ಜಾನ್ ಡನ್ – ಎರಡು ಅನುಭಾವಿಕ ಕವಿತೆಗಳು: ನಾಗರೇಖಾ ಗಾಂವಕರ


ಹದಿನಾರನೇ ಶತಮಾನ ಜ್ಞಾನ ಪುನರುಜ್ಜೀವನದ ಮೇರು ಕಾಲ. ಅದರ ಉತ್ತರಾರ್ಧದಲ್ಲಿ ಜನಿಸಿದ ಡನ್ ಜಗತ್ತಿನ ಶ್ರೇಷ್ಟ ಸಾಹಿತಿಗಳಾದ ಶೇಕ್ಸಪಿಯರ್, ಸ್ಪೆನ್ಸರ್,ಮಿಲ್ಟನ್ , ಡ್ರೈಡನ್ ಮುಂತಾದ ಪ್ರಮುಖ ಕವಿಗಳ ಸಾಲಿನಲ್ಲಿ ಕಾಣಿಸಿಕೊಂಡರೂ ಆ ರಿನೇಸ್ಸಾನ್ಸ್‍ನ ಪ್ರಭಾವಕ್ಕೆ ಸಿಲುಕಿಯೂ ಸಿಲುಕದಂತೆ ಹೊಸ ಕಾವ್ಯ ಜಗತ್ತನ್ನು ಸೃಷ್ಟಿಸಿದ. ವಿದ್ವತ್ತಿನ ಪ್ರಭಾವಕ್ಕಿಂತಲೂ ಅನುಭವದ ನೈಜ ಸಂವೇದನೆಗಳು ಆತನ ಕಾವ್ಯವನ್ನು ಪ್ರಚಲಿತಗೊಳಿಸಿದವು. ಹೊಸತನಕ್ಕೆ ತೆರೆದುಕೊಂಡಿದ್ದ ಕಾವ್ಯ ಲಹರಿ, ಪದವಿನ್ಯಾಸಗಳು, ಲಯ ಎಲ್ಲವೂ ಡನ್‍ನ ಕಾವ್ಯವನ್ನು ಅಮರಗೊಳಿಸಿದವು. ಡನ್ ಮೆಟಾಫಿಸಿಕಲ್ ಕಾವ್ಯ ಪರಂಪರೆಯ ಪ್ರಮುಖ ಕವಿ. ಮೆಟಾಫಿಸಿಕಲ್ ಕಾವ್ಯ ಲಹರಿಯಲ್ಲಿ ಬುದ್ಧಿ ಮತ್ತು ವಿರೋಧಾಭಾಸ, ಕಲ್ಪನೆ ಮತ್ತು ಅತಿಶಯೋಕ್ತಿ.ಪದವಿನ್ಯಾಸ ಮತ್ತು ಛಂದೋಗತಿ ಇವೇ ಮುಖ್ಯ ಸಂಗತಿಗಳು. ಮೆಟಾಫಿಸಿಕಲ್ ಕಾವ್ಯ ಘನತೆ ಇರುವುದೇ ಭಾವನೆಗಳನ್ನು ದುಡಿಸಿಕೊಳ್ಳುವ ಅದರ ಸೂಕ್ಷ್ಮತೆಯಲ್ಲಿ. ಮೆಟಾಫಿಸಿಕಲ್ ಕವಿಗಳ ಪ್ರೇಮ ಕಾವ್ಯಗಳು ಪ್ರಾಪಂಚಿಕ ಮತ್ತು ಆಧ್ಯಾತ್ಮಿಕ, ಗಂಭೀರ ಹಾಗೂ ಹಾಸ್ಯಪೂರ್ಣ್ ಹೀಗೆ ಎಲ್ಲ ಆಯಾಮಗಳಲ್ಲಿ ಮುಖಾಮುಖಿಯಾಗುತ್ತವೆ.
ಡನ್‍ನ ಪ್ರೇಮ ಕವಿತೆಗಳು ಆತನ ಆರಂಭದ ಬರವಣಿಗೆಗೆ ಸಂಬಂಧಿಸಿವೆ. ಅಲ್ಲದೇ ಆತನ ಸ್ವಂತ ಬದುಕಿನ ಅನುಭವಗಳ ಮೂಸೆಯಿಂದ ಮೂಡಿ ಬಂದಿವೆ. ಖಾಸಗಿ ಜೀವನದ ಸಂಗತಿಗಳು ಭಾವಪೂರ್ಣತೆಯ ಹೊದಿಕೆಯಲ್ಲಿ ಆಪ್ತವಾಗಿ ಓದುಗನ ಮನಸೆಳೆಯುತ್ತವೆ.

ಡನ್‍ನ ಪ್ರೇಮ ಕವಿತೆಗಳಲ್ಲಿ ಒಂದಾದ “The good morrow” ಅನುಭಾವಿಕ ಕವಿತೆ. ಪ್ಲೇಟೋನಿಕ್ ಪ್ರೇಮದ ಅಭಿವ್ಯಕ್ತಿಯಂತಿದೆ. 1633ರಲ್ಲಿ ಪ್ರಕಟಿಸಲ್ಪಟ್ಟ್ ಡನ್ ಕವಿತೆಗಳ ಸಂಗ್ರಹದಲ್ಲಿದೆ. ಮೂರು ಸ್ಟಾಂಜಾಗಳಲ್ಲಿ ಕಟ್ಟಲ್ಪಟ್ಟ ಈ ಕವಿತೆ ಎರಡು ಮುಖ್ಯ ರೂಪಕಗಳ ಮೇಲೆ ಹೆಣೆಯಲ್ಪಟ್ಟಿದೆ. ಹೊಸ ಬದುಕಿಗೆ ತೆರೆದುಕೊಳ್ಳುತ್ತಿರುವ ಪ್ರೇಮಿಗಳಿಬ್ಬರೂ ಹಾಗೂ ಅವರ ಪ್ರೇಮ ಸೃಷ್ಟಿಸಿದ ಹೊಸ ಜಗತ್ತು. ಅದು “Mutual fittingness of the lovers” ತನ್ನ ಹೊಸ ಪ್ರೇಮ ತನ್ನಲ್ಲಿ ಮೂಡಿಸಿದ ತೃಪ್ತಿಯಿಂದ ಕವಿಗೆ ಆಶ್ಚರ್ಯವಾಗಿದೆ. ಮಗು ಮತ್ತು ವಯಸ್ಕನ ಜೀವನದ ನಡುವಿನ ಭಿನ್ನತೆಗೆ ಬಳಸುವ ರೂಪಕದ ಮೂಲಕವೇ ಕವಿ ಹೊಸ ಕಲ್ಪನೆ ತೆರೆದಿಡುತ್ತಾನೆ.

ಕವಿತೆಯ ಪ್ರಾರಂಭದಲ್ಲಿ ರಾತ್ರಿ ಕಳೆದು ಮುಂಜಾನೆಯ ಬೆಳಕಿಗೆ ಎದ್ದೇಳುತ್ತಾ ಕವಿ ತನ್ನ ಪ್ರೇಯಸಿಗೆ ಹೇಳುತ್ತಾನೆ. ತಾವಿಬ್ಬರೂ ಈ ಮೊದಲು ಹಾಲು ಚೀಪುವ ಮಕ್ಕಳಂತೆ ಮಕ್ಕಳಾಟಿಕೆಯಲ್ಲಿ ಮುಳುಗಿ, ಲೌಕಿಕ ಬಯಕೆಗಳಲ್ಲಿ ಕಳೆದುಹೋಗಿದ್ದೆವು. ಎಫೆಸಸ್ಸನ ಏಳು ಜನ ನಿದ್ರಾಳುಗಳಂತೆ ತಾವು ನಿಕೃಷ್ಟವಾಗಿ ಬದುಕು ಕಳೆದದ್ದು ನೆನಪಿಸುತ್ತಾನೆ. ಆ ಸಮಯದ ತಮ್ಮ ಪ್ರೀತಿ ಪ್ರೇಮದ ದಿನಗಳು ಬರಿಯ ಭ್ರಮೆಯ ದಿನಗಳಾಗಿದ್ದವು.

ಆದರೆ ಎರಡನೇ ಸ್ಟಾಂಜಾದಲ್ಲಿ ಅವರ ಪ್ರೇಮ ಅಲೌಕಿಕತೆಯ ಮಟ್ಟವನ್ನು ಏರಿದೆ. ಅದು ನಿಧಾನವಾಗಿ ಪ್ರೇಮಿಗಳಲ್ಲಿ ಪರಸ್ಪರ ಹೊಂದಾಣಿಕೆಯನ್ನು ತಂದಿದೆ. ಅವರಿಬ್ಬರೂ ಪರಸ್ಪರ ಕಳೆದುಕೊಳ್ಳುವ ಭೀತಿಯಲ್ಲಿಲ್ಲ. ಈಗವರು ಕಣ್ಣುಗಳಲ್ಲಿ ಕಣ್ಣಿಟ್ಟು ನೋಡುತ್ತ ಭೌತಿಕ ಜಗತ್ತನ್ನು ಮೀರಿ ತಮ್ಮದೇ ಆದ ಹೊಸ ಜಗತ್ತನ್ನು ಪ್ರವೇಶಿಸುತ್ತಾರೆ. ಹೆದರಿಕೆ, ಮತ್ಸರ ಇತ್ಯಾದಿ ಕ್ಷುಲಕಗಳೆಲ್ಲ ಮೀರಿ ನಿಂತಿದ್ದಾರೆ. ಪ್ರೇಮಿಗಳಿಬ್ಬರೂ ಪ್ರೇಮಲೋಕವನ್ನೆ ಪ್ರವೇಶಿಸಿದ್ದಾರೆ. ಅವರ ಸಣ್ಣ ಕೋಣೆ ಅವರ ಇಡೀ ಜಗತ್ತು. ಹೊರ ಜಗತ್ತಿನ ಶೋಧಗಳು ಅವರನ್ನು ಸೆಳೆಯುವುದಿಲ್ಲ. ಶುದ್ಧ ಪ್ರೇಮದ ಜಗತ್ತು ಅವರ ಶೋಧದ ಆದ್ಯತೆ.

ಮುಂದಿನ ಸಾಲುಗಳು ಪ್ರೇಮದ ಗಟ್ಟಿ ಬಂಧವನ್ನು ಹೇಳುತ್ತವೆ. ಆತ ಆಕೆಯ ಕಣ್ಣಲ್ಲಿ ಆಕೆ ಆತನ ಕಣ್ಣಲ್ಲಿ ಕಣ್ಣಿಟ್ಟು ಜಗತ್ತನ್ನು ಮರೆತಿದ್ದಾರೆ. ತಮ್ಮ ಒಳ ಜಗತ್ತನ್ನು ಕಾಣಬಲ್ಲವರಾಗಿದ್ದಾರೆ. ಅಲ್ಲಿಯ ಶುದ್ಧ ಹೃದಯ ಅವರಿಗೆ ಮಾತ್ರ ಗೋಚರ. ಆ ಕಣ್ಣುಗಳಲ್ಲಿ ಆಚೆಯ ಅರ್ಧ ಗೋಳ ನೀರಿಕ್ಷಿಸುತ್ತಾ ತಮ್ಮದೇ ಆದ ಏಕಾಂಗಿ ಜಗತ್ತೇ ಆಗುತ್ತಾರೆ. ಆ ಜಗತ್ತಿನಲ್ಲಿ ಎರಡೂ ಗೋಳಗಳು ಸಂಪೂರ್ಣ ಸಮವಾಗಿವೆ. ಜಗತ್ತು ಎರಡು ಗೋಳವಾದರೂ ಅವರಿಬ್ಬರೂ ಬೇರ್ಪಡುವುದಿಲ್ಲ ಎಂಬ ಕಲ್ಪನೆಯೂ ಇಲ್ಲಿದೆ. ಕವಿತೆ ಕೊನೆಯಲ್ಲಿಯ ಸಾಲುಗಳು

“Whatever dies, was not mixed equally:
If our two loves be one, or thou and I
Love just alike in all, none of these loves can die”

ಯಾವುದೇ ಎರಡು ಮಿಶ್ರಣ ಸೇರಿದಾಗ ಅವುಗಳ ಶುದ್ಧತೆ ನಾಶವಾಗುತ್ತದೆ. ಆದರೆ ಡನ್ ತಮ್ಮ ಪ್ರೇಮ ಆ ಮಿಶ್ರಣವಲ್ಲ. ಬದಲಿಗೆ ಅದು ಪರಿಶುದ್ಧ ಹಾಗೂ ಅಮರ. ಅದಕ್ಕಾವ ಚ್ಯುತಿ ಬರದು ಎನ್ನುತ್ತಾ ಎಲ್ಲ ಆನಂದಗಳು, ಪ್ರಾಪಂಚಿಕ ಅಥವಾ ಪಾರಲೌಕಿಕ ಅನುಭವಗಳು ಎಲ್ಲವೂ ಕನಸಿನಂತೆ ಬರಿಯ ಭ್ರಮೆ. ಪ್ರೇಮಿಗಳು ಮಾತ್ರ ಪೂರ್ಣರು ಸಂಪೂರ್ಣರು. ಅವರದೇ ಜಗತ್ತಿನಲ್ಲಿ ಎರಡು ಗೋಳಗಳಂತೆ ಪರಸ್ಪರ ಸಮಾನರು. ಮತ್ತವರಿಬ್ಬರೂ ಒಂದೇ. ಎನ್ನುವ ಅಪೂರ್ವ ಪ್ರೇಮದ ವ್ಯಾಖ್ಯಾನ ಬರೆಯುತ್ತಾನೆ.
ಡನ್ ಕವಿಯ ಇನ್ನೊಂದು ಪ್ರಮುಖ ಕವಿತೆ “The canonization” ಗೆಳೆಯನೊಬ್ಬನಿಗೆ ಉದ್ದೇಶಿಸಿ ಹೇಳಿದಂತಿರುವ ಈ ಕವಿತೆಯ ಮೊದಲು ಸಾಲುಗಳು ಹೀಗಿವೆ

“For God’s sake hold your tongue and let me love” ಕವಿ ತನ್ನನ್ನು ತನ್ನಷ್ಟಕ್ಕೆ ಬಿಟ್ಟುಬಿಡುವಂತೆ ಕೇಳಿಕೊಳ್ಳುತ್ತಾನೆ. ಪ್ರೇಮದ ದಾರಿಯಲ್ಲಿಯ ಎಲ್ಲ ಸನ್ನಿವೇಶಗಳನ್ನು ಒಟ್ಟುಮಾಡುತ್ತಾನೆ. ಬರಿಯ ಯಶಸ್ಸಿಗೆ ಬಡಿದಾಡುತ್ತಿರುವ ಜಗತ್ತಿನ ಜನರೆಲ್ಲ ಪ್ರೀತಿಸುವುದು ಕಲಿಯಬೇಕಾದ ಸಂಗತಿಯನ್ನು ಅರಹುತ್ತಾನೆ. ಹಣ ಹೆಸರಿಗೆ ಬಡಿದಾಡುವುದು ನೈತಿಕತೆಯ ಲಕ್ಷಣವಲ್ಲ. ಪ್ರೇಮ ಅಸಂಬದ್ಧ ಎನ್ನಿಸಿದರೂ ಅದು ಯಾರಿಗೂ ಕೇಡುಂಟುಮಾಡದು. ಆತನ ಪ್ರೇಮ ದೈವಿಕ. ಅದು ಲೌಕಿಕ ಜಗತ್ತಿನ ಹಿಂದೆ ಓಡುತ್ತಿರುವ ಲಾಯರು, ಸೈನಿಕ, ವ್ಯಾಪಾರಿ ಹೀಗೆ ಯಾರಿಗೂ ತೊಂದರೆ ಕೊಡದು. ಅದನ್ನಾತ ಹೀಗೆ ಹೇಳುತ್ತಾನೆ.

Also, also, who is injured by my love?
What merchant’s ships my sights drowned?
Who says my tears have over flowed his ground?
When did my colds a forward spring remove?
When did the heat which my veins fill?
Add one man to the plaguey bill?

ಈ ಕವನದ ಉದ್ದಕ್ಕೂ ಅತಿಶಯೋಕ್ತಿಗಳ ಆಡಂಬರವಿದೆ. ಯುದ್ಧ ಮತ್ತು ಕಾನೂನುಗಳು ಮನುಕುಲದ ದುಷ್ಟ ಮನಸ್ಸಿನ ಸಂಕೇತಗಳು. ಆದರೆ ಪ್ರೇಮ ಅದು ಸುಮನದ ದ್ಯೋತಕ.
ಪ್ರೇಮಿಗಳು ಸಾವಿಗೂ ಸಿದ್ಧರಿರುತ್ತಾರೆ. ಮರಣ ಅವರಿಬ್ಬರನ್ನೂ ಸಂತನೆಡೆಗೆ ಒಯ್ಯಬಲ್ಲದು. ಅವರೂ ಸಂತನಾಗಬಲ್ಲರು. ಕವನದಲ್ಲಿ ಬಳಸಿದ ಉಪಮೆಗಳಾದ ಬೆಂಕಿಗೆ ತನ್ನ ತಾನೇ ಸುಟ್ಟುಕೊಳ್ಳುವ ಹಾತೆ, ಹದ್ದು ಮತ್ತು ಪಾರಿವಾಳ, ಫಿನಿಕ್ಸ ಮುಂತಾದ ಉಪಮೆಗಳ ಮೂಲಕ ಕವಿತೆ ಪ್ರಾಪಂಚಿಕ ಜಗತ್ತಿನಿಂದ ಪಾರಮಾರ್ಥಿಕ ಲೋಕದ ಅನುಭವವನ್ನು ಕ್ರಮೇಣ ಎತ್ತಿಹಿಡಿಯುತ್ತದೆ.

ಜಾಣ್ಮೆ, ವೈಂಗ್ಯ, ಉಪಮೆ,ಲಯ, ಪದವಿನ್ಯಾಸ, ಅತಿಶಯೋಕ್ತಿಗಳು,ಕಲ್ಪನೆ ಇತ್ಯಾದಿಗಳು ಡನ್ ಕವಿತೆಯ ಮುಖ್ಯಾಂಗಗಳು. ತಾಜಾತನದ ಸಂಗತಿಗಳು, ಹೊಸ ಶೈಲಿಯ ಪದ ರಚನೆಗಳು, ವಿಚಾರಗಳ ಮಿಶ್ರಣ ಇವುಗಳ ಬಳಕೆಯ ಮೂಲಕ ಸಾಂಪ್ರದಾಯಿಕವಾಗಿದ್ದ ಕಾವ್ಯ ಪರಂಪರೆಗೆ ಡನ್ ಹೊಸ ವ್ಯಾಖ್ಯಾನ ಬರೆದರು.

-ನಾಗರೇಖಾ ಗಾಂವಕರ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x