ಮೂರು ಗ್ರಾಮದ ಪರಿಸರ ಸಮಸ್ಯೆ: ಅಕ್ಷಯ ಕಾಂತಬೈಲು

ಪರಿಸರವು ಸಕಲ ಜೀವಗಳ ಚಟುವಟಿಕೆಯ ಮಡಿಲು. ಹಗಲು- ಇರುಳು ಮರಳಿ ಮರಳಿ ಮುರಳಿಯ ನಾದದ ತೆರದಿ ಬರುತ್ತಾ ಹೊಗುತ್ತಾ ಇದ್ದರೂ ಪರಿಸರ ಮಾತ್ರ  ಧ್ಯಾನಸ್ಥ ಸ್ಥಿತಿಯಿಂದ ತನ್ನೊಡಲ  ಸಕಲ ಜೀವಗಳ ಬೇಕು ಬೇಡಗಳನ್ನು  ಅದಾವುದೋ ಮಾಯೆಯ ರೀತಿಯಲ್ಲಿ ನೋಡಿಕೊಳ್ಳುತ್ತಿದೆ. ಉಲ್ಕೆಯೊಂದು ನಭವ ಛಿದ್ರಿಸಿ ಧರೆಗಪ್ಪಳಿಸಿದಂತೆ ಪರಿಸರಕ್ಕೆ ಸಮಸ್ಯೆಯೊಂದು ಬಂದೊದಗಿದರೆ ಸಾಕು ಅಪಾಯದ ಸಂಕೋಲೆ ಬೆಳೆಯತೊಡಗುತ್ತದೆ. ಸಂಕೊಲೆ ಬೆಳೆದು ಬೆಳೆದು ಜೀವಸಂಕುಲಕ್ಕೆ ಬಿಗಿಯಾಗಿ ಬಂಧಿಸಲ್ಪಡುತ್ತದೆ.  

ಹಸಿರು ಸೀರೆಯುಟ್ಟ ದೇವತೆಯ ಹಾಗೆ ಕೊಡಗಿನ ಚೆಂಬು, ಸಂಪಾಜೆ ಜೊತೆಗೆ ಪೆರಾಜೆ ಗ್ರಾಮಗಳಲ್ಲಿ ಹಸಿರ ಸಿರಿ ಸೊಬಗು ಕಾಣಬಹುದು. ಗ್ರಾಮದ ಜನರು ದೈವ, ದೇವರ ಬಹು ಆರಾಧಕರು. ಇಲ್ಲಿ ಕೃಷಿಯು ಜನರ ಹೊಟ್ಟೆತುಂಬಿಸುವ ಮೂಲ. ಇಲ್ಲಿ ಕೃಷಿಯ ತೋಪಿಗೆ ಕಣ್ಣು ಹಾಯಿಸಿದರೆ ಅಡಿಕೆ, ತೆಂಗು, ಬಾಳೆ, ಕೊಕ್ಕೊ, ರಬ್ಬರ್, ಕರಿಮೆಣಸು ಮತ್ತು ಅಪರೂಪಕ್ಕೆ ಹೊಲ- ಗದ್ದೆ ಧಾರಾಳವಾಗಿ ಕಾಣಸಿಗುತ್ತದೆ. ಯಾವುದೇ ರೀತಿಯ ಮಾರ್ಡನ್ ಮಾಯೆಗೆ ಸಿಲುಕದೆ ಹೊತ್ತು ಮೂಡುವುದರಿಂದ ಲಾಗಾಯ್ತು ಹೊತ್ತು ಮುಳುಗುವವರೆಗೆ ಈ ಗ್ರಾಮ ವಾಸಿಗಳು ಬೆವರು ಹರಿಸಿ ತಮ್ಮ ಜಮೀನಿನಲ್ಲಿ ಗೈಮೆ ಮಾಡುವ ಶ್ರಮಿಕರು. ಸೀರೆಯ ನೆರಿಗೆಯಂತೆ ಪಯಸ್ವಿನಿ ನದಿಯ ತೊರೆಗಳು ಗ್ರಾಮದ ಕೆಲವೊಂದು ಕಡೆ ಕಿರಿದಾಗಿ ಕೆಲವೊಂದು ಕಡೆ ಹಿರಿದಾಗಿ ಹರಿದು ನೀರಿನ ಸಮಸ್ಯೆಯನ್ನು ನೀಗಿಸಿದೆ.

ಮಳೆಗಾಲದಲ್ಲಿನ ಬಿರುಸಿನ ಮಳೆಗೆ ಗ್ರಾಮದಲ್ಲಿನ ಹೊಳೆಗಳು ತುಂಬು ಗರ್ಭಿಣಿಯಂದದಿ ತುಂಬಿ ತುಂಬಿ ಹರಿಯುತ್ತದೆ. ಹೊಟ್ಟೆತುಂಬ ತಿಂದು ತೇಗಿದ ಮೇಲೂ ಮತ್ತೂ ತಿನ್ನಲು ಕೊಟ್ಟರೆ ಸಮಸ್ಯೆಗೆ ದಾರಿ; ಅದರಂತೆ ಮಳೆಗಾಲದಲ್ಲಿನ ಮಳೆ ದಿನಪೂರ್ತಿ ಜಡಿ ಜಡಿದು ಬರುವಾಗ ಈ ಗ್ರಾಮಗಳಲ್ಲಿ ಒಂದೊಂದಾಗಿ ಸಮಸ್ಯೆಗಳು ಮೊಳೆಯತೊಡಗುತ್ತವೆ. ಇಲ್ಲಿ ಇನ್ನೂ ಡಾಂಬರು ಹೊದಿಸದ ಮಣ್ಣಿನ ಕಚ್ಚಾ ರಸ್ತೆಗಳಿವೆ. ಇಂಥ ರಸ್ತೆಗಳು ರಾಡಿಯಿಂದ ಗಬ್ಬೆದ್ದು ಹೋಗಿ ಕೆಸರಿನ ಕೊಳಗಳಾಗಿ ಬಿಡುತ್ತವೆ.  ಗ್ರಾಮದ ಕೆಲವು ಕಡೆ ಕುದ್ರುಗಳಿದ್ದು ಹೊಳೆತುಂಬಿ ಸಂಪರ್ಕ ಕಡಿದುಕೊಳ್ಳುತ್ತವೆ. ಕುದ್ರುವಿನ ನಿವಾಸಿಗಳು ಸಂಪರ್ಕ ಬೆಸೆಯುವ ಸಲುವಾಗಿ ಅವೈಜ್ನಾನಿಕ ಬೆತ್ತ ಮತ್ತು ಬಿದಿರಿನಿಂದ ಹೆಣೆದ ಸೇತುವೆಯನ್ನು ನಿರ್ಮಿಸುತ್ತಾರೆ. ಈ ಸೇತುವೆಗಳು ಯಾವ ಕ್ಷಣದಲ್ಲಿ ಕೂಡ ಅಪಾಯ ತಂದೊಡ್ಡಬಹುದು ಎಂಬುವುದನ್ನು ಆ ದೇವರೇ ಬಲ್ಲ. 

ಚೆಂಬು, ಸಂಪಾಜೆ ಮತ್ತು ಪೆರಾಜೆ ಗ್ರಾಮಗಳ ರಸ್ತೆಗಳು ರಾಜ್ಯ ಹೆದ್ದಾರಿಗೆ ಬೆಸೆದುಕೊಂಡಿದ್ದರೂ ಇಲ್ಲಿಗೆ ಇನ್ನೂ ಸರ್ಕಾರದ ಬಸ್ಸು ಸವಲತ್ತಿಲ್ಲ. ಹಿಂದೆ ಒಂದು ಸಾರಿ ಚೆಂಬು ಗ್ರಾಮಕ್ಕೆ ಬಸ್ಸು ಸಂಚಾರ ಶುರುಮಾಡಿದ್ದರು. ಆದರೆ ಈ ಗ್ರಾಮದ ದುರ್ಗಮವಾದ ಅದೂ ಏಕಮುಖ ಸಂಚಾರದ ಮಣ್ಣು ರಸ್ತೆಗಳಲ್ಲಿ ಬಸ್ಸು ಆಗಾಗ ಹೂತು ಹೋಗುತ್ತಿದ್ದ ಕಾರಣ ಸರಕಾರದವರು ಬಸ್ಸಿನ ವ್ಯವಸ್ಥೆಯನ್ನು ಅರ್ಧಕ್ಕೆ ನಿಲ್ಲಿಸಿಬಿಟ್ಟರು. ಈಗಿನವರೆಗೆ ಗ್ರಾಮನಿವಾಸಿಗಳು ಸಾರಿಗೆ ಸಂಪರ್ಕಕ್ಕಾಗಿ  ಜೀಪನ್ನು ಅವಲಂಬಿಸಿದ್ದಾರೆ. ಬೆಳಗಿನ ಜಾವದಲ್ಲಿ ಒಮ್ಮೆ ನೋಡಬೇಕು; ಈ ಜೀಪಿನಲ್ಲಿ  ಹೊರ ಊರಿಗೆ ಹೋಗುವವರು, ಶಾಲೆಯ ಮಕ್ಕಳು, ನಡು ವಯಸ್ಕರು, ಹಿರಿ ವಯಸ್ಕರು ಎಲ್ಲರನ್ನೂ ಭರ್ತಿಯಾಗಿ ಹುಲ್ಲು ಹೊರೆ ತುಂಬಿದಂತೆ ತುಂಬಿಸಿ ಪಕ್ಕದ ಪಟ್ಟಣದ ಕಡೆಗೆ ಪ್ರಯಾಣ ಶುರುವಾಗುತ್ತದೆ. ಹಲವು ಬಾರಿ ಭರ್ತಿಯಾದ ಜೀಪಿನಲ್ಲಿ ಕುಳಿತುಕೊಳ್ಳಲು ಜಾಗ ಸಾಕಾಗದೆ ಆಯತಪ್ಪಿ ಪ್ರಯಾಣಿಕರು ರಸ್ತೆಗೆ ಬಿದ್ದು ಮೈಕೈಗೆ ಗಾಯ ಮಾಡಿಕೊಂಡ ಉದಾಹರಣೆಗಳೂ ಬೇಕಾದಷ್ಟು ಇದ್ದಾವೆ.

ಹಿಂದೆ ಈ ಗ್ರಾಮಗಳಲ್ಲಿ ಇದ್ದಂತಹ ಅರಣ್ಯ ಸಂಪತ್ತು ಕಾಲ ಉರುಳುತ್ತಾ ಬಂದ ಹಾಗೆಯೇ ಸ್ವಲ್ಪ ಸ್ವಲ್ಪವಾಗಿ ಮಾಸತೊಡಗಿದೆ. ಹಿರಿಯರೊಬ್ಬರು ಹೇಳುತ್ತಿದ್ದ ಮಾತು  -ಇಲ್ಲಿನ ಕಾಡುಗಳಲ್ಲಿ ವನ್ಯಮೃಗಗಳು ಜಾನುವಾರುಗಳಂತೆ ಸ್ವೇಚ್ಛೆಯಿಂದ ಹಾಯಾಗಿ ಸುತ್ತಾಡುತ್ತಿದ್ದವು ಅವುಗಳಿಗೆ ಬೇಕಾದಷ್ಟು ಆಹಾರವನ್ನು ಕಾಡೇ ಒದಗಿಸುತ್ತಿತ್ತು. ಆದರೆ ಇಂದು ಆನೆಗಳು ತಮ್ಮ ಆಹಾರವನ್ನು ಅರಸಿ ಕೃಷಿಕರ ತೋಟಕ್ಕೆ ದಾಳಿ ಇಡುತ್ತಿದೆ. ಹೆಚ್ಚಾಗಿ ಮಳೆಗಾಲದ ಸಮಯದಲ್ಲಿ ಈ ಆನೆಗಳು ಕಾಡಿನಿಂದ ಊರಿಗೆ ಬರುತ್ತವೆ. ರಾತ್ರಿ ವೇಳೆಗೆ ಬರುವ ಆನೆಗಳ ಹಿಂಡು  ತೋಟದಲ್ಲಿನ ತೆಂಗು, ಬಾಳೆ, ಅಡಿಕೆ ಗಿಡ ಮರಗಳನ್ನೆಲ್ಲಾ ತಿವಿದು, ತಿರಿದು, ಮುಕ್ಕಿ ತನ್ನ ರಕ್ಕಸ ಹಸಿವನ್ನು ನೀಗಿಸಿ ಹೊಟ್ಟೆತುಂಬಿಸಿಕೊಂಡು ಪುನಃ ಕಾಡ ದಾರಿಗೆ ವಾಪಾಸಾಗುತ್ತವೆ. ಆನೆಯಿಂದ ದಾಳಿಗೀಡಾದ ತೋಟದ ಯಜಮಾನನ ಸ್ಥಿತಿ ಹೇಳಿಪ್ರಯೋಜನವಿಲ್ಲ. ಆತ ಆನೆಯನ್ನು ಓಡಿಸಲು ರಾತ್ರಿ ನಿದ್ದೆಗೆಟ್ಟು ಪಹರೆ ಕೂರಬೇಕಾಗುತ್ತದೆ. ಕೇವಲ ಆನೆ ಮಾತ್ರವಲ್ಲ ಕಾಡು ಹಂದಿ, ಕಾಡು ಕೋಣ ಕೃಷಿ ಜಮೀನಿಗೆ ಲಗ್ಗೆಯಿಡುತ್ತಿರುವುದು ಗ್ರಾಮಸ್ಥರಲ್ಲಿ ಭಯ ಹುಟ್ಟಿಸಿದೆ.
   
ಚೆಂಬು, ಸಂಪಾಜೆ ಮತ್ತು ಪೆರಾಜೆ ಗ್ರಾಮಗಳಲ್ಲಿ ಗಮನಿಸಿದಾಗ ಅಡಿಕೆ ಇಲ್ಲಿನ ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ಉಳಿದ ಮಿಶ್ರ ಬೆಳೆಗಳಿಗೆ ಹೋಲಿಸಿ ನೋಡಿದರೆ ಅಡಿಕೆ ಬೆಳೆಯಿಂದಾಗಿಯೇ ಕೃಷಿಕನು ಅರ್ಥಿಕವಾಗಿ ನೆಮ್ಮದಿ ಕಾಣುತ್ತಿದ್ದನು. ಆದರೆ ಯಾವಾಗ ಅಡಿಕೆ ಗರಿಯು ಹಳದಿ ಹಿಡಿದು, ಮತ್ತೆ ಚಿಗುರದೇ ಚಿಗುರುಗರಿಯೇ ಮುರುಟಿ ಹೋಗುವ ಭೀಕರ ಹಳದಿ ರೋಗಕ್ಕೆ ಅಡಿಕೆ ಮರಗಳು ತುತ್ತಾದವೋ ಆವಾಗ ಗ್ರಾಮದ ಕೃಷಿಕರು ಮುಂದೇನು ಎಂಬುದನ್ನು ತೋಚದಾದರು. ಅದಾಗ್ಯೂ ಕ್ಯಾನ್ಸರ್ ನಂತೆ ಅಪಾಯಕಾರಿಯಾದ  ಈ ಹಳದಿ ರೋಗವ ಗುಣಪಡಿಸುವ ಔಷಧಿ ಇತ್ತಿಚಿನವರೆಗೂ ಅನ್ವೇಷಣೆಯಾಗಿಲ್ಲ. ಮಳೆಗಾಲದ ಬಿರುಸು ಮಳೆಗೆ ಕೊಳೆ ರೋಗವೂ ಅಡಿಕೆ ಮರಗಳಿಗೆ ಭಾದಿಸುತ್ತಿದ್ದವು. ತಮ್ಮ ಜೀವನ ನಿರ್ವಹಣೆಯ ಉತ್ಪತ್ತಿಗೇ ಈ ರೀತಿಯಾದ ಭಯಂಕರ ಖಾಯಿಲೆಗಳು ಬರತೊಡಗಿದ್ದುದ್ದು ಕೃಷಿಕರನ್ನು ಏಳುಕೂರು ಮಾಡಿಹಾಕಿತು. ಆ ಸಮಯದಲ್ಲಿ ರಬ್ಬರಿಗೆ ಒಳ್ಳೆಯ ಮಾರುಕಟ್ಟೆಯ ಜೊತೆ ಉತ್ತಮ ಬೆಲೆಯೂ ಇತ್ತು. ಗ್ರಾಮದ ಹೆಚ್ಚಿನ ಕೃಷಿಕರೆಲ್ಲರೂ ಅಡಿಕೆ ತೋಟ ಕಡಿಯತೊಡಗಿದರೆ ಇನ್ನೂ ಕೆಲವರು ಖುಲ್ಲಂ ಖುಲ್ಲವಾಗಿ ರಾತ್ರಿ ಹಗಲಾಗುವುದರೊಳಗೆ ಅಕ್ರಮವಾಗಿ ರಿಸರ್ವ್ ಪಾರೆಸ್ಟ್‌ನಲ್ಲಿರುವ ಅರಣ್ಯ ಸಂಪತ್ತನ್ನು ಕಡಿದು ಗುಡ್ಡವನ್ನು ಮೆಟ್ಟಿಲುಗಳಂತೆ ಸಮತಟ್ಟು ಮಾಡಿ ರಬ್ಬರು ಗಿಡಗಳನ್ನು ನೆಟ್ಟರು. ಇಲ್ಲಿ ಅದೆಷ್ಟೋ ಜನರು ರಿಸರ್ವ್ ಪಾರೆಸ್ಟ್‌ನ್ನು ಆಕ್ರಮಿಸಿ ತಮ್ಮ ಜಮೀನಿಗೆ ಸಕ್ರಮ ಮಾಡಿಕೊಳ್ಳುವಾಗ ಅರಣ್ಯ ಸಂಪತ್ತಿನ ಲೂಟಿಯಾಯಿತು. ಅದೆಷ್ಟೋ ಬೆಲೆಬಾಳುವ ಮರಗಳು ಬುಡಕಿತ್ತು ಧರೆಗುರಳಿದವು. ಅದೆಷ್ಟೋ ಬಿದಿರು ಹೊತ್ತಿ ಭಸ್ಮವಾಯಿತು. ಇದರೆಲ್ಲದರ ನಡುವೆ ಪಾರೆಸ್ಟ್ ಡಿಪಾರ್ಟ್‌ಮೆಂಟು ಕಣ್ಣುಮುಚ್ಚಿ ಕುಳಿತಿದೆ. ಅರಣ್ಯವೂ ಕೂಡ ಮನುಷ್ಯನ ದೇಹದ ಅಂಗಾಗಳಂತೆ ಪರಿಸರದ ಒಂದು ಅಂಗವೇ ತಾನೆ. ಇದನ್ನು ಗ್ರಾಮ ವಾಸಿಗಳು ಮನಗಾಣಬೇಕಾಗಿದೆ.

ಕೊಡಗಿನಾದ್ಯಂತ ಬುಸುಗುಡುತ್ತಿರುವ ಕಸ್ತೂರಿ ರಂಗನ್ ವರದಿಯಲ್ಲಿ ಚೆಂಬು, ಸಂಪಾಜೆ ಮತ್ತು ಪೆರಾಜೆ ಗ್ರಾಮಗಳೂ ಉಲ್ಲೇಖಿಸಲ್ಪಟ್ಟಿವೆ. ಈ ವರದಿ ಅಕಸ್ಮಾತಾಗಿ ಎಲ್ಲಿಯಾದರೂ ಜಾರಿಗೆ ಬಂದೇ ಬಿಟ್ಟಿತು ಎಂದಾದರೆ ಗ್ರಾಮದ ಜನರು ಒಕ್ಕಲು ಬಿಡಬೇಕಾದ ಪರಿಸ್ಥಿತಿ ನಿರ್ಮಾಣವಾಗುವ ಭಯ ಗ್ರಾಮದ ಪ್ರತಿಯೊಬ್ಬರಲ್ಲಿದೆ. ಏಕೆಂದರೆ ಗ್ರಾಮದ ಬಹುಪಾಲು ಜನರು ಅರಣ್ಯದ ಅಂಚಿನಲ್ಲಿ ಬದುಕುತ್ತಿದ್ದಾರೆ. ಕೆಲವರಂತೂ ತುಂಬಾ ವರ್ಷಗಳ ಹಿಂದೆ ತಮ್ಮ ಮುತ್ತಜ್ಜನ ಕಾಲದಿಂದಲೂ ಅರಣ್ಯ ಭಾಗದಲ್ಲಿ ಒಂದಷ್ಟು ಜಾಗ ಮಾಡಿ ಸರಕಾರದೊಂದಿಗೆ ಸೆಣಸಾಡುತ್ತಾ ತಮ್ಮ ಜಾಗವನ್ನು ರಕ್ಷಿಸುತ್ತಾ ಬದುಕು ಸಾಗಿಸುತ್ತಿದ್ದಾರೆ. ಇವರು ಯಾವಾಗ ಬೇಕಾದರೂ ಮನೆ ಬಿಡಬೇಕಾದ ಸ್ಥಿತಿ ಬಂದೊದಗಬಹುದು, ಇದು ಅವರಿಗೂ ಗೊತ್ತಿದೆ! 

ಸಾವಿಲ್ಲದ ಮನೆಯ ಸಾಸಿವೆ ಕಾಳಿನಂತೆ ಸಮಸ್ಯೆಯಿರದ ಯಾವುದೇ ಗ್ರಾಮವಾಗಲಿ, ಊರಾಗಲಿ ಇರಲು ಸಾಧ್ಯವಿಲ್ಲ. ಆದರೆ ಗ್ರಾಮದ ಜನರೆಲ್ಲರೂ ಒಂದೆಡೆ ಸೇರಿ ತಮ್ಮ ಪರಿಸರದ ಸಮಸ್ಯೆಯನ್ನು ಗುರುತಿಸಿ, ಯೋಚಿಸಿ, ಚರ್ಚಿಸಿ, ನಿರ್ಧರಿಸಿ ಯಾವ ರೀತಿಯಾಗಿ ಹತೋಟಿಗೆ ತರಬಹುದು ಎಂಬುವುದನ್ನು ಮೊದಲು ಅರಿತು ನಂತರ ಆಚರಣೆಗೆ ತರಬೇಕಾಗಿದೆ.   
 -ಅಕ್ಷಯ ಕಾಂತಬೈಲು

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x