ಚೈತ್ರದ ಯುಗಾದಿ ಸಂಭ್ರಮ: ಸುಮನ್ ದೇಸಾಯಿ


ಮಾಸಗಳೊಳಗ ಮೊದಲನೆ ಮಾಸ ಚೈತ್ರ ಮಾಸ, ಅದರೊಳಗ ಬರೊ ಸಂವತ್ಸರದ ಮೊದಲನೆ ಹಬ್ಬ ಯುಗಾದಿ. ಯುಗಾದಿ ಅಂದಕೂಡಲೆ ನೆನಪಾಗೊದು, ಬೇವು ಬೆಲ್ಲ. ಈ ಬೇವು ಬೆಲ್ಲದ ಸಂಪ್ರದಾಯ ಯಾವಾಗ ಶುರು ಆತೊ ಗೊತ್ತಿಲ್ಲಾ, ಆದ್ರ ಭಾಳ ಅರ್ಥಪೂರ್ಣ ಪದ್ಧತಿ ಅದ. ಜೀವನದಾಗ ಬರೋ ಸುಖ-ದುಖಃ ಸಮಾನಾಗಿ ತಗೊಂಡು, ಧೈರ್ಯಾದಿಂದ ಎನಬಂದ್ರುನು ಎದರಸಬೇಕು ಅನ್ನೊ ಸಂದೇಶವನ್ನ ಸಾರತದ. 

ಚೈತ್ರ ಮಾಸ ಅಂದ್ರ ಫಕ್ಕನ ನೆನಪಾಗೊದು ಹಸಿರು, ಯಾಕಂದ್ರ ಚಳಿಗಾಲದಾಗ ಬರಡಾಗಿ ನಿಂತ್ತಿದ್ದ ಗಿಡಾ, ಮರಾ, ಬಳ್ಳಿಗೊಳು ಚಿಗುರೊ ಕಾಲಾ. ನಂಗಿನ್ನು ನೆನಪದ ನಾವು ಸಣ್ಣವರಿದ್ದಾಗ ಹಬ್ಬದ ದಿನಾ ಮುಂಝಾನೆ ಎದ್ದಕೂಡಲೆ ಗಿಡಾ ಹತ್ತಿ ರಾಶಿ ರಾಶಿ ಮಾವಿನ ತೊಳಲು, ಬೇವಿನ ತೊಪ್ಪಲಾ, ಬೇವಿನ ಹೂವು, ಹರಕೊಂಡ ಬರತಿದ್ವಿ. ನೀರ ಕಾಸೊ ಹಂಡೆ ಒಳಗ ಬೇವಿನ ಎಲಿ ಹಾಕಿ ನೀರ ಕಾಯಸಿ ಎಣ್ಣಿ ಶಿಗಿಕಾಯಿ ಹಚ್ಚಿ ಎರಕೊಂಡ ಹೊಸಾ ಅರಬಿ ಹಾಕ್ಕೊಂಡ ಗುಡಿಗೆ ಹೊಗಿಬರತಿದ್ವಿ. ಆದ್ರ ಮನ್ಯಾಗ ಪೂಜಾ ಆದ ಮ್ಯಾಲೆ ಬೇವು-ಬೆಲ್ಲದ ಪ್ರಸಾದ ಕೊಡೊಮುಂದ ಮಾತ್ರ ಬೆಲ್ಲಾ ನ ಭಾಳ ಕೊಡ್ರಿ ಅಂತಿದ್ವಿ ಅದಕ್ಕ ನಮ್ಮ ಅಮ್ಮ ಅಂತಿದ್ಲು, " ಬೇವು ಜಾಸ್ತಿ ತಿಂದ್ರ, ದೇವರು ಬೆಲ್ಲದಂಥಾ ಸಿಹಿ ಬದಕನ್ನ ಕೊಡತಾನ ಅಂತ ಹೇಳಿ ಬೇವು-ಬೇಲ್ಲಾನ ಸರಿಸಮಾ ತಿನಸ್ತಿದ್ಲು. ನಮ್ಮ ಅಮ್ಮ ಹೆಳ್ತಿದ್ಲು ಹಬ್ಬದ ಮರುದಿವಸ ವರ್ಷದ ತೊಡಕು,  ಅಂದ್ರ ಅವತ್ತ ಎನ ಮಾಡತೆವಿ ಅದನ್ನ ವರ್ಷ ಪೂರ್ತಿ ಮಾಡತೇವಿ ಅದಕ್ಕ, ಇವತ್ತ ಯಾವ ಕೆಟ್ಟ ಕೆಲಸಾ ಮಾಡಬ್ಯಾಡ್ರಿ, ಕೆಟ್ಟ ಕೆಟ್ಟ ಮಾತಾಡಬ್ಯಾಡ್ರಿ, ಅಳಬ್ಯಾಡ್ರಿ, ಜಗಳಾಡಬ್ಯಾಡ್ರಿ, ಇವತ್ತ ಎನ ಮಾಡ್ತಿರಿ ಅದನ್ನ ವರ್ಷ ಪೂರ್ತಿ ಮಾಡ್ತಿರಿ ಅಂತ ಹೇಳ್ತಿದ್ಲು. ನಾವಂತು ಅವತ್ತ ಮುದ್ದಾಮ ಭಾಳ ಭಾಳಷ್ಟ ಐಸ್ ಕ್ರೀಮ್ ಚಾಕೊಲೇಟ್ ತಗೊಂಡ ತಿನ್ನತಿದ್ವಿ. ನಮ್ಮ ಬಾಜು ಮನಿ ತುಳಸಕ್ಕ ಮಾಮಿ ಅಂತು ಒಂದ ಸ್ವಲ್ಪರ ಬಂಗಾರ ತಗೊತಿದ್ರು. ಅಂದ್ರ ವರ್ಷಪೂರ್ತಿ ಬಂಗಾರ ಖರಿದಿಯೋಗ ಸಿಗತದಂತ ಅವರ ಲೆಕ್ಕಾ.  

ನಮ್ಮ ಉತ್ತರಕರ್ನಾಟಕದ ಹಳ್ಳಿಗ್ಳೊಳಗ ಯುಗಾದಿ ಹಬ್ಬದ ತಯಾರಿ ಭಾಳ ಜೋರ ಇರತದ. ಮನಿಯೆಲ್ಲಾ ಸಾರಿಸಿ, ಮನಿ ಮುಂದ ಸುಣ್ಣ ಮತ್ತ ಕ್ಯಾಂವಿ ಮಣ್ಣಿಲೆ ಪಟ್ಟಿ ಬರದು, ಅಂಗಳ ತುಂಬ ರಂಗೋಲಿ ಚಿತ್ರಾ ಬಿಡಿಸಿ, ಮಾವಿನ್ ತೊಳಲು ಮತ್ತ ಬೇವಿನ್ ಟೊಂಗಿ, ನಡು ನಡುವ ಬಣ್ಣದ ಶಾವಂತಿಗಿ ಹೂವು ಹಾಕಿ ತೋರಣಾ ಮಾಡಿ ತಲಬಾಗಿಲಿಗೆ ಕಟ್ಟಿರತಾರ. ದನದ ಕೊಟ್ಟಿಗಿನು ಸಾರಿಸಿ, ಅದನ್ನು ಮಾವು-ಬೇವಿನತೋರಣದಿಂದ ಅಲಂಕಾರ ಮಾಡಿರತಾರ. ಆವತ್ತ ಊರಗ್ರಾಮ ದೇವಿಗೆ ವಿಶೇಷ ಪೂಜಾ ಮಾಡಿ ಎಲ್ಲಾರು ಗುಡಿಗೆ ಹೊಳಿಗಿ ನೈವೇದ್ಯಾ ಒಯ್ದುಕೊಟ್ಟು, ಕಾಯಿ ಒಡಿಸ್ಕೊಂಡ ಬರತಾರ. ಹಬ್ಬಕ್ಕ ತಾವ ಮಾಡಿದ ಸಿಹಿಅಡಗಿನ ಇಡಿ ಓಣಿ ಮಂದಿಗೆಲ್ಲ ಹಂಚಿ ತಾವು ಊಟಾ ಮಾಡತಾರ. ಹಬ್ಬದ ದಿನಾ ಹಿರಿಯರಿಗೆಲ್ಲ ನಮಸ್ಕಾರ ಮಾಡಿದಾಗ ಭಾಳ ಮಜಾ ಮಜಾ ಆಶಿರ್ವಾದ ಸಿಗತಾವ. ಸಣ್ಣವರಿದ್ರ ಓದಿ ಶಾಣ್ಯಾ ಆಗ್ರಿ ಅಂತ, ಕನ್ಯಾಗೊಳಿದ್ರ ಮುಂದಿನ ಯುಗಾದಿ ಅನ್ನೊದ್ರಾಗ ಹೋಳಿಗಿ ಎಬ್ಬಸವಾ ಮತ್ತ ಅಂತ, ಮದುವ್ಯಾದವರಿದ್ರ ವರ್ಷತುಂಬೊದ್ರಾಗ ಗಂಡಸ ಮಗನ ತಾಯಿ ಆಗವಾ ಅಂತ ಆಶಿರ್ವಾದಾ ಮಾಡ್ತಾರ. ಒಂಥರಾ ಹಬ್ಬದ ದಿವಸ ಭಾಳ ಛಂದ ವಾತಾವರಣ ಇರತದ. ಊರಾಗ ಎಲ್ಲಾರು ಕೂಡೆ ಹಬ್ಬ ಮಾಡೊದ್ರಾಗ ಇರೊ ಮಜಾನ ಬ್ಯಾರೆ ಇರತದ.  ಯುಗಾದಿ ದಿವಸ ಒಂದು ವಿಷೇಶ ರೀತಿ ಪಾನಕಾ ಮಾಡತಾರ. ಸಕ್ಕರಿ ನೀರಿಗೆ ಬೇವಿನ ಹೂವು, ಮಾವಿನಕಾಯಿ ರಸಾ, ಬೆಲ್ಲಾ, ಮತ್ತ ಯಾಲಕ್ಕಿ, ಗೋಡಂಬಿ, ಪಿಸ್ತಾ, ದ್ರಾಕ್ಷಿ, ಬದಾಮಿ, ಉತ್ತತ್ತಿ, ಒಣಖೊಬ್ಬರಿಗಳ ಪುಡಿ ಮಿಶ್ರಣ, ಮತ್ತ ಕಲ್ಲಂಗಡಿ, ಸೇಬು, ಚಿಕ್ಕು, ಬಾಳೆ ಹಣ್ಣುಗಳ ಮಿಶ್ರಣ ಎಲ್ಲಾ ಸೇರಿಸಿ ಮಾಡಿದ ಪಾನಕಾ ಒಮ್ಮೆ ಕುಡದರ ಮತ್ತ ಮತ್ತ ಕುಡಿಯೊ ಹಂಗ ಇರತದ. ಎಲ್ಲಾರ ಮನ್ಯಾಗು ತಪ್ಪೇಲಿ ತುಂಬ ಪಾನಕಾ ಮಾಡಿರತಾರ. ಅವತ್ತ ಯಾರ ಮನಿಗೆ ಬಂದ್ರುನು ಲೋಟಾದ ತುಂಬ ಕುಡಿಲಿಕ್ಕೆ ಕೊಟ್ಟು ಉಪಚಾರ ಮಾಡತಾರ.       
  
ಹೊಸದಾಗಿ ಮದುವ್ಯಾದ ಮದುಮಕ್ಕಳಿಗಂತು ಯುಗಾದಿ ಹಬ್ಬ ಒಂಥರಾ ಸಂಭ್ರಮದ ಹಬ್ಬಾ. ಯಾಕಂದ್ರ ಮಗಳು ಅಳಿಯಾನ ಹಬ್ಬಕ್ಕ ಮನಿಗೆ ಕರಸಿ, ಇಬ್ಬರನು ಕುಡಿಸಿ ಆರತಿ ಮಾಡಿ, ಆಹೇರಿ(ಉಡುಗೊರೆ) ಕೊಡತಾರ. ಅವತ್ತ ಭರ್ಜರಿ ಹೊಳಿಗಿ ಅಡಗಿ ಮಾಡಿ ಅಳಿಯಾಗ ಅತೀ ಅಕ್ಕರತಿಯಿಂದ ಸತ್ಕಾರ ಮಾಡತಾರ.

ಹಿಂಗ ಯುಗಾದಿ ಅಂದಕೂಡಲೆ ಇನ್ನೊಂದ ಪ್ರಸಂಗ ನೆನಪಿಗೆ ಬರತದ. ನಮ್ಮ ಮಾವಶಿ ಮಗ ಅನಂತಣ್ಣನ ಮದುವ್ಯಾದ ಹೊಸದಾಗೆ ನಮ್ಮ ವೈನಿ ತವರಮನಿಗೆ ಹಬ್ಬಕ್ಕಂತ ಹೊದಾಗ ನಮ್ಮ ವೈನಿ ತಂಗ್ಯಂದ್ರು ಮಸ್ತ ಕಾಡಿ ಕಾಡಿ ಕೈಬಿಟ್ಟಿದ್ರು.  ನಮ್ಮ ಅಣ್ಣಗ ಕರಚಿಕಾಯಿ ಅಂದ್ರ ಭಾಳ ಪ್ರೀತಿ. ಕರಚಿಕಾಯಿ ಒಳಗ ಖೊಬ್ರಿ ಬೆಲ್ಲಾ ಹಾಕೊ ಬದಲಿ ಬೇವಿನ  ಹೂವ ಹಾಕಿ ಕರಚಿಕಾಯಿ ಮಾಡಿ ನಮ್ಮ ಅನಂತಣ್ಣಗ ತಿನಿಸಿದ್ರು. ಮಾವಿನ ಕಾಯಿ ಪಾನಕಾ ಅಂತ ಹೇಳಿ ಬೇವಿನ ರಸಾ ಹಾಕಿ ಪಾನಕಾ ಮಾಡಿ ಕುಡಿಸಿ ಗೋಳಾಡಿಸಿ ಕೈಬಿಟ್ಟಿದ್ರು. ನಮ್ಮ ವೈನಿ ಅಮ್ಮಗ ಮಕ್ಕಳ ಮಾಡೊ ಮಂಗ್ಯಾನಾಟಾ ನೋಡಿ ಎಲ್ಲೆ ಅಳಿಯಂದ್ರು ಸಿಟ್ಟಿಗೇಳ್ತಾರೊ ಅಂತ ಹೇದರಿಕ್ಯಾಗಿ, ಸಾಕ ಸುಮ್ನಿರ್ರಿ ಅಂತ ಬಯ್ದು ಕೂಡಿಸಿದ್ರು. ಆದ್ರು ನಮ್ಮ ಅನಂತಣ್ಣನ ನಾದನಿಗೋಳ ಭಾಳ ಚಾಲು ಇದ್ರು, ಊಟ ಆದಮ್ಯಾಲೆ ಎಲಿ ಅಡಕಿ ಒಳಗ ಬೇವಿನ್ ಹೂವು, ಎಲಿ ಹಾಕಿ. ವೀಡಾ ಮಾಡಿ ತಿನ್ನಿಸೇಬಿಟ್ಟಿದ್ರು. ಅದಕ್ಕ ನಮ್ಮ ಅಣ್ಣ " ಬರ್ರಿಲೇ ಹುಡ್ಗ್ಯಾರ ನಮ್ಮೂರಿಗೆ ಬಂದಾಗ ನಿಮಗೆಲ್ಲ ಹಾಗಲಕಾಯಿ ಅಡಗಿ ಮಾಡಿಸಿ ತಿನಿಸ್ಲಿಲ್ಲಾ ಅಂದ್ರ, ನಾ ನಿಮ್ಮ ಮಾಮಾನ ಅಲ್ಲಾ" ಅಂತ ಪ್ರೀತಿಲೇ ಧಮಕಿ ಕೊಟ್ಟಿದ್ದಾ.  ಆದ್ರ ಅಣ್ಣಾ ವೈನಿ ಹಬ್ಬಾ ಮುಗಿಸಿಕೊಂಡ ವಾಪಸ ಊರಿಗೆ ಬರೋಮುಂದ ಡಬ್ಬಿ ತುಂಬ ಸಿಹಿ ಖೊಬ್ಬರಿ ವಡಿ ಮಾಡಿ ನಮ್ಮಣ್ಣ ಕೈಯಾಗ ಕೊಟ್ಟು, ನಮಸ್ಕಾರ ಮಾಡಿ, ನಮ್ಮಿಂದ ನಿಮ್ಮ ಮನಸಿಗೆ ನೋವಾಗಿದ್ರ ಕ್ಷಮಸರಿ ಮಾಮಾ, ಅಂತ ಹೇಳಿ ಯುಗಾದಿ ಹಬ್ಬದ ಸುಭಾಶಯಗಳನ್ನ ಹೇಳಿದಾಗ, ನಮ್ಮ ಅಣ್ಣಗ ಅವರು ತಿನಿಸಿದ್ದ ಬೇವಿನ ಕಹಿಯೆಲ್ಲಾ ಮರತುಹೋಗಿತ್ತು. ನಮ್ಮ ವೈನಿ ಈಗಾದ್ರು ಆ ಪ್ರಸಂಗನ ನೆನಿಸ್ಕೊಂಡು ನಮ್ಮಣ್ಣನ ಕಾಡಸತಿರತಾಳ.  
 
ಹಿಂಗ ಒಂದು ಸಿಹಿ ನೆನಪು ನನ್ನ ಜೀವನದಾಗು ಅದ. ಅದೇನಂದ್ರ, ನನ್ನ ಮದಿವ್ಯಾದ ಹೊಸದಾಗೆ, ನಮ್ಮ ಅತ್ತಿ ಮನ್ಯಾಗ ಎಲ್ಲಾರು ನನ್ನ ಭಾಳ ಸ್ನೆಹದಿಂದ, ಪ್ರೀತಿಯಿಂದ ಮಾತಡಸತಿದ್ರು. ಆದ್ರ ನಮ್ಮ ಎರಡನೆ ಮೈದುನ ಮಾತ್ರ ಭಾಳ ಅಂದ್ರ ಭಾಳ ಸಂಕೊಚದ ಸ್ವಭಾವದವರಿದ್ರು. ನನ್ನ ಮಾತಾಡಸೊದ ದೂರಆತು ನಾ ಇದ್ದಲ್ಲೆ ಇರತಿದ್ದಿಲ್ಲಾ ಸುದ್ಧಾ.  ನಂಗ ವಿಚಿತ್ರ ಅನಿಸ್ತಿತ್ತು, ನಾ ನಮ್ಮ ಅತ್ತಿಯವರನ್ನ ಕೇಳ್ತಿದ್ದೆ ಹಿಂಗ್ಯಾಕ ರಿ ಇವರು ಅಂತ. ಅದಕ್ಕ ಅವರು ಆಂವ ಹಂಗ ಇದ್ದಾನವಾ ಸ್ವಲ್ಪ ನಾಚಿಕಿ ಸ್ವಭಾವ್ ಅದ ಅಂದಿದ್ರು. ನನ್ನ ಮದಿವ್ಯಾದ ಮ್ಯಾಲೆ ಮದಲನೆ ಯುಗಾದಿ ಹಬ್ಬ ಬಂದಿತ್ತು, ಅವತ್ತ ಪೂಜಿ, ನೈವೇದ್ಯ ಎಲ್ಲಾ ಮುಗಿಸಿ, ಎಲ್ಲಾರದು ಊಟಾ ಆದಮ್ಯಾಲೆ ನಾ ಅಡಗಿ ಮನ್ಯಾಗ ಇದ್ದಾಗ ನಮ ಎರಡನೆ ಮೈದುನ ಬಂದು "ವೈನಿ ರಿ,  ಹ್ಯಾಪಿ ಯುಗಾದಿ ರಿ, ಅಡಗಿ ಎಲ್ಲ ಭಾಳ ಛೊಲೊ ಆಗೇದ್ ರಿ. " ಅಂತ್ ಹೇಳಿದ್ರು.  ನಂಗಂತು ಭಾಳ ಖುಷಿ ಆತು. ತಿರಗಿ ನಾ ಥ್ಯಾಂಕ್ಸ ಹೇಳೊದ್ರಾಗ ಅವರು ಹೊಗಿಬಿಟ್ಟಿದ್ರು. ಆದ್ರ ಮಾತಾಡಿದ್ರಲ್ಲಾ ಅಂತ ಭಾಳ ಖುಷಿ ಆತು. ಈ ಪ್ರಸಂಗನ ನಾ ಪ್ರತಿ ವರ್ಷ ನೆನಿಸ್ಕೊತನಿ.  

ಯುಗಾದಿ ಪಾಡ್ಯ ಆದಮ್ಯಾಲೆ ಎರಡ ದಿನಕ್ಕ ತದಗಿ ದಿವಸ ಚೈತ್ರದ ಗೌರಿ ಕುಡಸತೆವಿ. ಹೊಸದಾಗಿ ಮದುವ್ಯಾದ ಹೆಣ್ಣಮಕ್ಕಳು ಮುತೈದೆರ ಕಾಲುತೊಳದು ಅರಿಶಿಣ ಕುಂಕಮ ಕೊಟ್ಟು, ಉಡಿತುಂಬಿ, ಕೊಸಂಬರಿ ಪಾನಕಾ ಕೊಟ್ಟು ಸತ್ಕಾರ ಮಾಡತಾರ. ಈ ಗೌರಿಯ ಮುಖ್ಯ ವಿಶೇಷ ಅಂದ್ರ ಕೊಸಂಬರಿ, ಪಾನಕದ ನೈವೇದ್ಯಾ. ನಾವ ಸಣ್ಣವರಿದ್ದಾಗ ಅಮ್ಮನ ಜೊಡಿ ಅರಿಶಿನಾ ಕುಂಕಮಕ್ಕ ಹೋಗ್ಬೇಕಂದ್ರ ಯಾರ ಮನ್ಯಾಗ ಕೊಸಂಬ್ರಿ ಪಾನಕಾ ಮಾಡಿರತಾರ ಅವರ  ಮನಿಗೆ ಮಾತ್ರ ಹೋಗತಿದ್ವಿ. ಹಿಂಗ ಯುಗಾದಿ ಬಂತಂದ್ರ ಚೈತ್ರ ಮಾಸದಾಗಿನ ಹಸಿರಿನಂಗ ಮನಸ್ಸು ಒಂಥರಾ ಉಲ್ಲಾಸದಿಂದ ಇರತದ. ಇದೆಲ್ಲಾ ಆ ವಸಂತನ ಪ್ರಭಾವ ಅನಿಸ್ತದ. ಹಿಂದು ಸಂಪ್ರದಾಯದ ಪ್ರಕಾರ ಯುಗಾದಿ ಗೆ ಹೊಸಾ ವರ್ಷ ಶುರು ಆಗತದ, ಇದು ಖರೆನ ಭಾಳ ಅರ್ಥಪೂರ್ಣ ಆಚರಣೆ ಅದ. ಹೆಂಗಂದ್ರ, ಚೈತ್ರ ಮಾಸಾ ಅಂದ್ರ ವಸಂತ ರುತುವಿನ ಆಗಮನ ಕಾಲಾ, ಎಲ್ಲಾ ಕಡೆ ಹಸಿರು ಚಿಗುರೊಡೆಯುವ ಕಾಲಾ, ಕೊಗಿಲೆ ಕೂಹು ಕೂಹು, ಒಂಥರಾ ಸಂಮೃದ್ಧಿಯ ವಾತಾವರಣದೊಳಗ ಹೊಸಾ ವರ್ಷದ ಪ್ರಾರಂಭ ಆಗತದ. ಜೀವನದಾಗ ಎನೇ ಸುಖ ದುಖಃ ಬಂದ್ರು ಬೇವು-ಬೆಲ್ಲದ ಹಂಗ ಸರಿಸಮಾನಾಗಿ ಸ್ವಿಕರಿಸಿ, ವರ್ಷಪೂರ್ತಿ ವಸಂತ ಕಾಲದ ಹಂಗ ಮನಸ್ಸನ್ನ ಹಸಿರಾಗಿಟ್ಟಕೊಂಡು, ಸುಖದಿಂದ ಬಾಳಿರಿ ಅನ್ನೊ ಸಂದೇಶವನ್ನ ಸಾರುವ ಈ ಯುಗಾದಿ ಹಬ್ಬ ಜಗತ್ತಿನ ಎಲ್ಲಾ ಜೀವಿಗಳಿಗೆ ಶಾಂತಿ ನೆಮ್ಮದಿ ಕೊಡಲಿ. ಎಲ್ಲರಿಗೂ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು. 

*****   

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

3 Comments
Oldest
Newest Most Voted
Inline Feedbacks
View all comments
umesh desai
umesh desai
9 years ago

ವಾಕ್ ನೆನಪೆಲ್ಲ ತಾಜಾ ಆದವು ನೋಡರಿ..

ದಿವ್ಯ ಆಂಜನಪ್ಪ
ದಿವ್ಯ ಆಂಜನಪ್ಪ
9 years ago

ಇಲ್ಲಿನ ವೈನಿ ಮೈದುನರ ಕಥೆ ನಿಜಕ್ಕೂ ಯಜಮಾನ ಚಲನಚಿತ್ರದಲ್ಲಿ ಬರುವ ಅತ್ತಿಗೆಯ ನೋಡಿ ನಾಚುವ ಮುಜುಗರಪಡುವ ಮೈದುನರ ಚಿತ್ರದೃಶ್ಯ ನೆನಪಾಯ್ತು, ಅದನ್ನೇ ಹೋಲುತ್ತದೆ. ಮೊನ್ನೆಯಷ್ಟೇ ಆ ಚಿತ್ರ ಟೀವಿಯಲಿ ಪ್ರಸಾರವಾಗಿತ್ತು ಬೇರೆ… 🙂 🙂

ಸೋಗಸಾದ ನೆನಪುಗಳನ್ನು ಬಿಚ್ಚಿಟ್ಟಿದ್ದೀರಿ ಸುಮನಾವರೇ, ದಿನಕಳೆದಂತೆ ನಮ್ಮ ಆಚರಣೆಗಳೆಲ್ಲಾ ನಶಿಸಿ, ಕೇವಲ ಯಾಂತ್ರಿಕತೆಗೆ ಮನುಷ್ಯ ಇಂದು ಜೋತುಬೀಳುತ್ತಿದ್ದಾನೆ. ಆಚರಣೆಗಳು ಎಂದಾಕ್ಷಣ ಮೂಢನಂಬಿಕೆಗಳೆಂದೇ ಅರ್ಥೈಸುವುದು ಸಮಂಜಸವಲ್ಲ. ಯಾವುದೇ ಒಂದು ಆಚರಣೆಯ ವೈಶಿಷ್ಟ್ಯವು ಮನರಂಜನೆಯೋ, ಸಂಬಂಧಗಳ ಬೆಸೆಯುವ ಅವಸರಗಳೋ ಆಗಿದ್ದು  ಸಂಪ್ರದಾಯಗಳೆನಿಸಿಕೊಂಡಿರುತ್ತದೆ. ತಿಳಿದು ಆಚರಿಸುವ ಮನಸ್ಸು ನಮ್ಮೆಲ್ಲರದ್ದಾಗಲಿ ಎಂದು ಆಶಿಸುತ್ತ,,

ಮನಸನ್ನೊಮ್ಮೆ ಹಸಿರಾಗಿಸುವಂತಹ ಲೇಖನಕ್ಕಾಗಿ ಧನ್ಯವಾದಗಳು ಸುಮನಾವರೇ,, 🙂

  

shreevallabha
shreevallabha
9 years ago

ನಮಗೂ ಈ ಥರಹದ ಅನುಭವ ಆಗಿದೆ ಕಣ್ರಿ !! 
ಹಳೆಯದನ್ನ ನೆನಪು ಮಾಡಿ ಕೊಟ್ಟಿದ್ದಕ್ಕೆ ಧನ್ಯವಾದಗಳು , ,ಹಾಗೆ ಹಬ್ಬದ ಶುಭಾಶಯಗಳು …. ಒಳ್ಳೆಯದಾಗಲಿ,,,ಸರ್ವೆ ಜನಾ: ಸುಖಿನೋ ಭವ೦ತು !                                      *ಶ್ರೀವಲ್ಲಭ ಕುಲಕರ್ಣಿ*       

3
0
Would love your thoughts, please comment.x
()
x