ಚುಟುಕ

ಚುಟುಕಗಳು: ಗುರುಪ್ರಸಾದ ಹೆಗಡೆ


೧) ಪಾರು 

ಕೈ- ಕೊಟ್ಟಳು ಹುಡುಗಿ 

ಕಂಗೆಟ್ಟ  ಹುಡುಗ, 

ಅಯ್ಯೋ ಎಲ್ಲ ಮುಗಿದೇ 

ಹೋಯಿತೆಂದರು ಜನ.

– ಹುಡುಗ ಬಚಾವಾಗಿದ್ದ! 

 

೨) ಜೀವ 

ಅಕ್ವೆರಿಯಮ್ಮಿನಿಂದ

ಚಿಮ್ಮಿದ  ಮೀನು –

ಹೊರಗೆ ಏನು ಇಲ್ಲವೆಂಬ 

ಸತ್ಯವ ಅರಿತು

ಮತ್ತೆ ನೀರಿಗೆ ಹಾರಿತು. 

 

೩) ಸೌಂದರ್ಯ ಪ್ರಜ್ಞೆ 

ಬ್ಯೂಟಿ – ಪಾರ್ಲರಿನಿಂದ  

ಬಂದ ಬೆಡಗಿಯ 

ಕೈಯ ಹಿಡಿದು 

ಮೊಮ್ಮಗ 

ಮನೆಗೆ ಕರೆದೊಯ್ದ. 

 

೪) ಗಡಿಯಾರ 

ವರ್ಷಗಟ್ಟಲೆ ತಿರುಗಿತು 

ಗಡಿಯಾರದ ಮುಳ್ಳು,

ಎಷ್ಟು ಸುತ್ತಿದರೂ 

ತಲುಪಿದ್ದು ಮೊದಲಿದ್ದಲ್ಲಿಗೇ

ಎನಿಸಿರಬೇಕು, ಸ್ತಬ್ಧವಾಯಿತು!

 

೫) ಮದುವೆ 

ಕೋಪಗೊಂಡ ಮಗ ಕೇಳಿದ

"ಅಮ್ಮನ್ನ ಮದುವೆ ಯಾಕಾದೆ?"

ಅಪ್ಪನ ಸತ್ಯ ಹೊರಬಿತ್ತು;

"ಈಗ ಹಾಗೆ ಅನ್ನಿಸ್ತಿದೆ ಮಗು 

– ಯಾಕಾದ್ರೂ ಆದೆ"

 

೬) ಕಾರಣ 

ರಾತ್ರಿಯ ಕಣ್ಣು ಒಂದೇ ಸಮನೆ  

ಅಳುತ್ತಿತ್ತು; ನೀನಿಲ್ಲದೇ….?

ನೀಬಂದೆ, ಅಳು ನಿಂತದ್ದೂ ನಿಜ;

ಕಾರಣ ನೀನಲ್ಲಬಿಡು, 'ನೀರಿಲ್ಲದೇ'

 

೭) ಚಕೋರಿ 

ಮದುವೆಯಾದ ಹೊಸತರಲ್ಲಿ 

ಹೆಂಡ್ತಿ ಚಂದ್ರ ಚಕೋರಿ 

ಆಮೇಲೆ ಇಲ್ಲದಿದ್ರೂ ನಡೆಯತ್ತೆ 

ಕಾಫಿಯಲ್ಲಿ ಚಿಕೋರಿ. 

 

೮) ರಾತ್ರಿ

ಕತ್ತಲ ಚಾದರ 

ಹಾಸಿತು ಬಾನು.

ಜಗ ಜಂಜಡವೆಲ್ಲ

ಮರೆತು ಮೆಲ್ಲ

ಮಲುಗಿತು ಭುವಿ.

 

೯) ನೆನಪು

ಮಬ್ಬಿನ ಮುಂಜಾವಿಗೆ

ತಂಪೆರೆದು ತಬ್ಬಿದ

ಇಬ್ಬನಿಯ ದಿಬ್ಬಣದಂತೆ

ಚೆಲುವೆ ನಿನ್ನಯ ನೆನಪು

 

೧೦) ಅಸಹನೆ 

ಹಾಳು ಕವಿತೆಗಳು

ಹುಟ್ಟುವ ಸಮಯದಲ್ಲಿ

ನೀಡುವ ಯಾತನೆಗೆ

ನಾನು ಬೇಸರಗೊಂಡಿಲ್ಲ;

ಇಷ್ಟಕ್ಕೆಲ್ಲ ಕಾರಣವಾಗಿರುವ

ಹೃದಯದ ಮೇಲೆಯೇ

ನನಗೆ ಕೋಪವಿದೆ!   

  

೧೧) ನಿರೀಕ್ಷೆ 

ನೀನಿಲ್ಲದ ರಾತ್ರಿಗಳಲ್ಲಿ

ಒಬ್ಬನೇ ಕುಳಿತು

ಬರೆದ ಅದೆಷ್ಟೋ

ಕವಿತೆಗಳು,

ನನ್ನ ಸಮಯವನ್ನ 

ಹಾಳು ಮಾಡಿವೆ!

ಸುಮ್ಮನೆ ಬಂದುಬಿಡು.

 

೧೨) ಮುತ್ತು 

ಪಾರ್ಕಿನ ಬೆಂಚಿನ ಮೇಲೆ 

ಕುಳಿತು 'ಪ್ರಥಮ –

ಚುಂಬನವ' ಸವಿದೆವಲ್ಲ,

ಅದನ್ನ ಕದ್ದು ನೋಡಿದ್ದ

ಗುಲಾಬಿ ಗಿಡ   

ಹೂ – ಬಿಟ್ಟಿದೆ.      

 

೧೩) ವಿಷಾದ 

ಬಿದ್ದ ಮಳೆಹನಿಯೂ 

ಸದ್ದಿಲ್ಲದೆಯೇ –

ಕೊಚ್ಚಿ ಹೋಯಿತು

ನನ್ನ ಕಣ್ಣೀರಂತೆ.

 

೧೪) ಹೊಯ್ದಾಟ 

ಮೋಡ ಕವಿದ ದಿನವೂ 

ಮಳೆ ಬರಲಿಲ್ಲ, 

ಹುಡುಗಿ ಒಲಿದ ಕ್ಷಣವೂ 

ಪ್ರೀತಿ ಇರಲಿಲ್ಲ. 

 

೧೫) ಹುಣ್ಣಿಮೆ 

ಬೆಳಕಿನ ಸೀರೆಯ

ಉಟ್ಟ ಭುವಿಯ –

ಚಂದ್ರ ಚುಂಬಿಸಿದ 

ದಿನ 'ಹುಣ್ಣಿಮೆ'

 

೧೬) ನೋವು 

ಕುಂಚ ತಿರುವಿದ 

ಕೈ – ಮೂಡಿಸಿದ 

ಚಿತ್ರದ ಮುಖದಲ್ಲಿ  

ಭಾವನೆಗಳ ಬಣ್ಣ 

ಬಿಕ್ಕುತ್ತಿದೆ.  

  

೧೭) ತೀರ್ಪು 

ನ್ಯಾಯಾಧೀಶರು ಬರೆವ 

ತೀರ್ಪಿನ ಉದ್ದಕ್ಕೂ 

ವಿಧಿಸಬೇಕು ನಿರ್ಭಂದ 

ಇಲ್ಲದಿದ್ದರೆ ಬರೆಯುತ್ತಾರೆ 

ಪುಟಗಟ್ಟಲೆ ಪ್ರಬಂಧ  . 

 

೧೮) ಪ್ರೀತಿ ಮತ್ತು ಕಾಮ!

ಮದುವೆಗೂ ಮುಂಚೆ 

ಪ್ರೀತಿ – ಪ್ರೇಮಕ್ಕೆ 

ಬಗೆ ಬಗೆಯ ಆಯಾಮ 

ಅಮೇಲಿನದು ಏನಿದ್ದರೂ 

ಬರೀ ವ್ಯಾಯಾಮ!

 

೧೯) ಬದಲಾವಣೆ 

ಮದುವೆಗೂ ಮುಂಚೆ 

ಏನೇ ಕನವರಿಸಿದರೂ

ಅದು ಹಂಸಗೀತ,

ಆಮೇಲೆ ಕೊಂಚ ಕೊಸರಿದರೂ 

ನೆಮ್ಮದಿಯ ದ್ವಂಸಗೀತ. 

 

೨೦) ತಿಳುವಳಿಕೆ 

ನಮ್ಮ ಮನೆಯಲ್ಲೂ 

ಆಗುತ್ತದೆ ಒಮ್ಮೊಮ್ಮೆ 

ಜಗಳ – ಗಲಭೆ 

ಸುಮ್ಮನಿರಿಸಲು 

ತಿಳಿಹೇಳಬೇಕಾಗುತ್ತದೆ  

ಇದಲ್ಲ ಲೋಕಸಭೆ!

 

೨೧) ಪ್ರಶ್ನೆ?

ಸುಮ್ಮನೆ ನಡೆದು 

ಹೋಗಿ ಬಿಡಬಹುದಿತ್ತು 

ಆದರೆ ಹೃದಯದಲ್ಲೇಕೆ 

ಪ್ರೀತಿಯ ಪ್ರಣತಿಯ 

ಹಚ್ಚಿಟ್ಟು ಹೋದೆ?

 

೨೨) ಮುತ್ತು 

ತುಟಿಗೆ – ತುಟಿ 

ಒತ್ತದೆ ಇದ್ದರೂ 

ಚಿಪ್ಪೊಳಗೊಂದು 

ಮುತ್ತು – ಹುಟ್ಟಿದೆ 

 

೨೩) ಬಿನ್ನಹ 

ನಿನ್ನ ಹೃದಯದ 

ಪುಟ್ಟ ಅರಮನೆಯ 

ಕೀ – ನನಗೆ ಸಿಕ್ಕದೆ 

ಮತ್ತೆ ಮನೆ – ಮನ

ಬದಲಾಯಿಸಬೇಡ.  

 

೨೪) ಜೊತೆ

 ನೀನು ಹೋದ ಮೇಲೆ 

ನಾನು ಮತ್ತು ನನ್ನ 

ಒಂಟಿತನ ಮತ್ತೆ 

ಜಂಟಿಯಾಗಿದ್ದೇವೆ! 

 

೨೫) ನೀನಿಲ್ಲದೆ  

ನೀನು ಓದಲ್ಲ 

ಅಂತ ಮೊದಲೇ 

ಗೊತ್ತಿದ್ದರೆ ಬಹುಷಃ 

ಇಷ್ಟೊಂದು ಕವಿತೆಗಳು 

ಹುಟ್ಟುತ್ತಿರಲಿಲ್ಲ.

 

೨೬) ಹರಕೆ 

ಭಕ್ತ ಮಂಡಿಯೂರಿ 

ನಮಸ್ಕರಿಸಿದ ದಿನ, 

ದೇವರ ಮುಂದಿನ ನಂದಿ

ತಲೆ ಅಲ್ಲಾಡಿಸಿತು!

ಹರಕೆ ತೀರಿತಾ?   

 

 ೨೭)  'ರಾಜ'ಕಾರಣ 

ಚುನಾವಣೆಗೂ ಮುನ್ನ 

ಪಾದಯಾತ್ರೆ,

ಮನೆಮನೆಗೂ ಭೇಟಿ,

ಆಮೇಲೆ ನಡೆಯುವುದು

ಸ್ವಾರ್ಥಯಾತ್ರೆ, 

ಬೊಕ್ಕಸದ ಲೂಟಿ. 

*******

ಕನ್ನಡದ ಬರಹಗಳನ್ನು ಹಂಚಿ ಹರಡಿ

3 thoughts on “ಚುಟುಕಗಳು: ಗುರುಪ್ರಸಾದ ಹೆಗಡೆ

  1. ಶ್ರೀಯುತ ಗುರುಪ್ರಸಾದ ಹೆಗಡೆಯವರೇ, ನಮಸ್ಕಾರ. ನಿಮ್ಮ ಚುಟುಕುಗಳನ್ನು ಓದಿದೆ. ಚೆನ್ನಾಗಿವೆ. ಆದರೆ ಬರೆದ ಎಲ್ಲ ಚುಟುಕುಗಳನ್ನೂ ಒಂದೇ ಸಲಕ್ಕೆ ಪ್ರಕಟಿಸಿಬಿಡುವ ಧಾವಂತ ಯಾಕೆ ತಿಳಿಯಲಿಲ್ಲ. ಬತ್ತಳಿಕೆಯ ಬಾಣಗಳನ್ನೆಲ್ಲ ಒಮ್ಮೆಲೇ ಉಪಯೋಗಿಸುವುದು ನುರಿತ ಹೋರಾಟಗಾರನ ಲಕ್ಶಣವಲ್ಲ. ಹೋಗಲಿ ನಿಮ್ಮ ಕೆಲ ಚುಟುಕಿಗೆ ನನ್ನ ಚುಟುಕು ಉತ್ತರ:
    ಚುಟುಕು ೨೫: ಈಗಲೂ ಓದಿದ್ದೇನೆ ಅಂತ ತಪ್ಪು ತಿಳಿಯಬೇಡ
    ಚುಟುಕು ೨೩: ಮನೆಗೂ ಅರಮನೆಗೂ ವ್ಯತ್ಯಾಸವಿಲ್ಲವೇ ಗೆಳೆಯಾ?
    ಚುಟುಕು ೨೧: ನಿನ್ನ ಹ್ರದಯವನ್ನೇಕೆ ದೇವಸ್ಥಾನದ ಸಾಲು ದೀಪಗಳ ಕಂಬದಂತೆ ಕಪ್ಪು ಮಸಿ ಬಳಿದು ಎಣ್ಣೆ ಜಿಡ್ಡಿನಿಂದ ಹೊಲಸಾಗಿ ಇಟ್ಟುಕೊಂಡಿರುವೆ??
    ಚುಟುಕು ೧೭: ಚುಟುಕುಗಾರರಿಗೆ?
    ಚುಟುಕು ೧೫:  ಬೆಳಕಿನ ಸೀರೆಯನ್ನು ತಾವು ಕಡ ತಂದದ್ದು ಯಾವ ಕವಿಯಿಂದ?

  2. ನಿಮ್ಮ ಚುಟುಕಗಳು ಚೆನ್ನಾಗಿವೆ,,,
    ನಮಗೂ ಬರೆಯಲು ಸ್ಪೂರ್ತಿ ಸಿಕ್ಕಿತು !
    ಧನ್ಯವಾದಗಳು, ,,,

  3. ಎಲ್ಲೆಲ್ಲೋ ಮರದಿಂದ ಮರಕ್ಕೆ ಹಾರುತ್ತಾ ಇಲ್ಲಿ
    ತಂಗಿ

    ದಣಿವಾರಿಸಿದೆ . ತಂಪೂ ಆಯ್ತು ,ದಣಿವು ತೀರಿ ,ಹೆಚ್ಚು ಬೇಕೆಂಬ ಹಸಿವಾಯ್ತು . ಎಲ್ಲವೂಭಕ್ಷಗಳೇ ಏನು ಆರಿಸಲಿ ? ಗೊಂದಲವಾಯ್ತು .

Leave a Reply

Your email address will not be published. Required fields are marked *