’ಕಾಲು ಜಾರಿದರೆ ಸೊಂಟ ಮುರಿಯುತ್ತದೆ’ ಎಂಬುವುದರಿಂದ ಹಿಡಿದು ’ಆಕಾಶಕ್ಕೆ ಉಗಿದರೆ ಮುಖಕ್ಕೆ ಬೀಳುತ್ತದೆ’ ಎಂಬ ಮಾತುಗಳನ್ನೆಲ್ಲಾ ಕೇಳಿಸಿಕೊಳ್ಳುತ್ತಿದ್ದರೆ, ಮೇಲಿದ್ದ ವಸ್ತು ಅಥವಾ ಮೇಲಕ್ಕೆಸೆದ ವಸ್ತು ಕೆಳಗೇ ಬೀಳಬೇಕು ಅನ್ನುವುದು ಎಷ್ಟೊಂದು ಸಹಜಕ್ರಿಯೆಯಲ್ಲವೇ ಎನಿಸಿಬಿಡುತ್ತದೆ. ನಾವು ಹುಟ್ಟಿದಾಗಿನಿಂದಲೂ ನೋಡುತ್ತಿರುವ, ನಾವು ಆಗಬಾರದೆಂದುಕೊಂಡರೂ ಆಗೇ ಆಗುವ ಹಲವು ಕ್ರಿಯೆಗಳಲ್ಲಿ ಇದೂ ಒಂದಾದ್ದರಿಂದ, ಇಂತಹ ವಿಷಯಗಳು ನಮ್ಮ ಕುತೂಹಲದಿಂದ ಪ್ರಾಯಶಃ ದೂರ ಸರಿದು ಬಿಟ್ಟಿವೆ. ಆದರೆ ನ್ಯೂಟನ್ ಎಂಬ ಭೌತಶಾಸ್ತ್ರಜ್ಞ ನಮ್ಮ ಹಾಗೆ ಸಹಜವಾಗಿ ನೋಡದೆ ಆ ಕ್ರಿಯೆಯಲ್ಲಿ ಅಡಗಿಕೊಂಡಿದ್ದ ವಿಶೇಷತೆಯನ್ನು ಹುಡುಕಿಕೊಟ್ಟ. ಆತ ಒಮ್ಮೆ ತನ್ನ ತೋಟದಲ್ಲಿ ಕೂತಿದ್ದಾಗ ಮರದಿಂದ ಬೀಳುತ್ತಿದ್ದ ಸೇಬು ಹಣ್ಣನ್ನು ನೋಡಿ ಅದನ್ನು ವೈಜ್ಞಾನಿಕವಾಗಿ ವಿಶ್ಲೇಷಿಸಿ ದ್ರವ್ಯರಾಶಿಯುಳ್ಳ ಪ್ರತಿಯೊಂದು ವಸ್ತುವೂ ದ್ರವ್ಯರಾಶಿಯುಳ್ಳ ಪ್ರತೀ ಮತ್ತೊಂದು ವಸ್ತುವನ್ನು ’ಗುರುತ್ವಾಕರ್ಷಣೆ’ ಎಂಬ ಬಲದಿಂದ ಆಕರ್ಷಿಸುತ್ತದೆ ಎಂದು ತೋರಿಸಿಕೊಟ್ಟ, ಈ ವಿಜ್ಞಾನ ಲೋಕದ ಹಲವು ಮಹತ್ವದ ಆವಿಷ್ಕಾರಗಳಿಗೆ ಇದು ಮುನ್ನುಡಿಯಾಯಿತು. ಇದನ್ನೇ ನ್ಯೂಟನ್‌ನ ’ಸಾರ್ವತ್ರಿಕ ಗುರುತ್ವ’ ನಿಯಮ ಎಂದು ಕರೆಯುತ್ತಾರೆ. ನ್ಯೂಟನ್ ಹೇಳಿದಂತೆ ಅಗಾಧ ದ್ರವ್ಯರಾಶಿಯುಳ್ಳ ಭೂಮಿಯನ್ನೇ ಒಂದು ವಸ್ತುವೆಂದೂ, ಇನ್ನೊಂದು ವಸ್ತುವಾಗಿ ಮರದಲ್ಲಿ ಹಣ್ಣಾಗಿ ಕೂತಿರುವ, ತೊಟ್ಟು ಮೃದುವಾಗಿ ಇನ್ನೇನು ಬೀಳಲಿರುವ ಸೇಬುವೊಂದನ್ನು ಪರಿಗಣಿಸಿಕೊಳ್ಳೋಣ. ಅತೀ ಸಮೀಪದಲ್ಲಿರುವ ಆ ಸೇಬು ಹಣ್ಣನ್ನು ಭೂಮಿಯು ಗುರುತ್ವ ಬಲದಿಂದ ತನ್ನೆಡೆಗೆ ಸೆಳೆಯುತ್ತಿರುತ್ತದೆ. ಯಾವಾಗ ತೊಟ್ಟಿನಲ್ಲಿರುವ ಗಟ್ಟಿತನ ಕಡಿಮೆಯಾಗುತ್ತದೋ ಆಗ ಆ ತೊಟ್ಟನ್ನೇ ಮುರಿದುಕೊಂಡು ಭೂಮಿಯೆಡೆಗೆ ಜಿಗಿದುಬಿಡುತ್ತದೆ. ಹಾಗಾದರೆ ಯೋಚಿಸಿ ಬಾಳೆಹಣ್ಣಿನ ಸಿಪ್ಪೆ ಮೆಟ್ಟಿ ನೀವೇನಾದರೂ ಕೆಳಕ್ಕೆ ಬಿದ್ದರೆ ಮೊದಲು ಬೈಯಬೇಕಾದ್ದು ಯಾರನ್ನು ಎಂದು.
ಅಯ್ಯೋ ಹಾಗಾದರೆ ಈ ಗುರುತ್ವ ಬಲ ಇಲ್ಲದಿದ್ದರೆ ಯಾರೂ ಬೀಳುತ್ತಲೇ ಇರಲಿಲ್ಲವಲ್ಲ ಎಂದು ಯೋಚಿಸುವ ಗೋಜಿಗೆ ಹೋಗಬೇಡಿ, ಏಕೆಂದರೆ ಈ ಗುರುತ್ವ ಬಲದಿಂದಲೇ ನಾವೂ ನೀವೂ ಭೂಮಿಗೆ ಅಂಟಿಕೊಂಡಿರುವುದು, ಗ್ಯಾರೇಜಿನಲ್ಲಿ ಬಿದ್ದಿರುವ ಆಯಸ್ಕಾಂತಕ್ಕೆ ಕಬ್ಬಿಣದ ಪುಡಿ ಅಂಟಿರುತ್ತದಲ್ಲ ಹಾಗೆ. ಒಂದು ವೇಳೆ ಭೂಮಿಗೇನಾದರು ಗುರುತ್ವಾಕರ್ಷಣ ಶಕ್ತಿ ಇಲ್ಲದಿದ್ದಿದ್ದರೆ. ನಾವೆಲ್ಲಾ ಗಾಳಿಯಲ್ಲಿ ಹಾರಾಡುತ್ತಾ ಇರುತ್ತಿದ್ದೆವು. ಅಮೇರಿಕಾ, ದುಬೈಗಳಿಗೆ ಹೋಗಲು ವಿಮಾನಗಳೇ ಬೇಕಾಗುವುದಿಲ್ಲ ಆದರೆ ಒಂದೇ ಒಂದು ತಾಂತ್ರಿಕ ದೋಷವೇನು ಗೊತ್ತೇ? ನಾವು ಹಾರುತ್ತೇವೆ ಎನ್ನುವುದು ಎಷ್ಟು ನಿಜವೋ ನೆಲದ ಮೇಲೆ ಇಳಿಯಲು ಆಗುವುದಿಲ್ಲ ಎನ್ನುವುದೂ ಅಷ್ಟೇ ಸತ್ಯ. ವಿದೇಶಕ್ಕೆ ಹೋಗಿ ಇಳಿಯಲಾಗುವುದಿಲ್ಲ ಗಾಳಿಯಲ್ಲಿಯಾದರೂ ಈಜಾಡೋಣ ಅಂದರೆ ಅದೂ ಆಗುವುದಿಲ್ಲ ಯಾಕೆಂದರೆ, ಈ ನಮ್ಮ ಗಾಳಿ ಅಥವಾ ವಾತಾವರಣ ಉಂಟಾಗಿರುವುದು ಸಹ ಈ ಗುರುತ್ವ ಬಲದಿಂದಲೆ.
ವಾತಾವರಣ ಅಂದರೆ ಗಾಳಿಯ ಪದರ ಭೂಮಿಯನ್ನು ಅಪ್ಪಿ ಹಿಡಿದುಕೊಂಡಿರುವುದಕ್ಕೆ ಕಾರಣ ಭೂಮಿ ಮತ್ತು ಗಾಳಿಯ ಕಣಗಳ ನಡುವೆ ಇರುವ ಗುರುತ್ವ ಬಲದಿಂದ, ಆ ಬಲದಿಂದಲೇ ಫುಟ್ಬಾಲ್‌ಗೆ ಸವರಿದ ತೆಳುವಾದ ಬಣ್ಣದಷ್ಟು ದಪ್ಪವಾಗಿ ಭೂಮಿಗೆ ವಾತಾವರಣದ ಹೊದಿಕೆ ಉಂಟಾಗಿದೆ. ಗುರುತ್ವ ವಿಲ್ಲವೆಂದರೆ, ಗಾಳಿಯೂ ಇಲ್ಲ, ಗಾಳಿ ಇಲ್ಲದಿದ್ದರೆ ವಾತಾವರಣವೂ ಇಲ್ಲ ಹಾಗೆಯೇ ನಾವೂ ಇಲ್ಲ, ನೀವೂ ಇಲ್ಲ. ಈಗ ಹೇಳಿ ಗುರುತ್ವ ಬೇಕೆ ಬೇಡವೇ ಎಂದು ?
ನ್ಯೂಟನ್ನನ ಕಾಲದವನೇ ಆದ ಗೆಲಿಲಿಯೋ ಗೆಲಿಲಿ ಎಂಬ ಇಟಲಿಯ ಭೌತಶಾಸ್ತ್ರಜ್ಞನೊಬ್ಬ ಪೀಸಾದಲ್ಲಿರುವ ವಾಲುವ ಗೋಪುರದ ತುದಿಯಲ್ಲಿ ನಿಂತು ಒಂದು ಸಣ್ಣಕಲ್ಲು ಮತ್ತೊಂದು ದೊಡ್ಡಕಲ್ಲನ್ನು ಒಟ್ಟಿಗೆ ಕೆಳಕ್ಕೆ ಬಿಡುತ್ತಾನೆ. ಎರೆಡೂ ಕಲ್ಲುಗಳೂ ಒಟ್ಟಿಗೆ ನೆಲವನ್ನು ಸ್ಪರ್ಷಿಸುತ್ತವೆ. ಇದನ್ನು ಗಮನಿಸಿದ ಗೆಲಿಲಿಯೋ, ಎಲ್ಲಾ ವಸ್ತುಗಳು ಭೂಮಿಯೆಡೆಗೆ ಬೀಳುವಾಗ ಒಂದೇ ಸ್ಥಿರಪ್ರಮಾಣದಲ್ಲಿ ತಮ್ಮ ವೇಗವನ್ನು ಸಮಯಕ್ಕನುಗುಣವಾಗಿ ಹೆಚ್ಚಿಸಿಕೊಳ್ಳುತ್ತವೆ, ಹಾಗೂ ಆ ಪ್ರಮಾಣವು ಬೀಳುತ್ತಿರುವ ವಸ್ತುವಿನ ದ್ರವ್ಯರಾಶಿಯ ಮೇಲೆ ಅವಲಂಬಿತವಾಗಿರುವುದಿಲ್ಲ ಎಂದು ಘೋಷಿಸುತ್ತಾನೆ. ಇದನ್ನು ನ್ಯೂಟನ್ ತನ್ನ ಗುರುತ್ವ ನಿಯಮದ ಪ್ರಕಾರ ಸಮರ್ಥಿಸುತ್ತಾನೆ, ಆ ಸ್ಥಿರ ಪ್ರಮಾಣದಲ್ಲಿ ಸಮಯಕ್ಕನುಗುಣವಾಗಿ ಹೆಚ್ಚುವ ವೇಗವನ್ನು ಗುರುತ್ವ ವೇಗೋತ್ಕರ್ಷ ಎಂದು ಕರೆಯುತ್ತಾನೆ ಹಾಗು ಅದೇ ನಿಯಮದ ಪ್ರಕಾರ ಭೂಮಿಯ ಮೇಲೆ ಬೀಳುವ ಪ್ರತೀ ವಸ್ತುವು ಈ ಗುರುತ್ವ ವೇಗೋತ್ಕರ್ಷದ ಪ್ರಭಾವದಿಂದ ತನ್ನ ವೇಗವನ್ನು ಪ್ರತೀ ಸೆಕೆಂಡಿಗೆ ೧೦ ಮಾನಗಳಷ್ಟು ಹೆಚ್ಚಿಸಿಕೊಳ್ಳುತ್ತದೆ.
ಅಂದರೆ ಭೂಮಿಯ ಗುರುತ್ವ ವೇಗೋತ್ಕರ್ಷವನ್ನು ಹೆಚ್ಚೂ ಕಡಿಮೆ ೧೦ ಮೀಟರ್ ಪರ್ ಸೆಕೆಂಡ್ ಸ್ಕ್ಟಾಯರ್ ( 10ms-2) ಎಂದು ಅಂದಾಜಿಸಬಹುದು ( ನಿಖರವಾಗಿ 9.8ms-2), ಇದು ಬೀಳುವ ವಸ್ತುವಿನ ದ್ರವ್ಯರಾಶಿಗೆ ಅವಲಂಬಿತವಾಗಿರುವುದಿಲ್ಲ ಆದರೆ ಭೂಮಿಯ ದ್ರವ್ಯರಾಶಿ ಮತ್ತು ತ್ರಿಜ್ಯದ ಮೇಲೆ ಅವಲಂಬಿತವಾಗಿದೆ.
ಇದನ್ನು ಪ್ರಾಯೋಗಿಕವಾಗಿ ಮಾಡಲು ಸ್ವಲ್ಪ ಕಷ್ಟ, ಏಕೆಂದರೆ ಗಾಳಿಯು ಬೀಳುತ್ತಿರುವ ವಸ್ತುವಿನ ಮೇಲೆ ಪ್ರತಿರೋಧದ ಪ್ರಭಾವ ಬೀರುತ್ತದೆ, ಆದ್ದರಿಂದ ಈ ಪ್ರಯೋಗವನ್ನು ನಿರ್ವಾತದಲ್ಲಿ ಮಾಡಿದರೆ ನಿರೀಕ್ಷಿತ ಫಲಿತಾಂಶ ಪಡೆಯಬಹುದು. ಒಟ್ಟಾರೆಯಾಗಿ ಹೇಳಬೇಕೆಂದರೆ ಒಂದು ನಾಣ್ಯ ಹಾಗು ಒಂದು ಗರಿಯನ್ನು ನಿರ್ವಾತದಲ್ಲಿ ಬಿಟ್ಟರೆ ಅವು ಏಕ ಕಾಲದಲ್ಲಿ ನೆಲ ಮುಟ್ಟುವವು, ನಂಬಲು ಕಷ್ಟ ಆದರೂ ಸತ್ಯ; ಏಕೆ ಎಂದು ಈ ಮೊದಲೇ ಹೇಳಲಾಗಿದೆ.
ದ್ರವ್ಯರಾಶಿ ಮತ್ತು ತೂಕ ಎರೆಡೂ ಒಂದೇ ತರಹದವುಗಳೆಂದು ಪ್ರಾಥಮಿಕ ಹಂತದಲ್ಲಿ ಹೇಳಬಹುದಾದರೂ ಅವುಗಳ ಮಧ್ಯೆ ಬಹಳ ವ್ಯತ್ಯಾಸವಿದೆ. ದ್ರವ್ಯರಾಶಿಯೆಂದರೆ ಒಂದು ನಿರ್ದಿಷ್ಟ ಸ್ಥಳಾವಕಾಶದಲ್ಲಿ ಸೇರಿಸಿಡಬಹುದಾದ ದ್ರವ್ಯದ ಪ್ರಮಾಣ. ಇದು ಸ್ಥಳಾವಕಾಶ ಮತ್ತು ವಸ್ತುವಿನ ಸಾಂದ್ರತೆಯ ಮೇಲೆ ಮಾತ್ರ ಅವಲಂಬಿತವಾಗಿದೆ. ಉದಾಹರಣೆಗೆ ನಿಮ್ಮ ಮುಷ್ಟಿಯಲ್ಲಿ ಹಿಡಿಯ ಬಹುದಾದ ಗೋಲಿಗಳ ಸಂಖ್ಯೆ ಅದನ್ನು ಗಾಳಿಯಲ್ಲಿ ಹಿಡಿದರೂ ನೀರಿನಲ್ಲಿ ಹಿಡಿದರೂ ಬದಲಾಗುವುದಿಲ್ಲ. ಹಾಗಾಗಿ ಒಂದು ವಸ್ತವಿನ ಆಕಾರ ಬದಲಾಯಿಸದೆ ವಿಶ್ವದ ಯಾವುದೇ ಜಾಗಕ್ಕೆ ಒಯ್ದರೂ ಅದರ ದ್ರವ್ಯರಾಶಿ ಬದಲಾಗುವುದಿಲ್ಲ. ತೂಕವೆಂದರೆ ವಸ್ತುವಿನ ದ್ರವ್ಯರಾಶಿ ಮತ್ತು ಅದರ ಮೇಲೆ ಬೀಳುವ ಗುರುತ್ವ ಶಕ್ತಿಯ ಪ್ರಭಾವದ ಒಂದು ಅಳತೆ. ಭೂಮಿ ಒಂದು ವಸ್ತುವನ್ನು ತನ್ನೆಡೆಗೆ ಎಷ್ಟು ಬಲದಿಂದ ಎಳೆದು ಕೊಳ್ಳುತ್ತದೆ ಎಂದು ಅಳೆದರೆ ಅದು ಭೂಮಿಯ ಮೇಲೆ ಆ ವಸ್ತುವಿನ ತೂಕ, ವಸ್ತುವಿನ ದ್ರವ್ಯರಾಶಿಯನ್ನು ಗುರುತ್ವ ವೇಗೋತ್ಕರ್ಷದಿಂದ ಗುಣಿಸಿದಾಗ ತೂಕದ ಮೌಲ್ಯ ದೊರೆಯುತ್ತದೆ. ವೇಗೋತ್ಕರ್ಷ ಭೂಮಿಯ ತ್ರಿಜ್ಯ ಮತ್ತು ದ್ರವ್ಯರಾಶಿಯನ್ನು ಅವಲಂಬಿಸಿರುವುದರಿಂದ, ಬೇರೆ ಗ್ರಹಗಳಲ್ಲಿ ಇದು ಆ ಗ್ರಹದ ದ್ರವ್ಯರಾಶಿ ಮತ್ತು ಆಕಾರಕ್ಕನುಗುಣವಾಗಿ ಬದಲಾಗುತ್ತದೆ, ಅದರೊಂದಿಗೆ ವಸ್ತುವಿನ ತೂಕವೂ ಬದಲಾಗುತ್ತದೆ. ಅಂದರೆ ದ್ರವ್ಯರಾಶಿ ಗುರುತ್ವ ಬಲದಿಂದ ಸ್ವತಂತ್ರವಾದದ್ದು. ಆದರೆ ತೂಕ ಗುರುತ್ವ ಬಲದಿಂದಲೇ ನಿರ್ಧರಿತವಾಗುವಂತದ್ದು. ಆದ್ದರಿಂದ ತೂಕವೂ ಒಂದು ರೀತಿಯ ಬಲ ಎಂದು ಹೇಳಬಹುದು.
ಗೆಲಿಲಿಯೋ ಪ್ರಯೋಗದ ಬಗ್ಗೆ ಹೇಳುವಾಗ ಪೀಸಾದ ವಾಲುವ ಗೋಪುರದ ಹೆಸರು ಕೇಳಿದಾಗ ಅರೇ ಅದು ಏಕೆ ವಾಲಿದೆ? ವಾಲಿದ ಮೇಲೆ ಗುರುತ್ವ ಬಲದಿಂದ ಕೆಳಕ್ಕೆ ಬೀಳಬೇಕಲ್ಲವೇ ? ಎಂದು ನಿಮ್ಮಲ್ಲೇನಾದರೂ ಪ್ರಶ್ನೆ ಹುಟ್ಟುತ್ತಿದ್ದರೆ. ಇದ್ದಕ್ಕೆ ಉತ್ತರವೇ ಗುರುತ್ವಕೇಂದ್ರ. ಒಂದು ವಸ್ತುವಿನ ಸಂಪೂರ್ಣ ತೂಕ ಅಥವಾ ಭಾರ ಕೇಂದ್ರೀಕೃತವಾಗಿರುವ ಬಿಂದುವನ್ನು ಆ ವಸ್ತುವಿನ ಗುರುತ್ವಕೇಂದ್ರ ಎಂದು ಕರೆಯುತ್ತಾರೆ. ಉದಾಹರಣೆಗೆ ನಮ್ಮಲ್ಲಿ ಕಾಲೇಜು ಹುಡುಗರು ನೋಟ್ ಪುಸ್ತಕವನ್ನು ಒಂದೇ ಬೆರಳಿನಲ್ಲಿ ಹಿಡಿದು ತಿರುಗಿಸುತ್ತಾರಲ್ಲ, ಹಾಂ! ಆ ಬೆರಳು ಇಟ್ಟ ಜಾಗವಿದೆಯಲ್ಲಾ, ಅದೇ ಆ ಪುಸ್ತಕದ ಗುರುತ್ವಕೇಂದ್ರ., ಇದನ್ನು ಇನ್ನು ಸುಲಭವಾಗಿ ತಿಳಿಯಬೇಕೆಂದರೆ ಒಂದು ಸ್ಕೇಲನ್ನು ಅಡ್ಡವಾಗಿ ಹಿಡಿದರೆ ಅದರ ಗುರುತ್ವ ಕೇಂದ್ರ ಸರಿಯಾಗಿ ಅದರ ಮಧ್ಯ ಭಾಗದಲ್ಲಿರುತ್ತದೆ.
ಈಗ ಒಂದು ಪ್ರಯೋಗ ಮಾಡೋಣ, ಸುಮಾರು ನಿಮ್ಮ ಮೊಣಕಾಲಿನವರೆಗೆ ಬರುವ ಕಟ್ಟೆಯ ಮೇಲೆ ಬೆನ್ನನ್ನು ನೇರ ಮಾಡಿ, ಪಾದಗಳನ್ನು ಸಂಪೂರ್ಣ ನೆಲಕ್ಕೆ ಮುಟ್ಟಿಸಿ ಕುಳಿತುಕೊಳ್ಳಿ , ಈಗ ಕೈಗಳ ಸಹಾಯವಿಲ್ಲದೆ, ದೇಹವನ್ನು ಭಾಗಿಸದೆ ಎದ್ದು ನಿಲ್ಲಿ….! ಎದ್ದಿದ್ದೀರಾ…? ಖಂಡಿತಾ ಸಾಧ್ಯವಿಲ್ಲ.. ಏಕೆಂದರೆ ಮನುಷ್ಯನ ಗುರುತ್ವಕೇಂದ್ರ ಆತನ ಬೆನ್ನು ಮೂಳೆಯ ಕೆಳಕ್ಕೆ ಇರುತ್ತದೆ. ಅದರಿಂದ ನೆಲಕ್ಕೆ ಎಳೆದ ಲಂಬ ರೇಖೆಯಲ್ಲಿ ನಿಮ್ಮ ಪಾದಗಳ ಮಧ್ಯಬಿಂದು ಮತ್ತು ತಲೆ ಇಲ್ಲದಿದ್ದರೆ ನಿಮ್ಮ ದೇಹವನ್ನು ನಿಲ್ಲಿಸುವುದು ಕಷ್ಟ. ನೀವು ಕೂತಿದ್ದಾಗ ನಿಮ್ಮ ಗುರುತ್ವಕೇಂದ್ರ ಮತ್ತು ಕಾಲುಗಳ ನೆಲಕ್ಕೆಳೆದ ಲಂಬರೇಖೆಯಲ್ಲಿರಲಿಲ್ಲ ಯಾರಾದರೂ ಕುರ್ಚಿಯನ್ನು ಎಳೆದಿದ್ದರೆ, ನಿಮ್ಮ ಗುರುತ್ವಕೇಂದ್ರ ನೇರವಾಗಿ ನೆಲದಲ್ಲಿರುತ್ತಿತ್ತು. ಅಂದರೆ ನೀವು ಕೂತಲ್ಲಿಂದ ಏಳಬೇಕಾದರೆ ನಿಮ್ಮ ಕಾಲುಗಳನ್ನು ಗುರುತ್ವಕೇಂದ್ರದ ಅಡಿಗೆ (ಅಂದರೆ ಕುರ್ಚಿಯ ಅಡಿಗೆ) ತರಬೇಕು ಅಥವಾ ನಿಮ್ಮ ದೇಹವನ್ನು ಮುಂದಕ್ಕೆ ಭಾಗಿಸಿ ದೇಹದ ಭಾರ ಕಾಲುಗಳ ನೇರಕ್ಕೆ ಕೇಂದ್ರಿಕರಿಸುವಂತೆ ಮಾಡಿ ಎದ್ದುನಿಲ್ಲಬೇಕು.
ಅಂದರೆ ಯಾವ ಆಕೃತಿಯಲ್ಲಿ ಗುರುತ್ವಕೇಂದ್ರದಿಂದ ನೆಲಕ್ಕೆ ಎಳೆದ ಲಂಬರೇಖೆಯಲ್ಲಿರುವ ರಚನೆಗಳು ಬಲಾಢ್ಯವಾಗಿರುತ್ತವೆಯೋ ಅಂತಹ ಆಕೃತಿಗಳ ಆಕಾರ ಏನೇ ಇದ್ದರೂ ಅವು ಬೀಳದೇ ಸ್ಥಿರವಾಗಿ ನಿಲ್ಲಬಲ್ಲವು. ಪೀಸಾದ ಗೋಪುರವೂ ಇದೇ ರೀತ್ಯಾ ವಿನ್ಯಾಸವನ್ನು ಹೊಂದಿದೆ. ನಾವೇನಾದರು ತಲೆಕೆಳಗಾಗಿ ಒಂದೇ ಕೈಯ ಮೇಲೆ ನಿಂತರೆ ನಮ್ಮ ಗುರುತ್ವ ಕೇಂದ್ರ ಸೊಂಟಭಾಗದಲ್ಲಿಲ್ಲದೆ ಆ ಕೈಯ ಭುಜ ಭಾಗದಲ್ಲಿರುತ್ತದೆ. ಕೊಡಪಾನವನ್ನು ತಲೆಯ ಮೇಲೆ ಹೊತ್ತವರು ಸುಂದರವಾಗಿ ಬೆಕ್ಕಿನ ನಡಿಗೆ ನಡೆಯುವುದೂ ಇದೇ ಕಾರಣಕ್ಕಾಗಿ ಅಲ್ಲವೇ…! ಯೋಚಿಸಿ ನೋಡಿ.
ಹೀಗೆ ಬಗೆಯುತ್ತಾ ಹೋದಷ್ಟು ಗುರುತ್ವ ಶಕ್ತಿಯ ವ್ಯಾಪ್ತಿ ಬೆಳೆಯುತ್ತಲೇ ಹೋಗುತ್ತದೆ. ಮನುಷ್ಯನ ದೇಹದೊಳಗೆ ಹೃದಯವೆಂಬ ಪುಟ್ಟ ಮೋಟಾರ್‌ಗೆ ರಕ್ತ ಪರಿಚಲನೆಯಲ್ಲಿ ಅತಿ ಹೆಚ್ಚು ಸಹಕಾರ ನೀಡಿ ಮನುಷ್ಯನ ಜೀವಿತಕ್ಕೆ ಕಾರಣವಾಗಿ, ಆತ ತಿಂದದ್ದು ಜೀರ್ಣವಾಗಿ ಹೊರಗೆ ಹೋಗುವವರೆಗೂ ಗುರುತ್ವ ಶಕ್ತಿಯ ಪಾತ್ರವಿದೆ ಎಂಬುದನ್ನು ಜೀವಶಾಸ್ತ್ರದಲ್ಲಿ ಎಳೆ ಎಳೆಯಾಗಿ ಬಿಡಿಸಿಡಲಾಗಿದೆ. ಒಮ್ಮೆ ನಾವು ಗುರುತ್ವದಿಂದ ಹೊರನಡೆದರೆ ನಮ್ಮ ದೇಹದಲ್ಲಿನ ಸಂಪೂರ್ಣ ನಿಯಂತ್ರಣ ದಿಕ್ಕೆಟ್ಟು ಬಿಡುತ್ತದೆ. ಇಡೀ ದೇಹದ ರಕ್ತ ಪರಿಚಲನೆ ಹೆಂಡ ಕುಡಿದ ಮಂಗನಂತಾಗಿಬಿಡುತ್ತದೆ. ಒಮ್ಮೆ ಇದೆಲ್ಲವನ್ನು ತಡೆದುಕೊಂಡು ಬದುಕಿದ್ದೇವೆ ಎಂದಿಟ್ಟುಕೊಳ್ಳಿ, ಆಕಾಶದಲ್ಲಿ ತಲೆ ಕೇಳಗಾಗಿ ಕೈಯೊಂದು ದಿಕ್ಕಿಗೆ ಕಾಲೊಂದು ದಿಕ್ಕಿಗೆ ಹಾಕಿಕೊಂಡು ಆಕಾಶದಲ್ಲಿ ದಾರ ಹರಿದ ಗಾಳಿಪಟದಂತೆ ಅನಂತ ವಿಶ್ವದಲ್ಲೆಲ್ಲೋ ತೇಲಾಡುತ್ತಾ ಇರುತ್ತೇವೆ. ಇನ್ನು ವಾತಾವರಣವೇ ಇಲ್ಲದ್ದರಿಂದ ಮೋಡಗಳ ರಚನೆಯಾಗಲಿ, ಅವುಗಳ ತೇಲುವಿಕೆಯಾಗಲಿ, ಅದರಿಂದ ಮಳೆಯಾಗಲಿ ಸಾದ್ಯವಿಲ್ಲವಾಗುತ್ತದೆ. ಇನ್ನು ಗುರುತ್ವವಿಲ್ಲದ್ದರಿಂದ ಸಮುದ್ರ ನದಿಗಳಲ್ಲಿ ನೀರಿರಲು ಸಾಧ್ಯವಿಲ್ಲ. ಅಂತರ್ಜಲವಿದ್ದರೂ ಎಷ್ಟು ದಿನ, ಹಾಗಾಗಿ ಸಸ್ಯಗಳೂ ಬದುಕಲಾರವು. ಸಸ್ಯಗಳಿಲ್ಲದೆ ಸಸ್ಯಾಹಾರಿಗಳೆಲ್ಲಿ, ಅವಿಲ್ಲದೆ ಮಾಂಸಾಹಾರಿಗಳೆಲ್ಲಿ? ಅಂದರೆ ಒಟ್ಟಾರೆಯಾಗಿ ಭೂಮಿಗೆ ಗುರುತ್ವ ಶಕ್ತಿ ಇಲ್ಲವೆಂದರೆ ಅರ್ಥ ಭೂಮಿಯಲ್ಲಿ ಜೀವಿಗಳಿರಲು ಸಾಧ್ಯವೇ ಇಲ್ಲ ಎಂದು. ಇನ್ನು ವಿಶ್ವದಲ್ಲೆಲ್ಲೂ ಗುರುತ್ವ ಶಕ್ತಿ ಇರಲಿಲ್ಲವೆಂದರೆ…? ಸರಿಯಾಗಿ ಹೇಳಬೇಕೆಂದರೆ ಆ ವಿವರಣೆ ಊಹೆಗೂ ನಿಲುಕದ್ದು.. ಏಕೆಂದರೆ ಗುರುತ್ವ ಶಕ್ತಿ ಇಲ್ಲವೆಂದರೆ ವಿಶ್ವ, ಸೌರಮಂಡಲ, ಭೂಮಿ ಎಂಬೆಲ್ಲಾ ಪದಗಳು ನಮ್ಮ ಅಂಕೆಗೂ ಮೀರಿ ಅರ್ಥ ಕಳೆದುಕೊಂಡು ಬಿಡುತ್ತವೆ. ಅಷ್ಟು ಬಿಗಿಮುಷ್ಠಿಯಲ್ಲಿ ಇಡೀ ವಿಶ್ವದ ಆಗುಹೋಗುಗಳೆಲ್ಲವೂ ಗುರುತ್ವ ಬಲದಿಂದ ಆಳಲ್ಪಡುತ್ತಿವೆ. ಆದ್ದರಿಂದಲೇ ಗುರುತ್ವಕ್ಕೆ ಮತ್ತು ನ್ಯೂಟನ್‌ಗೆ ಸಾರ್ವತ್ರಿಕ ಮನ್ನಣೆ ದೊರೆತಿರುವುದು.
ಇದೆಲ್ಲವನ್ನೂ ಕೇಳಿದಾಗ ಅನಿಸುತ್ತದೆಯಲ್ಲವೇ, ಪುರಾಣಗಳಲ್ಲಿ ಹೇಳಿರುವ ಇಡೀ ವಿಶ್ವ, ಭೂಮಿ, ಅಲ್ಲಿನ ಜೀವಿ, ವಾತಾವರಣ, ಅದರಲ್ಲಿನ ಪಂಚಭೂತಗಳ ರಚನೆಯ ಕತೃ ಬ್ರಹ್ಮನೆಂಬ ಹೆಸರು ಪ್ರಾಯಶಃ ಈ ನಮ್ಮ ಗುರುತ್ವದ ಅಂಕಿತವಿರಬಹುದೇನೋ..? ಎಂದು.
*****