ಕೆಂಗುಲಾಬಿ (ಭಾಗ 6): ಹನುಮಂತ ಹಾಲಿಗೇರಿ

[ಇಲ್ಲಿಯವರೆಗೆ…]


ಈ ಎಲ್ಲ ವಿವರಗಳನ್ನು ಸವಿವರವಾಗಿ ಬರೆದುಕೊಂಡು ನಾನು ರಾಜನ್ ಸರ್ ಚೇಂಬರಿಗೆ ಹೋದೆ. ನನ್ನ ವರದಿ ಮೇಲೆ ಸುಮ್ಮನೆ ಒಮ್ಮೆ ಕಣ್ಣಾಡಿಸಿದ ಅವರು ನನ್ನ ಕಡೆ ಒಂದು ಮೆಚ್ಚುಗೆಯ ನೋಟ ಬೀರಿ, ’ವೆರಿ ಗುಡ್ ಮಲ್ಲೇಶಿ. ಆದ್ರೆ, ನೀನು ಈ ದಂದೆಯ ಬಗ್ಗೆ ಇನ್ನಷ್ಟು ತಿಳಕೊಬೇಕಾದರೆ ಒಂದಿಷ್ಟು ದಂದೆಯಲ್ಲಿದ್ದ ಮಹಿಳೆಯರನ್ನು ಮಾತಾಡಿಸಬೇಕಿತ್ತು’ ಎಂದು ನನ್ನ ಕಣ್ಣುಗಳನ್ನು ಕೆಣಕಿದರು.

’ನಾನು ಮಾತಾಡಿಸಬೇಕೆಂದೇ ಆ ನಡು ವಯಸ್ಸಿನವಳ ಹಿಂದ್ಹಿಂದೆ ಹೋಗಿ ಆಟೊ ಹತ್ತಿದ್ದು ಸರ್. ಆದ್ರೆ, ನ್ನನ್ನು ಅವರು ನಡು ರಸ್ತೆಯಲ್ಲಿಯೇ ಮೋಸ ಗೊಳಿಸಿದರು’ ಎಂದು ನಾನು ಸಂಕೋಚದಿಂದಲೇ ತೊದಲಿದೆ.

ನನ್ನ ವರದಿಯ ಮೇಲೆ ಒಂದು ನಿಗಾ ಇಟ್ಟುಕೊಂಡೆ ಅವರು ಅದರ ಸುತ್ತಮುತ್ತ ಮಾತಾಡತೊಡಗಿದರು. ’ಈ ಹಾಳು ಪೊಲೀಸರು, ವಕೀಲರು, ಪಿಂಪ್‌ಗಳು, ಘರವಾಲಿಗಳು ಎಲ್ಲರೂ ಆ ಹೆಣ್ಣುಮಕ್ಕಳ ಜೀವ ಹಿಂಡೊರೆ ಅಗಿಬಿಟ್ಟಿದ್ದಾರೆ ಮಲ್ಲೇಶಿ. ಕೆಲವೊಮ್ಮೆ ಅವರನ್ನು ನ್ಯಾಯಾಲಯದೊಳಕ್ಕೆ ಒಯ್ಯದೇ ಕಪ್ಪು ಕೋಟುಗಳ ಮನುಷ್ಯರು ಕೋರ್ಟಿನ ಬಾಗಿಲಲ್ಲಿಯೇ ನ್ಯಾಯ ಪ್ರಪಂಚ ತೋರಿಸಿ ಹಣ ಕೀಳುತ್ತಾರೆ. ಅವರ ಮಂಗನ ನ್ಯಾಯಕ್ಕೆ ಒಪ್ಪದಿದ್ದರೆ ಜೈಲೇ ಗತಿ. ಜೈಲಿನ ಹೊರ ಬರುವ ಖರ್ಚುಗಳನ್ನು ನಿಭಾಯಿಸಲು ಈ ಹೆಣ್ಣಮಕ್ಕಳು ತಮ್ಮ ಮೈಮೇಲಿನ ಓಲೆ, ಕಾಲು ಚೈನು, ಉಂಗುರ ಹೀಗೆ ತಮ್ಮ ಮೈಮೇಲಿನ ಚೂರುಪಾರು ಬಂಗಾರನ್ನು ಅಡವಿಡಬೇಕಾಗಿ ಬರುತ್ತೆ. ಹೀಗೆ ಈ ಹೆಣ್ಣುಮಕ್ಕಳ ಆಭರಣಗಳನ್ನು ಅಡವಿಟ್ಟು ಬಂದ ಹಣದಿಂದ ಅವರನ್ನು ಬಿಡಿಸಿಕೊಳ್ಳುವ ಅವಳ ಬಾಡಿಗೆ ಗಂಡಂದಿರು, ಪಿಂಪ್‌ಗಳೂ ಬಿಡಿಸಿಕೊಂಡಾದ ಮೇಲೆ ತಮ್ಮ ಸುಲಿಗೆ ಸುರುವಿಟ್ಟುಕೊಳ್ಳುತ್ತಾರೆ. ಅವರಿಗೆ ಏನಾದರೂ ಖುಷಿ ಕೊಡಬೇಕು; ಹಣ ಇಲ್ಲದಿದ್ದರೆ ಮೈ ಆದರೂ ಆದೀತು. ಒಮ್ಮೆ ಬಂಧನವಾದರೆ ಏನಿಲ್ಲ ಅಂದರೂ ಕನಿಷ್ಟ ಸಾವಿರಾರು ರೂಪಾಯಿಗಳವರೆಗೆ ಸುಲಿಗೆಯಾಗುತ್ತೆ.’

’ಅಲ್ಲ ಸರ್, ನ್ಯಾಯಾಧೀಶರು ಸಹ ಇವರ ಮೈ ಮಾರಿದ ಕಾಸಿಗೆ ಕೈ ಚಾಚುತ್ತಾರೆಯೇ, ಸ್ವಲ್ಪ ಬಿಡಿಸಿ ಹೇಳಿ ಸರ್’ ಎಂದೆ ನಾನು ಕುತೂಹಲದಿಂದ.

’ನ್ಯಾಯಾದೀಶರೇನೂ ನೇರವಾಗಿ ಕೈ ಚಾಚಲ್ಲ ಮಲ್ಲೇಶಿ. ಆದ್ರೆ, ಇವರನ್ನು ಸುಲಿಗೆ ಮಾಡುವ ಅಪಾಪೋಲಿಗಳ ಕುರಿತು ತಮ್ಮ ನ್ಯಾಯದ ಕಣ್ಣು ಮುಚ್ಚಿಕೊಂಡಿರುತ್ತಾರೆ. ಅದೆಷ್ಟೋ ಸಂದರ್ಭಗಳಲ್ಲಿ ಈ ಬಡ ಹೆಂಗಸರನ್ನು ಕಟಕಟೆಯಲ್ಲಿ ನಿಲ್ಲಿಸಿದಾಕ್ಷಣ ನ್ಯಾಯಧೀಶರುಗಳು ತಲೆ ಎತ್ತದೆ ತಮ್ಮ ಮನಸ್ಸಿಗೆ ತೋಚಿದಷ್ಟು ದಂಡ ಹಾಕಿ ಅವರ ಫೈಲುಗಳನ್ನು ಮುಚ್ಚಿಬಿಡುತ್ತಾರೆ. ಒಂದೆರಡು ನಿಮಿಷಗಳಲ್ಲಿ ಈ ಪ್ರಕ್ರಿಯೆಗಳು ನಡೆದು ಹೋಗುತ್ತವೆ. ಯಾವತ್ತೂ ನಿನ್ನ ಅಭಿಪ್ರಾಯಗಳೇನು ಎಂದು ನ್ಯಾಯಧೀಶರುಗಳು ಪ್ರಶ್ನಿಸುವುದಿಲ್ಲ. ನನ್ನ ಅಭಿಪ್ರಾಯ ಇದು ಎಂದು ಇವರಿಗೆ ಹೇಳಲಿಕ್ಕಾಗುವುದಿಲ್ಲ. ನ್ಯಾಯಾಲಯದಲ್ಲಿನ ಎಲ್ಲರ ಕಣ್ಣುಗಳು ಇವರನ್ನೇ ಕುಕ್ಕುತ್ತಿರುವುದರಿಂದ ನಮ್ಮದೇ ತಪ್ಪು ಎಂಬ ಭಾವ ಇವರಲ್ಲಿ ಬಂದು ಬಿಟ್ಟಿರುತ್ತೆ. ಹೇಗಾದರೂ ಇಲ್ಲಿಂದ ಪಾರಾಗಬೇಕು ಎನ್ನುವ ತವಕ ಇವರಿಗೆ. ಇಂಥ ಸಂದರ್ಭವನ್ನು ಉಪಯೋಗಿಸಿ ಸಿಕ್ಕಿದಷ್ಟು ದಕ್ಕಿಸಿಕೊಳ್ಳುವ ಹುನ್ನಾರ ಗುಮಾಸ್ತ ಮತ್ತು ಕಾನ್‌ಸ್ಟೇಬಲ್‌ಗಳದು. ಇಂಥ ಪ್ರಹಸನಗಳು ದಿನನಿತ್ಯವೂ ನ್ಯಾಯಾಲಯಗಳಲ್ಲಿ ನಡೆಯುತ್ತಲೇ ಇರುತ್ತವೆ ಮಲ್ಲೇಶಿ. ಇನ್ನು ನ್ಯಾಯಾಧೀಶರುಗಳು ಅದ್ಯಾವ ಲೆಕ್ಕಾಚಾರ ಹಾಕುತ್ತಾರೊ ಗೊತ್ತಿಲ್ಲ.

ಒಮ್ಮೊಮ್ಮೆ ದಂಡ ಶುಲ್ಕ ಮೀರಿ ಜೈಲುಗಳಿಗೆ ರವಾನಿಸುತ್ತಾರೆ. ಬಹುಶಃ ಅವರಿಗೆ ತಿಂಗಳಿಗೆ ಇಂತಿಷ್ಟು ಜನರನ್ನು ಜೈಲಿಗೆ ಅಟ್ಟಲೇಬೇಕು ಎಂದು ಟಾರ್ಗೆಟ್ ಇದ್ದಂಗೆ ಕಾಣುತ್ತೆ. ಆಗ ವಕೀಲರನ್ನು ಹಿಡಿದೇ ಜಾಮೀನೆಂಬ ಪ್ರಕ್ರಿಯೆಗೆ ಸಹಿ ಹಾಕಿ ಹೊರಬರಬೇಕು.  ಈ ಮಹಿಳೆಯರು ಸೆರಗು ಹಾಸಿ ಗಳಿಸಿದ ದುಡ್ಡಿನಲ್ಲಿ ಪೊಲೀಸರಿಗೆ ಬ್ರೋಕರ್‌ಗಳಿಗೆ ಪಿಂಪ್‌ಗಳಿಗೆ, ರೂಮ್ ಬಾಯ್‌ಗಳಿಗೆ ಪಾಲು ಹೋಗುತ್ತೆ. ಇವರ ಸುತ್ತ ಮುತ್ತ ಹಣದ ವಹಿವಾಟು, ಹೊರೆಗಳು ಹೊಣೆಗಳು, ಕಪಟಗಳು ಗಿರಕಿ ಹೊಡೆಯುತ್ತಲೇ ಇರುತ್ತವೆ. ಆದ್ರೆ, ಇದನ್ನು ಆಳುವ ಸರ್ಕಾರದ ವಕ್ತಾರರು, ಕಾನೂನು ನಿರ್ವಾಹಕರು, ತಾವು ಸ್ತ್ರೀಪರ ಎಂಬ ಹಣೆಪಟ್ಟಿ ಅಂಟಿಸಿಕೊಂಡು ಸಿಂಪಲ್ ರೇಷ್ಮೆ ಸೀರೆಯುಟ್ಟು ಪೋಸ್ ಕೊಡುವ ಮಹಿಳಾ ಮಣಿಗಳು, ರಾಜ್ಯ ಮಹಿಳಾ ಆಯೋಗದ ಅಥವಾ ಮಹಿಳಾ ನಿಗಮದ ನಾಮಕಾವಸ್ಥೆ ಅಧ್ಯಕ್ಷರುಗಳು ಅರ್ಥ ಮಾಡಿಕೊಳ್ಳುವುದೇ ಇಲ್ಲ. ಈ ಮಹಿಳೆಯರ ಸುತ್ತ ಹೆಣೆದುಕೊಂಡಿರುವ ವಿಷ ವರ್ತುಲದಿಂದ ಬಿಡುಗಡೆ ಸಾಧ್ಯವೇ ಎಂದು ಒಮೊಮ್ಮೆ ತಲ್ಲಣವಾಗುತ್ತದೆ. ಇವರ ಬದುಕಿನ ವೈಚಿತ್ರ್ಯವನ್ನೇ ಅರಿಯದ ಈ ವಕ್ತಾರರು ಇವರ ಜೀವನವನ್ನು ಸೇರಿ ಸ್ವಚ್ಛ ಮಾಡಿ ಗುಡಿಸಿ ಹಾಕುವ ಅವೈಜ್ಞಾನಿಕ ಪರಿಹಾರದಲ್ಲಿಯೇ ವರ್ಷಗಳನ್ನು ಮುಗುಚುವ ಇವರೆಲ್ಲರಿಗೆ ಇದರ ಆಳ ಅರ್ಥವಾಗಬೇಕಿದೆ.

ಇಂದಿನ ಇಂಟರ್‌ನೆಟ್ ಯುಗದಲ್ಲಿ ವೇಶ್ಯವಾಟಿಕೆಯೂ ಒಂದು ಜಾಗತಿಕ ಮಟ್ಟದ ದಂಧೆಯಾಗಿದ್ದು, ಬಹುತೇಕ ಕಲಿತವರು ಕೂಡ ಹಣದ ಆಸೆಗಾಗಿ ಮಾಡರ್ನ್ ಪದ್ದತಿಯಲ್ಲಿ ಈ ವೃತ್ತಿಗೆ ಇಳಿತಿದ್ದಾರೆ. ಹಳ್ಳಿಯ ಗೌರಮ್ಮನಂತೆ ಸೀರೆಯುಡದೆ, ಹೊಕ್ಕಳ ತೂತು, ನೀಳ ತೋಳು ಕಾಣಿಸುವ ಸ್ಲೀವ್‌ಲೆಸ್ ಟಾಪ್, ಟೈಟ್ ಪ್ಯಾಂಟ್ ಅಥವಾ ಲೆಗ್ಗಿಂಗ್ಸ್ ಬಾಟಮ್ ಹಾಕಿರತ್ತಾರೆ. ಬಾಬ್‌ಕಟ್, ಗಾಗಲ್, ಮುಖಕ್ಕೆ ಫೇಶಿಯಲ್, ಸುಟ್ಟ ಸುಡಗಾಡು ಎಲ್ಲವನ್ನು ಹಾಕಿಕೊಂಡಿರುತ್ತಾರೆ. ಇಂಥವರನ್ನು ಇಟ್ಟುಕೊಂಡು ನಡೆಸುವ ಎಸ್ಕಾರ್ಟ್‌ಗಳು ಈ ಉದ್ಯಮಕ್ಕಾಗಿಯೇ ಸ್ವಂತ ಜಾಲತಾಣವನ್ನು ಹೊಂದಿರುತ್ತವೆ. ಈ ಜಾಲತಾಣಗಳಲ್ಲಿ ಅರೆಬರೆ ಬಟ್ಟೆ ತೊಟ್ಟ ಚಂದದ ಹುಡುಗಿಯರ ಫೋಟೋಗಳು, ವಿಡಿಯೋ ತುಣುಕುಗಳು ಹಾಕಿ ಪ್ರಚಾರ ಗಿಟ್ಟಿಸಲಾಗುತ್ತದೆ. ಕೆಲವು ವೆಬ್‌ಸೈಟ್‌ಗಳಲ್ಲಿಯಂತೂ ಸ್ವತಃ ಹುಡುಗಿಯರಿಂದಲೇ ಚಾಟ್ ಮಾಡಿಸಲಾಗುತ್ತದೆ. ಹೀಗಾಗಿ ಇಂದು ಹಳೆ ಪದ್ದತಿಯಲ್ಲಿ ರಸ್ತೆಯಲ್ಲಿ ನಿಂತು ದಂಧೆ ಮಾಡುವ ಮಹಿಳೆಯರನ್ನು ಕೇಳುವವರೇ ಇಲ್ಲವಾಗಿದೆ’ ರಾಜನ್ ಒಳ್ಳೆ ಮೂಡಿನಲ್ಲಿ ಹೇಳುತ್ತಲೇ ಹೊರಟಿದ್ದರು.

’ಸರ್, ನಿಮ್ಮ ಮಾತುಗಳನ್ನು ಕೇಳುತ್ತಿದ್ದರೆ, ಈ ದಂದೆ ನಡೆಸುವ ಮಹಿಳೆಯರ ಬಗೆಗಿನ ನಿಮ್ಮ ಸಹಾನುಭೂತಿ ನೋಡಿದರೆ, ಈ ದಂದೆ ಪರವಾಗಿ ಮಾತಾಡುತ್ತಿರುವಿರಾ ಎಂಬ ಅನುಮಾನ ಬರುತ್ತೆ.’ ನನ್ನೊಳಗಿನ ತಳಮಳವನ್ನು ನಾನು ಹೊರಗೆ ಹಾಕಲೇ ಬೇಕಿತ್ತು.

’ನಿನ್ನ ಅನುಮಾನ ಪರಿಹಾರವಾಗಬೇಕಾದರೆ ಇದರ ಬಗ್ಗೆ ಇನ್ನಷ್ಟು ಆಳವಾಗಿ, ಧೀರ್ಘವಾಗಿ ತಿಳಿದುಕೊಳ್ಳುವ ಆಗತ್ಯವಿದೆ ಮಲ್ಲೇಶಿ, ಇವತ್ತು ಇಷ್ಟು ಸಾಕು. ನಾಳೆ ನಮ್ಮ ಕಚೇರಿಯಲ್ಲಿ ಸೆಕ್ಸ್ ವರ್ಕ್‌ರ್‍ಸ್ ಯೂನಿಯನ್‌ನವರು ಪ್ರೆಸ್‌ಮೀಟ್ ಮಾಡ್ತಿದಾರೆ. ಇದರಲ್ಲಿ ನಗರದ ಬಹುತೇಕ ಸೆಕ್ಸ್ ವರ್ಕ್‌ರ್‍ಸ್ ಅಟೆಂಡ್ ಮಾಡ್ತಿದ್ದಾರೆ. ದಯವಿಟ್ಟು ನೀವು ಅಟೆಂಡ್ ಮಾಡಿ. ನಿಮ್ಮ ತಿಳುವಳಿಕೆಯ ವಿಸ್ತಾರಕ್ಕೆ ಹೆಲ್ಪ್ ಆಗುತ್ತೆ’ ಎಂದು ಹೇಳಿ ಅವತ್ತು ನನ್ನನ್ನು ಬಿಳ್ಕೊಟ್ಟರು.

* * *

ಲೈಂಗಿಕ ಕಾರ್ಮಿಕರ ಪ್ರೆಸ್‌ಮೀಟ್ ಅಟೆಂಡ್ ಮಾಡುವ ಕುತೂಹಲದಿಂದ ರೂಮಿನಿಂದ ಬೇಗನೆ ರೆಡಿಯಾಗಿ ಅವತ್ತು ಆಫೀಸಿಗೆ ಬಂದಿದ್ದೆ. ಹಾಲ್‌ನಲ್ಲಿನ ಕುರ್ಚಿಗಳ ಮೇಲೆ ಬೇಕಾಬಿಟ್ಟಿಯಾಗಿ ಪತ್ರಕರ್ತರು ಪ್ಯಾಡು, ಪೆನ್ನು ಹಿಡಕೊಂಡು ಕುಳಿತುಕೊಂಡಿದ್ದರು. ನಾನು ಅವರ ಪಕ್ಕವೆ ಹೋಗಿ ಖಾಲಿ ಇರುವ ಖುರ್ಚಿಯೊಂದರ ಮೇಲೆ ಕುಳಿತುಕೊಂಡೆ. ರಾಜನ್ ಕೂಡ ಬಂದು ಅಲ್ಲಿಯೆ ವೇದಿಕೆ ಪಕ್ಕದ ಕುರ್ಚಿಯಲ್ಲಿ ಕುಳಿತರು. ಲೈಂಗಿಕ ಕಾರ್ಯಕರ್ತರ ಒಕ್ಕೂಟದ ಪದಾಧಿಕಾರಿಗಳು ವೇದಿಕೆಯ ಮೇಲೆ ಕುಳಿತು ಇನ್ನು ಯಾರಾದರೂ ಬರಬಹುದೆ ಎಂದು ಕಾಯುತ್ತಿದ್ದರು. ಆಗಷ್ಟೆ ಟಿವಿ ವಾಹಿನಿಯ ಟೀಶರ್ಟ್-ಜೀನ್ಸ್‌ಧಾರಿ ಹುಡುಗಿಯರು ಬಂದದ್ದರಿಂದ ವೇದಿಕೆಯ ಮೇಲೆ ಕುಳಿತಿದ್ದ ಎಲ್ಲ ಲೈಂಗಿಕ ಕಾರ್ಮಿಕರು ಎದ್ದುನಿಂತು ಅವರಿಗೆ ಗೌರವ ತೋರಿಸಿದರು.

ವೇದಿಕೆಯ ಮೇಲಿನ ಡ್ರಮ್ಮುದೇಹಿ ಮಹಿಳೆಯೊಬ್ಬಳು ಎದ್ದು ಬಂದು ರಾಜನ್ ಸರ್ ಹತ್ತಿರ ಮಂಡಿಯೂರಿ ಕುಳಿತುಕೊಂಡು ಅದೆನನ್ನೂ ಕೇಳಿದಾಗ ಅವರು ಸಮ್ಮತಿ ಸೂಚಿಸಿದಂತೆ ಗೋಣು ಹಾಕಿದ್ದು ನನಗೆ ಕಾಣಿಸಿತು. ಮತ್ತೆ ವೇದಿಕೆ ಹತ್ತಿದ ಅವಳು, ಮೈಕು ತೆಗೆದುಕೊಂಡು ’ಎಲ್ಲ ಪ್ರೆಸ್‌ನೋರಿಗೆ ನಮಸ್ಕಾರ ಸರ್. ನಮ್ಮಂಥವರ ಮೇಲೆ ಕರುಣೆಯಿಟ್ಟು ಇವತ್ತಿನ ಸುದ್ದಿಗೋಷ್ಠಿಗೆ ಬಂದದ್ದಕ್ಕೆ ನಿಮಗೆಲ್ಲ ಸ್ವಾಗತ ಕೋರುತಿನಿ’ ಎಂದು ಬರಮಾಡಿಕೊಳ್ಳುತ್ತಿರುವಾಗ ಇಲ್ಲೊಬ್ಬಳು ಪತ್ರಿಕಾ ಹೇಳಿಕೆಗಳನ್ನು, ಮತ್ತೊಬ್ಬಳು ಕರಪತ್ರಗಳನ್ನು ಹಂಚುತ್ತ ನನ್ನ ಕಡೆಯೆ ಬಂದರು. ಪತ್ರಿಕಾ ಹೇಳಿಕೆಯನ್ನು ಕೊಡಲು ಬಂದ ಇಬ್ಬರಲ್ಲಿ ಒಬ್ಬಳನ್ನು ಎಲ್ಲಿಯೋ ನೋಡಿದ ಹಾಗಿದೆಯಲ್ಲ ಎಂದು ನನಗೆ ಅನುಮಾನ ಬರಲು ಶುರುವಾಯಿತು. ಎಲ್ಲಿ ಎಂದು ನೆನಪಾಗುತ್ತಿಲ್ಲ. ಆದರೆ ಅವಳು ಹತ್ತಿರದಿಂದ ಗೊತ್ತಾದ್ದವಳು ಎಂದು ನನ್ನ ಮನಸ್ಸು ಹೇಳುತ್ತಿದೆ. ಹೀಗೆ ತಲೆ ಕೆಡಿಸಿಕೊಂಡಿರುವಾಗಲೆ ನನ್ನ ಹತ್ತಿರಕ್ಕೆ ಕರಪತ್ರ ಕೊಡಲು ಬರುವ ಅವಳು, ಒಂದು ಕ್ಷಣ ಗಾಬರಿಯಿಂದ ನನ್ನನ್ನು ನೋಡಿ ಗಡಿಬಿಡಿಯಿಂದ ಕರಪತ್ರ ಕೊಟ್ಟು ಮರಳಿ ಹಿಂದಕ್ಕೆ ನೋಡದೆ ಅಲ್ಲಿಂದ ಜಾಗ ಖಾಲಿ ಮಾಡಿದಳು. ಅವಳು ಕರಪತ್ರ ಕೊಡುವಾಗಿನ ಅವಳ ಕೈಗಳು ಸಂಪೂರ್ಣವಾಗಿ ನಡುಗುತ್ತಿದ್ದವು. ಇಬ್ಬರ ಕಣ್ಣುಗಳು ಸಂಧಿಸಿದಾಗ ಅವಳ ಕಣ್ಣುಗಳು ನನ್ನ ಕಣ್ಣುಗಳಿಂದ ತಪ್ಪಿಸಿಕೊಳ್ಳಲಿಕ್ಕೆ ಹವಣಿಸುತ್ತಿದ್ದುದು ನನ್ನ ಗಮನಕ್ಕೆ ಬಂತು. ನಾನು ಗಾಬರಿಯಿಂದ ಅವಳತ್ತ ನೋಡುತ್ತಲೆ ಇದ್ದೆ. ಆದರೆ ಕರಪತ್ರಗಳನು ಹಂಚಲು ಇನ್ನೊಬ್ಬಳಿಗೆ ಹೇಳಿ ವೇದಿಕೆಯ ಮುಂಭಾಗಕ್ಕೆ ಹೋಗಿ ಅಲ್ಲಿ ಕುಳಿತದ್ದು ನನಗೆ ಕಾಣಿಸಿತು.

ಪಕ್ಕದ ಸೀಟಿನಲ್ಲಿ ಕುಳಿತಿದ್ದ ಪತ್ರಕರ್ತನೊಬ್ಬ ನನ್ನತ್ತ ವ್ಯಂಗ್ಯದಿಂದ ನೋಡಿ ಕಣ್ಣು ಹಾರಿಸಿ ನನ್ನನ್ನು ಮುಜಗರಕ್ಕೆ ಈಡು ಮಾಡಿದ. ನನಗೆ ಕಿರಿಕಿರಿಯೆನಿಸಿ ವೇದಿಕೆ ಕಡೆ ನೊಡುತ್ತಾ ಕುಳಿತುಬಿಟ್ಟೆ. ಮತ್ತೊಬ್ಬಳು ಎದ್ದುನಿಂತು ’ಎಲ್ಲರಿಗೂ ನಮಸ್ಕಾರ. ನನ್ನೆಸ್ರು ಪ್ರೇಮಾ ಅಂತ. ನಾನ್ ಚಿತ್ರದುರ್ಗದೋಳು. ನಾನು ಇನ್ನೂ ವಯಸ್ಸಿಗೆ ಬರುವ ಮುಂಚೆನೇ ನನ್ನವ್ವ ನನ್ನಪ್ಪ ಬೆಂಗಳೂರಿಗೆ ಕೆಲಸ ಹುಡುಕಿಕೊಂಡು ಬಂದ್ರು. ಹೆಣ್ಣೂರು ಕ್ರಾಸ್ ಹತ್ತಿರ ಗುಡಿಸಲು ಹಾಕ್ಕೊಂಡು ಬಿಲ್ಡಿಂಗ್ ಕೆಲಸ ಮಾಡ್ಕೊಂಡು ಹೆಂಗೋ ದಿನ ಕಳಿತಿದ್ವಿ. ಮುಂಚಿನಿಂದಲೂ ನಮ್ಮವ್ವ ಅಸ್ತಮಾ ಪೆಸೆಂಟ್ ಆಗಿದ್ಲು. ಅಪ್ಪ ಸ್ವಲ್ಪ ಕುಡಿತಿದ್ದ. ಅವ್ವ ಒಂದೀನ ಇದ್ದಕಿದ್ದಂತೆ ಸತ್ತ ಹೋದ್ಲು. ಅಪ್ಪ ಅವತ್ತಿನಿಂದ ಕುಡಿಯೋದನ್ನು ಹೆಚ್ಚು ಮಾಡಿದ. ಒಂದು ದಿನ ಹೊರಹೋದ ಅಪ್ಪ ಮರಳಿ ಬರಲೇ ಇಲ್ಲ. ನಾನಾಗಲೆ ಮೈನರೆದು ಆರು ತಿಂಗಳು ಆಗಿತ್ತು. ಗಂಡಸರ ಕಾಮದ ಕಣ್ಣು ಬಿದ್ದು ನಾನು ಈ ವೃತ್ತಿಗೆ ಇಳಿಯಬೇಕಾಯಿತು’ ಎಂದು ತನ್ನನ್ನು ತಾನು ಪರಿಚಯಿಸಕೊಳ್ಳಬೇಕಾದರೆ ಅವಳ ಕಣ್ಣುಗಳು ತುಂಬಿ ಬಂದಿದ್ದವು.

ಅವಳು ಕುಳಿತಾದ ಮೇಲೆ ಮತ್ತೊಬ್ಬಳು ಎದ್ದುನಿಂತು ’ನನ್ನನ್ನು ಪ್ರೀತಿಸಿ ಮದುವೆಯಾದ ನಮ್ಮೆಜಮಾನ್ರೆ ನನ್ನಲ್ಲಿ ನೂರಾರು ಕನಸು ಹುಟ್ಟಿಸಿ ಇಲ್ಲಿಗೆ ಕರಕೊಂಡು ಬಂದ್ರು. ಈ ಸಿಟಿಯ ಶೋಕಿಗೆ ಬಿದ್ದು, ತಾನು ದುಡಿದಿದ್ದು ಸಾಕಾಗದೆ ನಾನು ಹೂವು ಮಾರಾಟ ಮಾಡಬೇಕಾತು. ಆಮೇಲೆ ಅದೂ ಸಾಲದೆ ಆತನೆ ತನ್ನ ಗೆಳೆಯರನ್ನು ಕರೆದುಕೊಂಡು ಬಂದು ಪಿಂಪ್‌ನಂತೆ ವರ್ತಿಸತೊಡಗಿದ’ ಎಂದು ಕಣ್ಣೀರು ತಡೆದುಕೊಂಡ ಅವಳು ’ಆದರೆ ನಾನು ಅವತ್ತನ ತರಹ ಈಗ ಕಣ್ಣೀರು ಹಾಕಲ್ಲ. ಯಾಕ ಹಾಕಲ್ಲ ಅಂತ ಕೇಳಿದರೆ ಅತ್ತು ಅತ್ತು ಕಣ್ಣೀರು ಖಾಲಿ ಆಗಿದೆ. ಅತ್ತರೂ ಕೂಡ ನಮ್ಮ ಬದುಕು ಬದಲಾಗೋದೆಲ್ಲಿ?’ ಎಂದು ವಿಷಾದದಿಂದ ಹೇಳಿ ಕುಳಿತುಕೊಂಡಳು. ಹೀಗೆ ಇದೆ ತರಹದಲ್ಲಿ ಒಂದಿಬ್ಬರು ತಾವು ಯಾಕೆ ವೇಶ್ಯಾವೃತ್ತಿಗೆ ಇಳಿಬೇಕಾತು. ಅದರ ಹಿಂದಿನ ಕಾರಣಗಳೇನು. ಅನ್ನೊದರ ಬಗೆಗೆ ಕೂಲಂಕುಷವಾಗಿ ತಮ್ಮ ತಮ್ಮ ಭಾಷೆಗಳಲ್ಲಿಯೇ ಹೇಳಿ ಕುಳಿತುಕೊಂಡರು.

ಕೊನೆಯಲ್ಲಿ ಆ ಯೂನಿಯನ್ನಿನ ಅಧ್ಯಕ್ಷೆ ಎದ್ದು ನಿಂತು ’ಈ ವೇಶ್ಯಾವೃತ್ತಿ ಸಾವಿರಾರು ವರ್ಷಗಳಿಂದಲೂ ನಿರಾತಂಕವಾಗಿ ಹಿಂಗೆ ನಡಕೊಂಡು ಬಂದಿದೆ. ಕೌಟಿಲ್ಯನ ಅರ್ಥ ಶಾಸ್ತ್ರದಲ್ಲಿ ಇದಕ್ಕೆ ಆಧಾರಗಳು ಸಿಗ್ತಾವೆ. ಮೊದಲೆಲ್ಲ ಮುಕ್ತ ಲೈಂಗಿಕ ಜೀವನಪದ್ದತಿಯೆ ಚಾಲ್ತಿಯಲ್ಲಿದ್ದು ನಿಧಾನಕ್ಕೆ ಮದುವೆ ಪದ್ದತಿ ಜಾರಿಗೆ ಬಂದಿರುವುದಕ್ಕೆ ಪುರಾವೆಗಳಿವೆ. ಹಿಂದಿನ ಕಾಲದಲ್ಲಿ ಸೂಳೆ ತೆರಿಗೆಗಳು ಸಂಗ್ರಹವಾಗಿ ಒಳ್ಳೆಯ ಕೆಲಸಕ್ಕೆ ಬಳಕೆಯಾಗುತ್ತಿದ್ದವು’ ಎಂದು ಇನ್ನೆನೇನೋ ವಿವರಿಸುತಲ್ಲಿದ್ದಳು. ಆದರೆ ಪ್ರತಿದಿನ ಇಂತಹ ಹತ್ತಾರು ಪ್ರೆಸ್‌ಮೀಟ್‌ಗಳಿಗೆ ಹಾಜರಾಗುವ ಪತ್ರಕರ್ತರು ಈಗಾಗಲೆ ತಮ್ಮ ತಾಳ್ಮೆಯನ್ನು ಕಳೆದುಕೊಂಡಿದ್ದರು ಎಂಬುದು ಅವರ ಮಿಸುಕಾಟ, ಆಕಳಿಕೆಗಳಲ್ಲಿಯೆ ನನಗೆ ತಿಳಿಯುತ್ತಿತ್ತು. ತಾಳ್ಮೆಯನ್ನು ಕಳೆದುಕೊಂಡು ಸಿಟ್ಟಿಗೆದ್ದ ಹಿರಿಯ ಪತ್ರಕರ್ತನೊಬ್ಬ ’ಓ, ಅದೆಲ್ಲ ಇತಿಹಾಸ ಹೇಳಬ್ಯಾಡ್ರಿ. ಈಗ ನಿಮಗೇನಾಗಬೇಕಾಗೇತಿ ಅಷ್ಟ ಹೇಳಿ’ ಎಂದು ಆ ಮಹಿಳೆಯ ವಿವರಣೆಗೆ ಸೊನ್ನೆಯಿಟ್ಟ. ಆಗ ಮಹಿಳೆ ವಿಧಿಯಿಲ್ಲದೆ ’ಈ ವೃತ್ತಿಯಲ್ಲಿ ತೊಡಗಿರುವವರು ಕೂಡ ಮನುಷ್ಯರಽ ಅದಾರ್ರಿ. ಪರಿಸ್ಥಿತಿಯ ಒತ್ತಡಕ್ಕೆ ಸಿಕ್ಕು  ಹಾಕ್ಕೊಂಡು ಈ ವೃತ್ತಿಗಿಳಿಯುವ ನಮಗೂ ಸೈತ ಎಲ್ಲ ಸೌಲಭ್ಯಗಳನ್ನು ನೀಡಬೇಕು.

ಓಟು ಹಾಕಾಕ ನಮಗೂ ಅವಕಾಶ ಕೊಡಬೇಕು. ರೇಷನ್ ಕಾರ್ಡ್ ಕೊಡಬೇಕು. ಲೈಂಗಿಕ ಕಾರ್ಮಿಕರನ್ನು ಟಿವಿ, ಪೇಪರ್‌ನಲ್ಲಿ ಹಾಕುವಾಗ ಗೌಪ್ಯತೆ ಕಾಪಾಡಬೇಕು. ಗಿರಾಕಿಯೊಂದಿಗೆ ಇರದಿದ್ರೂ ನಮ್ಮನ್ನು ಪೊಲೀಸರು ಬಂಧಿಸತಾರ. ಇದು ನಿಲ್ಲಬೇಕು. ನಮ್ಮ ಮಕ್ಕಳಿಗೆ ಉಚಿತ ಶಿಕ್ಷಣ ಕೊಡಬೇಕು. ನಮ್ಮ ಮಕ್ಕಳಿಗೆ ಶಾಲೆಯಲ್ಲಿ ತಂದೆ ಹೆಸರು ಹೇಳುವಂತೆ ಒತ್ತಾಯಿಸಬಾರದು. ಆಸ್ಪತ್ರೆಗಳಿಂದ ಔಷಧಿ ಸರಬರಾಜು ಮತ್ತು ಪುಕ್ಕಟ್ಟೆ ಕೌನ್ಸೆಲಿಂಗ್ ನಡೆಸಬೇಕು. ಈ ಎಲ್ಲ ಬೇಡಿಕೆಗಳಿಗಾಗಿ ನಾವು ಕಿತ್ತೂರು ಚೆನ್ನಮ್ಮ ಸರ್ಕಲ್ ಮುಂದ ಪ್ರತಿಭಟನೆ ಇಟ್ಟುಗೊಂಡಿವಿರಿ. ಇದರ ಬಗ್ಗೆ ದಯವಿಟ್ಟು ನಿಮ್ಮ ಪೇಪರನ್ಯಾಗ ಸ್ವಲ್ಪ ಬರೀರಿ. ಅಷ್ಟಾ ನಾವು ಕೇಳಿಕೊಳ್ಳುವುದು ಎಂದು ಹೇಳಿ ಕೈ ಮುಗಿದಳು.

ಇಷ್ಟ ಹೇಳಿ ಪ್ರೆಸ್‌ಮೀಟ್ ಮುಗಿಸುವುದರಲ್ಲಿದ್ದರು. ಆದರೆ, ಆ ಮಹಿಳೆಯರ ಏರು ತಗ್ಗುಗಳ ಮೇಲೆ ಲಕ್ಷವಿಟ್ಟಿದ್ದ ಆಕಳು ಮುಖದ ಪತ್ರಕರ್ತನೊಬ್ಬ ’ಅಲ್ಲ, ನೀವು ಸೂಳಿಗಾರಿಕೆ ಯಾಕ ಮಾಡಬೇಕು? ಹೊಟ್ಟೆಗಾಗಿ ಬೇರೆ ಸಾಕಷ್ಟು ಜಾಬ್ ಮಾಡಬಹುದಲ್ಲ?’ ಎಂದು ಪ್ರಶ್ನೆ ಎಸೆದ. ಒಕ್ಕೂಟದ ಅಧಕ್ಷೆ ಎನಿಸಿಕೊಂಡವಳು ಎದ್ದು ನಿಂತು ’ನಮಗೂ ಬೇರೆ ಕೆಲಸ ಮಾಡಬೇಕಂತ ತುಂಬಾ ಆಸೆ ಐತಿ ಸರ್, ಆದರೆ ಸಮಾಜ ಬಿಡಬೇಕಲ್ಲ? ಫಸ್ಟು ನಮ್ಮಂಥೋರಿಗೆ ಕೆಲಸ ಸಿಗೋದಿಲ್ಲ, ಸಿಕ್ಕರೂ ಬಹಳ ದಿನ ಆ ಕೆಲಸದಲ್ಲಿ ಮುಂದುವರಿಲಿಕ್ಕೆ ನಮ್ಮ ಹಿಂದಿನ ಗ್ರಹಚಾರ ಬಿಡೋದಿಲ್ಲ. ನಮ್ಮ ಹಿಂದಿನ ಚಾಳಿ ಗೊತ್ತಾದ ಮಾಲೀಕರು ಒಂದು ಕೆಲಸ ಬಿಡ್ಸತಾರೆ, ಇಲ್ಲಾಂದ್ರೆ ತಮ್ಮ ಚಟಕ್ಕೆ ಬಳಸಕೊಳ್ಳಾಕ ನೋಡತಾರೆ. ಮೊದಲು ನಾವು ಈ ದಂಧೆಗೆ ಇಳಿಬಾರದಿತ್ತು, ಇಳದ ಮ್ಯಾಲ ನಾವು ಬಿಡಬೇಕಂದ್ರೂ ನಮ್ಮನ್ನು ಈ ದಂಧೆ ಬಿಡೂದಿಲ್ಲ’ ಎಂದು ವಿಷದಾದದಿಂದಲೇ ನಕ್ಕು ನುಡಿದಳು. ಆ ಪತ್ರಕರ್ತ ಅವಳ ಮುಖವನ್ನೆ ನೋಡುತ್ತ ಮತ್ತೆ ಕನಸಿನಲ್ಲಿ ತಲ್ಲೀನನಾದ.

ಹಿಂದೆ ಕುಳಿತಿದ್ದ ಒಂದಿಬ್ಬರು ’ಇಂಥವರದು ದಿನಾಲೂ ಇದ್ದದ್ದೆ ಗೋಳು’ ಎಂದು ಗೊಣಗಿಕೊಳ್ಳುತ್ತಾ ಹೊರಗೆ ಹೋಗುತ್ತಿರುವುದನ್ನು ಗಮನಿಸಿದ ರಾಜನ್ ಸರ್ ಸುದ್ದಿಗೋಷ್ಠಿ ಮುಗಿಸಲು ಕಣ್ಸನ್ನೆ ಮಾಡಿದ್ದರಿಂದ ಒಕ್ಕೂಟದ ಅಧ್ಯಕ್ಷೆ ಎದ್ದು ನಿಂತು ’ಇಲ್ಲಿಗೆ ನಮ್ಮ ಸುದ್ದಿಗೋಷ್ಠಿ ಮುಗಿತು. ಎಲ್ರಿಗೂ ನಮಸ್ಕಾರ’ ಎಂದು ಮುಖದ ಮೇಲೆ ನಗು ತಂದುಕೊಂಡು ಎಲ್ಲರಿಗೂ ಕೈ ಮುಗಿದಳು. ಆ ನಗು ಕೃತಕವಾಗಿರಬಹುದಾ? ಎಂಬ ಪ್ರಶ್ನೆ ಕಾಡುತ್ತಿರುವಾಗಲೇ ಅದನ್ನು ಹಿಂದಿಕ್ಕಿಕೊಂಡು, ’ಯಾರು ಆ ಹುಡುಗಿ’ ಎಂದು ಕರಪತ್ರ ಹಂಚುತ್ತಿದ್ದ ಹುಡುಗಿಯತ್ತ ನೆನಪು ಧಾವಿಸಿತು. ಆಗಲೆ ಎಲ್ಲ ಪತ್ರಕರ್ತರು ಎದ್ದು ಬಾಗಿಲಕಡೆ ಮುಖ ಮಾಡಿದ್ದರು. ನಾನು ಗದ್ದಲದಲ್ಲಿಯೆ ಎದ್ದುನಿಂತು ಆ ಹುಡುಗಿ ಕುಳಿತುಕೊಂಡಿದ್ದ ಸ್ಥಳದತ್ತ ನಡೆದೆ. ಆದರೆ, ಅವಳು ಅಲ್ಲಿ ಕಾಣಲಿಲ್ಲ. ಅಲ್ಲಿಂದ ಹೊರಬಂದು ಕಣ್ಣಾಡಿಸಿದೆ. ಅಲ್ಲಿಯೂ ಕಾಣಲಿಲ್ಲ. ಗೇಟ್ ಹತ್ತಿರ ಓಡಿ ಹೋಗಿ ನೋಡಿದರೆ, ’ಅಲ್ಲಿ ಲೈಂಗಿಕ ಕಾರ್ಯಕರ್ತೆಯ ಗುಂಪೊಂದು ತಮ್ಮೊಳಗೆ ಮಾತನಾಡಿಕೊಳ್ಳುತ್ತಾ ಪ್ರೆಸ್‌ಕ್ಲಬ್ ಬಾಗಿಲಿನಿಂದ ಹೊರ ಹೋಗುತ್ತಿದ್ದರು. ಆ ಗುಂಪಿನಲ್ಲಿ ಆ ಹುಡುಗಿ ಮುಖ ಕೂಡ ಕಂಡಿತು. ಅಚಾನಕ್ಕಾಗಿ ಅವಳ ದೃಷ್ಟಿ ನನ್ನತ್ತ ತಿರುಗಿತು. ಅಲ್ಲಿ ನನ್ನನ್ನು ನೋಡಿದ ಅವಳು, ಆ ಕ್ಷಣದಲ್ಲಿಯೇ ದೃಷ್ಟಿಯನ್ನು ಮತ್ತೊಂದು ಕಡೆ ತಿರುಗಿಸಿ ಗುಂಪಿನಲ್ಲಿನ ಗೆಳತಿಯರೊಂದಿಗೆ ವೇಗವಾಗಿ ನಡೆಯತೊಡಗಿದಳು. ಹೇಗಾದರೂ ಸರಿ, ಅವಳನ್ನು ಮಾತಾಡಿಸಿಯೆ ಬಿಡಬೇಕೆಂದು ಬೆನ್ನತ್ತಿದಾಗ ’ರಾಜನ್ ಸರ್, ನಿಮ್ಮನ್ನು ಕರಿಯಾಕ ಹತ್ಯಾರರಿ’ ಎಂದು ಆಫೀಸ್ ಕಡೆಯಿಂದ ಕೂಗು ಬಂದಿದ್ದರಿಂದ ನಾನು ಅನಿವಾರ್ಯವಾಗಿ ಆಫೀಸ್ ಕಡೆ ನಡೆದೆನು.

ರಾಜನ್ ಸರ್ ನನಗೆ ಕಿಮ್ಸ್ ಆಸ್ಪತ್ರೆಗೆ ಹೋಗಿ ಮಹಿಳೆಯರ ಆರೋಗ್ಯಕ್ಕೆ ಸಂಬಂಧಿಸಿದ ವರದಿಯೊಂದನ್ನು ತರಬೇಕೆಂದು ಹೇಳಿದರು. ನನಗೆ ಆ ಹುಡುಗಿಯ ಮುಖವೇ ಕಣ್ಣೆದುರಿಗೆ ಬಂದು ಕಾಡುತ್ತಿತ್ತು. ನಾನು ನನ್ನ ಸ್ಕೂಟರ್ ಮೇಲೆ ಕುಳಿತು ಕಿಕ್‌ಗೆ ಜೋರಾಗಿ ಒದ್ದೆ. ಆ ಹುಡುಗಿ ಹಾವೇರಿಯ ಹಲಗೇರಿಯವಳಲ್ಲವೆ ಎಂದು ನನಗೆ ಸಡನ್ನಾಗಿ ಜ್ಞಾಪಕಕ್ಕೆ ಬರತೊಡಗಿತು.

* * *

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
ಹಿಪ್ಪರಗಿ ಸಿದ್ದರಾಮ್, ಧಾರವಾಡ
ಹಿಪ್ಪರಗಿ ಸಿದ್ದರಾಮ್, ಧಾರವಾಡ
10 years ago

ಅಬ್ಬಾ…!!!!

1
0
Would love your thoughts, please comment.x
()
x