ಗೂಗಲ್ಡೂಡಲ್ ಪುರಾಣ: ಪ್ರಶಸ್ತಿ ಪಿ.

ಮೊನ್ನೆ ಎಂದಿನಂತೆ ಗೂಗಲ್ ತೆರೆತಿದ್ದೋನಿಗೆ ಸಿಕ್ಕಾಪಟ್ಟೆ ಖುಷಿ ಆಯ್ತು. ಕಾರಣ ಏನಪ ಅಂದ್ರೆ ನಮ್ಮ ಭಾರತದ ಕೋಗಿಲೆ(nightangle of india) ಎಂದೇ ಖ್ಯಾತ ಸರೋಜಿನಿ ನಾಯ್ಡು ಅವರ ಮುಖಚಿತ್ರ ಗೂಗಲ್ನಲ್ಲಿ ರಾರಾಜಿಸ್ತಾ ಇತ್ತು. ಸಣ್ಣವರಿದ್ದಾಗ ಪಠ್ಯದಲ್ಲಿ ನೋಡಿದ ಅವರ ಮುಖ ಇವತ್ತು ಗೂಗಲ್ನಲ್ಲಿ ಕಂಡಾಗ ಏನೋ ಖುಷಿ. ಗೂಗಲ್ನಲ್ಲಿ ಭಾರತೀಯರ ಬಗ್ಗೆ ಬಂದೇ ಇಲ್ವಾ ಅಂತಲ್ಲ. ಬಂದಿದೆ. ಶ್ರೀನಿವಾಸ ರಾಮಾನುಜಂ ಜನ್ಮದಿನ, , ಜಗತ್ ಸಿಂಗ್, ಜಗದೀಶ ಚಂದ್ರ ಬೋಸ್ ಜನ್ಮದಿನ, ಗಾಂಧೀಜಯಂತಿ, ಹೋಳಿ, ದೀಪಾವಳಿ, ಪ್ರತೀವರ್ಷದ ಸ್ವಾತಂತ್ರದಿನಗಳು ಡೂಡಲ್ನಲ್ಲಿ ಮೂಡುತ್ತಲೇ ಇವೆ. ಆದ್ರೂ ಈ ಸಲ ನಾಯ್ಡು ಅವ್ರ ಫೋಟೋ ನೋಡ್ದಾಗ ಈ ಗೂಗಲ್ ಡೂಡಲ್ಲಂದ್ರೆ ಏನು ? ದಿನಾ ಇದನ್ನ ಯಾರು ಬರೀತಾರೆ ? ಇದು ಹುಟ್ಟಿದ ಬಗೆ ಏನು ಅಂತೆಲ್ಲಾ ಪ್ರಶ್ನೆಗಳು ಮೂಡಿದವು. ನಿಮ್ಮಲ್ಲೂ ಕೆಲವರಿಗೆ ಇಂತಾ ಪ್ರಶ್ನೆಗಳು ಮೂಡಿರಬಹುದು . ಆ ಪ್ರಶ್ನೆಗಳಿಗೆ ನಾ ಹುಡುಕಹೊರಟ ಉತ್ತರಗಳೇ ಈ ಕಿರು  ಲೇಖನ.

ಈ ಗೂಗಲ್ ಡೂಡಲ್ಲನ್ನೋದು ಗೂಗಲ್ಲಿನ ಅವಿಭಾಜ್ಯ ಅಂಗದಂತೇ ಆಗಿಬಿಟ್ಟಿದೆ ಈಗೀಗ. ದಿನಾ ಏನೋ ಚಿತ್ರ ಇರತ್ತೆ ಅಂತ ಅಂದ್ಕೊಂಡಿರ್ಬೋದು ಕೆಲೋರು. ಅಪರೂಪಕ್ಕೆ ನೋಡೋರಿಗೆ ಹಾಗೇ ಅನ್ಸತ್ತೆ. ಆದರೆ ಇದು ತಿಂಗಳ ಎಲ್ಲಾ ದಿನಗಳೂ ಇರಲ್ಲ! ತಿಂಗಳಿಗೆ ಒಂದೇ ಒಂದು ಡೂಡಲ್ ಬಂದ ತಿಂಗಳಿದ್ದರೆ(ಅಕ್ಟೋಬರ್ ೨೦೧೩) ಏಳೆಂಟು ಡೂಡಲ್ಗಳು ಬಂದ ತಿಂಗಳೂ ಉಂಟು. ಈ ಡೂಡಲ್ಗಳೆಂಬ ಚಿತ್ರಗಳ ಕಲ್ಪನೆ ಗೂಗಲ್ ಸ್ಥಾಪಕರಾದ ಲ್ಯಾರಿ ಪೇಜ್ ಮತ್ತು ಸರ್ಜಿ ಬ್ರೈನ್ಗೆ ಹೊಳೆದಿತ್ತಂತೆ. ೧೯೯೮ ರ ಸಮಯ. ಅಮೇರಿಕಾದಲ್ಲಿ ನೆವಡಾ ಮರುಭೂಮಿಯಲ್ಲಿ "ಬರ್ನಿಂಗ್ ಮ್ಯಾನ್" ಅಂತೊಂದು ಉತ್ಸವ. ಅಲ್ಲಿ ತಮ್ಮ ಕಂಪೆನಿಯ ಸ್ಥಾಪನೆಯ ಉದ್ಘೋಷಿಸುವವರಿದ್ರು ಲ್ಯಾರಿ ಮತ್ತು ಸರ್ಜಿ. ಅದಕ್ಕೆ ಅವರು ಬಳಸಿದ ಚಿತ್ರದಲ್ಲಿ ಗೂಗಲ್ಲಿನ ಎರಡನೇ ಓ ಹಿಂದೆ ಅದನ್ನು ಬರೆಯುತ್ತಿರುವಂತೆ ಒಬ್ಬ ವ್ಯಕ್ತಿಯ ಚಿತ್ರ ಹಾಕಿದ್ದರಂತೆ. ನಂತರ ತಾವು ಆಫೀಸಲ್ಲಿರದ ದಿನಗಳ ಬಗ್ಗೆ ತಿಳಿಸಲು ಎರಡನೆಯ ಚಿತ್ರವನ್ನು ಬಳಸಿದರಂತೆ.  ಅಷ್ಟೇ ಆಗಿದ್ದರೆ ಎಲ್ಲಾ ಕಂಪೆನಿಗಳ ಬದಲಾಗುತ್ತಿರುವ ಲಾಗೋಗಳಂತೆ ಇದೂ ನೂರರಲ್ಲೊಂದಾಗಿ ಮಖಾಡೆ ಮಲಗಿಬಿಡುತ್ತಿತ್ತೇನೋ. ಆದರೆ ಮುಂದಾಗಿದ್ದೇ ಬೇರೆ. 

೨೦೦೦ ನೇ ಇಸವಿಯ ಜುಲೈ ೧೪. ಜುಲೈ ೧೪ ಎಂದ್ರೆ ಫ್ರಾಂಸಲ್ಲಿ ಸಿಕ್ಕಾಪಟ್ಟೆ ಮಹತ್ವ ಅದಕ್ಕೆ. ೧೮೭೯ರಲ್ಲಿ ಪ್ಯಾರಿಸಲ್ಲಿದ್ದ ಕೋಟೆಯೊಂದನ್ನು ಒಡೆದುಹಾಕಿದ ದಿನವಂತೆ ಅದು. ನಮ್ಮಲ್ಲಿ ಬಸ್ಸು, ಅಂಗಡಿ ಮುಂಗಟ್ಟುಗಳನ್ನು ಪ್ರತೀ ಪ್ರತಿಭಟನೆಯಲ್ಲೂ ಒಡೆಯುತ್ತಾರಂತೆ. ಅದರಲ್ಲಿ ಕೋಟೆಯೊಂದನ್ನು ಒಡೆಯೋದರಲ್ಲಿ ಏನು ವಿಶೇಷ ಅಂದ್ರಾ ? ಅಲ್ಲೇ ಇರೋದು. ೧೪ನೇ ಶತಮಾನದಲ್ಲಿ ಕಟ್ಟಿದ್ದ ಆ ಕೋಟೆ ೧೭ ಮತ್ತು ೧೮ನೇ ಶತಮಾನದಲ್ಲಿ ಯುದ್ದಕೈದಿಗಳನ್ನು ಇಡೋ ಕಾರಾಗೃಹವಾಗಿ ಬಳಕೆಯಾಗುತ್ತಿತ್ತಂತೆ. ಫ್ರೆಂಚ್ ಕ್ರಾಂತಿಯ ಸಮಯದಲ್ಲಿ ಆ ಕೋಟೆಯನ್ನು ಒಡೆದು ನಮ್ಮನ್ನು ಕಟ್ಟಿಹಾಕಿದ ಸಂಕಲೆಗಳಿಂದ ಬಿಡಿಸಿಕೊಂಡ ಸಂತಸದಿಂದ ಬೀಗಿದರಂತೆ ಜನ. ಹಂಗಾಗಿ ಬ್ಯಾಸ್ಟೈಲ್ ಡೇ ಅಂದ್ರೆ ಒಂತರಾ ಸ್ವಾತಂತ್ರ್ಯ ದಿನದಂತೆ ಅಲ್ಲಿ. ಸರಿ ಅದಕ್ಕೂ ಗೂಗಲ್ಲಿಗೂ ಏನು ಲಿಂಕು ಅಂದ್ರಾ ? ಅಲ್ಲೇ ಇರೋದು ಪಾಯಿಂಟು. ಆ ದಿನಕ್ಕೆ ಒಂದು ಚಿತ್ರ ಬರಿತೀಯೇನಪ್ಪ ಅಂತ ಗೂಗಲ್ಲಿನ ಅಂತರ್ಜಾಲ ವಿನ್ಯಾಸಕಾರ ಡೆನ್ನಿಸ್ ಹ್ವಾಂಗ್ ನಿಗೆ ಲ್ಯಾರಿ ಮತ್ತು ಸರ್ಜಿ ಕೇಳಿದ್ರಂತೆ. ಅವ ವಾಟ್ ಏನ್ ಐಡಿಯಾ ಸರ್ಜಿ. ಯಾಕಿಲ್ಲ ಅಂತ ಬರ್ದೇ ಬಿಟ್ನಂತೆ. ಅದಕ್ಕೆ ಡೂಡಲ್ಲು ಅಂತ ಹೆಸರಿಟ್ರಂತೆ. ಅದಕ್ಕೆ ಸಿಕ್ಕ ಯದ್ವಾತದ್ವಾ ಜನಪ್ರಿಯತೆ ಕೊನೆಗೆ ಡೂಡಲ್ಲು ಗೂಗಲ್ಲಿನ ಅವಿಭಾಜ್ಯ ಅಂಗದಂತಾಗಿ ಮಾಡಿಬಿಟ್ಟಿತು.  ಹ್ವಾಂಗ್ ಗೂಗಲ್ಲಿನ ಮುಖ್ಯ ಡೂಡ್ಲರ್ರು ಅಂತ ಆಗಿ ಅವನ ಕೈ ಕೆಳಗೆ ಎಷ್ಟೋ ಡೂಡ್ಲರುಗಳು ಕೆಲಸ ಮಾಡೋ ಅಷ್ಟು ಬೆಳೆದುಬಿಟ್ಟ!. ಆಗ ಒಬ್ಬನಾಗಿದ್ದವ ಈಗ ಡೂಡಲ್ಲಿಗರು ಅಂತನೇ ಕರೆಯೋ ತಂತ್ರಜ್ನರ ತಂಡವನ್ನು ಕಟ್ಟಿದ್ದಾನೆ. ನಾವು ನೊಡೋ ಈ ಡೂಡಲ್ಗಳ ಹಿಂದೆ ಅದೆಷ್ಟು ಡೂಡಲ್ಲಿಗರ ಅಗಾಧ ಶ್ರಮ ಅಡಗಿದೆ ಅಂತ ಒಂದಿನನೂ ಯೋಚನೇನೆ ಮಾಡಿರ್ಲಿಲ್ಲ ಅಲ್ವಾ ? ಇನ್ಮೇಲಾದ್ರೂ ಮಾಡ್ಬೋದು ಬಿಡಿ. ಅದರಲ್ಲಿ ತಪ್ಪಿಲ್ಲ . 

ಹೌದು ಆ ದಿನಕ್ಕೆ ಆ ಡೂಡಲ್ಲೇ ಅಂತ ಹೆಂಗೆ ನಿರ್ಧಾರ ವಾಗುತ್ತೆ ? 
ಈ ಡೂಡಲ್ಲಿಗರು ಮೊದಲೇ ಕೂತು ಇಂತಾ ದಿನ ಬರ್ತಾ ಇದೆ. ಅದಕ್ಕೆ ಯಾವ ಡೂಡಲ್ ಮಾಡಿದ್ರೆ ಚೆಂದ ಅಂತ ಮಾತಾಡ್ತಾರಂತೆ. ಒಂದೇ ದಿನ ಎರಡ್ಮೂರು ಸಂಗತಿಗಳಿದ್ರೆ ಅದರಲ್ಲಿ ಯಾವುದನ್ನು ತಗೋಬೇಕು, ಯಾವುದಕ್ಕೆ ಎರಡನೇ ಪ್ರಾಮುಖ್ಯತೆ ಕೊಡ್ಬೇಕು ಅಂತ ಗಹನವಾದ ಚರ್ಚೆಯೇ ನಡೆಯುತ್ತಂತೆ ಈ ತಂಡದಲ್ಲಿ.  ಅಂದಂಗೆ ಇದು ಯಾರೋ ಒಂದಿಷ್ಟು ಜನ ಕೂತು ನಿರ್ಧರಿಸೋದೂ ಅಲ್ಲ. ಜನ ಸಾಮಾನ್ಯರೂ ಮುಂದಿನ ಡೂಡಲ್ ಹೇಗಿರಬೇಕು ಅಂತ ತಮ್ಮ ಅಭಿಪ್ರಾಯವನ್ನು  proposals@google.com ಅನ್ನೋ ಮಿಂಚಂಚೆಗೆ ಕಳುಹಿಸಬಹುದು. ದಿನಾ ನೂರೆಂಟು ಮಿಂಚೆ(ಈ ಮೇಲು) ಬರತ್ತೆ. ಅದನ್ನೆಲ್ಲಾ ಅಳವಡಿಸೋಕೆ ಆಗ್ದೇ ಇದ್ರೂ ಎಲ್ಲವನ್ನೂ ಖಂಡಿತಾ ಓದುತ್ತಿರುತ್ತೇವೆ ಅಂತಾರೆ ಡೂಡಲ್ ತಂಡ. ನಿಮ್ಮದೂ ಏನಾದ್ರೂ ಹೊಸ ಐಡಿಯಾ ಇದ್ರೆ ಅದನ್ನು ಮೇಲಿನ ಮಿಂಚೆಗೆ ಕಳುಹಿಸಬಹುದು. ನಿಮ್ಮ ಐಡಿಯಾ ಜಗತ್ಪ್ರಸಿದ್ದವಾಗ ಗರ್ವದಿಂದ ಬೀಗಬಹುದು.

ಅಂದಂಗೆ ಈ ಡೂಡಲ್ ತಂಡದಲ್ಲಿ ಸುಮಾರು ೨೦ ಜನ ಇರಬಹುದು ಅನ್ನುತ್ತೆ ಕೆಲೋ ಮೂಲಗಳು. ನಿಖರವಾದ ಮಾಹಿತಿ, ಮತ್ತು ಅವರ ಹೆಸರುಗಳು ಎಲ್ಲೂ ಬಹಿರಂಗವಾದಂತೆ ಕಾಣೆ. ೨೦ ಜನರ ತಂಡದವನೊಬ್ಬ ನಮ್ಮ ನಿಮ್ಮ ಮಧ್ಯೆ ಇದ್ದು ಈ ಲೇಖನವನ್ನು ಓದುತ್ತಲೂ ಇರಬಹುದೇನೋ !! ಅದು ಏನಾದ್ರೂ ಇರ್ಲಿ ಬಿಡಿ. ಈ ಡೂಡಲ್ಗಳು ಇಷ್ಟ ಆಗೋದು ಅವುಗಳ ಕ್ರಿಯಾತ್ಮಕತೆಯಿಂದ. ಪಿಯಾನೋ ತರದ ಡೂಡಲ್ ಒಂದು ಬಂದಿತ್ತು. ಅದರ ಮೇಲೆ ಕೀಲಿಮಣೆ ತಂದ್ರೆ ಹಲವು ಶಬ್ದ ಬರ್ತಿತ್ತು. ಇದೇ ತರ ಹಲವು ಆಟಗಳ ಡೂಡಲ್ಗಳು ಬಂದಿವೆ. ಹೊಸವರ್ಷದ ದಿನ ಓಡಾಡೋ ಡೂಡಲ್ಲು, ದೀಪಾವಳಿ ದಿನ ಪಟಾಕಿ ತರದ ಡೂಡಲ್ಲು, ಸ್ವಾತಂತ್ರ್ಯ ದಿನಕ್ಕೆ ಸೀರೆಯ ಸೆರಗಿನಂತೆ, ನವಿಲಿನಂತೆ ಡೂಡಲ್ಲು .. ಹೀಗೆ ಪ್ರತಿಯೊಂದಕ್ಕೂ ಆಯಾ ದಿನಕ್ಕೆ ಸೂಪರ್ರಾಗಿ ಹೊಂದೋ ರೂಪ. ಇಲ್ಲಿಯವರೆಗೆ ಸುಮಾರು ೧೦೦೦ ಡೂಡಲ್ಗಳು ಬಂದಿರಬಹುದು ಅನ್ನುತ್ವೆ ಕೆಲ ಮೂಲಗಳು. ಸಿಂಪಲ್ಲಾಗಿ ಹೇಳ್ಬೇಕಂದ್ರೆ ಎರಡು G ಗಳು ನೀಲಿಯಲ್ಲೂ, ಒಂದು 0, ಮತ್ತು e ಕೆಂಪಲ್ಲೂ, ಮತ್ತೊಂದು o ಕೇಸರಿ ಮತ್ತು l ಹಸಿರಿನಲ್ಲೂ ಇರೋದು ಗೂಗಲ್ಲಿನ ಸಾಮಾನ್ಯ ಲಾಂಛನ. ಸತ್ಯಾ ಸತ್ಯತೆ ಪರಿಶೀಲಿಸಲು ಮತ್ತೆ ಗೂಗಲ್ ಅಂತ ಹೊಡ್ದು ವಾಪಾಸ್ ಬಂದ್ರಾ ? ಹೆ ಹೆ. ಇರ್ಲಿ. ಅದನ್ನು ಬಿಟ್ಟು ಭಿನ್ನವಾಗಿ ಬೇರೇನೆ ಇದ್ರೂ ಅದು ಡೂಡಲ್ಲು. ಈ ಡೂಡಲ್ ಬಿಡಿಸೋಕೆ ಅಂತಲೇ Doodle 4 google ಅಂತೊಂದು ಸ್ಪರ್ಧೆ ನಡೆಯತ್ತೆ. Doodle 4 Google India ಅಂತಲೂ ಒಂದು ಸ್ಪರ್ಧೆ ನಡೆಯುತ್ತೆ. ೨೦೧೨ ರಲ್ಲಿ ಗೆದ್ದ  ಕೇಂದ್ರಿಯ ವಿದ್ಯಾಲಯದ ೯ನೇ ಕ್ಲಾಸಿನ ವಿದ್ಯಾರ್ಥಿ ಅರುಣ್ ಕುಮಾರ್ ಯಾದವಿನ ಡೂಡಲ್ ಜಗತ್ತಿನ ಕಣ್ಣನ್ನೇ ತನ್ನತ್ತ ಸೆಳೆದಿತ್ತು. ಸಬ್ರಿನಾ ಬ್ರಾಡಿ ಅನ್ನೋ ವಿದ್ಯಾರ್ಥಿನಿ Doodle 4 google  ನ ಜಾಗತಿಕ ಸ್ಪರ್ಧೆಯನ್ನು ಹಿಂದಿನ ವರ್ಷ ಗೆದ್ದವಳು.. ಈ ಬಾರಿ ಯಾರಾದ್ರೂ ಭಾರತದ ಪ್ರತಿಭೆ ಜಾಗತಿಕ ಪ್ರಶಸ್ತಿಯನ್ನು ಗೆಲ್ಲಲೆಂಬ ನಿರೀಕ್ಷೆಯಲ್ಲಿ… ಅಂದಂಗೆ ಈ ಡೂಡಲ್ಲಿನ ಬಗ್ಗೆ ಮಾಹಿತಿ ಕಮ್ಮಿ ಆಯ್ತಾ ? ಗೂಗಲ್ಲಿದ್ದೇ ಇದ್ಯಲ್ಲ. ತಡಕಿದರೆ ಈ ಬಗ್ಗೆಯೇ ದಿನಗಟ್ಲೇ ಓದಿದ್ರೂ ಮುಗಿಯದಷ್ಟು ಸ್ವಾರಸ್ಯಕರ ಮಾಹಿತಿಗಳು ಸಿಗುತ್ವೆ.. ಈ ವಾರಕ್ಕಿಷ್ಟು ಸಾಕನ್ನಿಸುತ್ತೆ.  ಮತ್ತೆ ಸಿಗೋಣ ಮುಂದಿನ್ವಾರ.. ಮತ್ತೆನಾದ್ರೂ ಹೊಸತರ ಹುಡುಕಾಟದೊಂದಿಗೆ. 

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

4 Comments
Oldest
Newest Most Voted
Inline Feedbacks
View all comments
narayana.M.S.
narayana.M.S.
10 years ago

ಮಾಹಿತಿ ಪೂರ್ಣ ಲೇಖನ ಪ್ರಶಸ್ತಿ, ಇಷ್ಟ ಆಯ್ತು.

Swarna
Swarna
10 years ago

Chennaagi baredidiri. Olle maahiti

amardeep.ps
amardeep.ps
10 years ago

ನೈಸ್.  ನನ್ಗೆ ಪೂರ್ತಿ ತಿಳಿದಿದ್ದಿಲ್ಲ… ಗೊತ್ತಾಯ್ತು…. ಚೆನ್ನಾಗಿದೆ….

Prabhu
Prabhu
10 years ago

ಲೇಖನ ಚನ್ನಾಗಿದೆ…

4
0
Would love your thoughts, please comment.x
()
x