ಅಲ್ಲಿ ನನಗೊಂದು ಹೊಸ ಬಟ್ಟೆಯಿಂದ ಮುಖ ಒರೆಸಿ ಒರೆಸಿ ಇಕ್ಕಟ್ಟಾದ ಜಾಗದಲ್ಲಿ ಮಲಗಿಸಿದ್ದರು. ಆ ಜಾಗದಲ್ಲಿ ನನ್ನಂತೆ ಇತರರಿಗೂ ಅದೇ ಸ್ಥಿತಿ. ಅಲ್ಲಿ ಬಂದು ಹೋಗುವ ನೂರಾರು ಮಂದಿ ನಮ್ಮನ್ನೆಲ್ಲಾ ಮುಟ್ಟಿ, ತಟ್ಟಿ, ತಲೆ ಹಿಡುದು, ತಿರುವ್ಯಾಡಿ, ಕಾಲು ಜಗ್ಗಿ, ಮೈ ಬೆಂಡು ಮಾಡಿ, ನೋಡಿ “ಉಹ್ಞೂಂ. ಬ್ಯಾಡ” ಅನ್ನೋ ಮಂದಿ. ಇನ್ನೂ ಕೆಲವರು “ಇಷ್ಟಕ್ಕಾದ್ರ ಕೊಡು, ಇಲ್ಲಾಂದ್ರ ಬ್ಯಾಡ, ದುಬಾರಿಯಾತು”, ಅನ್ನುವವರು. ಅವರೆಲ್ಲಾ ಬರೀ ಹೆಂಗಸರು. ಹಿಂಡು ಮಂದಿ ಕಲೆಯುವ ಜಾತ್ರಯೊಳಗೆ ಕೆಟ್ಟ ಬಿಸಿಲಲ್ಲಿ ನನ್ನಂಥವರನ್ನು ಮಲಗಿಸಿ, ಕುಕ್ಕರಗಾಲಲ್ಲಿ ಕುಂದ್ರಿಸಿ ತಾನು ಬೆವರಿಳಿಸುತ್ತಾ, ನಮ್ಮನ್ನೂ ಸುಡುತ್ತಾ, ಮಾರುತ್ತಿದ್ದ ನಮ್ಮ ಮಾಲೀಕ. ಅದು ಆತನ ಹೊಟ್ಟೆ ಪಾಡು. ಅಂಥಾದ್ರಲ್ಲಿ, ಒಬ್ಬರ್ಯಾರೋ ಹೆಂಗಸು ನಮ್ಮ ಮಾಲೀಕ ಹೇಳಿದ ರೇಟಿಗೆ ದುಡ್ಡು ಕೊಟ್ಟು ನನ್ನನ್ನು ಖರೀದಿ ಮಾಡಿ ಜೊತೆಗೆ ಮನೆಗೆ ಕರೆದುಕೊಂಡು ಹೋದಳು. ಹೋಗುವಾಗ, ನಮ್ಮ ಮಾಲೀಕ “ಹೋಗ್ಲಾ, ಮಣೆ ಚೆಂದಾಗಿ ನೆಳ್ಳಾಗಿರು” ಅಂದ. ಬಿಸಿಲಲ್ಲಿ ನನ್ನ ಜೊತೆ ಇರುತ್ತಿದ್ದ, ಬಿರ್ಸಾ (ಕಟ್ಟಿಗೆ ಕಡಿಯುವವ), ಹುಲುಗಾ (ಹುಲ್ಲು ಕೊಯ್ಯುವವ), ಹಾರ್ಗ್ಯಾ (ಭೂಮಿ ಅಗೆಯುವವ), ಹಿಂಗೇ ಎಲ್ರನ್ನೂ ನೋಡ್ತಾ ಇದ್ದೆ. ಹೆಂಗಸಿನ ಹೆಜ್ಜೆಗಳು ಸಾಗುತ್ತಿದ್ದಂತೆಯೇ ಅವರೊಂದಿಗಿನ ಸಂಪರ್ಕವೂ ಕಡಿಯಿತು. ಆದರೆ, ನನಗಿಂತ ಮುಂಚೆ ಬಂದು ಆ ಮನೆಯಲ್ಲಿದ್ದ ಅವರ ಅಣ್ಣತಮ್ಮಂದಿರೆಲ್ಲಾ ನನಗೆ ಜೊತೆಯಾಗಿದ್ದರು.
ಆ ಮನೆಯಲ್ಲಿ ಆರು ಜನ. ನಾಲ್ಕು ಹೆಣ್ಮಕ್ಕಳು.ಇಬ್ಬರು ಗಂಡಸರು. ನಾಲ್ಕೂ ಜನ ಹೆಂಗಸರು ತಮ್ಮ ಕೈಯಲ್ಲಿಡಿದು ನನ್ನ ಮೂತಿ ತಿರುವಿದರು. ಪಾಪ, ಒಬ್ಬ ಮುದುಕಿಗೆ ಕಣ್ಣು ಕಾಣದೇ ಮುಟ್ಟಲೂ ಇಲ್ಲ. ಮುಂದೆ ನನಗೊಂದು ಜಾಗ ಮಾಡಿಟ್ಟು ಪ್ರತಿ ದಿನ ಹಣ್ಣು, ಹಂಪಲು, ತರಕಾರಿ ಎಲ್ಲಾ ನನ್ನ ಮೂತಿಗೆ ಒತ್ತರಿಸಿ ತಂದಿಟ್ಟು ಮುದ್ದು ಮಾಡೋರು. ವಾರದಲ್ಲಿ ಎರಡು ಬಾರಿ ರುಚಿಸುತ್ತಿದ್ದ ಹಸಿ ತೆಂಗಿನಕಾಯಿ ತುರಿ ನನ್ನ ಇಷ್ಟದ್ದಾಗಿತ್ತು. ನನ್ನ ಪರಿಚಯ, ನನ್ನ ಜಾಗ, ನನ್ನ ಕೆಲಸ ಎಲ್ಲಾನೂ ಚೆನ್ನಾಗೇ ಇತ್ತು. ಮನೆ ಮುಂದೆ ಎರಡು ಎತ್ತು ನಾಲ್ಕು ಹಸು, ಒಂದು ನಾಯಿ, ಪಂಜರದ ಗಿಳಿಗಳು, ಹಿಂಡು ಪಾರಿವಾರ. ಹಿತ್ತಲಲ್ಲಿ ಹತ್ತಾರು ಮರಗಳು, ಹೂವಿನ ಗಿಡಗಳು, ವಯಸ್ಸಾದ ಮುದುಕ, ಮುದುಕಿ ಎಲ್ಲಾ ಇದ್ದರು. ಅವೆಲ್ಲದರ ಮಧ್ಯೆ ನಾವು ವರ್ಷಗಳನ್ನು ಕಳೆದೆವು. ಈ ಮಧ್ಯೆ ನಾನಿದ್ದ ಮನೆಯ ಒಡತಿ. ಮನೆ ಚಿಕ್ಕದಾಯಿತೆಂದು ಗಂಡನಿಗೆ ಹೇಳಿ ಬೇರೆಲ್ಲೋ ಇದ್ದ ಅವರ ಸೈಟಿನಲ್ಲಿ ಚೆಂದನೆಯ ಮನೆ ಕಟ್ಟಿದರು. ಹಳೇ ಮನೆ ಸ್ವಂತದ್ದೇ ಆದರೂ ಮನೆ ಕಟ್ಟಿದ ಮೇಲೆ ವಾಸ ಮಾಡದಿದ್ದರೆ ಹೆಂಗೆ?, ಶಿಫ್ಟ್ ಆದರು. ಹಳೇ ಮನೆಯಲ್ಲಿದ್ದ ಅಜ್ಜನ ಕಾಲದ ಆರಾಮ್ ಚೇರು, ಬೀಸೋ ಕಲ್ಲು, ಕಿರ್ರೋ ಎನ್ನುತ್ತಿದ್ದ ಕಟ್ಟಿಗೆಯ ಕಪಾಟು, ಕರೆಂಟು ಇಲ್ಲದಾಗ ಹಚ್ಚುತ್ತಿದ್ದ ಕಂದೀಲು, ಮನೆ ಒಡತಿ ಅತ್ತೆಗೆ ಬಳುವಳಿಯಾಗಿ ಬಂದಿದ್ದ ಹಿತ್ತಾಳೆ ಹಂಡೆ, ಮಜ್ಜಿಗೆ ಕಡಗೋಲು, ಇಪ್ಪತ್ತು ವರ್ಷಗಳಿಂದ ಪುರುಸೊತ್ತಿಲ್ಲದೇ ಒದರಿದ ಡೂಮಿನ ಟೀವಿ. ಡಿವಿಡಿ, ಐಫೋನು, ಲಕ್ಷಗಟ್ಟಲೇ ಹಾಡು ತುಂಬಿಕೊಳ್ಳುವ ಐಪಾಡು, ಇವುಗಳ ಹಾವಳಿಗೆ ನಾಯಿ ಪಾಡಾಗಿ ಅಟ್ಟ ಸೇರಿದ್ದ ಟೇಪ್ ರೆಕಾರ್ಡರ್ರು, ಎಲ್ಲವೂ ಆ ದಂಪತಿಗೆ ಹೊಸ ಮನೆಯಲ್ಲಿಡಲು ಮನಸ್ಸಾಗಲಿಲ್ಲ. ಅಷ್ಟೊತ್ತಿಗಾಗಲೇ ಆ ಮನೆಯಲ್ಲಿ “ಲಕ್ಷ್ಮಿ” ಕಾಲು ಫ್ರ್ಯಾಕ್ಚರ್ ಆಗಿ ಬಿದ್ದಿದ್ದಳು. ಕಂಡದ್ದೆಲ್ಲಾ ಮನೆಗೆ ತಂದು ಹಾಕುವಷ್ಟರ ಮಟ್ಟಿಗೆ ಗಂಡನಿದ್ದ. ಒಂದು ಆ್ಯಡ್ ಬರ್ತಿತ್ತಲ್ಲ? "ಹೊಸ ಮನೆ, ಹೊಸ ಟೀವಿ, ಹೊಸ ಗಾಡಿ" ಹಂಗಾಗಿತ್ತು. ತಡೀರಿ ಹೆಂಡ್ತಿ ಮಾತ್ರ ಹಳಬಳೇ….
ಹಾಗಾಗಿ, ಅಲ್ಲೇ ಪಕ್ಕದಲ್ಲೇ ಇದ್ದ ತೀರ ಕೆಳ ಮಧ್ಯಮ ವರ್ಗದ ಕುಟುಂಬವೊಂದಕ್ಕೆ ಕೆಲವೊಂದನ್ನು ಉಧಾರವಾಗಿ ನೀಡಿ ತೂಕ ಮತ್ತು ರೊಕ್ಕ ಎರಡನ್ನೂ ನಿರೀಕ್ಷಿಸಬಹುದಾದಂಥ ಸಾಮಾನುಗಳನ್ನು ಎತ್ತು ಹಸುಗಳ ಸಮೇತ ಆಯಾ ಗಿರಾಕಿಗಳಿಗೆ ಮಾರಿದರು. ಸಧ್ಯದ ಪರಿಸ್ಥಿತಿಯಲ್ಲಿ ಓಎಲ್ಲೆಕ್ಸ್ ಅನುಕೂಲವಿತ್ತು. ಆಗ ಇದ್ದಿಲ್ಲ. ಸರಿ, ನಾವೊಂದಿಷ್ಟು ಜನರಿದ್ದೆವಲ್ಲ? ನಾನು, ಹಾರ್ಗ್ಯಾ, ಹುಲುಗಾ, ಬಿರ್ಸಾ, ಎಲ್ಲಾ ಸೇರಿ ನಮ್ ನಮ್ಮಲ್ಲೇ ಮಾತಾಡಿಕೊಂಡ್ವಿ “ನಾವೂ ಆ ಹೊಸ ಮನೆಗೆ ಸರಿ ಹೊಂದಲ್ಲ, ಅಥವಾ ಬೇಕಾಗಂಗಿಲ್ಲ ಅಂದ್ರೆ, ನಮ್ಮನ್ನೂ ಇವರು ಮನೆಯಿಂದ ಹೊರಗಾಗ್ತಾರೇನೋಪಾ?” ಅಂತ.
ಹಂಗೇನಾಗಲಿಲ್ಲ, ಅಷ್ಟು ವರ್ಷದಿಂದ ಜೊತೆಗಿದ್ದ ನಮ್ಮನ್ನೂ ಹೊಸ ಮನೆಗೆ ಕರೆದುಕೊಂಡು ಹೋದ್ರು. ಹೋದ ಒಂದರೆಡು ದಿನಗಳಲ್ಲಿ ಬಿರ್ಸಾ ಕಾಣೆಯಾಗಿದ್ದ. ಅಷ್ಟು ವರ್ಷಾದ್ರು ಹಳೇ ಮನೇಲಿ ಗ್ಯಾಸಿದ್ರೂ ನಮ್ ಬಿರ್ಸಾನಿಗೆ ಕೆಲಸ ಕಮ್ಮಿ ಇರ್ಲಿಲ್ಲ. ವಾರಕ್ಕೆ ಮೂರು ಸಾರಿ ಕಟ್ಟಿಗೆ ಕಡಿದು ಒಟ್ಟುತ್ತಿದ್ದ. ಇನ್ನು ನಾಲ್ಕು ದಿನ ಆರಾಮಿರ್ತಿದ್ದ. ಹೊಸ ಮನೆಗೆ ಬಂದ ಮೇಲೆ ನಮಗೆ ಗೊತ್ತಾಗದಂತೆ ಬಿರ್ಸಾನ ಬಿಡಿಸಿ ಮನೆ ಖಾಲಿ ಮಾಡ್ಸಿದ್ರು. ಹೊಸ ಮನೆಯ ಮುಂದೆ ಬೇಜಾನ್ ಜಾಗವಿತ್ತು. ಆ ದಂಪತಿ ಮಾತಾಡ್ತಾ ಇದ್ದದ್ದನ್ನು ಕೇಳಿಸ್ಕೊಂಡಿದ್ದೆ; “ಇಲ್ಲೊಂದು ಹೂದೋಟ ಮಾಡೋಣ, ಹೇಗೂ ನಮ್ ಹಾರ್ಗ್ಯಾ, ಹುಲಗಾ ಇದಾರ. ಕೆಲಸ ಮಾಡ್ಸಿದ್ರಾತು.” ಪಾಪ, ಬಿರ್ಸಾನನ್ನು ಎಲ್ರೂ ಮರ್ತೇ ಬಿಟ್ರು.
ಆದ್ರೆ, ಹೊಸ ಮನೆಗೆ ಹೋದ ಮೇಲೆ ಹಾರ್ಗ್ಯಾ, ಹುಲುಗಾ, ಮನೆ ಒಳಕ್ಕೆ ಬರದಂತೆ ನೋಡಿಕೊಂಡರು. ಅವರು ಒಳಗೆ ಬಂದು ಅಪ್ಪಿತಪ್ಪಿ ಜಾರಿ ಬಿದ್ದು, ನೆಲಕ್ಕಾಕಿರೋ ಬಂಡೆ ಹೊಡೆದೋದ್ರೇ? ಅದು ಆ ಗಂಡ, ಹೆಂಡ್ರು ಲೆಕ್ಕ. ಅದಕ್ಕೂ ಮುಂಚೆ ಹಳೇ ಮನೇಲಿ ಆಯುಷ್ಯ ಕಳೆದು ಹೊಲ ಮನೆ ತುಂಬಾ ಓಡಾಡಿ ಹಾರ್ಗ್ಯಾ ಕೆಲ್ಸ ಮಾಡಿದ್ದು ದಂಪತಿ ಮರ್ತೇ ಬಿಟ್ರಾ? ನಂದು ಮಾತ್ರ ಅಡುಗೆ ಮನೇಲೇ ವಾಸ. ಅದೊಂದು ದಿನ ಹೊಸ ಮನೆ ನೋಡೋದಿಕ್ಕೆ ಯಾರೋ ನೆಂಟರು ಬಂದಿದ್ರು. ಹಾಲ್ ನಲ್ಲಿ ದೊಡ್ಡೋರೆದೆಲ್ಲಾ ಹರಟೆ. ಮಕ್ಳು ಆಡ್ತಿದ್ರು. ಹೆಂಗಸೊಬ್ಬಳು ನಮ್ಮ ಮನೆ ಒಡತಿ ಜೊತೆ ಅಡುಗೆ ಮನೇಲಿ ಅದೂ ಇದೂ ಮಾತಾಡ್ತಾ ಇದ್ರು. ಒಂದು ಚಿಕ್ಕ ಕೂಸು ಹಠ ಮಾಡ್ತು ಅಂತ, ಆ ಹೆಂಗಸು ಹಣ್ಣು ಕಟ್ ಮಾಡ್ಕೊಡು ಅಂದಿದ್ದಕ್ಕೆ, ಕಟ್ ಮಾಡ್ತಾ ಸರಿದಾಗ ಆ ಹೆಂಗಸೇ ಅವಸರವಸರವಾಗಿ ಕೈ ತಾಕಿಸಿಕೊಂಡು ಚೂರು ಪೆಟ್ಟಾಯ್ತು. ರಕ್ತಾನೂ ಸೋರಿತು. ನೋಡ್ಬೇಕಾಗಿತ್ತು ಆ ಹೆಂಗಸಿನ ಆರ್ಭಟ. “ಅಲ್ರೀ ‘……………….’ ನೋರೇ, ಈಗೇನ್ರಿ, ನಮ್ನೂನೀ ಜನ ನಾಜೂಕಾಗಿರೋರು, ನಾಜೂಕಾಗಿ ಕೆಲ ಮಾಡೋರು ಬೇಕಾದಷ್ಟಿದಾರೆ, ಇಂಥವ್ರನ್ನೆಲ್ಲಾ ಯಾಕ್ ಇಟ್ಕಂಡು ಸಾಕ್ತೀರಾ?. ಚೂರು ಹೆಚ್ಚು ಕಮ್ಮಿಯಾದ್ರೂ ಪ್ರಾಣ, ಪ್ರಾಣ ತೆಗೆದ್ ಬಿಡ್ತಾರೆ ಇಂಥ ಜಂಗ್ ತಿಂದ್ ನನ್ಮಕ್ಳು”. ಅಂದವಳೇ ನನ್ನ ಕುತ್ತಿಗೆ ಹಿಡಿದು ನೆಲಕ್ಕೆ ಕುಕ್ಕಿ ಮೂಲೆಗೆ ಬಿಸಾಡಿದಳು. ನಾನು ಉಸಿರೆತ್ತಲಿಲ್ಲ. ಮೂಲೆ ಗೋಡೆಗೆ ಬಿದ್ದು ತಲೆ ಆನಿಸುವುದರೊಳಗೆ ನನ್ನ ಎರಡೂ ಕಾಲಿನ ಕೀಲು ಸಡಿಲಗೊಂಡಿದ್ದವು. ತಲೆಯ ಭಾಗ ಮುಕ್ಕಾಗಿತ್ತು. ಬಿರ್ಸಾ ಮತ್ತು ಹಾರ್ಗ್ಯಾ ಜೊತೆ ಈ ಥರಾ ಆಗಿದ್ರೆ ಆ ಹೆಂಗಸಿನ ಕೈಕಾಲು ಕತ್ತರಿಸಿಬಿಟ್ಟಿರೋರು. ಇಂಥವೇ ಒಂದೆರಡು ಪ್ರಸಂಗಗಳು ನಮ್ಮ ಮನೆ ಒಡತಿಗೂ ಆಯ್ತು. ಅಷ್ಟರಲ್ಲಿ ನನ್ನೆರಡು ಮೊಳಕೈಗಳೂ ಊನಗೊಂಡು ಕುಂಟುತ್ತಾ, ತೆವಳುತ್ತಾ ಸಾಗುವಂತಾಗಿತ್ತು. ಈಗೀಗ ಮನೆಯಲ್ಲಿ ನನ್ನನ್ನು ನೋಡುತ್ತಿದ್ದ ಬಗೆ ತಾತ್ಸರದ್ದಾಗಿತ್ತು.
ಅಂದುಕೊಂಡಂತೆ ಅಡುಗೆಗೆ ತರಕಾರಿ ಹೆಚ್ಚುವ ಕೆಲಸ ಮಾಡುವ, ಹಣ್ಣು ಕೊಯ್ದು ಮಕ್ಕಳಿಗೆ ಕೊಡಲು, ಕೇಕ್ ಕಟ್ ಮಾಡಲು ಹೊಸ ಮನೆಗೆ ಹೊಸದಾಗಿ ನಾಜೂಕಾದವಳು ಬಂದೇ ಬಿಟ್ಟಳು. ಅದೇ ದಿನ ಸಂಜೆಗೆ ನನ್ನ ನಿರ್ಗಮನದ ಸಮಯ ನಿಗದಿಪಡಿಸಿ ಮನೆಯ ಹೆಂಗಸರು ಗುಸುಗುಸು ಮಾತಾಡಿ ಕೊನೆಗೆ ಮನೆಯ ಹಿತ್ತಲ ಕೋಣೆಗೆ ದಬ್ಬಿ ಬಾಗಿಲು ಮುಚ್ಚಿದರು. ನನಗೆ ಕೂಡಲೇ ನೆನಪಾಗಿದ್ದು ಹಾರ್ಗ್ಯಾ, ಹುಲುಗಾ. ನೋಡ್ತೀನಿ, ಅದೇ ಕೋಣೆಯಲ್ಲೇ ಅವರನ್ನೂ ಕೂಡಿ ಹಾಕಿಟ್ಟಿದ್ದರು. ಮತ್ತೆ ನಮ್ಮ ನಮ್ಮ ಹಳೇ ಮುಖ, ಸವೆದು ಹೋದ ದೇಹಗಳನ್ನು ನೋಡುವುದೇ ಕೆಲಸವಾಯಿತು.
ಅಂದಹಾಗೆ, ಮಣೆ, ಹಾರ್ಗ್ಯಾ, ಹುಲುಗಾ, ಬಿರ್ಸಾ…… ಅಂದ್ರೆ ಯಾರು ಗೊತ್ತಾ? ಈಳಿಗೆ, ಹಾರೆ, ಕುಡುಗೋಲು, ಕೊಡಲಿ… ಮೊನ್ನೆ ಬೀದಿಯಲ್ಲಿ ಒದರುತ್ತಾ ಗುಜರಿ ಸಾಮಾನುಗಳ ಬಂಡಿ ಬಂದಿದ್ದು ನೋಡಿ ಪಕ್ಕದ ಮನೆಯಲ್ಲಿ ಬೇಡವಾದ ಸಾಮಾನುಗಳನ್ನು ಹಿತ್ತಲಲ್ಲಿದ್ದ ಚಿಕ್ಕ ಚೀಲವನ್ನು ತೆಗೆದು ಎಲ್ಲಾ ತೂಕಕ್ಕೆ ಹಾಕುತ್ತಿದ್ದರು. ಆಗ ಇವೆಲ್ಲಾ ಅಲ್ಲಿದ್ದವು. ಈ ಜಂಗು ತಿಂದ ಕಬ್ಬಿಣದ ಸಾಮಾನುಗಳ ಒಂದು ಕಾಲದಲ್ಲಿ ಮನುಷ್ಯನ ಮೈಮುರಿವ ದುಡಿಮೆಗೆ, ಕಸುಬಿಗೆ ಎಷ್ಟು ಅಗತ್ಯವಾಗಿದ್ದವೋ ಕ್ರಮೇಣ ಬಹಳಷ್ಟು ಕುಟುಂಬಗಳಲ್ಲಿ ಹೀಗೇ ಬಿದ್ದು, ರಸ್ಟ್ ಹಿಡಿದು ಕೊನೆಗೊಮ್ಮೆ ಗುಜರಿ ಸೇರುತ್ತವೆ. ಅಂಥ ಸಾಮಾನುಗಳು ಹೀಗೆ ಮಾತಾಡಿಕೊಂಡಿರಬಹುದಾ? ಅಂದುಕೊಂಡೆ,ಅಷ್ಟೇ. ಅವು ಬಳಕೆಯಲ್ಲಿದ್ದಷ್ಟೂ ಕಾಲ ಚೆನ್ನಾಗೇ ಇರುತ್ತವೆ. ಮನುಷ್ಯನೊಂದಿಗೆ ವಸ್ತುಗಳ ನಂಟಿನ ಆಯುಷ್ಯ ಆತನ ಅಗತ್ಯಕ್ಕಷ್ಟೇ ಸೀಮಿತವಾಗಿರುತ್ತದೆ. ಬೇಕಿತ್ತಾ ಇಟ್ಟುಕೊಂಡ, ಬೇಡವಾ? ಬಿಸಾಡಿದ. ಕೆಲವೇ ಕೆಲವರು ಮಾತ್ರ ಭಾವನಾತ್ಮಕವಾಗಿ ಅವುಗಳನ್ನು ತಮ್ಮ ನೆನಪಿನ ಪಳುಯುಳಿಕೆಯಂತೆ ಜೋಪಾನ ಮಾಡಿಟ್ಟಿರುತ್ತಾರೆ. ಆದರೆ, ಈ ದಿನ ”ಮಾನ” ದಲ್ಲಿ ಮನುಷ್ಯ ಮನುಷ್ಯರ ನಡುವೆಯೂ ಸಂಭಂಧಗಳು ಇದಕ್ಕಿಂತ ಭಿನ್ನವಾಗೇನೂ ಉಳಿಯುತ್ತಿಲ್ಲ. ಹೌದಾ? ಅಲ್ವಾ?
****
Absolutely a true fact of life sir……. superb narrating.
Baraha chennagive Amar. Vasthugaligoo jeeva thumbi sogasaagi maathanaadisiddeeri.
very good article sir
Very nice flow