ಮನರಂಜನಾ ಮಾಲಿನ್ಯ: ಅಖಿಲೇಶ್ ಚಿಪ್ಪಳಿ


ಎಲ್ಲಾ ನಕ್ಕ ಮೇಲೆ ದಡ್ಡ ನಕ್ಕನಂತೆ. ಈ ಭುವಿಯ ಮೇಲೆ ಲಕ್ಷಾಂತರ ಸಸ್ಯ-ಪ್ರಾಣಿ-ಪಕ್ಷಿ ಪ್ರಭೇದಗಳಿವೆ. ಆಧುನಿಕ ಮಾನವನ ಅತಿಲಾಲಸೆ, ದುರಾಸೆ, ಅಭಿವೃದ್ಧಿಯ ಹಪಾಹಪಿ, ತಂತ್ರಜ್ಞಾನದ ಅವಲಂಬನೆ, ಸುಖಲೋಲುಪತೆ, ಕೂಡಿಡುವ ಪ್ರವೃತ್ತಿ, ಸೋಮಾರಿತನ, ಶೊಂಬೇರಿತನ, ಹುಂಬತನ, ಮೋಜು-ಮಸ್ತಿ, ಕ್ರೌರ್ಯ ಇತ್ಯಾದಿಗಳಿಂದಾಗಿ ಹಲವು ಪ್ರಭೇದಗಳು ನಾಶವಾಗಿವೆ. ನಾಶವಾಗುವ ಹೊಸ್ತಿಲಿನಲ್ಲಿ ಮತ್ತಷ್ಟಿವೆ. ಅಷ್ಟೇಕೆ ಖುದ್ದು ಭೂಮಿಯೇ ಅಳಿವಿನಂಚಿನಲ್ಲಿ ಬಂದು ನಿಂತಿದೆ. ಪರಿಸರ ಪ್ರಾಜ್ಞರು, ಪರಿಸರ-ವಿಜ್ಞಾನಿಗಳು, ಭೂಪುತ್ರರು ಸೇರಿ ಭೂಮಿಯನ್ನುಳಿಸುವ ಪ್ರಯತ್ನ ಮಾಡುತ್ತಾರೆ. ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ ಎಂಬ ಗಾದೆಯಂತೆ, ಭೂಮಿಯ ಮೇಲೆ ಹಸಿರು ಚಿಗುರಿ, ಜೀವ ಉದಿಸಲು ತೆಗೆದುಕೊಂಡ ಅವಧಿ ಕೋಟ್ಯಾಂತರ ವರ್ಷಗಳು. ಇಡೀ ಭೂಮಂಡಲವನ್ನು ತಿಪ್ಪೆಗುಂಡಿ ಮಾಡಲು ಮಾನವ ತೆಗೆದುಕೊಂಡ ಅವಧಿ ಕೆಲವೇ ವರ್ಷಗಳು. ಭುವಿಯಾಳದಿಂದ ತೈಲವನ್ನು ಮೇಲೆತ್ತಿ ಅಭಿವೃದ್ಧಿ ಮಂತ್ರ ಜಪಿಸಲು ಪ್ರಾರಂಭಿಸಿದಾಗಿನಿಂದ ಅತಿವೇಗವಾಗಿ ಪರಿಶುದ್ಧವಾದ ಭೂಪ್ರದೇಶಗಳು ಮಾಲಿನ್ಯದಿಂದ ತತ್ತರಿಸಿದವು. ಡಾರ್ವಿನ್ ವಿಕಾಸವಾದದಂತೆ ಮಂಗನಿಂದ ಮಾನವ. ಮನುಷ್ಯನ ಬುದ್ಧಿಯು ಬಹುತೇಕ ಕಪಿಬುದ್ಧಿಯನ್ನೇ ಹೋಲುತ್ತದೆ. ಇವ ಸುಮ್ಮನೆ ಕುಳಿತಿರಲಾರ. ಇವನೊಳಗಿನ ಕ್ರಿಯಾಶೀಲತೆ ಸದಾ ಜಾಗೃತವಾಗಿರುತ್ತದೆ. ಹೊಸದನ್ನು ಕಂಡು ಹಿಡಿಯಲು ತವಕಿಸುತ್ತದೆ. ವಿಜ್ಞಾನ-ತಂತ್ರಜ್ಞಾನದ ಆವಿಷ್ಕಾರವಾಗುತ್ತದೆ. ಯಂತ್ರಗಳನ್ನು ಕಂಡು ಹಿಡಿದ ಮಾನವನೇ ಯಂತ್ರಗಳ ಅಡಿಯಾಳಾಗುತ್ತಾನೆ. ಗುಲಾಮಿ ಯಂತ್ರಗಳ ಗುಲಾಮನಾಗುತ್ತಾನೆ. ಮಾಲಿನ್ಯದಲ್ಲೂ ಹಲವು ವಿಧ. ವಾಯು, ಜಲ, ನೆಲ, ಶಬ್ಧ, ದೃಶ್ಯ, ಆಹಾರ ಮಾಲಿನ್ಯಗಳಾದರೆ, ಗಿಜಿಗುಡುವ ಬೆಂಗಳೂರು-ಮುಂಬಯಿಯಂತಹ ಪ್ರದೇಶಗಳು ಸರ್ವಮಾಲಿನ್ಯಮಯವಾಗಿವೆ. ಜೊತೆಗೆ ದೃಶ್ಯ ಮಾಧ್ಯಮಗಳು ಜನರ ಮನಸ್ಸನ್ನೇ ಮಲೀನಗೊಳಿಸಿವೆ.

ಮಾನವನ ಕ್ರಿಯಾಶೀಲ ಮನಸ್ಸು ಮನರಂಜನೆಗಾಗಿ ಕಂಡುಕೊಂಡ ಒಂದು ಮಾಧ್ಯಮವೇ ದೃಶ್ಯ ಮಾಧ್ಯಮ. ಭಾರತದಂತಹ ದೇಶದಲ್ಲಿ ಮೂಕಿ ಸಿನಿಮಾ ೧೯೪೨ರಲ್ಲೇ ಬಿಡುಗಡೆಯಾಗಿತ್ತು. ಆಮೇಲೆ ಟಾಕಿ ಸಿನಿಮಾಗಳು ಸಾಲು-ಸಾಲಾಗಿ ಬಂದವು. ಮೇರು ದಿಗ್ದಕ್ಷಕರು ಸಾವಿರ ಸಂಖ್ಯೆಯಲ್ಲಿ ಸಿನಿಮಾಗಳನ್ನು ತಯಾರು ಮಾಡಿ ಬಿಡುಗಡೆ ಮಾಡಿದರು. ಕೆಲವಷ್ಟು ಸಿನಿಮಾಗಳು ಮಾತ್ರ ಸಮಾಜಕ್ಕೊಂದು ಧನಾತ್ಮಕ ಸಂದೇಶವನ್ನು ನೀಡಲು ಸಮರ್ಥವಾದವು. ಸಂಸ್ಕ್ರತಿಯನ್ನು ಬಿಂಬಿಸುವ ಒಳ್ಳೆ ಹೂರಣಗಳುಳ್ಳ ಸಿನಿಮಾಗಳ ಜಾಗದಲ್ಲಿ ಕ್ರೌರ್ಯ ವಿಜೃಂಭಿಸುವ ಹಂತಕ್ಕೆ ಬಂದಾಗ ಸಿನಿಮಾ ಕ್ಷೇತ್ರವು ಮಾಲಿನ್ಯಕ್ಕೆ ತನ್ನ ಕೊಡುಗೆಯನ್ನು ನೀಡಲು ಶುರು ಮಾಡಿತು. ರೈಲಿನ ಮೇಲೆ ಚಿತ್ರಿಕರಿಸಲಾಗುವ ಒಂದು ಹಾಡಿಗಾಗಿ ಎಷ್ಟು ಕಲ್ಲಿದ್ದಲ್ಲನ್ನು ಸುಡಲಾಯಿತು ಎಂಬುದನ್ನು ಯಾರೂ ಗಮನಿಸುವುದಿಲ್ಲ. ಸಿನಿಮಾ ಶೂಟಿಂಗ್ ವೀಕ್ಷಿಸಿದವರಿಗೆ ಸಿನಿಮಾದ ಒಂದು ದೃಶ್ಯವನ್ನು ಹೇಗೆ ಚಿತ್ರಿಕರಿಸಲಾಗುತ್ತದೆ ಎಂಬ ಅಂದಾಜು ಸಿಗಬಹುದು. ಇದೇ ಸಂದರ್ಭದಲ್ಲಿ ದಿವಂಗತ ಪುಟ್ಟಣ್ಣ ಕಣಗಾಲ್ ನಿರ್ದೇಶಿಸಿದ ಅಮೃತ ಘಳಿಗೆ ಎಂಬ ಚಿತ್ರದ ಅನುಭವವನ್ನು ಹಂಚಿಕೊಳ್ಳುವುದು ಸೂಕ್ತ. ಅಮೃತ ಘಳಿಗೆ ಚಿತ್ರದ ಬಹುಪಾಲು ಚಿತ್ರಿಕರಿಸಿದ್ದು ಸಾಗರದ ಸುತ್ತ-ಮುತ್ತಲ ಹಳ್ಳಿಗಳಲ್ಲಿ. ಇತಿಹಾಸ ಪ್ರಸಿದ್ಧ ಇಕ್ಕೇರಿ ದೇವಸ್ಥಾನದ ಎದುರು ಭಾಗದಲ್ಲಿರುವ ನಂದಿಯ ಎದುರಿನ ಮೆಟ್ಟಿಲಿನಿಂದ ಚಿತ್ರದ ನಾಯಕಿ ಪಾರ್ವತಿ ಪರಶಿವನ ಪ್ರಣಯ ಪ್ರಸಂಗ . . . ಎಂಬ ಹಾಡಿಗಾಗಿ ನೃತ್ಯ ಮಾಡುತ್ತಾ ಇಳಿದು ಬರಬೇಕಿತ್ತು. ಚಿತ್ರಿಕರಣ ಶುರುವಾಗಿದ್ದು, ಸಂಜೆ ೬ ಗಂಟೆಗೆ. ತಲೆಯ ಮೇಲೆ ಟೋಪಿಯನ್ನು ಹಾಕಿಕೊಂಡ ಪುಟ್ಟಣ್ಣ, ಸಿಗರೇಟು ಸೇದುತ್ತಾ ನಿರ್ದೇಶಿಸುತ್ತಿದ್ದರು. ಒಂದು ಬಾರಿ ಕಟ್. ಎಂದರು. ಸರಿಯಾಗಿರಲಿಲ್ಲ. ೨-೩-೪ ಹೀಗೆ ಬಹುಷ: ಹತ್ತಿಪ್ಪತ್ತು ಬಾರಿಯಾಗಿರಬಹುದು. ನೋಡುತ್ತಿದ್ದ ನಮಗೇ ಬೇಸರ ಬಂದಿತ್ತು. ಪುಟ್ಟಣ್ಣನವರ ಸಹನೆ ಸಂಪೂರ್ಣ ನಶಿಸಿಹೋಗಿತ್ತು. ಸಾಕಷ್ಟು ಫಿಲ್ಮ್‌ಗಳು ಹಾಳಾಗಿದ್ದವು. ಪದ್ಮ ವಾಸಂತಿಯ ಕೆನ್ನೆಗೊಂದು ಫಟೀರೆಂದು ಬಾರಿಸಿದರು. ನಾಯಕಿಯ ಕಣ್ಣಲ್ಲಿ ನೀರು, ಅಪಮಾನ, ಮುಂದಿನ ಚಿತ್ರಿಕರಣ ಓಕೆ ಆಯಿತು. 

ಹೀಗೆ ಒಂದೊಂದು ಸಿನಿಮಾ ತಯಾರಿಕೆಯಲ್ಲೂ ಸಾಕಷ್ಟು ಶಕ್ತಿಯ ದುರುಪಯೋಗವಾಗುತ್ತದೆ. ಪ್ರಖರವಾದ ಸಾವಿರಾರು ವೋಲ್ಟ್‌ಗಳ ಬಲ್ಬುಗಳು ನಾಲ್ಕೂ ದಿಕ್ಕಿಗೆ ಉರಿಯುತ್ತಿರುತ್ತವೆ. ನಿರ್ದೇಶಕ ಓಕೆ ಎನ್ನುವವರೆಗೂ ಶಕ್ತಿಯ ಬಳಕೆ ಮುಂದುವರೆಯುತ್ತದೆ. ಅಲ್ಲದೆ, ಹಿಂಸಾತ್ಮಕ ಚಿತ್ರಗಳ ಯುಗದಲ್ಲಿ ಪ್ರತಿ ಸಿನೆಮಾಗಳಲ್ಲಿ ವಿವಿಧ ರೀತಿಯ ಸ್ಪೋಟಕಗಳನ್ನು ಬಳಸುತ್ತಾರೆ. ಕಾರು-ಜೀಪುಗಳ ಬಳಕೆಯಾಗುತ್ತದೆ. ಅರೆನಗ್ನ ನಾಯಕಿಯರ ಹಾಡುಗಳಿಗೆ ಬಣ್ಣ-ಬಣ್ಣದ ರಾಸಾಯನಿಕಗಳನ್ನು ಬಳಸಲಾಗುತ್ತದೆ. ಗಾಳಿಯಲ್ಲಿ ಚಿಮ್ಮುವ ವಿಷಕಾರಿ ರಾಸಾಯನಿಕಗಳು ವಾಯುಮಾಲಿನ್ಯಕ್ಕೆ ಕಾರಣವಾಗುವುದಲ್ಲದೆ, ಸಿನಿಮಾದಲ್ಲಿ ಕಾರ್ಯನಿರ್ವಹಿಸುವ ಲೈಟ್‌ಬಾಯ್ ಮತ್ತು ಇತರ ಕಾರ್ಮಿಕರ ಆರೋಗ್ಯಕ್ಕೂ ಹಾನಿಕಾರಕವಾಗಿವೆ. ಹಾಲಿವುಡ್‌ನ ಸಿನಿಮಾಗಳು ಮಾಡುತ್ತಿರುವ ಹಾನಿಯಂತೂ ಹೇಳತೀರದು. ಹಲವಾರು ಕೋಟಿಗಳನ್ನು ಖರ್ಚು ಮಾಡಿ, ಕೃತಕವಾಗಿ ನಿರ್ಮಿಸುವ ನೀರಿನ ಕೊಳಗಳು, ಜ್ವಾಲಾಮುಖಿಗಳು, ಟಾರ್ನೆಡೋಗಳಿಗಾಗಿ, ವಿವಿಧ ರೀತಿಯ ವಿಷಕಾರಿ ಸ್ಪೋಟಕಗಳನ್ನು ಬಳಸಲಾಗುತ್ತದೆ. ಊಹಿಸಿ, ಟೈಟಾನಿಕ್‌ನಂತಹ ಸಿನಿಮಾ ನಿರ್ಮಾಣವನ್ನು ಐತಿಹಾಸಿಕ ಸಿನಿಮಾವೆಂದು ಹಾಡಿ ಹೊಗಳಲಾಗುತ್ತದೆ. ವಾಸ್ತವಕ್ಕೆ ತೀರ ಹತ್ತಿರವಾಗಿ ನಿರ್ಮಿಸಿದ ಟೈಟಾನಿಕ್ ಸಿನಿಮಾವನ್ನು ಮೆಚ್ಚದ ಜನವಿಲ್ಲ. ಹೂಡಿಕೆ ಮಾಡಿದ್ದಕ್ಕಿಂತ ನೂರಾರು ಪಟ್ಟು ಹಣವನ್ನು ನಿರ್ಮಾಪಕರು ಗಳಿಸಿದ್ದು ಒಂದು ದಾಖಲೆಯಾಗಿದೆ. ಚಿತ್ರಿಕರಣ ಪೂರ್ತಿಯಾದ ನಂತರದಲ್ಲಿ ಚಿತ್ರಿಕರಣ ಸಮಯದಲ್ಲಿ ಆದ ಮಾಲಿನ್ಯವನ್ನು ಯಾರು ತೊಳೆದು ಹಾಕಿದರು ಎಂಬುದಕ್ಕೆ ಎಲ್ಲೂ ದಾಖಲೆ ಸಿಗುವುದಿಲ್ಲ. 

ಸಿನಿಮಾ ನಿರ್ಮಾಪಕರು ಮತ್ತು ನಿರ್ದೇಕರಿಗೆ ಯಾವಾಗಲೂ ಹೊಸತನ್ನು ತೋರಿಸುವ ಅನಿವಾರ್ಯವಿರುತ್ತದೆ. ಪೂರ್ವನಿರ್ಮಿತ ಚಿತ್ರದ ಸೆಟ್‌ಗಳು ಏಕತಾನತೆಯಿಂದ ಕೂಡಿ ಪ್ರೇಕ್ಷಕರಿಗೆ ನಿರಾಸೆಯನ್ನುಂಟು ಮಾಡುತ್ತವೆ. ಅದಕ್ಕಾಗಿ ನಿರ್ದೇಶಕ ಹೊಸ-ಹೊಸ ತಾಣಗಳ ಹುಡುಕಾಟದಲ್ಲಿರುತ್ತಾನೆ. ನಿಸರ್ಗಸಹಜವಾಗಿಯೇ ಪ್ರಕೃತಿಯ ಸೌಂದರ್ಯ ಜನರಿಗೆ ಮುದ ನೀಡುತ್ತದೆ. ಅದರಲ್ಲೂ ಛಾಯಾಗ್ರಾಹಕನ ಕೈಚಳಕದಿಂದಾಗಿ ಅದೇ ತಾಣ ಅದ್ಭುತ ರಮಣೀಯವಾಗಿ ಪ್ರೇಕ್ಷಕರನ್ನು ಆಕರ್ಷಿಸುತ್ತದೆ. ಉದಾಹರಣೆಯಾಗಿ ಮುಂಗಾರು ಮಳೆ ಚಿತ್ರದ ಕೆಲಭಾಗವನ್ನು ಜಗತ್ಪ್ರಸಿದ್ಧ ಜೋಗದಲ್ಲಿ ಚಿತ್ರಿಕರಿಸಿದರು. ಅದೊಂದು ಮುಂಗಾರು ಮಳೆಯ ಸಿನಿಮಾ ನೋಡಿ, ಅಪಾಯಕರವಾದ ಆ ಜಾಗಕ್ಕೆ ಹೋದ ಎಷ್ಟೋ ಜನ ಪ್ರಪಾತಕ್ಕೆ ಬಿದ್ದು ಸತ್ತಿದ್ದನ್ನು ಪತ್ರಿಕೆಗಳಲ್ಲಿ ನೋಡಿದ್ದಾಗಿದೆ. ಅಲ್ಲಿ ನಾಯಕ-ನಾಯಕಿ ಕುಡಿದೆಸೆದ ಪೆಪ್ಸಿಯ ಪ್ಲಾಸ್ಟಿಕ್ ಬಾಟಲುಗಳು ಇನ್ನೂ ಕೊಳೆಯದೇ ಅಲ್ಲೇ ಬಿದ್ದಿದ್ದನ್ನು ಯಾರೂ ಗಮನಿಸುವ ಗೋಜಿಗೆ ಹೋಗುವುದಿಲ್ಲ. ಇನ್ನು ಡಬ್ಬಿಂಗ್ ಬೇಡವೆನ್ನುವ ಕನ್ನಡ ಚಿತ್ರರಂಗ ಚೂರು-ಪಾರು ಹೆಸರು ಬದಲಿಸಿ, ತಾಣ ಬದಲಿಸಿ ತೆಗೆಯುವ ಚಿತ್ರಗಳು ಒಂದೋ ತಮಿಳು ಮೂಲದವೋ, ತೆಲಗು ಮೂಲದವೋ ಅಥವಾ ಇನ್ಯಾವುದೋ ಮೂಲದಿಂದ ಬಂದಿರುತ್ತವೆ. ಮತ್ತೆ ಅದೇ ರೀತಿಯ ಹಿಂಸಾತ್ಮಕ ದೃಶ್ಯಗಳನ್ನು ಇಲ್ಲಿಯ ನೆಲದಲ್ಲಿ ಚಿತ್ರಿಕರಿಸಲಾಗುತ್ತದೆ. ಒಂದೇ ತರಹದ ಚಿತ್ರಗಳು ಪುನರ್‌ನಿರ್ಮಾಣಗೊಳ್ಳುವಾಗ ಅಷ್ಟೇ ಮಾಲಿನ್ಯಗಳಾಗುತ್ತವೆ. ಶರಾವತಿ ಹಿನ್ನೀರು ಪ್ರದೇಶದಲ್ಲಿ ಮುಳುಗಡೆಯಾದ ಕಣ್ಣೀರು ಕತೆಗಳು ನೂರಾರಿದ್ದರು, ಈಗ ನೀರಿನಿಂದ ಆವೃತವಾದ ಈ ಪ್ರದೇಶ ಸಿನೆಮಾದವರಿಗೊಂದು ಆಕರ್ಷಣೆಯಾಗಿದೆ. ರಾಜ್ಯ-ರಾಷ್ಟ್ರ ಪ್ರಶಸ್ತಿಗಳು ಇಲ್ಲಿ ಚಿತ್ರಿಕರಣವಾದ ಚಿತ್ರಗಳಿಗೆ ದಕ್ಕಿವೆ. ಚಿತ್ರಿಕರಣದ ನಂತರದಲ್ಲಿ ಜಮೆಯಾಗುವ ತ್ಯಾಜ್ಯಗಳು ಹಿನ್ನೀರಿಗೆ ಸೇರಿ ಅಲ್ಲಿನ ಪರಿಸರ ಹಾಳಾಗಿರುವ ಸಂಗತಿ ಎಲ್ಲೂ ಪ್ರಸ್ತಾಪವಾಗುವುದಿಲ್ಲ.

ಅಮೆರಿಕದ ಉಪಾಧ್ಯಕ್ಷರಾಗಿದ್ದ ಆಲ್ ಗೋರೆ ರಚಿಸಿದ ದ ಇನ್‌ಕನ್ವೀಯಂಟ್ ಟ್ರುಥ್ ಕೃತಿ  ಭೂಮಿಯ ಮೇಲೆ ಮಾನವನಿಂದಾದ ಅತ್ಯಾಚಾರವನ್ನು ಜಗತ್ತಿಗೆ ತಿಳಿಯಪಡಿಸುವ ಒಂದು ಸಾಕ್ಷ್ಯಚಿತ್ರ. ಹಾಗೆಯೇ ಹೋಂ ಎಂಬ ಸಾಕ್ಷ್ಯ ಚಿತ್ರವೂ ಕೂಡ ಜಗತ್ತಿನ ೬೬ ದೇಶಗಳಲ್ಲಿ ಪರಿಸರದ ಮೇಲಾದ ದೌರ್ಜನ್ಯವನ್ನು ವಿವರಿಸುವ ಚಿತ್ರವಾಗಿದೆ. ಈ ತರಹದ ಸಾಕ್ಷ್ಯ ಚಿತ್ರಗಳು ವಾಸ್ತವವನ್ನು ಜನರ ಮುಂದಿಡುವಲ್ಲಿ ಯಶಸ್ವಿಯಾಗಿವೆ. ಹಾಗೆಯೇ ಪರಿಸರವನ್ನು ಸಂರಕ್ಷಿಸುವಲ್ಲಿ ಸಂದೇಶ ನೀಡುವ ಹಲವು ಚಿತ್ರಗಳು ಕನ್ನಡದಲ್ಲೂ ಬಂದಿವೆಯಾದರೂ, ಅಲ್ಲೂ ಪರೋಕ್ಷವಾಗಿ ವನ್ಯಪ್ರಾಣಿಗಳಿಗೆ ಹಾಗೂ ಪರಿಸರಕ್ಕೆ ಧಕ್ಕೆಯಾಗುವಂತಹ ಪ್ರಸಂಗಗಳಿವೆ.

ದ ಡೇ ಆಪ್ಟರ್ ಟುಮಾರೋ ಎಂಬ ಚಿತ್ರದ ಚಿತ್ರೀಕರಣದ ಸಮಯದಲ್ಲಿ ಗಾಳಿಗೆ ಸೇರಿದ ಇಂಗಾಲಾಮ್ಲದ ಪ್ರಮಾಣ ೧೦ ಸಾವಿರ ಟನ್. ಇದಕ್ಕೆ ಪರಿಹಾರಾರ್ಥವಾಗಿ ಅದರ ನಿರ್ಮಾಪಕ ೨ ಲಕ್ಷ ಪೌಂಡ್ ಹಣವನ್ನು ಹಸರೀಕರಣ ಮಾಡಲು ನೀಡಿದ್ದನ್ನು ಬಿಟ್ಟರೆ, ಅಥವಾ ರೈಸಿಂಗ್ ಮ್ಯಾಟ್ರಿಕ್ಸ್ ಮತ್ತು ರಿಟರ್ನಿಂಗ್ ಮ್ಯಾಟ್ರಿಕ್ಸ್ ಚಿತ್ರದ ನಂತರದಲ್ಲಿ ಚಿತ್ರೀಕರಣದ ಸಮಯದಲ್ಲಿ ಉಪಯೋಗಿಸಿದ ವಸ್ತುಗಳನ್ನು ಬಡವರಿಗೆ ಮನೆ ಕಟ್ಟಿಕೊಳ್ಳಲು ನೀಡುವುದರ ಮೂಲಕ ಮರುಬಳಕೆಗೆ ಪ್ರೋತ್ಸಾಹಿಸಿದ್ದನ್ನು ಬಿಟ್ಟರೆ, ಸಿನೆಮಾದವರು ಪರಿಸರ ಕಾಳಜಿ ವ್ಯಕ್ತ ಪಡಿಸಿದ್ದು ಅಪರೂಪವೇ ಆಗಿದೆ.

ಚಿತ್ರೀಕರಣದ ಸಮಯದಲ್ಲಾಗುವ ಮಾಲಿನ್ಯ ಒಂದೆಡೆಯಾದರೆ, ಚಿತ್ರೀಕರಣದ ನಂತರದಲ್ಲಾಗುವ ಮಾಲಿನ್ಯವು ಕಡಿಮೆಯೇನಲ್ಲ. ಈಗಂತೂ ಪ್ರತಿ ಮನೆಯಲ್ಲಿ ಟಿ.ವಿಯೆಂಬ ಮಾಯದ ಪೆಟ್ಟಿಗೆಯಿದೆ. ನೋಡಲು ನೂರು ಕಣ್ಣು, ೨೪ ಗಂಟೆಯೂ ಸಾಲದು. ನೂರಾರು ಚಾನೆಲ್‌ಗಳು ಸಾವಿರಾರು ಚಿತ್ರಗಳನ್ನು ಪ್ರದರ್ಶನ ಮಾಡುತ್ತವೆ. ಕಲ್ಲಿದ್ದಲಿನಿಂದ ಉರಿಸಿ ಬಂದ ವಿದ್ಯುತ್ತನ್ನೇ ಟಿ.ವಿ. ವೀಕ್ಷಿಸಲು ಬಳಕೆಯಾಗುತ್ತದೆ. ಜೊತೆಗೆ ಟಿ.ವಿಯೆದುರಿನಲ್ಲಿ ತಿನ್ನುವ ಕುರುಕಲು ತಿಂಡಿ, ಅದರ ಪ್ಲಾಸ್ಟಿಕ್ ತ್ಯಾಜ್ಯ. ನಿರಂತರ ಟಿ.ವಿ. ನೋಡುತ್ತಾ ಕುರುಕಲು ತಿನ್ನುವ ಮಕ್ಕಳು-ವಯಸ್ಕರ ತೂಕ ಹೆಚ್ಚಾಗಿ ಹಲವಾರು ಕಾಯಿಲೆಗಳಿಗೆ ಕಾರಣವಾಗುತ್ತದೆ. ಟಿ.ವಿ. ನೋಡುವ ಜನ ಸಹಜವಾಗಿ ಶೋಂಬೇರಿತನದಿಂದ ಜೀವನ ಸವೆಸುತ್ತಾರೆ. ಅಲ್ಲದೆ ಹೊಸ-ಹೊಸ ತಲೆಮಾರಿನ ಟಿ.ವಿ.ಗಳು ಮಾರುಕಟ್ಟೆಯಲ್ಲಿ ಧಾಂಗುಡಿಯಿಡುತ್ತಿವೆ. ಹಳೆಯದಾದ ಟಿ.ವಿ. ಇ-ವೇಸ್ಟಾಗಿ ಮಾರ್ಪಾಟಾಗುತ್ತದೆ. ಜಗತ್ತಿನಲ್ಲಿ ಪ್ರತಿನಿತ್ಯ ಹಾಳಾಗುವ ರಿಮೋಟ್‌ಗಳಿಂದ ಒಂದು ಸಣ್ಣದೇಶವನ್ನು ಮುಚ್ಚಿಹಾಕಬಹುದಾಗಿದೆ. ಬ್ರಿಟನ್‌ನ ಒಂದು ಅಧ್ಯಯನದಂತೆ ಅಲ್ಲಿನ ಮಕ್ಕಳು ಸರಾಸರಿ ದಿನಕ್ಕೇ ಏಳುವರೆ ತಾಸು ಟಿ.ವಿ. ವೀಕ್ಷಣೆ ಮಾಡುತ್ತಾರೆ. ಮನರಂಜನೆಯೆಂಬುದು ಜೀವನದ ಒಂದು ಭಾಗವಷ್ಟೆ ಆಗಿದ್ದರೆ ಇದನ್ನು ಬರೆಯುವ ಅಗತ್ಯವಿರಲಿಲ್ಲ. ಆದರೆ ಹೆಚ್ಚಿನ ಜನರಿಗೆ ಮನರಂಜನೆಯೇ ಜೀವನವಾಗಿದೆ. ಅದೂ ದೈಹಿಕ ಆಟಗಳಾಗಿದ್ದಲ್ಲಿ ಯುವಜನತೆ ಸಶಕ್ತವಾಗಿ ಇರುತ್ತಿತ್ತು. ಟಿ.ವಿಯೆದುರಿನ ಮಾನಸಿಕ ಮನರಂಜನೆಯಿಂದ ಒಂದು ದೇಶದ ಅಭಿವೃದ್ಧಿ ಕುಂಠಿತವಾಗುತ್ತದೆ. ಮಾನವಶ್ರಮ ವ್ಯರ್ಥವಾಗಿ ಹೋಗುತ್ತದೆ. ಟಿ.ವಿ.ಯಲ್ಲಿ ಬರುವ ಅಶ್ಲೀಲ ಜಾಹಿರಾತುಗಳನ್ನು ನೋಡುವ ಎಳೆ ಮಕ್ಕಳ ಮನಸ್ಸು ಕೂಡಾ ಮಾಲಿನ್ಯವಾಗುತ್ತಿದೆ. ಕ್ಷುಲ್ಲಕ ಕಾರಣಕ್ಕೆ ಸಹಪಾಠಿಗಳನ್ನು ರಿವಲ್ವಾರಿನಿಂದ ಸುಟ್ಟುಹಾಕಿದ ವರದಿಗಳು ಅಮೇರಿಕದಂತಹ ದೇಶದಲ್ಲಿ ಸಾಮಾನ್ಯವಾಗಿದೆ. ಕಾರಣ ಮನರಂಜನೆಯಲ್ಲಿನ ಕ್ರೌರ್ಯ. ಇದಕ್ಕೆಲ್ಲಾ ಕಡಿವಾಣ ಹಾಕುವ ಸರ್ಕಾರಗಳು ವಿದೇಶಿ ಕಂಪನಿಗಳ ದಾಸರಾಗಿ ಮೈಮರೆತಿದ್ದಾರೆ. ಟಿ.ವಿಯೆದುರಿನಲ್ಲಿ ಕುಳಿತವರನ್ನು ಎಬ್ಬಿಸಲು ಏಳಿ ಎದ್ದೇಳಿ ಎಂದು ಹೇಳಲು ಸ್ವಾಮಿ ವಿವೇಕಾನಂದರೇ ಮತ್ತೊಮ್ಮೆ ಜನ್ಮ ತಾಳಿ ಬರಬೇಕೇನೋ??

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x