ನಾಟಕಕಾರರಾಗಿ ಕುವೆಂಪು (ಭಾಗ-15) : ಹಿಪ್ಪರಗಿ ಸಿದ್ದರಾಮ್, ಧಾರವಾಡ


ಆತ್ಮೀಯ ರಂಗಾಸಕ್ತ ಓದುಗಪ್ರಭುಗಳೇ, ನಾವೀಗ ಮಹಾಕವಿ ಷೇಕ್ಸ್ ಪಿಯರ್‍ನ ‘ಹ್ಯಾಮ್ಲೆಟ್’ ನಾಟಕಕೃತಿಯನ್ನು ಯುಗದಕವಿ ಕುವೆಂಪುರವರು ಕನ್ನಡದಲ್ಲಿ ರೂಪಾಂತರವಾಗಿಸುವುದರೊಂದಿಗೆ ಸುದೀರ್ಘವಾಗಿರುವ ರುದ್ರರಸ ಪ್ರಧಾನ ‘ರಕ್ತಾಕ್ಷಿ’ ರಂಗಕೃತಿಯ ಕುರಿತು ಹಿಂದಿನ ಸಂಚಿಕೆಯಿಂದ ನೋಡುತ್ತಿದ್ದೇವೆ. ಅದರ ಮುಂದುವರಿದ ಕಥಾನಕ ನಿಮಗಾಗಿ…
 
ಸೆರೆಮನೆಯಲ್ಲಿದ್ದ ಬಸವಯ್ಯ ಮತ್ತು ಲಿಂಗಣ್ಣನವರನ್ನು ಬಿಡುಗಡೆ ಮಾಡಲು ಸನ್ಯಾಸಿಯ ಮಾರ್ಗದರ್ಶನದಲ್ಲಿ ಶಿವಯ್ಯ ಮತ್ತು ಹೊನ್ನಯ್ಯ ಯಶಸ್ವಿಯಾಗುತ್ತಾರೆ. ನಂತರ ಅವರನ್ನು ಕಂಸಿ ಮಾರ್ಗವಾಗಿ ಶಿವಮೊಗ್ಗೆಯ ಹತ್ತಿರ ತುಂಗಾತೀರದಲ್ಲಿರುವ ಹೈದರಾಲಿಯ ಬಿಡಾರಕ್ಕೆ ಕಳುಹಿಸುವುದರೊಂದಿಗೆ ತೀಕ್ಷ್ಣಮತಿಯೂ, ಕುಶಲಮತಿಯೂ ಆದ ಸನ್ಯಾಸಿಯೂ ಬಿಡುಗಡೆಯ ವಿಷಯದಲ್ಲಿ ತನ್ನ ಪಾತ್ರವನ್ನು ದಕ್ಷರಾಜಕಾರಣಿಯಾಗಿ ನಿರ್ವಹಿಸಿದ್ದರೂ ನಂತರದಲ್ಲಿ ಲಿಂಗಣ್ಣ ಮತ್ತು ಹೊನ್ನಯ್ಯ, ಬಸವಯ್ಯ-ಶಿವಯ್ಯ ಎಂದು ಇಬ್ಬಿಬ್ಬರನ್ನು ಬೇರೆ-ಬೇರೆಯಾಗಿ ಕಳುಹಿಸಬಾರದಿತ್ತು ಎಂದು ಅನಿಸುತ್ತದೆ. ಇಂತಹ ಒಂದು ಸಣ್ಣ ತಪ್ಪು ಮುಂದೆ ಸಾಮ್ರಾಜ್ಯವನ್ನಾಳಬೇಕಿದ್ದ ರಾಜಕುಮಾರನೊಬ್ಬನನ್ನು ಬಲಿತೆಗೆದುಕೊಳ್ಳುವುದು ಮೈನವಿರೇಳಿಸುವಂತಹ, ಮನಮಿಡಿಯುವಂತಹ ಘಟನೆಯಾಗುಳಿಯುವುದು ಮುಂದಿನ ಅಂಕದ ಪ್ರಧಾನ ಘಟನೆ.
 
ನಾಲ್ಕನೆಯ ಅಂಕದ ಮೊದಲನೇ  ದೃಶ್ಯದಲ್ಲಿ ಮಂತ್ರಿ ಲಿಂಗಣ್ಣ ಮತ್ತು ರಾಜಕುಮಾರ ಬಸವಯ್ಯರು ಸೆರೆಮನೆಯಿಂದ ತಪ್ಪಿಸಿಕೊಂಡು ಹೋಗಿರುವ ಸುದ್ಧಿಯು ರಾಜ್ಯದಲ್ಲೆಲ್ಲ ಹರಡಿಕೊಂಡು ಜನರು ಚರ್ಚಿಸುತ್ತಿರುವುದು, ಪ್ರತಿಕ್ರಿಯಿಸುತ್ತಿರುವುದು ಜನರಲ್ಲಿ ಅರಮನೆಯ ವಿಷಯಗಳ ಕುರಿತಾಗಿರುವ ಕುತೂಹಲ-ಆಸಕ್ತಿಗಳನ್ನು ಇಲ್ಲಿ ಮಹಾಕವಿಗಳು ಹಲವಾರು ಪಾತ್ರಗಳ ಮೂಲಕ ರಾಜಬೀದಿಯಲ್ಲಿ ಗುಂಪು-ಗುಂಪಾಗಿಸುವುದರೊಂದಿಗೆ ಆಗಿನ ಕಾಲಮಾನವನ್ನು ಮರುಸೃಷ್ಟಿಸಿರುವುದನ್ನು ಗಮನಿಸಬಹುದು. ಇಲ್ಲಿ ನಿಜವಾಗಿ ನಡೆದ ಘಟನೆಗೆ ಜನರು ಏನೆಲ್ಲಾ ಮಾತಾಡುತ್ತಾ ಹೇಗೆ ಗಾಳಿ ಸುದ್ಧಿ ಪಡೆಯುತ್ತದೆಂಬುದನ್ನು ಕುತೂಹಲಕರವಾಗಿ ರಂಗಸ್ಥಳದಲ್ಲಿ ಪ್ರಕಟಗೊಳ್ಳುತ್ತಿರುವಾಗಲೇ ರುದ್ರಾಂಬೆಯು ಹುಚ್ಚಿಯಂತೆ ಛದ್ಮವೇಷವನ್ನು ಧರಿಸಿಕೊಂಡು ಬರುತ್ತಾಳೆ. ಜನರೆಲ್ಲ ಹೆದರಿ ದೂರ ಸರಿಯುತ್ತಾರೆ. ಇಲ್ಲಿ ಮಹಾಕವಿಗಳು ರುದ್ರಾಂಬೆಗಾಗಿ ಒಂದು ದೊಡ್ಡದಾದ ಸಂಭಾಷಣೆಯನ್ನು ಸೃಷ್ಟಿಸಿದ್ದಾರೆ. ಈ ಸಂಭಾಷಣೆಯನ್ನು ನಾನು ಹಲವಾರು ಸ್ಪರ್ಧೆಗಳಲ್ಲಿ/ಉತ್ಸವಗಳಲ್ಲಿ ಉಸ್ತುವಾರಿಯಾಗಿ/ಸಂಘಟಕನಾಗಿ/ನಿರ್ಣಾಯಕ/ಸ್ಪರ್ಧಿಯಾಗಿ ಭಾಗವಹಿಸಿದ್ದಾಗ ಹಲವರು ಅಭಿನಯಿಸಿ ಬಹುಮಾನ/ಪಾರಿತೋಷಕಗಳನ್ನು ಪಡೆದಿರುವುದನ್ನು ಬಲ್ಲೆ. ಅಂತಹ ಉತ್ಕೃಷ್ಟ ಮತ್ತು ಅಭಿನಯ ಸಾಮರ್ಥ್ಯವನ್ನು ಅಭಿವ್ಯಕ್ತಿಸುವ ತಾಕತ್ತಿರುವ ಸಂಭಾಷಣೆಯು ಮಹಾಕವಿಗಳ ಲೇಖನಿಯಲ್ಲಿ ಹೊರಹೊಮ್ಮಿದೆ. ಈ ಸಂಭಾಷಣೆಯಲ್ಲಿ ರುದ್ರ್ರಾಂಬೆಯು ತನ್ನೂರು ನರಕವಾಗಿರುವುದು, ಎದ್ದೇಳಿ ಎಂದು ಜನರನ್ನು ಜಾಗೃತರಾಗಿಸುವುದು, ಶೂಲಕ್ಕೇರಿಸಲು ಬಂದವರಿಗೆ ಒದೆಯುವುದು, ಊರಿನಲ್ಲಿ ಹೊತ್ತಿಕೊಂಡ ಬೆಂಕಿ ನಡುವೆ ಬಾಲವಿಧವೆ, ಕೈಮುಂದೆ ಮಾಡಿ ಮಗುವನ್ನು ಎತ್ತಿಕೊಂಡಂತೆ, ಯಾರನ್ನೊ ತಡೆದಂತೆ, ಪುನಃ ಮಗುವನ್ನು ಸಂತೈಸುವಂತೆ, ಬಿದ್ದು ರೋದಿಸುತ್ತಾ ತಾನು ರುದ್ರಾಂಬೆಯಾಗಿದ್ದವಳು ರಕ್ತಾಕ್ಷಿಯಾಗಿರುವುದನ್ನು ಹೇಳುವುದರಲ್ಲಿ ಹೆಚ್ಚು ಧ್ವನಿಪೂರ್ಣ ಮತ್ತು ಅರ್ಥಪೂರ್ಣವಾಗಿದೆ. ರಾಜಬೀದಿಯಲ್ಲಿದ್ದ ಯಾರಿಗೂ ಇವಳು ಗುರುತು ಸಿಗದಂತೆ ಹುಚ್ಚಿಯಂತೆ ತೋರಿಸಿಕೊಂಡಿದ್ದಾಳೆ. ಇವಳ ಅಭಿನಯದಿಂದ ಕೆಲವರಿಗೆ ಜ್ವರ ಬಂದಿದ್ದು, ಮತ್ತೆ ಕೆಲವರಿಗೆ ಪಿಶಾಚಿ ಹಿಡಿದಿರಬೇಕೆಂದು ಮಾತಾಡಿಕೊಳ್ಳುವಷ್ಟು ಪರಿಣಾಮಕಾರಿಯಾದ ಅಭಿನಯವನ್ನು ಮಾಡುತ್ತಾ ಮರೆಯಾಗುತ್ತಾಳೆ. ಅವಳು ಮರೆಯಾಗುತ್ತಿರುವಂತೆ ಇಬ್ಬರು ರಾಜಭಟರು ಸೆರೆಮನೆಯ ಕಾವಲುಗಾರ ಸಿಂಗಣ್ಣನನ್ನು ರಪ್ ರಪ್ ಹೊಡೆಯುತ್ತಾ, ಗುದ್ದುತ್ತಾ ದಬ್ಬಿಕೊಂಡು ಹೋಗುತ್ತಾರೆ. ಆತನು ಹಿಂದಿನ ರಾತ್ರಿ ಸೆರೆಮನೆಯಲ್ಲಿದ್ದ ಬಸವಯ್ಯ ಮತ್ತು ಲಿಂಗಣ್ಣರು ತಪ್ಪಿಸಿಕೊಂಡು ಹೋಗಲು ಸಹಾಯ ಮಾಡಿದ್ದಾನೆಂದು ಅವನಿಗೆ ಶಿಕ್ಷಿಸಲು ದರ್ಬಾರಿಗೆ ಕರೆದೊಯ್ಯುವಾಗ ರಾಜಬೀದಿಯಲ್ಲಿ ಹಾದು ಹೋಗುತ್ತಾರೆ.

 
ಈ ಅಂಕದ ಎರಡನೆಯ ದೃಶ್ಯವು ದಟ್ಟಡವಿಯ ನಡುವಣ ಹಾದಿಯಲ್ಲಿ ಬಸವಯ್ಯ ಮತ್ತು ಶಿವಯ್ಯರು ಹೋಗುತ್ತಿರುವಾಗ ನಡೆಯುವ ಈ ರಂಗಕೃತಿಯ ಮಹತ್ವದ ಘಟನೆ ಮತ್ತು ಹೋರಾಟದ ಅಂತಿಮ ಘಟ್ಟಕ್ಕೆ ಬಂದು ತಲುಪುವ ಮನಕಲಕುವಂತಹ ಸನ್ನಿವೇಶ. ಸೆರೆಯಿಂದ ಬಿಡುಗಡೆಗೊಂಡು ಇವರಿಬ್ಬರಿಗಿಂತ ಮುಂದೆ ನಡೆದ ಮಂತ್ರಿ ಲಿಂಗಣ್ಣ ಮತ್ತು ಹೊನ್ನಯ್ಯರು ಇವರಿಗೆ ಇನ್ನೂ ಸಿಕ್ಕಿಲ್ಲ. ಇಂತಹ ಸನ್ನಿವೇಶವನ್ನು ಉಪಯೋಗಿಸಿಕೊಳ್ಳಲು ಶಿವಯ್ಯನು ರುದ್ರಾಂಬೆಯ ಕುರಿತಾಗಿ ರಾಜಕುಮಾರ ಬಸವಯ್ಯನ ಮನದಲ್ಲಿ ಕೆಟ್ಟಭಾವನೆ ಹುಟ್ಟುವಂತೆ ಪ್ರಯತ್ನಿಸುತ್ತಾನೆ. ರುದ್ರಾಂಬೆಯು ಹೊನ್ನಯ್ಯನಿಗೆ ಒಲಿದುಕೊಂಡು ತನ್ನ ತಂದೆಯನ್ನು ಬಿಡುಗಡೆ ಮಾಡಿಸಿಕೊಂಡಳು ಎಂದು ಹೇಳಿದಾಗ, ಬಸವಯ್ಯನು ರುದ್ರಾಂಬೆ ಮತ್ತು ಹೊನ್ನಯ್ಯರು ಇಂತಹ ದ್ರೋಹವೆಂದಿಗೂ ಬಯಸಲಾರರು ಎಂದು ನುಡಿಯುತ್ತಾನೆ. ತನ್ನ ತಂತ್ರ ವಿಫಲವಾದುದಕ್ಕೆ ಮತ್ತೊಂದು ತಂತ್ರದ ಕುರಿತು ಯೋಚಿಸಲಾಗಿ, ‘ಇವನನು ಕೊಂದೆ ಕೆಲಸ ಕೈಗೂಡಿಸುವೆ!’ ಎಂದು ಮನದಲ್ಲಿ ನಿರ್ಧರಿಸುತ್ತಾನೆ. ಆಳದ ಪ್ರಪಾತದ ಬಂಡೆಯ ತುದಿಯೊಂದರಲ್ಲಿ ಕುಳಿತು ಇಬ್ಬರೂ ಮಾತನಾಡುತ್ತಿರುವಾಗ ದುರಾಲೋಚನೆಯಲ್ಲಿರುವ ಶಿವಯ್ಯನು ಜಿಂಕೆಯೊಂದು ಕಮರಿಯಲ್ಲಿ ಬಿದ್ದಿರುವುದನ್ನು ತೋರಿಸುತ್ತಾನೆ. ಕುತೂಹಲಕ್ಕೆ ರಾಜಕುಮಾರ ಬಸವಯ್ಯನು ನೋಡಿದಾಗ ಕಾಣುವುದಿಲ್ಲ. ಇನ್ನೂ ಸ್ವಲ್ಪ ಬಗ್ಗಿ ನೋಡಿದಾಗ ಕಾಣುವುದೆಂದು ಹೇಳಿದ ಶಿವಯ್ಯನ ಮಾತಿಗೆ ತಲೆಯುಡೆಯನ್ನು (ಪೇಠಾ/ಪಗೋಡಾ) ಕೆಳಗಿಟ್ಟು ಬಾಗಿ ನೋಡುತ್ತಿರುವಾಗ ಶಿವಯ್ಯನು ಬಸವಯ್ಯನನ್ನು ಆಳದ ಪ್ರಪಾತಕ್ಕೆ ತಳ್ಳುತ್ತಾನೆ. ಬಸವಯ್ಯನ ರೋದನವು ‘ಅಯ್ಯೋ’ ಎಂದು ಕೇಳಿಸುತ್ತಿರಲು, ಅಲ್ಲಿದ್ದ ಕಲ್ಲು ಗುಂಡೊಂದನ್ನು ಎತ್ತಿಹಾಕಲು ಹವಣಿಸುತ್ತಿರುವಾಗ ಕುದುರೆಗಳ ಖುರಪುಟದ ಶಬ್ದವು ಕೇಳಿಸಲಾಗಿ ಪಕ್ಕದ ಪೊದೆಯಲ್ಲಿ ಅಡಗಿಕೊಳ್ಳುವನು. ಅಲ್ಲಿಗೆ ಆಗಮಿಸುವ ಹೊನ್ನಯ್ಯ ಮತ್ತು ಲಿಂಗಣ್ಣರು ಯಾರೋ ಪ್ರಪಾತದಲ್ಲಿ ಬಿದ್ದಿರಬೇಕೆಂದು ಅಂದುಕೊಳ್ಳುತ್ತಿರುವಾಗ ರಾಜಕುಮಾರ ಬಸವಯ್ಯನ ತಲೆಯುಡೆಯು ಪ್ರಪಾತದ ತುದಿಯ ಬಂಡೆ ಮೇಲಿರುವುದನ್ನು ಗಮನಿಸುತ್ತಾರೆ. ಮತ್ತೊಂದೆಡೆ ಶಿವಯ್ಯ-ಬಸವಯ್ಯರು ಏರಿ ಬಂದ ಕುದುರೆಗಳು ನಿಂತಿರುವದನ್ನು ಕಾಣುತ್ತಾರೆ. ಪುನಃ ಅಯ್ಯೋ ಎಂಬ ಧ್ವನಿಯು ಪ್ರಪಾತದಿಂದ ಕೇಳಿ ಬರಲು ಹೊನ್ನಯ್ಯನು ಆ ಕಡೆಯಿಂದ ಪ್ರಪಾತದಲ್ಲಿಳಿದು ಬಸವಯ್ಯನನ್ನು ಮೇಲೆ ತರಲು ಹೋಗುತ್ತಾನೆ. ಅವನಿಗೆ ಎಚ್ಚರವಾಗಿ ಹೋಗಿ ಬರಲು ಲಿಂಗಣ್ಣನು ಹೇಳುತ್ತಾ ಅವನ ಹಿಂದೆ ಹೋಗುತ್ತಾನೆ. ಇತ್ತ ಪೊದೆಯಲ್ಲಿ ಅಡಗಿ ಕುಳಿತ ಶಿವಯ್ಯನು ಹೊರಗೆ ಬಂದು ರಾಜಕುಮಾರ ಬಸವಯ್ಯನ ತಲೆಯುಡೆಯೊಂದಿಗೆ ಕುದುರೆಯನ್ನೇರಿ ಹೈದರಾಲಿಯ ಬಿಡಾರಕ್ಕೆ ಹೋಗುವ ಉದ್ದೇಶದಿಂದ ಅಲ್ಲಿಂದ ಪರಾರಿಯಾಗುತ್ತಾನೆ.
 
ಆತ ಹೋದ ನಂತರ ಗಂಭೀರ ಗಾಯಗೊಂಡು ಬದುಕಲಾರದ ಸ್ಥಿತಿಯಲ್ಲಿರುವ ಬಸವಯ್ಯನನ್ನು ಪ್ರಪಾತದ ಮೇಲೆ ಹೊನ್ನಯ್ಯ ಮತ್ತು ಲಿಂಗಣ್ಣರು ತರುತ್ತಾರೆ. ಇಲ್ಲಿಂದ ಆರಂಭವಾಗುವ ರುದ್ರನಾಟಕದ ದುರಂತಗಳ ಸರಮಾಲೆಯು ಓದುಗರಿಗೆ/ಪ್ರೇಕ್ಷಕರಲ್ಲಿ ಕಂಪನವನ್ನುಂಟುಮಾಡಿಸಲು ಆರಂಭವಾಗುತ್ತದೆ. ಶಿವಯ್ಯನ ಮೋಸವನ್ನು ಸಂಪೂರ್ಣವಾಗಿ ಕಷ್ಟದಿಂದ ಹೇಳುವ ಬಸವಯ್ಯನು ಹೈದರಾಲಿಗೆ ಕೊಡುವಂತೆ ಸನ್ಯಾಸಿಯು ಕೊಟ್ಟ ಪತ್ರವನ್ನು ಮಂತ್ರಿ ಲಿಂಗಣ್ಣನ ಕೈಗೆ ಕೊಡುತ್ತಾ, ತನ್ನ ತಂದೆಯನ್ನು ಕೊಂದ ಪಾಪಿಗಳಿಗೆ ತಕ್ಕ ಪ್ರಾಯಶ್ಚಿತ್ತ ಮಾಡಿಸುವಂತೆ ತನ್ನ ಕೊನೆಯ ಬೇಡಿಕೆಯನ್ನು ಹೇಳುತ್ತಾನೆ. ಆ ಬೇಡಿಕೆಯನ್ನು ಈಡೇರಿಸುವ ಪ್ರತಿಜ್ಞೆಯನ್ನು ಮಂತ್ರಿ ಲಿಂಗಣ್ಣನು ಮಾಡುತ್ತಾನೆ. ರಾಜಕುಮಾರ ಬಸವಯ್ಯನು ಸಾವಿನ ಅಂಚಿನಲ್ಲಿರುವಾಗ ಕನವರಿಸಲು ಆರಂಭಿಸುತ್ತಾನೆ. ಮಗುವಿನಂತೆ ತೊದಲಾಡುತ್ತಾ, ಹುಡುಗರಂತೆ ಕೇಕೆ ಹಾಕಿ ನಡುಗುತ್ತಾನೆ. ಇಲ್ಲಿ ಮಹಾಕವಿಗಳು ಲಿಂಗಣ್ಣ ಮಂತ್ರಿ ಪಾತ್ರ ಮೂಲಕ ಹೊಸ ವಿಚಾರವನ್ನು ಹೇಳಿಸಿದ್ದಾರೆ.

ಹೊನ್ನಯ್ಯ, ಉತ್ಕ್ರಮಣ ಚಿಹ್ನೆಯಿದು. ಕಾಲವೇ
ಹಿಂದಕ್ಕೆ ಸರಿಯುವುದು ಮರಣವೈತರುವಾಗ.
ಅವನೀಗ ಬಾಲ್ಯದುದ್ಯಾನದಲಿ ತಿರುಗುತಿಹನು !
 
ಹೀಗೆ ಕನವರಿಸುತ್ತಲಿರುವಾಗ, ‘ಹೊನ್ನಯ್ಯನು ರುದ್ರಾಂಬೆಗಾಗಿಯಾದರೂ ಬದುಕಲಾರೆಯಾ?’ ಎಂದು ಕೇಳಿದಾಗ, ಬಸವಯ್ಯನು ಹೇಳುವ ಮಾತುಗಳು ಮುಂದೆ ನಡೆಯಲಿರುವ ರುದ್ರರಂಗದಲ್ಲಿಯ ಕರಾಳ ಘಟನಾವಳಿಗಳ ಮುನ್ಸೂಚನೆಯನ್ನು ನಾವು ಗಮನಿಸಬಹುದು.
 
ಓ ರುದ್ರಾಂಬೆ,
ಮುಡಿಗೆದರಿ ನಿಂತಿರುವೆ ಏಕಿಂತು? ಏನಿದು?
ಹುಚ್ಚಿಯಂತಿಹೆಯಲ್ಲಾ! ರಕ್ತಾಕ್ಷಿಯಾಗಿರುವೆ?
ಹಾಗಾದರಿನ್ನು ನೀ ರುದ್ರಾಂಬೆಯಲ್ಲವೇ?
ಮಾತಾಡು! ಮಾತಾಡು, ಓ ರಕ್ತಾಕ್ಷಿ!
ಓ ರಕ್ತಾಕ್ಷಿ, ಮುಯ್ಯಿ ತೀರಿಸಿಕೋ!- (ಚೀರಿ)
ಅವನಲ್ಲ! ಅವನಲ್ಲ! ಅವನು ಹೊನ್ನಯ್ಯ!
ಅಯ್ಯೋ ಅವನನೇತಕೆ ತಿವಿದು ಕೊಂದೆ?
 
ಎನ್ನುತ್ತಾ ಅಳುತ್ತಾನೆ. ಜೀವಹೋಗುವ ಕೊನೆಯ ಸಂದರ್ಭದಲ್ಲಿ ಮನದ ತಳಮಳವೆಲ್ಲಾ ಅಡಗಿ “ಏನಿದು ಶಾಂತಿ!” ಎನ್ನುತ್ತಾ ಮನಸ್ಸು ಅಂತರ್ಮುಖವಾಗುತಿರಲು ‘ಜ್ಯೋತಿ ! ಜ್ಯೋ-ತಿ ಜ್ಯೋ-’ ಎಂದು ಮಹಾಜ್ಯೊತಿಯಲ್ಲಿ ಲೀನವಾಗುತ್ತಾನೆ (ಸಾಯುತ್ತಾನೆ). ಅವನ ಸಾವಿನಿಂದ ದುಃಖದಲ್ಲಿದ್ದ ಮಂತ್ರಿ ಲಿಂಗಣ್ಣನವರು ಹತಾಶೆಯಿಂದ ‘ಎಲ್ಲ ಮುಗಿದುದು, ಹೊನ್ನಯ್ಯ. ಮುಂದೇನು ಗತಿ?’ ಎಂದು ಕೇಳುತ್ತಿರುವಾಗ ದೂರದಲ್ಲಿ ಕುದುರೆಗಳ ಖುರಪುಟದ ಸದ್ದು ಕೇಳಿ ಬರುತ್ತದೆ. ಸೆರೆಮನೆಯಿಂದ ತಪ್ಪಿಸಿಕೊಂಡು ಬಂದಿರುವ ತಮ್ಮನ್ನಾಕ್ರಮಿಸಲು ಬಿದನೂರಿನಿಂದ ನಿಂಬಯ್ಯನು ಕಳಿಸಿರುವ ಸೈನ್ಯವೆಂದು ಅರಿತುಕೊಳ್ಳುತ್ತಾರೆ. ಕಳೆಬರವನ್ನು ಇಲ್ಲಿಯೇ ಹೀಗೆ ಬಿಟ್ಟರೇ ಸಂಸ್ಕಾರ ನಡೆಯದೆಂದು ಆತಂಕದಲ್ಲಿರುವಾಗ ಹೊನ್ನಯ್ಯನು ಉಪಾಯವೊಂದನ್ನು ಹೇಳುವುದರೊಂದಿಗೆ ಲಿಂಗಣ್ಣನವರಿಗೆ ಬೇಗ ಕುದುರೆಯನೇರಿ ಹೈದರಾಲಿಯ ಬಿಡಾರೆದೆಡೆಗೆ ಹೋಗಲು ಹೇಳುತ್ತಾನೆ. ಹೊನ್ನಯ್ಯನು ಉಪಾಯದಿಂದೆಂಬಂತೆ ತಾನೇ ಬಸವಯ್ಯನನ್ನು ಹಿಡಿದು ಕೊಂದೆನೆಂದು ಹೇಳಿ ಹೇಗಾದರೂ ಮಾಡಿ ಆತನ ದೇಹವನ್ನು ಬಿದನೂರಿಗೆ ಸಾಗಿಸಿ ಅದಕ್ಕೆ ಸಂಸ್ಕಾರವನ್ನು ನಡೆಸುವುದಾಗಿ ಹೇಳುತ್ತಾನೆ. ‘ನಾನೆಯೆ ಬಸವಯ್ಯ, ಲಿಂಗಣ್ಣ, ಶಿವಯ್ಯರನು ಬೆನ್ನಟ್ಟಿ ಬಂದೆನೆಂದೂ ಅವರನಾಕ್ರಮಿಸಲು ಸಾಧ್ಯವಿಲ್ಲದೆ ಬಸವಯ್ಯನನು ತಿವಿಯಬೇಕಾಯಿತೆಂದೂ, ಲಿಂಗಣ್ಣ, ಶಿವಯ್ಯರು ಖುರಪುಟ ಧ್ವನಿ ಕೇಳಿ ಪ್ರಾಣಭಯದಿಂದ ಮುಂದೆ ದೌಡಾಯಿಸಿದರೆಂದೂ ಹೇಳುವೆನು’ ಎಂದು ಯೋಚಿಸುತ್ತಾ, ಕತ್ತಿಯನ್ನೆಳೆದು ‘ಬಸವಯ್ಯ, ಶಿವಯ್ಯನಿಗೆ ಮುಮದೆ ಮಾಡುವ ಕೆಲಸವನು ನಿನಗಿಂದೆ ಮಾಡುತ್ತೇನೆ!’ ಎಂದು ಬಸವಯ್ಯನ ಶವದ ಎದೆಯಲ್ಲಿ ಇರಿದು ಹೊರತೆಗೆದಾಗ ಕೆಂಪಾದ ಖಡ್ಗವನ್ನು ನೋಡುತ್ತಾ ಬರುತ್ತಿರುವ ಸೈನಿಕರು ಇದರಿಂದ ಮೋಸಹೋಗುವರು ಎಂದು ಹೇಳುವಾಗ ಆಪ್ತಮಿತ್ರ ಬಸವಯ್ಯನಿಗಾಗಿ ಹೊನ್ನಯ್ಯನ ಹೃದಯದ ವೇದನೆ ಮನಮಿಡಿಯುತ್ತದೆ. ಇಲ್ಲಿ ಹೊನ್ನಯ್ಯನು ಗೆಳೆತನಕ್ಕೆ ಉನ್ನತ ಮಾದರಿಯ ಸಂಕೇತವಾಗುತ್ತಾನೆ.
 
ಮುಂದಿನ 3ನೇಯ ದೃಶ್ಯದಲ್ಲಿ ಶಿವಮೊಗ್ಗೆಯ ಹತ್ತಿರದ ತುಂಗಾನದಿಯ ತೀರದಲ್ಲಿ ಹೈದರಾಲಿಯ ಸೈನ್ಯದ ಶಿಬಿರ/ಬಿಡಾರದಲ್ಲಿ ಕಥಾನಕವು ಬಿಚ್ಚಿಕೊಳ್ಳುತ್ತದೆ. ರಾಜಕುಮಾರ ಬಸವಯ್ಯನನ್ನು ಆಳದ ಕಮರಿಗೆ ತಳ್ಳಿ ಆತನ ತಲೆಯುಡೆಯನ್ನು ಹಾರಿಸಿಕೊಂಡು ವೇಗವಾಗಿ ಕುದುರೆಯ ಮೇಲೆ ಹೈದರಾಲಿಯ ಸೇನೆಯ ಬಿಡಾರಕ್ಕೆ ಆಗಮಿಸುವ ಶಿವಯ್ಯನು ತಾನು ರಾಜಕುಮಾರ ಬಸವಯ್ಯನೆಂದು ಪರಿಚಯಿಸಿಕೊಂಡು ತನಗೆ ಅನುಕೂಲವಾಗುವಂತೆ ಕಲ್ಪಿತ ಕಥೆಯನ್ನು ಹೇಳುತ್ತಾ ಅವರ ಅನುಕಂಪವನ್ನು ಗಿಟ್ಟಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾನೆ. ಅದೇ ವೇಳೆಗೆ ಮಂತ್ರಿ ಲಿಂಗಣ್ಣನವರು ಆಗಮಿಸಿರುವುದನ್ನು ಪಹರೆ ಕಾಯುವ ಸೇವಕ(ಪಹರಿ)ನು ತಡೆದು ನಿಲ್ಲಿಸುತ್ತಾ ವಿಚಾರಿಸಿದಾಗ, ಹೈದರಾಲಿಗೆ ಪತ್ರವೊಂದನ್ನು ಕೊಡುವುದಿದೆ ಎಂದಾಗ, ಅನುಮತಿಗಾಗಿ ಒಳಗೆ ಹೋಗುತ್ತಾನೆ. ಅನುಮತಿ ಸಿಗುವವರೆಗೂ ವಿಶ್ರಮಿಸಿಕೊಳ್ಳುತ್ತಿರುವಾಗ ಒಳಗಿರುವವರ ಕುರಿತು ಪಹರಿಯೊಬ್ಬನಲ್ಲಿ ವಿಚಾರಿಸಿದಾಗ, ಆತನು ರಾಜಕುಮಾರ ಬಸವಯ್ಯನವರು ತಮ್ಮ ದೊರೆಗಳೊಂದಿಗೆ ರಾಜಕಾರಣವನ್ನು ಮಾತಾಡುತ್ತಿರುವುದನ್ನು ಕೇಳಿ ತಿಳಿದುಕೊಳ್ಳುತ್ತಾನೆ.
 
ಮುಂದಿನ ದೃಶ್ಯ 4ರಲ್ಲಿ ಹೈದರಾಲಿಯ ಸೇನೆಯ ಬಿಡಾರಕ್ಕೆ ಆಗಮಿಸಿದ್ದ ಲಿಂಗಣ್ಣ ಮಂತ್ರಿಗಳಿಗೆ ಸ್ವಲ್ಪ ಸಮಯದ ನಂತರ ಅನುಮತಿ ಸಿಗಲು ಬಿಡಾರದೊಳಗೆ ಪ್ರವೇಶವಾಗುವ ಕುತೂಹಲಕರವಾದ ಸನ್ನಿವೇಶವನ್ನು ಮಹಾಕವಿಗಳು ಸೃಷ್ಟ್ಟಿಸಿದ್ದರಿಂದ ಇಲ್ಲಿ ಪ್ರೇಕ್ಷಕರನ್ನು/ಓದುಗರನ್ನು ಹೆಚ್ಚು ಆಕರ್ಷಿಸುತ್ತದೆ. ತಾನೆ ಬಸವಯ್ಯನೆಂದು ಬಂದು ಬಿಡಾರ ಸೇರಿಕೊಂಡ ಶಿವಯ್ಯನು ಮಂತ್ರಿ ಲಿಂಗಣ್ಣನವರು ತನಗೆ ವಿರುದ್ಧವಾಗಿದ್ದಾರೆಂದು ಈಗಾಗಲೇ ಹೈದರಾಲಿಯ ಹತ್ತಿರ ಹೇಳಿಕೊಂಡಿದ್ದಾನೆ. ಆದರೆ ಬಸವಯ್ಯನ ಪರವಾಗಿ ಲಿಂಗಣ್ಣ ಮಂತ್ರಿಗಳಿದ್ದಾರೆಂಬುದು ಸನ್ಯಾಸಿಯು ಕೊಟ್ಟಿರುವ ಪತ್ರದಲ್ಲಿಯ ವಿಷಯವಾಗಿರುತ್ತದೆ. ಇಲ್ಲಿ ಸತ್ಯವನ್ನು ತಿಳಿದುಕೊಳ್ಳುವುದಾದರೂ ಹೇಗೆಂದು ತಿಳಿಯದ ಸಂದರ್ಭದಲ್ಲಿ ಲಿಂಗಣ್ಣ ಮಂತ್ರಿಯು ಗಂಭೀರವಾಗಿ ಪ್ರವೇಶಿಸುತ್ತಾನೆ. ಶಿವಯ್ಯ ದಿಗಿಲು ಬೀಳುತ್ತಾನೆ. ಲಿಂಗಣ್ಣಮಂತ್ರಿಯು ಹೈದರಾಲಿ ಮತ್ತು ಅವನ ಸೇನಾಧಿಪತಿ ಮಹಮ್ಮದಾಲಿಗಳಿಗೆ ಕೈಮುಗಿಯುತ್ತಾನೆ. ಹೈದರಾಲಿಯು ಗೌರವದಿಂದ ಪ್ರತಿನಮಸ್ಕಾರ ಮಾಡುತ್ತಾನೆ. ಸೇನಾಧಿಪತಿ ಮಹಮ್ಮದಾಲಿಯು ಆಗಂತುಕನೆಂಬಂತೆ ಲಿಂಗಣ್ಣಮಂತ್ರಿಗೆ ಸ್ವಲ್ಪ ಕ್ರೋಧಮಿಶ್ರಿತವಾದ ತಿರಸ್ಕಾರ ನೋಡದಿಂದ ನೋಡುತ್ತಿರುತ್ತಾನೆ. ಲಿಂಗಣ್ಣನು ಶಿವಯ್ಯನ ಕಡೆ ದುರುದುರನೆ ಎವೆಯಿಕ್ಕದೆ ನೋಡುತ್ತಾನೆ. ಅದುವರೆಗೂ ಲಿಂಗಣ್ಣನನ್ನೇ ಬೆಚ್ಚುಗಣ್ಣಿನಿಂದ ನೋಡುತ್ತಿದ್ದ ಶಿವಯ್ಯ ಆಗ ತಲೆ ತಗ್ಗಿಸುತ್ತಾನೆ. ಹೈದರಾಲಿಯೂ ಸೂಕ್ಷ್ಮವಾಗಿ ಇದೆಲ್ಲವನ್ನೂ ತಾಳ್ಮೆಯಿಂದ ಅವಲೋಕಿಸುವುದು ಸನ್ನಿವೇಶಕ್ಕೆ ಸಹಜತೆಯ ಕಳೆಯನ್ನು ತಂದುಕೊಡುವಲ್ಲಿ ಮಹಾಕವಿಗಳು ರಂಗಕರ್ತೃವಾಗಿ ಇಲ್ಲಿ ಯಶಸ್ವಿಯಾಗಿದ್ದಾರೆ. ಸೈನ್ಯದ ಬಿಡಾರದ ಒಳಗೆ ಬಂದ ಲಿಂಗಣ್ಣಮಂತ್ರಿಯು ವಾಸ್ತವವಾಗಿ ನಡೆದಿರುವುದನ್ನು ಹೇಳುತ್ತಾ, ರಾಜಕುಮಾರ ಬಸವಯ್ಯನೆಂದು ಹೇಳಿಕೊಳ್ಳುತ್ತಿರುವ ಈ ವ್ಯಕ್ತಿಯು ಶಿವಯ್ಯನೆಂಬುದನ್ನು ಸ್ಪಷ್ಟಪಡಿಸಿದರೂ ತಾನೇ ಬಸವಯ್ಯನೆಂದೂ ತನ್ನ ವಿರೋಧಿಯಾದ ಲಿಂಗಣ್ಣನು ಹೀಗೆ ಪಿತೂರಿ ಮಾಡುತ್ತಿದ್ದನೆಂದು ಶಿವಯ್ಯನು ಪುನರುಚ್ಚರಿಸುತ್ತಾನೆ. ಆಗ ಹೈದರನು ಸತ್ಯಾಂಶವನ್ನು ಕಂಡುಹಿಡಿಯಲು ಉಪಾಯ ಮಾಡುತ್ತಾನೆ. ಬಿದನೂರಿನಲ್ಲಿ ಸನ್ಯಾಸಿಯ ವೇಷದಲ್ಲಿದ್ದ ತೃಣಾನಂದ ಪರಮಹಂಸರ (ರಾಮರಾಯ) ಶಿಷ್ಯನಾಗಿ ಗೂಢಚಾರ ಕೆಲಸವನ್ನು ನಿರ್ವಹಿಸುತ್ತಿದ್ದ ರಂಗದಾಸನನ್ನು ಕರೆದು ತರಲು ಪಹರಿಯೊಬ್ಬನಿಗೆ ಹೇಳಿದಾಗ ಶಿವಯ್ಯನು ಬೆಚ್ಚಿ ನಡುಗುತ್ತಾನೆ. ನಂತರ ಪಹರಿಯೊಬ್ಬನು ಬ್ರಹ್ಮಚಾರಿವೇಷದ ರಂಗದಾಸನನ್ನು ಕರೆದುಕೊಂಡು ಬರುತ್ತಾನೆ. ಆತ ಒಳಗೆ ಬರುತ್ತಿದ್ದಂತೆ ಮಂತ್ರಿ ಲಿಂಗಣ್ಣನಿಗೆ ನಮಸ್ಕಾರ ಹೇಳುತ್ತಾ ಪರಿಚಯದವರಂತೆ ಮಾತಾಡುತ್ತಾನೆ. ‘ಇವರೇ ಮಹಾನುಭಾವರಾದ ಮಂತ್ರಿ ಲಿಂಗಣ್ಣನವರು, ಇವರು ಶಿವಯ್ಯ’ ಎಂದು ಇಬ್ಬರ ಕುರಿತು ಹೈದರಾಲಿ ಮತ್ತು ಮಹಮ್ಮದಾಲಿಗೆ ಹೇಳಿದಾಗ, ಶಿವಯ್ಯನ ಮೋಸದಿಂದ ಕೋಪಗೊಂಡ ಹೈದರಾಲಿಯು ತನ್ನ ಸೇನಾಧಿಪತಿ ಮಹಮ್ಮದಾಲಿಗೆ ‘ಶಿವಯ್ಯನನ್ನು ಬಂಧಿಸಿ ಸೆರೆಯಲ್ಲಿಟ್ಟು, ಇಂದಿನ ರಾತ್ರಿಯೇ ಶೂಲಕ್ಕೇರಿಸಬೇಕು’ ಎಂದು ಆಜ್ಞಾಪಿಸುತ್ತಾನೆ. ಅದಕ್ಕೆ ಮಂತ್ರಿ ಲಿಂಗಣ್ಣನು ‘ಶೂಲಕ್ಕೇರಿಸುವ ಶಿಕ್ಷೆಯನ್ನು ಈಗಲೇ ಬೇಡವೆಂದೂ, ಬಿದನೂರಿನ ಅಪರಾಧಿಗಳು ಅವನಿಂದ ಬಯಲಿಗೆ ಬರಲೆಂದು ಹೇಳಿ ಶಿಕ್ಷೆಯನ್ನು ತಪ್ಪಿಸುತ್ತಾನೆ. ನಂತರ ಮಹಮ್ಮದಾಲಿಯು ತಾನು ತಿಳಿಯದೆ ಆಡಿದ ಕಠಿಣ ವಾಕ್ಯಗಳನ್ನು ಮನ್ನಿಸಬೇಕೆಂದು ಮಂತ್ರಿ ಲಿಂಗಣ್ಣನವರಲ್ಲಿ ಬೇಡಿಕೊಳ್ಳುತ್ತಾ ಇನ್ನು ಮುಂದೆ ನೀವು ಪರಮಾಪ್ತರಾಗಿರಬೇಕೆಂದು ವಿನಂತಿಸಿಕೊಳ್ಳುವುದರೊಂದಿಗೆ ಸತ್ಯಕ್ಕೆ ಯಾವಾಗಲೂ ಗೆಲುವು ಇದೆಯೆಂಬುದು ಅರಿವಾಗುತ್ತದೆ. ಹೈದರಾಲಿಯು ಸಹ ಮುಗುಳ್ನಗುತ್ತಾ ‘ನಿಮ್ಮ ಕಾರ್ಯದಕ್ಷತೆಯ ವಿಚಾರವಾಗಿ ನಾನು ಈ ಮೊದಲೇ ಕೇಳಿದ್ದನೆ. ಆದ್ದರಿಂದ ನಾನು ದುಡುಕಲಿಲ್ಲ’ ಎಂದು ಹೇಳುವಲ್ಲಿಗೆ ಹೈದರಾಲಿಯ ಸಮಭಾವದ ವ್ಯಕ್ತಿತ್ವ, ರಾಜಕುಶಲತೆ ಮತ್ತು ರಾಜನೀತಿ ನಿಪುಣತೆಗಳನ್ನು ಮಹಾಕವಿಗಳು ಪ್ರಸ್ತುತಪಡಿಸಿರುವುದು ಗೊತ್ತಾಗುತ್ತದೆ.
 
ಮುಂದಿನ 5ನೇಯ ದೃಶ್ಯವು ಬಿದನೂರಿನ ಅರಮನೆಯಲ್ಲಿ ರಾಣಿ ಚೆಲುವಾಂಬೆ, ಆಕೆಯ ಸಖ ನಿಂಬಯ್ಯ ಮತ್ತು ಸೋಮಯ್ಯರು ಮಾತಾಡುತ್ತಾ ಕುಳಿತಿದ್ದಾರೆ. ಬಸವಯ್ಯನನ್ನು ಸೋಮಯ್ಯನು ಸಂಹರಿಸಿರುವುದು ಉಳಿದವರಲ್ಲಿ ಅಚ್ಚರಿಯನ್ನುಂಟು ಮಾಡಿದೆ.  ಆದರೆ ಸೋಮಯ್ಯ ಕಣ್ಣಾರೆ ಕಂಡುದುದನ್ನು ಹೇಳಿದಾಗ ವಿಧಿಯಿಲ್ಲದೇ ನಂಬುತ್ತಾರೆ. ಶಿವಯ್ಯನು ಅವರನ್ನು ಸೆರೆಮನೆಯಿಂದ ಬಿಡಿಸಿದನೆಂದೂ ಹೊನ್ನಯ್ಯ ಇದನ್ನು ತಿಳಿದು ಮೂವರನ್ನು ಬೆನ್ನಟ್ಟಿ ಹೋಗಿ ರಾಜಕುಮಾರ ಬಸವಯ್ಯನನ್ನು ಕೊಂದನೆಂಬ ಹೊನ್ನಯ್ಯನು ಹಬ್ಬಿಸಿರುವ ಹುಸಿ-ಸಂಗತಿಯನ್ನು ಸಂಪೂರ್ಣ ನಂಬಿದ್ದಾನೆ. ಈ ಸಂಗತಿಯನ್ನು ಕೇಳಿದ ರಾಣಿ ಚೆಲುವಾಂಬೆಗೆ ಆತಂಕವಾಗಿದೆ. ಅದೇ ಸಮಯಕ್ಕೆ ದುಃಖಬಾರದಿಂದ ಮೆಲ್ಲಗೆ ನಡೆದು ಬರುತ್ತಿರುವ ಹೊನ್ನಯ್ಯನನ್ನು ರುದ್ರಯ್ಯನು ಕರೆದುಕೊಂಡು ಬರುತ್ತಾನೆ. ರಾಜ್ಯದ ಶ್ರೇಯಸ್ಸಿಗಾಗಿ ಗೆಳೆಯನನ್ನು ಕೊಂದ ಪರಿಯನ್ನು ಅವರಿಗೆ ನಂಬಿಕೆ ಬರುವಂತೆ ವಿವರಿಸುವುದರೊಂದಿಗೆ ತನ್ನ ಗೆಳೆಯನ ಶವದ ಸಂಸ್ಕಾರ ಮಾಡಲು ಒಪ್ಪಿಗೆ ಪಡೆದು ಹೋಗುತ್ತಾನೆ. ಅಷ್ಟರಲ್ಲಿಯೇ ಬಿದನೂರು ಸಂಸ್ಥಾನವನ್ನು ಮುತ್ತಿಗೆ ಹಾಕಲು ಹೈದರಾಲಿಯ ಸೇನೆಯು ಶಿವಮೊಗ್ಗೆಗೆ ಬಂದಿಳಿದಿರುವ ಸುದ್ದಿ ಬರುತ್ತದೆ. ನಾಲ್ಕು ಲಕ್ಷ ವರಹಗಳನ್ನು ನೀಡಿ ಹೈದರಾಲಿಯ ಸೇನೆಯನ್ನು ಹಿಂತಿರುಗಲು ರಾಣಿ ಚೆಲುವಾಂಬೆ ಸೂಚನೆ ನೀಡುತ್ತಾಳೆ. ನಿಂಬಯ್ಯನು ಯೋಚಿಸುತ್ತಾ ಸೈನ್ಯದ ಸಿದ್ಧತೆಗಾಗಿ ಹೊರಡುತ್ತಾನೆ.
 
ಕೊನೆಯ ಮತ್ತು ಐದನೆಯ ಅಂಕದ ಮೊದಲನೆಯ ದೃಶ್ಯವು ಆರಂಭಗೊಳ್ಳುವುದು ರುದ್ರಾಂಬೆಯು ಬಿದನೂರಿನ ಹೊರ ಬೀದಿಯೊಂದರಲ್ಲಿ ಚಿಂದಿ ಬಟ್ಟೆಗಳನ್ನುಟ್ಟುಕೊಂಡು ತಲೆಕೂದಲು ಕೆದರಿಕೊಂಡು ವಿಕಾರವೇಷದಿಂದ ಬರುತ್ತಿದ್ದಾಳೆ. ಆಕೆಯ ಕ್ರೋಧಗೊಂಡ ನೇತ್ರಗಳು ರಕ್ತಾಕ್ತವಾಗಿ ರಕ್ತ ತೃಷ್ಣಾಪೂರ್ಣವಾಗಿ ಭೀಷಣವಾಗಿವೆ. ಆಕೆಯ ಹೃದಯದಲ್ಲಿ ಕ್ರೋಧ-ದುಃಖಗಳು ಮಡುಗಟ್ಟಿವೆ. ನಡುನಡುವೆ ನೀಳವಾಗಿ ಬಿಳಲು ಬಿದ್ದ ರೂಕ್ಷ ಕೇಶಪಾಶಗಳನ್ನು ಎರಡು ಕೈಗಳಿಂದಲೂ ಹರಿದುಕೊಳ್ಳುತ್ತಾಳೆ ಒಮ್ಮಿಂದೊಮ್ಮೆಲೆ ತಲೆ ಬಡಿದುಕೊಳ್ಳುತ್ತಾಳೆ. ಕೆಲವು ಸಲ ತಲೆ ಮೈಗಳ ಮೇಲೆ ದೂಳು ಹಾಕಿಕೊಳ್ಳುತ್ತಾ ನಡೆದಿದ್ದಾಳೆ. ಆಕೆಯ ಮಾತುಗಳು ಮುಗ್ದಮನದ ಮೇಲೆ ಆಗಿರುವ ಘೋರ ಪರಿಣಾಮಗಳನ್ನು ಇಲ್ಲಿ ಮಹಾಕವಿಗಳು ತಮ್ಮ ಹರಿತವಾದ ಸಂಭಾಷಣೆಯ ಮೂಲಕ ಹೇಳಿಸಿದ್ದಾರೆ. ರಾಜಕುಮಾರ ಬಸವಯ್ಯನ ದುರ್ಮರಣದ ಕುರಿತು ಹೊನ್ನಯ್ಯನು ಹಬ್ಬಿಸಿರುವ ಸುದ್ಧಿ ಅಂದರೆ ಹೊನ್ನಯ್ಯ ತಾನೇ ಬಸವಯ್ಯನನ್ನು ಕೊಂದಿರುವೆನೆಂದಿರುವುದನ್ನು ಹಿಂದೆ-ಮುಂದೆ ಯೋಚಿಸದೇ ಮುಗ್ದ ಮನದ ಬಾಲೆ ನಂಬಿದ್ದಾಳೆ. ಇಲ್ಲಿ ಮಹಾಕವಿಗಳು ರುದ್ರಾಂಬೆಯು ಸ್ವಲ್ಪ ಯೋಚಿಸುವಂತೆ ಮಾಡಿಸಿ, ಅವಳ ಮನದ ಮಾತುಗಳ ಮೂಲಕ ಹೀಗಾಗಿರಲು ಸಾಧ್ಯವಿರಲಿಕ್ಕಿಲ್ಲವೆಂದು ಹೇಳಿಸಬಹುದಿತ್ತು. ಆ ಕಡೆಗೆ ಅವರು ಗಮನಿಸಿಲ್ಲವೆಂದು ಅನಿಸುತ್ತದೆ. ಇಲ್ಲಿ ವಿಧಿಯ ವಿಕಟ ಹಸ್ತದ ಪ್ರಭಾವವಿರುವುದನ್ನು ರುದ್ರಾಂಬೆಯ ಈ ಸಂಭಾಷಣೆಯಲ್ಲಿ ಹೇಳಿಸುತ್ತಾರೆ :
 
ರುದ್ರಾಂಬೆಯಲ್ಲದಿಹ ರಕ್ತಾಕ್ಷಿ ನಾನು !
ಹೊನ್ನಯ್ಯ, ಕೊಂದು ಹೆಣವನು ತಂದು, ಮಸಣದಲಿ
ಸಂಸ್ಕಾರವೆಸಗುವಂತೆ ಅಭಿನಯಿಸುತಿಹೆಯಾ?
ಆ ಮಸಣದಿಂದ ನೀ ಮರಳಲಾರೆ !-
ನಾ ರಕ್ತಾಕ್ಷಿ ಅಹುದಾದರೆ
ನೀ ಮರಳಲಾರೆ !-
ನಿನ್ನ ರಕ್ತವ ಚೆಲ್ಲಿ
ತನಿಸುವೆನು ನನ್ನಿನಿಯನಾತ್ಮವನು!-
ಓ ಕಾಳರಾತ್ರಿ,
ಬಾ ನನ್ನೊಡನೆ!
ಮಿತ್ರದ್ರೋಹಿಯ ಕೊಲೆಗೆ-
ಹೊನ್ನಯ್ಯನ ಕೊಲೆಗೆ-
ನರಬಲಿಗೆ!- ಶ್ಮಶಾನ ಬಲಿಗೆ!-

ಎಂದು ಕಠಾರಿಯನ್ನು ನೋಡುತ್ತಾ ತತ್ತರಿಸುತ್ತಾ ಹೋಗುತ್ತಾಳೆ.
 
ಮುಂದಿನ ದೃಶ್ಯದಲ್ಲಿ ಬಿದನೂರಿನ ಹೊರಬಯಲಿನ ಮಸಣದಲ್ಲಿ ರಾಜಕುಮಾರ ಬಸವಯ್ಯನ ಸಮಾಧಿ ಮಾಡುತ್ತಿರುವಾಗ ಹೊನ್ನಯ್ಯ ತನ್ನ ಬಾಲ್ಯದ ಗೆಳೆಯನ ಜೀವನವನ್ನು ನೆನೆದು ದುಃಖಿಸುತ್ತಾ ಶೋಕಿಸುವುದು ಹೃದಯವಿದ್ರಾವಕ ಸನ್ನಿವೇಶವಿದು.
ಓ ಮಿತ್ರ, ಓ ನನ್ನ ಬಸವಯ್ಯ, ರಾಜನಿಗೆ
ಮಗನಾಗಿ ಜನಿಸಿ ಪರದೇಶಿಯಂದದಲಿ
ಮಣ್ಣಾದುದೇ ನಿನ್ನ ಸಿರಿಬಾಳು!-ಎಲೆ ಬದುಕೆ
ತುತ್ತತುದಿಯಲಿ ನೀನು ಬರಿಯೊಂದು ಹಿಡಿಮಣ್ಣು!-

ಎಂದು ಮಿತ್ರನ ದುಸ್ಥಿತಿಯನ್ನು ನೆನೆ-ನೆನೆದು ರೋಧಿಸುತ್ತಾನೆ. ರುದ್ರಾಂಬೆಯು ನೆನಪಾಗುತ್ತಾಳೆ. ಎಲ್ಲಿರುವಳೆಂದು ಸಮಾಧಿ-ಸಂಸ್ಕಾರ ಕಾರ್ಯ ಮಾಡುತ್ತಿರುವ ಕೆಂಚಣ್ಣ ಮತ್ತು ತಿಮ್ಮಜಟ್ಟಿಯರಲ್ಲಿ ಕೇಳುತ್ತಾನೆ. ಆಕೆ ವೇಷ ಮರೆಸಿಕೊಂಡಿರುವುದು ಮಾತ್ರ ತನಗೆ ಗೊತ್ತಿದೆಯೆಂದು ತಿಮ್ಮಜಟ್ಟಿಯು ಹೇಳುತ್ತಾನೆ. ‘ಬಸವಯ್ಯನನು ನಾನೇ ಕೊಂದೆನೆಂಬ ಹುಸಿಯನು ನಂಬಿ ಆತ್ಮಹತ್ಯವ ಮಾಡಿಕೊಂಬಳೊ ಏನೋ?’ ಎಂದು ಆತಂಕ ಪಡುವ ಹೊನ್ನಯ್ಯನಿಗೆ ಕೆಂಚಣ್ಣನು ‘ಎಲ್ಲಿಯಾದರೂ ಉಂಟೆ? ಬಸವಯ್ಯನನು ಕೊಂದೆನು ಎಂದು ನೀವೇ ಹೇಳಿದರೂ ಅವರೆಂದಿಗೂ ನಂಬರು. ಕಿವಿ ಮೂಗಿಲ್ಲದ ಸುದ್ಧಿಯನು ಕೇಳಿ ನಂಬುತ್ತಾರೆಯೇ?’ ಎಂದು ಸಮಾಧಾನಿಸುತ್ತಾನೆ. ಹೀಗೆ ಮಾತಾಡುತ್ತಿರುವಾಗಲೇ ರುದ್ರಾಂಬೆಯು ಮಸಣಕ್ಕೆ ಆಗಮಿಸಿದ್ದಾಳೆ. ವಿಕಟದಿಂದೊಮ್ಮೆ ಕರ್ಕಶವಾಗಿ ನಗುತ್ತಾ ಸೊಂಟದಿಂದ ತೆಕ್ಕನೆ ಕಠಾರಿಯನ್ನೇಳೆದು ಹಾರಿ ಹೋಗಿ ‘ಪಾಪಿ, ನಿನಗಿದೇ ಪ್ರಾಯಶ್ಚಿತ್ತ!-‘ ಎಂದು ಹೊನ್ನಯ್ಯನ ಎದೆಗೆ ಇರಿಯುತ್ತಾಳೆ. ಸ್ವಲ್ಪ ಸಮಯದ ನಂತರ ಹೊನ್ನಯ್ಯನ ನರಳುವಿಕೆಯ ಮಾತುಗಳನ್ನು ಕೇಳಿ ಅವಳಿಗೆ ಅರಿವಾಗುತ್ತದೆ. ‘ಓ! ತಂಗಿ ರುದ್ರಾಂಬೆ, ನಿನಗಾದರೂ ದಿಡವನರುಹಿ ಸಾಯುತ್ತಿದ್ದೆ ! ನೀನೂ ಕಣ್ಮರೆಯಾದೆಯಾ?‘ ಎಂಬ ಮಾತಿನಿಂದ ಎಚ್ಚರಗೊಳ್ಳುವ ರುದ್ರಾಂಬೆಯು ತಪ್ಪಿನ ಅರಿವಾಗುವುದರೊಂದಿಗೆ ನಡೆದ ನೈಸಂಗತಿಯು ಹೊನ್ನಯ್ಯನಿಂದ ತಿಳಿದ ನಂತರ ಕುಸಿದು ಬೀಳುತ್ತಾಳೆ.
 
ಅಯ್ಯೋ ತಪ್ಪಿದೆನು ! ತಪ್ಪಿದೆನು!
ಅಣ್ಣಾ, ಮೋಸವಾಯಿತು! ಮೋಸವಾಯಿತು!
ವಿಧಿಯೇ, ನಿನ್ನಣಕವಿದು ಸಾಕು! ಸಾಕು!
ನಾನೂ ಬರುತ್ತೇನೆ! ನನ್ನನೂ ಕರೆದುಕೊ!
 
ಎಂದು ತಲೆ ಬಡಿದುಕೊಂಡು ಗೋಳಾಡುವ ದೃಶ್ಯ ಹೃದಯಕರಗಿಸುವಂಥದು. ‘ನನ್ನ ಹೊರೆ ನಿನ್ನ ಬೆನ್ನಿನ ಮೇಲೆ ಬಿದ್ದಿದೆ;- ಮುಯ್ಯಿ ತೀರಿಸದೆ ನೀನಳಿಯಲಾಗದು.’ ಎಂದು ಅವಳನ್ನು ಎಚ್ಚರಿಸುತ್ತಾ
ದುಃಖಪಡದಿರು, ತಂಗಿ. ನಾನು ಸಂತೋಷದಲಿ
ಸಾಯುವೆನು. ನಿನ್ನ ಕಾಣದೆ ಮಡಿವೆನಲ್ಲಾ
ಎಮದು ಶೋಕಿಸುತಿದ್ದೆ!-ತುದಿಗೆಲ್ಲ ಸೊಗವಹುದು!
ತುದಿಗೆಲ್ಲ ಸೊಗವಹುದು! ನನ್ನ ನುಡಿಯನು ನಂಬು!
ನೂರು ಜನ್ಮದ ಬೇವು ನೂರು ಜನ್ಮಕೆ ಬೆಲ್ಲ!
ನೂರು ನಿಟ್ಟುಸಿರುಗಳು ಸೇರಿದರೆ ಒಂದು ನಗೆ
ಹೊಮ್ಮುವುದು!-ನೆಚ್ಚಿರಲಿ!-ನೆಚ್ಚಿ
ರಲಿ!-ನೆಚ್ಚಿರಲಿ!

 
ಎಂದು ಹೇಳುತ್ತ ಸಾಯುತ್ತಾನೆ. ಇಂತಹ ಸುಧೀರ್ಘ ಕಥಾನಕದ ಮಧ್ಯಂತರದ ನಂತರ ಸಾಯುವ ಕಥಾನಾಯಕನ ನಂತರ ಆತನ ಸ್ನೇಹಿತನು ಮುನ್ನೆಡೆಸುವ ಕಥಾನಕವು ಆತನ ಸಾವಿನಿಂದ ಈಗ ಕಥಾನಾಯಕಿಯು ಮುನ್ನಡೆಸಬೇಕಾದ ಅನಿವಾರ್ಯತೆಯನ್ನು ಇಲ್ಲಿ ಮಹಾಕವಿಗಳು ಸೃಷ್ಟಿಸಿರುವುದು ಅವರ ಪ್ರತಿಭಾಕನ್ನಡಿಗೆ ಹಲವಾರು ಉದಾಹರಣೆಗಳಲ್ಲಿ ಇದೊಂದು.
 
ಮುಂದಿನ ದೃಶ್ಯ 3ರಲ್ಲಿ ಬಿದನೂರಿನ ಅರಮನೆಯಲ್ಲಿ ರಾಣಿ ಚೆಲುವಾಂಬೆ, ಇಷ್ಟೇಲ್ಲಾ ಅರಮನೆಯ ವಿಪ್ಲವಗಳಿಗೆ ಕಾರಣನಾದ ನಿಂಬಯ್ಯ ಮತ್ತು ಸೋಮಯ್ಯರು ಖಿನ್ನರಾಗಿ ಮಾತಾಡುತ್ತಿದ್ದಾರೆ. ಹೈದರಾಲಿಗೆ ಕಳುಹಿಸಿದ್ದ ವರಹಗಳನ್ನು ಸ್ವೀಕರಿಸದೇ ಮುನ್ನುಗ್ಗುತ್ತಿರುವ ಹೈದರಾಲಿಯು ಮರಳಿ ಹೋಗುವಂತೆ ಮಾಡಲು ಯೋಚಿಸುತ್ತಿರುವಾಗಲೇ ಸೈನಿಕನೊಬ್ಬನು ಶತ್ರುಗಳು ನಗರವನ್ನು ಮುತ್ತಿಗೆ ಹಾಕಿರುವ ಸುದ್ಧಿ ಹೇಳುತ್ತಾನೆ. ಮುತ್ತಿಗೆ ಹಾಕಿರುವ ಶತ್ರು ಸೈನಿಕರನ್ನು ಎದುರಿಸಲು ತನ್ನ ಸೈನಿಕರನ್ನುದ್ದೇಶಿಸಿ ಮಾತಾಡಲು ಬಾಗಿಲು ತೆರೆಯಲು ಹೋದಾಗ ಹೊರಗಿನಿಂದ ಬಾಗಿಲಿನ ಬೀಗ ಹಾಕಿಕೊಂಡು ರುದ್ರಾಂಬೆಯು ರಕ್ತಾಕ್ಷಿಯಾಗಿ ನಗುತ್ತಾ ನಿಂತಿದ್ದಾಳೆ. ಬಾಗಿಲು ತೆರೆಯುವಂತೆ ಕೇಳಿದ ನಿಂಬಯ್ಯನಿಗೆ ವ್ಯಂಗ್ಯ ಪರಿಹಾಸದ ಮಾತುಗಳ ಮೂಲಕ ಇರಿಯುವ ಸನ್ನಿವೇಶವು ಬಹಳ ಹೈವೊಲ್ಟೇಜಿನ ಹಾಗೇ ಕಥಾನಕಕ್ಕೆ ಹೆಚ್ಚಿನ ಪ್ರಕಾಶವನ್ನು ನೀಡಿದೆ. ಕೊನೆಯಲ್ಲಿ ತಾನಾರೆಂಬುದನ್ನು ನೇರವಾಗಿ ಹೇಳಿರುವುದನ್ನು ಕೇಳಿ, ಗರಬಡಿದವನಂತೆ ನಿಂತ ನಿಂಬಯ್ಯನಿಗೆ ‘ಏಕಿಂತು ಬೆರಗಾಗಿ ಸುಮ್ಮನೆ ನಿಂತಿರುವಿರಿ? ಮುಂದುವರಿಯಲಿ ಪ್ರಣಯಕಾರ್ಯ!-ಇನ್ನು ತುಸು ಹೊತ್ತಿನಲಿಯೆ-ಅದೊ, ಅಲ್ಲಿ ನೋಡಿ-ನಿಮ್ಮ ಪ್ರೇಮವಿಲಯಾಗ್ನಿ ತನ್ನ ಜ್ವಾಲಾಜಿಹ್ವೆಗಳಿಂದ ಅರಮನೆಯನು ನುಣ್ಣಗೆ ನುಂಗಿ ನೊಣೆಯುತ್ತಿದೆ!’ ಎನ್ನುತ್ತಾ ಶಿವಯ್ಯನನ್ನು ಹುಡುಕುತ್ತಾ ಮುಂದೆ ಚಲಿಸುತ್ತಾಳೆ. ಅರಮನೆಗೆ ಬಿದ್ದ ಬೆಂಕಿಯಿಂದ ತಪ್ಪಿಸಿಕೊಳ್ಳಲಾಗದ ಚೆಲುವಾಂಬೆ ಮತ್ತು ನಿಂಬಯ್ಯರು ಅವರಿರುವ ಅವರ ಪ್ರೇಮಗೃಹವು ಅವರನ್ನು ಜೀವಂತ ದಹಿಸುವ ಚಿತೆಯಾಗಿ ಪರಿಣಮಿಸುತ್ತದೆ. ಇಲ್ಲಿ ರಕ್ತಾಕ್ಷಿಯ ಪ್ರತೀಕಾರದ ಅಗ್ನಿಯಲ್ಲಿ ಪತಂಗಗಳಂತೆ ಸುಟ್ಟುಹೋಗುವ ಚೆಲುವಾಂಬೆ-ನಿಂಬಯ್ಯರನ್ನು ಕಾಣುತ್ತೇವೆ.
 
ಮುಂದಿನ ದೃಶ್ಯ 4ರಲ್ಲಿ ಬಿದನೂರನ್ನು ಜೈಯಿಸಿದ ಹೈದರಾಲಿಯ ಬಿಡಾರದಲ್ಲಿ ಸನ್ಯಾಸಿ, ಮಹಮ್ಮದಾಲಿ, ಹೈದರಾಲಿ ಮತ್ತು ಖಿನ್ನನಾಗಿ ಮಂತ್ರಿ ಲಿಂಗಣ್ಣನವರು ಕುಳಿತಿದ್ದಾರೆ. ಸನ್ಯಾಸಿಯನ್ನು ಕುರಿತು ಹೈದರಾಲಿಯು ಹೇಳುವ ‘ರಾಮರಾಯರೇ, ನಿಮ್ಮಿಂದ ಉಪಕಾರವಾಯಿತು’ ಎಂಬ ಮಾತಿನಿಂದ ಸನ್ಯಾಸಿಯು ಯಾರೆಂಬುದು ಈಗ ಓದುಗರಿಗೆ/ಪ್ರೇಕ್ಷಕರಿಗೆ ತಿಳಿಯುತ್ತದೆ. ಇಲ್ಲಿಯವರೆಗೂ ಮಹಾಕವಿಗಳು ಈ ರಹಸ್ಯ(ಸಸ್ಪೆನ್ಸ್)ವನ್ನು ಈಗ ಬಯಲು ಮಾಡುತ್ತಾರೆ. ಹೈದರಾಲಿಯು ಬಿದನೂರನ್ನು ಗೆದ್ದು ತನ್ನ ಸಾಮ್ರಾಜ್ಯಕ್ಕೆ ಸೇರಿಸಿಕೊಂಡರೂ ಆತನಿಗೆ ಶಿಷ್ಟರ ರಕ್ಷಣೆಯಾಗಲಿಲ್ಲವಲ್ಲ ಎಂಬ ಅಸಮಾಧಾನವಿದೆ. ಬಸವಯ್ಯನನ್ನು ಬಿದನೂರಿನ ಗದ್ದುಗೆಗೇರಿಸಿ ವೈಭವವನ್ನು ನೋಡಲಾಗಲಿಲ್ಲವೆಂಬ ವ್ಯಥೆ ಒಂದೆಡೆಯಾದರೆ, ಇದ್ದೊಬ್ಬ ಮಗಳನ್ನು ನೆನೆದು ದುಃಖಿಸುತ್ತಾನೆ. ಅದೇ ವೇಳೆಗೆ ಹುಚ್ಚಿಯೊಬ್ಬಳು ಶಿವಯ್ಯನನ್ನು ಸೆರೆಯಿಟ್ಟ ಬಿಡಾರಕ್ಕೆ ನುಗ್ಗಿ ಅವನನ್ನು ಕೊಲೆ ಮಾಡಿ ನಂತರ ತನ್ನನ್ನು ತಾನು ಕಠಾರಿಯಿಂದ ತಿವಿದುಕೊಂಡು ಬಿದ್ದಿರುವುದನ್ನು ಹೇಳುತ್ತಾನೆ. ತನ್ನ ಹೆಸರು ರುದ್ರಾಂಬೆಯೆಂದೂ ಹೇಳುತ್ತಿದ್ದಾಳೆಂಬುದನ್ನೂ ಕೇಳಿದಾಗಲಂತೂ ಲಿಂಗಣ್ಣನವರ ದುಃಖ ಸ್ಪೋಟಗೊಳ್ಳುತ್ತದೆ. ಮಂತ್ರಿಲಿಂಗಣ್ಣನವರನ್ನು ಕರೆಯುವಂತೆ ಹೇಳಿದ್ದಾಳೆಂಬ ಮಾತಿನಿಂದ ಮಂತ್ರಿ ಲಿಂಗಣ್ಣನವರು ‘ಅಯ್ಯೋ! ಅಯ್ಯೋ! ಮಗಳೆ, ಕಡೆಗೂ ಏನಾಗಿಹೋದೆ!’ ಎಂದು ಹಲುಬುತ್ತಾ ಅಲ್ಲಿಗೆ ದೌಡಾಯಿಸುತ್ತಾರೆ.
 
ಕೊನೆಯ ಅಂಕದ ಕೊನೆಯ 5ನೇ ದೃಶ್ಯವಂತೂ ಕರಾಳ-ರುದ್ರಭೀಕರವಾಗಿದೆ. ಇಲ್ಲಿ ಮಹಾಕವಿಗಳು ಕೇವಲ ಒಂದೆರಡು ಚಿಕ್ಕ ಸಂಭಾಷಣೆಗಳ ಮೂಲಕ ರುದ್ರನಾಟಕವನ್ನು ಉತ್ತುಂಗಸ್ಥಿತಿಗೆ ತಲುಪಿಸುತ್ತಾರೆ. ಕೈಗೆ ತೊಡಿಸಿದ ಕೊಳಗಳೊಂದಿಗೆ ನೆತ್ತರುಗೆಸರಿನಲ್ಲಿ ಶಿವಯ್ಯ ಸತ್ತು ಬಿದ್ದಿದ್ದಾನೆ. ಮಗಳ ಸ್ಥಿತಿಯನ್ನು ನೊಡಿ ಲಿಂಗಣ್ಣನು ‘ಅಯ್ಯೋ’ ಎಂದು ರೋಧಿಸುತ್ತಾ ಮಗಳಲ್ಲಿ ಕುಸಿದು ಬೀಳುತ್ತಾನೆ. ತಂದೆಯನ್ನು ನೋಡಿ ‘ಬಂದೆಯಾ ತಂದೆ’ ಎಂದು ಇರಿದುಕೊಂಡು ತಂದೆಯ ಬರುವಿಕೆಗಾಗಿ ಜೀವ ಹಿಡಿದುಕೊಂಡಿದ್ದ ರುದ್ರಾಂಬೆಯು ಕೂಗಿ ಬೀಳುತ್ತಾಲೆ. ಹೈದರಾಲಿ, ಮಹಮ್ಮದಾಲಿಗಳು ಕರಾಳದೃಶ್ಯವನ್ನು ನೋಡಿ ಮೂಕರಾಗಿ ನಿಲ್ಲುತ್ತಾರೆ. ಸನ್ಯಾಸಿಯು ತಂದೆ-ಮಗಳ ಹತ್ತಿರಕ್ಕೆ ಬರುವುದರೊಂದಿಗೆ ರುದ್ರ ರಂಗಕೃತಿಯು ಮುಕ್ತಾಯವಾದರೂ ದುರಂತ ಅಂತ್ಯವು ಓದುಗರ/ಪ್ರೇಕ್ಷಕರ ಮನದಲ್ಲಿ ವಿಷಾದದ ಛಾಯೆ ಬಹುಕಾಲ ಉಳಿಯುತ್ತದೆ.
 
ಕೃತಿಯು ಬಿಚ್ಚಿಕೊಳ್ಳುತ್ತಾ ಹೋದಂತೆಲ್ಲಾ ಮನಕಲಕುವ ಘಟನೆಗಳು ಘಟಿಸುತ್ತಾ ಮುಂದುವರೆದುಕೊಂಡು ಹೋಗುತ್ತಾ ಕೊನೆಗೂ ದುರಂತ ಅಂತ್ಯ ಕಾಣುತ್ತದೆ. ಇಂದಿನ ದುರಂತ ನಾಳಿನ ಮಂಗಳಕ್ಕೆ ನಾಂದಿ ಎಂದು ಹೇಳಬಹುದು. ಇಲ್ಲಿ ಕಾಣುವ ದುಃಖ ಮತ್ತು ದುರಂತಗಳಿಗೆ ವ್ಯಕ್ತಿಯ ವೈಯಕ್ತಿಕ ದೌರ್ಬಲ್ಯಗಳು ಕಾರಣವಲ್ಲದೇ ವಿಧಿಯ ಕೈವಾಡ, ಹಣೆಬರಹ(ವಿಧಿಲಿಖಿತ) ಕಾರಣವಾಗುತ್ತವೆ. ಹ್ಯಾಮ್ಲೆಟ್ ಮತ್ತು ಬಸವಯ್ಯನ ಪಾತ್ರಗಳ ಕುರಿತು ಹೇಳುವುದಾದರೆ ಇಲ್ಲಿಯ ಬಸವಯ್ಯ ಅಂತರ್ಮುಖಿ ಆದರೆ ಹ್ಯಾಮ್ಲೆಟ್ ಹಾಗಲ್ಲ ಆತನ ಮನಸ್ಸು ಗೊಂದಲಗಳ ಗೂಡು ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಹೆಚ್ಚಿನ ವಿಫಲತೆ. ಬಸವಯ್ಯ ಒಂದೆಡೆ ಆಧ್ಯಾತ್ಮಿಕಜೀವಿಯಂತೆ ಕಂಡರೂ ಸರಳ ಸಜ್ಜನ ಸ್ವರೂಪದ ಭಾರತೀಯ ಮನಸ್ಸಿನ ದೃಢನಿರ್ಧಾರದ ವ್ಯಕ್ತಿತ್ವದವನು. ಮುಂಜಾಗರೂಕತೆಯ ಕೊರತೆ ಮತ್ತು ಮೋಸದಿಂದ ದುರಂತ ಅಂತ್ಯವನ್ನು ಕಾಣುತ್ತಾನೆ. ಹದಿಹರೆಯದ ಚೆಲುವೆ ರುದ್ರಾಂಬೆಯು ತನ್ನ ಇನಿಯನಿಗಾಗಿ ರಕ್ತಾಕ್ಷಿಯಾಗಿ ವೇಷ ಮರೆಸಿಕೊಂಡು ಸೇಡು ತೀರಿಸಿಕೊಳ್ಳುತ್ತಾ ಸಾವನಪ್ಪುವ ಮುಗುದೆ. ಮಂತ್ರಿ ಲಿಂಗಣ್ಣ, ಹೊನ್ನಯ್ಯನವರದು ಸಾತ್ವಿಕ ಸ್ವಭಾವದಿಂದ ಉದ್ದಕ್ಕೂ ಕಥಾನಕಕ್ಕೆ ಪೂರಕವಾಗಿದ್ದಾರೆ. ಇಲ್ಲಿರುವ ಎಲ್ಲಾ ಪಾತ್ರಗಳು ಮನುಷ್ಯನ ಮನದ ಹಲವಾರು ಹಂತಗಳನ್ನು ಪ್ರತಿಬಿಂಬಿಸುತ್ತವೆ. ಭೀಕರತೆಯಲ್ಲಿಯೂ ಕೆಲವೊಮ್ಮೆ ಮಾನವೀಯತೆಯನ್ನು ರಾಣಿ ಚೆಲುವಾಂಬೆ ಮತ್ತು ಅಧಿಕಾರಿ ನಿಂಬಯ್ಯನವರ ಪಾತ್ರಗಳಲ್ಲಿ ಕಾಣಬಹುದು. ಅನಿವಾರ್ಯದ ಸಂದರ್ಭದ ಒತ್ತಡಕ್ಕೆ ಒಳಗಾಗಿರುವವಳು ರಾಣಿ ಚೆಲುವಾಂಬೆ. ನಿಂಬಯ್ಯನನ್ನು ಪ್ರೇಮಿಸುವುದು ಅವಳ ದೌರ್ಬಲ್ಯ. ರಂಗದಲ್ಲಿ ಇಂತಹ ಸುದೀರ್ಘ ಕೃತಿಯನ್ನು ಈಗಿನ ಸಂದರ್ಭದಲ್ಲಿ (ಪ್ರೇಕ್ಷಕರ ವೇಗದ ಬದುಕಿಗೆ ಅನುಕೂಲವಾಗುವಂತೆ) ಪ್ರಯೋಗಿಸಿವುದು ತುಸು ಕಷ್ಟವೆನಿಸಿದರೂ ಆಧುನಿಕ ರಂಗಪರಿಕರಗಳು, ನುರಿತ ಕಲಾವಿದರು, ಸಂಯಮ ಪೂರ್ಣತೆಯಿಂದ ಕೂಡಿದ ರಿಹರ್ಸಲ್, ಪರಿಣಾಮಕಾರಿಯಾದ ಧ್ವನಿ ಮತ್ತು ಬೆಳಕಿನ ಪರಿಣಾಮಗಳನ್ನು ಸೂಕ್ತವಾಗಿ ಬಳಸಿಕೊಂಡರೆ ಈ ಕೃತಿಯೂ ಸಹ ಇತ್ತೀಚೆಗೆ ಮೈಸೂರು ಮತ್ತು ಬೆಂಗಳೂರಿನಲ್ಲಿ ರಂಗದಲ್ಲಿ ವೈಭವದಿಂದ ಕಂಗೊಳಿಸಿದ ಮಹಾಕವಿಗಳ ಇನ್ನೊಂದು ಮಹಾನ್ ಕೃತಿಯ ರಂಗರೂಪ ‘ಮಲೆಗಳಲ್ಲಿ ಮದುಮಗಳು’ ಐತಿಹಾಸಿಕ ಪ್ರಯೋಗವಾಗಿರುವಂತೆ ಖಂಡಿತ ಆಗುವುದರಲ್ಲಿ ಎರಡು ಮಾತಿಲ್ಲ. ಇದೊಂದು ಕರುನಾಡಿನ ರಂಗಕೃತಿಗಳ ಸಮೃದ್ಧ ಸಂಪತ್ತಿನಲ್ಲಿಯ ಅಪೂರ್ವ ಕೃತಿಯೆಂದರೆ ಅತಿಶಯೋಕ್ತಯೇನಲ್ಲ. ಈ ಕೃತಿಯ ಕುರಿತು ಇನ್ನೂ ಆಳಕ್ಕಿಳಿದು ಅಧ್ಯಯನ ಮಾಡಿದರೆ ಇನ್ನೂ ಹೆಚ್ಚಿನ ಅಂಶಗಳು ಹೊರಬರುವುದರಲ್ಲಿ ಸಂಶಯವಿಲ್ಲ. 


 

 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

4 Comments
Oldest
Newest Most Voted
Inline Feedbacks
View all comments
ಹನಿಯೂರು ಚಂದ್ರೇಗೌಡ

ಲೇಖನವು ವಿಭಿನ್ನ ಒಳನೋಟಗಳಿಂದ ಕೂಡಿದ್ದು

ಹಿಪ್ಪರಗಿ ಸಿದ್ದರಾಮ್, ಧಾರವಾಡ
ಹಿಪ್ಪರಗಿ ಸಿದ್ದರಾಮ್, ಧಾರವಾಡ
10 years ago

ಧನ್ಯವಾದಗಳು….

ಹನಿಯೂರು ಚಂದ್ರೇಗೌಡ

ಲೇಖನವು ವಿಭಿನ್ನ ಒಳನೋಟಗಳಿಂದ ಕೂಡಿದ್ದು, ಬರೆದ ನಿಮಗೆ;ಪ್ರಕಟಿಸಿದ ಪಂಜು ಗೆ ನಮನಗಳು………………………….

Jayaprakash Abbigeri
Jayaprakash Abbigeri
10 years ago

ಅದ್ಭುತ !

4
0
Would love your thoughts, please comment.x
()
x