
ಮನುಷ್ಯ ಹುಟ್ಟಿನಿಂದಲೇ ಹಲವಾರು ನಾಮಧೇಯಗಳಿಂದ ಕರೆಯಲ್ಪಡುತ್ತಾನೆ, ಮಗುವಾಗಿದ್ದಾಗ ಒಂದು ತರಹದ ಪ್ರೀತಿಯ ಹೆಸರುಗಳು ಮುಗ್ಧ ನಗುವಿಗೆ ಅಲಂಕಾರದಂತೆ ಕಂಡರೂ ಕೆಲವು ಸಲ ಅದೇ ಹೆಸರುಗಳು ಬೆಳೆದು ದೊಡ್ಡವರಾಗಿ ಮುದುಕರಾಗುವವರೆಗೂ ಅವರ ಬೆನ್ನಿಗೆ ಹಾಗೇ ಅಂಟಿಕೊಂಡೇ ಇರುತ್ತವೆ, ಕೆಲವು ಸಲ ಸತ್ತ ನಂತರವೂ ಆತನ,/ಆಕೆಯ ಮನೆಯವರನ್ನು ಗುರುತಿಸುವುದೂ ಸಹ ಅದೇ ಅಡ್ಡಹೆಸರಿನಿಂದಲೇ, ಈ ಅಡ್ಡ ಹೆಸರಿನ ಪರಿಣಾಮ ಎಷ್ಡು ಪ್ರಭಾವಯುತವಾಗಿರುತ್ತದೆಂದರೆ ಅವರ ಅಸಲಿ ಹೆಸರೇ ಮರೆತು ಹೋಗುವಷ್ಟು, ನಮ್ಮ ಸಂಬಂದಿಕರಲ್ಲೇ ಒಬ್ಬರಿದ್ದರು ಅವರು ಸದಾ ಎಲೆ ಅಡಕೆ ಜಗಿಯುತ್ತಾ ಅದರ ರಸವನ್ನೆಲ್ಲಾ ಬಿಳಿ ಜುಬ್ಬದ ತುಂಬಾ ಸೋರಿಸಿಕೊಂಡು ಎತ್ತ ತಿರುಗಿದರೂ ಬರೀ ಕೆಂಪಾನೆ ಕೆಂಪು ಬಣ್ಣವೇ ಕಾಣುತ್ತಿತ್ತು, ಅವರ ಜುಬ್ಬಾದ ಜೇಬುಗಳಿಂದ ಈ ಎಲೆಅಡಿಕೆ ಹೊಗೆಸೊಪ್ಪು ಕಡ್ಡಿಪುಡಿಗಳ ಗಂಟು ಸದಾ ಇಣುಕು ಹಾಕುತ್ತಲೇ ಇರುತ್ತಿತ್ತು, ಇವರು ಸಣ್ಣದಾದ ಗೂಡಂಗಡಿ ಇಟ್ಟುಕೊಂಡು ಅದರ ಜತೆಗೆ ಕುರಿ ವ್ಯಾಪಾರ ದನಗಳ ದಲ್ಲಾಳಿ ಕೆಲಸ ಮಾಡುತ್ತಿದ್ದರು,
ಸ್ವಾತಂತ್ರ್ಯ ಸಂಗ್ರಾಮದ ಬಿಸಿ ನೋಡಿದ್ದವರು ಕಾಂಗ್ರೆಸ್ ಪಕ್ಷದ ಪರಮ ನಿಷ್ಟಾವಂತ ಕಾರ್ಯಕರ್ತರು ಅವರ ನಿಷ್ಟೆ ನಮ್ಮೂರಿನ ರೀತಿಯಲ್ಲಿ ಹೇಳುವುದಾದರೆ ನಿಯತ್ತು ಎಷ್ಟಿತ್ತೆಂದರೆ, ದೆಹಲಿಯಲ್ಲಿರುವ ನೆಹರೂ ಮನೆತನದ ಅಧಿಕೃತ ವಕ್ತಾರರು ಮತ್ತು ಅಧಿಕೃತ ಪತ್ರಿಕಾ ವರದಿಗಾರರೆಂಬಷ್ಟು, ಅವರ ಮುಂದೆ ಯಾರಾದರೂ ಅಪ್ಪಿ ತಪ್ಪಿಯೂ ನೆಹರೂ ಅಥವಾ ಕಾಂಗ್ರೆಸ್ ಪಕ್ಷದ ವಿರುದ್ಧ ಚಕಾರವೆತ್ತಿದರೋ ಅಲ್ಲಿಗೆ ಮುಗೀತು, ಮಾತನಾಡಿದವನ ವಂಶದ ಇತಿಹಾಸವನ್ನೆಲ್ಲಾ ಜಾಲಾಡಿ ಹಿಂಡಿ ಹಿತ್ತಿಲಕಡೆಗಿನ ಬೇಲಿಯ ಮೇಲೆ ಒಣಹಾಕುತ್ತಿದ್ದರು, ಇಂತಹ ವೀರಾಭಿಮಾನಿ ಯಾದ ಈ ನರಸೇಗೌಡರು ಇದ್ದಕ್ಕಿದ್ದಂತೆ ಗಡ್ಡಧಾರಿಗಳಾದರು ಅಂದರೆ ಖಾವಿಬಟ್ಟೆಯನ್ನೇನೂ ಧರಿಸಲಿಲ್ಲ ಅವರು ಸನ್ಯಾಸಿಯಲ್ಲ ಎಂಬುದಕ್ಕೆ ಮನೆ ತುಂಬಾ ಗೊಣ್ಣೆ ಸುರಿಸುವ ಮಕ್ಕಳೇ ಅವುಗಳನ್ನು ಅಟ್ಟಾಡಿಸುವ ಕೋಳಿಗಳು ಮತ್ತು ನಾಯಿಮರಿಗಳೇ ತುಂಬಿದ್ದವು,
ಇಂತಹ ನರಸೇಗೌಡರು ಇದ್ದಕ್ಕಿದ್ದಂತೆ ಗಡ್ಡ ಬಿಟ್ಡಿದ್ದು ಯಾಕೆ ಎಂಬ ಪ್ರಶ್ನೆ ಪ್ರತಿ ದಿನ ಮುತ್ತರಾಯಪ್ಪನ ಹೊಟೇಲ್ ಮತ್ತು ಭಟ್ಟರ ಹೊಟೇಲ್ ಗಳಲ್ಲಿ ಕಾಫಿ ಟೀಗಳಿಗಿಂತಲೂ ಬಿಸಿಬಿಸಿ ಚರ್ಚೆ ಶುರುವಾಯಿತು,
ಯಾಕೆಂದರೆ ಯಾವಾಗಲೂ ನೀಟಾದ ಕ್ಷೌರ ಉದ್ದನೆಯ ತಲೆಗೂದಲನ್ನು ಹೆಂಗಸರಂತೆ ಗಂಟು ಹಾಕಿ ಶುಭ್ರವಾದ ಬಿಳಿಜುಬ್ಬ( ಕೆಂಪುಕಲೆಯಂತೂ ಖಂಡಿತವಾಗಿ ಇರುತ್ತಿತ್ತು) ಮತ್ತು ಖಾಕಿ ನಿಕ್ಕರ್ ಹೆಗಲಿನ ಮೇಲೆ ಟರ್ಕಿ ಟವೆಲ್ ಮತ್ತು ಅದರ ಮೇಲೆ ಬಿಳಿ ಪಂಚೆ, ಈ ಪಂಚೆಯನ್ನು ಅವರು ಉಟ್ಟದ್ದಕ್ಕಿಂತ ಹೆಗಲಿನಲ್ಲಿ ಹೊತ್ತದ್ದೇ ಹೆಚ್ಚು, ಈಗ ಈ ಗಡ್ಡಧಾರಿಯ ವೇಷದಲ್ಕೂ ಸಹ ಅದೇ ವಸ ಕಾಯ್ದೆ ಜಾರಿಯಲ್ಲಿತ್ತು,
ಒಂದು ದಿನ ಸಾಸಲು ಬಸ್ ನಿಲ್ದಾಣದ ಪ// ನರಸಿಂಹಗೌಡರ ವೃತ್ತದಲ್ಲಿನ ಮುತ್ತರಾಯಪ್ಪನ ಹೊಟೇಲ್ ನಲ್ಲಿ ಉತ್ತರ ಸಿಗುವ ಪ್ರಸಂಗ ಎದುರಾಯಿತು, ಆ ಸಮಯಕ್ಕೆ ಗಡ್ಡವೇನು ಬಹಳ ಉದ್ದ ಬೆಳೆದಿರಲಿಲ್ಲ ಆದರೂ ಎಂದೂ ಗಡ್ಡ ಕಾಣದ ಮುಖದಲ್ಲಿ ಈ ಕುರುಚಲು ಗಡ್ಡದ ರಹಸ್ಯ ಬೇಧಿಸಲು ದಿನವೂ ತರಹೇವಾರಿ ಚರ್ಚೆ ನಡೆಯುತ್ತಿತ್ತು, ಇದರಿಂದ ಒಳ್ಳೆಯ ವ್ಯಾಪಾರ ಆಗಿದ್ದು ಬಿಟ್ಟರೆ ಉತ್ತರವಂತೂ ಸಿಕ್ಕಿರಲಿಲ್ಲ, ಮುತ್ತರಾಯಪ್ಪನ ಗಲ್ಲ ತುಂಬಿತೇ ಹೊರತು ಮನಸಿನ ಕುತೂಹಲ ತಣಿಯಲಿಲ್ಲ, ಇಂತಹ ಹೊತ್ತಲ್ಲಿ ಅಪರೂಪಕ್ಕೆಂಬಂತೆ ನರಸೇಗೌಡರು ಕಾರುಪೇಹಳ್ಳಿ ಎಸ್ಸೆಲ್ಲೆನ್ ಬಸ್ಸಿಗಾಗಿ ಬಸ್ ನಿಲ್ದಾಣದಲ್ಲಿ ಕಾಯುತ್ತಿದ್ದವರು ಬಸ್ ಬರದೇ ತಲೆಬಿಸಿಯಾಗಿ ಟೀ ಕುಡಿಯಲು ಮುತ್ತರಾಯಪ್ಪನ ಹೊಟೇಲಿಗೆ ಬಂದದ್ದೇ ತಡ ಅಲ್ಲಿದ್ದವರು ಒಬ್ನೊಬ್ಬರೇ ರೇಷ್ಮೇ ಹುಳುಗಳು ಜ್ವರಕ್ಕೆ ಬಿದ್ದಾಗ ತಲೆಯಾಡಿಸುವಂತೆ ನೀನು ಕೇಳು ನೀನೇ ಕೇಳು ಎಂಬಂತೆ ಸಂಜ್ಞೆಗಳನ್ನು ಮಾಡುತ್ತಿದ್ದರು ಆದರೆ ಯಾರೊಬ್ಬರೂ ಧೈರ್ಯ ಮಾಡಲಿಲ್ಲ,ಕಾರಣ ನರಸೇಗೌಡರ ಉಗ್ರಾವತಾರ ಸುತ್ತಲಿನ ಹತ್ತು ಹಳ್ಳಿಗಳಿಗೂ ತಿಳಿದಿತ್ತು, ಆದರೂ ಅವರಲ್ಲಿ ಒಬ್ಬ ಧೈರ್ಯ ಮಾಡಿದ ಈ ಸಮಯ ಬಿಟ್ಟರೆ ಮತ್ತೆ ಸಿಗಲ್ಲ ಒಂದು ವೇಳೆ ಜೋರು ಮಾಡಿದರೂ ನನ್ನ ನೆರವಿಗೆ ಇಲ್ಲಿರುವವರಲ್ಲಿ ಯಾರಾದರೂ ಬಂದು ಬಚಾವ್ ಮಾಡಬಹುದು ಎಂದು ತೀರ್ಮಾನ ಮಾಡಿಕೊಂಡು ಪೋಸ್ಟ್ ಮ್ಯಾನ್ ಚಿನ್ನಪ್ಪ ಕೇಳಿಯೇ ಬಿಟ್ಟ,
ಆದರೆ ಆಶ್ಚರ್ಯ ವೆಂದರೆ ನರಸೇಗೌಡರು ಕೋಪಕ್ಕಿಂತ ಹುಸಿನಗು ನಕ್ಕು ಏನಿಲ್ಲ ನನ್ನದೊಂದು ಹರಕೆ ಇತ್ತು ಅದಕ್ಜೆ ಬಿಟ್ಡಿದೀನಿ ಎಂದರು,ಈಗ ಸ್ವಲ್ಪ ಧೈರ್ಯ ತಂದುಕೊಂಡು ಮುಂದುವರೆದು ಎಲ್ಲರೂ ತಲೆಗೊಬ್ಬರಂತೆ ಗಡ್ಡದ ರಹಸ್ಯ ಭೇದಿಸಲು ಅದನ್ನೇ ಗುರಿಯಾಗಿಸಿಕೊಂಡು ಪ್ರಶ್ನೆಗಳನ್ನು ಕೇಳತೊಡಗಿದರು, “ಯಾವ ದೇವರಿಗೆ ಗೌಡರೇ ಏನು ವಿಷ್ಯ” ” ಮತ್ತೆ ಮನೆಯಲ್ಲೇ ಏನಾದರೂ ತೀಟೆ ಮಾಡಿದಿರೇನು” ಹೀಗೆ, , , ಆದರೆ ಅದ್ಯಾವುದೂ ಅಲ್ಲ ಕಣ್ರಯ್ಯ, ಈ ಸಲ ನಮ್ ಕಾಂಗ್ರೆಸ್ ಪಕ್ಷ ಸೋತು ನಮ್ ದೇವರು ಇಂದಿರಾಗಾಂಧಿ ಯವರು ಎಲೆಕ್ಸನ್ನಾಗೆ ಸೋತವ್ರೇ ಇದು ನನ್ನಿಂದ ಸೈಸೋಕಾಗ್ಲಿಲ್ಲ ಅದ್ಕೇ ಆವಮ್ಮ ಗೆಲ್ಲೋವರೆಗೂ ನಾನು ಗಡ್ಡ ತೆಗಿಯೋದಿಯಲ್ಲ, ಅಷ್ಟೇ ಅಲ್ಲ ನಾನು ಇದೇ ಸಾಸಲು ಗ್ರಾಮ ಪಂಚಾಯಿತಿ ಮೆಂಬರ್ ಆಗಿ ಕಾಂಗ್ರೆಸ್ ಪಕ್ಷಾನಾ ಗೆಲ್ಸೋವರೆಗೂ ಈ ಗಡ್ಡ ತೆಗೆಯಲ್ಲ”, ಈ ಭೀಷ್ಮ ಪ್ರತಿಜ್ಞೆ ಕೇಳಿದ ಅಲ್ಲಿದ್ದವರೆಲ್ಲಾ ಒಳಗೊಳಗೇ ನಕ್ಕರೂ ತೋರ್ಪಡಿಸದೇ ಸುಮ್ಮನಾದರು, ಆದರೆ ಈ ನರಸೇಗೌಡರು ಮಾತ್ರ ಬಸ್ ಹತ್ತಿ ಆರೂಢಿ ಕಡೆಗೆ ಕುರಿ ವ್ಯಾಪಾರಕ್ಕೆ ಹೊರಟರು, ಈ ಪ್ರತಿಜ್ಞೆ ಆಗಿ ಹಲವು ಚುನಾವಣೆಗಳು ಬಂದು ಹೋದವು ಇಂದಿರಾಗಾಂಧಿಯವರೂ ಗೆದ್ದರು ಆದರೆ ಗೌಡರು ಗೆಲ್ಲಲಿಲ್ಲ ಅವರ ಗಡ್ಡ ಕುತ್ತಿಗೆಯಿಂದ ಕೆಳಗಿಳಿದು ಎದೆಯನ್ನೂ ತುಳಿದು ಹೊಟ್ಟೆಯ ಕಡೆಗೆ ಬೆಳೆಯುತ್ತಿತ್ತು,ಕಾಲಕ್ರಮೇಣ ನರಸೇಗೌಡ ಎಂಬ ಹೆಸರು ಪುನರ್ನಾಮಕರಣಗೊಂಡು “ಗಡ್ಡದ ನರಸೇಗೌಡ” ಎಂಬ ಹೆಸರು ದಶ ದಿಕ್ಕಿಗೂ ಹರಡಿ ಖ್ಯಾತಿಯನ್ನು ತಂದುಕೊಟ್ಟಿತು, ಈ ಗಡ್ಡ ಬೆಳೆದಿದ್ದರಿಂದ ಹೆಸರೂ ಬದಲಾಯಿತು ಅದರ ಜತೆಗೆ ಬಿಳಿ ಜುಬ್ಬ ಸದಾ ಬಿಳಿ ಬಣ್ಣದಲ್ಲೇ ಮಿಂಚುತ್ತಿತ್ತು ಯಾಕೆಂದರೆ ಈಗ ತಾಂಬೂಲದ ಎಂಜಲು ಗಡ್ಡವನ್ನು ಬಿಟ್ಟು ಕೆಳಗಿಳಿಯುತ್ತಿರಲಿಲ್ಲ, ಈಗಲೂ ಸಹ ಅವರ ಮನೆಯನ್ನು ಗುರುತಿಸುವುದು ಗಡ್ಡದ ನರಸೇಗೌಡರ ಮನೆ ಎಂದೇ, ಬರೀ ನರಸೇಗೌಡ ಎಂದರೆ ಯಾವ ನರಸೇಗೌಡ ಎಂಬ ಅನುಮಾನ ಬರದೇ ಇರದು,
ನಾವು ಬೆಂಗಳೂರಿನ ಗ್ಯಾಸ್ ಕಾಲೇಜು ಅಂದರೆ ಸರ್ಕಾರಿ ಕಲಾ ಕಾಲೇಜು ಇಲ್ಲಿ ಓದುತ್ತಿರುವಾಗ ನಮ್ಮ ಗೆಳೆಯರ ಗುಂಪಿನಲ್ಲಿ ಚಂದ್ರಶೇಖರ ಎಂಬುವವನಿದ್ದ ಅವನು ನೋಡಲು ಥೇಟ್ ಚೀನೀಯರ ಹಾಗೇ ಇದ್ದ ಮೊಂಡು ಮೂಗು ಉಬ್ಬಿದ ಕೆನ್ನೆ ರಬ್ಬರ್ ಚೆಂಡನ್ನು ಕೊಯ್ದು ಕಣ್ಣುಬರೆದಂತೆ ಪಿಳಿ ಪಿಳಿ ಕಣ್ಣು ಎತ್ತರವೂ ಸಾಧಾರಣ ಅವನು ಕಮಲಾನಗರದಿಂದ ಹೀರೋ ಪುಕ್ ಗಾಡಿಯಲ್ಲಿ ಕಾಲೇಜಿಗೆ ಬರುತ್ತಿದ್ದ, ಅದು ಕಮಲಾನಗರದ ಏರುದಿಬ್ಬವನ್ನು ಹತ್ತದೇ ಏದುಸಿರು ಬಿಟ್ಟರೇ ಇವನೇ ಏದುಸಿರು ಬಿಡುತ್ತಾ ಅದನ್ನು ಆ ಆಳವಾದ ಕಂದಕದಿಂದ ವಾಟರ್ ಟ್ಯಾಂಕ್ ವರೆಗೂ ತಳ್ಳಿಕೊಂಡು ಬಂದು ಆನಂತರ ಚಲ್ ಮೇರೆ ಘೋಡಾ ಅಂತ್ಹೇಳಿ ನಾಲ್ಕು ಸುತ್ತು ಕಿಕ್ ಹೊಡೆದು ಕಷ್ಟ ಪಟ್ಟು ಸ್ಟಾರ್ಟ್ ಮಾಡಿ ಕಾಲೇಜಿಗೆ ಬರುವಷ್ಟರಲ್ಲಿ ಮೊದಲ ಪಿರಿಯಡ್ ಕ್ಲಾಸ್ ಮುಗಿದು ಎರೆನೆಯ ಪಿರಿಯಡ್ ಲೀಜರ್ ಇರುತ್ತಿತ್ತು, ನಾವೆಲ್ಲರೂ ಈಗಿನ ಸಿವಿಲ್ ಕೋರ್ಟ್ ಕಾಂಪ್ಲೆಕ್ಸ್ (ಆಗಿನ ಟೀ ಅಂಗಡಿಗಳ ಸಾಲು ಇತ್ತು) ಅಲ್ಲಿ ಕುಳಿತಿರುತ್ತಿದ್ದೆವು, ಇವನು ಬೆವರು ವರೆಸುತ್ತಾ ಅಲ್ಲಿಗೇ ಬರುತ್ತಿದ್ದ ನಾವರಲ್ಲರೂ ಎಲ್ಲೋ ನಿನ್ ಹಾರ್ಟ್ ಅಟ್ಯಾಕ್ ಗಾಡಿ ಎಂದು ಛೇಡಿಸುತ್ತಿದ್ದೆವು,
ಇಂತಹ ಹೊತ್ತಲ್ಲಿ ಆಪ್ಟೆಕ್ ಎಂಬ ಕಂಪ್ಯೂಟರ್ ಸಂಸ್ಥೆಯಿಂದ ಸ್ಕಾಲರ್ಶಿಪ್ ಕೊಡುವುದಾಗಿ ಪರೀಕ್ಷೆಗೆ ಬರೆದು ಪಾಸಾದರೆ ಶೇಕಡಾ ಎಂಭತ್ತರ ವರೆಗೂ ಫೀಸ್ ಕಡಿತ ಮಾಡುವುದಾಗಿ ಪತ್ರಿಕೆಯಲ್ಲಿ ಓದಿ ನಾವೆಲ್ಲರೂ ಪರೀಕ್ಷೆ ಬರೆದೆವು, ಅದರಲ್ಲಿ ನಾನು ರಮೇಶ ಪಾಸಾದೆವು, ರಮೇಶ ಕೋರ್ಸ್ ಸೇರಲಿಲ್ಲ ನಾನು ಸೇರಿಕೊಂಡೆ, ನನ್ನ ಜೊತೆ ಕಂಪ್ಯೂಟರ್ ಸೆಂಟರ್ ಗೆ ರಮೇಶ ಮತ್ತು ಈ ಚಂದ್ರಶೇಖರ ಇಬ್ಬರೂ ಬಂದಿದ್ದರೂ, ಆ ಕಂಪ್ಯೂಟರ್ ಸೆಂಟರ್ ನಲ್ಲಿ ಒಬ್ಬ ಜಪಾನಿ ಹುಡುಗಿ ಕುಳಿತಿದ್ದಳು, ನಮ್ಮ ಚಂದ್ರಶೇಖರ ಸುಮ್ಮನಿರದೇ ‘ಇದು ಯಾರು ಗುರು ನಮ್ಮ ಸಂಬಂಧಿಕರು ಇದ್ದಂಗವ್ರೇ ಇವಳ ಹೆಸರೇನೋ ತಿಳ್ಕೋಬೇಕಲ್ಲ “ಅಂದ, ನಾನು ಸುಮ್ಮನಿರದೇ ಇರು ಕೇಳ್ತೀನಿ ಎಂದು ಹೋಗಿ ಸುಮ್ಮನೇ ನೀರು ಕುಡಿದು ಬಂದು ” ಲೋ ಅವಳ ಹೆಸರ ತೋಶಿಬಾ ತುಸು ಅಂತೆ ಕಣೋ “ಎಂದೆ, ಗುರು ನಾನು ಇವಳನ್ನೇ ಮದುವೆ ಆಗೋದು ನನ್ನ ಹೆಸರು ಏನು ಇಟ್ಕೊಳ್ಳಿ ಅಂತ ಯೋಚಿಸ್ತಿದ್ದ ಆಗ ನಾನು ನಿನ್ನ ಹೆಸರು ಚಿಂಗ್ ಚಾಂಗ್ ಚೂ ಅಂದೇ, ರಮೇಶ ಈ ಹೆಸರನ್ನು ಕೇಳಿದವನೇ ಅರ್ಧ ಗಂಟೆ ಹೊಟ್ಟೆ ಹುಣ್ಣಾಗುವಂತೆ ನಕ್ಕುಬಿಟ್ಟು, ಅವತ್ತು ಅಡ್ಮಿಷನ್ ಆಗಲಿಲ್ಲ, ಈಗಲೂ ನಮ್ಮ ಗೆಳೆಯರು ಅವನನ್ನು ಚಾಂಗಿ ಎಂದೇ ಕರೆಯುವುದು, ಚಂದ್ರಶೇಖರ ಅಂದ್ರೇ ಯಾರಿಗೂ ಗೊತ್ತೇ ಆಗುವುದಿಲ್ಲ, ನನ್ನ ಮೊಬೈಲ್ ನಲ್ಲಿ ಅವನ ಫೋನ್ ನಂಬರ್ ಚಿಂಗ್ ಚಾಂಗ್ ಚೂ ಎಂದೇ ಇಟ್ಟುಕೊಂಡಿದ್ದೇನೆ,
-ಚಿನ್ನು ಪ್ರಕಾಶ್ ಶ್ರೀರಾಮನಹಳ್ಳಿ