ಕಾವ್ಯಧಾರೆ

ಚುಟುಕಗಳು: ನವೀನ್ ಮಧುಗಿರಿ, ನಗೆಮಲ್ಲಿಗೆ

ಕಿರು ಕವಿತೆಗಳು
——————

ಅಪ್ಪನ ನೇಗಿಲ ಕಾವ್ಯಕೆ
ಹೊಟ್ಟೆ ತುಂಬಿದವರ
ತೇಗುಗಳೇ
ಪ್ರಶಸ್ತಿ , ಪುರಸ್ಕಾರ

ತಟ್ಟೆಯಲಿ ಬಿಟ್ಟ,
ತಿಪ್ಪೆಗೆ ಚೆಲ್ಲಿದ ಅನ್ನ
ಅಪ್ಪನ ಬೆವರಿಗೆ
ನೀವು ಮಾಡಿದ ಅವಮಾನ


ಮೊನ್ನೆ
ಮಹಾನ್ ದೈವಭಕ್ತ ಸಿದ್ರಾಮ
ದೇವರಿಗೆ ಕೈ ಮುಗಿದು
ಕಾಣಿಕೆ ಸಲ್ಲಿಸಿ
ದೇವಸ್ಥಾನದಿಂದ ಹೊರ ಬರುವಷ್ಟರಲ್ಲಿ
ಅವನ ಚಪ್ಪಲಿ ಕಳುವಾಗಿದ್ದವು!


ರೈತನ ಬೆವರ ಹನಿ
ಹೊಳೆದಿದೆ
ಎಳೆ ಬಿಸಿಲಿಗೆ
ಪೈರಿನ ನೆತ್ತಿಯ ಮೇಲೆ
ತೆನೆ

ಒಂದಷ್ಟು ಪ್ರೀತಿ
ಮಣ್ಣಾದ ಮೇಲೆ
ಈ ಭೂಮಿಯಲ್ಲಿ
ಹಲವು
ಹೊಸ ಪ್ರೇಮಕಥೆಗಳು
ಹುಟ್ಟಿ – ಬೆಳೆದವು

ಚಳಿಯಿಂದ ನಡುಗುವ
ಹೂವು
ತಂಗಾಳಿಯನ್ನೇ
ಧ್ಯಾನಿಸುವುದು
ಕುರುಡು ಪ್ರೇಮ

ಕಾಲು ಜಾರಿಬಿದ್ದ
ಚಂದಿರ
ನಮ್ಮೂರ ಕೆರೆಯಲ್ಲಿ
ತೇಲುವಾಗ
ನೋಡಿದ ಅಪ್ಪ ಹೇಳಿದ್ದು –
'ನಾಳೆ,  ಇಲ್ಲ ನಾಡಿದ್ದೋ
ಪೌರ್ಣಮಿ'

ಉದುರಿ ಬಿತ್ತು 
ಹಣ್ಣೆಲೆ
ಚಿಗುರಿನ ಮೇಲೆ
ಚಿಟ್ಟೆ

ಬಸಿರು ಮೋಡಕ್ಕೆ
ಹೆರಿಗೆಯಾಯ್ತೋ, 
ಗರ್ಭಪಾತವೋ?
ಗೊತ್ತಿಲ್ಲ.
ಅಂತೂ ನಮ್ಮೂರಿಗೆ
ಮಳೆ ಬಂತು.

ಅವಳಿದ್ದರೆ
ಈ ಕಾಗದದ ಹೂವಿನಲ್ಲೂ
ಪರಿಮಳ
ಇದು ವಿಸ್ಮಯ
ಅಥವಾ
ನನ್ನ ಭ್ರಮೆ

ಪಾಪವೆಲ್ಲ ಕಳೆಯಿತೆಂದು
ಭ್ರಮೆಯಲ್ಲಿ
ಮುಳುಗೆದ್ದವನ
ಜಾತಿಯನ್ನೂ ತೊಳೆಯಲಿಲ್ಲ
ಹರಿವ ನದಿ

ಬೆತ್ತಲಾಗಿ
ನಾವಿಬ್ಬರೂ
ಶೀಲವನ್ನ ಹುಡುಕಿದೆವು
ಸುಖ
ಸಿಕ್ಕಿತು

ಚಿಗುರುಗಳ ನಡುವೆ
ಕೋಗಿಲೆಯ
ಕುಹು ಕುಹು
ಬೀಳುವಾಗ ಹಣ್ಣೆಲೆ
ಬೀಸೊ ಗಾಳಿಯ ಕೈ ಹಿಡಿದು
ನರ್ತಿಸಿತು

—-

– ನವೀನ್ ಮಧುಗಿರಿ

ಚಂದಿರ

೧. ಕೊಳಕ್ಕೆ 
ಎಸೆದ ಕಲ್ಲುಗಳು 
ಈಜುತಿದ್ದ ಚಂದಿರನ 
ಏಕಾಂತವನ್ನು 
ಭಗ್ನಗೊಳಿಸಿದೆ 


೨. ಒಡೆದ ಕನ್ನಡಿ; 
ಬೇಲಿ ಅಂಚಲ್ಲಿ
ಚಂದಿರ ಚೂರಾಗಿ 
ಬಿದ್ದಿಹನು  

೩. ರಾತ್ರಿ ಬೆನ್ನ ಹಿಂದೆ
ಬಿದ್ದ ಚಂದಿರ
ಅಪ್ಪನ ಕರೆದ ತಕ್ಷಣ
ಬೆಟ್ಟದ ಹಿಂದೆ 
ಅಡಗಿ ಕುಳಿತ

೪. ಕೊಡಕ್ಕೆ ಹಗ್ಗ ಕಟ್ಟಿ
ಕೆಳಗಿಳಿಸಿ, 
ಮೇಲೆತ್ತಬೇಕು;
ಬಾವಿಗೆ ಬಿದ್ದ
ಚಂದಿರನ
ಬದುಕಿಸಲು.

೫. ಚಳಿಯ ಹೊಡೆತಕ್ಕೆ
ಚಂದ್ರನು ಮೋಡದ
ಹೊದಿಕೆಯಲಿ 
ಅವಿತು ಕುಳಿತಿದ್ದಾನೆ

೬. ಹಸಿದ ಹೊಟ್ಟೆ ಈಗ 
ಚಂದ್ರನನ್ನೇ 
ಮುರಿದು ತಿನ್ನು 
ಎನ್ನುತಿದೆ 

 ೭. ಅಂದಕ್ಕೆ ಸೋತು 
ಮೀನುಗಳು ಬಿಡದೆ 
ಮುತ್ತಿಡುತಿವೆ 
ಚಂದಿರ ಬಿಂಬಕ್ಕೆ 

-ನಗೆಮಲ್ಲಿಗೆ 

 

 

ಕನ್ನಡದ ಬರಹಗಳನ್ನು ಹಂಚಿ ಹರಡಿ

2 thoughts on “ಚುಟುಕಗಳು: ನವೀನ್ ಮಧುಗಿರಿ, ನಗೆಮಲ್ಲಿಗೆ

  1. ಇಬ್ಬರ ಹನಿಗೂ ತುಬಾ ಚೆನ್ನಾಗಿವೆ.. 🙂 ಅಿನಂದನೆಗಳು..

  2. ಇಬ್ಬರ ಹನಿಗಳೂ ತುಂಬಾ ಚೆನ್ನಾಗಿವೆ… ಅಿನಂದನೆಗಳು…

Leave a Reply

Your email address will not be published. Required fields are marked *