ಚುಟುಕ

ಚುಟುಕಗಳು: ವಾಸುಕಿ ರಾಘವನ್

ರಾಯಲ್ ಫ್ಯಾಮಿಲಿಯಲ್ಲಿ ಹುಟ್ಟಿತು ಕಂದಮ್ಮ 

ಇಟ್ಟರು ಮುದ್ದಾದ ಹೆಸರು ಸೀಮಾ ಅಂತ 

ನೆಲೆಸಿದ್ದರೇನಂತೆ ತೆಲಂಗಾಣದಲ್ಲಿ 

ಪ್ರಸಿದ್ಧಿಯಾಗಿದ್ದಾಳೆ ಇಂದು ರಾಯಲ್-ಸೀಮಾ ಅಂತ!

ಗಂಡ ಹೆಂಡತಿ ಇಬ್ಬರೇ ಖುಷಿಯಾಗಿದ್ರೆ 

ನಮ್ಮ ಸಮಾಜಕ್ಕೇನು ಯೂಸು?

ಅದಿಕ್ಕೆ ಮೂಗು ತೂರಿಸ್ಕೊಂಡ್ ಬರ್ತಾರೆ 

ಯಾವಾಗ ಹ್ಯಾಪಿ ನ್ಯೂಸು?

ಅದೆಷ್ಟು ತಾರತಮ್ಯ ಹೆಂಗಸರೆಡೆಗೆ

ನಮ್ಮ ಈ ಸಮಾಜದಲ್ಲಿ

ಅಡುಗೆಯವರೆಲ್ಲ ಕೂಗುತ್ತಿದ್ದರು

"ಸಾರ್ ಗೆ ಅನ್ನ? ಸಾರ್ ಗೆ ಅನ್ನ?"

ಕೇಳುವುದಕೆ ಒಬ್ಬನೂ ಇರಲಿಲ್ಲ

ನಿಮಗೇನು ಬಡಿಸಲಿ ಮೇಡಮ್ ಅಂತ!

ನಾನು ನಾನು ಎನ್ನುವವರಿಗೇನು ಗೊತ್ತು

ಕುಲ್ಚಾ, ಪಾರೋಟಾಗಳ ಕಿಮ್ಮತ್ತು!

ನೆನ್ನೆ ಬಸ್ ಬಂದಿತ್ತು

ಯಾಕೆಂದರೆ ಬಂದಿರಲಿಲ್ಲ.

ಇಂದು ಬಸ್ ಬಂದಿರಲಿಲ್ಲ

ಯಾಕೆಂದರೆ ಬಂದಿತ್ತು!

(ಭಾರತ್ ಬಂದ್ ಸಮಯದಲ್ಲಿ ಬರೆದದ್ದು)

ಜಾಗವಿಲ್ಲ ಒಳಗೆ ಎಂದ 

ನಿನ್ನದೂ ಒಂದು ಮನಸಾ?

ಬನ್ನಿ ಸರ್ ಸೀಟ್ ಖಾಲಿ ಐತೆ 

ಎಂದಿತ್ತು ಬೆಂಮನಸಾ…

ಹೊಸ ವರುಷ ಬಂದೀತು

ಹೊಸತನವ ತಂದೀತು

ಎಂಬ ಭ್ರಮೆಯ ಖೈದಿಗಳು

ಅದೇ ಹಳೆಯ ನಾವುಗಳು

8

ಅದೆಂಥ ಕಾಲ್ಗಳು ಆಕೆಯದು 

ನೋಡುತ್ತಲೇ ನಶೆಯೇರಿತಿಂದು  

ಅದಕ್ಕೇನಾ ಜನ ಹೇಳೋದು

ಕಾಲು ಭಾಗಕ್ಕೆ ಕ್ವಾರ್ಟರ್ ಎಂದು?

ಅಚ್ಚಕನ್ನಡದ ಪಿಚ್ಚರ್ರ್ ಮಾಡಿದ್ದೀವಿ 

ಅಂದ್ರು ನಮ್ಮ ನಿರ್ಮಾಪಕರು ನಕ್ಕು 

ಸಿನಿಮಾದಲ್ಲೈತ್ರೀ ನಮ್ದು ನೇಟಿವಿಟಿ 

ನಮ್ಮದೇ ಸಾಂಗು ಸ್ಟೆಪ್ಪು, ನಮ್ಮದೇ ಲಿರಿಕ್ಕು. 

10 

ಅವ ನಕ್ಕನಾ ಸುಂದರ 

ಚುಟುಕವನ್ನು ಓದಿ 

ಅವನಕ್ಕನ್ ಆ ಸುಂದರ 

ಚುಟುಕವನ್ನು ಓದಿ 

11

ಬಾರ್ ನಲ್ಲಿ  ಕನ್ನಡತಿ ಒಮ್ಮೆಲೇ 

ಒಂದು ಫುಲ್ ಬಾಟ್ಲಿ ಖಾಲಿ ಮಾಡಿದ್ದಳು 

ಎಲ್ಲಾ ಆ ಪಂಜಾಬಿ ಹುಡುಗನಿಂದಲೇ 

ಪ್ರೇರೇಪಿಸಿದ್ದು ಅವನ “ಓಯ್ ಕುಡಿಯೇ” ಗಳು

12 

ಇದೆಲ್ ಹೊರ್ಟ್ರಿ ಕಾರ್ ಅಲ್ಲಿ ಬೆಳ್ಬೆಳಿಗ್ಗೆ 

ಕೇಳಿದೆ ನಾ ಪಕ್ಕದ ಮನೆ ಅಂಕಲ್ ಗೆ 

ಹೇಳಿದ್ರು ಅದೇ ಕಣಯ್ಯಾ, ಫ್ರೀಡಂ ಪಾರ್ಕ್ ಗೆ 

ಪೆಟ್ರೋಲ್ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆಗೆ 

13

ನಮ್ ಕಡಿ ಇಂಜಿನಿಯರಿಂಗ್ ಮಾಡವ 

ನಿಮ್ ಕಡಿ ಆರ್ಟ್ಸ್ ಓದವಂಗ್ ಸಮಾ ಹೌದ್ರೀ 

ಏನ್ ಓದ್ಯಾನ್ ಪಾ ಅಂದ್ರ ನೀವ್ ಎಮ್ಮೆ ಅಂತೀರಿ 

ನಾವಾ ನೋಡಿ ಮತ್ತ ಎಮ್ಮಿ ಅಂತೀವಿ 

14 

ಕಷ್ಟ ಪಟ್ಟರೆ ಫಲ ಉಂಟು 

ಅಂದಿದ್ದರು ನಮ್ಮ ಶಾಲೆ ಮಾಸ್ತರು 

ಯಾರು ಕಷ್ಟ ಪಟ್ಟರೆ ಯಾರಿಗೆ ಫಲ 

ಎಂದು ಹೇಳುವುದನ್ನೇ ಮರೆತಿದ್ದರು 

15 

ದೇವರ ಸನ್ನಿಧಿಯಲ್ಲಿ 

ಎಲ್ಲಾ ಭಕ್ತರೂ ಒಂದೇ 

ಸ್ಪೆಷಲ್ ದರ್ಶನ್ ಟಿಕೆಟ್ 

ಕೊಂಡವರು ಮಾತ್ರ ಮುಂದೆ

16 

ಅದೆಷ್ಟು ಜನರು ದೇವಸ್ಥಾನದ ಒಳಗೆ 

ಏನೇನೋ ಕೋರಿಕೆಗಳು ಫಿರ್ಯಾದುಗಳು 

ಭಕ್ತಿಯಂತೆ ಇದು ಭಗವಂತನ ಮೇಲೆ 

ಬದಲಿಸಬೇಕಂತೆ ಅವನ ಡಿವೈನ್ ಪ್ಲಾನ್-ಗಳು 

17

ಸಾವಕಾಶದಿ ಕುಳಿತು 

ಭೋಜನವ ಮಾಡಲು 

ಜೀವನವೇ ಸುಖಸಾಗರ 

ಸಮಯದ ಅಭಾವವಿರಲು  

ನಿಂತು ಗಬಗಬ ತಿಂದರೆ 

ಅದೇ ಶಾಂತಿಸಾಗರ 

18 

ಕುಟುಂಬದ್ದೇ ಕಾಳಜಿ ಅವಳಿಗೆ 

ಹಣದ ಮೋಹವೇನೂ ಇಲ್ಲ 

ಆದರೂ ಅವಳ ಗಂಡನ ಪಾಲಿಗೆ 

“ಆಕೀ ಮನಿ ಮೈಂಡೆಡ್ ಹೌದಲ್ಲ”

19 

ನಮ್ಮ ಸೋಪ್ ಬಳಸಿ ನೋಡಿರಿ 

ಹತ್ತು ವರ್ಷ ಚಿಕ್ಕವರಂತೆ ಕಾಣಿರಿ 

ಎಂದಿತ್ತು ಒಂದು ಜಾಹೀರಾತು 

ಹಚ್ಚಿಕೊಂಡು ನೋಡಿದ 

ಹತ್ತು ವರ್ಷದ ಹುಡುಗಿ 

ಆಗಿದ್ದಾಳೀಗ ನವಜಾತ ಶಿಶು!

20

ನಮ್ಮ ದೇಶದಲ್ಲೂ ಇದ್ದಾರೆ

ರೆಡ್ ಹೆಡ್ ಗಳು, ಪ್ಲ್ಯಾಟಿನಮ್ ಬ್ಲಾಂಡ್ ಗಳು

ನೆರೆಕೂದಲಿಗೆ ಮೆಹೆಂದಿ ಹಚ್ಚೋ ಅಜ್ಜಿಯರು

ಬಿಳಿ ಕೂದಲ ಮೇಲೆ ಬೇಸರವಿರದ ಆಂಟಿಯರು!

21 

ವಿದೇಶಿ ಸಾಮಾನುಗಳನೆಲ್ಲಾ ತ್ಯಜಿಸಿ 

ಕೇವಲ ಸ್ವದೇಶಿ ಉತ್ಪನ್ನಗಳನ್ನೇ ಬಳಸಿ 

ಈ ವಿಚಾರ ಜನ ಹಂಚಿಕೊಂಡಿದ್ದಾದರೂ ಎಲ್ಲಿ?

ಜೀಮೇಲ್, ಆರ್ಕುಟ್ ಹಾಗು ಫೇಸ್ಬುಕ್ ಅಲ್ಲಿ 

22

ಹೆಂಡತಿ ಎದುರಲ್ಲೇ

ಮುತ್ತಿಟ್ಟೆ ಅವಳಿಗೆ

ಆದರೂ ಬರಲಿಲ್ಲ

ಸಿಡಿಲು ಗುಡುಗುಗಳು.

ದಡದಡನೆ ಬಂದಳು

ಓಡುತ್ತಾ ಹೆಂಡತಿ

ಎತ್ತಿ ಮುದ್ದಾಡಲು

ಅಮ್ಮ ಎಂದಂದವಳ. 

23 

ಕೊಂಡುಕೊಂಡಿದ್ದರೇನಂತೆ 

ರಾಜಾಜಿನಗರದಿ ದುಬಾರಿ ಫ್ಲಾಟು 

ನರಳುತ್ತಿವೆ ಬಾಲ್ಕನಿಯಲ್ಲಿ ಒಳಉಡುಪುಗಳು 

ದಿನವೂ ನೋಡುತ್ತಾ ಹರಿಶ್ಚಂದ್ರ ಘಾಟು

24 

ಮಾತು ಬೆಳ್ಳಿ ಅಂತೆ 

ಮೌನ ಬಂಗಾರವಂತೆ 

ದುಬಾರಿತನ ಬೇಡವೆಂದ ಜಗತ್ತು 

ಒಂದೇ ಸಮ ಗಿಜಿಗಿಜಿಗುಡುತ್ತಿತ್ತು 

25

ದೂರ ಹೀಗಿಹುದೆಂದು 

ಈಗ ಅರಿತಿಹೆನು 

ಎದುರು ಕುಳಿತಿರೆ ಏನು 

ಮನಸು ಮುರಿದಿರಲು

*******

ವಾಸುಕಿ ರಾಘವನ್: ಮೂಲತಃ ಮೈಸೂರಿನವರಾದ ವಾಸುಕಿಯವರಿಗೆ ಸಿನಿಮಾವೆಂದರೆ ಪ್ರಾಣ. ಪಂಜುವಿನಲ್ಲಿ ಒಂದು ವರ್ಷ ಸಿನಿಮಾಗಳ ಕುರಿತು ಅಂಕಣ ಬರಹ ಬರೆದಿರುವ ವಾಸುಕಿಯವರು ಬೆಂಗಳೂರಿನಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಳೆದ ವರ್ಷ ನಡೆದ ಪಂಜುವಿನ ಚುಟುಕ ಸ್ಪರ್ಧೆಗಾಗಿ ಅವರು ಚುಟುಕಗಳನ್ನು ಮೊದಲ ಬಾರಿಗೆ ಹೀಗೆ ಬರೆಯಲು ಪ್ರಯತ್ನಿಸಿದ್ದರು. 

ಕನ್ನಡದ ಬರಹಗಳನ್ನು ಹಂಚಿ ಹರಡಿ

7 thoughts on “ಚುಟುಕಗಳು: ವಾಸುಕಿ ರಾಘವನ್

  1. moda moadale higaare amele namgatiyenu thumba sundravagi nija jeevanada

    ghatanegallunnu tegede barididdare uttamavagive prayatna chennagide  

  2. ಉತ್ತಮ, ಓದಿಸಿ ಖುಷಿಕೊಡುತ್ವೆ…

Leave a Reply

Your email address will not be published. Required fields are marked *