ಹೀಗೊಂದು ಪ್ರಲಾಪ: ಅಖಿಲೇಶ್ ಚಿಪ್ಪಳಿ

ಮೊನ್ನೆ ಮುಂಜಾನೆ ಗಣ್ಯರೊಬ್ಬರು ಕೆಲಸದ ಮೇಲೆ ನೋಡಲು ಬರುವವರಿದ್ದರು, ಗಣ್ಯರಿಗೆ ಒತ್ತಡಗಳಿರುತ್ತವೆ ಹಾಗೂ ಸರಿಯಾದ ಸಮಯಕ್ಕೆ ಬರಲು ಸಾಧ್ಯವಾಗದಿರುವುದು ಅಚ್ಚರಿಯ ವಿಷಯವಲ್ಲ. ೫-೧೦ ನಿಮಿಷದಲ್ಲಿ ಬರುತ್ತಾರೆ ಎಂಬುದನ್ನು ಗಣ್ಯರ ಸಹಾಯಕ ಜಂಗಮವಾಣಿಯ ಮುಖಾಂತರ ತಿಳಿಸುತ್ತಿದ್ದ. ಸರಿ ಮತ್ತೇನು ಮಾಡಲು ತೋಚದೆ, ರಸ್ತೆಗೆ ಬಂದು ನಿಂತೆ. ಮುಂಜಾನೆಯ ಹಕ್ಕಿಗಳ ಕಲರವದ ನಡುವೆ ನಾನೇನು ಕಡಿಮೆಯೆಂಬಂತೆ ಪುಟ್ಟ ಇಣಚಿಯೊಂದು ನಿರ್ಕಾಯ್ ಮರವನ್ನು ಜಿಗಿ-ಜಿಗಿದು ಏರುತಿತ್ತು. ನಗರದ ಹೊಲಸನ್ನು ಸ್ವಚ್ಚ ಮಾಡುವ ಪ್ರಯತ್ನದಲ್ಲಿ ಕಾಗೆಗಳ ಸಂತತಿ ಮಗ್ನವಾಗಿದ್ದವು. ಕೈವಾರದಿಂದ ಗೀರಿದಷ್ಟು ಕರಾರುವಕ್ಕಾದ ಗೋಲದ ಕಿಂಡಿಯಿಂದ ಚಿಟ್ಟುಗಿಳಿ ತಲೆಹಾಕಿ ಕುಳಿತಿತ್ತು. ಒಣಗಿದ ಮರದ ಪಕ್ಕದಲ್ಲೇ ಇದ್ದ, ಇತಿಹಾಸದ ಅಂಚಿಗೆ ಸೇರಿ ಹೋಗಲಿರುವ ದೂರವಾಣಿ ಕಂಬದ ತುದಿಯಲ್ಲಿರುವ ಕಿಂಡಿಯಲ್ಲಿ ಮೈನಾ ಹಕ್ಕಿ ದಂಪತಿಗಳು ಕಸ-ಕಡ್ಡಿ ಜೋಡಿಸಿ ಗೂಡು ಕಟ್ಟುತ್ತಿದ್ದವು. ಪೇಟೆಯಾದರೂ ಮುಂಜಾವಿನ ವಾತಾವರಣಕ್ಕೆ ಈ ಗೆಳೆಯರಿಂದ ಒಂದು ತರಹದ ಆಹ್ಲಾದಕತೆಯೊದಗಿ ಬಂದಿತ್ತು.

ಗಣ್ಯರ ಭೇಟಿ ಮುಗಿಸಿ ವಾಪಾಸು ಮನೆಗೆ ಹೋಗುವಾಗ ಹಂಚಿನ ಮನೆಗಳಿದ್ದಲ್ಲಿ ಗುಬ್ಬಿಗಳ ಚೀಂವ್ ಚೀಂವ್ ಜೊತೆಗೆ ಅಲಂಕಾರಕ್ಕಾಗಿ ಸಾಕುವ ಪಕ್ಷಿಗಳ ಟ್ರೀ. . . ಚೋರ್ ಕೂಗು ಕೇಳಿಬಂತು. ಪ್ರಕೃತಿಯ ಎಲ್ಲವೂಗಳು ಮಾನವನಿಗೆ ಬೇಕು ಒಬ್ಬೊಬ್ಬರಿಗೆ ಒಂದೊಂದು ಹವ್ಯಾಸ. ಕೆಲವರು ಕಾಸ್ಲ್ಟೀ ನಾಯಿಗಳನ್ನು ಮುದ್ದು ಮಾಡಿದರೆ, ಕೆಲವರು ಬೆಕ್ಕಿಗೆ ಮುತ್ತು ಕೊಡುತ್ತಾರೆ. ಗಿಳಿಯ ರೆಕ್ಕೆ ಕತ್ತರಿಸಿ ಬೋನಿನೊಳಗೆ ಕೂಡಿ, ಅದಕಷ್ಟು ಕೀಟನಾಶಕ ಸಿಂಪಡಿಸಿದ ತರಕಾರಿ ತಿನ್ನಿಸಿ ಮಾತು ಕಲಿಸುವ ಜಾಣರೂ ಇದ್ದಾರೆ. ಆನೆಗಳನ್ನು ಪಳಗಿಸಿ ಸಾಕಿದ ಮನುಷ್ಯನಿಗೆ ಉಳಿದ ಪ್ರಾಣಿಗಳ್ಯಾವ ಲೆಕ್ಕ? ಆನೆಗಳ ಹೆದ್ದಾರಿಯಲ್ಲಿ ಬರುವ ಅರಣ್ಯವನ್ನು ಇದೇ ಪಳಗಿಸಿದ ಆನೆಯನ್ನೆ ಬಳಸಿ ಕಡಿದು ಬರಿದು ಮಾಡಿದ ಮಾನವನ ಸಾಹಸಕ್ಕೆ ಎಣೆಯಲ್ಲಿ. 

ಅಭಿವೃದ್ಧಿಯ ಹೆಸರಿನಲ್ಲಿ ಪ್ರಪಂಚದ ಎಲ್ಲಾ ರಾಷ್ಟ್ರಗಳು ದಟ್ಟಾರಣ್ಯಗಳನ್ನು ಸವರುವ ಕೆಲಸಕ್ಕೆ ಕೈಹಾಕಿ, ಆಪತ್ತನ್ನು ಮೈಮೇಲೆಳೆದುಕೊಂಡವು. ಕೆಟ್ಟಮೇಲೆ ಬುದ್ಧಿ ಬಂತು ಎಂಬಂತೆ ಆಧುನಿಕ ರಾಷ್ಟ್ರಗಳು ತಮ್ಮ ದೇಶದ ಅರಣ್ಯ ಪ್ರದೇಶಗಳನ್ನು ಮಾತ್ರ ಸಂರಕ್ಷಿಸುವಲ್ಲಿ ಕಾಳಜಿ ತೋರಿದವು ಹಾಗೂ ತಮ್ಮ ಅಗತ್ಯಗಳಿಗೆ ಹಿಂದುಳಿದ ರಾಷ್ಟ್ರಗಳ ಅರಣ್ಯಗಳನ್ನು ಬೋಳಿಸಿದವು. ನೈಸರ್ಗಿಕ ಅರಣ್ಯಗಳು ಎಲ್ಲೇ ಕಣ್ಮರೆಯಾದರೂ ಅದರ ವ್ಯತಿರಿಕ್ತ ಪ್ರಭಾವ ಎಲ್ಲಾ ದೇಶಗಳ ಮೇಲೆ ಆಗುವುದು ಎಂಬ ಜ್ಞಾನ ಇವತ್ತು ತಡವಾಗಿಯಾದರೂ ಬರುತ್ತಿದೆ. ಎಲ್ಲಾ ದೇಶಗಳಲ್ಲೂ ಅಲ್ಲಿನ ವನ್ಯಪ್ರಾಣಿಗಳ ರಕ್ಷಣೆಗಾಗಿ ನಿಗದಿತ ಅರಣ್ಯ ಪ್ರದೇಶಗಳನ್ನು ಕಾಪಿಟ್ಟು, ಸಂರಕ್ಷಿತ ಪ್ರದೇಶವೆಂದು ಸಾರಿವೆ. ರಕ್ಷಣೆಯ ದೃಷ್ಟಿಯಲ್ಲಿ ಇದು ಸ್ವಾಗತಾರ್ಹ ಕ್ರಮವಾದರೂ, ಇಡೀ ಭೌಗೋಳಿಕ ಪ್ರದೇಶದ ಕೆಲವಷ್ಟು ಪ್ರದೇಶವನ್ನು ಮಾತ್ರ ಸಂರಕ್ಷಿತ ಪ್ರದೇಶವೆಂದು ಸಾರಿದರೆ, ಉಳಿದ ಭೌಗೋಳಿಕ ಪ್ರದೇಶದ ಪ್ರಾಣಿ ಪಕ್ಷಿಗಳು ಎಲ್ಲಿ ಹೋಗಬೇಕು. ಕೆಲವು ಸಸ್ಯಪ್ರಭೇದಗಳು ಮತ್ತು ಪ್ರಾಣಿಪ್ರಬೇಧಗಳು ನಿರ್ದಿಷ್ಟ ಪ್ರದೇಶದಲ್ಲಿ ಮಾತ್ರ ಕಂಡು ಬರುತ್ತವೆ. ಅವು ಸಾವಿರಾರು ವರ್ಷಗಳಿಂದ ಅದೇ ಪ್ರದೇಶದಲ್ಲಿ ವಿಕಾಸಗೊಂಡು ನೆಲೆಯೂರಿರುತ್ತವೆ. ನಗರಗಳು ಬೆಳೆದಂತೆ ಹತ್ತಿರದ ಹಳ್ಳಿಗಳಿಗೆ ಆಪತ್ತು ಒದಗುತ್ತವೆ. ಏರುತ್ತಿರುವ ಜನಸಂಖ್ಯೆಗೆ ವಸತಿ ಮತ್ತು ಅಭಿವೃದ್ದಿಗಾಗಿ ಹಳ್ಳಿಗಳು ಪಟ್ಟಣಗಳಾಗಿ ಪರಿವರ್ತಿತವಾಗುತ್ತಿವೆ. ಅಳಿದುಳಿದ ಮರಗಳನ್ನು ಕೆಡವಿ ಸೈಟುಗಳನ್ನು ಮಾಡಲಾಗುತ್ತದೆ. ಅರಣ್ಯ ಇಲಾಖೆಯು ಜನರಿಗೆ ಸೌದೆ ಒದಗಿಸಲು ಪರದಾಡುತ್ತದೆ. ಕಾಡಿನಲ್ಲಿರುವ ಬಿದ್ದ ಮತ್ತು ಸತ್ತ ಮರಗಳನ್ನು ಕಟ್ಟಿಗೆಗಳನ್ನಾಗಿ ಪರಿವರ್ತಿಸಿ ಇಲಾಖೆಯ ಡಿಪೋದಲ್ಲಿ ಕೆ.ಜಿ., ಕ್ವಿಂಟಾಲ್ ಮತ್ತು ಟನ್ ಲೆಕ್ಕದಲ್ಲಿ ಮಾರುತ್ತಾರೆ. ಕೆಲವು ವಿಶಿಷ್ಟ ಪ್ರಾಣಿಗಳಿಗೆ ಸತ್ತ ಹಾಗೂ ಬಿದ್ದ ಮರಗಳೇ ಆಹಾರ. ಉದಾಹರಣೆಗೆ ಮರಕುಟಿಕ, ಹಾರುಬೆಕ್ಕು ಇವುಗಳಿಗೆ ಒಣಗಿದ ಮರವೇ ಬೇಕು. ಮರಕುಟಿಕ ಒಣಗಿದ ಮರದಲ್ಲಿರುವ ಹುಳುಗಳನ್ನು ಹೆಚ್ಚು ಇಷ್ಟಪಟ್ಟು ತಿನ್ನುತ್ತದೆ. ಹಾರುಬೆಕ್ಕುಗಳಿಗೆ ವಾಸಕ್ಕಾಗಿ ಒಣಗಿದ ಮರ ಸೂಕ್ತ. 

ನಗರಸಭೆ ವ್ಯಾಪ್ತಿಯಲ್ಲಿ ಅಲ್ಲಲ್ಲಿ ಮಕ್ಕಳಿಗೆ ಆಡಲು ಮತ್ತು ನಗರವನ್ನು ಸುಂದರವಾಗಿಟ್ಟುಕೊಳ್ಳುವ ಪ್ರಯತ್ನವೆಂಬಂತೆ ಪಾರ್ಕುಗಳನ್ನು ನಿರ್ಮಿಸುತ್ತಾರೆ. ಆ ಪಾರ್ಕುಗಳಿಗೆ ಉಸ್ತುವಾರಿ ಮಾಡುವವರ ಕೊರತೆಯಿರುತ್ತದೆ. ಪಾರ್ಕಿನ ಆಟಿಕೆಗಳು ಆರು ತಿಂಗಳಲ್ಲೇ ತುಕ್ಕು ತಿಂದು ಹೋಗುತ್ತವೆ. ಎಲ್ಲಿಂದಲೋ ತಂದ ಸಸ್ಯಗಳು ನೀರಿಲ್ಲದೇ ಒಣಗುತ್ತವೆ. ಆಡಳಿತ ನಡೆಸುವವರಿಗೊಂದು ದೂರದೃಷ್ಟಿಯಿರಬೇಕು. ಸಾಮಾನ್ಯವಾಗಿ ಎಲ್ಲಾ ಸರ್ಕಾರಗಳು ಜನರಿಗಾಗಿ ಇನ್ನಿಲ್ಲದ ಸೌಲಭ್ಯ ಕಲ್ಪಿಸಲು ಹಣ ಹೂಡುತ್ತವೆ. ವರದಿಯ ಪ್ರಕಾರ ಸರ್ಕಾರದಿಂದ ಬಿಡುಗಡೆಯಾದ ಹಣದಲ್ಲಿ ಸರಾಸರಿ ನೂರಕ್ಕೆ ೩೦ ರೂಪಾಯಿಗಳು ಮಾತ್ರ ಯೋಜನೆಗಳ ಅನುಷ್ಠಾನಕ್ಕೆ ಖರ್ಚಾಗುತ್ತದೆ. ಇನ್ನು ೭೦ ರೂಪಾಯಿಗಳನ್ನು ಸ್ವಾಹ ಮಾಡಲಾಗುತ್ತದೆ. ಕುಡಿಯುವ ನೀರು, ಆಹಾರ, ಮೂಲಭೂತ ಸೌಕರ್ಯಗಳಿಗೆ ಅಂದರೆ ರಸ್ತೆ, ವಿದ್ಯುತ್ ಇತ್ಯಾದಿಗಳನ್ನು ಮಾತ್ರ ಗಮನದಲ್ಲಿಟ್ಟುಕೊಂಡು ಎಲ್ಲಾ ಯೋಜನೆಗಳು ತಯಾರಾಗುತ್ತವೆ. ಅಂತರ್ಜಲ ಹೆಚ್ಚಿಸುವಂತಹ ಅರಣ್ಯೀಕರಣದಂತಹ ಕಾರ್ಯಕ್ರಮಗಳು ಯಶಸ್ವಿಯಾಗಿದ್ದು ಇಲ್ಲವೇ ಇಲ್ಲವೆಂಬಷ್ಟು ವಿರಳ. ನೀರಿಗಿಂತ ಮುಖ್ಯವಾದ ಆಮ್ಲಜನಕದ ಬಗ್ಗೆ ಇದುವರೆಗೂ ಕಾಳಜಿ ತೋರಿದ ಸರ್ಕಾರಗಳಿಲ್ಲ. ಕೃತಕವಾಗಿ ಅಮ್ಲಜನಕ ಪೂರೈಸುವ ಸಂದರ್ಭ ಬಂದಲ್ಲಿ ಸರ್ಕಾರಗಳೇನು ಮಾಡಬಹುದು?. ಅಂತಾರಾಷ್ಟ್ರೀಯ ವಿಜ್ಞಾನಿಗಳ ಸಲಹೆ ಕೇಳಬಹುದು. ಅಮೆರಿಕಾದಲ್ಲಿ ಆಮ್ಲಜನಕವನ್ನು ಹೇಗೆ ತಯಾರಿಸುತ್ತಾರೆ ಎಂಬುದನ್ನು ಅಧ್ಯಯನ ಮಾಡಲು ಶಾಸಕರು, ಸಂಸದರು ಕುಟುಂಬ ಸಮೇತ ತೆರಳಬಹುದು. ಆಮ್ಲಜನಕ ತಯಾರಿಕ ಘಟಕವನ್ನು ನಿರ್ಮಿಸಲು ಅಳಿದುಳಿದ ಕಾಡನ್ನು ಕಡಿದು ಕಟ್ಟಡಗಳನ್ನು ಕಟ್ಟಿ ಪತ್ರಿಕೆಗಳಲ್ಲಿ ಪೋಟೊ ಸಮೇತ ಮಿಂಚಬಹುದು. ಆಮ್ಲಜನಕ ತಯಾರಿಕಾ ಘಟಕಗಳಿಗೆ ಉತ್ತೇಜನ ನೀಡಲು ನುಣುಪಾದ ರಸ್ತೆಗಳನ್ನು ನಿರ್ಮಿಸಿ, ವಿದೇಶಿ ಕಲಾಕಾರರಿಂದ ಅದ್ಭುತ ಕಟ್ಟಡಗಳನ್ನು ಕಟ್ಟಿಸಿ, ಆಮ್ಲಜನಕ ತಯಾರಿಸಿ ಜನರಿಗೆ ನೀಡುವ ವ್ಯವಸ್ಥೆ ಮಾಡಬಹುದು.

ಗ್ರಾಮಪಂಚಾಯ್ತಿ ಮಟ್ಟದಲ್ಲಿ ಆಮ್ಲಜನಕ ವಿತರಿಸಲು ಆಕ್ಸಿಗಂಟಿಗಳನ್ನು ನೇಮಿಸಿ, ಜನರಿಗೆ ನಿಯಮಿತವಾಗಿ, ನಿಗದಿತವಾಗಿ ಆಮ್ಲಜನಕ ಲಭ್ಯವಾಗುತ್ತಿದೇಯೇ? ಇಲ್ಲವೆ ಎಂಬುವ ಉಸ್ತುವಾರಿ ನೋಡಿಕೊಳ್ಳಲು ವಿದೇಶಿ ಕಂಪನಿಗಳನ್ನು ನಿಯೋಜಿಸಬಹುದು. ಕಳಪೆ ಆಮ್ಲಜನಕದಿಂದ ಯಾರಾದರೂ ಸತ್ತರೆ, ನಿವೃತ್ತ ನ್ಯಾಯಾಧೀಶರ ಸಮಿತಿಯನ್ನು ನೇಮಕ ಮಾಡಿ ಕೈತೊಳೆದುಕೊಳ್ಳಬಹುದು. ಪ್ರಕೃತಿಯಲ್ಲಿ ಆಮ್ಲಜನಕ ಉತ್ಪಾದನೆಯಾಗುವುದು ಅರಣ್ಯಗಳಿಂದ ಎನ್ನುವುದು ಚಿಕ್ಕಮಕ್ಕಳಿಗೂ ಗೊತ್ತು. ಅರಣ್ಯ ನಾಶದಿಂದ ಹವಾಮಾನ ವೈಪರೀತ್ಯಗಳು ಸಂಭವಿಸುತ್ತವೆ ಎನ್ನುವುದೂ ಸಾಮಾನ್ಯವಾಗಿ ಎಲ್ಲರೂ ತಿಳಿದಿರುವ ವಿಚಾರ. ಆದರೂ ಅರಣ್ಯ ನಾಶ ಅವ್ಯಾಹತವಾಗಿ ನಡೆದಿದೆಯೆಂದರೆ ನಾವೆಷ್ಟು ಬುದ್ಧಿವಂತರು ಎನ್ನುವ ಪ್ರಶ್ನೆ ಮೂಡುತ್ತದೆ. 

ಮಲೆನಾಡಿನಂತಹ ತಂಪಾದ ಪ್ರದೇಶವೀಗ ಬಿಸಿಲಬೇಗೆಯಿಂದ ಬೇಯುತ್ತಿದೆ. ಮಾರ್ಚ್ ತಿಂಗಳ ಆದಿಯಲ್ಲೇ ಉಷ್ಣಾಂಶ ಉತ್ತರ ಭಾರತದ ಉಷ್ಣಾಂಶವನ್ನು ಮೀರಿಸುವಂತಿದೆ. ಹೆಚ್ಚು-ಹೆಚ್ಚು ಧಗೆಯಿಂದ ಬಚಾವಾಗಲು ಉಳ್ಳವರು ಕೃತಕವಾಗಿ ತಂಪು ಮಾಡುವ ಹವಾನಿಯಂತ್ರಕಗಳ ಮೊರೆ ಹೋಗುತ್ತಿದ್ದಾರೆ. ತಂಪುಪಾನೀಯಗಳನ್ನು ಅವಲಂಬಿಸುತ್ತಿದ್ದಾರೆ. ಕುಡಿಯುವ ನೀರು ಮರೀಚಿಕೆಯಾಗಿದೆ. ಶುದ್ಧ ಗಾಳಿ ಮತ್ತು ಶುದ್ಧ ನೀರು ಆರೋಗ್ಯವಂತ ಸಮಾಜದ ದಿಕ್ಸೂಚಿಗಳು. ಮುಂದುವರೆದ ಈ ಪ್ರಪಂಚದಲ್ಲಿ ಶುದ್ಧ ಎಂಬ ಪದ ಬರೀ ಟಿ.ವಿ.ಯಲ್ಲಿ ಕಾಣುವಂತಾಗಿದೆ. ಬಿಸಿಲ ಬೇಗೆಗೆ ಇತರ ಪ್ರಾಣಿ ಮತ್ತು ಸಸ್ಯ ಸಂಕುಲಗಳು ತತ್ತರಿಸುತ್ತಿವೆ. ವಾತಾವರಣದಲ್ಲಾಗುತ್ತಿರುವ ಏರುಪೇರಿನಿಂದಾಗಿ ನೈಸರ್ಗಿಕವಾಗಿ ಅರಣ್ಯ ಬೆಳೆಸುವ ಪ್ರಾಣಿ-ಪಕ್ಷಿಗಳ ಸಂಖ್ಯೆ ಕಡಿಮೆಯಾಗಿದೆ. ಬಹುಮುಖ್ಯವಾಗಿ ಬೀಜ ಪ್ರಸರಣ ಮಾಡುವ ಪಕ್ಷಿಗಳ ಸಂತತಿ ಅಳಿಯುತ್ತಿದೆ. ಅತಿಯಾದ ಶಾಖವನ್ನು ಭರಿಸಲಾರದ ಮೊಟ್ಟೆಗಳು ಮರಿಯಾಗಿ ಹೊರಬರುವ ಸಾಧ್ಯತೆ ಕ್ಷೀಣಿಸುತ್ತಿದೆ. ರಜದ ದಿನಗಳಲ್ಲಿ ಬಿಸಿಲೂರಿನಿಂದ ತಂಪಾದ ಮಲೆನಾಡಿನ ಕಡೆಗೆ ಹೊರಡುವ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದೆಯಾದರೂ ಮಲೆನಾಡಿನ ಧಗೆ ಇವರನ್ನು ಭ್ರಮನಿರಸನಗೊಳಿಸುತ್ತಿದೆ. ಹಾಗೆಯೇ ತಂಪುಪಾನೀಯದ ಪ್ಲಾಸ್ಟಿಕ್ ಬಾಟಲಿಗಳು, ಮಧ್ಯದ ಬಾಟಲಿಗಳು ದಾರಿಯ ಬದಿಯ ಕಾಡನ್ನು ಮಲಿನಗೊಳಿಸುತ್ತಿವೆ. ಬೆಂಕಿಯನ್ನು ನಿಯಂತ್ರಿಸಲು ಅರಣ್ಯ ಇಲಾಖೆಯ ಸಿಬ್ಬಂದಿಗಳು ರಸ್ತೆಯ ಬದಿಯ ತರಗೆಲೆಗಳನ್ನು ಗುಡಿಸಿ ತೆಗೆದು ಫೈರ್‌ಲೈನ್ ಮಾಡುವ ಸಂದರ್ಭದಲ್ಲಿ ಈ ತರಹದ ಪ್ಲಾಸ್ಟಿಕ್ ಬಾಟಲಿ ಮತ್ತು ಪಾಲಿಥೀನ್ ಚೀಲಗಳನ್ನು ಎಲೆಗಳ ಜೊತೆ ಸೇರಿಸಿ ಸುಡುವುದರಿಂದಾಗಿ ಡಯಾಕ್ಸಿನ್ ಪ್ರಮಾಣ ವಾತಾವರಣದಲ್ಲಿ ಸೇರಿ ಇನ್ನಷ್ಟು ಬಿಸಿಗೆ ಕಾರಣವಾಗುತ್ತಿದೆ.

ವಿದ್ಯುಚ್ಚಕ್ತಿಯ ಅತಿಯಾದ ಬೇಡಿಕೆಯಿಂದಾಗಿ ವಿದ್ಯುತ್ ಪೂರೈಸಲಾರದ ಸರ್ಕಾರಗಳು ಪವರ್‌ಕಟ್ ಎಂಬ ಅಸ್ತ್ರವನ್ನು ಪ್ರಯೋಗಿಸುತ್ತಾರೆ. ಈ ಅಸ್ತ್ರದಿಂದ ಕಲ್ಲಿದ್ದಲ ಮೇಲಿನ ಬೇಡಿಕೆ ತಾತ್ಕಾಲಿಕವಾಗಿ ಕಡಿಮೆಯಾದರೂ, ಡೀಸೆಲ್ ಜನರೇಟರ್‌ಗಳ ಬಳಕೆ ಹೆಚ್ಚಿ ಇಂಗಾಲಾಮ್ಲದ ಪ್ರಮಾಣ ವಾತಾವರಣಕ್ಕೆ ಹೆಚ್ಚು-ಹೆಚ್ಚು ಸೇರುವಂತಾಗುತ್ತದೆ. ಮತ್ತೆ ಇದು ಭೂಬಿಸಿಗೆ ಕಾರಣವಾಗುತ್ತದೆ. ಈ ಹೊತ್ತಿನಲ್ಲಿ ಥಿಂಕ್ ಗ್ಲೋಬಲಿ – ಡೂ ಲೋಕಲಿ ಎಂಬ ಸೂತ್ರಕ್ಕೆ ಹೆಚ್ಚು ಮಹತ್ವ ನೀಡಬೇಕಾಗುತ್ತದೆ. ಅಂದರೆ ಪ್ರತಿ ಚದರ ಕಿ.ಮಿ. ಪ್ರದೇಶದಲ್ಲಿ ಇಂತಿಷ್ಟು ನಿಸರ್ಗ ಸಹಜವಾದ ಮರಗಳಿರಲೇ ಬೇಕು ಎಂಬ ಕಟ್ಟುನಿಟ್ಟಾದ ಕಾನೂನು ಬರಬೇಕು. ಕಾನೂನು ಬಂದರಷ್ಟೇ ಸಾಲದು, ಪೂರ್ಣಪ್ರಮಾಣದಲ್ಲಿ ಅದು ಅನುಷ್ಠಾನಗೊಳ್ಳಬೇಕು. ಕೆರೆ-ಕಟ್ಟೆಗಳನ್ನು ಹೊಸದಾಗಿ ನಿರ್ಮಿಸುವ ಅಗತ್ಯವಿಲ್ಲ. ಹಾಲಿ ಇರುವ ಕೆರೆಗಳ ಪುನಶ್ಚೇತನ ಎಲ್ಲಾ ಗ್ರಾಮಗಳ, ಪಟ್ಟಣಗಳ, ನಗರಗಳ ಅಂತರ್ಜಲ ಮಟ್ಟವನ್ನು ಹೆಚ್ಚಿಸುತ್ತವೆ. ಮಲೆನಾಡಿನ ಜೀವನಾಡಿಗಳೆಂದರೆ ಕೆರೆಗಳು. ಈ ಕೆರೆಗಳನ್ನು ಬಹುಪಾಲು ಒತ್ತುವರಿ ಮಾಡಲಾಗಿದೆ. ನೀರು ಇಂಗುವ ಪ್ರಮಾಣ ಕಡಿಮೆಯಾಗಿದ್ದರಿಂದ, ಮಲೆನಾಡಿನ ಜನ ಮೊದಲು ಕೃಷಿಗಾಗಿ ಕೊಳವೆ ಬಾವಿಗಳನ್ನು ಅವಲಂಬಿಸಿದ್ದರು. ಈಗ ಕುಡಿಯುವ ನೀರಿಗಾಗಿ ಕೊಳವೆಬಾವಿಗಳನ್ನು ಕೊರೆಸುತ್ತಿದ್ದಾರೆ.

ಪ್ರತ್ಯಕ್ಷವಾಗಿ ಕಾಡನ್ನು ಬೆಳೆಸುವ ಯಂತ್ರಗಳೆಂದರೆ ವನ್ಯಪ್ರಾಣಿ-ಪಕ್ಷಿಗಳು. ಆಲದ-ಬೇಲದ, ಅತ್ತಿಯ, ಗೋಣಿಯ, ರಂಜಲ, ಸಂಪಿಗೆಯ, ಹೆಬ್ಬಲಸಿನ ಹೀಗೆ ಪ್ರತಿಯೊಂದು ಹಣ್ಣುಗಳನ್ನು ತಿಂದು, ಬೀಜಗಳನ್ನು ತಮ್ಮ ಉಚ್ಚಿಷ್ಟಗಳಿಂದ ಹೊರಹಾಕಿ, ಫಲಭರಿತ ಮಣ್ಣಿನಲ್ಲಿ ಬೀಜಗಳನ್ನು ಸೇರಿಸುವ ಕೆಲಸವನ್ನು ಮಾಡುತ್ತವೆ. ನಾವು ಮನುಷ್ಯರು ಯಾವುದೇ ಕಾಡು ಹಣ್ಣುಗಳನ್ನು ತಿನ್ನುವುದಿಲ್ಲ, ಒಂದೊಮ್ಮೆ ಅಪರೂಪಕ್ಕೆ ತಿಂದರೂ ಬೀಜವನ್ನು ನುಂಗುವುದಿಲ್ಲ, ಒಂದೊಮ್ಮೆ ನುಂಗಿದರೂ ಬೀಜ ಕಾಡಿಗೆ ಮತ್ತೆ ಸೇರುವುದಿಲ್ಲ. ಈ ಸಂಕೀರ್ಣ ಭೂಮಿಯಲ್ಲಿ ನಾವು ಹುಲುಮಾನವರಷ್ಟೆ. ನಮ್ಮಿಂದ ಪ್ರಕೃತಿಗೆ ಹುಲ್ಲುಗರಿಕೆಯಷ್ಟೂ ಪ್ರಯೋಜನವಿಲ್ಲ. ಬದಲಾಗಿ ಜಗತ್ತಿನ ಬಹುಪಾಲು ಮನುಷ್ಯರ ನಡುವಳಿಕೆಯೂ ಹಿರೋಷಿಮಾ-ನಾಗಾಸಾಕಿಗೆ ಹಾಕಿದ ಅಣುಬಾಂಬಿನಷ್ಟೆ ಅಪಾಯಕಾರಿಯಾಗಿ ಪರಿಣಮಿಸಿದೆ.

ನಿಸರ್ಗವನ್ನು ಬಗ್ಗಿಸಿ ತಾನು ಮೆರೆಯಬಲ್ಲೆ ಎಂಬುದು ಮನುಜನ ಹುಂಬತನದ ಪರಮಾವಧಿ. ಇತಿಹಾಸದ ಬಹಳಷ್ಟು ಘಟನೆಗಳು ಇದಕ್ಕೆ ಪುಷ್ಟಿ ನೀಡುತ್ತವೆ. ಕಾಡುಗಳು ಮತ್ತು ಕಾಡುಪ್ರಾಣಿಗಳ ಸೇವೆಯನ್ನು ಆಧುನಿಕ ಯಂತ್ರಗಳು ಮಾಡಲಾರವು. ಜನಸಾಮಾನ್ಯರೂ ಪರಿಸರ ಸಂರಕ್ಷಣೆ, ಹವಾಮಾನ ವೈಪರೀತ್ಯ ಇತ್ಯಾದಿಗಳನ್ನು ಗಂಭೀರವಾಗಿ ಪರಿಗಣಿಸಿಲ್ಲ. ಎಲ್ಲರಿಗೂ ಹೊಸ-ಹೊಸ ಯಂತ್ರಗಳು ಬೇಕು. ತರಕಾರಿಗಳನ್ನು ಸುಂದರವಾಗಿ ಹೆಚ್ಚಲು ಕಿಚನ್ ಮೇಕರ್‌ಗಳು ಬಂದಿವೆ. ಬಟ್ಟೆ, ಪಾತ್ರೆ ತೊಳೆಯಲು ಯಂತ್ರ, ತೊಳೆದ ಬಟ್ಟೆಯನ್ನು ಒಣಗಿಸಲು ಯಂತ್ರ, ಮತ್ತೆ ಗರಿ-ಗರಿಯಾದ ಇಸ್ತ್ರಿಗೂ ಯಂತ್ರ. ಹೀಗೆ ಪ್ರತಿಯೊಂದಕ್ಕೂ ಯಂತ್ರವನ್ನು ಅವಲಂಬಿಸುತ್ತಾ ಹೋದರೆ, ಯಂತ್ರದ ಹೊಟ್ಟೆ ತುಂಬುವ ಬಗೆಯಂತು. ಎಲ್ಲಾ ಸರಿ, ಕಚೇರಿಗೆ ಕಾರಿನಲ್ಲಿ ಹೋಗಿ, ಬೊಜ್ಜು ಕರಗಿಸಲು ಟ್ರೆಡ್‌ಮಿಲ್ ಬಳಸುತ್ತಾ ಇದ್ದರೆ ಸುಖವಾದ ಸಮಾಜ ನಿರ್ಮಾಣ ಸಾಧ್ಯವೆ? ಇದೊಂದು ರೀತಿಯ ಸಾಮಾಜಿಕ ಮಾಲಿನ್ಯವಲ್ಲವೇ? ಗೌತಮ ಬುದ್ಧ ಹೇಳಿದ ಹಾಗೆ ಆಸೆಯೇ ದು:ಖಕ್ಕೆ ಮೂಲ ಹಾಗಂತ ಎಲ್ಲರೂ ಬುದ್ಧರಾಗಿ ಬದುಕಿರಿ ಎಂಬುದು ಸಾಧ್ಯವಿಲ್ಲದ ಮಾತು. ಆದರೆ ಇದೇ ಮಾತನ್ನು ಸ್ವಲ್ಪ ತಿದ್ದಿ ಹೀಗೆ ಹೇಳಬಹುದು ದುರಾಸೆಯೇ ಎಲ್ಲರ ದು:ಖಕ್ಕೆ ಮೂಲ. 

******

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
prashasti
9 years ago

ಚೆನ್ನಾಗಿದ್ದು ಅಖ್ಖಿ ಭಾಯ್.. ನಿಮ್ಮದು ವ್ಯರ್ಥ ಪ್ರಲಾಪವಲ್ಲ. ಅದು ಪ್ರಕೃತಿಯ ಕೂಗು ನಿಮ್ಮ ಬಾಯಲ್ಲಿ ಮಾತುಗಳಂತೆ , ಬರಹವಾದಂತೆ ಅನಿಸುತ್ತಿದೆ. ಇನ್ನೂ ಎಚ್ಚೆತ್ತುಕೊಳ್ಳದಿದ್ದರೆ ವಿನಾಶ ಸದ್ಯದಲ್ಲೇ.. 🙁

1
0
Would love your thoughts, please comment.x
()
x