ಆವತ್ತ ಆಫೀಸಿಗೆ ಸೂಟಿ ಇತ್ತು. ಎಲ್ಲಾ ಕೆಲಸಾ ಮುಗಿಸಿ ಆರಾಮಾಗಿ ಟಿವ್ಹಿಯೊಳಗ ‘ಅಡಿಗೆ ಅರಮನಿ’ ನೊಡ್ಕೋತ ಕೂತಿದ್ದೆ. ಗಂಗಾವತಿ ಪ್ರಾಣೇಶ ಅವರು ತಮ್ಮ ಹಾಸ್ಯ ಪ್ರಹಸನದೊಳಗ ಹೇಳೋಹಂಗ ಇವರು ಮಾಡಿ ತೋರೆಸೋ ಅಡಗಿಗಿಂತಾ ಅವರ ರೇಷ್ಮಿ ಸೀರಿ, ಹಾಕ್ಕೊಂಡಿದ ದಾಗಿನಾ, ಮಾಡ್ಕೊಂಡ ಮೇಕಪ್, ಹೇರ್ ಸ್ಟೈಲ್ ನ ಮಸಾಲಿಕಿಂತಾ ಖಡಕ ಇದ್ವು. ಯಾವದೋ ಒಂದು ಸೊಪ್ಪಿನ ಸೂಪ್ ಮಾಡೋದ ಹೆಂಗಂತ ಹೇಳಿಕೊಡ್ಲಿಕತ್ತಿದ್ಲು. ಆಕಿ ಖುಲ್ಲಾ ಬಿಟಗೊಂಡ ಕೂದಲಾ ಎಲ್ಲೆ ಆಕಿ ಮಾಡೊ ಸೂಪಿನ ರುಚಿ ನೋಡತಾವೊ ಅನಿಸ್ತಿತ್ತು. ಅಷ್ಟರಾಗ ನಮ್ಮ ಬಾಜು ಮನಿ ಪದ್ದಿ ಧುಮುಧುಮು ಉರಕೋತ ಧಕ್ ಧಕ್ ಅಂತ ಬಂದು ಸೋಫಾದ ಮ್ಯಾಲಾ ಕುಕ್ಕರ ಬಡದ್ಳು. ನಾ ನೋಡಲಿಕತ್ತ ಪ್ರೋಗ್ರಾಮ್ ನೋಡಿ “ಅಯ್ಯ ನನ್ನ ಹಣೆಬಾರ, ಅಡಗಿಮನಿ ಬ್ಯಾಸರಾಗಿ ನಿಮ್ಮನಿಗೆ ಬಂದ್ರ ನೀವು ಅದನ್ನ ನೋಡಲಿಕತ್ತಿರಲ್ಲಾ. ಯಾವ ದೀಡ ಪಂಡಿತ ಹೆಸರಿಟ್ಟಾನೊ ‘ಅಡಗಿ ಅರಮನಿ’ ಅಂತ. ಅರಮನಿ ಅಂತ ಅರಮನಿ, ಸೆರಮನಿ ಅಂದ್ರ ಬರೊಬ್ಬರಿ ಹೊಂದತದ” ಅಂತ ಕವಕ್ಕಂತ ಹರಕೊಂಡ್ಲು.
ಯಾಕೋ ಪಾರ್ಟಿ ಗರಂ ಆಗೇದ ಅಂತ ನಾನು ಚಾನಲ್ ಚೇಂಜ್ ಮಾಡಿ ಯಾಕ ಅಂತ ಕೇಳಿದ್ದಕ್ಕ ಆಕಿ “ನೀವ್ ಏನ ಅನ್ರಿ ಅಕ್ಕಾ, ಈ ಸಂಗೀತ ಬರೋವರ ಮುಂದ ಹಾಡಬಾರ್ದು. ಯಾಕಂದ್ರ ಎಷ್ಟ ಛಂದ ಹಾಡಿದ್ರು ಅವರ ಮನಸಿಗೆ ಬರುದಿಲ್ಲಾ. ತಾಳ ಇಲ್ಲಾ, ಶೃತಿಯಿಲ್ಲಾ ಅಂತನ ಅಂತಾರ. ಮತ್ತ ಈ ಅಡಗಿ ಮಾಡಲಿಕ್ಕೆ ಬರೋ ಗಂಡನ್ನ ಮಾಡಕೊಂಡ ಅವರಿಗೆ ಅಡಗಿ ಮಾಡಿಹಾಕಬಾರದು. ಸುಡ್ಲಿ ಎಷ್ಟ ಛೊಲೋ ಮಾಡಿ ಹಾಕಿದ್ರೂನು ಏನರ ಒಂದ ಹೆಸರಿಡತಾವ” ಅಂತ ತನ್ನ ಗೋಳ ಹೇಳ್ಕೊಂಡ್ಲು. ಆವಾಗ ಗೊತ್ತಾತ ನಂಗ ಪದ್ದುನ ಗಂಡಾ ರಾಘು ಅಡಗಿ ಭಾಳ ಛೊಲೋ ಮಾಡತಾನ. ನೌಕರಿಗೆ ಸೇರ್ಕೊಳ್ಳೊಕಿಂತಾ ಮದ್ಲ ದೊಡ್ಡು ದೊಡ್ಡು ಅಡಗಿ ಕಾಂಟ್ರ್ಯಾಕ್ಟ ಹಿಡಿತಿದ್ದಾ. ಪದ್ದುನ ಗೋಳಾಟದ ಮೂಲಾ ಇಲ್ಲದ ಅಂತ ಗೊತ್ತಾತು. ಆಕಿ ಹೇಳಿದ್ದ ಖರೆನ ಅದ. ಈ ಅಡಗಿ ಮಾಡಲಿಕ್ಕೆ ಬರೋ ಗಂಡಂದ್ರು ಹೆಂಡತಿ ಮಾಡಿದ್ದ ಅಡಗಿಗೆ ಯಾವತ್ತೂ ಛೊಲೋ ಅನ್ನುದಿಲ್ಲಾ. ಏನರೆ ಒಂದ ಹೆಸರಿಡೊದ್ರಾಗ ಇರತಾರ, ಅದಕ್ಕ ಈ ರಾಘುನು ಏನ ಹೊರತ ಅಲ್ಲಾ. ಆಂವಗ ಒಂದ ಸ್ವಲ್ಪ ಗರ್ವನೂ ಇತ್ತು ಒಂಥರಾ ತನ್ನಷ್ಟಕ್ಕ ತಾ ಏನ ‘master chef’ ಅಂತ ತಿಳಕೊಂಡಿದ್ದಾ. ಪದ್ದಿ ಮಾಡಿದ್ದ ಅಡಗಿಗೆ ಪ್ರತಿಯೊಂದಕ್ಕು ಹೆಸರಿಡತಿದ್ದಾ.
ಮದುವ್ಯಾದ ಹೊಸದಾಗೆ ಪದ್ದಿ ಒಂದಿನಾ ಬಟಾಟಿ ಪರೋಟಾ ಮಾಡಿ ಬಡಿಸಿದ್ಲು. ಆಂವಾ ತಿನ್ನೊತನಕಾ ತಿಂದು ಆಮ್ಯಾಲೆ “ಏನ ಮಹಾ ಪರೋಟಾ, ಚಪಾತಿ ಬಟಾಟಿ ಪಲ್ಯಾ ಬ್ಯಾರೆ ಬ್ಯಾರೆ ಮಾಡ್ಕೊಂಡ ತಿನ್ನೊದರ ಬದಲಿ ಎರಡು ಕೂಡೆ ಒಂದರಾಗ ಲಟ್ಟಿಸಿಕೊಂಡ ತಿನ್ನೊದ ಅಷ್ಟ” ಅಂದಾ. ಪಾಪ ಗಂಡನ್ನ ಮೆಚ್ಚಸಲಿಕ್ಕಂತ ಪ್ರೀತಿಯಿಂದ ಮಾಡಿದ್ಲು. ಇಂವಾ ಹಿಂಗ ಅಂದದ್ದಕ್ಕ ಮಾರಿ ಸಣ್ಣ ಮಾಡಿದ್ಲು. ಹಿಂಗ ಆಕಿ ಏನರೆ ಒಂದು ಹೊಸಾದ ಮಾಡಿದ್ರ ಅದಕ್ಕೊಂದ ಕೊಂಕ ತಗದ ಬಿಡತಿದ್ದಾ. ಸಮೊಸಾ ಮಾಡಿದ್ರುನು ಹಿಂಗ ಅಂತಿದ್ದಾ “ಚಪಾತಿ-ಪಲ್ಯಾ ಬೇಯಿಸಿಕೊಂಡ ತಿನ್ನೊದರ ಬದಲಿ ಎಣ್ಣ್ಯಾಗ ಕರಕೊಂಡ ತಿನ್ನೊದ ಅಷ್ಟ ಅದರಾಗ ಏನ ಬ್ರಹ್ಮ ವಿದ್ಯಾ ಅದ” ಅಂತಿದ್ದಾ. ಒಂದಿನಾ ರವಾ ದ್ವಾಸಿ ಮಾಡಿ ಉಳ್ಳಾಗಡ್ಡಿದು ಭಾಜಿ ಮಾಡಿದ್ಲು. ಭಾಜಿ ಸ್ವಲ್ಪ ಮಂದಗ ಘಟ್ಟಿ ಆಗಲ್ಯಂತ ಪುಠಾಣಿ ಹಿಟ್ಟ ಹಚ್ಚಿದ್ಲು. ಆವತ್ತ ಆಂವನ ಗೆಳೆಯಾ ಒಬ್ಬಾಂವಾ ಇವರ ಮನಿಗೆ ನಾಶ್ಟಾಕ್ಕ ಬಂದಿದ್ದ. ಇಬ್ಬರು ಕೂಡೆ ನಾಶ್ಟಾ ಮಾಡಬೇಕಾದ್ರ ತಾಟನ್ಯಾಗಿನ ಭಾಜಿ ಖಾಲಿ ಆಗಿತ್ತು. ಅದನ್ನ ನೋಡಿ ರಾಘು ಹೆಂಡತಿಗೆ “ಏನ ಸ್ವಲ್ಪ ಝುಣಕಾ ತಗೊಂಡ ಬಾ ಅಂದಾ. ಅದಕ್ಕ ಆ ಗೆಳೆಯಾ “ಅಲ್ಲೊ ವೈನಿ ಎಷ್ಟ ಮಸ್ತ ಭಾಜಿ ಮಾಡ್ಯಾರ, ನೀ ಅದಕ್ಕ ಝುಣಕಾ ಅಂತಿಯಲ್ಲಾ. ಕನ್ ಫ್ಯೂಸ್ ಮಾಡಕೊಂಡಿಯೇನ” ಮತ್ತ ಅಂದ. ಅದಕ್ಕ ರಾಘು ನಕ್ಕೋತ “ಅದೆಲ್ಲಾ ಏನು ಇಲ್ಲಾ, ನಮ್ಮ ಪ್ರಕಾರ ಹಿಟ್ಟ ಹಚ್ಚಿದ್ದ ಯಾವದ ಪದಾರ್ಥ ಇರಲಿ ಅದು ಝೂಣಕನ” ಅಂದಾ. ಹಿಂಗ ಏನರೆ ಒಂದ ಕೊಂಕ ತಗಿಲಿಲ್ಲಂದ್ರ ಆಂವಗ ತಿಂದ ಅನ್ನಾ ಪಚನ ಆಗತಿದ್ದಿಲ್ಲಾ. ಗಂಡಗ ಸಿಹಿ ಸೇರತದ ಅಂತ ತನಗ ಬಂಧಂಗ ಯಾವರ ಉಂಡಿ ಮಾಡಿಟ್ರ ಅವನ್ನ ಕೈಯಾಗ ಹಿಡದ ನೋಡಿ “ಕಾರ್ಕ ಬಾಲ್ ಆಗ್ಯಾವ” ಅಂತಿದ್ದಾ. ಇಲ್ಲಂದ್ರ “ಪತ್ಥರ ಕೆ ಸನಮ್ . . .” ಅಂತ ಹಾಡ ಹಾಡ್ಲಿಕ್ಕೆ ಶುರು ಮಾಡತಿದ್ದಾ. ಒಂದಿನಾ ರವಿವಾರಾ ಯಚ್ಛಾವತ್ತ ಎಲ್ಲಾ ಅಡಗಿ ಮಾಡಲಿಕ್ಕೆ ಬ್ಯಾಸರಾಗಿ ಒಂದ ಬಿಸಿಬ್ಯಾಳಿ ಭಾತ ಮಾಡಿದ್ಲು. ರುಚಿ ಭಾತ ತಿಂದು ಮನ್ಯಾಗ ಎಲ್ಲಾರು ಪದ್ದಿನ್ನ ಹೊಗಳಿದ್ರ ಇಂವಾ ಮಾತ್ರ “ಅದರಾಗೇನದ ಮಹಾ ಅನ್ನಾ-ಹುಳಿ ನಾವ ಕಲಿಸಿಕೊಂಡ ಉಣ್ಣೋದರ ಬದಲಿ ಆಕಿನ ಕಲಸಿ ಎಲ್ಲಾರಿಗೂ ಬಡಿಸ್ಯಾಳ ಅಷ್ಟ” ಅಂತ ಹೇಳಿ ಎಲ್ಲಾರ ಬಾಯಿ ಮುಚ್ಚಿಸಿದ. ಈಗೀಗ ಪದ್ದಿಗೆ ಯಾಕರ ಇಂವಗ ಅಡಗಿ ಗೊತ್ತದನಪ್ಪಾ ಅಂತ ಹಣಿ ಹಣಿ ಬಡ್ಕೊತಿದ್ಲು. ಯಾವದರ ಮಾಟಾ ಮಾಡಿಸಿ ಇಂವಗ ಅಡಗಿ ವಿದ್ಯಾನ ಮರತಹೋಗೊ ಹಂಗ ಮಾಡಬೇಕ ಅಂತ ಒಂದೊಂದ ಸಲಾ ವಿಚಾರ ಮಾಡತಿದ್ಲು. ಇಲ್ಲಾ ಇಂವಾ ಒಟ್ಟ ಅಡಗಿಗೆ ಹೆಸರಿಡಲಾರದ ಊಟಾ ಮಾಡೊಹಂಗ ಏನರೆ ತಾಯಿತಾ ಮಾಡಿಸ್ಕೊಂಡ ಬಂದ ಗಂಡನ್ನ ಕೊಳ್ಳಾಗ ಕಟ್ಟಬೇಕ ಅನಕೋತಿದ್ಲು. ಅಷ್ಟ ಹೆಂಡ್ತಿದ ಜೀವಾ ತಿಂದ ಜೀರಿಗಿ ಅರಿತಿದ್ದಾ ರಾಘು.
ಹಿಂಗ ಒಂದ ದಿನಾ ರಾತ್ರಿ ಊಟ ಆದಿಂದ ರಾಘು ವಾಕಿಂಗಿಗೆ ಅಂತ ಹೊರಗ ಹೋಗಿದ್ದ. ಹಂಗ ನಡಕೋತ ನಡಕೋತ ರಸ್ತೆದ್ದ ಕೂಟಿಗೆ ಹೋದಾ. ಅಲ್ಲೆ ಅವರ ಆಫೀಸಿನ ಮ್ಯಾನೇಜರ್ ತಮ್ಮ ನಾಯಿನ್ನ ಅಡ್ಡ್ಯಾಡಸಲಿಕ್ಕೆ ಕರಕೊಂಡ ಬಂದಿದ್ರು. ಹಂಗ ಮಾತಡ್ಕೋತ “ಸರ್ ಊಟಾ ಆತೇನ್ರಿ, ಮೇಡಂ ಸಂಡೇ ಸ್ಪೆಷಲ್ ಏನ ಮಾಡಿದ್ರರಿ ಇವತ್ತ” ಅಂತ ಕೇಳಿದ. ಮ್ಯಾನೇಜರ್ ಸ್ವಲ್ಪ ವಿಚಾರ ಮಾಡಿ “ರಾಘು, ಅವರ ಇವತ್ತ ನಮ್ಮ ಮನ್ಯಾಗ ವಿಶೇಷ ಅಂದ್ರ ‘ಚಂಪಕಮಾಲಾ’, ‘ಚಂದ್ರಕಲಾ’, ‘ದಹಿ ವಲ್ಲಿಕಾ’ ಮಾಡಿದ್ರರಿ” ಅಂದ. ಅದಕ್ಕ ರಾಘು “ಅಡಗಿ ಮಾಡಿದವರ ಹೆಸರಲ್ಲರಿ ಸರ್, ಅಡಗಿ ಏನ ಮಾಡಿದ್ರರಿ ಅಂತ ಕೇಳಬೇಕನಕೊಂಡಾಂವಾ ಯಾಕೋ ಸುಮ್ನಾದ. ಇಂವಾ ಏನು ಮಾತಾಡಲಾರದಕ್ಕ ಮತ್ತ ಹೊಳ್ಳಿ ಮ್ಯಾನೇಜರ್ ನ “ರಾಘು, ಅವರ ಇವತ್ತ ನಮ್ಮನ್ಯಾಗ ಇವಾ ಮೂರು ಡಿಶ್ ಮಾಡಿದ್ರರಿ ಅಂದಾ” ಇದನ್ನ ಕೇಳಿ ಅಡಗಿ ಪಂಡಿತ ರಾಘುಗ ಇವೆಂಥಾ ಅಡಗಿಗೊಳಪ್ಪಾ ಅನಿಸ್ತು. ಯಾಕಂದ್ರ ಮದ್ಲ ಯಾವಾಗು ಈ ಹೆಸರನ ಕೇಳಿಲ್ಲಾ. ಆದ್ರು ಗೊತ್ತಿಲ್ಲಾ ಅಂತ ಹೇಳಲಿಕ್ಕೆ ಅಭಿಮಾನ ಅಡ್ದಬಂದು “ಹೆ ಹೆ… ಭಾಳ ಬೆಸ್ಟ ಡಿಶ್ ರಿ.. ಟೇಸ್ಟಿ ಇರತದ” ಅಂದಾ. ಅದಕ್ಕ ಮ್ಯಾನೇಜರ್ ಒಂದ ಘಳಿಗಿ ರಾಘುನ ಮುಖಾ ದಿಟ್ಟಿಸಿ ನೋಡಿ “ರಾಘು ಅವರ ಈ ಡಿಶ್ ಬಗ್ಗೆ ನಿಮಗ ಗೊತ್ತೇನ್ರಿ” ಅಂದಾ. ಅದಕ್ಕ ಇಂವಾ “ಛೇ ಛೇ… ನಂಗ ಗೊತ್ತಿರಲಾರದ ಅಡುಗಿನ ಯಾವು ಇಲ್ಲಾ. ನಂಗೆಲ್ಲಾ ಗೊತ್ತು” ” ಅಂದಾ. ಹಂಗಿದ್ರ ನಿಮ್ಮನ್ಯಾಗನು ಮಾಡತಾರೇನ್ರಿ ಇವನ್ನೆಲ್ಲಾ ಅಂತ ಕೇಳಿದ್ದಕ್ಕ, ಇಂವಾ “ವಾರದಾಗ ಮೂರ ಸಲಾ ಇವನ್ನ ಮಾಡತಾರಿ ನಮ್ಮನ್ಯಾಗ” ಅಂದಾ. ಅದನ್ನ ಕೇಳಿ ಮ್ಯಾನೇಜರ್ ರಾಘುನ್ನ ಪಾಪ ಅನ್ನೊವರ ಹಂಗ ನೋಡಿ “ನಾ ಒಬ್ಬಾಂವನ ಅಂತ ಮಾಡಿದ್ದೆ, ನಿಮಗೂ ಇಂಥಾ ಅಡಗಿ ಊಣ್ಣೊ ಪರಿಸ್ಥಿತಿ ಅದ ಪಾಪ. ಏನ ಮಾಡೊದ್ರಿ ನಮ್ಮ ನಮ್ಮ ಕರ್ಮ ಅನುಭೋಗಸಬೇಕರಿ. ಅದರೂ ನಮ್ಮ ಮನ್ಯಾಗ ವಾರಕ್ಕ ಮೂರದಿನಾ ಏನ ಮಾಡಂಗಿಲ್ಲ” ಅಂದು ಮನಿ ಕಡೆ ಹೊಂಟ್ರು. ಅವರಂದದ್ದ ನೋಡಿ ರಾಘುಗ ಅಭ್ರಮಸುಭ್ರಮ್ ಆಗಿತ್ತು. ಮ್ಯಾನೇಜರ್ ಮಾತಾಡಿದ್ದರ ತಲಿಬುಡಾ ಏನು ಅರ್ಥ ಆಗಲಿಲ್ಲಾ. ಹಂಗ ವಿಚಾರ ಮಾಡಕೋತ ಮನಿ ಕಡೆ ಹೊಂಟಾ.
ಮರುದಿನಾನು ಮ್ಯಾನೇಜರ್ ಮಾತಾಡಿದ್ದರ ಬಗ್ಗೆನ ವಿಚಾರ ಮಾಡಕೋತ ಹೆಂಡತಿ ಕೊಟ್ಟ ಜಾಮೂನ್ ತಿನ್ಲಿಕತ್ತಿದ್ದಾ. ಪದ್ದಿ ಗಡಿಬಿಡಿಯೊಳಗ ಜಾಮೂನ ಛಂದಾಗಿ ಕರದಿದ್ದಿಲ್ಲೇನೊ ಒಳಗ ಹಸಿ ಹಿಟ್ಟು ಹಂಗ ಉಳದು ಗಂಟಿನಂಘ ಘಟ್ಟ್ಯಾಗಿ ಕೂತಿತ್ತು. ಮದಲಾ ಏನ ಅನ್ಲಿ ಏನ ಬಿಡ್ಲಿ ಅಂತ ಕಾಯಲಿಕತ್ತಾಂವಗ ಆ ಜಾಮೂನ ನೋಡಿ ಪದ್ದಿನ್ನ ಕರದು “ಇದೇನ, ಜಾಮೂನ ಅಂತಾರೆನ ಇದಕ್ಕ. ತಿನ್ನಬೇಕಾದ್ರ ಹೆಂಟಿ* ಬಂತಂದ್ರ ಮುಗೀತು. ಆ ಜಾಮೂನ್ ತುತ್ತೂರಿ ಹಿಡಧಂಗನ. ಒಂದ ಅಡಗಿ ಛೋಲೊತ್ನ್ಯಾಗಿ ಮಾಡಲಿಕ್ಕೆ ಬರುದಿಲ್ಲಾ. ನೋಡ ನಮ್ಮ ಮ್ಯಾನೇಜರ್ ಹೇಂಡ್ತಿ ” “ಚಂಪಕಮಾಲಾ, ಚಂದ್ರಕಲಾ, ದಹಿ ವಲ್ಲಿಕಾ ಅಂತ ಏನೇನೋ ವೆರೈಟಿ ವೆರೈಟಿ ಅಡಗಿ ಮಡಿ ಹಾಕ್ತಾರ. ಎಷ್ಟ ಕ್ರೀಯೇಟಿವಿಟಿ ಅದ ಅವರಲ್ಲೆ. ನೀನು ಇದ್ದಿ ದಂಡಕ್ಕ, ಸ್ವಂತ ತಯಾರಿ ಮಾಡ್ಕೊಳ್ಳೊದ ಬ್ಯಾಡಾ, ಎಲ್ಲಾ ರೆಡಿ ಇದ್ದ ಇನ್ಸಟಂಟ್ ಜಾಮೂನ್ ಮಿಕ್ಸ ಕೊಡಸಿದ್ರು ಛಂದಾಗಿ ಬರೊಬ್ಬರಿ ಮಾಡಲಿಕ್ಕೆ ಬರುದಿಲ್ಲಾ ಅಂತ ಒದರಾಡಿದ್ದಕ್ಕ, ಪದ್ದಿ ಉರು ಉರಕೋತ ನಮ್ಮನಿಗೆ ಬಂದಿದ್ಲು.
ಇನ್ನ ಬಂದಾಕಿಗೆ ಸಮಾಧಾನಾ ಮಾಡಿ, “ಆ ಮ್ಯಾನೇಜರ ಹೆಂಡ್ತಿ ನನ್ನ ಫ್ರೆಂಡ್ ಇದ್ದಾಳ. ಇವತ್ತ ಸಂಜಿಮುಂದ ಮಹಿಳಾಮಂಡಳದ್ದ ಮೀಟಿಂಗಿಗೆ ಬರತಾಳ. ಆಕಿ ಹೆಂಗೆಂಗ ಅಡಗಿ ಮಾಡತಾಳ ಕೇಳೊಣು. ಆಕಿ ಹೇಳಿಧಂಗ ಮಾಡಿ ನಿನ್ನ ಗಂಡನ್ನ ಮುಂದ ಬಡಿ, ತಿನ್ನವಲ್ಲನ್ಯಾಕ” ಅಂದೆ. ಆವತ್ತ ಮಹಿಳಾ ಮಂಡಳದಾಗ ಆ ಮ್ಯಾನೇಜರ್ ಹೆಂಡ್ತಿ ಜೋಡಿ ಮಾತಾಡಿ ಬಂದ ಮ್ಯಾಲೆ ಪದ್ದಿ ಒಂದ ನಮೂನಿ ಕ್ರೇಜ್ ನ್ಯಾಗ ಇದ್ದಳು. ಒಂದ ಥರಾ ಸೇಡ ತಿರಿಸ್ಕೊಳ್ಳೊ ಕ್ರೇಜ್ ಕಾಣಿಸ್ಲಿಕತ್ತಿತ್ತು ಆಕಿಯಲ್ಲೆ. ಲಗೂ ಲಗೂ ಅಡಗಿ ತಯ್ಯಾರಿ ನಡಿಸಿದ್ಲು. ಎಲ್ಲಾ ಆದಮ್ಯಾಲೆ ರಾಘುನ್ನ ಊಟಕ್ಕ ಕರಿಬೇಕಂತ ಆಂವನ ಮುಂದ ಹೋಗಿ ನಿಂತು “”ನಿಮ್ಮ ಮ್ಯಾನೇಜರ್ ಮನ್ಯಾಗ ಮಾಡೊ ಚಂಪಕಮಾಲಾ, ಚಂದ್ರಕಲಾ, ದಹಿ ವಲ್ಲಿಕಾ ಮಾಡೇನಿ. ಊಟಕ್ಕ ಬರ್ರಿ” ಅಂತ ಕರದ್ಲು. ಇದನ್ನ ಕೇಳಿ ರಾಘು “ಅಡ್ಡಿಯಿಲ್ಲಾ, ಈಕಿಗೆ ನನ್ನ ಹೆದರಿಕಿ ಅದ. ಹಚ್ಚಿ ಝಾಡಿಸಿದ್ದಕ್ಕ ಹೇಂಗ ಎಲ್ಲಾ ಮಾಡೋದ ಕಲತಾಳ. ಹೆಂಡ್ತಿ ಮ್ಯಾಲಿನ ಹಿಡತಾನ ಹಿಂಗ ಮೆಂಟೇನ್ ಮಾಡ್ಬೇಕು” ಅಂತ ತನ್ನ ಬೆನ್ನ ತಾನ ಚಪ್ಪರಿಸ್ಕೊಂಡ. ಪಾಪ ಆಂವಗೇನ ಗೊತ್ತಿತ್ತ ಮುಂದ ದೊಡ್ಡ ಜಾತ್ರಿ ಕಾದದ ಅವನ ಸಲವಾಗಿ ಅಂತ. ರಾಘು ಅಡಗಿ ಮನಿಗೆ ಬಂದ ಊಟ ಮಾಡಲಿಕ್ಕೆ ರೆಡಿಯಾಗಿ ಕೂತಾ. ಪದ್ದಿ ಮಾಡಿದ್ದ ಅಡಗಿ ಒಂದೊಂದ ತಂದ ಗಂಡನ ಮುಂದ ಬಡದ್ಳು (ಇಟ್ಟಳು). ಆಕಿ ಮಾಡಿದ್ದೆಲ್ಲಾ ನೋಡಿ ರಾಘುನ್ನ ಮಾರಿ ಗೋಮುತ್ರಾ ಕುಡದಾಗ ಆಗಿರತದ ಅಲ್ಲಾ ಹಂಗ ಹುಳ್ಳ ಹುಳ್ಳಗ ಆಗಿತ್ತು. ಯಾಕಂದ್ರ ಆಕಿ ಮಾಡಿದ್ದ “ಚಂಪಕಮಾಲಾ” ಅಂದ್ರ ತಂಗಳದ್ದ ಕಟಿ ಭಕ್ರಿ (ಜೋಳದ ರೊಟ್ಟಿ), ಸುಟ್ಟ ಬದನಿಕಾಯಿ ಭಜ್ಜಿ. ಮತ್ತ ಮೂರನಾಲ್ಕ ದಿವಸದ್ದ ತಂಗಳ ಚಪಾತಿ ಉಳದಿದ್ರ ಅವನ್ನ ಗಾಳಿಗೆ ಇಟ್ಟ ಒಣಗಿಸಿ, ಸಣ್ಣಾಗಿ ಮುರದ ಬೆಲ್ಲದ ಪಾಕನ್ಯಾಗ ಹಾಕಿ ಕುದಿಸಿ, ಮ್ಯಾಲೆ ಯಾಲಕ್ಕಿ ಪುಡಿ ಉದರಿಸೊದು. ಇದಕ್ಕ ನಮ್ಮ ಉತ್ತರ ಕರ್ನಾಟಕದ್ದ ಹಳ್ಳಿಗೊಳ ಕಡೆ ‘ಹರಕ ಹುಗ್ಗಿ’ ಅಂತಾರ. ಅದನ್ನ ಮ್ಯಾನೇಜರ್ ಛಂದಾ ಮಾಡಿ, “ಚಂದ್ರಕಲಾ” ಅಂತ ಹೆಸರಿಟ್ಟ ಹೇಳಿದ್ದಾ. ಇನ್ನ ಹಿಂದಿನ ದಿನಾ ಉಳದದ್ದ ಅನ್ನಕ್ಕ ಮಸರ ಕಲಿಸಿ, ಬಳ್ಳೋಳ್ಳಿ ಒಗ್ಗರಣಿ ಕೊಟ್ಟ ಮಸರಬುತ್ತಿಗೆ “ದಹಿ ವಲ್ಲಿಕಾ” ಅಂತ ಹೆಸರಿಟ್ಟ ಮನ್ಯಾಗ ಹೆಂಡತಿ ತಂಗಳಾ ಬಂಗಳಾ ಮಾಡಿ ಹಾಕಿದ್ದನ್ನ ಹಿಂಗ ಹೆಸರಿಟ್ಟ ಒಪ್ಪ ಇಟಗೊಂಡಿದ್ದಾ. ಆವತ್ತ ಅಡಗಿ ಏನ ಮಾಡಿದ್ರು ಅಂತ ಕೇಳಿದಾಗ ಮ್ಯಾನೇಜರ್ ಸ್ವಲ್ಪ ವಿಚಾರ ಮಾಡಿ ಉತ್ತರಾ ಹೇಳಿದ್ದ ಯಾಕಂತ ಈಗ ತಿಳಿತು. ಆಂವಾ ಮಾತಾಡಿದ ಮಾತಿನ ಗೂಢಾರ್ಥ ತನ್ನ ಬಗ್ಗೆ ತೋರಿಸಿದ್ದ ಪಾಪ ಅನ್ನೊ ಮರುಕ ಯಾಕ ಅಂತ ಈಗ ಗೊತ್ತಾತು ರಾಘೂಗ. ಪಾಪ ಪದ್ದಿ ದಿನಾ ಮನ್ಯಾಗ ಎರಡು ಹೊತ್ತು ಬಿಸಿ ಅಡಗಿ ಮಾಡಿಹಾಕಿದ್ರು ಮ್ಯಾನೇಜರ್ ನ ಮುಂದ ವಾರಕ್ಕ ಮೂರಸಲಾ ನಮ್ಮನ್ಯಾಗ ಇವನ್ನ ಮಾಡತಾರ ಅಂತ ಬ್ಯಾರೆ ಹೇಳಿದ್ದಾ. ಇನ್ನೇನ ಮಾಡೊದ ಅಂತ ಹವರಗ ಪದ್ದಿ ಮಾರಿ ನೋಡಿದಾ. ಆಕಿ “ದಿನಾ ಬಿಸಿ ಬಿಸಿ ಮಾಡಿ ಹಾಕಿದ್ರ ಕೊಂಕಾ ಕಸರಾ ಹೆಸರಿಡತಿದ್ದಿ ಮೂಳಾ, ಈಗ ಮಾಡಿಟ್ಟೇನಿ ಈ ತಂಗಳಾ ಸರಳ ತಿನ್ನ” ಅನ್ನೊ ಹಂಗ ಇಂವನ್ನ ಮಾರಿನ ದುರುದುರು ನೋಡಕೋತ ಕೂತಿದ್ಲು.
*(ಹಸಿ ಹಿಟ್ಟಿನ ಗಂಟು)
ಯಪ್ಪಾ….ಯಪ್ಪಾ…ಯೇ ನಾ ವಲ್ರೇಪಾ….ತಗೀರೀ….ಅತ್ತಾಗ !
ರಾಘಣ್ಣನ ಫಜೀತಿ ಯಾರಿಗೀ ಬ್ಯಾಡ್ರೆಪಾ…
ಸುಮ್ಕ ವೈನಿ ಮಾಡಿ ಹಾಕಿದ್ದನ್ನ ಬಿಸಿಬಿಸಿಯಾಗಿ ತಿಂದು ಇರೋದ ಬಿಟ್ಟು, ಇಲ್ಲದ ದಿಮಾಕ ಮಾಡಿದ್ದಕ್ಕ ಖರೇನ ಶಾಸ್ತಿ ಆಗೇತಿ ನೋಡ್ರೀ….
ಚೆಂದದ ಲೇಖನ…ನಗುತ್ತಲೇ ಓದಿಸಿಕೊಂಡ ಬರಹ…
super
agdi chendaitri!!
ಮಾಡಿದ ಅಡಿಗೆಯ ಹಿಂದಿನ ಪ್ರೀತಿ ಗುರುತಿಸದೆ ಹಾಸ್ಯ ಮಾಡೋ ಗಂಡಂದಿರಿಗೆ ಒಂದು ಒಳ್ಳೇ ಪಾಠ ವಾಯ್ತು…..:)
😀 😀 😀
Estvaythu nimma lekana