ಅಮರವಾಗಲಿ ನಮ್ಮ ಚೆಲುವ ಕನ್ನಡ ನುಡಿಯು: ಹೊರಾ.ಪರಮೇಶ್ ಹೊಡೇನೂರು

"ಜೇನಿನ ಹೊಳೆಯೋ ಹಾಲಿನ ಮಳೆಯೋ
 ಸುಧೆಯೋ ಕನ್ನಡ ಸವಿ ನುಡಿಯೋ….
 ವಾಣಿಯ ವೀಣೆಯೊ ಸ್ವರ ಮಾಧುರ್ಯವೋ
 ಸುಮಧುರ ಸುಂದರ ನುಡಿಯೋ….ಆಹಾ!"
       
ಎಂಬ ಗೀತೆಯು ನಮ್ಮ ಕರುನಾಡಿನ ಕನ್ನಡಿಗರ ಎದೆಯಾಳದಲ್ಲಿ ಸದಾ ರಿಂಗಣಿಸುತ್ತಲೇ ಇರುತ್ತದೆ. ಕನ್ನಡದ ಮೇರು ನಟ ಡಾ.ರಾಜ್ ಕುಮಾರ್ ರವರ ಅಮೃತ ಕಂಠಸಿರಿಯಲ್ಲಿ ಅಜರಾಮರವಾಗಿರುವ ಈ ಗೀತೆಯು ಚಲನಚಿತ್ರಕ್ಕಾಗಿ ರಚಿಸಲ್ಪಟ್ಟರೂ ನಮ್ಮ "ಸವಿಗನ್ನಡ"ದ ಹಿರಿಮೆ-ಗರಿಮೆಗಳನ್ನು ಬಿಂಬಿಸುವಲ್ಲಿ ಯಶಸ್ವಿಯಾಗಿ ಕನ್ನಡ ಭಾಷಾ ಚಳುವಳಿಯಲ್ಲಿ ಪ್ರಮುಖವಾದ ಕನ್ನಡಪರ ಕಾಳಜಿಯ ಸಂದೇಶಗೀತೆಯಾಗಿದ್ದು ಇತಿಹಾಸದ ಪುಟ ಸೇರಿ ದಶಕಗಳೇ ಕಳೆದಿವೆ.

ಆ ಕಾಲ, ಸನ್ನಿವೇಶಕ್ಕೆ ಇದೇ ಕನ್ನಡದ ಕಹಳೆಯೂ ನಾಡಿನ ಮೂಲೆ ಮೂಲೆಗೂ ಪಸರಿಸಿ, ಜನಸಾಮಾನ್ಯರಿಗೂ ಕನ್ನಡ ಪ್ರಜ್ಞೆಯನ್ನು ಬಡಿದ್ದೆಬ್ಬಿಸಿ ಜಾಗೃತಿ ಉಂಟು ಮಾಡಿತ್ತು. ಆ ಮೂಲಕ "ಗೋಕಾಕ್" ಚಳುವಳಿಯೂ ಅಭೂತಪೂರ್ವವಾಗಿ ಯಶಸ್ಸು ಕಂಡು, ಪ್ರೌಢ ಶಾಲೆಯ ಹಂತದವರೆಗೂ ಕನ್ನಡ ಮಾಧ್ಯಮ ಕಲಿಕೆಯೂ ಕಡ್ಡಾಯವಾಗಿತ್ತು. ಆಗಿನಿಂದ ಈಗಿನವರೆಗೂ ಆಗಿ ಹೋಗಿರುವ ಮೂರು ದಶಕಗಳಿಗೂ ಮೀರಿದ ಕಾಲಘಟ್ಟದಲ್ಲಿ ನಮ್ಮ ಕನ್ನಡ ಭಾಷೆಯ ಸ್ಥಿತಿ-ಗತಿಯಲ್ಲಿ ಆತಂಕಕಾರಿ ಬದಲಾವಣೆಗಳು ಎಗ್ಗಿಲ್ಲದೆ ನುಗ್ಗಿ ಸಾಗುತ್ತಿವೆ. "ಕನ್ನಡ ಮಾಧ್ಯಮದ ಶಿಕ್ಷಣ ಕಡ್ಡಾಯವೇನಲ್ಲ" ಎಂಬ ನ್ಯಾಯಾಲಯದ ತೀರ್ಮಾನದಿಂದ ಕನ್ನಡದ ಸ್ಥಿತಿಯು ಮತ್ತಷ್ಟು ವಿಚಲಿತಗೊಳ್ಳುವ ಆತಂಕದ ಸ್ಥಿತಿ ಇತ್ತೀಚೆಗೆ ಹೆಚ್ಚಾಗುತ್ತಿದೆ.

ಪಂಚ ದ್ರಾವಿಡ ಭಾಷೆಗಳಲ್ಲಿ ಪ್ರಮುಖವಾದ ಕನ್ನಡ ಭಾಷೆ ಸಾಹಿತ್ಯ ಕೃಷಿ ಸಮೃದ್ಧವಾಗಿ ನಡೆದಿದ್ದು, ಅದೇ ಪರಂಪರೆಯು ಮುಂದುವರೆದಿದ್ದರೂ, ಸಹ ಕನ್ನಡ ಭಾಷಿಕರು ಅಲ್ಪ ಸಂಖ್ಯಾತರಾಗುತ್ತಿರುವ ವಿಲಕ್ಷಣಕಾರಿ ಬೆಳವಣಿಗೆಯು ನೈಜ ಕನ್ನಡಾಭಿಮಾನಿಗಳನ್ನು ಚಿಂತೆಗೀಡಾಗುವಂತೆ ಮಾಡಿದೆ."ಕನ್ನಡ ಭಾಷೆಯ ಉಳಿವು" ಎಂದರೆ, ಬರಿ ಸಾಹಿತಿಗಳ, ಕನ್ನಡ ಚಿಂತಕರ, ಕನ್ನಡ ಪರ ಸಂಘಟನೆಗಳ, ಕನ್ನಡ ಸಾಹಿತ್ಯ ಪರಿಷತ್ತಿನ, ಕನ್ನಡ ಕಾವಲು ಸಮಿತಿಯ, ಕನ್ನಡ  ಪುಸ್ತಕ ಪ್ರಾಧಿಕಾರದ ಕರ್ತವ್ಯವೇನೋ ಎಂಬಂತಹ ಧೋರಣೆ ಜನ ಮಾನಸದಲ್ಲಿ ಬೇರೂರಿದೆ. ವಾಸ್ತವವಾಗಿ, "ಕನ್ನಡದಲ್ಲಿಯೇ ಮಾತನಾಡುವ ಪ್ರತಿಯೊಬ್ಬನೂ ಕನ್ನಡ ಭಾಷೆಯನ್ನು ಉಳಿಸುತ್ತಾನೆ, ಬೆಳಸುತ್ತಾನೆ" ಎಂಬ ಸರಳ ಸತ್ಯವನ್ನು ಹಗುರವೆಂದು ಭಾವಿಸುವಂತಿಲ್ಲ. ಆದರೆ ವಿಪರ್ಯಾಸವೆಂಬಂತೆ ಕನ್ನಡ ಭಾಷೆಯ ಅಭಿಮಾನವುಳ್ಳ ಚಿಂತಕರೇ ತಮ್ಮ ಮಕ್ಕಳನ್ನು ಇಂಗ್ಲೀಷ್ ಮಾಧ್ಯಮ ಶಾಲೆಗಳಲ್ಲಿ ವ್ಯಾಸಂಗ ಮಾಡಿಸುವ ವಿಲಕ್ಷಣ ಸ್ಥಿತಿಯೂ ಪ್ರಚಲಿತದಲ್ಲಿ ಸಾಮಾನ್ಯವಾಗಿದೆ. ಏಕೆಂದರೆ, ಬ್ರಿಟೀಷರು ನಮ್ಮನ್ನು ಬಿಟ್ಟು ಹೋಗಿ ಏಳು ದಶಕಗಳು ಪೂರೈಸಲ್ಪಡುತ್ತಿದ್ದರೂ, ಅವರು ನಮ್ಮ ದೇಶದಲ್ಲಿ ಬಿತ್ತಿ ಹೋದ ಇಂಗ್ಲೀಷ್ ಎಂಬ 26 ಅಕ್ಷರಗಳ ಬೀಜಗಳು ಸೇರಿ ಬೆಳೆದ ಬೆಳೆಯೂ ಪಾರ್ಥೆನಿಯಂನಂತೆ ಸರ್ವವ್ಯಾಪಿಯಾಗಿ ಆವರಿಸಿಕೊಂಡಿದ್ದು, ಇದರ ವ್ಯಾಪಕತೆಯ ವೇಗದಲ್ಲಿ "ಕನ್ನಡ ಭಾಷೆ"ಯೆಂಬ ಈ ನೆಲದ ಕಲ್ಪತರು ಕಳಾಹೀನವಾಗಿ, ತಾನು ವಿಸ್ತರಿಸುವಲ್ಲಿ ಸೊರಗುತ್ತಿದೆ. ಗಂಧದ ಗುಡಿಯಲ್ಲಿ ಶ್ರೀಗಂಧದ ವೃಕ್ಷಗಳು ತಮ್ಮ ಅಸ್ಥಿತ್ವ ಕಳೆದುಕೊಳ್ಳುತ್ತಿರುವಂತೆ ಕನ್ನಡನಾಡಿನಲ್ಲಿಯೇ ಕನ್ನಡ ಮಾತಾಡುವವರು ಕಡಿಮೆಯಾಗುತ್ತಿರುವುದು ವಿಪರ್ಯಾಸವೇ ಸರಿ.

ಭಾಷಾಸಾಹಿತ್ಯದಲ್ಲಿ ಅಷ್ಟ ಜ್ಞಾನ ಪೀಠ ಗೌರವದ ಗರಿಗಳಿದ್ದರೂ ಕನ್ನಡ ನುಡಿಗೆ ನಿರಭಿಮಾನದ ಕಾರ್ಮೋಡ ಕವಿಯುತ್ತಿರುವಂತೆ ಭಾಸವಾಗುತ್ತಿದೆ.
ಇಂಗ್ಲೀಷ್ ಭಾಷೆ ಸಿದ್ಧಿಸಿದರಷ್ಟೇ ಒಳ್ಳೆಯ ನೌಕರಿ ಸಿಗಲು ಸಾಧ್ಯವೆಂಬ ಮನೋಧೋರಣೆ ಸದೃಢವಾಗುತ್ತಿವೆ. ಒಂದ ರೀತಿಯಲ್ಲಿ ನಿಜವೇ ಆಗಿರುವುದನ್ನು ಒಪ್ಪಿಕೊಳ್ಳಲೇ ಬೇಕಾದ ಅನಿವಾರ್ಯ ಪರಿಸ್ಥಿತಿಯೂ ಇದೆ. ಏಕೆಂದರೆ, ವಿಜ್ಞಾನ, ವೈದ್ಯಕೀಯ, ತಂತ್ರಜ್ಞಾನ, ಮಾಧ್ಯಮ ಕ್ಷೇತ್ರಗಳೂ ಸೇರಿದಂತೆ ಹಲವಾರು ಸೇವಾ ಕ್ಷೇತ್ರಗಳನ್ನು ಇಂಗ್ಲೀಷ್ ತನ್ನ ಕಬಂಧ ಬಾಹುಗಳಿಂದ ಬಿಗಿಯಾಗಿ ಅಪ್ಪಿಕೊಂಡಿದೆ ಹಾಗಾಗಿಯೇ ಭಾಷಾಭಿಮಾನ ಮಿಡಿಯುವ ಮನಸ್ಸುಗಳೂ ತಮ್ಮ ಹಾಗೂ ತಮ್ಮವರ ಭವಿಷ್ಯ ಮತ್ತು ಸಾಧನೆಯ ದೃಷ್ಟಿಯಿಂದ ಒಲ್ಲದ ಮನಸ್ಸಿನಲ್ಲಿಯೇ ಇಂಗ್ಲೀಷ್ ಕಡೆಗೆ ವಾಲುತ್ತಿರುವುದು ಸಹಜವೇ ಆಗಿದ್ದರೂ, ಇದರಿಂದ ನಮ್ಮ ಕನ್ನಡ ಭಾಷಾ ಪ್ರಗತಿಯ ವೇಗಕ್ಕೆ ಅಡ್ಡಿಯುಂಟಾಗಿರುವುದು ಸುಳ್ಳಲ್ಲ.

ಭಾಷೆಯನ್ನು ಬಾಧಿಸುತ್ತಿರುವ ಇತರೆ ಅಂಶಗಳು : 

* ನಮ್ಮ ಕನ್ನಡ ಭಾಷೆಯ ಕಲಿಕೆಗೆ ಮುಖ್ಯವೇದಿಕೆಯಾಗಿದ್ದ  ಶಾಲಾ-ಕಾಲೇಜುಗಳಲ್ಲಿ ಇಂದು ಆಂಗ್ಲ ಮಾಧ್ಯಮ ಅಳವಡಿಕೆಯು ಕನ್ನಡಕ್ಕೆ ಕಂಟಕ ಪ್ರಾಯವಾಗಿದೆ. ಅಲ್ಲದೆ, ಇಂಗ್ಲೀಷ್ ಭಾಷಾ ಮಾಧ್ಯಮ ಶಾಲೆಗಳಲ್ಲಿ ಕನ್ನಡದಲ್ಲಿ ಮಾತನಾಡುವ ಮಕ್ಕಳಿಗೆ ದಂಡಿಸುವ, ದಂಡ ಹಾಕುವ ಮತ್ತು ಹೀಯಾಳಿಸುವ ವಿಕೃತ ಸಂಪ್ರದಾಯವೂ ವ್ಯಾಪಕವಾಗುತ್ತಿದೆ.ಇಂತಹ ಹೀನ ರೀತಿಯ ನಡವಳಿಕೆಗೆ ಕಡಿವಾಣ ಹಾಕುವ ಪ್ರಯತ್ನಗಳು ಕನ್ನಡ ಪರ ಸಂಘಟನೆಗಳ ಮೂಲಕ ನಡೆಯುತ್ತಿದ್ದರೂ, "ನರಿಯ ಕೂಗು ಗಿರಿಗೆ ಕೇಳಿಸುತ್ತದೆಯೇ?" ಎಂಬ ಗಾದೆ ಮಾತಿನಂತಾಗಿದೆ.

* ವಿವಿಧ ಉದ್ದೇಶಗಳಿಗಾಗಿ ನಮ್ಮ ರಾಜ್ಯದ ನಾನಾ ನಗರ, ಪಟ್ಟಣಗಳಿಗೆ ವಲಸೆ ಬಂದು, ಕಾಲಾನುಕ್ರಮದಲ್ಲಿ ಇಲ್ಲಿಯೇ ತಮ್ಮ 'ಝಂಡಾ' ಊರುವ ಅನ್ಯಭಾಷಿಗರೂ ತಮ್ಮ ಮೂಲ ಭಾಷೆಯನ್ನೇ ಹೆಚ್ಚಾಗಿ ಬಳಸುತ್ತಾ, ತಮ್ಮ ನೆರೆ ಹೊರೆಯವರಲ್ಲಿಯೂ ಬಿತ್ತಿ ಬೆಳೆಸುತ್ತಾ ಮೂಲ ಕನ್ನಡಿಗ ಬಾಂಧವರನ್ನು ತಮ್ಮ ಭಾಷಾ ಬಳಕೆದಾರರನ್ನಾಗಿ ಮಾಡುತ್ತಿರುವುದು ಅತ್ಯಂತ ಶೋಚನೀಯ ಸ್ಥಿತಿಯಾಗಿದೆ.

* ರೇಡಿಯೋ, ದೂರದರ್ಶನ ಮಾಧ್ಯಮಗಳಲ್ಲಿಯಂತೂ ಕನ್ನಡ ಕಾರ್ಯಕ್ರಮದೊಳು ಆಂಗ್ಲ ಪದಗಳೋ ಆಂಗ್ಲ ಪದಗಳಿಂದ ಕನ್ನಡ ಕಾರ್ಯಕ್ರಮವೋ (ಬಯಲು ಆಲಯದೊಳಗೋ ಆಲಯವು ಬಯಲೊಳಗೋ-ಎಂಬ ದಾಸವಾಣಿಯಂತೆ ) ಎಂದು ಭಾವೋತ್ಪತ್ತಿ ಮಾಡುವಂತಿದೆ. ಅದರಲ್ಲೂ ಇತ್ತೀಚೆಗೆ ನಗರಗಳಲ್ಲಿ ನಾಯಿ ಕೊಡೆಗಳಂತೆ ತಲೆ ಎತ್ತಿರುವ ಖಾಸಗಿ ಎಫ್.ಎಂ.ವಾಹಿನಿಗಳು ಬಳಸುವ ಕನ್ನಡ-ಇಂಗ್ಲೀಷ್ ಮಿಶ್ರಿತ ನಿರೂಪಣೆ, ಕಾರ್ಯಕ್ರಮಗಳು ಕನ್ನಡ ಪ್ರೀತಿಸುವವರಿಗೆ ಹುಚ್ಚು ಹಿಡಿಸಿ ಭ್ರಮ ನಿರಸನ ಉಂಟು ಮಾಡುತ್ತಿವೆ. ಇಂಥ ಕಂಗ್ಲೀಷ್ ಭಾಷಾ ಪ್ರಯೋಗವು ದೃಶ್ಯ ಮಾಧ್ಯಮ ಹಾಗೂ ಮುದ್ರಣ ಮಾಧ್ಯಮಗಳನ್ನೂ ಬಿಟ್ಟಿಲ್ಲ. ಇವುಗಳ ಫಲಾನುಭವ ಪಡೆಯುವ 'ಕನ್ನಡಿಗ' ನಲ್ಲಿ ಕನ್ನಡ ಭಾಷಾ ಪ್ರೇಮ-ಅಭಿಮಾನ ಉಳಿಯುವುದೇ ಅನುಮಾನವಾಗಿದೆ.

* "ಹೆಸರಾಯಿತು ಕರ್ನಾಟಕ ; ಉಸಿರಾಗಲಿ ಕನ್ನಡ" ಎಂಬ ಕವಿಯ ಆಶಯ ತುರ್ತು ಚಿಕಿತ್ಸಾ ಘಟಕದಲ್ಲಿ ಇರುವಂತೆ ಭಾಸವಾಗುತ್ತಿರುವುದು ವಿಪರ್ಯಾಸವಾಗಿದೆ. ಬೆಳಗಾವಿಯ ಗಡಿಭಾಗದ ಪ್ರದೇಶದಲ್ಲಿ ಮರಾಠಿಗರ ಅಟ್ಟಹಾಸ, ಹೈದ್ರಾಬಾದ್ ಕರ್ನಾಟಕ ಗಡಿ ಪ್ರದೇಶಗಳಲ್ಲಿ ಹಿಂದಿ, ಉರ್ದು, ತೆಲುಗು ಭಾಷಿಗರ ಪ್ರಭಾವ, ದಕ್ಷಿಣ ಕರ್ನಾಟಕದ ಇಕ್ಕೆಲಗಳಲ್ಲಿ ಮಲಯಾಳಂ ಮತ್ತು ತಮಿಳು ಭಾಷಿಕರ ಆಟಾಟೋಪಗಳಿಂದ ನಿಜಕ್ಕೂ ಕನ್ನಡ ತಾಯಿ ಭುವನೇಶ್ವರಿಯ ಚೆಂದದ ವದನಾರವಿಂದದಲ್ಲಿ ಕಪ್ಪು ಮಸಿಯು ತುಂಬಿಕೊಳ್ಳುತ್ತಿದೆ.

* ಚಲನ ಚಿತ್ರಗಳಲ್ಲಿ ಇತ್ತೀಚೆಗೆ ಜನಪ್ರಿಯವಾಗುತ್ತಿರುವ ಬಹುತೇಕ ಹಾಡುಗಳು ಇಂಗ್ಲೀಷ್ ಹಾಗೂ ಇತರೆ ಭಾಷೆಯ ಶಬ್ದಗಳಿಂದಲೇ ಪೋಣಿಸಲ್ಪಡುತ್ತಿರುವುದಂತೂ ಕರ್ಣ ಕಠೋರ, ಹಾಗೂ ಖಾಲಿಯಾಗುತ್ತಿದೆಯೇ ಕನ್ನಡ ಶಬ್ದ ಭಂಡಾರ ಎಂಬ ಅನುಮಾನ ಮೂಡಿಸುತ್ತದೆ. ಆಶ್ಚರ್ಯವೆಂದರೆ, ನಮ್ಮ ಜನರೂ ಅಂತಹ ಕಲಬೆರಕೆ ಹಾಡುಗಳನ್ನೇ ಇಷ್ಟಪಡುತ್ತಿರುವುದು ಜನರ ಅಭಿರುಚಿಯು ಎಷ್ಟು ಕೀಳು ಮಟ್ಟಕ್ಕೆ ಇಳಿದಿದೆ ಎಂಬುದನ್ನು ಶ್ರುತಪಡಿಸುತ್ತದೆ.

 "ಕನ್ನಡ ರಾಜ್ಯೋತ್ಸವ ನಿತ್ಯೋತ್ಸವವಾಗಲಿ !" 

ಸುಮಾರು ಎರಡು ಸಾವಿರ ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ನಮ್ಮ ಕನ್ನಡ ಭಾಷೆಯು ಅಮರವಾಗಬೇಕಾದರೆ, ಕನ್ನಡ ರಾಜ್ಯೋತ್ಸವ ನವೆಂಬರ್ ತಿಂಗಳಿಗೆ ಮಾತ್ರ ಸೀಮಿತವಾಗಬಾರದು. ಅದು ಕನ್ನಡಿಗರೆಲ್ಲರ ಮನೆ-ಮನದಲ್ಲಿಯೂ ನಿತ್ಯ ಬಳಕೆಯ ಮೂಲಕ "ನಿತ್ಯೋತ್ಸವ"ವಾಗಬೇಕು. ಔದ್ಯೋಗಿಕ ಕ್ಷೇತ್ರಗಳ ಅಗತ್ಯ ಮತ್ತು ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ಇಂಗ್ಲೀಷ್ ಬಳಕೆ ಮಾಡಿಕೊಂಡು, ಉಳಿದಂತೆ ಹೆಚ್ಚಾಗಿ ಕನ್ನಡದಲ್ಲಿಯೇ ವ್ಯವಹರಿಸುವ ಮನೋಭಾವವನ್ನು ಎಲ್ಲರೂ ರೂಢಿಸಿಕೊಳ್ಳಬೇಕು. ಶಿಕ್ಷಣ ಮಾಧ್ಯಮವಾಗಿ ಕನಿಷ್ಠ ಪ್ರಾಥಮಿಕ  ಹಂತದವರೆಗಾದರೂ ಕನ್ನಡ ಅಳವಡಿಕೆಗೆ ಪ್ರೋತ್ಸಾಹ ಮತ್ತು ಅವಕಾಶ ಸಿಗಬೇಕು. ಕನ್ನಡ ಚಿಂತಕರು, ಸಾಹಿತಿಗಳು, ಕನ್ನಡ ಪರ ಸಂಘ ಸಂಸ್ಥೆಗಳು ಮತ್ತಷ್ಟು ಕ್ರಿಯಾಶೀಲರಾಗುವ ಮೂಲಕ ಕನ್ನಡ ಭಾಷಾ ಚಟುವಟಿಕೆಗಳನ್ನು ಕೈಗೊಂಡು ನಿರಂತರವಾಗಿ ಭುವನೇಶ್ವರಿಯ ದೇಗುಲಕ್ಕೆ ಕಾಯಕಲ್ಪ ಮಾಡಬೇಕು.

"ಸಿರಿಗನ್ನಡಂ ಗೆಲ್ಗೆ; ಸಿರಿಗನ್ನಡಂ ಬಾಳ್ಗೆ"

——————————
 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x