಮೆ ಭರಪೂರ ಪ್ರವಾಹ, ಕೆಲವೊಮ್ಮೆ ಅಭಾವ” ಎಂಬುದರೊಂದಿಗೆ,

“ಒಂದು ಹೂವನ್ನು ಹೊಸಕಿ ಹಾಕಿರಬಹುದು,
ಬರಲಿರುವ ವಸಂತವ ತಡೆಯಲಾರರು
ಎನುವೆಯಲ್ಲೋ ಗೆಳೆಯಾ..”
“ವಿತಂಡ ವಾದಗಳ, ಹುರುಳಿಲ್ಲದ ಸಿದ್ಧಾಂತಗಳ,
ಅಸಹನೆ ತುಂಬಿರುವ ರಕ್ಕಸರ ನಡುವೆ
ಸಿಲುಕಿ ನೀ ನಲುಗಬೇಡ
ಎಚ್ಚರದಿಂದಿರು ಗೆಳೆಯಾ..”

ಎಂಬ ‘ಆಶಾವಾದಿ ಗೆಳೆಯನಿಗೆ’ ಕವಿತೆಯು ಗಟ್ಟಿಯಾಗಿ ಗಂಭೀರವಾಗಿ ಧ್ವನಿಸುತ್ತದೆ!

‘ಜ಼ೀರೋ ಬ್ಯಾಲೆನ್ಸ್’ ನ – ಕೆಲ ಕವಿತೆಗಳ ಕೆಲ ಸಾಲುಗಳು – ಕನ್ನಡದ ಹಿರಿಯ ಕವಿಗಳ ಇನ್ಸ್ಪಾರ್ಯ್ ಆದಂತೆ ಭಾಸವಾಗುತ್ತದೆ.

ಇಲ್ಲಿರುವ ‘ಅಕ್ಕನ ಮೆಹೆಂಜದಾರೋ’ ಕೆ.ಎಸ್. ನರಸಿಂಹಸ್ವಾಮಿ ಅವರ ‘ಕೊನೆಯ ನಿಲ್ದಾಣ’ದ ಕವಿತೆಯೊಳಗಿನ ‘ಎಲ್ಲಿದ್ದೀಯೇ ಮೀನಾ..’ /’ನಾ ಇಲ್ಲೆ ಇರುವೆನಮ್ಮಾ..’/ ಧ್ವನಿಸುತ್ತದೆ.

ಕೆ.ಎಸ್.ನ ಅವರ ‘ಕೊನೆಯ ನಿಲ್ದಾಣ’ ದ ಅಮ್ಮ- ಮಗಳ ನಡುವಿನ ಸಂಭಾಷಣಾ ರೂಪದ ಕವಿತೆ ತವರು ಸಂಬಂಧ, ಮಗಳ ಬಾಳುವೆ, ಅತ್ತೆ ಮನೆಯ ಬದುಕು ಬವಣೆಯನ್ನು ಕಟ್ಟಿಕೊಟ್ಟರೆ ಶ್ರುತಿಯವರ ‘ಅಕ್ಕನ ಮೆಹೆಂಜದಾರೋ’ ಕವಿತೆಯಲ್ಲಿ

‘ಮಣ್ಣು ಅಗೆದಾಗ ಸಿಕ್ಕಿತಂತೆ ಕಣೇ ಅಕ್ಕಾ
ಕಂಚಿನ ಮೂರ್ತಿ, ಮಡಿಕೆಗಳು,
ಹೆಂಗಸರ ಒಡವೆಗಳು, ಇನ್ನೂ ಏನೇನೋ..’

‘ಇನ್ಮೇನು ಅಡಿಗೆಯೋ ಮನೆಗೆಲಸವೋ ಮಾಡಿರಬೇಕು,
ಮತ್ತೆ ಮುಟ್ಟು, ಬಸಿರು, ಚುಚ್ಚುಮಾತು
ಅದು ಹೆಂಗಸರಿಗೇನೆ ಆಗಲೂ-ಈಗಲೂ..’

‘ಅದೆಲ್ಲ ಇಲ್ಲಕ್ಕ ಪುಸ್ತಕದಲ್ಲಿ ..’

ಅಕ್ಕತಂಗಿಯರ ನಡುವಿನ ಸಂಭಾಷಣಾ ಶೈಲಿಯ ಈ ಕವಿತೆ ಹೊಸದಲ್ಲ ಅದು ಹಳೇಯದೆ ಎನಿಸುವ ಈಗಾಗಲೇ ಆಗಿ ಹೋಗಿರುವ ಹರಪ್ಪ ಮತ್ತು ಮೆಹಂಜದಾರೋ ಇತಿಹಾಸವನ್ನು ಬೆದಕಿರುವಲ್ಲಿ ಅಲ್ಲಿ ಹೆಣ್ಣಿನದೇ ಆದ ‘ಅಲ್ಲಿ ಅಡಿಗೆಯೋ ಮನೆಗೆಲಸವೋ’ ವಿಚಾರ ಪೂರಿತ ಸಾಲು – ಅವತ್ತೂ ಇವತ್ತೂ ಇರುವ ಪುರುಷ ಪ್ರಧಾನ ವ್ಯವಸ್ಥೆಯ ಜೀವಂತಿಕೆ ಬಗ್ಗೆ ಮೆಲುದನಿಯಲ್ಲಿ ಅಂತರಂಗದಲ್ಲಾಗುವ ಹೊಯ್ದಾಟವನ್ನು ಮುಕ್ಕಳಿಸಿ ಬರುವಂತೆ ಹೇಳಿದ್ದಾರೆ.

ಎಲ್ಲ ಮುಗಿದ ಮೇಲೂ ಇನ್ನೊಂದಿದೆ, ನಿಷ್ಪ್ರಯೋಜಕ ಕವಿತೆ, ಒಂಟಿ ಹಕ್ಕಿಯ ಹಾಡು, ಕಲೆಗಳಿಗೆ ಕರುಣೆ ಇಲ್ಲ, ಸವಿಭಾವಗಳ ಸೋನೆ- ಕವಿತೆಗಳು ಆಳವು, ಅಗಲವು, ವಿಶಾಲವು ಹಾಗು ಸಿದ್ದ ಭೂಮಿಕೆಯಲ್ಲಿ ಚೆಲ್ಲಿ ಚೆಲ್ಲಿ ಚೆಲ್ಲಾಡಿ ಅದ್ದಿ ಮುಳುಗುವ ಬಣ್ಣಗಳೊಳಗೆ ರಂಗು ರಂಗಾಗಿರುವುದರೊಳಗೆ ಕಾಣದ ಒಳಗಿನ ದುಮುಗುಟ್ಟುವ ಭಾವುಕ ಕನಸುಗಳು ಕತ್ತಲಾಕಾಶದಗಲದಲಿ ನಕ್ಷತ್ರಗಳು ಮಿನುಗಿ ಬೆಳಕು ಬೀರುವಂತೆ ಬಿತ್ತರಿಸಿ ಮೈದಾಳಿ ರಚಿತಗೊಂಡಿವೆ!

ಇಷ್ಟಾಗಿ ಒಂದಿಡೀ ಕೃತಿಯನ್ನು ಒಪ್ಪಬೇಕೆ? ಓದುಗನಲ್ಲಿ ಇದು ಹೊಯ್ದಾಟದ ಪ್ರಶ್ನೆ! ಹಾಗೆ ಗಟ್ಟಿಯಾದುದನು ಒಪ್ಪಿ ಉಳಿದುದನು ಬಿಡಬೇಕೆ?ಅಥವಾ ಒಂದಿಡೀ ಕೃತಿಯ ಕೆಲ ದೌರ್ಬಲ್ಯವನ್ನು ಮುಂದು ಮಾಡಿ ಗಟ್ಟಿ ಗುಣಗಳನ್ನು ಮರೆಸಿ ಅಪಮೌಲ್ಯಗೊಳಿಸಬೇಕೆ? ಇದು ವಿಮರ್ಶಕ ವಿಶ್ಲೇಷಕ ವಲಯದಲ್ಲಿ ಸಾಹಿತ್ಯದ ಅವಲೋಕನ ಸಂದರ್ಭದಲ್ಲಿ ಆಗುವ ಅನಾಹುತಗಳು. ಈ ಹಂತದಲ್ಲಿ ಬಹುತೇಕ ಪಂಡಿತೊತ್ತಮ ವಿಮರ್ಶಕ ವಿಶ್ಲೇಷಕರು ತನ್ನ ಸುತ್ತಲಿನ ಆಂಡಂಬೋಲಗಳನ್ನು ಎತ್ತೆತ್ತರಕ್ಕೇರಿಸಿ ‘ಶ್ರೇಷ್ಟ’ ಎನುವ ಮಟ್ಟಿಗೆ ‘ಸಾಹಿತ್ಯದಲ್ಲಿ ರಾಜಕಾರಣ’ ಮಾಡಿರುವ ಅನಾಹುತವೇ ಹೆಚ್ಚಾಗಿ ಸಾಕಷ್ಟು ಶ್ರೇಷ್ಟ ಬರಹಗಳು ನೇಪಥ್ಯಕ್ಕೆ ಸರಿದಿವೆ!

ಉರ್ದು ಗಜ಼ಲ್ ಸಾಹಿತ್ಯದ ಸಂದರ್ಭದಲ್ಲಿ ‘ವಿಮರ್ಶಕನೊಬ್ಬನ ಮೇಲೆ ಯಾವ ಸಾಹಿತ್ಯವೂ ನಿಂತಿಲ್ಲ! ವಿಶ್ಲೇಷಕನ ವಿಶ್ಲೇಷಣೆ ಯಾವ ಹಂತದಲ್ಲೂ ಶ್ರೇಷ್ಟ ಎಂದು ಹೇಳಲಾಗದು! ಇವರು ಓದುಗರಷ್ಟೆ. ಕಾವ್ಯಕರ್ತೃವೇ ಅಂತಿಮ ವಿಮರ್ಶಕನೂ ವಿಶ್ಲೇಷಕನೂ! ಆದರೆ ಈ ಕರ್ತೃ ತನ್ನದನ್ನು ಸರಿಯಾಗಿ ಗ್ರಹಿಸಲಾರ ವಿಶ್ಲೇಷಿಸಲಾರ ವಿಮರ್ಶಿಸಲಾರ! ಹಾಗಾಗಿ ಎರಡನೇ ಆಯಾಮಕ್ಕೆ ಅವನು ಋಣಿಯಾಗಿರಬೇಕಾಗುತ್ತದೆ. ನನ್ನ ಮಾತಿನ ತಾತ್ಪರ್ಯ- ಸರಿಯಾಗಿ ಗುರುತಿಸುವ ದಾರಿ ತೋರಿದರೆ ಕಾವ್ಯದ ಕರ್ತೃ ತನ್ನ ಕಾವ್ಯಕ್ಕೆ ಹೊಸ ಶಕ್ತಿ ನೀಡಬಲ್ಲ ಎಂಬುದೇ ಆಗಿದೆ” ಎಂದು ವಿಮರ್ಶಕ ವಿಶ್ಲೇಷಕ ಕಾವ್ಯಕರ್ತೃವಿನ ಪ್ರಸ್ತುತತೆ ಬಗ್ಗೆ ಮತ್ತು ಸಾಹಿತ್ಯದೊಳಗಿನ ಅಸಂತುಲಗಳ ಬಗ್ಗೆ ಎರಡ್ಮೂರು ದಶಕಗಳ ಹಿಂದೆಯೇ ಸಾಹಿತ್ಯ ವಿಶ್ಲೇಷಕ ಚಿಂತಕ ಡಿ.ಆರ್.ನಾಗರಾಜ್ ವ್ಯಾಖ್ಯಾನಿಸಿದ್ದಾರೆ.

ಈ ವ್ಯಾಖ್ಯಾನದ ಹಿಂದೆ ಅನೇಕ ಆಯಾಮಗಳಿವೆ. ಈ ಆಯಾಮದ ಒಂದು ತುದಿ ಹಿಡಿದು ‘ಜ಼ೀರೋ ಬ್ಯಾಲೆನ್ಸ್’ ನ್ನು ಬ್ಯಾಲೆನ್ಸ್ ಮಾಡುತ್ತ ಇಲ್ಲಿರುವ ‘ಬಾಬ ಸಾಹೇಬರು ನೆಟ್ಟ ಮರ’ ನೋಡಿದರೆ ಹೊಸ ವಿಚಾರವಿಲ್ಲದೆ ಸುಸ್ತು ಹೊಡೆದಿದೆ. ಇದು ಅರ್ಥಶಾಸ್ತ್ರಜ್ಞೆ ಬಾರ್ ಬಾರಾವೂಟನ್ ರ ‘ಹೊಸ ಶೀಸೆಯಲಿ ಹಳೇ ಮದ್ಯ ತುಂಬಿದಂತೆ’ ಎಂಬ ಅರ್ಥ ವ್ಯಾಖ್ಯಾನದಂತೆ ಭಾಸವಾಗುತ್ತದೆ. ಅಂದರೆ ಇಲ್ಲಿ ‘ಕಾವ್ಯಕರ್ತೃವೇ ತನ್ನ ಕಾವ್ಯದ ವಿಶ್ಲೇಷಕ ಆಗುವ ನಿಯಮವೇ ಆಗಿದೆ. ಈ ಆಗುವುದೆಂದರೆ ‘ಕಾವ್ಯದ ಲೋಪವನ್ನು ಗ್ರಹಿಸುವ ಕ್ರಮ’! ಹಾಗೆ, ‘ಮೊದಲು ಮತ್ತು ನಂತರ’ ಕವಿತೆಯೂ ಸಹ. ಈತರಹದ ಅಲ್ಲಿ ಇಲ್ಲಿ ಕವಿತೆಗಳ ಲೋಪದ ಅಂಕುಶ ಹಿಡಿದು ಇಡೀ ಕೃತಿಯ ಗಟ್ಟಿತನದೊಳಗಿನ ಸತ್ವವನ್ನು ಗ್ರಹಿಸಿ ನೋಡಿದರೆ ‘ಜ಼ೀರೋ ಬ್ಯಾಲೆನ್ಸ್’ ಒಂದು ಚೌಕಟ್ಟಿನೊಳಗೆ ಹುದುಗಿರುವ ವಿಷಾದ ಹಾಗು ಜೀವಗಳ ತೀವ್ರ ಸತ್ಯದ ಶೋಧ! ಈ ಶೋಧದ ಒಳಗೆಯು ‘ಅವನ ಬಗ್ಗೆ ಒಂದಿಷ್ಟು’, ‘ಬಳ್ಳಿಯೊಲವು ಕರಗಿತು’, ‘ಕಡಲ ಹುಡುಗನಿಗೊಂದು ಸುನೀತಾ’, ‘ಒಂಟಿ ಹಕ್ಕಿಯ ಹಾಡು’, ‘ಎಲ್ಲ ಮುಗಿದ ಮೇಲೂ ಇನ್ನೊಂದಿದೆ’, ಕವಿತೆಗಳಲ್ಲಿ ಭಾವಗೀತಾತ್ಮಕವಾದ ಲಯವಿದೆ. ಆ ಲಯದ ಲಕ್ಷಣಗಳಲ್ಲಿ ಶ್ರುತಿಯ ಝಲಕ್ ಇದೆ.

ವೈಯಕ್ತಿಕವಾಗಿ ಪರಿಚಯವಿಲ್ಲದ ಶ್ರುತಿ ಬಿ.ಆರ್ ತೆರಿಗೆ ಅಧಿಕಾರಿ. ಜವಾಬ್ದಾರಿಯುತ ಕೆಲಸದ ನಡುವೆಯೂ ತೀರಾ ಸಂಕೀರ್ಣವಾದ ‘ಕೇಂದ್ರದಲ್ಲಿ’ ಸೂಕ್ಷ್ಮ ವಿಷಯ ವಸ್ತು ಹಿಡಿದಿಡುವ ಕಾವ್ಯದ ಬೆನ್ನೇರಿ ಹೊಸ ಮಾದರಿಯ ಕವಿತೆಗಳನ್ನು ಕಟ್ಟಿರುವಲ್ಲಿ ಇವರ ಸೃಜನಶೀಲತೆಗೆ ಸಾಕ್ಷಿ. ಇದರಲ್ಲಿನ ಭಾಷೆ ಪ್ರಾದೇಶಿಕವಾಗಿ ಇಂಥದ್ದೇ ಎಂದು ನೆರಳಚ್ಚು ಮಾಡಲಾಗದು. ಕುಟುಂಬದೊಳಗಿನ ಸಾಹಿತ್ಯಾಸಕ್ತ ಮನಸುಗಳಿಂದ ಪ್ರಭಾವಿತರಾಗಿರುವುದೇ ಇವರ ಪ್ರೇರಕ ಶಕ್ತಿ. ಜ಼ೀರೊ ಬ್ಯಾಲೆನ್ಸ್ ಕವಿತೆಗಳಲ್ಲಿ ಭಾಷೆ ಅಚ್ಚುಕಟ್ಟಾಗಿ ಒಂದು ಹಿಡಿತವನ್ನು ಹೊಂದಿದೆ. “ಒಂದು ಕೃತಿಯ ಭಾಷೆ ಕೃತಿಕಾರನ ಆತ್ಮ. ಆತ್ಮ ಸಂವೇದನೆಯಿಲ್ಲದ ಕೃತಿ ಕೃತಿಯೇ ಅಲ್ಲ” ಎಂದು ಡಿ.ಆರ್.ನಾಗರಾಜ್ ಗುರುತಿಸುತ್ತಾರೆ. ಈ ಆತ್ಮ ಸಂವೇದನೆ ಎನುವ ಭಾಷೆಯು ಮಿಳಿತಗೊಂಡು ‘ಜ಼ೀರೋ ಬ್ಯಾಲೆನ್ಸ್’ ಒಂದು ಜೀವಂತ ಕೃತಿಯಾಗಿದೆ.

ಹಾಗೆ, ಈ ಜೀವಂತಿಕೆಯ ಅರ್ಥವ್ಯಾಪ್ತಿಯು
“ನಾನೇ ಬಲ್ಲಂತೆ ನಾನೊಬ್ಬ ತೀರಾ ಸಾಮಾನ್ಯ ಮನುಷ್ಯ. ಶ್ರೇಷ್ಠ ಕತೆ ಬರೆಯಬೇಕೆಂದು ಹೊರಟು ಎಲ್ಲರೂ ಓದುವಂಥ ಸಾಮಾನ್ಯ ಕೃತಿ ಬರೆದವನು ನಾನು. ‘ಇವತ್ತು ಬದುಕುವುದಕ್ಕಾಗಿ ಬರೆಯುತ್ತೀಯೋ, ನಾಳೆಯಿಂದ ಅಮರನಾಗಲು ಬರೆಯುತ್ತೀಯೋ’ ಎಂದು ಯಾರಾದರೂ ಕೇಳಿದರೆ ನಾನು ‘ಇವತ್ತು ಬದುಕುವುದಕ್ಕಾಗಿ ಬರೀತೇನೆ’ ಎಂದು ಪ್ರಾಮಾಣಿಕವಾಗಿ ಹೇಳುವವನು.
ಆತ್ಮಜ್ಞಾನ ಇಲ್ಲದಿದ್ದರೆ ಆತ್ಮವಂಚನೆ ಶುರುವಾಗುತ್ತೆ” ಎಂದು ಪಿ.ಲಂಕೇಶ್ ಹೇಳಿರುವ ಈ ಮಾತಿನ ಒಳ ಹೂರಣ, ಅಮರದ ಬೆನ್ನೇರಿದ ಲೇಖಕ, ಬದುಕಿನ ಬೆನ್ನೇರಿದ ಲೇಖಕ- ಎರಡೂ ಅಸ್ತಿತ್ವದ ಪ್ರಶ್ನೆಯಾಗಿ ಪ್ರಸ್ತುತ ಶ್ರುತಿ ಬಿ.ಆರ್.ಅವರ ‘ಜ಼ೀರೋ ಬ್ಯಾಲೆನ್ಸ್’ ಕವಿತೆಗಳ ಸಾಹಿತ್ಯದ ವಿಮರ್ಶೆ ವಿಶ್ಲೇಷಣೆ ಸಂದರ್ಭದಲ್ಲಿ ‘ಎಲ್ಲ ಮುಗಿದ ಮೇಲೂ ಇನ್ನೊಂದಿದೆ’ ಕವಿತೆಗೆ ಇಂಬಿತ್ತು ಗ್ರಹಿಸುವುದು ಕೃತಿಕರ್ತೃವಿನದು!

-ಎಂ.ಜವರಾಜ್


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x