ಗಿರಿಕನ್ಯೆಯ ಗುನುಗು: ಗೀತಾ ಪ್ರಸನ್ನ

ಅಣ್ಣಾವ್ರ ಗಿರಿಕನ್ಯೆ ಬರ್ತಿತ್ತು ಇವತ್ತು. ಎಷ್ಟ್ ಚೆಂದದ ಜೋಡಿ.. ಚೆನ್ನ ಚೆಲುವೆ. ಜಯಮಾಲಾ ಎಳೇ ಬಳ್ಳಿ, ಅಣ್ಣಾವ್ರ ಕರಿಷ್ಮಾ – ಇಬ್ಬರ ಜೋಡಿ ಆಹಾ.. ಆ ಎವರ್ ಗ್ರೀನ್ ಹಾಡುಗಳು. “ನಗು ನಗುತಾ ನೀ ಬರುವೆ.. ನಗುವಿನಲೆ ಮನ ಸೆಳೆವೆ.. “ ಆಹಾ ಎಂಥಾ ಮುದ. ದೋಣಿಯಲ್ಲಿ ಇಬ್ಬರ ರೋಮ್ಯಾನ್ಸ್!!

ಈ ದೋಣಿ ಸೀನ್ ನೋಡಿ ಸೀದಾ ಕಾಲೇಜು ದಿನಕ್ಕೆ ಹೋಯ್ತು ನೆನಪು. ಅಣ್ಣಾವ್ರು ಹುಟ್ಟು ಹಾಕ್ತಾ ಇದ್ರೆ, ಚೆಲುವೆ ಎಳೇ ಬಳ್ಳಿ ಹಾಗೆ ಮರಕ್ಕೆ ಹಬ್ಬಿಕೊಳ್ಳೋ ಹಾಗೆ ಚೆನ್ನನ ಸುತ್ತಿಕೊಂಡಿದ್ದಾಳೆ. ಇಡೀ ಸೀನಲ್ಲಿ ಬೇರೆ ಯಾರಿಲ್ಲ ನದೀಲಿ ಇವ್ರ ದೋಣಿ ನದಿ ಮಧ್ಯೆ, ಎರಡೂ ದಂಡೆಗಳಲ್ಲಿ ತೆಂಗಿನಮರಗಳ ಸಾಲು ಹಸಿರೋ ಹಸಿರು. ಹೇಳಿ ಕೇಳಿ ಕಾಲೇಜು ದಿನಗಳು ಕನಸು ಕಾಣೋದಕ್ಕೆ DL ತರ KL (ಕನಸಿಂಗ್ ಲೈಸೆನ್ಸು) ಸಿಕ್ಕಾಗಿರುತ್ತೆ. ಈ ರೀತಿ ನನ್ನ ಹುಡುಗನ ಜೊತೆಗೂ ಹೀಗೆ ನದೀಲಿ ದೋಣೀಲಿ ರೋಮ್ಯಾಂಟಿಕ್ ಆಗಿ ಹೋಗ್ತಿದ್ರೆ ಆಹಾ ಅಕ್ಕ ಪಕ್ಕ ಇದೇ ರೀತಿ ಹಸಿರು ಇರ್ಬೇಕು. ದೋಣೀಲಿ ನಾವಿಬ್ರೇ ಇರ್ಬೇಕು. ಈಗ ಜ್ಞಾಪಕ ಇರೋದು ಇಷ್ಟೇ ಆಗ ಇನ್ನು ಏನಿತ್ತೋ ನೆನಪಿಲ್ಲ.. ವಯಸ್ಸಾಯ್ತು ಬಿಡಿ. ಹಾಸ್ಟೆಲ್ ಹುಡುಗೀರೆಲ್ಲ ಡೈನಿಂಗ್ ಹಾಲಲ್ಲಿ ಕೂತು ಟಿವಿ ನೋಡೋವಾಗ ಬಂದ ಕನಸು. ಯಾರೂ ಏನೂ ರನ್ನಿಂಗ್ ಕಾಮೆಂಟರಿ ಕೊಡದೆ ಸುಮ್ನೆ ನೋಡ್ತಾ ಇದ್ದಿದ್ದು ಜ್ಞಾಪಿಸಿಕೊಂಡ್ರೆ ಅನ್ಸತ್ತೆ ಎಲ್ರು ಇಂಥದೇ ಏನೋ ಒಂದು ಕನಸು ಕಾಣ್ತಾ ಇದ್ರು ಅಂತ. ಹಾಂ ಒಂದು ಬದಲಾವಣೆ ನನ್ನ ತಲೆಗೆ ಆಗ ಬಂದಿದ್ದು – ಮೀಸೆ ಸ್ವಲ್ಪ ದಪ್ಪ ಇರಬೇಕು. ಚೆನ್ನನ ರೀತಿ ತೆಳ್ಳಗೆ ಇರಬಾರದು ಅನಿಲ್ ಕಪೂರ್ ಮೀಸೆ ತರ ಥಿಕ್ ಆಗಿ ಇರ್ಬೇಕು ಅಂತ. ಹುಡುಗೀರಿಗೆ ಇದೊಂದು ಕಾಮನ್ ಕನಸು ಇತ್ತು ಆಗ..

ಎಂಥ ಸಾವು ಮಾರ್ರೇ.. ನಂಗೆ ಇಂಥದೊಂದು ಸೀನ್ ಸಿಕ್ಕೇ ಬಿಡೋದ. ಒಬ್ಬ ಹುಡುಗ ಸಿಕ್ಕಿದ, ತಿರುಗಿದ್ದೇ ತಿರುಗಿದ್ದು.. ಕಾಡು ಮೇಡು.. ಆ ಬೆಟ್ಟ ಈ ಪರ್ವತ. ಇಂಥದ್ದೇ ಒಂದು ಸಾಹಸ ಯಾತ್ರೆಯಲ್ಲಿ ವಾರಾಹಿ ನದಿಯಲ್ಲಿ ೧೨ಕಿ.ಮೀ ನದೀಲಿ ಹೋಗೋ ಚಾನ್ಸ್. ಅದೂ ಒಂದು ದೋಣೀಲಿ ನಾವಿಬ್ರೇ. ಚೆಲುವೆ ಚೆನ್ನರಿಗೆ ೫ ನಿಮಿಷದ ಸೀನ್, ನಮಗೆ ೧ ಗಂಟೆಗೂ ಹೆಚ್ಚು. ನದಿಯ ಎರಡೂ ದಂಡೆಗಳು ಮನುಷ್ಯರ ಹಂಗೇ ಇಲ್ಲದೆ, ನಳನಳಿಸುವ ಹಚ್ಚ ಹಸುರಿನ ಪ್ರಕೃತಿಯ ಎರಡು ತೋಳುಗಳು. ಅಬ್ಬರಿಸುವ ಮಳೆಗಾಲ ತುಂಬಿದ ವಾರಾಹಿ. ಗಂಭೀರವಾಗಿ ಶಾಂತವಾಗಿ ಹರಿಯುತ್ತಿರುವುದು ದಡದಿಂದ ಕಂಡವರಿಗೆ ನುಣುಪಾದ ಗ್ರಾನೈಟ್ ಫ್ಲೋರ್. ಕಯಾಕಿಂಗ್ ಅನ್ನೋ ಹೆಸರು ಈ ದೋಣಿ ಯಾನಕ್ಕೆ. ಕಯಾಕ್ ಅನ್ನೋದು ದೋಣಿ. ಟ್ರೈನರ್ ಗಳಿಂದ ಒಂದು ಡೆಮೋ ಆಮೇಲೆ ಬ್ರೀಫಿಂಗ್ ಅನ್ನೋ ಒಂದು ಥಿಯರಿ ಕ್ಲಾಸ್ ಫಾಲ್ಲೋಡ್ ಬೈ ಒಂದು ಪ್ರಾಕ್ಟಿಕಲ್ಸ್ ಆಯ್ತು. ಹೇಗೆ ದೋಣಿಯನ್ನ ನಡೆಸೋದು, ಅದರಲ್ಲಿ ಕೂತುಕೊಳ್ಳೋದು ಹೇಗೆ, ಮುಂದೆ ಕೂತವರು ಏನು ಮಾಡಬೇಕು ಹಿಂದೆ ಕೂತವರು ಹೇಗೆ ಸಂಭಾಳಿಸಬೇಕು. ಎಡ ಬಲ ದಿಕ್ಕುಗಳಿಗೆ ತಿರುಗಿಸಬೇಕು ಅಂದ್ರೆ ಏನು ಮಾಡಬೇಕು. ಹುಟ್ಟು ಹಾಕೋದು ಹೇಗೆ, ಎರಡೂ ಕಡೆ ಹೇಗೆ ತೂಗಿಸಿಕೊಂಡು ಹುಟ್ಟು ಹಾಕಬೇಕು. ಅಕಸ್ಮಾತ್ ದೋಣಿ ಮಗುಚಿದ್ರೆ ಏನು ಮಾಡಬೇಕು, ಯಾವುದೇ ಕಾರಣಕ್ಕೂ ಹುಟ್ಟು ಕೈಯ್ಯಲ್ಲೇ ಇರ್ಬೇಕು ಅದನ್ನ ನೀರಿಗೆ ಬಿಡಬಾರದು.

ಹೀಗೆ ಒಟ್ರಾಶಿ ಎಲ್ಲಾನೂ. ಏನಾದ್ರು ಪ್ರಶ್ನೆ ಇದ್ರೆ ಕೇಳಿ ಅಂದ್ರೆ ಏನು ಇಲ್ಲ. ಇದು ಎಷ್ಟು ಸರಳ, ಬೇಗ ಕೂರಿಸಿ ಬಿಡಿ ಹೊರಟೇಬಿಡ್ತೀವಿ ಅಂದೆ. ಇರಿ ಇರಿ ಮೊದಲು ಲೈಫ್ ಜಾಕೆಟ್ ಸರಿ ಇದೆಯಾ ನೋಡಿಕೊಳ್ಳಿ, ಮುಂದೆ ಯಾರು ಹಿಂದೆ ಯಾರು ತೀರ್ಮಾನ ಮಾಡಿಕೊಳ್ಳಿ. ಮಧ್ಯೆ ಜಗಳ ಆಡಬೇಡಿ ಅಂದ್ರು. ಜಗಳನಾ ಚಾನ್ಸೆ ಇಲ್ಲ ಅಂದೆ. ಸರಿ ನೀವಿಬ್ಬರೇ ನಿಮ್ಮ ದೋಣೀಲಿ. ಮಿಕ್ಕ ಗೆಳೆಯರೂ ಅವರವರ ಪಾರ್ಟ್ನರ್ ಗಳನ್ನ ನಿರ್ಧಾರ ಮಾಡಿಕೊಂಡು ಲೈಫ್ ಜಾಕೆಟ್ ನ ಗಟ್ಟಿಯಾಗಿ ಎಳಕೊಂಡು ತಯಾರಾದ್ರು. ನಾವಿಬ್ರೇ ಚೆನ್ನ ಚೆಲುವೆ ಇದ್ದಿದ್ದು ಆ ಗುಂಪಿನಲ್ಲಿ. ನೀವೇ ಮೊದಲು ಹೋಗಿ ಅಂತ ನದೀನ ನಮಗೆ ಬಿಟ್ರು ಮೊದಲಿಗೆ.

ನಾವು ಇನ್ನೊಂದು ದೋಣೀಲಿ ಬರ್ತೀವಿ ಹಿಂದೆ ಹಿಂದೆ. ಅದು ಕಯಾಕ್ ಅಲ್ಲ ಕೆನೋ, ಒಬ್ರು ಹುಟ್ಟು ಹಾಕಿದ್ರೆ ಸಾಕು ಇನ್ನೊಬ್ರು ವಿಡಿಯೋ ಮಾಡ್ತೀವಿ ಬೇಕಾದ್ರೆ ಕ್ಯಾಮೆರಾ ಕೊಟ್ರೆ ಅಂದ್ರು. ಓಹ್ ವಾವ್ ಅಂತ ಹುಮ್ಮಸ್ಸಲ್ಲಿ ನದೀಗೆ ಇಳಿದೆ ಬಿಟ್ವಿ, ಕಯಾಕ್ ನ ಹತ್ತೇ ಬಿಟ್ವಿ. ನಾನು ಮುಂದೆ ನನ್ನ ಚೆನ್ನ ಹಿಂದೆ. ಒಂದು ೫ ನಿಮಿಷಕ್ಕೆ ಯಾಕೋ ಈ ತರ ಕೂತುಕೊಳ್ಳೋದು ಅಷ್ಟು ಸುಲಭ ಅಲ್ಲ ಅನಿಸೋಕೆ ಶುರು ಆಯ್ತು. ಮಂಡಿಗಳನ್ನ ಅಗಲಮಾಡಿ ಕಯಾಕ್ ಗೆ ಆನಿಸಿ ಸಪೋರ್ಟ್ ತಗೋಳೋದು ೫ ನಿಮಿಷಕ್ಕೆ ನೋವು ಕೊಡಲು ಶುರು ಮಾಡಿತು. ಕಾಲು ಸರಿ ಮಾಡಲು ಹೋಗಿ ದೋಣಿ ಸ್ವಲ್ಪ ಡಾನ್ಸ್ ಮಾಡಿ ಬಿಡ್ತು. ಅಲ್ಲಾಡಬೇಡ್ವೇ ಬೀಳ್ತೀವಿ ಅಂತ ಕೂಗಿದ ನನ್ನ ಚೆನ್ನ. ಕಾಲು ತುಂಬಾ ನೋಯ್ತಿವೆ ಕಣೋ ಅಂದ್ರೆ ನಂಗೂ ನೋಯ್ತಿವೆ ಸ್ವಲ್ಪ ತಡ್ಕೊಬೇಕು ಅಷ್ಟೇ ಅಂದ.

ಅಬ್ಬಾ ಇದೇನೋ ನೋಡಕ್ಕೆ ಒಳ್ಳೆ ಗ್ರಾನೈಟ್ ಫ್ಲೋರಿಂಗ್ ತರ ಕಾಣಿಸಿತು, ಹುಟ್ಟು ಹಾಕಿದ್ರೆ ಎಂಥ ಸೆಳೆತ ಇದೆ ಒಳಗೆ. ಐಯ್ಯಪ್ಪ.. ಆಗತ್ತಾ ನಮಗೆ? ೧೨ ಕಿ ಮೀ ಹೋಗೋಕೆ ಅಂತ ರಾಗ ಶುರು ಮಾಡಿದೆ. ನಾವು ನೀರಿನ ಜೊತೆ ಹೋಗ್ತಾ ಇದೀವಿ, ಉಲ್ಟಾ ಹೋದ್ರೆ ಅದೆಲ್ಲಾ ಯೋಚಿಸಬೇಕು ಈಗ ಯಾಕೆ ಬಿಡು ಅಂದ ನನ್ನ ಜಾಣ ಚೆನ್ನ.
ಎರಡೂ ಕಡೆ ಹುಟ್ಟು ಹಾಕೋದು.. ಅದೂ ಲೈಫ್ ಜಾಕೆಟ್ ಹಾಕೊಂಡು ಪ್ರತೀ ಸಲ ಹುಟ್ಟು ಎತ್ತುವಾಗಲು ತೋಳುಗಳು ಜಾಕೆಟಿಗೆ ತರಚಿ ತರಚಿ ಅಲ್ಲಿ ಬೇರೆ ಸಣ್ಣ ಉರಿ ಶುರು ಆಯ್ತು.
ನೀನು ತುಂಬಾ ಜೋರಾಗಿ ಹುಟ್ಟು ಹಾಕ್ತಾ ಇದ್ದೀಯ ಸ್ವಲ್ಪ ನಿಧಾನ ನಿಧಾನ ಅಂತ ನನ್ನ ಚೆನ್ನ ಹೇಳಿದ್ದು ಈಗ ೫೦-೬೦ ಸಲ ಆಯ್ತು ಅನಿಸಿತು ನಂಗೆ. ಹಾಗೆ ಪಿತ್ತ ನೆತ್ತಿಗೆ ಹತ್ತೋದು ಗ್ಯಾರೆಂಟಿ ಅನಿಸೋಕು ಶುರು ಆಯ್ತು. ಆ ಟ್ರೈನರ್ ಗಳು ಜಗಳ ಆಡಬೇಡಿ ಅಂದಿದ್ದು ಜ್ಞಾಪಕ ಬಂದು ತಡೆದುಕೊಂಡು ಸುಮ್ನೆ ಇದ್ದೆ.

ಅದಾಗಲೇ ಒಂದು ಹದಿನೈದಿಪ್ಪತ್ತು ನಿಮಿಷ ಆಗಿತ್ತು ಅನಿಸುತ್ತೆ ಸ್ವಲ್ಪ ಅಭ್ಯಾಸ ಆಗಿ ಚೆನ್ನಾಗಿ ಹೋಗಲು ಶುರು ಆಯ್ತು ದೋಣಿ ಯಾನ. ಆಗಲೇ ನೋಡಿದ್ದು ಮಾನವರ ಕುರುಹೇ ಇಲ್ಲದೆ ಬರೀ ನಾವು ವಾರಾಹಿಯ ಮಡಿಲಲ್ಲಿ, ಅಕ್ಕ ಪಕ್ಕ ಹಸಿರಿನ ದಟ್ಟ ಕಾಡು. ಬೇರೆ ಏನು ನೆನಪಿಗೇ ಬರಲಿಲ್ಲ, ಒಂಥರಾ ಆನಂದ, ಯಾವ ಮಾತು ಇಲ್ಲ ಯಾರು ಇಲ್ಲ ನಾನು ಇಲ್ಲ, ಸುಮ್ಮನೆ ಏನೋ.. ಎಂಥದೋ..
ಇದ್ದಕ್ಕಿದ್ದ ಹಾಗೆ ವಾರಾಹಿ ಒಂದು ಹರವಾದ ಪ್ರದೇಶಕ್ಕೆ ಕರೆದು ತಂದಳು ನಮ್ಮನ್ನ. ಸೆಳೆತವೂ ಅಷ್ಟಾಗಿ ಇಲ್ಲ. ವಾವ್ ಅನ್ನೋ ಜಾಗ. ಬಲ ದಡದ ಮೇಲೆ ಯಾರೋ ೩-೪ ಜನ ಕೂತಿರೋದು ಕಾಣಿಸಿತು. ಅವರು ನಮ್ಮತ್ತಲೇ ಕೈ ಬೀಸಿ ಬನ್ನಿ ಎಂದು ಕರೆಕೊಟ್ಟರು. ಹತ್ತಿರ ಹೋದಾಗ ಗೊತ್ತಾಯ್ತು. ಅವರು ಆಯೋಜಕರ ಕಡೆಯವರು, ಅದು ಮದ್ಯೆ ಟೀ ಬ್ರೇಕ್ ಅಂತ. ಅಲ್ಲಿ ಸ್ವಲ್ಪ ಹೊತ್ತು ನೀರಲ್ಲಿ ಆಟ ಆಡಬಹುದು ಮತ್ತೆ ಟೀ ಕುಡಿದು ಪ್ರಯಾಣ ಮುಂದುವರಿಸುವುದು.

ಅದ್ಭುತವಾದ ಜಾಗ. ಸಮತಟ್ಟಾದ ಪ್ರದೇಶ, ನೀರಿನ ಹರಿವು ಇಲ್ಲ ಸೆಳೆತವೂ ಇಲ್ಲ. ಇಲ್ಲಿಯವರೆಗೆ ದಾಪುಗಾಲಲ್ಲಿ ಬಂದ ವಾರಾಹಿ ಪಡಸಾಲೆಯಲ್ಲಿ ಸ್ವಲ್ಪ ವಿಶ್ರಮಿಸುತ್ತಿರುವಂತೆ ಭಾಸವಾಗುವ ಮನೋಹರ ದೃಶ್ಯ. ಎಲ್ಲ ಗೆಳೆಯರ ಹಾ ಹಾ ಹೂ ಹೂಗಳಲ್ಲಿ ಸಮಯದ ಅರಿವೇ ಇಲ್ಲ. ಹೊರಡಬೇಕು ಎಂದು ಆಯೋಜಕರು ಈಗಾಗಲೇ ೪-೫ ಬಾರಿ ಹೇಳಿಯಾಗಿತ್ತು. ಇದ್ದಕ್ಕಿದ್ದಂತೆ ಆಕಾಶನಿಗೆ ಒಂದು ಡೌಟ್ ಬಂತು. ಇಲ್ಲಿ ಕಾಳಿಂಗ ಸರ್ಪ ಇರುತ್ತಾ ಅಂತ ಕೇಳಿದ. ಅವರು ಜೋರಾಗಿ ನಗುತ್ತಾ ನೀವೊಳ್ಳೆ ಸಾರ್ ಅದರ ಮನೆಗೇ ಬಂದು ಅದು ಇರುತ್ತಾ ಅಂದ್ರೆ, ಎನ್ನುತ್ತಿದ್ದಂತೆ ಎಲ್ಲರೂ ಒಬ್ಬರ ಮುಖ ನೋಡ್ಕೊಳ್ಳೋವಾಗಲೇ ಈ ಥಿಂಕ್ ವೀ ಶುಡ್ ಮೂವ್ ಅಂತ ದಡದತ್ತ ಸರಿದ ಆಕಾಶ.

ಥೂ ಇವನಿಗೆ ಅವ್ರಪ್ಪ ಅಮ್ಮ ಆಕಾಶ ಅಂತ ಹೆಸರಿಡೋ ಬದಲು ಡೌಟೇಶ ಅಂತ ಇಡಬೇಕಾಗಿತ್ತು ಅಂತ ಗೊಣಗುತ್ತಾ ಕಯಾಕ್ ನತ್ತ ಸರಿದ ರಜತ್.
ಸುಮ್ನೆ ನೀರಲ್ಲಿ ಆಡ್ತಾ ಮುಂದೆ ಹೋಗೋದೇ ಇಲ್ಲ ಅನ್ನೋರಿಗೆ ಇನ್ನು ಮೇಲೆ ಈ ಟ್ರಿಕ್ ಉಪಯೋಗಿಸಬಹುದು ಅಂತ ಹೊಸ ಐಡಿಯಾ ಕೊಟ್ಟೆ ಆಯೋಜಕರಿಗೆ. ರಜತನ ಗೊಣಗಾಟ ಇನ್ನೂ ನಡೆದೇ ಇತ್ತು.
ಮೊದಲಿದ್ದ ಜೋಷ್ ಸ್ವಲ್ಪ ಇಳಿದಿತ್ತು. ಇನ್ನೂ ೮ ಕಿಮೀ ಹೋಗಬೇಕು ಮಧ್ಯಾಹ್ನದ ಊಟಕ್ಕೆ ಸರಿಯಾಗುತ್ತೆ ಹೊರಡೋಣ ಎಂದವರ ಮಾತಿಗೆ ತಲೆ ಆಡಿಸುತ್ತಾ ನಮ್ಮ ನಮ್ಮ ಕಯಾಕ್ ಗಳನ್ನೇರಿದೆವು. ಮೊದಲು ಬಂದ ಹಾಗೆ ಈಗಲೂ ನಮ್ಮನ್ನೇ ಮುಂದೆ ಬಿಟ್ಟರು. ನಿಮ್ಮ ಫೋಟೊ ಮತ್ತು ವಿಡಿಯೋ ಮಾಡಿದೀವಿ. ಮುಂದೆ ಕೂಡ ಮಾಡೋದ ಬೇಡ್ವಾ ಅಂದವರಿಗೆ, ಹೇ ಮಾಡಿ ಮಾಡಿ. ವಿಡಿಯೋ ಎಷ್ಟು ದೊಡ್ಡದು ಅಂದ್ರೆ ೩೦ ಸೆಕೆಂಡ್ಸ್ ೧ ನಿಮಿಷ ಅಂದ್ರು. ಅಯ್ಯೋ ಅಷ್ಟೇನಾ ಜಾಸ್ತಿ ಮಾಡಿ ಪರವಾಗಿಲ್ಲ ಅಂದೆ. ಲಾಂಗ್ ವಿಡಿಯೋ ಬೋರ್ ಆಗುತ್ತೆ ಅಷ್ಟೆ ಇರಲಿ ಅಂದ ನನ್ನ ಚೆನ್ನ. ಇಲ್ಲ ಇಲ್ಲ ಮಾಡಿ ಮಾಡಿ ಅಂದೆ.

ಸ್ವಲ್ಪ ಹೊತ್ತಿನಲ್ಲೇ ವಾರಾಹಿ ಬಯಲಿಗೆ ಬಂದಳೇನೋ, ನಮ್ಮ ಕಯಾಕ್ ಅಷ್ಟು ವೇಗವಾಗಿ ಹೋಗುತ್ತಿರಲಿಲ್ಲ. ಇಲ್ಲಿಂದ ಶುರು ಆಯ್ತು ಯುಗಳ ಗೀತೆ.
ನೀನು ತುಂಬಾ ನಿಧಾನಕ್ಕೆ ಹುಟ್ಟು ಹಾಕ್ತಾ ಇದ್ದೀಯ ನೀನು ಹುಟ್ಟು ಹಾಕಿದಂಗೆ ಹಾಕಿದ್ರೆ ದೋಣಿ ಮುಂದೇ ಹೋಗಲ್ಲ ಅಷ್ಟೆ ಅಂತ ಕೆಣಕಿದೆ.
ಒಂದು ರಿದಮ್ ಇರಬೇಕು ಹುಟ್ಟು ಹಾಕೋವಾಗ ನೀನು ಹೆಂಗೆಂಗೋ ಹಾಕ್ತಾ ಇದ್ದೀಯ ಸ್ವಲ್ಪ ಸರಿಯಾಗಿ ಮಾಡು, ಅವನೂ ಕುಟುಕಿದ.
ಇನ್ನೊಂಚೂರು ಮುಂದೆ ಹೋಗೋವಷ್ಟರಲ್ಲಿ ಚೆನ್ನನ ಆದೇಶಗಳು ಹೆಚ್ಚಾಗ್ತಾ ಹೋದವು.
ಅಬ್ಬಾ ಸಾಕಾಯ್ತು ಸುಮ್ನಿರೋ.. ಬಲಗಡೆ ಎಡಗಡೆ ನಿಧಾನ ನಿಧಾನ ಅಂತೆಲ್ಲ ಕಮ್ಯಾಂಡ್ಸ್ ಕೊಟ್ಕೊಂಡು ನೀನು ನಂಗೆ ಏನು ಮಾಡಕ್ಕೆ ಬಿಡಲ್ಲ ಎಲ್ಲದಕ್ಕೂ ನೀನು ಸೂಚನೆ ಕೊಡ್ತಾನೆ ಇರ್ತೀಯ..
ಮತ್ತಿನ್ನೇನು ನೀನು ಹೆಂಗೆಂಗೋ ಹುಟ್ಟು ಹಾಕ್ತಾ ಇದ್ದೀಯ ಸ್ವಲ್ಪ ಸರಿಯಾಗಿ ಮಾಡು..

ಒಳ್ಳೆ ಡ್ಯೂಯಟ್ ಸಾಂಗಿನ ಪಲ್ಲವಿ ತರ ಅದನ್ನೇ ಉಲಿಯತೊಡಗಿದ್ದ.
ಈಗ ಇನ್ನೊಂದು ರೇಂಜಿಗೆ ಜಗಳ ಶುರು ಆಯ್ತು.
ಇನ್ ಸ್ಟ್ರಕ್ಷನ್ಸ್ ಮಾನ್ಯುಯಲ್ ನೀನು, ನಂಗೆ ಏನು ಮಾಡಕ್ಕೆ ಬಿಡಲ್ಲ. ಒಂದೇ ಸಮ ಹಂಗೆ ಮಾಡು ಹಿಂಗೆ ಮಾಡು ಅಂತಾನೆ ಇದೀಯ, ಎಂದ ಮೇಲೆ ಅವನು ಹೇಳಿದ, ಏನಾದ್ರು ಮಾಡ್ಕೋ ನಾನು ಏನು ಹೇಳಲ್ಲ ಅಂತ ಮೌನ ವ್ರತ ಶುರು ಮಾಡಿದ.
ಆಮೇಲೆ ಅಯ್ಯೋ ಅಂದ್ರು ಮಾತಿಲ್ಲ ಅಬ್ಬಾ ಅಂದ್ರು ಮಾತಿಲ್ಲ ಕೈ ನೋವಾಯ್ತು ಅಂದ್ರು ಮಾತಿಲ್ಲ.
ಕಾಲು ನೋಯ್ತಿದೆ ಕಣೋ, ನಿಂಗೆ ಕಿವಿ ಕೇಳ್ತಾ ಇಲ್ವಾ ಎಂದು ಅರಚಿದ ಮೇಲೆ ಮಾನ್ಯುಯಲ್ ಮಾತಾಡಲ್ಲ ಅಂತ ಮುಗುಮ್ಮಾಗಿ ಹೇಳಿದ.
ನೋಡು ಇವಾಗ ನೀರಿಗೆ ಹಾರಿ ಬಿಡ್ತೀನಿ ಅಂದೆ, ಹಾರು ಅಂದ.

ನಿಜಕ್ಕೂ ಹಾರಿಬಿಡ್ತೀನಿ ನೋಡು ಅಂದೆ, ನಾನೂ ನಿಜವಾಗಿಯೂ ಹೇಳಿದ್ದು ಅಂದ.
ಸ್ವಲ್ಪ ದೂರದಲ್ಲಿ ಒಂದು ಸೇತುವೆ ಕಾಣುತ್ತಿತ್ತು. ಅದರಿಂದ ಈಚೆಗೆ ನಿಂತ ಇಬ್ಬರು ಏನೋ ಕೂಗ್ತಾ ಇದ್ದರು. ಸರಿಯಾಗಿ ಕೇಳಿಸಿಕೊಂಡ ಮೇಲೆ ಗೊತ್ತಾಯ್ತು, ಒಬ್ಬರು ಬೇಕಾದ್ರೆ ನೀರಿಗೆ ಹಾರಿ ಈಜಿಕೊಂಡು ಬನ್ನಿ.
ಥೂ ಇವರಿಗೆ ಹೇಗೆ ಗೊತ್ತಾಯ್ತು ನಾನು ಹಾರಿಬಿಡ್ತೀನಿ ಅಂದಿದ್ದು ಅಂತ ಯೋಚನೆ ಮಾಡೋವಾಗ್ಲೇ..
ಚೆನ್ನ ಚೆಂದವಾಗಿ ಜೋರಾಗಿ ನಗುತ್ತಾ ಹೇಳಿದ ನೋಡು ಅವರೂ ಹೇಳ್ತಾ ಇದ್ದಾರೆ ಹಾರು ಅಂತ ಅಂದ.
ಶೀ ಅವರಿಗೆ ಹೆಂಗೋ ಕೇಳ್ತು ನಾವಿಬ್ಬರೂ ಇಲ್ಲಿ ಕಿತ್ತಾಡೋದು ಅಂದೆ

ನಮ್ಮಂತಹವರನ್ನ ಎಷ್ಟು ಜನರನ್ನ ನೋಡಿರಲ್ಲ ಅವರು ಅಂದ. ಇದೂ ಒಂದು ಟ್ಯಾಗ್ ಲೈನ್ ತರ ಆವಾಗಾವಾಗ ಹೇಳ್ತಾನೆ ಇರು ಅಂದೆ ಮತ್ತೆ ತಿವಿದೆ.
ಮತ್ತಿನ್ನೇನು ಈ ತರ ಪೆದ್ದು ಪೆದ್ದಾಗಿ ಪ್ರಶ್ನೆ ಮಾಡಿದ್ರೆ. ಅವರು ಶುರುನಲ್ಲಿ ಹೇಳೋವಾಗ ಏನು ಕನಸು ಕಾಣ್ತಾ ಇದ್ದೆಯಾ ಅಂದ.
ಆಗ ಏನು ಹೇಳಿದ್ರು.. ನಾನೇನು ಮಾಡ್ತಾ ಇದ್ದೆ..
ಕೊನೆಯಲ್ಲಿ ಸೇತುವೆ ಕಾಣೋವಾಗ ಈಜಲು ಇಷ್ಟ ಇರುವವರು ನೀರಿಗೆ ಹಾರಿ ಈಜಿಕೊಂಡು ಬರಬಹುದು. ಆದರೆ ಒಬ್ಬರು ಮಾತ್ರ, ಇನ್ನೊಬ್ಬರು ಕಯಾಕ್ ನ ದಡಕ್ಕೆ ತರಬೇಕು ಎಂದರಂತೆ. ನಂಗೆ ಇದೆಲ್ಲಾ ಕೇಳಿಸೆ ಇಲ್ಲ ನಾನೇನು ಮಾಡ್ತಿದ್ದೆ ಅಂದ್ರೆ ನಾನು ಗಿರಿಕನ್ಯೆ ಸೀನ್ ಜ್ಞಾಪಿಸಿಕೊಂಡು ಕನಸು ಕಂಡಿದ್ದೆ.

ಥೂ.. ಒಂದ್ಸಲ ಈ ಕಯಾಕ್ ಹತ್ತಿದ ಮೇಲೆ ಗಿರಿಕನ್ಯೆ ಮರೆತೇ ಹೋಯ್ತು ಅಂತ ಈಗ ಜ್ಞಾಪಕ ಬಂತು. ಚೆನ್ನನೂ ಇಲ್ಲ ಚೆಲುವೆಯೂ ಇಲ್ಲ.. ಎಳೇ ಬಳ್ಳಿನೂ ಇಲ್ಲ, ತಬ್ಬಿಹಿಡಿಯೋ ಮರಾನೂ ಇಲ್ಲ. ಇದ್ದಿದ್ದೆಲ್ಲ ಬರೀ ಕಯಾಕ್ ಮತ್ತು ಆ ವಿಚಿತ್ರವಾಗಿದ್ದ ಹುಟ್ಟು.
ನನ್ನಲ್ಲೇ ನಾನು ಕಳೆದುಹೋಗಿದ್ದಾಗ ಎಲ್ಲರೂ ನಗುತ್ತಿದ್ದದು ಕೇಳಿ ಗುಂಪಿನತ್ತ ನೋಡಿದೆ. ವಿಡಿಯೋ ನೋಡಿ ಕೇಕೆ ಹಾಕಿಕೊಂಡು ನಗ್ತಾ ಇದ್ದರು.
ನಿನ್ನ ಹುಟ್ಟು ನೀರನ್ನೇ ಮುಟ್ಟಿಲ್ಲ ಮೋಸ್ಟ್ ಆಫ್ ದಿ ಟೈಮ್, ಅದನ್ನ ನೋಡೇ ಎಲ್ಲರೂ ನಗ್ತಾ ಇರೋದು. ನೀನೂ ನೋಡು ವಿಡಿಯೋನ ಅಂದ ನನ್ನ ಚೆನ್ನ.
ಅಯ್ಯೋ ಹೌದಾ ಎಂದು ಮುಖ ಊದಿಸಿದವಳ ಕಿವಿಯಲ್ಲಿ ಉಸುರಿದ “ನಗು ನಗುತಾ ನೀ ಬರುವೆ…”
ಕೇಳುತ್ತಿದ್ದಂತೆ ಮುಖ ಅರಳಿಸಿ ನಕ್ಕೆ..
ಹಾಗೇನು ಹೇಳೊಲ್ಲ “ಕೆನ್ನೆ ಊದಿಸಿ ನೀ ಬರುವೆ… ಕುಣಿ ಕುಣಿದು ಜಗಳ ಮಾಡುವೆ” ಎಂದು ಮುಂದಿನ ಕಾಳಗಕ್ಕೆ ಸ್ಟೇಜ್ ಸೆಟ್ ಮಾಡಿದ.

-ಗೀತಾ ಪ್ರಸನ್ನ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x