ಸಾಹಿತ್ಯದ ಜೊತೆಗಿನ ಸಿನೆಮಾ ನಂಟು ಬಹಳ ಹಳೆಯದು. ಸಿನೆಮಾ ಅಂದ್ರೆ ಪ್ರಾಯೋಗಿಕವಾಗಿ ನಿರ್ದೇಶಕನೇ ಕುಂತು ಕತೆಗಾರನೊಂದಿಗೆ ಕತೆ ಕಟ್ಟುತ್ತ ಹೋಗುತ್ತಾನೆ. ಆದರೆ ಸಾಹಿತ್ಯಿಕ ಕಥಾವಸ್ತುವೊಂದನ್ನು ಆಯ್ದುಕೊಂಡು ಅದನ್ನು ಚಿತ್ರದ ವಿನ್ಯಾಸದಲ್ಲಿ ಅಳವಡಿಸುವುದು ಗಿರೀಶ ಕಾಸರವಳ್ಳಿಯವರ ವಿಶೇಷ ವ್ಯಾಕರಣವಾಗಿದೆ. ಘಟಶ್ರಾದ್ಧದಿಂದ ಕೂರ್ಮಾವತಾರದ ವರೆಗಿನ ಪಯಣದಲ್ಲಿ ಅವರು ಕತೆಯ ಆಯ್ಕೆಯಲ್ಲಿ ವಿಶೇಷವಾದ ಆಸಕ್ತಿ ತೋರಿಸಿದ್ದಾರೆ. ಕನ್ನಡದ ಪ್ರಸಿದ್ಧ ಕತೆಗಾರರಾದ ಕುಂವೀ ಅವರ ಸಣ್ಣ ಕತೆಯಾಧಾರಿತ ಕೂರ್ಮಾವತಾರ ಸಿನೆಮಾವನ್ನು ಕನ್ನಡದ ಪ್ರಸಿದ್ಧ ಚಿತ್ರನಿರ್ದೇಶಕರಾದ ಕಾಸರವಳ್ಳಿಯವರು ನಿರ್ದೇಶಿಸಿದ್ದಾರೆ.
ಮೊದಲ ದೃಶ್ಯದಲ್ಲಿಯೇ ಗಾಂಧಿ ಸಾವು ಮತ್ತು ಗಾಂಧಿ ಪಾತ್ರಧಾರಿ ಕುಸಿದು ಬೀಳುತ್ತಾನೆ. ಹೀಗೆ ಪುನರಾವಲೋಕನ ಶೈಲಿಯಲ್ಲಿ ಕತೆ ಆರಂಭವಾಗುತ್ತದೆ. ಕಡತಗಳಲ್ಲಿಯೇ ಸೂರ್ಯಾಸ್ತ ಕಾಣುವ ನೌಕರನ ಕೂರ್ಮಾವತಾರದ ವಿಶ್ಲೇಷಣೆಯನ್ನು ಮನಮುಟ್ಟುವ ಹಾಗೆ ಚಿತ್ರಿಸಿದ್ದಾರೆ. ಪಾತ್ರ ಮಾಡುತ್ತ ಪಾತ್ರದ ಆಳಕ್ಕಿಳಿದು ತನ್ನೊಳಗೆ ತಾನೇ ಇಣುಕಿಕೊಳ್ಳಲು ಆರಂಭಿಸುವ ವಿಧಾನದಲ್ಲಿ ಗಾಂಧಿ ಸತ್ಯಾನ್ವೇಷಣೆಯ ಪ್ರೇರಣೆ ಇದೆ. ಕತೆಯನ್ನು ವಿಸ್ತರಿಸಿಕೊಂಡಿರುವ ಬಗೆಯಲ್ಲಿ ಕೂರ್ಮಾವತಾರ ವಿಭಿನ್ನ ಚಿತ್ರವಾಗಿದೆ. ಮೂಲಕತೆಯಲ್ಲಿ ದೇಹದ ಮೆತ್ತನೆಯ ಭಾಗವನ್ನು- ಒರಟಾದ ಹೊರಮೈ ಚಿಪ್ಪಿನೊಳಗೆ ಎಳೆದುಕೊಳ್ಳುವ ಆನಂದರಾಯರು ಚಿತ್ರದ ವಿನ್ಯಾಸದಲ್ಲಿ ಮೈಚಳಿ ಬಿಟ್ಟು ಓಡಾಡುವ, ಮೊಮ್ಮಗನೊಂದಿಗೆ ಆಡುವ ಆಮೆಯಾಗಿ ಕಾಣಿಸುತ್ತಾರೆ.
ದೈಹಿಕವಾಗಿ ಗಾಂಧೀಜಿಯವರನ್ನು ಹೋಲುವ ಆನಂದರಾಯರನ್ನು ಹುಡುಕಿಕೊಂಡು ದಾರಾವಾಹಿಯ ನಿರ್ದೇಶಕ ಮತ್ತು ಸಹನಿರ್ದೇಶಕ ಕಛೇರಿಗೆ ಹೋಗಿ ನಿರಾಶರಾಗಿ ಹಿಂದಿರುಗುತ್ತಾರೆ. ತಾನಾಯ್ತು ತನ್ನ ಕೆಲಸವಾಯ್ತು. ಕೆಲಸದ ಹೊರತಾಗಿ ಮತ್ತೊಂದರ ಕುರಿತು ಅಷ್ಟಾಗಿ ಆಸಕ್ತಿ ತೋರಿಸದ ಆನಂದರಾಯರು ಮಗ-ಸೊಸೆಯ ಒತ್ತಾಯಕ್ಕೆ ಮಣಿಯುತ್ತಾರೆ, ಮೊಮ್ಮಗನ ಭವಿಷ್ಯದ ದೆಸೆಯಿಂದಾಗಿ ಸೀರಿಯಲ್ ನಟನೆಗೆ ಒಪ್ಪಿಗೆ ಕೊಡುತ್ತಾರೆ. ಪುರಾಣ, ವೇದೋಪನಿಷತ್, ಗೀತೆಗಳನ್ನು ಪಠಿಸುತ್ತಿದ್ದ ರಾಯರು ನಟಿಸಬೇಕಾದ ಸಂದರ್ಭಕ್ಕೆ ಎದುರಾಗುತ್ತಾರೆ. ಮೊದಲ ದೃಶ್ಯದಲ್ಲಿ ಭಾರತ-ಪಾಕಿಸ್ತಾನ ವಿಭಜನೆಯ ಹೊತ್ತಲ್ಲಿ ಗಾಂಧೀಜಿ ಖಿನ್ನರಾಗಿ ದುಃಖಿಸಬೇಕು. ಎಷ್ಟು ಪ್ರಯತ್ನಿಸಿದರೂ ಆ ಮುಖ-ಭಾವಗಳು ಆನಂದರಾಯರಲ್ಲಿ ಕಾಣುತ್ತಿಲ್ಲ. ನಿರ್ದೇಶಕರು ಆನಂದರಾಯರ ಅನುಭವದ ಖಜಾನೆಯನ್ನು ಕೆದಕುತ್ತ ಹೆಂಡತಿ ಸತ್ತಾಗಿನ ಸಂದರ್ಭ ನೆನಪಿಸಿಕೊಳ್ಳಲು ಹೇಳುತ್ತಾರೆ. ದುರದೃಷ್ಟವಶಾತ್ ಅವರು ತಮ್ಮ ಹೆಂಡತಿ ಸತ್ತಾಗಲೂ ಅತ್ತಿರಲಿಲ್ಲ. ಆನಂದರಾಯರ ಮಗನಿಂದ ಈ ಸುದ್ದಿ ತಿಳಿದ ನಿರ್ದೇಶಕರು ಅವರನ್ನು ಅಪಹಾಸ್ಯ ಮಾಡಿ ನಗುತ್ತಾರೆ.
ಆನಂದರಾಯರ ಬದುಕಿನಲ್ಲಿ ಅದೊಂದು ಸಣ್ಣ ಬ್ರೇಕ್. ಹೆಂಡತಿಯ ಸಾವನ್ನು ಗ್ರಹಿಸದೆ ದೊಡ್ಡ ತಪ್ಪು ಮಾಡಿದೆ ಎಂಬ ಮೌನ ಅವರನ್ನಾವರಿಸುತ್ತದೆ. ಆಕೆ ಸತ್ತ ಗಳಿಗೆಯ ಸಂಕಟವನ್ನು ಮಗ ಹೇಳುತ್ತಿದ್ದಾಗ ಮೊಮ್ಮಗನಿಗೊಂದು ಆಮೆ ಸಿಗುತ್ತದೆ. ಆ ಆಮೆಯನ್ನು ಸಿನೆಮಾದಲ್ಲಿ ರೂಪಕದಂತೆ, ಆನಂದರಾಯರ ಅಂತರ್ಮುಖಿಯ ಭಾವದಂತೆ, ಮೃದು ಮತ್ತು ಒರಟು ಧೋರಣೆಯಂತೆ, ನಿಧಾನಗತಿಯ ನಡಿಗೆಯಂತೆ ಬಳಸಲಾಗಿದೆ. ಒಟ್ಟು ಚಿತ್ರದಲ್ಲಿ ಆಮೆಯ ಪಾತ್ರವಂತೂ ಮಜಬೂತಾಗಿದೆ. ಜೀವನದ ಹಲವು ಕವಲುಗಳಲ್ಲಿ ಕೂರ್ಮಾವತಾರದ ನೆಲೆಗಳು ಅಲ್ಲಲ್ಲಿ ಕಾಣಿಸುತ್ತವೆ.
ಮೊಮ್ಮಗನೊಂದಿಗೆ ದಾರಿಯಲ್ಲಿ ನಡೆದು ಹೋಗುವಾಗ ಮಗುವಿನಂತಾಗುವ ಆನಂದರಾಯರು ತೀರ ಸಹಜವಾದ ಖುಷಿ ಅನುಭವಿಸತೊಡಗುತ್ತಾರೆ. ತನ್ನ ಮೇಲಿನ ಅಧಿಕಾರಿಯ ಗೌರವಾದರ, ಸಿಬ್ಬಂದಿಗಳ ಪ್ರೀತಿ, ಗೌಸ ಸಾಹೇಬರ ಮಗನೊಂದಿಗೆ ಒಡನಾಟ ಹೀಗೆ ನಿಧನಿಧಾನಕ್ಕೆ ಹೊರಗಿನ ಪರಿಸರಕ್ಕೆ ಹೊಂದಿಕೊಳ್ಳುತ್ತಾರೆ. ಹೊಸ ಮನುಷ್ಯರಾಗಿ, ಹೊಸ ಆವರಣದಲ್ಲಿ ಪಾತ್ರಕ್ಕಾಗಿ ಗಾಂಧಿವಾದಿ ತಾತಯ್ಯನವರನ್ನು ಭೇಟಿ ಮಾಡುತ್ತಾರೆ. ಮಗ ತಂದು ಕೊಟ್ಟ ಗಾಂಧೀಜಿಯವರ ಪುಸ್ತಕಗಳನ್ನು ಓದುತ್ತ ಗಾಂದೀಜಿಯವರ ತತ್ವಾದರ್ಶಗಳನ್ನು ಪಾಲಿಸತೊಡಗುತ್ತಾರೆ. ಆಲೋಚನೆ, ಚಿಂತನೆ, ನಡಿಗೆ, ಉಡುಗೆ-ತೊಡುಗೆಗಳಲ್ಲೆಲ್ಲ ಗಾಂಧಿ ಅನುಕರಿಸುತ್ತಾರೆ. ಅಷ್ಟೆ ಏಕೆ ಗಾಂಧೀಜಿ ಕುರಿತಾದ ನಿರ್ದೇಶಕರ ಪೂರ್ವಾಗ್ರಹವನ್ನು ತಿದ್ದುವಷ್ಟರ ಮಟ್ಟಿಗೆ ಆನಂದರಾಯರು ಗಾಂಧಿಯನ್ನು ಅರಿತುಕೊಳ್ಳುತ್ತಾರೆ. ಮಹಮ್ಮದ ಗೌಸ ಸಾಹೆಬರ ಮಗ ಮತ್ತು ಅವನ ಗೆಳೆಯ ಇವರ ಗಾಂಧಿ ಇಮೇಜನ್ನು ಬಳಸಿಕೊಂಡು ತಮ್ಮ ಕೆಲಸ ಮಾಡಿಸಿಕೊಳ್ಳುತ್ತಾರೆ. ಅದೇ ಮಾದರಿಯಲ್ಲಿ ಮಗ ತಂದೆಯ ಗಾಂಧಿತನವನ್ನು ಕಮಿಷನ್ ಧಂದಾಕ್ಕಿಳಿಸಲು ಪ್ರಯತ್ನಿಸಿದಾಗ ಅಂತರ್ಮುಖಿಯಾಗಿದ್ದ ಆನಂದರಾಯರು ಎಚ್ಚೆತ್ತುಕೊಳ್ಳುತ್ತಾರೆ.
ಗೋಡ್ಸೆ ಪಾತ್ರವನ್ನು ಗೌಸ್ ಸಾಹೇಬರ ಮಗ ಇಕ್ಬಾಲಗೆ ಕೊಡಿಸುತ್ತಾರೆ. ಆದರೆ ಗೋಡ್ಸೇ ಪಾತ್ರಕ್ಕೆ ಮುಸ್ಲೀಂ ಹುಡುಗನನ್ನು ಆಯ್ಕೆ ಮಾಡಿದ್ದು ಸರಿಯಲ್ಲ ಮತ್ತು ಅವನು ಆ ಪಾತ್ರ ಮಾಡುವುದಾದರೆ ಗಲಾಟೆ ಮಾಡುವುದಾಗಿ ಮೂಲಭೂತವಾದಿಗಳು ನಿರ್ದೇಶಕರಿಗೆ ಹೆದರಿಕೆ ಹಾಕುತ್ತಾರೆ. ಅಲ್ಲಿ ಸೋತ ಗಾಂಧಿ ಗೆಲುವಾಗುವುದೇ ಇಲ್ಲ.
ಖ್ಯಾತ ನಟಿ ಸುಶೀಲ ಇಳಿವಯಸ್ಸಿಗೆ ಸಮಾನಮನಸ್ಕಳಾಗಿ ಹರಟಲು ಮಾತಾಡಲು ಸಿಕ್ಕುತ್ತಾಳೆ. ಇದು ಮಗ ಮತ್ತು ಸೊಸೆಗೆ ಇರಿಸು-ಮುರುಸ ಉಂಟುಮಾಡುತ್ತದೆ. ಶೇರ್ ಮಾರ್ಕೇಟನಲ್ಲಿ ಹಣಹೂಡಿ ಗಳಿಸುವ ದುರಾಸೆಗೆ ಜೋತುಬಿದ್ದ ಮಗನಿಗೆ ತನ್ನ ಸಂಭಾವಣೆ ಕೊಡಲು ನಿರಾಕರಿಸಿದಾಗ ಮಗ-ಸೊಸೆ-ಮೊಮ್ಮಗ ದೂರಾಗುತ್ತಾರೆ. ಮನೆಯ ಆ ಸ್ಮಶಾನ ಮೌನದಲ್ಲಿ ಆಮೆ ಮತ್ತು ಆನಂದರಾಯರು ಒಂಟಿಯಾಗುಳಿಯುತ್ತಾರೆ. ನಟಿ ಸುಶೀಲಾ ಸಹವಾಸದಲ್ಲಿ ಚೈತನ್ಯದಿಂದಿರಲು ಪ್ರಯತ್ನಿಸುತ್ತಾರೆ.
ಮೊಮ್ಮಗನಿಗೆ ಆಮೆ ಕೊಟ್ಟು ಬರಲು ಹೋದಾಗ ಅವರ ಮಗ ಜೈಲು ಸೇರಿರುವ ಸಂಗತಿ ತಿಳಿಯುತ್ತದೆ. ಇಕ್ಬಾಲ್ ಸ್ನೆಹಿತನ ಸಹಾಯದಿಂದ ಮಗನನ್ನು ಬಿಡಿಸಿಕೊಂಡು ಬರಲಿಕ್ಕಾಗಿ ಓಡಾಡುತ್ತಾರೆ. ಅಲ್ಲಿ ಲಂಚ ಕೊಟ್ಟು ಮಗನನ್ನು ಹೊರಗೆ ಕರೆತರಲು ಗಾಂಧಿತನ ಬಿಡುವುದಿಲ್ಲ. ಗಾಂಧೀಜಿ ಆಶಯ ಹಿಂದೂ-ಮುಸ್ಲಿಂ ಭಾವೈಕ್ಯದಿಂದ ಬದುಕಬೇಕೆಂಬುದಾಗಿತ್ತು. ಇಕ್ಬಾಲ್ ಗೋಡ್ಸೆ ಪಾತ್ರ ಮಾಡಲು ಸಾಧ್ಯವಾಗುವುದಿಲ್ಲ. ಇದು ಆಧುನಿಕವಾಗಿ ಗಾಂಧೀಜಿಯನ್ನು ಅಪ್ಪಟವಾಗಿ ಅಳವಡಿಸಿಕೊಂಡವರ ಸಂಕಷ್ಟವೇ ಆಗಿದೆ.
ಆದರೆ ಆನಂದರಾಯರೊಳಗೆ ಚಿಗುರುವ ಚೈತನ್ಯವೇ ಬೇರೆ..! ಅದು ಮನುಷ್ಯ ಪ್ರೀತಿಯ, ಸಹಜವಾದ ಪ್ರಕೃತಿ ಪ್ರೀತಿಯ, ಅದಮ್ಯವಾದ ಬದುಕಿನ ಕಾಳಜಿಗಳನ್ನು ತೆರೆದಿಟ್ಟು ತೋರುವ ಸರಳ ಗಾಂಧಿತನದ ಚಿತ್ರವೇ ಆದರೂ ಯಾವ ಕುಯುಕ್ತಿಯೂ ಇಲ್ಲದ ಪಾತ್ರವಾಗಿರುವ ಆನಂದರಾಯರು ಕಡೆಯ ಗಳಿಗೆಯಲ್ಲಿ ಮಗನ ಕುರಿತಾದ ವ್ಯಾಮೋಹವೊಂದರಿಂದ ಭ್ರಷ್ಟಾಚಾರವನ್ನು ಬೆಂಬಲಿಸುವಂತೆ ಮಾಡಿದಾಗ – ಮೂಲಕತೆಯ ಸಹಜವ್ಯಂಗ್ಯ ಮತ್ತೆ ಕಾಣುತ್ತದೆ. ಇಲ್ಲಿ ಗಾಂಧಿಯೆಂಬ ಸತ್ಯದ ಎಳೆಯನ್ನು ಎಷ್ಟು ಸರಳವಾಗಿ ನೈಜವಾದ ಬದುಕಿನ ಆಶಯಗಳಲ್ಲಿ ಸಿನೆಮಾ ನಿರೂಪಿಸುತ್ತದೆ ಅಂದ್ರೆ ಚಿತ್ರದಿಂದ ಆಚೆ ಬಂದರೂ ಆ ರಾಯರು, ಡೈರೆಕ್ಟರ್ರು, ಆ ಆಫೀಸರ್ರೂ, ಆ ಮಗ, ಆ ಸೊಸೆ, ಆ ಆಮೆ, ಆ ಮೊಮ್ಮಗ, ಆ ಪ್ರಸಿದ್ಧ ನಟಿ,,, ಎಲ್ಲ ಪಾತ್ರಗಳನ್ನು ಒಂದು ಚೌಕಟ್ಟಿನಲ್ಲಿ ಬಿಗಿಹಿಡಿದು ನಿಲ್ಲಿಸಿದ್ದರೂ.. ಆ ಬಿಗುಪಿನ ಬಂಧದಿಂದ ಹೊರಗೇ ಉಳಿದುಬಿಡುವ ಇಕ್ಬಾಲ್ ಬಹಳ ಕಾಡಿಬಿಡುತ್ತಾನೆ. ನೋಡುಗನನ್ನು ಕೆಣಕುತ್ತಲೇ ಆನಂದರಾಯರ ಮನಸ್ಸನ್ನು ಕಲಕಿಬಿಡುತ್ತಾನೆ ಇಕ್ಬಾಲ್..
ಐಸಾಕ್ ಥಾಮಸ್ ಕೂಟುಪಲ್ಲಿಯವರ ಹಿನ್ನೆಲೆ ಸಂಗೀತ ಕತೆಯನ್ನು ಚಾಚೂತಪ್ಪದೆ ಅನುಕರಿಸಿದೆ ಎಂದೇ ಹೇಳಬೇಕು, ದೃಶ್ಯ ಸಂಯೋಜನೆಯಲ್ಲಿ ವಿಶೇಷತೆ ಇದೆ. ಜನ ನಿಬಿಡವಾದ ದೃಶ್ಯಗಳು, ರಾಜ್ಯವ್ಯಾಪಿಯ ಸರಳ ಭಾಷೆ, ವೇಷಭೂಷಣ ಎಲ್ಲವೂ ಬೆಂಗಳೂರು ಕೇಂದ್ರಿತವಾಗಿವೆ. ಗಾಂಧೀಜಿಯ ಸರಳತೆ ಇವತ್ತಿನ ದುನಿಯಾದಲ್ಲಿ ಎಷ್ಟು ಸುಲಭ ಅಂದುಕೊಳ್ಳುತ್ತೇವೋ ಅಷ್ಟೆ ಕಷ್ಟದ ಕೆಲಸವೂ ಅನಿಸಿಬಿಡುತ್ತದೆ. ಮಾರ್ಮಿಕವಾದ ಕಥನಾಂಶ ಸಿನೆಮಾ ಆಗುವಾಗ ತನ್ನ ವಿನ್ಯಾಸವನ್ನು ತಾನೇ ನಿರ್ಮಿಸಿಕೊಳ್ಳುತ್ತದೆ ಅನ್ನುವುದಕ್ಕೆ ಕೂರ್ಮಾವತಾರ ಮಾದರಿಯಾಗುವ ಚಿತ್ರ.
ಉತ್ತಮವಾದ ಚಿತ್ರ ವಿಮರ್ಶೆ…ಈ ಚಿತ್ರವನ್ನು ನಾನು ಧಾರವಾಡದ ಸಾಹಿತ್ಯ ಸಂಭ್ರಮದಲ್ಲಿ ಪ್ರದರ್ಶನಗೊಂಡಾಗ ನೋಡಿದ್ದೆ. ಅಲ್ಲಿಂದ ನನ್ನ ಮನದಲ್ಲಿ ಕೆಲವು ಸಂದೇಹಗಳು ಕಾಡುತ್ತಿದ್ದವು. ಇಂದು ಮಹಾದೇವಣ್ಣನವರ ಈ ವಿಮರ್ಶಾ ಲೇಖನವನ್ನು ಓದಿದ ನಂತರ ನಿವಾರಣೆಯಾದವು. ಲೇಖಕರಿಗೂ ಮತ್ತು ಪ್ರಕಟಿಸಿದ ಪಂಜು ಬಳಗದ ಸ್ನೇಹಿತರಿಗೆ ಧನ್ಯವಾದಗಳು…ಶುಭದಿನ !
Nimma lekana odhi cinima nodidanthe ayithu danyavadagallu shubhavagali
ಚೆನ್ನಾಗಿದೆ.
Good One!!
ಚಿತ್ರ ವಿಮರ್ಶೆ ಚೆನ್ನಾಗಿದೆ ಸರ್.
ಚಿತ್ರ ನೋಡಲ ಪ್ರೇರೇಪಿತು.
naanu nodabeku anta tumba dinadina ashista idde… khanditha nodteeni… chennagi barediddeera sir .. dhanyavaadagaLu
ಮಹಾದೇವ ರವರೆ, ಕನ್ನಡದಲ್ಲಿ ಇದುವರೆಗೆ, ಕನ್ನಡ ಚಲನಚಿತ್ರದ ಬಗ್ಗೆ ಇಷ್ಟೊಂದು ಉತ್ತಮ ವಿಮರ್ಷೆ(ವಿಮರ್ಶೆ) ಓದಿಲ್ಲ.
ಉತ್ತಮ ವಿಮರ್ಷೆ ಹಾಗೆಯೆ ಸಿನಿಮಾ ಕತೆ ಒಂದರ ಪೂರ್ಣ ಸಾರಂಶವು ದೊರೆಯಿತು
athyuttama chitra vimarshe…….. tumbaa ishtavaaytu Mahadev avre…..
chitra noDidashte santoshavaagide…..
Very effective writing….