1
ಒಲವಿನ ನೋಟಿಗೆ
ಕನಸುಗಳ
ಚಿಲ್ಲರೆ ಕೊಟ್ಟ
ಹುಡುಗಿ..
ನನ್ನ
ಹೃದಯವನೆಂದು
ಕ್ರಯಕ್ಕೆ
ಪಡೆಯುತ್ತಿಯ..?
2
ನಿನ್ನೆದುರು
ನಾ ಹಾಕುವ ಕಣ್ಣಿರಿಗೆ
ಬೆಲೆ ಸಿಗದಿದ್ದರೂ
ಚಿಂತೆಯಿಲ್ಲ
ಆ ಕಣ್ಣುಗಳ ಕಣ್ಣಿರಿಗೆ
ನೀನೆಂದು
ಕಾರಣಳಾಗಬೇಡ..!
3
ನನ್ನೆದೆಗೆ
ಗುಂಡಿಡುವ ಮೊದಲು
ಗುರಿಯನ್ನೊಮ್ಮೆ
ಸರಿಯಾಗಿ ನೋಡು
ಗುಂಡುಗಳು ನಿನ್ನೆದೆಯ
ಹೊಕ್ಕಾವು..!
4
ಸಾಧನೆಗಳ
ಸಾಧಕರ ಜೀವನವ
ಓದುವಾಗ ಬೆನ್ನುಡಿಯಲ್ಲಿ
ಸಿಕ್ಕಿದ್ದು ;
ಬರೀ ನೋವು ಸಂಕಟ
ಬಡತನ ಮತ್ತು ಅವಮಾನಗಳ
ಬೃಹತ್ ಗಂಟು..!
5
ನನ್ನ
ಹೃದಯದ
ಗೋಡೆಗಳಿಗೆ ನೀನೆ ಹಚ್ಚಿದ
ನಿನ್ನೊಲವ ಭಿತ್ತಿ ಪತ್ರಗಳು
ಹರಿದು ಹೋಗಿದ್ದು
ನಿನ್ನ ಮೋಸದಿಂದಲೋ
ಇಲ್ಲಾ ನಿನ್ನ ಸ್ನೇಹಕ್ಕೆ
ನೆಪವಾದ ಮುಂಗಾರಿನ
ಹನಿಗಳಿಂದಲೋ..?
6
ನಾನು ಕಟ್ಟಿದ
ಒಲವ ಸೌಧಕ್ಕೆ
ಅವಳ ಸುಳ್ಳುಗಳೇ
ಅಡಿಪಾಯಗಳಾಗಿದ್ದವು
ಅವಳ ಸುಳ್ಳುಗಳು
ನನಗೆ ತಿಳಿಯಲಿಲ್ಲ
ನನ್ನ ಒಲವ ಸೌಧ
ಉಳಿಯಲಿಲ್ಲ….!
7
ನಿನ್ನ ಕಣ್ಣುಗಳೆಂದು
ಒದ್ದೆಯಾಗಂದಂತೆ
ಜೀವನ ಪೂರ್ತಿ
ನೋಡಿಕೊಂಡು
ಗೆದ್ದು ಬಿಟ್ಟೆ;
ಕ್ಷಮಿಸಿಬಿಡು ನಲ್ಲೆ,
ನನ್ನ ಉಸಿರ ಕೊನೆಯಲ್ಲಿ ಮಾತ್ರ
ನಿನ್ನ ಕಣ್ಣಿರು ನನ್ನನ್ನು
ಸೋಲಿಸಿತು..!
8
ಮನಸಿನ
ನೋವುಗಳಿಗೆ
ಸಿಗುವ
ಮುಲಾಮು
ಭೂಮಿಯ ಯಾವ
ಮೂಲೆಯಲ್ಲೂ
ಸಿಗುವುದಿಲ್ಲ…!
9
ಪ್ರೀತಿ
ಎಂಬ ಬಯಲಲಿ
ಅವಳು ಆಡಿದ್ದು
ಕಣ್ಣಾ ಮುಚ್ಚಾಲೆ..!
ನನ್ನ ಕಣ್ಣಿಗೆ ಬಟ್ಟೆ ಕಟ್ಟಿ
ತಪ್ಪಿಸಿಕೊಂಡ ಹುಡುಗಿ
ಇನ್ನೂ ಸಿಕ್ಕಿಲ್ಲ
ನಾನು ಕಣ್ಣ ಪಟ್ಟಿ
ಬಿಚ್ಚಿಲ್ಲ..!
10
ರಾಮನ
ಹೆಸರಲ್ಲಿ ನಿತ್ಯ
ಪೂಜಿಸುವವರಿಗೆ
ಸಾಕೇ ಸಾಕು ಒಬ್ಬಳು
ಮಡದಿ..!
ಕೃಷ್ಣನ
ಹೆಸರಲ್ಲಿ ನಿತ್ಯ
ಸುಖಿಸಬೇಕೆಂದವರಿಗೆ
ಇದ್ದೆ ಇದೆಯಲ್ಲ
ಬಿಡದಿ..!
11
ಮುಟ್ಟಿದರೆ
ನಲುಗುವ ನನ್ನವಳ
ನಡುವನ್ನು ಬಳಸಲು
ಪ್ರತಿ ದಿನ
ಅವಳೋರುವ ನೀರ
ಬಿಂದಿಗೆಯಾದರು
ಒಮ್ಮೆ ನಾನಾಗಬೇಕು…!
12
ಒಂದೊಮ್ಮೆ
ನನ್ನವಳು ಮನೆ
ಅಂಗಳದಲ್ಲಿ ಸೇರಿಸದೆ
ಮರೆತು ಬಿಟ್ಟ ಆ
ರಂಗೋಲಿ ಚುಕ್ಕಿಗಳು
ಇಂದಿನ ಆಕಾಶದ
ಈ ನಕ್ಷತ್ರಗಳು..!
13
ಹೀಗೊಂದು
ನನ್ನ ಸ್ವಾರ್ಥ
ಹೆಣ್ಣನ್ನು ಕಂಡೊಡನೆ
ಸೌಜನ್ಯದಿಂದ
ಕೈ ಮುಗಿದು
ಪೂಜಿಸುವ
ಪ್ರತಿ ಗಂಡು
ಕನ್ನಡಿಗನೇ ಆಗಿ
ಹುಟ್ಟ ಬೇಕು..!
14
ನನ್ನವಳ
ವಿರಹದ ನೆನಪಿಗಾಗಿ
ತನಗೆ ತಾನೇ
ಹಾಕಿಕೊಂಡ
ಬರೆಗಳು
ಆ ಚಂದ್ರನ
ಕಪ್ಪು ಕಲೆಗಳು..!
15
ಅವಳ
ಮೇಲಿದ್ದ
ದೊಡ್ಡ ದೊಡ್ಡ
ದಡ್ಡ ಆಸೆಗಳೆಲ್ಲ
ಸುಟ್ಟು ಹೊದದ್ದು
ವಲ್ಲದ ಮದುವೆಯ
ಮೊದಲ
ರಾತ್ರಿಯ ದಿನ..!
16
ಹುಡುಗರನ್ನು ಕೊಲ್ಲಲು
ಹುಡುಗಿಯರಿಗೆ
ಚಾಕು ಚೂರಿ ಮಚ್ಚುಗಳ
ಅವಶ್ಯಕತೆ ಇಲ್ಲಾ ;
ಅವರ ಮೋಹಕ
ಕಣ್ಣುಗಳ
ನೋಟದ ಮುಂದೆ..!
17
ಕ್ಷೌರಿಕ
ಕ್ಷೌರಿಸುವಾಗ
ಹೊಮ್ಮುವ
ಕತ್ತರಿಯಲ್ಲೂ ಸಂಗೀತದ
ನಾದ ಕೇಳುತ್ತದೆ
ನನ್ನಂತ ಸಂಗೀತ
ಆರಾಧಕನಿಗೆ..!
18
ಸಂತನಾಗುವ
ಆಸೆ ಹೊತ್ತು
ಮಂತ್ರ ಪಠಿಸುತ್ತಿದ್ದೆ
ಶಾಂತಳಾಗಿ ಬಂದು
ಸಂಸಾರಿಯನ್ನಾಗಿ
ಮಾಡಿದಳು…!
19
ಲೆಕ್ಕವಿಡದೆ
ಪ್ರೀತಿಯ ಸಾಲ
ಕೊಟ್ಟ ಪ್ರೇಮಿಗೆ
ಅಸಲು ಬಂದದ್ದು
ಮೋಸದ ಬಡ್ಡಿಯ
ಲೆಕ್ಕದಲ್ಲಿ..!
20
ನಿದ್ದೆಗಣ್ಣ
ನಶೆಯಲ್ಲಿ
ಮುದ್ದು ಮಾಡಿ
ಬೇಡವೆಂದರೂ
ವಯಸ್ಸು ಕುಡಿಸುವ ;
ಹಾಲಿನಂತಹ ಪಿನಾಯಿಲ್
ಈ ಪ್ರೀತಿ….!
21
ನನ್ನ
ಅಪ್ರಕಟಿತ
ಕವಿತೆಗಳ ಪ್ರಕಟಿಸಿ
ನಾನೇ ಒಮ್ಮೆ ಓದಲು
ನನ್ನವಳ ಅದರಗಳ
ಪ್ರಕಾಶನವೇ
ಬೇಕು..!
22
ನೆನ್ನೆ ಸಂಜೆ
ಸುಮ್ಮನೆ ಮುನಿಸಿಕೊಂಡು
ಹೇಳಿದಳವಳು
ನಿನ್ನ ಜೊತೆ ಟು.. ಟೂ..
ಇಂದು ಸಂಜೆ
ಮಳೆಯಲಿ ನೆನೆದು
ಕರೆಯುತ್ತಿದ್ದಾಳೆ ಕುಡಿಯಲು
ಕಾಫಿ ಬೈಟೂ..
23
ನಿದ್ದೆ
ಇಲ್ಲದ ರಾತ್ರಿಗಳಲ್ಲಿ
ನಿನ್ನ ನೆನೆದು
ಅಡ್ಡಾದಿಡ್ಡಿ
ಒದ್ದಾಡುವಾಗ
ರಾತ್ರಿ ಇಡೀ
ಅಣಕಿಸುವಂತಿತ್ತು
ತೊಟ್ಟಿಕ್ಕುವ ಆ ಬಚ್ಚಲ
ನಲ್ಲಿ ಹನಿಗಳ
ಸದ್ದು..!
24
ಅರ್ಥೈಸಿಕೊಳ್ಳದ
ಹುಡುಗಿ ಮುಂದೆ ಸಮರ್ಥನೆಯ
ಮಾತುಗಳನ್ನಾಡುತ
ಕೂತಾಗ…
ನಿನೊಬ್ಬ ಚೈನಿನಿಂದ
ಕಟ್ಟಿ ಹಾಕಿದ ಅವಳ
ಸಾಕು
ನಾಯಿಯಂತೆ..!
25
ನೀ
ತಿರುಗಿ
ನೋಡುತ್ತೀಯ
ಎಂದೇ ನಾ ಕಾಯುವ
ಆ ಕ್ಷಣ ;
ಕಾದ ಹಂಚಿನಲಿ
ಬೇಯ್ಯುತ್ತಿರುವ
ಆಮ್ಲೆಟ್ ನಂತೆ
ಈ ಮನ…!
26
ಪಾರ್ಕೊಂದರ
ಮರದ ಬುಡದಲಿ
ಇನಿಯನ ಎದೆಗೊರಗಿ
ಕೂತ ಹುಡುಗಿಗೆ
ಕೇಳಿದ್ದು ಎದೆ ಬಡಿತವಲ್ಲ
ಅವಳದೇ ಹೆಸರು..!
27
ಕೋಟೆ ಕಟ್ಟಿ
ಸಕಲ ಸುಖದಿಂದ
ಮೆರೆದ ರಾಜನೊಬ್ಬ
ಮರುಭೂಮಿಯಲ್ಲಿ
ಒಂದು ಹನಿ
ನೀರಿಲ್ಲದೆ ಸತ್ತು ಹೋದ..!
28
ಹತ್ತು ವರ್ಷದ
ಸುಖ ದಾಂಪತ್ಯದ
ನಡುವೆ ಬಿರುಕು ಮೂಡಲು
ಮೂಲವಾದದ್ದು
ಅವನ ಅಂಗಿಯ ಮೇಲಿದ್ದ
ಅಪರಿಚಿತ ಹೆಣ್ಣಿನ
ಉದ್ದನೆಯ ಕಪ್ಪು ಕೂದಲು…
29
ನೀನ್ಯಾರೆಂದು
ಕೇಳಿದವಳಿಗೆ
ನಾನ್ನಿತ್ತ ಉತ್ತರ
ಸದ್ದು ಗದ್ದಲ ತುಂಬಿದ
ಜಾತ್ರೆಯಲ್ಲೂ
ನಿನ್ನ ಗೆಜ್ಜೆ ಸದ್ದನ್ನು
ಕದ್ದು ಆಲಿಸಿದವ…!
30
ಪ್ರಳಯದ ಕೊನೆಯ
ಕ್ಷಣದಲ್ಲೂ
ತಾಯಿ ಮಗುವನ್ನ
ತಬ್ಬಿಕೊಂಡು
ಹಾಡುತ್ತಿದ್ದಳು
ಜೋ ಜೋ ಲಾಲಿ
ಜೋ ಜೋ ಜೋ…!
*****
As usual manju….u r always good with your innumerable drop gavana…….
really As usual Manju good one
ಹನಿಗವನಗಳು ತುಂಬಾ ಚನ್ನಾಗಿವೆ.