ಏನು ಮಾಡೋದು ಬದುಕಿನಲ್ಲಿ ಖುಷಿಗಿಂತ ಜಾಸ್ತಿ ನೋವು, ಕಷ್ಟಗಳೇ ಇವೆ. ಯಾರಾದ್ರೂ ಒಬ್ಬರಾದ್ರೂ ಪೂರ್ತಿ ಖುಷಿ ಇಂದ ಇರೋ ವ್ಯಕ್ತಿ ಇದ್ದಾರಾ? ಅನ್ನೋ ಪ್ರಶ್ನೆ ನಮ್ನನ್ನು ಕಾಡತ್ತೆ, ಆದ್ರೂ ಜಗತ್ತಲ್ಲಿ ಇರೋ ಎಲ್ರಿಗಿಂತಲೂ ಹೆಚ್ಚಿನ ಕಷ್ಟ ನಮಗೆ ಅಂತ ನಾವೆಲ್ಲ ಅಂದುಕೊಳ್ತೀವಿ. ಯಾಕೆಂದರೆ ನಮ್ಮ ಮುಂದೆ ಇರೋ ಖುಶಿಗಳನ್ನು ಅನುಭವಿಸೋ ಕಲೆ ನಮಗೆ ಗೊತ್ತಿರೋದಿಲ್ಲ. ಅದೇ ಸಮಸ್ಯೆ. ಆ ಕ್ಷಣವನ್ನು ಹಾಗೆ ಅನುಭವಿಸಿ ಬಿಡಬೇಕು. ಕಳೆದುಹೋದ ದಿನಗಳನ್ನು ಮೆಲುಕು ಹಾಕಬೇಕು, ಆದ್ರೆ ಕಂಪೇರೆ ಮಾಡಬಾರದು. ಚಿಕ್ಕವರಿದ್ದಾಗ ಎಷ್ಟು ಚನ್ನಾಗಿತ್ತು ಜೀವನ. ಆರಾಮಾಗಿ ತಿಂದು, ಉಂಡು ಓಡಾಡ್ತಾ ಇದ್ವಿ ಅಯ್ಯೋ ಈಗ ಗೋಳು ಸ್ವಾಮಿ. ಅಂತ ಪರದಾಡ್ತಿವಿ. ಸತ್ಯ ಬಾಲ್ಯದ ಜೀವನ ಸುಖಮಯ. ಹಾಗೆ ಅಂತ ಈಗಲೂ ತಿಂದು, ಉಂಡು ಓಡಾಡಿದ್ರೆ ಬದುಕಿಗೆ ಅರ್ಥ ಏನಿರತ್ತೆ?
ಒಬ್ಬ ಬರಹಗಾರರು ಬರೆದಿದ್ದಾರೆ ತಲೆ ನೋವನ್ನು ಸಹ ಆ ಕ್ಷಣಕ್ಕೆ ಎಂಜಾಯ್ ಮಾಡಬೇಕು ಅಂತ. ನಿಜಕ್ಕೂ ಎಷ್ಟು ಉತ್ತಮ ವಿಚಾರ. ಬರವಣಿಗೆ ನಮ್ಮ ಭಾವನೆಗೆ ಬೆಳಕು ಚಲ್ಲುತ್ತದೆ. ಆದೇ ಓದುವುದು ಬದುಕಿನ ದಿಕ್ಕನ್ನೇ ಬದಲಾಯಿಸುತ್ತದೆ.
ಫಸ್ಟ್ ಟೈಮ್ ದಾವಣಗೆರೆ ಗೆ ಹೋದಾಗ ಬೆಣ್ಣೆ ದೋಸೆ ತಿಂದಿದ್ವಿ. ಏನ್ ಸಖತ್ ಟೇಸ್ಟ್ ಇತ್ತು. ಇಷ್ಟು ವರ್ಷ ಆದ್ರೂ ಮತ್ತೆ ಆ ಟೇಸ್ಟ್ ಸಿಗ್ತಿಲ್ಲ ನೋಡಿ. ಹೀಗೆ ಹೇಳ್ತ ಹೇಳ್ತ ಆ ದೋಸೆ ನೆನಪು ಮಾಡಿಕೊಳ್ತಾ ಈಗ ತಿಂತ ಇರುವ ದೋಸೆ ಖುಷಿನ ಅನುಭವಿಸೋದೇ ಮರೆತು ಬಿಡ್ತಿವಿ. ಆ ವಿಷಯದಲ್ಲಿ ಮನಸು ಒಂದು ಅತೃಪ್ತತೆ ಹೊಂದಿ ಬಿಡುತ್ತದೆ. ಬೇರೆ ಯಾವ ದೋಸೆ ರುಚಿಸಲ್ಲ. ಕೊನೆಗೆ ಅದೇ ಜಾಗಕ್ಕೆ, ಅದೇ ಹೋಟೆಲ್ ಗೆ ಹೋಗಿ ಅದೇ ದೋಸೆ ಆರ್ಡರ್ ಮಾಡಿ ತಿನ್ನೋವಾಗ್ಲೂ ಮನಸು. ಅಯ್ಯೋ ಏನೇಹೇಳಿ ಆವಾಗಿನ ಟೇಸ್ಟ್ ಇಲ್ಲ ನೋಡಿ ಈಗ. ಮತ್ತದೇ ರಾಗ. ಹಾಗಾದ್ರೆ ನಿಜಕ್ಕೂ ಆ ರುಚಿ ವರ್ಷಗಳವರೆಗೂ ನಮ್ಮಲ್ಲಿ ಹಾಗೆ ಉಳಿದಿರುತ್ತದೆ ಅಂತೀರಾ? ಖಂಡಿತ ಇಲ್ಲ. ಅದು ನಮ್ಮ ಮೈಂಡ್ಸೆಟ್. ಅದು ಆ ರುಚಿಯ ತಪ್ಪಲ್ಲ, ನಮ್ಮ ಅತೃಪ್ತ ಮನಸ್ಥಿತಿಯ ತಪ್ಪು.
ಹೊಸ ಜಾಗದಲ್ಲಿ ಕೆಲಸಕ್ಕೆ ಸೇರಿದಾಗ ಹಳೆ ಆಫೀಸ್ ನಾ ನೆನಪು. ಅಲ್ಲಿ ಎಲ್ಲರು ಎಷ್ಟು ಚನ್ನಾಗಿ ಎಂಜಾಯ್ ಮಾಡ್ತಾ ಇದ್ವಿ. ಫ್ರೀ ಟೈಮ್ ಅಲ್ಲಿ ಹರಟೆ ಹೊಡಿತಾಇದ್ವಿ. ತುಂಬಾ ಚನ್ನಾಗಿತ್ತು. ಇಲ್ಲಿ ಸಿಕ್ಕಾಪಟ್ಟೆ ಕೆಲಸದ ಒತ್ತಡ. ಬೇರೆ ಯಾವುದಕ್ಕೂ ಸಮಯಾನೇ ಸಿಗೋದಿಲ್ಲ ಅಂತ ಗೋಳಾಡ್ತಿವಿ. ಸಮಸ್ಯೆ ಎಲ್ಲ ಕಡೆ ಇರುತ್ತದೆ. ಅದು ಚನ್ನಾಗಿತ್ತು ಆದ್ರೆ ಅಲ್ಲೂ ಏನೋ ಸಣ್ಣ ಸಮಸ್ಯೆ ಇತ್ತು ಅನ್ನೋ ಕಾರಣಕ್ಕೆ ತಾನೇ ನಾವು ಅಲ್ಲಿ ಬಿಟ್ಟು ಇಲ್ಲಿ ಬಂದದ್ದು. ಈ ಕ್ಷಣವನ್ನು ಅನುಭವಿಸೋಣ. ಸಮಯಾ ವ್ಯರ್ಥ ಆಗ್ತಾ ಇಲ್ಲ. ಹೊಸ ಹೊಸ ವಿಷಯಗಳನ್ನು ಕಳೆಯೋಕೆ ಸಿಗ್ತಿದೆ. ಎಷ್ಟು ಹೆವಿ ವರ್ಕ್ ಈಸಿಆಗಿ ಮಾಡೋ ಸಾಮರ್ಥ್ಯ ಬಂದಿದೆ ಅಂತ ಮನಸ್ಫೂರ್ತಿಯಾಗಿ ಖುಷಿ ಪಡೋಣ.
ಈ ಜಾಗದಲ್ಲಿ ಮಾತ್ರ ನಮ್ಮ ನೆಮ್ಮದಿ ಇದೆ. ಈ ವ್ಯಕ್ತಿ ಜೊತೆ ಮಾತ್ರ ನಮಗೆ ನಮಗೆ ಖುಷಿ ಸಿಗತ್ತೆ. ಇದೆ ತರಹದ ತಿನಿಸು ನಮಗೆ ಇಷ್ಟ ಆಗತ್ತೆ, ಇವೆಲ್ಲ ನಮ್ಮ ಮೈಂಡ್ ಸೆಟ್ ಅಷ್ಟೇ. ಅದನ್ನೆಲ್ಲ ಕೊಡವಿ ಆಚೆ ಬಂದು ಆ ಕ್ಷಣಗಳನ್ನು ಸಂಭ್ರಮಿಸೋದು ಕಲೆತು ಬಿಟ್ರೆ ಪ್ರತಿ ತುತ್ತು, ಪ್ರತಿ ವಸ್ತು, ವ್ಯಕ್ತಿ, ಎಲ್ಲರಲ್ಲೂ ಖುಷಿ ಕಾಣಿಸುತ್ತದೆ. ಯಾವುದೊ ಒಂದೇ ರುಚಿಗೆ, ನೆನಪಿಗೆ ಒಗ್ಗಿಕೊಂಡು ಜಿಡ್ಡು ಹಿಡಿದಿರುವ ಮನಸು ಸ್ವಚ್ಛಂದವಾಗಿ ಹಾರಲು ಶುರುವಾಗುತ್ತದೆ. ಆಗ ಖುಷಿಗೆ ಕಾರಣ ಹುಡುಕಬೇಕಾಗುವದಿಲ್ಲ. ಎಡವಿ ಬಿದ್ದಾಗ ಕೂಡ ಸಂಭ್ರಮಿಸಿ ಬಿಡಬಹುದು. ವಾಹ್ ಎಷ್ಟು ಚನ್ನಾಗಿ ಬಿದ್ದೆ ಅಂತ. ಪದೇ ಪದೇ ಬಿಳೋಕಾಗತ್ತಾ? ಯವಾಗ್ಲೋ ಒಮ್ಮೆ ಬಿದ್ದಾಗ ನಕ್ಕುಬಿಡೋಣ. ಸಣ್ಣ ಗಾಯವನ್ನ ಸಹಿಸಿ ಬಿಡೋಣ. ಹಾಗಂತ ಇವೆಲ್ಲ ಓದಿದ ಕೂಡಲೇ ಅಳವಡಿಸಿಕೊಳ್ಳೋಕೆ ಆಗಲ್ಲ. ಹಾಗೆ ಬುದ್ಧಿ ಮಾತು ಹೇಳೋರಿಲ್ಲ ತುಂಬಾ ಜಾಣರು ಅಂತ ಅಲ್ಲ. ಸಮಯ ಎಲ್ಲ ಪಾಠ ಕಲಿಸತ್ತೆ. ಆದ್ರೆ ಅದು ಏಟು ಕೊಟ್ಟು ಪಾಠ ಕಳಿಸೋ ಮುಂಚೆ ನಾವೇ ಅರ್ಥ ಮಾಡಿಕೊಂಡ್ರೆ ಒಂದೆರೆಡು ಪೆಟ್ಟು ಕಮ್ಮಿ ತಿನ್ನಬಹುದು.
ಹಾಗಂತ ಜೀವನದಲ್ಲಿ ಬೀಳೋ ಪೆಟ್ಟಿಗೂ ಭಯ ಪಡೋದು ಬೇಡ. ಇವತ್ತು ಬೀಳೋ ಈ ಪೆಟ್ಟು ಮುಂದೆ ನಮ್ಮ ಉನ್ನತಿಗೆ ದಾರಿ ಅಂತ ಖುಷಿಯಾಗಿ ಬದುಕನ್ನು ಸಂಭ್ರಮಿಸೋಣ.. ಏನಂತೀರಾ???
ನೋಡಿ ಬದುಕನ್ನು ಸಂಭ್ರಮಿಸೋಣ ಅಂದುಕೊಳ್ಳುತ್ತಿರುವಾಗಲೇ ಯುಗಾದಿ ಬಂದುಬಿಟ್ಟಿದೆ. ನಮಗೆಲ್ಲಾ ನೆನಪಿರೋ ಹಾಗೆ ಯುಗ ಯುಗಾದಿ ಕಳೆದರು ಯುಗಾದಿ ಮರಳಿ ಬರುತಿದೆ. ಹೊಸ ವರುಷಕೆ, ಹೊಸ ಹರುಷವ, ಹೊಸತು ಹೊಸತು ತರುತಿದೆ.
ಬೆಳಿಗ್ಗೆದ್ದು ಬಾಗಿಲಿಗೆ ತೋರಣ, ಅಂದದ ರಂಗವಲ್ಲಿ, ಎಣ್ಣೆ ಸ್ನಾನ, ಹೊಸಬಟ್ಟೆ. ಮನೆಯವರೆಲ್ಲ ಸೇರಿ ದೇವರ ಪೂಜೆ ಮಾಡಿ, ರುಚಿ ರುಚಿಯಾದ ಅಡುಗೆ ಮಾಡಿ ಸಂಭ್ರಮದಿಂದ ಆಚರಿಸುವ ಹೊಸ ವರ್ಷದ ಹಬ್ಬ ಯುಗಾದಿ.
ಆದರೆ ಈ ವರುಷ ದೇಶದ ತುಂಬಾ ಕರಾಳ ಛಾಯೆ. ಎಲ್ಲೆಲ್ಲೂ ಕೊರೊನ ಭೀತಿ. ಸಂಭ್ರಮಿಸೋ ಮನಸು ಇಲ್ಲ. ತಂದೆ ತಾಯಿ ಒಂದು ಊರಲ್ಲಿ. ಮಕ್ಕಳು ಒಂದು ಊರಲ್ಲಿ. ಎಲ್ಲಿದೆ ಹಬ್ಬದ ಸಂಭ್ರಮ? ಹೊಸ ಬಟ್ಟೆ, ಮತ್ತಿತರ ವಸ್ತುಗಳು ದೊರಕುತ್ತಿಲ್ಲ. ಇರುವುದರಲ್ಲೇ ಸಂಭ್ರಮಿಸಲು ಮನಸ್ಥಿತಿಗಳು ಸಹಜವಾಗಿಲ್ಲ. ಧರೆಯು ಹತ್ತಿ ಉರಿಯುವಾಗ ಬದುಕಲೆಲ್ಲಿ ಓಡುವೆ ಅನ್ನೋ ಹಾಗೆ ಎಲ್ಲ ಕಡೆ ಸಾವು ನೋವುಗಳಿಂದ ಜಗತ್ತು ತಲ್ಲಣಗೊಂಡಿದೆ.
ಆದರೂ ಹಬ್ಬವನ್ನು ಆಚರಿಸೋಣ. ನೋವಲ್ಲು ಒಂದು ಕ್ಷಣ ನಕ್ಕು ಬಿಡೋಣ. ಎಲ್ಲವು ಮೀರಿದರು ಕಾಣದ ಕೈ ಒಂದು ನಮ್ಮ ರಕ್ಷಣೆಗೆ ಬಂದೆ ಬರುವುದು ಅನ್ನುವುದನ್ನು ನಂಬೋಣ.
ಹೀಗೊಂದು ವಿಭಿನ್ನ ರೀತಿಯಲ್ಲಿ ಆಚರಿಸೋಣ ಈ ವರ್ಷದ ಈ ಹಬ್ಬವನ್ನು. ನಮಗಾಗಿ, ನಮ್ಮ ಕುಟುಂಬಕ್ಕಾಗಿ ಮಾತ್ರವಲ್ಲದೆ ಪೂರ್ಣ ವಿಶ್ವದ ಮಾನವರ ಒಳಿತಿಗಾಗಿ ಪ್ರಾರ್ಥಿಸೋಣ. ನಮ್ಮವರು ದೂರವಿದ್ದರೇನು ಮನದಲ್ಲಿ ನೆನಪಿಸಿಕೊಂಡು ಹಬ್ಬವನ್ನು ಆಚರಿಸೋಣ. ಹೊಸಬಟ್ಟೆ ಮುಂತಾದ ಖರೀದಿಯಲ್ಲಿ ಉಳಿದ ಹಣವನ್ನು ನಮ್ಮ ಮನೆ ಕೆಲಸದವರಿಗೆ ಕೊಟ್ಟು ಸಂಬಳ ಸಹಿತ ರಜೆ ಕೊಡೋಣ, ನಮ್ಮ ಹಾಗು ಅವರ ಆರೋಗ್ಯದ ಹಿತ ದೃಷ್ಟಿ ಇಂದ. ಮತ್ತೆ ಇನ್ನು ಇತರರು ಈಗಿನ ಪರಿಸ್ಥಿತಿಯಲ್ಲಿ ದುಡಿಮೆ ಇಲ್ಲದೆ ಕಂಗಾಲಾಗಿರುವ ಅನೇಕರು ಇದ್ದಾರೆ. ಅವರಲ್ಲಿ ನಮ್ಮ ಮುಂದೆ ಇರುವ ಕೆಲವರಿಗೆ ನಮ್ಮ ಕೈಲಾದದನ್ನು ಕೊಟ್ಟು ಅವರ ಖುಷಿಯಲ್ಲಿ ನಮ್ಮ ಹಬ್ಬದ ಸಂಭ್ರಮವನ್ನು ನೋಡೋಣ.
ಹಲವು ದೇಶಗಳಲ್ಲಿ ಕೀಟಗಳಂತೆ ಸಾಯುತ್ತಿದ್ದಾರೆ ಮನುಷ್ಯರು. ಓ.. ದೇವರೇ ನಮ್ಮ ದೇಶಕ್ಕೆ ಆ ಪರಿಸ್ಥಿತಿ ಬರುವುದು ಬೇಡ ಎಂದು ಕೈ ಜೋಡಿಸಿ ಪ್ರಾರ್ಥಿಸೋಣ. ಆಸ್ತಿಕರು, ನಾಸ್ತಿಕರು ಎಲ್ಲರು ಸೇರಿ ಕಾಣದ ಕೈ ನಮ್ಮನ್ನು ಖಂಡಿತ ರಕ್ಷಿಸುವುದು ಎಂದು ನಂಬೋಣ. ಕೈ ಜೋಡಿಸಿ ಪ್ರಾರ್ಥಿಸೋಣ.
ಹೊಸ ವರುಷ, ಹೊಸ ಚೇತನ, ಹೊಸ ಮನ್ವಂತರ ಮೂಡಿಸಲಿ. ಕೊರೊನ ಎಂಬ ಕೆನ್ನಾಲಿಗೆಇಂದ ನಮ್ಮ ಹಿಂದುಸ್ಥಾನವನ್ನು ರಕ್ಷಿಸಲು ನಮ್ಮ ಕೈಲಾದ ಸಹಾಯ ಮಾಡೋಣ. ಎಲ್ಲಕಿಂತ ಮಿಗಿಲಾಗಿ ಮನೆಯಲ್ಲಿ ಇರೋಣ. ಅದೇ ನಿಜವಾದ ಆಚರಣೆ.
ಸ್ವಸ್ಥ, ಸುರಕ್ಷಿತ ಹೊಸ ವರ್ಷ ನಮ್ಮದಾಗಲಿ ಎಂದು ಹಾರೈಸೋಣ.
ಎಲ್ಲರಿಗು ಮತ್ತೊಮ್ಮೆ ಯುಗಾದಿ ಹಬ್ಬದ ಶುಭಾಶಯಗಳು.
ಇಂತಿ ನಿಮ್ಮ ಮನೆ ಮಗಳು
-ಭಾರ್ಗವಿ ಜೋಶಿ
ಹೌದು, ಇರುವುದೆಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ ಎಂಬಂತೆ, ಬದುಕಿನುದ್ದಕ್ಕೂ ನಾವು ಗೊಣಗುತ್ತಲೇ ಇರ್ತೀವಿ. ಹಳೆಯದನ್ನು ಕಳಚಿಕೊಂಡಾಗ ಮಾತ್ರ ಹೊಸ ಚಿಗುರಿಗೆ ಸ್ಥಾನ ಎಂಬುದನ್ನು ಮರೆತು ಕಳೆದುಹೋದುದರ ಬಗೆಗೆ ಕೊರಗುತ್ತಾ; ಹೊಸತಿನ ಸಂತೋಷವನ್ನು ಅನುಭವಿಸದೆ ಬಿಟ್ಟ ನಂತರ ಇದನ್ನೂ ನೆನೆದು ಪರಿತಪಿಸುತ್ತೇವೆ. ತಮ್ಮ ಲೇಖನ ಇಂತಹ ಮನಸ್ಥಿತಿಯವರನ್ನು ಬದಲಾಯಿಸುತ್ತದೆ. ಯುಗಾದಿ ಸೋಂಕಿನಿಂದ ಕೂಡಿದೆ ಆದರೂ ಏನೋ ಹೊಸತನ್ನು ಸೃಷ್ಟಿಸಲು ಜಗತ್ತು ನಿರ್ಣಯಿಸಿದಂತಿದೆ. ಅಭಿನಂದನೆಗಳು ರಿ