ಒಂಬತ್ತು ವರ್ಷದ ಹಿಂದಿನ ನೆನಪು. ಕೊಡೆ ಹಿಡ್ಕೊಂಡು ಅವಸರದಾಗ ಹೊಂಟಾಕಿಗಿ “ಹಿ ಹೀ ಹೀ ಸಾವಿತ್ರಿ ಊಟ ಆಯ್ತಾ” ಅಂತ ಆ ಹಾಲಿನ ಚಿಗವ್ವ ಕೇಳಿದಾಗ ಅಕಿಗೆ ಉತ್ತರ ಹೇಳೂಕ್ಕಿಂತ ನನ್ನೊಳಗ ಎದ್ದ ಪ್ರಶ್ನೆಗೆ ಉತ್ರ ಹೊಳೀಲಿಲ್ಲ. ‘ಊಟಾಯ್ತಾ ಸಾವಿತ್ರಿ’ ಅಂತಷ್ಟೇ ಕೇಳಿದ್ರ ನಡೀತಿರಲಿಲ್ಲನು! ಮತ್ಯಾಕ ಈಕಿ ಅಷ್ಟೂ ಬೆಳ್ಳನ್ನ ಹಲ್ಲು ತಗದು ಹಿಹೀಹೀ ಅಂತ ನಕ್ಳು ಅಂತ ತಲಿ ಕೆರಕೊಂಡು ಆಕಿಗಿ ಉತ್ತರಿಸೂವಷ್ಟರಾಗ ಮತ್ತೆ ಕೇಳೀದ್ಲು, “ ಅಲ್ಲಾ ಸಾವಿತ್ರಿ ತುಂಬಾ ಬೆಳ್ಳಗಿದ್ದೀಯಲ್ಲಾ, ಕಪ್ಪಾಗ್ತೀನಿ ಅಂತ ಛತ್ರಿ ಹಿಡ್ಕೊಂಡು ಅಡ್ಡಾಡ್ತಿಯಾ ಹಿ ಹೀ ಹೀ” ಅಂತ ಮತ್ತೆ ನಕ್ಳು, ಆಕಿ ಹೇಳಿದ ಮಾತು ಕೇಳಿ ನನಗ ನಗಿ ತಡಿಯಾಕ ಆಗಲಿಲ್ಲ. ಹೌದಲ್ಲ ನಾನೇನ್ ಮಾನಾಡ ಚೆಲುವಿ ಅಲ್ಲ. ಅವರಿ ಹೂವಿನ ಬಣ್ಣದಾಕೇನೂ ಅಲ್ಲ. ಆದ್ರೂ ಈ ಛತ್ರಿ ನನಗ ಗಂಟು ಬಿತ್ತೊ ನಾನು ಛತ್ರಿಗೆ ಗಂಟು ಬಿದ್ನೊ ಅಂತ ಯೋಚನೆ ಸುರುವಾತ. ಆದ್ರ ಆ ಚಿಗವ್ವನ ಎದುರಿಗೆ ಮಾತಿನ್ಯಾಗ ಸೋತ್ರ ಚೆಂದಲ್ಲ ಅಂತ ನನ್ನೊಳಗಿನ ಜಗಮಂಡಿ ಎಚ್ಚರಿಸಿದ್ಕ ತಕ್ಷಣ ಜಿಗುರಾದೆ. ‘ಅಲ್ಲಬೇ ಚಿಗವ್ವಾ, ನಿನ್ನ ಮಗಳು ಬೆಳ್ಳಗ ಅವರಿ ಹೂವಿನಂಗ ಅದಾಳ. ಅಕೀ ಮೈಯ್ಯಾಗಿನ ರಕ್ತ ಹಂಗಾರ ಬೆಳ್ಳಗ ಐತೆ ಹೆಂಗಾ?’ ಅಂತ ಕೇಳ್ದೆ. ಆಕಿಗಿ ಒಂಚೂರು ಹೊಲಿಗಿ ಹಾಕಿದಂಗಾತು ಬಾಯಿಗೆ ನಾ ಕೇಳಿದ್ದು.
‘ಅಲ್ಲಾ ಸಾವಿತ್ರಿ ನನ್ನ ಮಗಳ ಬಣ್ಣ ರಕ್ತದ ಮಾತು ಯಾಕ ಬಿಡು, ನಾನು ತಮಾಷೆಗೆ ಕೇಳ್ದೆ’ ಅಂದ್ಲು. “ಹೇಳಬೇ ನಿನ್ನ ಮಗಳ ಬೆಳ್ಳಗದಾಳಲ್ಲ ಅಕೀ ರಕ್ತ ಯಾವ ಬಣ್ಣದ್ದು ಅಂತ ಹೇಳೀದ್ರ ನಿನ್ನ ಪ್ರಶ್ನೆಗೆ ನಾನು ಉತ್ರ ಹೇಳ್ತೀನಿ’ ಅಂದೆ. ‘ಅಯ್ಯೊ ಒಳ್ಳೇ ಕೇಳ್ತೀ ಬಿಡು, ಬೆಳ್ಳುಗ ಇರಲಿ, ಕಪ್ಪುಗ ಇರಲಿ ಎಲ್ಲಾರ ಮೈಯ್ಯಾಗೆ ಕೆಂಪು ರಕ್ತಾನೆ ತಾನೆ’ ಅಂತ ತತ್ವಜ್ಞಾನಿ ಥರಾ ಆಕಿ ಹೇಳಿದಾಗ, ‘ಹಿ ಹೀ ಹೀ ನೀ ಮೊದಲ ಕೇಳಿದ ಪ್ರಶ್ನೆಗೆ ಈಗ ನೀ ಹೇಳಿದ ಉತ್ರದಾಗ ಉತ್ರ ಐತೆ ನೋಡಬೇ. ಬೆಳ್ಳಗ ಇರಲಿ ಕಪ್ಪಗ ಇರಲಿ ಸೂರ್ಯಪ್ಪನ ಬಿಸಿಲು ಎಲ್ಲಾರ್ನೂ ಒಂದಾ ಸಮ ಸುಡುತ್ತ.. ಅದ್ಕೇ ಈ ಛತ್ರಿ’ ಅಂತ ಹೇಳಿ ಧಿಮಾಕಿನಿಂದ ‘ಬರತೀನವಾ ಚಿಗವ್ವ ಆಫೀಸಿಗಿ ಹೊತ್ತಾಗುತ್ತಾ’ ಅಂತ ಹೊಂಟೆ.. ಆಕಿನೂ ಬೆಪ್ಪಾಗಿ ಹೊಂಟ್ಲು.
ಆಕಿಗಿ ಉತ್ತರಿಸಿದ್ದೇನಾ ಖರೆ. ಆದ್ರ ಈ ಕೊಡೆ ಸಹವಾಸ ನನಗ ಯಾವಾಗಿನಿಂದ ಸುರುವಾತು, ಎಷ್ಟು ಕೊಡೆ, ಯಾವ ನಮನಿ ಕೊಡೆ ಅಂತ ಸಿಕ್ಕಾಪಟ್ಟೆ ಪ್ರಶ್ನೆ ತಲ್ಯಾಗ ಹುಳುದ್ಹಂಗ ಹರಿದಾಡಾಕ್ಹತ್ತೀದ್ವು. ಈ ಕೊಡೆ ಅನ್ನೂ ಕೊಡೆನ ನನಗ ಪರಿಚಯ ಮಾಡಿ ಕೊಟ್ಟಾರು ಯಾರು ಅಂತ ಯೋಚಿಸಿದಾಗ ಅವ್ವ, ಅಪ್ಪ, ಅಕ್ಕಾರು ಪಟ್ಟಕ್ಕನೇ ಕಣ್ಮುಂದ ಬಂದ್ರು. ಬಿಸಿಲಾಗ ಹುಟ್ಟಿ ಬಿಸಲಾಗ ಬೆಳದ್ರೂ ಅವ್ವ ನಮ್ಮ ತಲಿ ಬಿಸಿಲಿಗಿ ಕಾಯದ್ಹಂಗ ನೋಡ್ಕೊಂಡ್ಲಲ್ಲ. ಮಳಿಗಾಲದಾಗ ಜುಡುರು ಮಳಿಯಾಗ ತ್ವಾಟದಾಗ ಹ್ವಾರೆ ಮಾಡೂವಾಗ ಅವ್ವನ ಹಳೇ ಸೀರಿ ಪಡಕಿಯ ಮೂಲಿ ಕುಂಚಿಗಿಗಳು ನಮ್ಮ ಪಾಲಿಗಿ ಕೊಡೆ ಆಕ್ಕಿದ್ವಲ್ಲ! ಚಳಿಗಾಲದ ಇಬ್ಬನಿ ಸುರಿಯೂವಾಗ ಸ್ಯಾವಂತಿಗಿ ಹೂವು ಬಿಡಿಸಾಕ ಹೊಂಟ್ರ ಆಗ್ಲೂ ಅವ್ವನ ಸೀರಿ ಪಡಾಳಿಗಳು ಕೊಡೆ ಆಗಿ ನಮ್ಮ ತಲಿ ರಕ್ಷಣೆ ಮಾಡ್ತಿದ್ವು. ಬಿಸಲಾಗ ಕೆಲಸ ಮಾಡೂವಾಗಂತೂ ಮೂಲಿ ಕುಂಚಿಗಿಗಳು ನಮಗ ಸೂರ್ಯನ ತಾಪ ತಾಕದಂಗ ಭದ್ರ ರಕ್ಷಾ ಕವಚ ಆಕ್ಕಿದ್ವು. ಬಿಸಿಲನ್ನೂ ಬಿಸಿಲಿಗೆ ಅವ್ವ ಸೆಡ್ಡು ಹೊಡೆದು ನಮ್ಮನ್ನೂ ತನ್ನನ್ನೂ ರಕ್ಷಿಸಿಕೊಂಡಿದ್ದು ದುಬಾರೀ ಧಿಮಾಕಿನ ಕೊಡೆಗಳಿಂದ ಅಲ್ಲ ತಾನುಟ್ಟು ಅಲ್ಲಲ್ಲಿ ಹರಿದ ಸೀರಿನ ನೀಟಾಗಿ ಮಡಚಿ ದೊಡ್ಡ ಗಾತ್ರದ ಕುಲಾಯಿ/ಮೂಲಿ ಕುಂಚಿಗಿ ಮಾಡೂ ಅದ್ಭುತ ಕಲೆಯಿಂದ. ಆ ಮೂಲಿ ಕುಂಚಿಗಿಗಳು ಹೂವು, ತರಕಾರಿ ಮೂಟೆ ಕಟ್ಟಾಕೂ ಸೈ ಅಂತಿದ್ವು, ನಮಗ ಬಿಸಿಲು, ಮಳಿ, ಚಳಿ ತಾಕದ್ಹಂಗ ನೋಡ್ಕೊಳ್ಳಾಕೂ ಜೈ ಅಂತಿದ್ವು.. ಅನಂತ ಬಣ್ಣ (ಆಗಸ ವರ್ಣ) ಅಂಜೂರಿ ಬಣ್ಣ, ಹಸಿರು ಬಣ್ಣ, ಬೂದು ಬಣ್ಣ ಇತ್ಯಾದಿ ಬಣ್ಣದ ಸೀರೀ ಮೂಲಿ ಕುಂಚಿಗಿ ಸಾಂಗತ್ಯದಾಗ ನಮ್ಮೆಲ್ಲರ ಬಾಲ್ಯ ಕಳೆದದ್ದು ಮಧುರ ನೆನಪು…
ಅವ್ವನ ಮಡಿಲೇ ಅನ್ನೂವಷ್ಟು ಆಪ್ತವಾಗಿದ್ದ ಆ ಕುಂಚಿಗಿ ಜಾಗಕ್ಕ ಕಡ್ಡಿ ಕೊಡೆ ಬಂದು ಕುಂತಿದ್ದು ಯಾವಾಗ ಅಂದ್ರ ನಾವು ಇಬ್ರೂ ಹುಡುಗ್ಯಾರು ಪಿಯುಸಿ ಓದಾಕ ಹೊಂಟಾಗ! ಬಡತನಕ್ಕ ನಾಚಿಕೆ ಅವಮಾನ ಏನೂ ಲೆಕ್ಕಕ್ಕ ಇರಂಗಿಲ್ಲಲ್ಲ! ನಾವು ಮಳಿ ಬಂದಾಗ ಸಿಕ್ಕ ಒಂದು ವಸ್ತ್ರ ತಲಿಗಿ ಹೊಚ್ಚಿಕೊಂಡು ಕಾಲೇಜಿಗಿ ಹೋಗೂದನ್ನ ನೋಡಿ, ಅಕ್ಕಾರು ಇಬ್ರೂ ಮಾತಾಡಿಕೊಂಡು ನಮಗಿಬ್ರಿಗೂ ಒಂದೊಂದು ಕೊಡೆ ಕೊಡಿಸಿದ್ರು. ಬೆಳ್ಳಿ ಬಣ್ಣದ ಕಡ್ಡಿಗಳ, ಕಪ್ಪು ಬಣ್ಣದ ಆ ಕೊಡೆಗಳು ನಮ್ಮಿಬ್ಬರ (ನಾನು ಮತ್ತು ತಂಗಿ) ಪ್ರತಿನಿಧಿಗಳಂಗ ನಮ್ಮ ಪುಟ್ಟ ಮನ್ಯಾಗ ಶೋಭಿಸಾಕ್ಹತ್ತಿದ್ವು. ನಾನಂತೂ ಮಳಿ ಬಂದಾಗ ಆ ಕೊಡೆ ಹಿಡ್ಕೊಂಡು ಹೋಗೂವಾಗ ನನ್ನಷ್ಟಕ್ಕಾ ನಾನಾ ಭಾಳ ಸುಂದ್ರಿ, ರಾಜಕುಮಾರಿ ಅನ್ನೂ ಧಿಮಾಕು ಬ್ಯಾಡ ಬ್ಯಾಡಂದ್ರೂ ಬಂದು ಬಿಡ್ತಿತ್ತು. ನಾವು ಕಾಲೇಜಿಂದ ಬಂದು ಅವನ್ನ ಬೇಕಾಬಿಟ್ಟಿ ಒಗದಾಗ ಅಕ್ಕಾರು, ಅವ್ವ, ಅಪ್ಪ ಯಾರು ನೋಡೀದ್ರು ನೀಟಾಗಿ ಸುತ್ತಿ ಮಡಚಿ ಹಾಳಾಗದ್ಹಂಗ ತಗದಿಡ್ತಿದ್ರು. ಹಿಂಗ ನಮ್ಮ ಬದುಕಿನ್ಯಾಗ ಬಂದ ಚೊಚ್ಚಲ ಕೊಡೆ ಅವು. ಒಂದಿನ ನಮ್ಮ ಸಹಪಾಠಿ ಸಹೋದರರಲ್ಲಿ ಯಾರೋ ಒಬ್ರು ನಾನಿಲ್ಲದಾಗ ನನ್ನ ಕೊಡೆ ಇಸ್ಕೊಂಡು ಹೋಗಿದ್ರು. ಅವರ ಊರಿನಿಂದ ವಾಪಸ್ ಬಂದ ನಂತ್ರ ಕೊಡ್ತಾರೇನೊ ಅಂತ ಭಾಳ ನಿರೀಕ್ಷೆ ಇಟ್ಕೊಂಡಿದ್ದೆ. ಆದ್ರ ಆತ ಕೊಡಲೇ ಇಲ್ಲ. ನನಗ ಭಾಳಂದ್ರ ಭಾಳ ಬ್ಯಾಸರಾದ್ರೂ ಆತನ ಮ್ಯಾಲಿನ ಗೌರವ, ಪ್ರೀತಿಯಿಂದಾಗಿ ಕೇಳಾಕ ಮನಸೇ ಬರಲಿಲ್ಲ.. ನನ್ನಿಂದ ತಪ್ಪಿಸಿಕೊಂಡು ಹೋದ ಆ ಕೊಡೆಯ ಕಡ್ಡಿಗಳು ಇವತ್ತಿಗೂ ನನ್ನ ಕಾಡ್ತಾವು…
ಅಲ್ಲಿಂದ ಮುಂದ ಎಷ್ಟು ಕೊಡೆ ತಗೊಂಡೆ ಕಳ್ದೆ ಅಂತ ನೆನಪಿಲ್ಲ. ಆದ್ರ ನನ್ನ ತಂಗಿ ಧರ್ಮಸ್ಥಳಕ್ಕ ಹೋದಾಗ ಅಲ್ಲಿಂದ ನನಗಾಗಿ ಒಂದು ಗುಲಾಬಿ ಬಣ್ಣದ ಕೊಡೆ ತಂದು ಕೊಟ್ಟಿದ್ಲಾ. ಆ ಕೊಡೆ ಹಿಡದ್ರ ನೋಡೀದ್ರ ಸಾಕು, ನನ್ನ ತಂಗಿ ಅಕ್ಕಾರು ಎಲ್ರೂ ನನ್ನ ಹತ್ರನ ಅದಾರ ಅಂತ ಅನ್ನಿಸ್ತಿತ್ತು. ಎಷ್ಟು ಜತನದಿಂದ ಒಂದು ಕಡ್ಡಿನೂ ಕದಲದ್ಹಂಗ, ಸುಕ್ಕು ಬೀಳ್ದಂಗ, ಜೀರ್ಣ ಆಗದಂಗ ಆ ಕೊಡೆನ ನಾನು ಕಾಪಾಡಿದೆ, ನನ್ನ ಅದು ಕಾಪಾಡಿತು. ಒಂದು ತಿಂಗಳಲ್ಲ ಯಾಡು ತಿಂಗಳಲ್ಲ ಬರೋಬ್ಬರಿ ಎಂಟು ವರುಷ ಅದು ನನಗ ನೆಳ್ಳಾಗಿ, ತಂಗಿಯ ಹೆಗಲಂಗ ನನ್ನ ಜೊತಿ ಇತ್ತು. ಆದ್ರ ಒಂದಿನ ರೈಲಿನ್ಯಾಗ ನಾನು ದೊಡ್ಡ ತಪ್ಪು ಮಾಡಿಬಿಟ್ಟೆ. ಮಗ್ಗಲದಾಗ ಇದ್ದ ಮುದುಕಮ್ಮನ ಚೀಲದಾಗ ಅದನ್ನ ಇಟ್ಟಿದ್ದೆ. ಇಳಿಯೂವಾಗ ಮರ್ತು ಇಳ್ದು ಬಿಟ್ಟೆ. ಊರಿಗಿ ಹೋದ ಮ್ಯಾಲೆ ಚೀಲ ಖಾಲಿ ಮಾಡಿ ಹೊಂದಿಸಿಡೂವಾಗ ಕೊಡೆ ಇಲ್ಲ ಅನ್ನೂದು ಲಕ್ಷ್ಯಕ್ಕ ಬಂದು ಭಾಳ ಸಂಕಟಾತು. ಕಣ್ಣೀರೇ ಬಂದು ಬಿಡ್ತು. ‘ಹುಚ್ಚೀ ಅದಕ್ಕ ಅಳ್ತಾರೇನ, ಬಿಡು ಇನ್ನೊಂದು ಕೊಡಿಸ್ತೀನಿ..’ ಅಂತ ತಂಗಿ ಸಮಾಧಾನ ಹೇಳೀದ್ರೂ ಆಕೀ ಕಣ್ಣಾಗ ಸೈತ ನೋವಿನ ಸೂಕ್ಷ್ಮ ಎಳೆ ಕಾಣಿಸಿಕೊಂತು… ಅದು ಕಳದ್ಹೋಗಿ ಒಂದೂವರೆ ವರ್ಷಾದ್ರೂ ಅದರ ಮೃದುತ್ವ, ಕಡ್ಡಿಗಳ ಹೊಳಪು, ಕೋಮಲ ಬಣ್ಣ ಎಲ್ಲಕ್ಕಿಂತ ಹೆಚ್ಚಾಗಿ ಅದು ತಂಗಿಯ ಕಾಣಿಕೆ ಅನ್ನೂದ್ನ ಮರೆಯಾಕಾಗ್ವಲ್ದು…
ಅದಾದ ನಂತ್ರ ತುರ್ತಿಗೆ ಒಂದು ಕೊಡೆ ಬೇಕೇ ಬೇಕಲ್ಲ ಅಂತ ಅಂಗಡೀಗಿ ಹೋದೆ. ತಂಗಿ ಕೊಡಿಸಿದ ಕೊಡೆಯಂಥದ್ದೇ ಬೇಕು ಅಂತ ಪಟ್ಟು ಹಿಡಿದು ಹುಡುಕಾಡಿದೆ. ಒಂದು ಅಂಗಡ್ಯಾಗೂ ಅಂಥಾ ಕೊಡೆ ಸಿಗಲಿಲ್ಲ. ಬಣ್ಣದ ಹೋಲಿಕೆ ಇದ್ರ, ಹಿಡಿ ಹೋಲಿಕೆ ಇಲ್ಲ, ಹಿಡಿ ಹೋಲಿಕೆ ಇದ್ರ ಬಣ್ಣದ್ದಿಲ್ಲ, ಎರಡೂ ಇದ್ರೂನೂ ಕಡ್ಡಿಗಳು ಸರಿ ಇರಲಿಲ್ಲ. ಹಿಂಗ ಪೇಚಾಡ್ಕೊಂಡು ಆರೆಂಟು ಅಂಗಡಿ ಅಲೆದಾಡಿ ಸುಸ್ತಾದೆ. ಕಡಿಗಿ ಕಪ್ಪು ಬಿಳುಪಿನ ಚಿತ್ತಾರದ ಕೊಡೆಯೊಂದು ಕಣ್ಣಿಗಿ ಬಿತ್ತು. ಚಾಕ್ಲೇಟ್ ಬೇಕು ಅಂತ ಅಳೂ ಕೂಸಿಗಿ ಬರ್ಪ ಸಿಕ್ರ ಸುಮ್ಕ ಆಗಿ ಖುಷಿಯಾಗಿ ಬಿಡುತ್ತಲ್ಲ ಹಂಗ ಮನಸು ಕಪ್ಪು ಬಿಳುಪಿನ ಬಣ್ಣದ, ಚೆಂದದ ಚಿತ್ತಾರದ ಈ ಕೊಡೆಗೆ ವಶವಾಗಿ ಹೋತು. ಅದನ್ನ ನೋಡಿ ತಂಗಿ ಸೈತ ಭಾಳ ಖುಷಿಪಟ್ಲು. ಆಕಿ ಅಷ್ಟೇ ಅಲ್ಲ ನಮ್ಮನೆಯ ಒಂದು ಇಡೀ ಡಜನ್ ಮೊಮ್ಮಕ್ಕಳೆಲ್ಲರ ಕಣ್ಣೂ ನನ್ನ ಕೊಡೆ ಮ್ಯಾಲೆ ಬಿದ್ದೈತಿ ಈಗ. ನನ್ನ ಅಳಿಯ ವಿಷ್ಣುಗಂತೂ ಈ ಕೊಡೆಯ ಮ್ಯಾಲೆ ತೀರದ ಪ್ರೀತಿ ಹುಟ್ಟಿ ಬಿಟ್ಟೈತಿ. ಈ ಕೊಡೆ ತಂದ ಮ್ಯಾಲೆ ಯಾರರ ಕೊಡೆ ಕೇಳಿದಾಗ ಎಲ್ಲೋ ಐತಿ ಸಿಗ್ವಲ್ದು ಅಂತ ಸುಳ್ಳು ಹೇಳಿದ್ದೆ ಎಷ್ಟೊ ಸಲ!! ಈಗ ವಿಷ್ಣು ಕೇಳಾಕ್ಹತ್ಯಾನ ಏನ್ ಮಾಡ್ಲಿ! ಇದನ್ನೇ ಅಂವಗ ಕೊಡ್ಲಾ, ಅಥವಾ ಇಂಥದ್ದಾ ಇನ್ನೊಂದು ತಗೊಂಡು ಕೊಡ್ಲಾ ಅಂತ ಮೂರ್ನಾಕು ದಿನದಿಂದ ಮನಸು ಲೆಕ್ಕಾಚಾರಕ್ಕ ಇಳದೈತಿ…
–ಸಾವಿತ್ರಿ ಹಟ್ಟಿ