ಇತಿಹಾಸವನ್ನು ಓದುವ ಬದಲು ಒಮ್ಮೊಮ್ಮೆ ಕಿವಿಗೊಟ್ಟು ಕೇಳಬೇಕು: ನಟರಾಜು ಎಸ್. ಎಂ.

ನಮ್ಮ ಆಫೀಸಿನಲ್ಲಿ ಇಬ್ಬರು ಡ್ರೈವರ್ ಇದ್ದಾರೆ. ಒಬ್ಬ ತುಂಬಾ ಚುರುಕು ಮತ್ತು ಆಫೀಸ್ ಕೆಲಸದಲ್ಲಿ ಆಸಕ್ತಿ ಉಳ್ಳವನಾದರೆ ಮತ್ತೊಬ್ಬ ಮಹಾನ್ ಸೋಮಾರಿ. ಫೀಲ್ಡ್ ವಿಸಿಟ್ ಗಳಿಲ್ಲದ ದಿನ ಆ ಸೋಮಾರಿ ನನ್ನ ಚೇಂಬರ್ ಗೆ ಬಂದು "ರಾಜು ದಾ ಇವತ್ತು ಯಾವುದು ಫೀಲ್ಡ್ ವಿಸಿಟ್ ಇಲ್ಲವಾ? ಕೆಲಸ ಇಲ್ಲದೆ ತುಂಬಾ ಬೇಜಾರಾಗಿದೆ. ಯಾವುದಾದರು ಪ್ರೊಗ್ರಾಮ್ ಇದ್ದರೆ ತಿಳಿಸಿ" ಎಂದು ಕೇಳುತ್ತಾನೆ. ಫೀಲ್ಡ್ ವಿಸಿಟ್ ಇರುವ ದಿನ ಇವತ್ತು ಗಾಡಿ ರಿಪೇರಿ ಇದೆ ರಾಜು ದಾ ಎಂದು ಹೇಳುತ್ತಲೋ ಇಲ್ಲ ತನಗೆ ಹುಷಾರಿಲ್ಲ ಎಂದು ಹೇಳುತ್ತಲೋ ಗಾಡಿ ಚಲಾಯಿಸುವ ರಗಳೆಯಿಂದ ತಪ್ಪಿಸಿಕೊಳ್ಳಲು ಪಿಳ್ಳೆ ನೆವ ಹುಡುಕುತ್ತಾನೆ. ಅವನು ಹಾಗೆ ಸುಳ್ಳು ಹೇಳಿ ಕೆಲಸದಿಂದ ಜಾರಿಕೊಂಡ ದಿನ ಆತನು ಮಾಡಬೇಕಾಗಿದ್ದ ಕೆಲಸ ಮತ್ತೊಬ್ಬ ಚುರುಕಾದ ಡ್ರೈವರ್ ಗೆ ದೊರೆಯುತ್ತದೆ. ಆ ಚುರುಕು ಡ್ರೈವರ್ ಯಾವ ಸಮಯದಲ್ಲಾದರು ಎಲ್ಲಿಗೆ ಹೋಗಬೇಕೆಂದರೂ "ಸರ್, ನಾನ್ ರೆಡಿ. ಹಮ್ ಹೈ ನಾ?" ಎನ್ನುತ್ತಾನೆ. ಆ ಚುರುಕು ಡ್ರೈವರ್ ನ ಜೊತೆ ಎಷ್ಟೊಂದು ದಿನ ಫೀಲ್ಡ್ ವಿಸಿಟ್ ಗೆ ಹೋಗಿದ್ದೆನಾದರೂ ಮಹಾನ್ ಸೋಮಾರಿ ಡ್ರೈವರ್ ನ ಜೊತೆ ಫೀಲ್ಡ್ ವಿಸಿಟ್ ಗೆಂದು ಹೋಗಿದ್ದು ಕಡಿಮೆ. 

ಆ ಕಡಿಮೆ ಎನ್ನಬಹುದಾದ ಒಂದೆರಡು ಬಾರಿಯ ಪ್ರಯಾಣದಲ್ಲಿ ಆ ಸೋಮಾರಿ ಡ್ರೈವರ್ ನನ್ನೊಡನೆ ಮಾತನಾಡಿದ್ದು ತುಂಬಾ ತುಂಬಾ ಕಡಿಮೆ. ಒಮ್ಮೆ ಆಫೀಸ್ ಕೆಲಸದ ನಿಮಿತ್ತ ನನ್ನ ಸರ್ ಜೊತೆ ತಾಲ್ಲೂಕು ವೈದ್ಯಾಧಿಕಾರಿ ಕಚೇರಿಯೊಂದಕ್ಕೆ ಭೇಟಿ ನೀಡಿ ಅವರನ್ನು ಅವರ ಮನೆಗೆ ಬಿಟ್ಟು ನನ್ನ ಮನೆ ಕಡೆಗೆ ಆ ಕಾರಿನಲ್ಲಿ ಪಯಣ ಬೆಳಿಸಿದ್ದೆ. ಆ ದಿನ ನಮ್ಮ ಆಫೀಸ್ ಕಾರಿನ ಡ್ರೈವರ್ ಆ ಸೋಮಾರಿಯೇ ಆಗಿದ್ದ. ಸುಮಾರು ಮುನ್ನೂರು ಕಿಲೋ ಮೀಟರ್ ಸುತ್ತಾಡಿ ದಣಿದಿದ್ದ ನಾನು ಸ್ವಲ್ಪ ಮಂಕಾಗಿಯೇ ಇದ್ದೆ. ಸೂರ್ಯ ಮುಳುಗಿ ಕತ್ತಲಾಗುತ್ತಿತ್ತು. ಸುಮಾರು 50 ಕಿಲೋ ಮೀಟರ್ ದಾರಿಯನ್ನು ಒಬ್ಬನೇ ಡ್ರೈವ್ ಮಾಡಿ ಕಳೆಯಲಾಗದ ಬೇಸರಕ್ಕೋ ಏನೋ ಆ ಡ್ರೈವರ್ ನನ್ನೊಡನೆ ಮೊದಲ ದಿನ ಮನಬಿಚ್ಚಿ ಮಾತಿಗೆ ಇಳಿದಿದ್ದ. "ರಾಜು ದಾ ನನ್ನ ಬಗ್ಗೆ ನಿಮಗೇನಾದರು ಗೊತ್ತಾ? ನಾನು ಈ ಕೆಲಸಕ್ಕೆ ಯಾಕೆ ಸೇರಿದೆ ಅಂತ ನಿಮಗೆ ಗೊತ್ತಾ?" ಎಂಬಂತೆ ನನ್ನೆಡೆಗೆ ಪ್ರಶ್ನೆ ಎಸೆದಿದ್ದ. ಅವನ ಪ್ರಶ್ನೆಗೆ ಸುಸ್ತಾಗಿ ಕುಳಿತ್ತಿದ್ದವನ ಮುಖದ ಮೇಲೆ ಮಂದಹಾಸ ಮೂಡಿ ನಗುತ್ತಾ "ನಿನ್ನ ಬಗ್ಗೆ ನನಗೇನು ಗೊತ್ತಿಲ್ಲ" ಎಂದು ಉತ್ತರಿಸಿ ದೂರದಲ್ಲಿ ಹರಿಯುತ್ತಿದ್ದ ತೀಸ್ತಾ ನದಿಯ ಕಡೆ ದೃಷ್ಟಿ ನೆಟ್ಟಿದ್ದೆ. 

ಅದೇ ದಿನ ಅಲ್ಲಲ್ಲಿ ರಸ್ತೆ ಬದಿಯಲ್ಲಿ ಪುಟ್ಟ ಮಕ್ಕಳು ಅದೇನೋ ಪೂಜೆ ಮಾಡ್ತಾ ಇದ್ರು. ರಸ್ತೆಯ ಬದಿಯಲ್ಲಿ ಅಲ್ಲಲ್ಲಿ ಕಂಡ ಹುಡುಗರ ಕಂಡು ನಾನು ಆ ಪೂಜೆಯ ಕುರಿತು ತಿಳಿಯಲು  "ಈ ಹುಡುಗರು ಏನು ಮಾಡ್ತಾ ಇದ್ದಾರೆ ಗೋವಿಂದ?" ಎಂದೆ.  "ರಾಜು ದಾ. ನೋಡಿ ಈ ಹುಡುಗ್ರು ಪೂಜೆ ಮಾಡ್ತಾ ಇದ್ದಾರಲ್ಲ. ಇದು ಭೂಮಿ ಪೂಜೆ. ಹೆಣ್ಣು ಮುಟ್ಟಾಗುವ ಹಾಗೆ ಭೂಮಿ ತಾಯಿಯೂ ಪ್ರತಿ ವರ್ಷ ಈ ಸಮಯದಲ್ಲಿ ಮುಟ್ಟಾಗುತ್ತಾಳೆ ಎನ್ನುವ ನಂಬಿಕೆ ನಮ್ಮ ಜನಾಂಗದ್ದು. ನಮ್ಮ ಜನಾಂಗ ಅಂದ್ರೆ ನಾವು ರಾಜವಂಶಿಗಳು. ಈ ಮಣ್ಣಿನ ಮಕ್ಕಳು. ಮೊದಲೆಲ್ಲಾ ಈ ಪೂಜೆ ಹದಿನೈದು ದಿನ ನಡೆಯುತ್ತಿತ್ತು. ಅಷ್ಟು ದಿನವೂ ಯಾರು ಸಹ ವ್ಯವಸಾಯದ ಯಾವುದೇ ಕೆಲಸವನ್ನು ಮಾಡುವಂತಿರಲಿಲ್ಲ. ಭೂಮಿ ತಾಯಿಗೆ ರೆಸ್ಟ್ ಕೊಡುವುದು ನಮ್ಮ ಸಂಸ್ಕೃತಿ ಆಗಿತ್ತು. ಈ ದಿನ ದೊಡ್ಡವರು ವಿಧವಿಧದ ಹಣ್ಣುಗಳನ್ನು ತಂದು  ಪೂಜೆ ಮಾಡುತ್ತಿರುವ ಹುಡುಗರಿಗೆ ನೀಡುತ್ತಾರೆ. ಇದು ನಮ್ಮ ಒಂದು ಆಚರಣೆ." ಎಂದು ಭೂಮಿ ತಾಯಿ ಮುಟ್ಟಾಗುವ ಕತೆ ಕೇಳಿ ನನ್ನ ಹುಬ್ಬೇರಿಸಿದ್ದ.  ಕಾರಿನಲ್ಲಿ ಹೋಗುವಾಗ ಅಲ್ಲೆಲ್ಲೋ ಹೊಲದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ತೋರಿಸಿ "ಅಲ್ಲಾ ಗೋವಿಂದ, ನೀನು ಭೂಮಿ ತಾಯಿಗೆ ರೆಸ್ಟ್ ಕೊಡಬೇಕು ಅಂತೀಯ. ಅಲ್ಲಿ ನೋಡಿದ್ರೆ ಆ ಯಪ್ಪಾ ಹೊಲದಲ್ಲಿ ಅದೂ ಈ ಸಂಜೆ ಹೊತ್ತಲ್ಲಿ ಇನ್ನೂ ದುಡೀತಾ ಇದ್ದಾನಲ್ಲ ಎಂದೆ. "ಏನು ಮಾಡೋದು ರಾಜು ದಾ. ಜನ ಈ ನೆಲದ ಸಂಸ್ಕೃತಿಯನ್ನು ಮರೆತುಬಿಟ್ಟಿದ್ದಾರೆ. ದಿನ ಕಳೆದಂತೆ ನಮ್ಮದೇ ಆಚಾರ ವಿಚಾರಗಳು ಮಾಯವಾಗ್ತಾ ಇವೆ. ಈ ಹುಡುಗರು ಹೀಗೆ ಪೂಜೆ ಮಾಡ್ತಾ ಇರೋದು ಇನ್ನೊಂದಷ್ಟು ವರ್ಷ ಆದ ಮೇಲೆ ಕಾಣಸಿಗುವುದಿಲ್ಲ. ಮುಂದುವರೆಯುತ್ತಿರುವ ಈ ಪ್ರಪಂಚದಲ್ಲಿ ನಮ್ಮ ಸಂಸ್ಕೃತಿಗೆ ಹೀಗೆ ಹಲವಾರು ಪೆಟ್ಟು ಬಿದ್ದು ನಮ್ಮ ಸಂಸ್ಕೃತಿಗೆ ಅಳಿವಿನಂಚಿಗೆ ಬಂದಿದೆ." ಎಂದು ಗೋವಿಂದ ತನ್ನ ಮಾತು ಮುಂದುವರೆಸಿದ.

"ರಾಜು ದಾ ತುಂಬಾ ವರ್ಷಗಳ ಹಿಂದೆ ನಮ್ಮ ರಾಜವಂಶಿಗಳೇ ಇದ್ದ ನಾಡು ಇದಾಗಿತ್ತು. ನೀವು ಕೇಳಿರಬಹುದು ಕೋಚ್ ಬಿಹಾರ್ ಅಂತ. ಹಿಂದಿನ ಕಾಲದಲ್ಲಿ ಅದೊಂದು ಪ್ರಾಂತ್ಯ. ಅಲ್ಲಿ ನಮ್ಮ ರಾಜರಿದ್ದರು. ಅದು ಒಂದು ಪ್ರಾಂತ್ಯ ಅನ್ನುವುದಕ್ಕಿಂತ ಒಂದು ರಾಷ್ಟ್ರ ಎಂದು ಕರೆಯಬಹುದು. ಆ ಪ್ರಾಂತ್ಯಕ್ಕೆ ಈ ಜಲ್ಪಾಯ್ಗುರಿ ಸೇರುತ್ತೆ. ನಮಗೆ ಸ್ವಾತಂತ್ರ್ಯ ಸಿಕ್ಕಾಗ ಕೋಚ್ ಬಿಹಾರ್ ಪಶ್ಚಿಮ ಬಂಗಾಳದಲ್ಲಿ ವಿಲೀನವಾಗಿರಲಿಲ್ಲ. ಅಲ್ಲಿ ರಾಜರ ಆಳ್ವಿಕೆಯೇ ಇತ್ತು. ಕ್ರಮೇಣ ಅಲ್ಲಿನ ಮಹಾರಾಜರ ಮನ ಒಲಿಸಿ ಕೋಚ್ ಬಿಹಾರ್ ಅನ್ನು ಪಶ್ಚಿಮ ಬಂಗಾಳದಲ್ಲಿ ವಿಲೀನಗೊಳಿಸಲಾಯಿತು. ಅಲ್ಲಿಂದ ನಮ್ಮ ರಾಜವಂಶಿ ಜನಾಂಗದ ಸಂಸ್ಕೃತಿ ಸಹ ಅವನತಿಯ ಹಾದಿ ಹಿಡಿಯಿತು ಎನ್ನಬಹುದು. ಬಾಂಗ್ಲಾ ಮತ್ತು ಭಾರತ ಬೇರೆ ಬೇರೆಯಾದಾಗ ಬಾಂಗ್ಲಾದ ಬೆಂಗಾಳಿಗಳು ಪಶ್ಚಿಮ ಬಂಗಾಳಕ್ಕೆ ವಲಸೆ ಬಂದರು. ಹಾಗೆ ವಲಸೆ ಬಂದ ಬೆಂಗಾಳಿಗಳು ಪಶ್ಚಿಮ ಬಂಗಾಳದಲ್ಲಿ ಹೆಚ್ಚು ಪ್ರಾಬಲ್ಯ ಉಳ್ಳವರಾಗಿದ್ದಾರೆ. ಅಂತಹ ಪ್ರಾಬಲ್ಯ ಉಳ್ಳ ಬೆಂಗಾಳಿಗಳು ಕೋಚ್ ಬಿಹಾರ್ ಪ್ರಾಂತ್ಯ ಪಶ್ಚಿಮ ಬಂಗಾಳದಲ್ಲಿ ವಿಲೀನವಾಗುತ್ತಿದ್ದಂತೆ ಇಲ್ಲಿ ಅಧಿಕಾರಕ್ಕೆ ಬಂದರು. ಪ್ರತಿ ಸರ್ಕಾರಿ ಕಚೇರಿಗಳಲ್ಲೂ ಆ ಬೆಂಗಾಳಿಗಳೇ ಅಧಿಕಾರಿಗಳಾಗಿದ್ದರು. ನಮ್ಮ ಮಣ್ಣಿನ ಮಕ್ಕಳಿಗೆ ಯಾವುದೇ ತರಹದ ಅಧಿಕಾರ ಸಿಗದೆ ಆ ಬೆಂಗಾಳಿಗಳ ಅಡಿಯಾಳುಗಳಾಗಿ ಕೆಲಸ ಮಾಡಬೇಕಾದ ಅನಿವಾರ್ಯತೆ ಬಂದಿತು. ಒಂದು ಕಾಲದಲ್ಲಿ ರಾಜವಂಶಿಗಳು ಅಂದರೆ ರಾಜರ ವಂಶದವರಾದ ನಾವು ಈಗ ಅಡಿಯಾಳುಗಳಾಗಿ ದುಡಿಯಬೇಕಾಗಿದೆ. 

ನಮ್ಮ ನೆಲದಲ್ಲಿ ನಮಗೆ ಅಧಿಕಾರವಿಲ್ಲದಿರುವುದ ಕಂಡು ನಮ್ಮ ಉತ್ತರ ಬಂಗಾಳದ ಆರು ಜಿಲ್ಲೆಗಳನ್ನು ಬೇರೆ ರಾಜ್ಯ ಮಾಡಬೇಕೆಂದು ಒಂದು ಆಂದೋಲನ ಶುರುವಾಯಿತು. ಆ ಆಂದೋಲನದಲ್ಲಿ ನಾವೆಲ್ಲಾ ಸಕ್ರಿಯವಾಗಿ ಭಾಗಿಯಾದೆವು. ನಮ್ಮ ಸಂಘಟನೆಯನ್ನು ಕಮ್ಟಾಪುರ ಲಿಬರೇಶನ್ ಆರ್ಗನೈಜೇಷನ್ ಎಂದು ಕರೆಯಲಾಯಿತು. ಚಿಕ್ಕದಾಗಿ ಅದನ್ನು ಕೆಎಲ್ಓ ಎಂದು ಕರೆಯಲಾಗುತ್ತದೆ. ಆಂದೋಲನದ ಜೊತೆ ಜೊತೆಗೆ ಕಮ್ಟಾಪುರ ಪೀಪಲ್ಸ್ ಪಾರ್ಟಿ ಎಂದು ಒಂದು ಪಕ್ಷವನ್ನು ಸಹ ಕಟ್ಟಲಾಯಿತು. ಆಂದೋಲನ ಬಿಸಿ ಯಾವ ಮಟ್ಟಕ್ಕಿತ್ತೆಂದರೆ ಪಶ್ಚಿಮ ಬಂಗಾಳ ಸರ್ಕಾರ ಬಹಳ ಹೆದರಿತ್ತು. ನಮ್ಮ ಆಂದೋಲನವನ್ನು ಮಟ್ಟ ಹಾಕಲು ಅದು ತನ್ನ ಇರೋ ಬರೋ ಪೋಲೀಸರನ್ನು ಉಪಯೋಗಿಸಿತು. ಆಗ ಪೋಲೀಸರು ಊರುಗಳಲ್ಲಿ ಸಿಕ್ಕ ಸಿಕ್ಕವರನ್ನೆಲ್ಲಾ ವ್ಯಾನಿನಲ್ಲಿ ಎತ್ತಾಕಿಕೊಂಡು ಹೋಗಿಬಿಟ್ಟರು. ಆ ಸಮಯದಲ್ಲಿ ನಾನು ಸಹ ಜೈಲು ಪಾಲಾದೆ. ಆ ರೀತಿ ಜೈಲು ಪಾಲಾದವರನ್ನು ಒಂದಷ್ಟು ವರ್ಷ ಜೈಲಿನಲ್ಲಿಡಲಾಯಿತು. ಕ್ರಮೇಣ ಆಂದೋಲನದ ಬಿಸಿ ಸಹ ಕಡಿಮೆಯಾಯಿತು. ಜೈಲಿನಲ್ಲಿದ್ದ ನನ್ನಂತ ಯುವಕರಿಗೆ ಆಂದೋಲನ ನಿಲ್ಲಿಸುವ ಕಾರಣದಿಂದ ಇಲ್ಲಿನ ಸರ್ಕಾರ ನಮ್ಮನ್ನು ಸರ್ಕಾರಿ ಕಚೇರಿಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಡ್ರೈವರ್ ಗಳನ್ನಾಗಿ ಸೇರಿಸಿತು. ಅದರ ಪರಿಣಾಮ ನೋಡಿ ಇವತ್ತು. ಈ ಗಾಡಿ ಓಡಿಸ್ತಾ ಇದ್ದೀನಿ." ಎಂದು ಒಂದು ನಿಟ್ಟಿಸಿರುಬಿಟ್ಟ. 

"ಗೋವಿಂದ, ಹಾಗಾದರೆ ನಮ್ಮ ಆಫೀಸಿನಲ್ಲಿರೋ ಶ್ಯಾಮಲ್ ದಾ, ಪಿಂಟು ದಾ ಎಲ್ಲರೂ ನಿನ್ನ ಹಾಗೆ ಜೈಲು ಶಿಕ್ಷೆ ಅನುಭವಿಸಿ ಬಂದವರೇ?" ಎಂದು ಅಚ್ಚರಿಯಿಂದ ಕೇಳಿದೆ. "ಹೂಂ ಎಲ್ಲರೂ ನಮ್ಮ ಕೆಎಲ್ಓ ಗುಂಪಿನ ಸದಸ್ಯರು" ಎಂದ. "ಸಾವಿರಾರು ಜನರನ್ನು ಅರೆಸ್ಟ್ ಮಾಡಿರ್ತಾರೆ ಅಲ್ಲವಾ? ಅವರೆಲ್ಲರಿಗೂ ಸರ್ಕಾರ ಕೆಲಸ ಕೊಟ್ಟಿತಾ?" ಎಂದು ಕೇಳಿದೆ. "ಕೇವಲ ಇನ್ನೂರು ಜನಕ್ಕೆ ಕೆಲಸ ಕೊಟ್ಟರು. ಆ ಆಂದೋಲನದಲ್ಲಿ ತುಂಬಾ ಸಕ್ರಿಯವಾಗಿದ್ದ ಸದಸ್ಯರನ್ನು ಯಾವುದ್ಯಾವುದೋ ಕೇಸ್ ಜಡಿದು ಈಗಲೂ ಜೈಲಿನಲ್ಲಿರಿಸಿದ್ದಾರೆ." ಎಂದ. "ಯಾವತ್ತಾದರು ನಿಮ್ಮ ಪಾರ್ಟಿಗೆ ಎಂಎಲ್ಎ, ಎಂಪಿ ಸೀಟು ಸಿಕ್ಕಿದೆಯಾ?" ಎಂದು ಅವರ ರಾಜಕೀಯ ಪಕ್ಷ ಕುರಿತು ಕೇಳಿದೆ. "ಇಲ್ಲ. ಕೇವಲ ಕೆಲವು ಪಂಚಾಯತಿಗಳಲ್ಲಿ ಕೆಲವು ಸೀಟುಗಳನ್ನಷ್ಟೇ ಗೆದ್ದಿದೆ." ಎಂದ ಗೋವಿಂದ ತನ್ನ ಮಾತು ಮುಂದುವರೆಸುತ್ತಾ "ನಾನು ಹೇಳಿದ ನನ್ನ ಕತೆಯನ್ನು ಆಫೀಸಿನಲ್ಲಿ ಯಾರ ಜೊತೆಯೂ ಡಿಸ್ಕಸ್ ಮಾಡಬೇಡಿ. ಯಾಕೆಂದರೆ ಅವರಿಗೆ ನಮ್ಮ ಆಂದೋಲನದ ಮೇಲೆ ನಮ್ಮ ಮೇಲೆ ಒಂತರಾ ಸಿಟ್ಟಿದೆ. ಸಾಧ್ಯವಾದರೆ ನಿಮ್ಮ ಮ್ಯಾಗಜಿನ್ ನಲ್ಲಿ ಈ ಕುರಿತು ಆರ್ಟಿಕಲ್ ಬರೀರಿ. ನಮ್ಮ ನೆಲದ ಬಗ್ಗೆ ಯಾರಾದರು ಏನಾದರು ಬರೆದರೆ ನಮಗೂ ಖುಷಿಯಾಗುತ್ತೆ." ಎಂದು ಅವನು ಮಾತು ಮುಗಿಸುತ್ತಿದ್ದಂತೆ ಜಲ್ಪಾಯ್ಗುರಿಯ ಸಮೀಪ ಗಾಡಿ ತಲುಪಿತ್ತು. ನನ್ನನ್ನು ಮನೆಗೆ ಡ್ರಾಪ್ ಮಾಡಿ ಅವನು ಹೊರಟು ಹೋಗಿದ್ದ. 

ಅವನು ಹೊರಟು ಹೋದ ಮೇಲೆ ಯಾಕೋ ನನ್ನನ್ನು ಅವನು ಹೇಳಿದ ಕತೆ ಗಾಢವಾಗಿ ಕಾಡತೊಡಗಿತು. ಮನೆಗೆ ಬಂದವನೇ ಫ್ರೆಶ್ ಆದ ಮೇಲೆ ಲ್ಯಾಪ್ ಟಾಪ್ ತೆರೆದು ಗೂಗಲ್ ನಲ್ಲಿ ಕಮ್ಟಾಪುರ್ ಪೀಪಲ್ಸ್ ಪಾರ್ಟಿ ಅಂತ ಟೈಪ್ ಮಾಡಿದೆ. ರಾಜವಂಶಿಗಳ ಕಮ್ಟಾಪುರವೆಂಬ ರಾಜ್ಯದ ಬೇಡಿಕೆ ಕುರಿತು ಯಾರೋ ಬರೆದಿದ್ದರು. ಆ ಲೇಖನದಲ್ಲಿ ಗೋವಿಂದ ಹೇಳಿದ ಕತೆಯ ಸಾರಾಂಶ ಇಸವಿಗಳ ಸಮೇತ ಉಲ್ಲೇಖವಾಗಿತ್ತು. ನಾನು ಇತಿಹಾಸದ ವಿದ್ಯಾರ್ಥಿಯಲ್ಲದಿದ್ದರೂ ಈ ತರಹ ಇತಿಹಾಸಗಳು ಗಾಢವಾಗಿ ಕಾಡುತ್ತಾ ಹೋಗುತ್ತವೆ. ಇವತ್ತು ತೆಲಂಗಾಣ, ಆಂಧ್ರ ಎನ್ನುವ ಸೆಪರೇಟ್ ರಾಜ್ಯಗಳ ಪ್ರಸ್ತಾಪನೆಯಾಗುತ್ತಿದ್ದಂತೆ ಪಶ್ಚಿಮ ಬಂಗಾಳದ ಒಂದು ಜಿಲ್ಲೆಯಾಗಿರುವ ಡಾರ್ಜಿಲಿಂಗ್ ನ ನೇಪಾಳಿಗಳು ನಮಗೂ ಪ್ರತ್ಯೇಕ ರಾಜ್ಯ ಬೇಕು ಎಂದು ಪಟ್ಟು ಹಿಡಿದು ಕುಳಿತ್ತಿದ್ದಾರೆ. ನಮ್ಮ ದೇಶದಲ್ಲಿ ಹೀಗೆ ಪ್ರತ್ಯೇಕ ರಾಜ್ಯ ಬೇಕು ಎನ್ನುವವರ ಪಟ್ಟಿ ಸಹ ತುಂಬಾ ದೊಡ್ಡದಿದೆ. ಗೋವಿಂದ ಹೇಳಿದ ಕತೆಯ ಹಾಗೆ ಪ್ರತ್ಯೇಕ ರಾಜ್ಯದ ಬೇಡಿಕೆ ಸಲ್ಲಿಸಿ ಅದನ್ನು ಸಮರ್ಥಿಸಿಕೊಳ್ಳಲು ಪ್ರತ್ಯೇಕ ರಾಜ್ಯ ಬೇಕು ಎನ್ನುವವರಿಗೆ ಅವರದೇ ಆದ ಕತೆಗಳಿವೆ. ಆ ಕತೆಗಳು ಹೋರಾಟ, ಆಂದೋಲನಗಳ ರೂಪುಪಡೆದು ಹೊಸ ಕತೆಗಳ, ಇತಿಹಾಸಗಳ ಸೃಷ್ಟಿಸುತ್ತಾ ಹೋಗುತ್ತವೆ. ಇತಿಹಾಸ ಬರೆಯುವವರು ತಮಗೆ ಇಷ್ಟವಾದವರ ಕುರಿತು ಬರೆದು ತಮಗೆ ಬೇಡವಾದುದ್ದನ್ನು ಸದ್ದಿಲ್ಲದೆ ತಮ್ಮ ಲೇಖನಿಯ ಗರ್ಭದೊಳಗೆ ಹುದುಗಿಸಿಬಿಟ್ಟಿರುತ್ತಾರೆ. ನಾವು ಕೇಳುವ, ನೋಡುವ, ಓದುವ ಇತಿಹಾಸ ಎಂದಿಗೂ ಒಂದೇ ತರವಾಗಿ ಕಾಣಲು ಸಾಧ್ಯವೇ ಇಲ್ಲ. ಅದಕ್ಕೆ ಇತಿಹಾಸವನ್ನು ಓದುವ ಬದಲು ಒಮ್ಮೊಮ್ಮೆ ಕೇಳಬೇಕು ಎನಿಸುತ್ತೆ. 

ಮತ್ತೆ ಸಿಗೋಣ

ನಿಮ್ಮ ಪ್ರೀತಿಯ

ನಟರಾಜು

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

13 Comments
Oldest
Newest Most Voted
Inline Feedbacks
View all comments
ಮಾಲತಿ ಎಸ್.
ಮಾಲತಿ ಎಸ್.
10 years ago

ನಟರಾಜು, ನಿಮ್ಮ ಸಂಪಾದಕೀಯ ಯಾವಾಗಲೂ ಇಂಟರೆಸ್ಟಿಂಗ್ ಆಗಿರುತ್ತೆ.. ರಾಜವಂಶಿ, ಕೂಚ್ ಬೀಹಾರ್, ಕೆ ಪಿ ಪಿ, ವಿಲೀನವಾದಾಗಿನ ಪರದಾಟಗಳು ಮುಂತಾದವು. just curious if Govind was not arrested what would have been his ambition?

Kirti Gaonkar
Kirti Gaonkar
10 years ago

Sir,
Abiruddiya hesaralli baladyaru nadesuva daurjanyakke esto sanskrutigalu naashavaagide. aaguttive!!

Ramachandra
Ramachandra
10 years ago

Ondu etihasadondige molagida lekana super.

Utham Danihalli
10 years ago

Ethihasa odhuvudakintha kelluvudhe chenda
Ondu ethihasavanu nimma shyliyali odhi kushi aythu natanna

ಹಿಪ್ಪರಗಿ ಸಿದ್ದರಾಮ್
ಹಿಪ್ಪರಗಿ ಸಿದ್ದರಾಮ್
10 years ago

ಸಂಪಾದಕೀಯ ಚೆನ್ನಾಗಿದೆ ಸರ್,

ಅಖಂಡ ಭಾರತದಲ್ಲಿರುವ ಎಲ್ಲ ಜಾತಿ/ಜನಾಂಗಗಳು ತಮ್ಮದೇ ಆದ ಒಂದೊಂದು ಐತಿಹಾಸಿಕ ಹಿನ್ನಲೆಯನ್ನು ಹೊಂದಿವೆ. ನಿಜ ! ಗತಿಸಿಹೋಗಿರುವ, ಕಾಲನ ಕಸದಬುಟ್ಟಿಯಂತಹ ಇತಿಹಾಸವನ್ನು ಆಧರಿಸಿ, (ಇತಿಹಾಸವನ್ನು ಎಷ್ಟು ಬೇಕೋ ಅಷ್ಟು ಗೌರವಿಸೋಣ) ಈಗಿನ ಆಧುನಿಕ ಪ್ರಜಾಪ್ರಭುತ್ವವೆಂಬ ಉತ್ತಮ ವ್ಯವಸ್ಥೆಯಿರುವಾಗ, ಗದ್ದಲ+ದೊಂಬಿಯನ್ನೆಬ್ಬಿಸಿ ಮತ್ತೆ ಅಖಂಡ ಭಾರತದ ಏಕತೆಗೆ ಧಕ್ಕೆಯಾಗುವಂತಹ ರಾಷ್ಟ್ರವಿರೋಧಿ ಕೃತ್ಯಗಳು ನಡೆಯಬಾರದೆಂಬುದು ನನ್ನ ವಿಚಾರ ಮತ್ತು ವಿಶ್ವದಲ್ಲಿಯೇ ಉತ್ತಮ ವ್ಯವಸ್ಥೆಯಾಗಿರುವ ಪ್ರಜಾಪ್ರಭುತ್ವದಲ್ಲಿದ್ದುಕೊಂಡು ಇನ್ನೂ ನಾವು ಉತ್ತಮ (ವಿಶ್ವ) ಮಟ್ಟಕ್ಕೇರಲು ಸಾಕಷ್ಟು ಅವಕಾಶಗಳಿವೆ.

ತೆಲಂಗಾಣ+ಸೀಮಾಂದ್ರ ರಾಜ್ಯಗಳ ಬೇರ್ಪಡೆಯ ಸಂದರ್ಭದಲ್ಲಿ ಉತ್ತಮ ಮತ್ತು ಸಮಯೋಚಿತ ಸಂಪಾದಕೀಯ.
ಶುಭಾಶಯಗಳು ಸರ್ !

Santhoshkumar LM
Santhoshkumar LM
10 years ago

Interesting Nattu!!

Roopa Satish
Roopa Satish
10 years ago

Informative! nice Nataraj!

Shivu K
10 years ago

yes Brother, ithihasavannu kelidaga sathyavu hecchu arthavaguthe,,,coach behar annu seperete rajya madabeku annuva koogige nimma driver helida ithihasada sathya hecchu prastutaveniside…
Shivu K

Rajendra B. Shetty
10 years ago

ಭೂ ತಾಯಿ ಮುಟ್ಟಾಗುವುದರ ಬಗ್ಗೆ ಓದಿದಾಗ, ನಮ್ಮ ಕಡೆಯಲ್ಲಿ (ಕರಾವಳಿ), ಸುಮಾರು ಫೆಬ್ರವರಿ – ಮಾರ್ಚ್ ತಿಂಗಳ ಸುಮಾರಿಗೆ ಖೆಡ್ಡಸ ಎಂಬ ಹಬ್ಬ ಆಚರಿಸುತ್ತಾರೆ. ಆ ದಿನ ಯಾರೂ ಹೊಲದಲ್ಲಿ ಉಳುಮೆ ಮಾಡುವದಿಲ್ಲ. ಪುಂಡದೆ ಎನ್ನುವ ಹಕ್ಕಿಯ ಬೇಟೆ ಮಾಡಿ ಉಣ್ಣುತ್ತಾರೆ – ಎಲುಬು ಗಟ್ಟಿಯಾಗುತ್ತದೆ ಅನ್ನುತ್ತಾರೆ.
ಡಾ. (ಶ್ರೀಮತಿ) ಸುನಿತಾ ಶೆಟ್ಟಿಯವರು (ಮುಂಬಾಯಿ) ಇದರ ಬಗ್ಗೆ ತುಳುವಿನಲ್ಲಿ ಸುಂದರ ಕವನ ಬರೆದಿದ್ದಾರೆ.

sharada.m
sharada.m
10 years ago

interesting  article…

Swarna
Swarna
10 years ago

ನಾಣ್ಯದ ಒಂದು ಮುಖವನ್ನು ಮಾತ್ರ ಇತಿಹಾಸಕಾರರು  ದಾಖಲಿಸುತ್ತಾರೆನೋ ?
 ನಿಮ್ಮ ಸ್ನೇಹಿತನಂತವರ  ನೋವಿನ ಕಥೆಯನ್ನು ಚೆನ್ನಾಗಿದೆ ಎಂದು ಹೇಳಲಾಗದಾದರೂ
ಸ್ವಾತಂತ್ರ್ಯೋತ್ಸವದ ಸಮಯದಲ್ಲಿ ಭಾರತ ನಿರ್ಮಾಣದ ಇನ್ನೂ ಒಂದು ಕಥೆಯನ್ನು ತೆರೆದಿಟ್ಟಿದ್ದಕ್ಕಾಗಿ  ವಂದನೆಗಳು

Gangadhar Divatar
10 years ago

ನಟರಾಜ್ ಸರ್
ಇತಿಹಾಸವನ್ನು ದಾಖಲಿಸುವವರು ತಮ್ಮ-ತಮ್ಮ ವೈಯಕ್ತಿಕ ದೃಷ್ಟಿಕೋನ, ಹಿತಾಸಕ್ತಿಗಳಿಗೆ ಅನುಗುಣವಾಗಿ ರಚಿಸುತ್ತಾರೆ. ನಿಮ್ಶ ಸಂಪಾದಕೀಯ ಓದುತ್ತಿರುವಂತೆ ರಾಜವಂಶಿ,  ಕೂಚ್ ಬಿಹಾರ ತೆರೆದುಕೊಳ್ಳುತ್ತಾ  ಕಣ್ಮರೆಯಾಗಿರುವ  ಕೆ.ಎಲ್.ಓ & ಕೆ.ಪಿ.ಪಿ ಸಂಘಟನೆಗಳು ಅನಾವರಣಗೊಳ್ಳುತ್ತವೆ. ತೆಲಂಗಾಣ ರಾಜ್ಯದ ಘೋಷಣೆಯೊಂದಿಗೆ ದೇಶದ ವಿವಿಧ ಭಾಗಗಳಲ್ಲಿ ಪ್ರತ್ಯೇಕತೆಯ ಕಿಡಿ ಹೊತ್ತಿಕೊಂಡಿರುವ ಸನ್ನಿವೇಶದಲ್ಲಿ ಸಮಯೋಚಿತ ಲೇಖನ….
ಅಭಿನಂದನೆಗಳು….

ಹೃದಯಶಿವ
ಹೃದಯಶಿವ
10 years ago

tumba olleya baraha…shubhavagali.

13
0
Would love your thoughts, please comment.x
()
x