ಕೊರೋನಾ ವಾರಿಯರ್ಸಗೊಂದು ನಮನ : ತೇಜಾವತಿ ಹೆಚ್. ಡಿ.(ಖುಷಿ)

ಮಾನವೀಯತೆಯ ದೀಪದಲ್ಲಿ ಕರುಣೆಯ ಬತ್ತಿ ಹಚ್ಚಿ ಜ್ಯೋತಿಯಾದೆ ನೀನು
ಅಂತಃಕರಣದ ಮಿಡಿತದಿಂದ ಆತ್ಮವಿಶ್ವಾಸದ ಕಿರಣಬೀರಿ ಬೆಳಕಾದೆ ನೀನು

ಶುಭ್ರ ಶ್ವೇತ ವಸನವನ್ನುಟ್ಟು ಸ್ವಚ್ಛ ಮನವ ತೊಟ್ಟು ರೋಗಿಗಳ ಆರೈಕೆ ಮಾಡಿ
ಮರಣದ ಕದ ತಟ್ಟಿದವರಿಗೆ ಹೆಗಲಾಗಿ ಸಾಂತ್ವನ ನೀಡುವ ದಿಟ್ಟೆಯಾದೆ ನೀನು

ಅಬ್ಬಬ್ಬಾ…… ಮಹಿಳೆಯರ ಒಳಹೊರಗಿನ ಮಾನಸಿಕ ಸ್ಥಿತಿಗತಿಗಳು ಅವರಿಗಷ್ಟೇ ಗೊತ್ತು. ತಮ್ಮ ಹಾದಿಯಲ್ಲಿ ಬರುವ ಎಲ್ಲಾ ಅಡೆತಡೆಗಳನ್ನೂ ಮೀರಿ ದಿಟ್ಟ ಹೆಜ್ಜೆಯನ್ನಿಟ್ಟು ಎಲ್ಲಾ ಕ್ಷೇತ್ರಗಳಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಮಹಿಳಾಮಣಿಗಳು ಅವರಿಗೆ ಅವರೇ ಸಾಟಿ ಎನ್ನುವುದನ್ನು ತಾವು ಹೆಜ್ಜೆ ಹಾಕಿರುವ ಪ್ರತಿಯೊಂದು ಕ್ಷೇತ್ರಗಳಲ್ಲು ನಿರೂಪಿಸಿದ್ದಾರೆ. ಪ್ರಸ್ತುತ ಪ್ರಪಂಚದೆಲ್ಲೆಡೆ ಕಾಣದೊಂದು ಸೂಕ್ಷ್ಮಜೀವಿ ಎಲ್ಲೆಡೆ ತನ್ನ ಬಾಹುಗಳನ್ನು ತ್ವರಿತ ವೇಗದಲ್ಲಿ ವಿಸ್ತರಿಸಿ ಜನರ ಪ್ರಾಣಗಳನ್ನು ಬೇಟೆಯಾಡುತ್ತಿರುವಾಗ ಅದರ ವಿರುದ್ಧ ಹೋರಾಡುತ್ತಿರುವ ರೋಗಿಗಳ ಪರ ಬೆನ್ನೆಲುಬಾಗಿ ನಿಂತವರು ಸ್ನೇಹಿತರಲ್ಲ, ಕುಟುಂಬದವರಲ್ಲ, ಸಂಬಂಧಿಗಳಲ್ಲ, ಹಣ, ಆಸ್ತಿ ಐಶ್ವರ್ಯ ಯಾವುದೂ ಅಲ್ಲ.. ವೈದ್ಯವೃಂದ ಹಾಗೂ ಶುಶ್ರುಷಕರು. ತಮಗೂ ಒಂದು ಖಾಸಗಿ ಬದುಕಿದೆ, ಕುಟುಂಬವಿದೆ ಎಂಬ ಸ್ವಾರ್ಥಭಾವನೆ ತೊರೆದು, ತಮ್ಮ ಚಿಕ್ಕ ಚಿಕ್ಕ ಹಸುಗೂಸುಗಳನ್ನು ಬಿಟ್ಟು ಸಾವಿನ ವಿರುದ್ಧ ಮುಖಾಮುಖಿ ಯುದ್ಧಕ್ಕೆ ನಿಂತವರು ಇವರು. ಇಂತಹ ಕೋವಿಡ್-19 ಸಮರದಲ್ಲಿ ಭಾಗಿಯಾಗಿ ಶಸ್ತ್ರತೊಟ್ಟ ಸೈನಿಕರಂತೆ ರೋಗಿಗಳ ಶುಶ್ರುಷೆಯಲ್ಲಿ ತೊಡಗಿರುವ ಶುಶ್ರುಷಕರಿಗೊಂದು ಸಲಾಂ ಹೇಳಲೇಬೇಕು. ಏಕೆಂದರೆ ಕೋವಿಡ್ ವಾರ್ಡ್ಗಳಲ್ಲಿ ಕರ್ತವ್ಯ ನಿರ್ವಹಿಸುವುದು ಹೇಳಿದಷ್ಟು ಸುಲಭದ ಮಾತಲ್ಲ.

ಇನ್ನೂ ಕರ್ತವ್ಯ ನಿರ್ವಹಿಸಬೇಕಾದಾಗ ಅವರು ತೊಡಬೇಕಾದ ಪಿ ಪಿ ಇ ಕಿಟ್ (ಪರ್ಸನಲ್ ಪ್ರೊಟೆಕ್ಟಿವ್ ಎಕ್ಯೂಪಮೆಂಟ್ ) ವೈಯಕ್ತಿಕ ರಕ್ಷಣಾ ಸಾಧನದಲ್ಲಿರುವ ಜಿಪ್ಲಾಕ್, ಶೂಸ್ ಕವರ್, ಸರ್ಜಿಕಲ್ ಗೌನ್, N 95 ಮಾಸ್ಕ್, ಗಾಗಲ್ಸ್, ಕ್ಯಾಪ್, ಹ್ಯಾಂಡ್ ಗ್ಲೋವ್ಸ್, ಫೇಸ್ ಶೀಲ್ಡ್ ಇವೆಲ್ಲವನ್ನೂ ಧರಿಸಿ ಕೋವಿಡ್ ವಾರ್ಡ್ಗಳಿಗೆ ತೆರಳಿದರೆ ಅಲ್ಲಿ ಬರುವಂತಹ ಶಂಕಿತ ಸೋಂಕಿತ ರೋಗಿಗಳಿಗೆ ಓಪಿಡಿ ಯಲ್ಲಿ ಸ್ಕ್ರೀನಿಂಗ್ ಮಾಡಿ, ಥ್ರೋಟ್ ಹಾಗೂ ನೇಸಲ್ ಸ್ವಾಬ್ ಗಳನ್ನು ಪರೀಕ್ಷಿಸಿ 24 ಗಂಟೆಯ ನಂತರ ಅವರ ರಿಪೋರ್ಟ್ ನೋಡಿ, ಆರೇಂಜ್ ಮತ್ತು ರೆಡ್ ಜೋನ್ಗಳಾಗಿ ವರ್ಗೀಕರಿಸಿ 14 ದಿನಗಳ ಕ್ವಾರಂಟೈನ್ ನ ನಂತರ ನೆಗೆಟೀವ್ ರಿಪೋರ್ಟ್ ಬಂದರೆ ಮಾತ್ರ ಆ ರೋಗಿಗಳನ್ನು ಅವರವರ ಮನೆಗೆ ಕಳುಹಿಸಬಹುದು. ಇಷ್ಟೆಲ್ಲಾ ಪ್ರೋಸೆಸ್ ನಡೆಯುತ್ತಿರುವಾಗ ರೋಗಿಗಳಿಗಿಂತ ಹೆಚ್ಚು ನೆಮ್ಮದಿಯಿಲ್ಲದಿರುವುದು ಅಲ್ಲಿ ಕೆಲಸ ನಿರ್ವಹಿಸುವ ಶುಶ್ರುಶಕರಿಗೆ.. ಅಲ್ಲಿನ ವಾರ್ಡ್ಗಳಲ್ಲಿರುವ ರೋಗಿಗಳ ಎಲ್ಲಾ ಬೇಕು ಬೇಡಗಳನ್ನು ಊಟ ನೀರಿನಿಂದ ಹಿಡಿದು ಎಲ್ಲವನ್ನು ನೋಡಿಕೊಳ್ಳುವ ಜವಾಬ್ದಾರಿ ಅವರದ್ದೇ ಆಗಿರುತ್ತದೆ. ಅವರ ಪ್ರತಿಯೊಂದು ಆರೋಗ್ಯದ ಚಲನವಲನಗಳನ್ನು ಕೂಡ ಗಮನಿಸಬೇಕಿರುತ್ತದೆ. ಕರ್ತವ್ಯದ ಸಮಯ ಮುಗಿದು ಅಲ್ಲಿಂದ ತೆರಳುವಾಗ ಹೈಪೋಕ್ಲೋರೈಡ್ ಸ್ಪ್ರೇ ಮಾಡಿಸಿಕೊಂಡು doffing (ತಾವು ತೊಟ್ಟಿದ್ದ ppe kit.. ಎಲ್ಲವನ್ನು ರಿಮೋವ್ ಮಾಡುವುದು)ಮಾಡಿ ಹೊರಹೋಗಿ ಅವರಿಗೆಂದು ಮೀಸಲಿರುವ ಶೌಚಾಲಯಗಳಲ್ಲಿ ಸ್ನಾನ ಮುಗಿಸಿ ತಮ್ಮ ತಂಗುವ ಕೊಠಡಿಗಳಿಗೆ ತೆರಳಬೇಕಿರುತ್ತದೆ.

ಇಷ್ಟೆಲ್ಲಾ ಮಾಡುವ ಶುಶ್ರುಷಕರ ಸ್ಥಿತಿ ಅಲ್ಲಿಯವರೆಗೆ ಹೇಗಿರುತ್ತದೆ ಎಂಬ ಸತ್ಯ ನಮ್ಮ ಅರಿವಿಗೂ ನಿಲುಕದು. ಅವರು ತೊಟ್ಟ ppe kit ನಲ್ಲಿ ಮೈಯೆಲ್ಲಾ ಬೆವರಿ, ಒದ್ದೆಯಾಗಿ ತೋಯ್ದು ತಾವು ಧರಿಸಿರುವ ಗಾಗಲ್ಸ್ಗಳಲ್ಲೂ ನೀರು ತುಂಬಿ ಹನಿಯುತ್ತಿರುತ್ತದೆ. ರೋಗಿಗಳ ಉಪಚಾರ ಮಾಡುವ ಇವರು ರೋಗಿಗಳಿಗೆ ನೀರು ಕೊಡುವಾಗ ತಮಗೆ ದಾಹವಾಗಿ ನೀರು ಕುಡಿಯಬೇಕೆನಿಸಿದರು ಹನಿ ನೀರನ್ನು ಬಾಯಿಗೆ ತಾಕಿಸುವಂತಿರುವುದಿಲ್ಲ. ಇಡೀ ದೇಹ ಡೀ ಹೈಡ್ರೇಷನ್ ಆಗುತ್ತಿರುವ ಆ ಸಮಯದಲ್ಲಿ ಫ್ಯಾನ್ ಮುಂದೆ ಹೋಗಿ ನಿಂತರೂ ತುಸು ಗಾಳಿಯು ಒಳನುಸುಳಿ ಹೋಗದು. ಇನ್ನು ಕರ್ತವ್ಯಕ್ಕೆ ಹಾಜರಾಗುವ ಮೊದಲೇ ತಮ್ಮ ವೈಯಕ್ತಿಕ ಕೆಲಸಗಳನ್ನು ಮುಗಿಸಿರಬೇಕಾಗುತ್ತದೆ. ಕರ್ತವ್ಯದ ಮಧ್ಯೆ ಅವುಗಳಿಗೆ ಅವಕಾಶವಿರುವುದಿಲ್ಲ. ಇನ್ನು ಆ ದಿನಗಳಲ್ಲಿ ಏನಾದರು ಮಹಿಳೆಯರ ಸಮಸ್ಯೆಗಳಿದ್ದಲ್ಲಿ ಅವರ ಸ್ಥಿತಿಯನ್ನು ಮಾತಿನಲ್ಲಿ ಹೇಳಲಾಗುವುದಿಲ್ಲ. ಆ ಕ್ಷಣಕ್ಕೆ ಅವರು ಕರ್ತವ್ಯವೇ ಶ್ರೇಷ್ಠವೆಂಬ ಭಾವನೆಯಿಂದ ಇವೆಲ್ಲದರ ಹೊರತಾಗಿಯೂ ಅವರ ಕರ್ತವ್ಯನಿಷ್ಠೆಗೆ ನಾವು ತಲೆಬಾಗಲೇಬೇಕು. ಎಷ್ಟೇ ಬಲಶಾಲಿಯಿದ್ದರೂ ಕೂಡ ತಮ್ಮ ಕರ್ತವ್ಯದ ವೇಳೆ ಮುಗಿಯುವ ವೇಳೆಗೆ ಮಾತನಾಡಲು ಸಹ ಶಕ್ತಿಯಿರದೆ ದೇಹ ನಿತ್ರಾಣವಾಗುತ್ತಿರುತ್ತದೆ. ಕೈಯೆಲ್ಲಾ ಗ್ಲೋವ್ಸ್ ನಿಂದ ಹೊರತೆಗೆದ ಕೂಡಲೇ ಉರಿಉರಿಯಾಗುತ್ತದೆ. ತಮ್ಮೊಡನೆ ಜಂಗಮವಾಣಿಯೂ ಸೇರಿದಂತೆ ಯಾವೊಂದು ವಸ್ತುವನ್ನು ವಾರ್ಡ್ ನೊಳಗೆ ಒಯ್ಯುವಂತಿಲ್ಲ. ಒಂದು ವೇಳೆ ತುರ್ತು ಸಮಯ ಬಂದೊದಗಿದರೆ ಅಲ್ಲಿರುವ ಫೋನ್ ಅಷ್ಟೆ ಬಳಸಲು ಅವಕಾಶವಿರುತ್ತದೆ. ಅದನ್ನೂ ಕೂಡ ಲೌಡ್ ಸ್ಪೀಕರ್ ಇಟ್ಟು ಜೋರಾಗಿ ಮಾತನಾಡಿದರೆ ಮಾತ್ರ ಸಂವಹನ ಸಾಧ್ಯ. ಕಾರಣ ಅವರು ತೊಟ್ಟಿರುವಂತಹ ರಕ್ಷಣಾ ಸಾಧನಗಳು. ತಮ್ಮ ಕರ್ತವ್ಯವನ್ನು ಮುಗಿಸಿ ತೆರಳುವಾಗ ಒಂದು ದಿನದ ಯುದ್ಧ ಗೆದ್ದಂತಹ ಅನುಭವ ಅವರ ಮನದಲ್ಲಿ ಮೂಡಿರುತ್ತದೆ.

ಇನ್ನು ತಮ್ಮ ಪಾಳಿಯ ಕರ್ತವ್ಯ ಮುಗಿದ ಬಳಿಕ ಅಲ್ಲಿ ಕಾರ್ಯನಿರ್ವಹಿಸಿದ ಎಲ್ಲರೂ ಎಲ್ಲಾ ರೀತಿಯ ಪರೀಕ್ಷೆಗಳಿಗೆ ಒಳಪಟ್ಟು ಸ್ವತಃ 14 ದಿನಗಳ ಕ್ವಾರಂಟೈನ್ ಗೆ ಒಳಗಾಗಬೇಕು. ಅವರ ಕ್ವಾರಂಟೈನ್ ಕೊಠಡಿಗಳಲ್ಲಿ ಹೊರಹೋಗುವಂತಿಲ್ಲ, ಯಾರೊಬ್ಬರೊಡನೆಯೂ ಎದುರಾಗುವಂತಿಲ್ಲ… ಅವರಿಗೆ ಅವಶ್ಯಕ ಸಾಮಗ್ರಿಗಳನ್ನು ಅವರಿರುವಲ್ಲಿಗೆ ಪೂರೈಸಲಾಗುತ್ತದೆ.. ಆಗಿನ ಅವರ ಸಂಗಾತಿ ಕೇವಲ ಜಂಗಮವಾಣಿ ಮಾತ್ರವೇ.. 12 ನೆಯ ದಿನ ಸ್ವಾಬ್ ಟೆಸ್ಟ್ ಮಾಡಿದ ಬಳಿಕ 13 ನೆಯ ದಿನ ರಿಪೋರ್ಟ್ ಗಾಗಿ ಒಳಗೊಳಗೇ ಕಳವಳ, ಕಾತುರದೊಂದಿಗೆ ಮನಸಿನಲ್ಲಾಗುವ ತಲ್ಲಣಗಳು ಅವರ್ಣನೀಯ. ನೆಗೆಟೀವ್ ರಿಪೋರ್ಟ್ ಇದ್ದರೆ ಮತ್ತೆ ಅವರನ್ನು ಕರ್ತವ್ಯಕ್ಕೆ ನೇಮಿಸಲಾಗುವುದು.. ಪಾಸಿಟೀವ್ ಇದ್ದರೆ ಅವೇ ವಾರ್ಡ್ಗಳಲ್ಲಿ ಚಿಕಿತ್ಸೆ ಪಡೆಯಬೇಕಾಗುತ್ತದೆ.

ಕೊರೋನಾ ಮಹಾಮಾರಿಯ ವಿರುದ್ಧ ಹೋರಾಟಕ್ಕೆ ನಿಂತಿರುವ ಇವರೆಲ್ಲ ತಮ್ಮ ಕರ್ತವ್ಯದ ಮೂಲಕ ಅಳಿಲುಸೇವೆಯನ್ನು ಮಾಡುತ್ತಿರುವ ಹೆಮ್ಮೆಯೊಂದಿಗೆ ಹಗಲಿರುಳೆನ್ನದೆ ಶ್ರಮಿಸುತ್ತಿದ್ದಾರೆ.. ಇವರೆಲ್ಲರ ಶ್ರಮ ಫಲಿಸಿ ಈ ಪಿಡುಗಿನಿಂದ ಜಗತ್ತು ಪಾರಾಗಲಿ ಎಂದು ಆಶಿಸುತ್ತಾ ನನ್ನೆರಡು ಮಾತುಗಳಿಗೆ ವಿರಾಮ ನೀಡುತ್ತಿದ್ದೇನೆ.

ಸೇವೆಯೇ ಆತ್ಮ ಸಂತೃಪ್ತಿಯ ಮೂಲ

ತೇಜಾವತಿ ಹೆಚ್. ಡಿ.(ಖುಷಿ)


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x