ಅಮರ್ ದೀಪ್ ಅಂಕಣ

ಖಾಜಾ ಪಾಷಾನ ನಸೀಬು ಮತ್ತು ಗುಡ್ಡದ ಮೇಲಿನ ಗೆಸ್ಟ್ ಹೌಸ್: ಅಮರ್ ದೀಪ್ ಪಿ.ಎಸ್.

ಅಂಗೈ ನೋಡಿಕೊಂಡೆ.  ವಾಹ್ ಮೇರೆ ನಸೀಬ್?  ಇದೇ ಡಿಶ್ ಕೇಬಲ್ ನನ್ನ ಜೀವನದ ಹೈಸಿಯತ್  ಬದಲಾಯಿಸಿಬಿಡುತ್ತಾ ? ಈಗ ನನ್ನ ಕೈಯಲ್ಲಿ ಹರಿದಾಡುತ್ತಿರುವ ದುಡ್ಡು ನೋಡಿದರೆ ಹಾಗೆ ಅನ್ನಿಸುತ್ತೆ. ಮುಂದೆ ಗೊತ್ತಿಲ್ಲ.  ಆದರೆ ಇದೇ ಸ್ಪೀಡಲ್ಲಿ ನಾನೇನಾದರೂ ದುಡ್ಡು ಮಾಡಿದರೆ ಒಂದಿನ ನಾನು ನನ್ನ ಸ್ವಂತಕ್ಕೆ ಮಕಾನ್ ಮಾಡ್ಕೊಬೋದು, ಮತ್ತು  ಜೀರ್ಣವಾಗಿಸಿ ಹೂ….. ಮತ್ತೇನಿದೆ ನಿನ್ನ ತಾಕತ್ತಿಗೆ ನನ್ನ ಚೀಲ ತುಂಬಿಸಲು ಎನ್ನುವಂತೆ ಸವುಂಡೆ ಮಾಡದೇ ಸಂಕಟ ನೀಡುವ ಪೇಟ್ ಕಾ ಸವಾಲ್ ಹಮೇಶಾ  ಇದ್ದೇ ಇರುತ್ತೆ. 

ಈಗ ಬಂದಿರುವ ಡಿಶ್ ಕೇಬಲ್ ದಂಧೆ ಎನ್ನುವುದು ಮನೆ ಮನೆಗಳಲ್ಲಿನ  ಹೊಸ ಹೊಸ ಟೀವಿಗಳು, ತಟಗು ಜಾಗದಲ್ಲೇ "ನಮ್ಮನೆಲೂ ಟೀವಿ ಇದೆ" ಎಂದು ಬೀಗುವ ಜನರ ಹುಮ್ಮಸ್ಸೋ ಹುಂಬುತನವೋ ನನ್ನ ಕೇಬಲ್ ಎಳೆದು ಜೀವನ ಸಾಗಿಸುವ ನನ್ನಂಥವನ ಬದುಕನ್ನು ಒಂದು ದಂಡೆಗೆ ಹಚ್ಚಿಬಿಡುತ್ತೆ ಅಂದುಕೊಂಡಿದ್ದೇನು? ಆಗಿದ್ದೇನು? ಯಾವುದು ತಾಳೆಯಾಗುತ್ತಿಲ್ಲ. 

ಮೊದ ಮೊದಲು ಖಾಜಾ ಪಾಷ ಎನ್ನುವ ಹೆಸರು ನನ್ನ ಮನೆಗೆ ಒಂದಿಷ್ಟು ಪರಿಚಯಸ್ಥರಿಗೆ ಮಾತ್ರ ಗೊತ್ತಿದ್ದ ಸಮಯದಲ್ಲಿ ಈ ಕೇಬಲ್ ಎನ್ನುವುದು ನನ್ನ ಒಂದು ಏರಿಯಾದ ಮನೆ ಮನೆಯಲ್ಲೂ ಗೊತ್ತು ಮಾಡಿತ್ತು.  ಡಿಶ್ ಧಂಧೆಗೆ ಕೈ ಹಾಕಿದ ಮನುಷ್ಯ ನನ್ನನ್ನು ಬರೀ ಕೇಬಲ್ ಎಳೆದು ಕನೆಕ್ಷನ್ ಕೊಟ್ಟು ತಿಂಗಳಿಗೆ ಬಾಡಿಗೆ ವಸೂಲಿ ಮಾಡಲು ಮಾತ್ರವೇ ಸಂಬಳಕ್ಕೆ ದುಡಿಸಿಕೊಳ್ಳುತ್ತಿದ್ದರೂ ಅದೆಷ್ಟು ದುಡ್ಡು ನನ್ನ ಕೈಯಲ್ಲಿ ಹರಿದಾಡುತ್ತಿತ್ತು?  ಏನ್ ಮಜಾ ಅಂತೀರಿ? ಮನೆಗೆ ತಂದು ಹಾಕಲು ಹೊರಗೆ "ದವಾ" ಹಾಕಿಕೊಂಡು ಗಂಟೆಗಟ್ಟಲೇ ನಾಲಗೆ ಹರಿಬಿಟ್ಟು ಸಂತೋಷಪಡಲು?  ಕ್ಯಾ ಜಮಾನಾ ಥಾ ಮೇರೆ ನಸೀಬ್ ಮೇ …. ಬಹುತ್ ಖುಷ್ ಥಾ…. 

ಬ್ಲಾಕ್ ಅಂಡ್ ವೈಟ್ ಟೀವಿ ಇದ್ದವರದು ಇದ್ದಷ್ಟೇ ಸಂತೋಷ… ಕಲರ್ ಟೀವಿ ಇದ್ದವರದು ಆಹಾ  ಅದೇನು  ಮರ್ಯಾದೆ? ದೊಡ್ಡವರ, ಇದ್ದಂಥವರ ಡಿಶ್ ಕನೆಕ್ಷನ್ ನಲ್ಲಿ ತೊಂದರೆ ಬಂದ್ರೆ ಸಾಕು, "ಲೇ ಖಾಜಾ ಆರೇ ದೇಖ್ ಕ್ಯಾ ಹುವಾ ಹೇ ಇಸ್ ಡಿಬ್ಬೆ ಕೊ?" ಅಂತೇಳಿ ಕಳಿಸಿದರೆ ಫಟಾ ಫಟ್ ರಿಪೇರಿ ಮಾಡ್ಬಿಟ್ಟಿ ಒಂದ್ ದಸ್ ಬೀಸ್ ರುಪೆ ಮಂಗ್ಲೆ ಕೋ ನಿಕಲ್ ಪಡೆ ತೋ ಉಸ್ ದಿನ್ ಕೆ ಖರ್ಚಾ ನಿಕಲ್ ಜಾತೆ ಥೆ. ಬೇಜಾನ್ ಗಿರಾಕಿ ಗಳು ತಮ್ ತಮ್ ಮನೆಗೆ ಡಿಶ್ ಸಲುವಾಗೇ ಹೊಸ ಟೀವಿಗಳನ್ನು ಖರೀದಿ ಮಾಡಿ ಹಾಕಿಸಿಕೊಳ್ಳಲು ಶುರು ಮಾಡಿದ್ರು.  

ಗಾಂಧೀ ಚೌಕದಲ್ಲಿ ರಾತ್ರಿ ಉಂಡು ಬಂದು ಪಾನ್ ಅಗಿಯುತ್ತಾ ಸಿನೆಮಾ ರಾಜಕೀಯ, ನೇತಾರರ ಬಗ್ಗೆ ಸರೀ ರಾತ್ರಿವರೆಗೆ ನಾಲಗೆ ಹರಕೊಂಡು ಬೆಳ್ ಬೆಳಿಗ್ಗೆ ಎದ್ದು "ನಾನೇನು ಮಾತಾಡಲೇ ಇಲ್ಲ …. ಯಾರ್ ಮಾತಾಡಿದಾರೋ ಗೊತ್ತೇ ಇಲ್ಲ" ಅನ್ನುವ ದೊಡ್ಡ ಮತ್ತು ದಡ್ಡ ಮಂದಿಗೇನು ಕಮ್ಮಿ ಇದ್ದಿಲ್ಲ. ಅದೊಂದು ದಿನ ನಮ್ಮೂ ರಿನ "ದೊಡ್ಡ ಮಂದಿ ಮನೆಯವರು" ಕೇಬಲ್ ಪ್ರಾಬ್ಲಮ್ ಗೆ  ಕರೆಸಿದ್ದರು.   ನಾನು ನನ್ನ ಕೇಬಲ್  ರಿಪೇರಿ ಸಾಮಾನು ಬ್ಯಾಗ್ ನಲ್ಲಿ ತುಂಬಿಕೊಂಡು ಲೂನಾ TFR ಹತ್ತಿ ಹೊರೆಟೆ.  

 "ಲೇ ಖಾಜಾ ನಮ್ ಮನೆ ಡಿಶ್ ಬರವಲ್ದು, ಏನಾಗೇತಿ  ಚೂರು ನೋಡ್ಲಾ"

ಎಲ್ಲಾ ಅಕ್ಕಪಕ್ಕದ ಮನೆ ಕುಂಬಿ ಹತ್ತಿ ಲೈನ್ ಚೆಕ್ಕ್ಕು ಮಾಡಿ "ಧಣಿ, ಇಂಥಾದೊಂದು ಸಾಮಾನು ಅರ್ಜೆಂಟಾಗಿ ಹಾಕಿದ್ರೆ ಎಲ್ಲಾ ಸರಿ ಹೊಕೇತಿ" . 

 "ಎಟ್ಲಾ ಅದು" ?

(ಇದೇ ಚಾನ್ಸು ಅಂದ್ಕಂಡು)

 "ಒಂದೆರೆಡು ಸಾವ್ರ ಆಗ್ಬೋದು, ಅದು ಹುಬ್ಳಿ ಇಲ್ಲಾಂದ್ರೆ ಬೆಂಗಳೂರಿನಲ್ಲಿ ಮಾತ್ರ ಸಿಗೋದು"

"ವಜ್ಜೆ (ದುಬಾರಿ ) ಆತಲಲೇ ರೊಕ್ಕ" ಅಂದ ಧಣಿ . 

"ನಿಮ್ಗೇನ್ ಕಮ್ಮಿ ಧಣಿ ?"

"ಅಮೇಕ್ ಬಾರ್ಲಾ"

 "ಥೂ ಇವತ್ತೇನ್ ಕೈಗೆ ರೊಕ್ಕ ಹತ್ತೋ ಕೋಶಿಶ್ ಖರಾಬ್ ಆತಲಪ್ಪಾ?" ಹಲುಬುತ್ತಲೇ ಹೊರಟೆ. 

ರಾತ್ರಿ ಯಾರತ್ರನೋ ಒಂದೈವತ್ ಪೀಕಿ …. ದವಾ ತಗಂತಿದ್ದೆ…. ಧಣಿ ಮನೆ ಆಳನ್ನು ಕಳಿಸಿ ಕರೆಸಿದ.  "ದವಾ" ಬಿದ್ದೈತಲೇ ಹೊಟ್ಟೆಗೆ, ಧಣಿ ಬೈದ್ರೆ ಹೆಂಗೆ?.".. ಆಳನ್ನು ಕೇಳುತ್ತಲೇ ಹಿಂಬಾಲಿಸಿದೆ. "ಲೇ ಖಾಜಾ, ಅದೆಷ್ಟಲೇ ರೊಕ್ಕ?  ಆ ಸಾಮಾನು ತರಲಿಕ್ಕೆ?   ತಕ್ಕಾ, ಇದು ಇಪ್ಪತ್ ಸಾವ್ರ ಆ ಸಾಮಾನು ತರಕ್ಕೆ ಮತ್ತು ನಿಮ್ ಖರ್ಚಿಗೆ ಮತ್ತಿದು ಕಾರ್ ಬಾಡಿಗೆಗೆ ನಡಿ, ನಮ್ ಮನಿಷ್ಯಾನ  ಕರಕೊಂಡು ಒಂದೆರಡು ದಿನ ಆದರೂ ಪರವಾಗಿಲ್ಲ ತಗಂಡೇ ಬರ್ಬೇಕು.. " ಧಣಿ ಹೇಳುತ್ತಿದ್ದರೆ ನನ್ನ ದವಾ ತನ್ನ ಕೆಲ್ಸ ಮಾಡೋದೇ ನಿಲ್ಸಿತ್ತು.. 

ಸೀದಾ  ಬೆಂಗಳೂರಿಗೆ ಅಂಬಸಡಾರ್ ಕಾರಿನಲ್ಲಿ ಹೊರಟು ಕಡೆಗೂ ಆ ಸಾಮಾನು  ಶಿವಾಜಿನಗರದಲ್ಲಿ ಹುಡುಕಿ ತಗೊಂಡು ಲ್ಯಾಂಡ್ ಲೈನ್ ಗೆ ಫೋನು ಮಾಡಿದೆ.. ಆ ಕಡೆಯಿಂದ ಧಣಿ "ಲೇ ಖಾಜಾ, ಕಾರ್ ಡ್ರೈವರ್ ಗೆ ಹೇಳು, ತೀರ ಸ್ಪೀಡ್ ಆಗಿ ಓಡಿಸಬೇಡಾಂತ.. ನಿಧಾನಕ್ಕೆ ಮಧ್ಯೆ ಊಟ ತಿಂಡಿ ನೋಡ್ಕ್ಯಂಡು ಆರಾಮಾಗಿ ಬರ್ರಿ, ಮರೆತಿದ್ದೆ, ಗಾಡಿ ಏನಾದ್ರೂ ಪಂಚರ್ ಗಿಂಚರ್ ಆಗಿತ್ತಾ?"….  ಅಂದ.   ನಂಗೆ "ಈ ಧಣಿ ಯಾವತ್ತು ಈ ಪಾಟಿ ಕಾಳಜಿ ಮಾಡಿದ್ದಿಲ್ಲ. ನಮ್ ಪುಣ್ಯ ಕೇಬಲ್ ಎಳೆಯೋ ಅಸಾಮಿಗೂ ಕಾರ್ನಲ್ಲಿ ಕೂತು ತಿರುಗೋ ಪುಣ್ಯ ಅಂದ್ಕೊಂಡು " ಏನಿಲ್ಲಾ ಧಣಿ ಎಂದು  ಶಿರಾ ಹತ್ತಿರದ ಧಾಭಾದಲ್ಲಿ  ದವಾ ತಗೊಂಡು ಕಾರ್ನಲ್ಲಿ ನಮ್ಮೂರಿಗೆ ಬಂದಾಗ ರಾತ್ರಿ ಹನ್ನೆರಡು ಗಂಟೆಯಾಗಿತ್ತು. 

ಧಣಿ ಬಂದು ಡ್ರೈವರ್ ಗೆ ಕಾರನ್ನು ಶೆಡ್ ನಲ್ಲಿ ಬಿಡಲು ಹೇಳಿದ. ನಾನು, ದವಾ ಗುರುತು ಪತ್ತೆ ಆದೀತೆಂದು ದೂರದಲ್ಲೇ ನಿಂತಿದ್ದೆ. ಆಗಿಂದಾಗ್ಗೆ ಧಣಿ ನನ್ನನ್ನು ರಟ್ಟೆ ಹಿಡಿದು ಅಲ್ಲೇ ಇರಲು ಸನ್ನೆ ಮಾಡಿದ. ಡ್ರೈವರ್ ಕಾರು ಬಿಟ್ಟು ಕೀಲಿಯನ್ನು ಧಣಿ ಕೈಗಿಟ್ಟು ಹಲ್ಲು ಗಿಂಜಿದ.  ಧಣಿ ಪಂಚೆ ಎತ್ತಿ ಪಟ್ಟಾಪಟ್ಟಿ ಚಡ್ಡಿಯೋಳಗಿಂದ ನೂರರ ಕಟ್ಟೊಂದನ್ನು ಎಣಿಸದೇ ಡ್ರೈವರ್ ತುರುಕಿ "ನಡಿ" ಅಂದ.  ಆ ಕಡೆ ಕತ್ತಲಲ್ಲಿ ಡ್ರೈವರ್ ಮನೆಯ ಕಾಂಪೌಂಡ್ ದಾಟಿದ್ದನ್ನು ಖಾತರಿಪಡಿಸಿಕೊಂಡು ಧಣಿ ಮಗ ಕಾರ್ ಹಿಂದಿನ ಡಿಕ್ಕಿಯನ್ನು ತೆಗೆದ ನೋಡಿ? ಗೋಣಿ  ಚೀಲ ಗಳಲ್ಲಿ ತುಂಬಿಟ್ಟ ಕಂತೆ ಕಂತೆ ನೋಟುಗಳ ಕಟ್ಟುಗಳು ಮತ್ತು ಬಂಗಾರದ ಸಾಮಾನುಗಳು. ನೋಡಿ ದಂಗಾಗಿ ಹೋದೆ. ಯಾ ಅಲ್ಲಾಹ್..   ಬಾಯಿ ಬಿಟ್ಟು ನೋಡುತ್ತಲೇ ನಿಂತಿದ್ದೆ. "ಖಾಜಾ, ತಗಾ, ಅಂದು ಧಣಿ ಕಿಸಿಯೊಳಗೆ ಒಂದಿಷ್ಟು ನೋಟುಗಳನ್ನು ತುರುಕಿದ. ಮತ್ತೆ ದವಾ ನೆನಪಾಯಿತು.. ಕಾರಲ್ಲೇ ಬಿಟ್ಟಿದ್ದ ಒಂದು ಬಾಟಲಿಯನ್ನು ಇಟ್ಟಿದ್ದು ನೆನಪಾಯಿತು. ಧಣಿಗೆ ಹೇಳಿ ದವಾ ತೆಗೆದುಕೊಂಡದ್ದಾಯಿತು. ದಾರಿಯಲ್ಲಿ ಬೀದಿ ನಾಯಿಗಳು ಅಟ್ಟಿಸಿಕೊಂಡು ಬಂದಷ್ಟೇ ವೇಗವಾಗಿ ತಲಪಿದ ಮನೆಯ ಮೂಲೆಯಲ್ಲಿ ತಲೆ ಕೊಟ್ಟು ಒರಗಿದೆ.  ಉಹೂ … ನಿದ್ದೆ ಬರಲೊಲ್ಲದು.  "ಬಡ್ಡಿ ಮಗಂದು ದಾರಿಯಲ್ಲೇ ಗಾಡಿ ಪಂಚರ್ ಆಗಿದ್ದರೆ? ಸ್ಟೆಪ್ನಿ ತೆಗೆಯೋ ನೆಪದಲ್ಲಿ ಡಿಕ್ಕಿ ತೆಗಿಬೋದಿತ್ತಲ್ವಾ? ತೆಗೆದಿದ್ರೆ …. ಅಬ್ಬಾ …. ಎಂಥ ಅವಕಾಶ ತಪ್ಪಿ ಹೊತಲೇ ಖಾಜಾ" ಮನಸ್ಸು ಗೇಲಿ ಮಾಡುತ್ತಿತ್ತು. 

ಆಮೇಲೆ ಗೊತ್ತಾಗಿದ್ದೇನೆಂದರೆ, ಎರಡು ಮೂರು ದಿನದ ಹಿಂದೇನೇ ಧಣಿ ಮನೆ, ಆಸ್ತಿ  ಮೇಲೆ ಯಾರೋ ನಿಗಾ ಇಟ್ಟು ಪತ್ತೆಗೆ ಬರೋದರ ಬಗ್ಗೆ ಅದೆಂಗೋ ತಿಳ್ಕಂಡು ಧಣಿ ಎಲ್ಲಾ ಗಂಟು ಮೂಟೆ ಕಟ್ಟಿ ಕಾರಿನ ಡಿಕ್ಕಿ ಯಲ್ಲಿಟ್ಟು ಮನೆ ಖಾಲಿ ಇಟ್ಬಿಟ್ಟಿದಾನೆ.  ಅದೆಂತದೋ ಇನ್ಕಂ ಟ್ಯಾಕ್ಸ್ ನೋರಂತೆ.  ನಾವ್ ಕಾರ್ ಬಾಡಿಗೆ ಮಾಡ್ಕೊಂಡು ಹೋಗಿದ್ವಲ್ಲಾ? ಆ ದಿನ ಬಂದು ಬರೀ ಕೈಯಲ್ಲಿ ಹೋದರಂತೆ.  ಕ್ಯಾ ಬಾತ್ ಹೈ.  ಧಣಿ ಎಂಥ ಖತರ್ನಾಕ್ ಐಡ್ಯಾ  ಮಾಡಿದ್ದ ನೋಡಿ?

ಅದಾಗಿ ವರ್ಷಗಳು ಕಳೆದವು.  ಇನ್ನು ಡಿಶ್ ಹವಾ ಹಂಗೆ ಇತ್ತು.. ಆದರೆ ಕ್ಯಾ ಮಾಲೂಮ್? ದುಷ್ಮನಿ ವ್ಯವಹಾರ ಇದು, ಆಗಲೇ  ಕೇಬಲ್ ದಂಧೆ ಮೇ ಬಹುತ್ ಲೋಗ್ ಹಾಥ್ ಮಿಲಾ ದಿಯೇ ಥೆ.  ನಮ್ ಕೈಗೆ ಸಿಗ್ತಾ ಇದ್ದ ಪುಡಿಗಾಸು ಕಮ್ಮಿ ಆಗಿತ್ತು.  ಅಂತ ಹೊತ್ತಲ್ಲೇ  ಅಬ್ಬಜಾನ್  ಅಲ್ಲಾಹ್ ಕೊ ಪ್ಯಾರೇ ಹೋಗಯೇ(ತೀರಿ ಹೋದರು ).  ಏನಾದ್ರೂ ದಂಧಾ ಶುರು ಕರ್ನಾ ಬೋಲೇ  ತೋ ಹಾಥ್ ಮೇ ಪೈಸಾ ನಹಿ. ಬೇರೆ ಕೆಲಸ ಮಾಡ್ಬೇಕಂದ್ರೆ  ಮೇರೆ ನಸೀಬ್ ಮೇ  ತೋ ಜಾದಾ ಪಡ್ಹಾಯಿ ಭಿ ನಹಿ… ಅಲ್ಲಾಹ್ ಕಸಂ ಭಯ್ಯ ನಂಗೆ ಸುಳ್ ಹೇಳಿ ಧೋಖಾ ಮಾಡಿ ರೊಕ್ಕ ಮಾಡ್ಬೇಕಂತ ಬಹುತ್ ಆಸೆ…  ಮಗರ್ ಮನ್ ಸಾಥ್ ನಹಿ ದೇತಾ ಥಾ. 

ಅದೊಂದ್ ದಿನ ಬೆಳಿಗ್ಗೆ ಡಿಶ್ ಆಫೀಸ್ ಬಾಗ್ಲು ತೆಗೆದ್ಬಿಟ್ಟಿ ಸಾಫ್ ಮಾಡ್ತಾ ಇದ್ದೆ. ಅದೇ ನಮ್ ಊರಿನ ಗಾಂಧಿ ಚೌಕದಲ್ಲಿ  ದವಾ ಕೆ ದುಖಾನ್ ಐತಲ್ಲ ? ಥೂ … ಬಿಡಿ ಸಾಮಿ… ನಮ್ ದವಾ ಅಲ್ಲ.. ಅದೇ ಖಾಯಿಲೆಗೆ ಔಸ್ದಿ ಮಾರ್ತಾರಲ್ಲ ? ಅವ್ರ ದುಖಾನ್ ನಮ್ ಆಫೀಸ್ ಗೆ ಹತ್ರಾನೇ ಇತ್ತು.  ದವಾ…  ಥೂ….  ಔಸ್ದಿ ಅಂಗಡಿ ಗುಮಾಸ್ತ ಬಂದು ಎಂಟು ಹತ್ತು ಪ್ಯಾಕ್  ಮಾಡಿದ್ದ ಗುಳಿಗೆ ಡಬ್ಬಿಗಳನ್ನು ನಮ್ ಡಿಶ್ ಆಫೀಸ್ ಗೆ ತಂದು ಇಳಿಸುತ್ತಿದ್ದರು.  "ಏನ್ಲಾ ಗುಮಾಸ್ತ, ಕ್ಯಾ ಹೈ?" ಕೇಳಿದೆ.  "ಏನಿಲ್ಲಾ ಖಾಜಾ ಭೈ, ಅಂಗಡಿಯಲ್ಲಿ ಡೇಟ್ expiry ಆದ ಗುಳಿಗೆ, ಔಸ್ದಿ ಎಲ್ಲಾ ಜಾಸ್ತಿ ಇದ್ವು. ದೀಪಾವಳಿ ಹಬ್ಬ ಆಲ್ವಾ? ಅಂಗಡಿ ಕಿಲಿನ್ ಮಾಡ್ತಾ ಇದ್ವಿ.. ಇವನ್ನೆಲ್ಲಾ ಹಬ್ಬದ ನಂತರ ನಾವೇ ತಗಂಡೋಗ್ತೀವಿ..  ನಿಂಗೆ ಗೊತ್ತಲ್ಲಾ, ನಮ್ ತಟಗು ಅಂಗಡಿ ಜಾಗದಲ್ಲಿ ದೀಪಾವಳಿಗೆ ಲಕ್ಷ್ಮಿ ಪೂಜೆ ಮತ್ತು ಮೂರು ದಿನ ಭಜನೆಗೇ(ಇಸ್ಪೀಟು ಆಟ ಆಡಲು ಜಾಗ ) ಸಾಲೋದಿಲ್ಲ. ಅದಕ್ಕೆ". ಗುಮಾಸ್ತ ಸಮಜಾಯಿಷಿ ನೀಡಿ ಡಬ್ಬಿಗಳನ್ನು ಒತ್ತಟ್ಟಿಗೆ ಇಟ್ಟು ಹೋದ. ಅಪ್ಪಿತಪ್ಪಿ ಆ ಡಬ್ಬಿಗಳ ಬಗ್ಗೆ ಒಂಚೂರು ಹೆಚ್ಚು ದೇಖರಿಕೆ ಇಲ್ಲದೇ ಮೆಟ್ಟಿಲಿಳಿದು ಹೋಗಿದ್ದ ಗುಮಾಸ್ತ. 

ದೀಪಾವಳಿ ಮುಗಿದು ಎರಡು ದಿನ ಮೂರು ದಿನ, ಫಿರ್  ಆಂಟ್ ದಿನ್ ಕೆ ಬಾದ್ ಭೀ ಔಸ್ದಿ ಅಂಗಡಿ ಗುಮಾಸ್ತ ಪತ್ತೆ ಇಲ್ಲ.  ಈ ಡಬ್ಬಿಗಳು ಹಂಗೆ ಬಿದ್ದಿದ್ದವು. ದೀಪಾವಳಿ ಹಬ್ಬದ ಭಜನೆಯಲ್ಲಿ ನಮ್ದೂ "ಕೈ" ಸುಟ್ಟು ಗಾಯ ಮಾದು ತಿಂಡಿ ಹತ್ತಿದಾಗಲೇ  ನಾನು ಡಿಶ್ ಆಫೀಸ್ ಗೆ ಕಾಲಿಟ್ಟಿದ್ದೆ. "ಅರೇ ಚೊಕ್ರಾ,  ದುಖಾನ್ ಜಾಕೋ ತಂಬಾಕು ಚೀಟಿ ಲೇಕೇ ಆರೇ".   ಆ ಕಡೆ ಹುಡುಗನ್ನ ಕೈಗೆ ದಸ್ ರುಪೆ ಕೊಟ್ಟು ಕಳಿಸಿ ಇನ್ನೊಬ್ಬನಿಂದ ಎಲ್ಲಾ ಡಬ್ಬಿಗಳನ್ನು  ಎತ್ತಿ ಆಫೀಸ್ ಹಿಂದೆ ಇರೋ ಹಾಳು ಮೂಳು ಸಾಮಾನು ಇಟ್ಟಿರೋ ಜಾಗಕ್ಕೆ ಎತ್ತಿ ಇರಿಸಿದೆ.  ಅದಾಗಿ ಅರ್ಧ ತಾಸು ಆಗಿದ್ದಿಲ್ಲ ಭೈ… ಔಸ್ದಿ ಅಂಗಡಿ ಗುಮಾಸ್ತ ಮೆಟ್ಟಿಲತ್ತಿ ಬಂದು  ಡಬ್ಬಿಗಳನ್ನು ಇಟ್ಟಿದ್ದ ಮತ್ತು ಖಾಲಿ ಆಗಿದ್ದ ಜಾಗ ನೋಡ್ದ.  ಪರೆಶಾನ್ ಆಗಿದ್ದ ಗುಮಾಸ್ತಗೆ ಡಬ್ಬಿಗಳನ್ನು ಇಟ್ಟಿದ್ದ ಜಾಗ ತೋರಿಸಿ "ಜಲ್ದಿ ಜಾಗ ಖಾಲಿ ಕರ್ ದೇ ನಹಿ ತೋ ಧಣಿ ಆಕೆ ಗಾಲಿ ದೇಗಾ" ಅನ್ನುತ್ತಿದ್ದೆ, ಗುಮಾಸ್ತ ಆಗಲೇ ಒಂದೊಂದಾಗಿ ಡಬ್ಬಿಗಳನ್ನು ಎತ್ತಿ ರಿಕ್ಷಾಗೆ ಹಾಕುತ್ತಿದ್ದ. 

ವೋ ಕ್ಯಾ ಬೋಲ್ತೆ ಹೈ ನಾ ಭೈ …. "ಮರೀಜ್ ಕೊ ದವಾ ಕಿ ನಹಿ ದುವಾ ಕಿ ಜರೂರತ್ ಹೈ" ಅಂತ. ಆದರೆ ನಾವು ಮರೀಜ್ ಅಲ್ಲ, ಪೈಸೆ ಕೆ ದವಾ ಅಲ್ಲೇ, ಹಮಾರೇ ಸಾಮ್ನೆ ಹಿ ಥಾ.  ಆದ್ರೂ ದುವಾ ಯಾರದೂ ಇರಲಿಲ್ಲ; ಹಂಗಾಗಿತ್ತು,  ನಮ್ ನಸೀಬ್. ಅದಾಗಿ ಒಂದೆರಡು ದಿನದ ನಂತರ, ಹಿಂಗೆ ಸಂಜಿ ಮುಂದ ಲೂನಾ ಮೇಲೆ ಹೊಂಟಿದ್ದೆ. ಗಾಂಧಿ ಚೌಕಲ್ಲಿ ಗುಮಾಸ್ತ ಸಿಕ್ಕಿದ್ದ. "ಕ್ಯಾಜಿ ಕೈಸೇ ಹೈ"  ನಾನು ಕೇಳಿದ್ದೇ ತಡ.. ಗುಮಾಸ್ತ  "ಖಾಜಾ, ಎಂಟೆಂಟು ದಿನ ಹಂಗೆ ಡಬ್ಬಿಗಳನ್ನು ಇಟ್ಟುಕೊಂಡು ಸುಮ್ನೆ ಇದ್ದ್ಯೆಲ್ಲೋ… ಒಂಚೂರು ಬುದ್ಧಿ ಓಡಿಸಿದ್ದರೆ ಡಬ್ಬಿಯಲ್ಲಿ ಏನಿದೆ ಅಂತಾದ್ರೂ ಗೊತ್ತಾಗಿ  ನೀನರ ಮನಿಷ್ಯ ಆಗಲಿಲ್ಲ, ನಂಗಾರ (ನನಗಾದ್ರೂ) ತಲೆ ಓಡಲಿಲ್ಲ" ಅಂದ.   ಗುಮಾಸ್ತ ಹೇಳಿದ್ದರಲ್ಲಿ ನಂಗೆ ಸಿರ್ ಪಾವ್ (ತಲೆ ಬುಡ)  ಒಂದೂ ಗೊತ್ತಾಗಲಿಲ್ಲ.  "ಟೀಕ್ ಸೇ  ಬೋಲೋ ಜೀ" ಕೇಳಿದೆ ; ನನಗೆ ಕುತೂಹಲವಿತ್ತು. 

"ಖಾಜಾ, ನಿಮ್ ಆಫೀಸಿಂದ ಡಬ್ಬಿಗಳನ್ನು ರಿಕ್ಷಾ ದಲ್ಲಿ ಹಾಕ್ಕೊಂಡು ಬಂದ್ನಾ ? ಮನೆಯಲ್ಲಿ ಇಳಿಸಿ ಬಾ ಅಂದ್ರು ಧಣಿ.. ಇನ್ನೇನು ಮನೆಯಲ್ಲಿ ಕಡೆ ಡಬ್ಬಿ ಇಳಿಸಬೇಕು;  ಹೊಸ್ತಿಲಲ್ಲಿ ಡಬ್ಬಿ ತಳ ಒಡೆದು ನೋಟುಗಳ ಕಟ್ಟುಗಳು ಒಂದೆರಡು ದಪ್ಪ ದಪ್ಪ ಇರೋ ಬಂಗಾರದ ಸರಗಳು ದೊಪ್ಪಂತ ಬಿದ್ವೋ ಖಾಜಾ, ನೋಡಿ ಗರಾ ಬಡಿದವನಂಗೆ ನಿಂತೇ ಇದ್ದೆ.   ನಮ್ ಧಣಿ ಹೆಣ್ತಿನೇ ಬಂದು ಆಷ್ಟನ್ನು ಎತ್ತಾಕಿಕೊಂಡು ನನ್ನ ಕೈಗೆ ಎರಡು ನೂರು ಇಟ್ಟು  ದಬ್ಬಿದಳು" .. ಗುಮಾಸ್ತ ಹೇಳಿದ್ದನ್ನು ಕೇಳಿದ್ದೇ ತಡ; ಸೀದಾ ಹೋಗಿ ಔಸ್ದಿ ಅಂಗಡಿ ಧಣಿ ಮುಂದೆ ನಿಂತು "ಕ್ಯಾ ಧಣಿ,  ಡಬ್ಬಿ ಕಾ ಬಾಡಾ ನಹಿ ಮಿಲಾ(ಡಬ್ಬಿಗಳನ್ನು ಇಟ್ಟಿದ್ದರ ಬಾಡಿಗೆ ಬರಲಿಲ್ಲ )" ಅಂದೆ.   ಅರ್ಥವಾದ ವನಂತೆ ನನ್ನ ಬಾಯಿ ಮುಚ್ಚಿಸಲು ಮೂವತ್ತು ಸಾವಿರ ತುರುಕಿದ.  ನಂಗೆ ಮಾತೇ ಬರಲಿಲ್ಲ.  

ಡಿಶ್ ಕೇಬಲ್ ಹೊಸದಾಗಿ ಬಂದಾಗ ಆಗಲೇ ಒಬ್ಬ ನಂಗೆ ಕೇಳಿದ್ದ; "ನಂಗೆ ಡಿಶ್ ಕನೆಕ್ಷನ್ ಕೊಡು, ಐದು ವರ್ಸ ಬಾಡಿಗೆ ಕೇಳಬೇಡ ಕೇಬಲ್ ಎಳೆಯೋದಕ್ಕೆ ಅಡ್ವಾನ್ಸ್ ಕೊಡಾದಿಲ್ಲ, ಆದರೆ ನನ್ನ ಹೊಲ ಎನ್.ಎ. ಮಾಡಿಸಿ ಸೈಟ್ ಮಾಡ್ತೀನಿ. ಅದರಲ್ಲೇ ಒಂದು ಸೈಟ್ ಕೊಡ್ತೀನಿ ತಗಮ್ತೀಯಾ?" ಅಂತ.  ಮತ್ತೊಮ್ಮೆ ಯಾವುದೋ ತೆಲುಗು ಸಿನಿಮಾ ಸೂಟಿಂಗು ಬಂದಿತ್ತು ನಮ್ಮೂರಿಗೆ; ಸೂಟಿಂಗು ನೋಡೋಕೆ ಹೋದ ನನ್ನ "ಕಾಮಿಡಿ ರೋಲ್ ಇದೆ ಮಾಡ್ತೀಯಾ? ತಗೋ ಈ ಅಡ್ರೆಸ್ ಹೈದರಾಬಾದ್ ಗೆ ಬಂದುಬಿಡು"  ಅಂದಿದ್ದ ಅಸಿಸ್ಟಂಟ್ ಡೈರೆಕ್ಟರ್.  ಗೊತ್ತಿಲ್ಲದೇ ಇರೋ ದೇವರಿಗಿಂತ ಗೊತ್ತಿರೋ ದೆವ್ವಾನೇ ವಾಸಿ ಅಂದ್ಕೊಂಡು ನಮ್ಮೂರು ಬಿಟ್ಟು ಹೋಗೋಕೆ ಮನಸಾಗಿದ್ದಿಲ್ಲ. 

ಅರೇ  ಇಸ್ಕಿ. ಜಿಂದಗಿ ಭಾಳ ಮುಶ್ಕಿಲ್ ಮೇ ಡುಬಾ ದಿಯಾ ಮುಝೆ.   ಸಬ್ ಚಾನ್ಸ್ ಮಿಸ್ ಕರ್ ಲೇಕೋ ಬೇಜಾನ್ ಪರೆಶಾನ್ ಆಗ್ಬಿಟ್ಟಿತ್ತು ಭೈ.. ಏನ್ ಮಾಡ್ಲಿ, ಜಮಾನಾ ಭಿ ಬದಲ್ ಗಯಾ, ಲೋಗ್ ಭಿ ಬದಲೇ. ಮೇರಾ ಕಾಮ್ ನಾಕಾಮಯಾಬ್ ರಹಾ.. ಈಗ್ ನೋಡಿ ನಾನ್ ಒಂದು ಗೆಸ್ಟ್ ಹೌಸ್ ಮೇಟಿಯಾಗಿ ಬರೀ ಮೂರು ಸಾವಿರಕ್ಕೆ ದುಡೀತಾ ಇದ್ದೀನಿ.  ಹ್ಞಾ…. ಯಾದ್ ಆಯಾ. ಈ ಗೆಸ್ಟ್ ಹೌಸ್ ಗೆ ಬಂದ್ ಮೇಲೂ ಕೂಡ ಒಂದ್ ಮಜಾಕ್ ನಡೀತು ಭೈ… ಉಸ್ ದಿನ್ ಶಾಮ್ ಕೋ ಹಾಗೆ ಗುಡ್ಡದ ಮೇಲಿರೋ ಗೆಸ್ಟ್ ಹೌಸ್  ಕಡೆ ಒಬ್ಬ ಬಾಬಾ ಬರ್ತಾ ಇದ್ದ. ನಾನು ಹೊರಗೆ ಮೆಟ್ಟಿಲ ಮೇಲೇನೆ ಕೂತಿದ್ದೆ. ಹತ್ತಿರ ಹೋಗಿ "ಆಪ್ ಕೌನ್ ಹೇ ಬಾಬಾ" ಕೇಳಿದೆ. " ಪಾನಿ ಮಿಲೇಗಾ? " ಬುಡ್ಡಾ ಕೇಳಿದ.  ತಂದು ಕೊಟ್ಟೆ, ಫಿಲ್ಟರ್ ನೀರು ತಣ್ಣಗಿತ್ತು, ಅದೆಷ್ಟು ಬಾಯಾರಿಕೆ ಆಗಿತ್ತೋ ಏನೋ ನೀರು ಕುಡಿದು "ಕಲಮ್ ಹೈ ಕ್ಯಾ  ತೇರೆ ಪಾಸ್ ?" ಬುಡ್ಡಾ ಕೇಳಿದ.  ಪೆನ್ನು ಪೇಪರ್ ತಂದು ಕೊಟ್ಟೆ. ಉರ್ದುವಿನಲ್ಲಿ ಒಂದಷ್ಟು  ಬರೆದು "ಮಟಕಾ  ಮೇ ತೇರೆ ಕಾಮ್ ಆಯೇಗಾ ಲೇಲೇ" ಅಂದವನೇ ಹೊರಟು ಬಿಟ್ಟ. 

ಸಂಜೆಗೆ ದವಾ ತಗೊಳ್ಳೋ ಟೈಮ್ ಬೇರೆ ಆಗಿತ್ತು.  ಪ್ಯಾಂಟಿನ ಹಿಂದಿನ ಜೇಬಿನಲ್ಲಿ ಚೀಟಿ ತುರುಕಿ "ಚಿಂಗಾರಿ ಕೋಯಿ ಭಡಕೆ …. ರಾಜೇಶ್ ಖನ್ನಾ ಸಾಬ್ ಹಾಡು ಹೇಳುತ್ತಾ ಹೋದೆ.  ಅದಾಗಿ ಒಂದೆರಡು ದಿನಗಳ ನಂತರ ಮದರಸಾ ಸಾಲಿ ಹುಡುಗರು ಎದುರಿಗೆ ಕಂಡಾಗ ಉರ್ದುವಿನಲ್ಲಿ ಬರೆದದ್ದು  ಸಂಖ್ಯೆಗಳೆಂದು ಗೊತ್ತಾತು.  ಅದೇ ದಿನ ಶಾಮ್ ಗೆ ಗೆಸ್ಟ್ ಹೌಸ್ ಗೆ ಬಂದ ಒಬ್ಬ ಪೆಹಚಾನ್ ಆದ್ಮಿಗೆ ಆ ಚೀಟಿ ತೋರಿಸಿದೆ; "ಅರೇ ಖಾಜಾ ಕೌನ್ ದಿಯಾ ರೇ ತುಮ್ಹೇ ಯೇ ನಂಬರ್" ಏಕ್ ಹಫ್ತೆ ಕಾ ಕಂಟಿನ್ಯೂ ಪಕ್ಕಾ ನಂಬರ್ ಹೈ ಏ ಸಬ್" ಅಂದುಬಿಟ್ಟ.  ಇಸ್ ಬಾರ್ ಭಿ ಮೈ ಪೆಹಚಾನ್ ನಹಿ ಸಕಾ ಮೇರೆ ನಸೀಬ್ ಕೊ.  "ಯಾ ಮೇರೆ ಖುಧಾ ಕೈಸೆ ಮೇರೆ ಜಿಂದಗಿ ಮೇ ಮದದ್ ಕರೋಗೆ"  ಎದೆಗೆ ಕೈ ಒತ್ತಿಕೊಂಡು ನೆನೆಸಿದೆ.  ಈಗ, ಹಿಂಗಿದಿನಿ ದೇಖೋ ಭೈ. 

     *****************

ಕ್ಷಮಿಸಿ,  ಈ ಖಾಜಾ ನಾನಲ್ಲ.  ಖಾಜಾ ಕೇಳಿದ ಕಥೆಯನ್ನು ನಾನೇ ಖಾಜಾನಾಗಿ ಹೇಳಿದ್ದಷ್ಟೇ. ಮೊನ್ನೆ ಭಾನುವಾರ ಒಂದೂರಿನ ಗೆಸ್ಟ್ ಹೌಸ್ ನಲ್ಲಿ ಹೀಗೆ ಕಾಲ ಕಳೆವ ಸಂದರ್ಭ ಬಂದಿತ್ತು. ನಾನು ಹೋದಲ್ಲಿ ಸುಮ್ಮನಾದರೂ ಗೊತ್ತಿಲ್ಲದವರನ್ನು ಮಾತಿಗೆಳೆಯುವ ಚಾಳಿಯವನು.  ಹಾಗಾಗಿ ಈ ಖಾಜಾ ಸಿಕ್ಕ.  ನಾನು ಅವರಂತೆಯೇ ಮತ್ತು ಅವರ ಕಷ್ಟ ಸುಖದ ದಿನಗಳನ್ನು ನನ್ನ ಅನುಭವಗಳೊಂದಿಗೆ ಹಂಚಿಕೊಂಡು ಸ್ವಲ್ಪ ತಮಾಷೆ, ಸ್ವಲ್ಪ ಗೇಲಿ ಮಾಡಿ ಒಂಚೂರು ಜಾಣತನದಿಂದ ನಗಿಸಿದೆ.  "ಮಸ್ತ್ ಇದೆ, ಖಾಜಾ ನಿನ್ ಕಥೆ, ಚೆಂದಾಗಿ ಬರೀಬಹುದು" ಅಂದೆ.  "ಭೈ… ನಂದೊಂದು ಫೋಟೋ ಹಾಕು" ಅಂದವನೇ ಸಖತ್ ಫೋಜ್ ಕೊಟ್ಟ.  ಆದರೆ, ಒಂದಂತೂ ಸ್ಪಷ್ಟ; ಖಾಜಾ ಹೇಳಿದ್ದು ಸತ್ಯ ಸುಳ್ಳು ಅಂತ ವಿಮರ್ಶೆ ಮಾಡೋ ಬದಲು ಖಾಜಾ ಹೇಳಿದ ಧಣಿಗಳಂಥ  ಕಳ್ಳ ಕುಳಗಳು ನಮ್ಮ ನಡುವೆ ಅದೆಷ್ಟೋ ಇರುವುದನ್ನು ಅಂದಾಜಿಸಬಹುದು.   ಪತ್ತೆ ಮಾಡೋರು ಮಾತ್ರ  ಖಾಜಾನಂತೆ  ದಡ್ಡ, ಅಮಾಯಕ ಗೊಂದಲವಾಗಿ ಇರುವವರಿರಬಾರದು.  ಕೊನೆಗೆ "ನಮ್ಮ ಹಣೆಯಲ್ಲಿ ಬರೆದಷ್ಟೇ ಅನ್ನದ ಅಗುಳು  ನಮ್ಮ ಹೊಟ್ಟೆ ಸೇರೋದು ಖಾಜಾ" ಎಂದು ಹೇಳಬೇಕಿತ್ತು; ಹೇಳಲಿಲ್ಲ…….

*****

ಕನ್ನಡದ ಬರಹಗಳನ್ನು ಹಂಚಿ ಹರಡಿ

9 thoughts on “ಖಾಜಾ ಪಾಷಾನ ನಸೀಬು ಮತ್ತು ಗುಡ್ಡದ ಮೇಲಿನ ಗೆಸ್ಟ್ ಹೌಸ್: ಅಮರ್ ದೀಪ್ ಪಿ.ಎಸ್.

  1. Kalla kulagalashte alla, Khaja nanthaha amaayakaru gotthiddoa, gotthilladeyoa anthavarannu kaapaadutthaloo iddaare Amar! Nijakkoo ishtavaayithu baraha.

  2. Amayaka Khaja kathe chennagide… adre urduvinalli idda aa numbersgaLu yenu ennuvudu sariyaagi arthavaagalilla…

  3. Chennagithu bhai.  Khaja naseeb vala nahi tha.  Jindagime esto bari adrustada namma bali bandru namdukke arthavagalla.  Ade adrustana nambi koothre khaja na paristhithi barathe.  Ottinalli yavudu hamara hath me nahi hai antha bolke sumke iddbidode sari alva.

  4. ಅಮರ್ ದೀಪ್, ಕತೆ ತುಂಬಾ ಚೆನ್ನಾಗಿದೆ! ಜೋರಾಗಿ ಕೇಳುವಂತೆ ಓದಬೇಕು ಅನಿಸುತ್ತದೆ, ಸಂಭಾಷಣೆಯನ್ನು ಅಷ್ಟು ಚೆನ್ನಾಗಿ ಬರೆದಿದ್ದೀರಿ.

Leave a Reply

Your email address will not be published. Required fields are marked *