ಇಲ್ಲಿಗೆ ಬಂದ ಮೇಲೆ ಇಲ್ಲಿನ ಕೆಲಸ ಎಲ್ಲರಿಗೂ ಸಿಗುವ ಪರಿಧಿಯಲ್ಲ ಅಂತ ಗೊತ್ತಾಯಿತು. ಈ ಕ್ಷೇತ್ರದಲ್ಲಿ ಹತ್ತಾರು ವರ್ಷ ದಕ್ಷತೆಯಿಂದ ದುಡಿಮೆ ಹೆಸರು, ಅನುಭವ ಗಳಿಸಿದರಷ್ಟೇ ಇಂಥ ಕಾಂಟ್ರಾಕ್ಟ್ ಗಳನ್ನು ನಿಭಾಯಿಸಲು ಸಾಧ್ಯ. ಇಲ್ಲಿ ನಂಬಿಕೆ, ವಿಶ್ವಾಸ ಎಲ್ಲಕ್ಕಿಂತ ಮುಖ್ಯವಾಗಿ ಸೌಂದರ್ಯ ಮತ್ತು ನಾಜೂಕತೆ ಮುಖ್ಯವಾಗುತ್ತದೆ. ತುಂಬಾ ಜವಾಬ್ದಾರಿಯ ಕೆಲಸ ಇದು. ಆಕಸ್ಮಾತ್ತಾಗಿ ಸ್ವಲ್ಪ ಲೀಕಾದ್ರೂ ನಮ್ಮನ್ನು ಇಟ್ಟುಕೊಂಡ ಘರ್‍ವಾಲಿಗಳ ಪ್ರಾಣಕ್ಕೆ ಕುತ್ತು ಬರುವುದರಲ್ಲಿ ತಪ್ಪುವುದಿಲ್ಲ. ಹೀಗಾಗಿ ಅವರು ತಮ್ಮ ಕಾರ್ಯವನ್ನು ಅತೀವ ಎಚ್ಚರದಿಂದ ನಿರ್ವಹಿಸುತ್ತಾರೆ.
ಈ ರಾಜಕಾರಣಿ ಮಹೋದಯರ ಪ್ರಭಾವ ವಲಯದೊಳಗೆ ಸೇರಿಕೊಳ್ಳಲು ಘರ್‍ವಾಲಿಗಳ ನಡುವೆ ತೀವ್ರ ಪೈಪೋಟಿ ಕೂಡಾ ನಡೆತಿರುತ್ತೆ. ಅಲ್ಲಿ ಸಲ್ಲುವವರು ಎಲ್ಲೆಲ್ಲಿಯೂ ಸಲ್ಲುವರು ಎಂಬ ಮಾತು ಇವರಿಗೆ ಚೆನ್ನಾಗಿ ಅನ್ವಯಿಸುತ್ತದೆ ಖಾದಿಯ ಮುಸುಕಿನಲ್ಲಿ. ಇವರು ಕಡಿಮೆ ರಿಸ್ಕ್‍ನಲ್ಲಿ ಹೆಚ್ಚು ಹಣ ಸಂಪಾದಿಸುತ್ತಾರೆ. ಇವರ ಅವಶ್ಯಕತೆಯನ್ನು ಈ ಘರ್‍ವಾಲಿಗಳು ಚೆನ್ನಾಗಿಯೇ ಅರ್ಥ ಮಾಡಿಕೊಂಡಿರುತ್ತಾರೆ. ಹೆಚ್ಚಾಗಿ ಈ ವಿಧಾನಸೌಧದ ಅಧಿಪತಿಗಳು ಹದಿಮೂರರಿಂದ ಹದಿನೆಂಟರ ಒಳಗಿನ ಹುಡುಗಿಯರನ್ನೇ ಬಯಸುತ್ತಾರೆ. ಈ ಹುಡುಗಿಯರು ದೇಶದ ನಾನಾ ಮೂಲೆಗಳಿಂದ ಬಂದವರಾಗಿರಬೇಕು.
ಇಂಥ ಹುಡುಗಿಯರ ಮಧ್ಯೆ ನಮ್ಮಂಥವರು ಮುದುಕಿಗೆ ಸಮಾನ. ಬಾಬು ಕರೆದುಕೊಂಡು ಘರವಾಲಿ ಮುಂದೆ ನಿಲ್ಲಿಸಿದಾಗ ಆಕೆ ಮೂಗು ಮುರಿದಿದ್ದು ಸಹಜವಾಗಿತ್ತು. ಇನ್ನೇನಪ್ಪಾ ದೇವರೇ ಬೀದಿ ಬೀಳುವಂಗಾತಲ್ಲಾ ಎಂದು ಆತಂಕ ಪಡುವ ಮೊದಲೇ ಘರವಾಲಿ ರೀಟಾ ಬೇಕಾದರೆ ಇಲ್ಲಿಯೇ ಸಣ್ಣ ಪುಟ್ಟ ಕೆಲಸ ಮಾಡಿಕೊಂಡು ಇರು ಎಂದು ನನಗೊಂದು ಅವಕಾಶ ನೀಡಿದಳು. ಬೇರೆ ದಾರಿಯೇ ಇಲ್ಲದ ನಾನು ಒಪ್ಪಿಕೊಳ್ಳಬೇಕಾಯಿತು.
ಅಧಿವೇಶನ ಆರಂಭವಾಗುವ ಮೊದಲೇ ಈ ಹುಡುಗಿಯರು ಬುಕ್ ಆಗಿಬಿಡ್ತಾರೆ. ಅವರ ಸೇವೆಯ ಅವಧಿ ಕೂಡಾ ಮೊದಲೇ ನಿರ್ಧಾರವಾಗುತ್ತದೆ. ಆ ಅವಧಿ ಮುಗಿಯುವವರೆಗೂ ಅವರು ಇನ್ನಾರ ಜೊತೆಗೂ ಹೋಗುವಂತಿಲ್ಲ. ಸಾಹೇಬರು ಯಾವಾಗ ಕರೆದರೆ ಆವಾಗ ಇವರು ಸಿದ್ಧರಾಗಿರಬೇಕು. ಅವರು ಕರೆದಲ್ಲಿಗೆ ಹೋಗಬೇಕು. ಈ ಹುಡುಗಿಯರಿಗೂ ಇದು ನಿತ್ಯದ ಜಂಜಡಕ್ಕಿಂತ ವಿಭಿನ್ನವಾದ ಕೆಲಸವೇ. ರಗಳೆಯಿಲ್ಲ, ಹಿಂಸೆಯಿಲ್ಲ, ಕೈ ತುಂಬ ಹಣ ಸಿಗುತ್ತೆ ಎಂಬಿತ್ಯಾದಿ ಪ್ರಲೋಭನೆಗಳೂ ಇರುತ್ತವೆ. ‘ಸಾಹೇಬ್ರು ಹೆಚ್ಚು ಮಾತಾಡೋಲ್ಲ, ಅಂಥಾ ಕಿರಿಕಿರೀನೂ ಇಲ್ಲ.' ಎಂದು ಒಂದು ಹುಡುಗಿ ಸಮಾಧಾನ ಪಟ್ಟುಕೊಂಡರೆ ಮತ್ತೊಂದು ಹುಡುಗಿ ‘ದೆವ್ವದಂಗಿದ್ದಾನೆ, ರಾಕ್ಷಸನ ಥರಾ ಮೇಲೆ ಬೀಳ್ತಾನೆ. ಆದ್ರೆ ದುಡ್ಡು ಮಾತ್ರ, ಅವನ ಹಾಗೆ ಯಾರೂ ಕೊಡೋಲ್ಲ' ಎಂದು ನರಳುವಿಕೆಯಲ್ಲಿಯೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ಲು.
‘ಮುದುಕನಿಗೆ ಬರೀ ಚಪಲ ಅಷ್ಟೆ. ದುಡ್ಡಿದೆ, ಅಹಂಕಾರ ಇದೆ. ನನ್ನ ತಂದೆಯ ಮಯಸ್ಸಾಗಿದೆ. ಆದ್ರೂ ನನ್ನಂತಹ ಹದಿನೆಂಟರ ಹುಡುಗಿ ಬೇಕು ಅಂತಾನೆ. ಅವನನ್ನು ಹ್ಯಾಗೆ ಯಾಮಾರಿಸ್ಬೇಕು ಅನ್ನೋದು ನಂಗೊತ್ತು' ಅಂತ ಗೆಲುವಿನ ನಗೆ ಬೀರುವ ಹುಡುಗಿಯರು ಹೀಗೆ ತರಾವರಿ ಹುಡುಗಿಯರು ರಾಜಕಾರಣಿಗಳ ಪುಡಿಗಾಸಿಗಾಗಿ ಮೈ ಮಾರಿಕೊಳ್ಳುತ್ತಿರುತ್ತಾರೆ.
ಸಾಮಾನ್ಯವಾಗಿ ಈ ಹುಡುಗಿಯರಿಗೆ ಅಂಥ ದೊಡ್ಡ ಮೊತ್ತದ ಹಣವೇನೂ ಸಿಗುವುದಿಲ್ಲ. ಅದರಲ್ಲೂ ತಮ್ಮ ಸ್ವಾಮಿನಿಯರ ಮೂಲಕ ಹೋಗುವವರಿಗೆ ಅವರು ಕೊಟ್ಟದ್ದೆಷ್ಟೋ ಅಷ್ಟೇ. ತಮ್ಮ ಗಿರಾಕಿಗಳ ಜೊತೆ ಕುಡಿದದ್ದು, ತಿಂದದ್ದು ಮಾತ್ರ ಲಾಭ. ಇವರಿಗಿಂತ ಬ್ರೋಕರ್ ಮೂಲಕ ಹೋದವರು ಹೆಚ್ಚು ಸಂಪಾದಿಸಿದರೆ, ತಮ್ಮ ಮನೆಗಳಲ್ಲೇ ಇದ್ದುಕೊಂಡು ಯಾವ್ಯಾವುದೋ ವಸೂಲಿಗಳ ಮೂಲಕ ವ್ಯವಹಾರ ಕದುರಿಸಿಕೊಂಡವರಿಗೆ ಮಾತ್ರ ಲಾಭವೋ ಲಾಭ. ಒಂದು ತಿಂಗಳ ಮಟ್ಟಿಗೆ ಬುಕ್ ಆದವರು. ಮೂವತ್ತು ಸಾವಿರದಿಂದ ಒಂದು ಲಕ್ಷದವರೆಗೂ ತಗೊಳ್ತಾರೆ. ಕೆಲವೊಮ್ಮೆ ಸೈಟ್ ಕೊಡಿಸ್ತಾರೆ, ಉಂಗುರ, ಓಲೆ, ಚೈನು ಹೀಗೆ ಗಿಫ್ಟ್‍ಗಳು ಅವರವರ ಇಷ್ಟಾನುಸಾರ ಸಿಗುತ್ತದೆ. ವರ್ಷಕ್ಕೆ ಒಂದೋ ಎರಡೋ ಪಾರ್ಟಿಗಳನ್ನು ಬುಕ್ ಮಾಡಿಸಿತೀವಿ. ಬೇರೆ ಟೈಮಲ್ಲಿ ಬ್ಯೂಟಿಪಾರ್ಲರ್ ಇದ್ದೇ ಇದೆಯಲ್ವಾ ಅನ್ನುವವರೂ ಇದ್ದಾರೆ.
ಒಂದು ತಿಂಗಳ ಕಾಂಟ್ರಾಕ್ಟ್ ಇದ್ದರೂ, ಇಡೀ ಒಂದು ತಿಂಗಳು ಕೆಲಸವಿರುತ್ತೆ ಎಂದು ಹೇಳಲಿಕ್ಕಾಗುವುದಿಲ್ಲ. ಇದ್ದಕ್ಕಿದ್ದ ಹಾಗೆ ಆಯಾ ಶಾಸಕರ ಕ್ಷೇತ್ರದಲ್ಲಿ ಅವಘಡಗಳಾದಾಗ, ತುರ್ತಾಗಿ ಅಲ್ಲಿಗೆ ಧಾವಿಸುವವರೂ ಇದ್ದಾರೆ. ಹಾಗೆ ಹೋದರೆ ಅಲ್ಲಿಗೆ ಕಾಂಟ್ರಾಕ್ಟ್ ಮುಗಿದಂತೆ. ಹಾಗೆ ಹೋದವರು ಹಣ ಕೊಡದೇನೂ ಹೋದವರಿದ್ದಾರೆ.
ಇವರನ್ನೆಲ್ಲಾ ಇನ್ನೊಂದು ಚಿಂತೆಯೂ ಕಾಡುತ್ತಿರುತ್ತೆ. ವಯಸ್ಸಿರೋ ತನಕ ಸಂಪಾದನೆ ಮಾಡಿ, ಒಂದಿಷ್ಟು ಕೂಡಿಟ್ಟರೆ ಉಂಟು, ಇಲ್ಲದಿದ್ದರೆ ವಯಸ್ಸಾದ ಮೇಲೆ ಕೇಳುವವರೆ ಇರೋಲ್ಲ. ಅದೇನೇ ಇರಲಿ, ಅಧಿವೇಶನಗಳು ನಡೆಯುತ್ತಿರುವಷ್ಟು ದಿನವೂ ಇವರಿಗೆ ಹಬ್ಬವೇ. ಬನ್ನೇರುಘಟ್ಟ, ದೇವನಹಳ್ಳಿ, ದೊಡ್ಡಬಳ್ಳಾಪುರ, ರಾಮನಗರ ಹೀಗೆ ಬೆಂಗಳೂರಿನ ವಿವಿಧ ದಿಕ್ಕುಗಳಲ್ಲಿರುವ ಎಸ್ಕಾರ್ಟ್‍ಗಳಿಂದ ಕರೆಬರುತ್ತಿದೆ. ಕೆಲವೊಮ್ಮೆ ಎಸ್ಟೇಟ್‍ಗಳಿಗೂ ಹೋಗುವುದಿದೆ. ಯಾವುದೂ ಸಿಗದಿದ್ದರೆ ಕೊನೆಗೆ ಪಂಚತಾರ ಹೋಟೆಲಿಗೆ ಕರೆದುಕೊಂಡು ಹೋಗುತ್ತಾರೆ.
ಇದೊಂದು ಸೀಸನ್ ಅಷ್ಟೇ. ಇಲ್ಲಿನ ದೊಡ್ಡ ಅಪಾಯವೆಂದರೆ, ಅಷ್ಟೊಂದು ತಿಳಿದುಕೊಂಡು ದೇಶ ಆಳುವವರು ನಿರೋಧ್ ಬಳಸೊದಕ್ಕೆ ಒಪ್ಪೋದಿಲ್ಲ. ಹುಡುಗಿಯರು ಹೇಳೋಕೆ ಹೋದರೆ 'ನಿನ್ನ ಸೌಂದರ್ಯದೊಳಗೆ ಏಡ್ಸೂ ಇಲ್ಲ, ಏನೂ ಇಲ್ಲ ಬಾ' ಅಂತ ಹಾಸಿಗೆಗೆ ಎಳಕೊಳ್ಳುತ್ತಾರೆ. ಇಂಥ ರಾಜಕಾರಣಿಗಳೆ ಏಡ್ಸ್ ಎಂಬ ಭಯಾನಕ ರೋಗವನ್ನು ಈ ರಾಜ್ಯದ ವಿಧಾನಸೌಧಕ್ಕೂ ಪರಿಚಯಿಸುವ ಕೆಲಸ ಮಾಡೋದು. ಇಡಿ ರಾಜಕೀಯ ವ್ಯವಸ್ಥೆಗೆ ಏಡ್ಸ್ ಎಂಬ ಮಹಾಮಾರಿ ಅಂಟಿಕೊಳ್ಳಲು ಇವರು ಏಜೆಂಟರಂತೆ ಕೆಲಸ ಮಾಡುತ್ತಾರೆ.
* * *
ನನಗೆ ಆ ಘರವಾಲಿ ಮನೆಗೆ ಕಾಲಿಟ್ಟ ದಿನವೇ ಗೊತ್ತಾಗಿತ್ತು. ಆ ನೆಲೆ ಶಾಶ್ವತವಲ್ಲವೆಂದು. ಆದರೆ ನಾನು ಈ ದಂಧೆಯ ಮೇಲೆಯೇ ರೋಸಿ ಹೋಗಿಬಿಟ್ಟಿದ್ದೆ. ವಯಸ್ಸು ಆದಂತೆ ಮೈಯೊಳಗಿನ ರಸ ಕರಗಿ ಮೈ, ಕೈಗಳು ಇಳಿದು ಹೋಗಿದ್ದವು. ಆಗಾಗ ಕಾಲುಬಾವು, ಕಜ್ಜಿ ಸೇರಿದಂತೆ ಹತ್ತಾರು ತರಹದ ಅನಾರೋಗ್ಯ ಬೇರೆ ಕಾಡ್ತಿತ್ತು. ಎಲುಬಿನ ಹಂದರಕ್ಕೆ ಚರ್ಮದ ಚಪ್ಪರ ಹೊದೆಸಿದಂಗ ಆಗಿದ್ದರಿಂದ ಈಗಿಗ ಗಿರಾಕಿಗಳು ನನ್ನತ್ತ ಮೂಸಿ ನೋಡುತ್ತಲೇ ಇರಲಿಲ್ಲ. ಹೀಗಾಗಿ ಬದುಕಲಿಕ್ಕೆ ಬೇರೆ ಏನಾದರೂ ಮಾಡಬೇಕಿತ್ತು. ರೀಟಾಳ ಅಡ್ಡದಲ್ಲಿ ದುಡಿದಿದ್ದ ಪುಡಿಗಾಸೊಂದಿಷ್ಟು ಕೈಲಿತ್ತು. ಅದನ್ನಿಟ್ಟುಕೊಂಡು ಏನಾದರೂ ಮಾಡೋಣ ಅಂತ ಒಂದಿನ ಅಲ್ಲಿಂದ ಹೊರಬಿದ್ದು ಬಿಟ್ಟೆ. ಆದ್ರೆ, ಆ ಮನೆಯಿಂದ ರಸ್ತೆಗೆ ಬಂದ ಮೇಲೆ ನಾನು ಪಟ್ಟ ಪಾಡು ಅಷ್ಟಿಷ್ಟಲ್ಲ. ನನ್ನಂಥ ಹೆಂಗಸರಿಗೆ ಮನೆ ಕೊಡಲು ಯಾರೂ ಮುಂದೆ ಬರುವುದಿಲ್ಲ. ಹಗಲೆಲ್ಲ ಅಲೆದಾಡಿ ಮೆಜಸ್ಟಿಕ್‍ನ ಕಲ್ಲುಬೆಂಚುಗಳ ಮೇಲೆ ಕುಳಿತು ಕಾಲ ತಳ್ಳುತ್ತಿದ್ದೆ. ಕ್ರಿಶ್ಚಿಯನ್ಸ್‍ರ ಮಸಣದಲ್ಲಿ ಒಂದಷ್ಟು ದಿನ ಇದ್ದುದ್ದು ಆಯಿತು. ಕೊನೆಗೊಮ್ಮೆ ಸುಂಕದಕಟ್ಟೆಯಲ್ಲೊಂದು ಸಣ್ಣ 4/8ರ ಸೈಜಿನ ರೂಮು ಮಾಡಿ ಬದುಕುತೊಡಗಿದೆ.
ಬೆಳಗ್ಗೆ 8ಕ್ಕೆ ಸಿಟಿ ಮಾರ್ಕೆಟ್ಟಿಗೆ ಬಂದು ಅಗ್ಗದ ಬೆಲೆಯ ದುಂಡು ಮಲ್ಲಿಗೆ ಕೊಂಡು ಪೋಣಿಸಿ ಮಳಕ್ಕೆ 5ರಿಂದ 10ರೂಪಾಯಿವರೆಗೆ ಮಾರತಿದ್ದೆ. ಆದ್ರೆ ಒಂದು ಕೆ.ಜಿ. ಹೂ ಪೋಣಿಸೋವಷ್ಟರಲ್ಲಿ ಕೈಬೆರಳು ಮರಗಟ್ಟಿ ಹೋಗಿ ಬಿಡೋವು. ಲಾಭ ಸಹ ಅಷ್ಟೇನೂ ಇರಲಿಲ್ಲ. ಹಿಂಗಾಗಿ ಒಂದಿನ ವ್ಯಾಪಾರ ಬದಲಾಯಿಸಲು ನಿರ್ಧರಿಸಿದೆ. ಪರಿಚಯದವನೊಬ್ಬ ದಿನಕ್ಕೆ 100ಗೆ 10 ರೂಪಾಯಿ ಬಡ್ಡಿಯಂತೆ 400 ಸಾಲ ನೀಡಿದ. ಹಣ್ಣಿನ ಮಾರ್ಕೆಟ್ಟಿನಿಂದ ಬುಟ್ಟಿಗಟ್ಟಲೆ ಹಣ್ಣು ತಂದು ರೋಡಲ್ಲಿ ಗುಡ್ಡೆ ಇಟ್ಟುಕೊಂಡು ಮಾರಿಕೊಂಡು ಹೊಟ್ಟೆಪಾಡು ಮಾಡ್ತಾ ಇದ್ದೆ.
ಆದ್ರ ಅಷ್ಟರೊಳಗ ಮತ್ತೊಂದು ಆಘಾತ ಆತು. ಮಳೆಗಾಲ ಶುರುವಾಗಿ ಮಳೆನಲ್ಲಿ ಬೀದೀಲಿ ಕುಳಿತುಕೊಂಡು ವ್ಯಾಪಾರ ಮಾಡೋಕೆ ಆಕ್ಕಿರಲಿಲ್ಲ. ಗಿರಾಕಿಗಳು ಬರತಾ ಇರಲಿಲ್ಲ. ಆದರೆ ಯಾರ್ಯಾರೋ ಬರೋರು, ಕಾಸು ಕೊಡು ಇಲ್ಲಾಂದ್ರೆ ಅಂಗಡಿ ತೆಗಿ ಅಂತ ಜಗಳ ಮಾಡೋರು. ಅಂಥವರಿಗೆ, ಪೋಲೀಸಿನವರಿಗೆ ಕೊಟ್ಟೂ, ಕೊಟ್ಟೂ ನನಗೇನೂ ಉಳೀತಾ ಇರಲಿಲ್ಲ. ಹಂಗಾಗಿ ಹಣ್ಣಿನ ವ್ಯಾಪಾರ ಬರಕತ್ತಾಗಲಿಲ್ಲ. ಲಾಸ್ ಆಗಿಬಿಡ್ತು. ಬಡ್ಡಿಗೆ ಸಾಲ ತಗೊಂಡಿದ್ನಲ್ಲ. ಅವ್ರು ಸಾಲ ಕೇಳೋಕೆ ಶುರು ಮಾಡಿದ್ರು.. ನಾನು ಹಿಂಗಿಂಗೆ ಮಳೆಗಾಲ ಸ್ವಾಮಿ… ಯಾಪಾರ ಮಾಡೋಕೆ ಆಗ್ತಿರಲಿಲ್ಲ. ಲಾಸಾಗೋಯ್ತು ಅಂತ ಹೇಳಿದೆ. ಅವ್ರು ನನ್ನ ಮಾತು ಕೇಳಲಿಲ್ಲ. ಏನಾದ್ರೂ ಮಾಡು. ಭಿಕ್ಷೆ ಮಾಡು, ಇಲ್ಲ ಮೈ ಮಾರಕೋ. ತಿಂಗಳ ಬಡ್ಡಿ ಕಟ್ಟು ಅಂತ ಹೆದರಿಸತೊಡಗಿದರು. ಅದ ಟೇಮಿನೊಳಗ ನನ್ನ ಕಾಲುಗಳಿಗೆ ಬರಬಾರದ ರೊಗ ಬಂದು ಕಾಲುಗಳು ಇಷ್ಟಿಷ್ಟು ದಪ್ಪ ಊದಿಕೊಳ್ಳಾಕ ಹತ್ತಿದವು. ನಡೆದಾಡೋಕೆ ಆಗ್ತಾ ಇರಲಿಲ್ಲ. ಇವಾಗಲೂ ಅದು ಸರಿ ಹೋಗಿಲ್ಲ.
ಆದ್ರೂ ಕೂಡ ಬಸ್ಸು ಹಿಡಕೊಂಡು ಸಿಟಿ ಮಾರ್ಕೆಟ್ಟಿಗೆ ಬರೋದು ತಪ್ಪಿಸಲಿಲ್ಲ. ಹಣ್ಣಿನ ವ್ಯಾಪಾರ ಅಂತೂ ಎಕ್ಕುಟ್ಟಿ ಹೋಗಿತ್ತು. ಮುಂದೇನು ಮಾಡೋದಪ್ಪಾ ಅಂತ ಚಿಂತೆ ಮಾಡ್ತಾ ಅಲ್ಲಿ ಬ್ರಿಡ್ಜ್ ಕೆಳಗೆ ಕುಳಿತಿದ್ದೆ. ಕುಳಿತಲ್ಲೆ ಜೋರು ನಿದ್ದಿ ಹತ್ತಿ ಬಿಟ್ಟಿತ್ತು. ಆಮೇಲೆ ಎದ್ದು ನೋಡಿದರೆ ನನ್ನ ಮುಂದೆ ಹಾಸಿದಂತೆ ಬಿದ್ದಿದ್ದ ಸೆರಗಿನೊಳಗ ಒಂದಿಷ್ಟು ಚಿಲ್ಲರೆ ಹಣ ಬಿದ್ದಿದ್ವು. ಪಕ್ಕದಲ್ಲಿಯೆ ಮಸೀದಿ ಇತ್ತು. ಮಸೀದಿಗೆ ಹೋಗಿ ಬಂದು ಮಾಡೋರೆಲ್ಲ ನನ್ನ ಹತ್ತಿರ ದುಡ್ಡು ಎಸೆದು ಹೋಗತಿದ್ರು. ಮುಂದೆ ನನಗೆ ಅದೇ ಸರಿ ಎನಿಸತೊಡಗಿತು. ಸ್ವಲ್ಪ ದಿನ ಸುಮ್ಮನೆ ಕುಳಿತುಕೊಂಡು ಅಥವಾ ಅಡ್ಡ ಮಲಗಿಯೋ ಭಿಕ್ಷೆ ಬೇಡುತ್ತಿದ್ದೆ. ಪ್ರಾರಂಭದಲ್ಲಿ ಭಿಕ್ಷೆ ಬೇಡೋದು ಹೆಂಗೆ ಅಂತಾನೂ ನನಗೆ ಗೊತ್ತಾಗುತ್ತಿರಲಿಲ್ಲ. ಆಮೇಲೆ ಅಕ್ಕ ಪಕ್ಕದಲ್ಲಿ ಭಿಕ್ಷೆ ಬೇಡ್ತಾ ಇದ್ದೋರು ಹಂಗಲ್ಲ ಕಣಮ್ಮ. 'ಅಮ್ಮಾ ಅಮ್ಮ, ಸಲಾಮಾಲೇಕುಂ, ಅಲ್ಲಾಹ್ ದುವಾ ಕರೇಗಾ, ಮೇರೆ ಬಾಪ್' ಅಂತ ಕೂಗ್ತಾ ಇರಬೇಕು. ಅವಾಗ ಯಾರಾದ್ರೂ ಕಾಸು ಕೊಡ್ತಾರೆ' ಅಂತ ಹೇಳಿದ್ರು. ಹಂಗೇ ಮಾಡಿದೆ. ಸ್ವಲ್ಪ ಚಿಲ್ರೆ ಕಾಸು ಬೀಳ್ತಾ ಇತ್ತು ಅದ್ರಲ್ಲಿ ಊಟ ತಿಂಡಿಗೆ ಅಂತ ಖರ್ಚು ಮಾಡಿದ್ರೆ ಕಡೇಗೆ ನನಗೆ ಅಂತ ಮನೆಗೆ ಒಯ್ಯಲಿಕ್ಕೆ ಏನೂ ಉಳೀತಾ ಇರಲಿಲ್ಲ. ನನ್ನ ಕೂಡ ಮುದುಕಿ ಹೂ ಪೋಣಿಸುತ್ತಾ ಕುಳಿತಿದ್ದಾಳಲ್ಲಾ ನಸೀಮಾ ಅಂತ. ಅವಳು ಊಟಕ್ಕೆ ಹೋಟ್ಲುಗೆ ಹೋಗಬೇಡ. ಮಸೀದಿಯವರು ಸಂಜೆ ಮತ್ತು ರಾತ್ರಿ ಇಲ್ಲದೋರಿಗೆ ಊಟ ಕೊಡ್ತಾರೆ. ನಾನು ಹೇಳಿತೀನಿ. ಬೆಳಿಗ್ಗೆ ಹೊತ್ತು ಮಾತ್ರ ಹೋಟ್ಲಲ್ಲಿ ತಿಂಡಿ ತಿಂದ್ಕೊಂಡು ಬಾ' ಅಂತ ಹೇಳಿದ್ಲು. ಅವಾಗಿಂದ ಮಸೀದಿಯೊಳಗೆ ಮಧ್ಯಾಹ್ನ ಊಟ ಮಾಡ್ತಿನಿ.
ಮೊದಲಿನಂಗ ಈಗ ನಡೆಯಾಕ ಆಗೂದಿಲ್ಲ. ಕಾಲು ಊದಿಕೊಂಡಾವ. ರಾತ್ರಿ ತನಕ ಅಲ್ಲೇ ಭಿಕ್ಷೆ ಬೇಡ್ತಾ ಇರತೀನಿ. ಈಗ ಎರಡ್ಮೂರು ತಿಂಗಳ ಹಿಂದೆ ನನ್ ನಾಲಿಗೆ ಬಾಯಿಂದ ಈಚೆಗೆ ಬಿದ್ದು ಜೋತಾಡ್ತಾ ಇತ್ತು. ಅದೇನು ಜಡ್ಡೋ ಏನೋ. ಇಲ್ಲೇ ಒಬ್ರು ಡಾಕ್ಟ್ರು ಹತ್ರ ಅಲ್ಲಿರುವ ಕಸ ತಳ್ಳೋ ಗಾಡಿಯಲ್ಲಿ ನನ್ನಂಗೆ ಬೀದಿಲಿರೋರು ನನ್ನ ಕರಕೊಂಡೋಗಿದ್ರು.. ಡಾಕ್ಟ್ರು ಅದೆನೋ ಔಷಧಿ ಕುಡಿಸಿ ನಾಲಿಗೇನ ಒಳಗೆ ತಳ್ಳಿದ್ರು. ಒಂದಷ್ಟು ದಿನ ಮಾತಾಡಬೇಡ. ಬರೀ ನೀರಿನ ಪದಾರ್ಥ ಕುಡಿ ಅಂತ ಹೇಳಿದ್ರು. ಹಂಗೇ ಮಾಡಿದೆ. ಆಮೇಲೆ ಸ್ವಲ್ಪ ಸರಿಹೋಯ್ತು. ಮಾತಾಡಬೇಕಾದ್ರೆ ಇವಾಗ್ಲೂ ನಾಲಿಗೆ ನೋಯ್ತಾ ಇರುತ್ತದೆ. ಒಂದ್ಕಡೆ ಕಾಲು ಊದಿಕೊಂಡಿದೆ. ಇನ್ನೊಂದು ಕಡೆ ನಾಲಿಗೆ ನೋಯುತ್ತಿದೆ. ಆಯ್ಕಂಡ್ ತಿನ್ನೋ ಕೋಳಿಗೆ ಕಾಲು ಮುರಿದುಬಿಟ್ಟ ದೇವರು. ಹಾಳಾಗೋಗ್ತಾನೆ ಅವನು.
ಕಾಯಿಲೆ ಬಂದ್ರೆ ಮಾತ್ರೆ ತಗೋಬೇಕು. ಕಾಲು ಊತಕ್ಕೆ ಈ ಮಾತ್ರೆ, ನಾಲಿಗೆ ಬೀಳತಿದಲ್ಲ ಅದುಕ್ಕೆ ಈ ಮಾತ್ರೆ ಬರೆದುಕೊಟ್ಟವ್ರೆ. 2 ಮಾತ್ರೆಗೆ 50 ರೂಪಾಯಿ ಕೊಡಬೇಕು. 50 ರೂಪಾಯಿ ಅಂದ್ರೆ 50 ರೂಪಾಯಿ. ಕಡಿಮೆ ಮಾಡ್ಕಳಪ್ಪ ದಿಕ್ಕಿಲ್ಲದೋಳು ಅಂತಂದ್ರೆ. ಕಡಿಮೆ ಮಾಡ್ಕಳದಿಲ್ಲ. 50 ರೂಪಾಯಿ ನಮಗೆ ಒಂದು ದಿನದ ಭಿಕ್ಷೆ ಕಾಸು. ಅದನ್ನ ಕೊಟ್ಟು ಮಾತ್ರೆ ತಗೋಬೇಕು. ವಾರಕ್ಕೆ ಎರಡು ಮೂರು ಸಲ ಮಾತ್ರೆ ತಿನ್ನಬೇಕಂತೆ. ಮಾತ್ರೆ ದುಡ್ಡಿಗೆ ಭಿಕ್ಷೆ ಬೇಡಬೇಕು, ಭಿಕ್ಷೆ ಬೇಡೋಕೆ ಉಸಿರು ಬೇಕಲ್ಲ ಅದಕ್ಕೆ ಮಾತ್ರೆ ತಿನ್ನಬೇಕು.
ಭಿಕ್ಷೆ ಬೇಡೋಕೂ ಬಿಡಲ್ಲ. ಒಂದ್ಸಲ ಏನಾಯ್ತು ಅಂದ್ರೆ ಇಲ್ಲಿ ಭಿಕ್ಷೆ ಬೇಡಾತಾ ಇದ್ದೆ. ಬೆಗ್ಗರ್ ಕಾಲೋನಿಯೋರು ವ್ಯಾನ್ ತಗೊಂಡು ಬಂದು ನನ್ನನ್ನೂ ವ್ಯಾನಿಗೆ ಎತ್ತಿ ಹಾಕಿ ಬಿಟ್ಟಿದ್ರು. ಬಿಡ್ರ್ಯಪ್ಪ ಬಿಡ್ರ್ಯಪ್ಪ ಅಂತ ಕಾಲು ಹಿಡ್ಕೊಂಡರೂ ಕೇಳಲಿಲ್ಲ. ಕಡೆಗೆ ಇವ್ರು ನನ್ನ ಬಿಡೂದಿಲ್ಲ ಕರಕೊಂಡೋಗಿ ಕೂಡಾಕುತ್ತಾರೆ ಅಂತ ಅವರಲ್ಲಿ ಒಬ್ಬನ ಕೈ ಕಚ್ಚಿಬಿಟ್ಟೆ. ಕೂಗಾಡಿದೆ ಅಷ್ಟೊತ್ತಿಗೆ ಮಸೀದಿಯವ್ರು ಬಂದು ಈ ಯಮ್ಮ ಭಿಕ್ಷೆ ಬೇಡತಿಲ್ಲ. ಮಸೀದಿ ಕೆಲಸ ಮಾಡ್ತಾಳೆ ಅವಳನ್ನ ಬಿಡ್ರಿ ಅಂತ ಹೇಳಿ ಗಲಾಟೆ ಮಾಡಿದ ಮೇಲೆ ಅದನ್ನ ಬರೆದುಕೊಡ್ರಿ ಅಂದ್ರು. ಮಸೀದಿಯೋರು ಈ ಯಮ್ಮ ಮಸೀದಿಯಲ್ಲಿ ಕೆಲಸ ಮಾಡಿತ್ತಿದ್ದಾಳೆ ಭಿಕ್ಷುಕಿ ಅಲ್ಲ ಅಂತ ಬರೆದುಕೊಟ್ಟ ಮೇಲೆ, ನನ್ನೊಬ್ಬಳನ್ನ ಬಿಟ್ಟು ಬಿಟ್ರು. ಮಿಕ್ಕಿದೋರನ್ನ ಎಳ್ಕೊಂಡು ಹೋದ್ರು.
ಹಿಂಗ ಟೈಮ್ ಟೈಮಿಗೆ ಗುಳಿಗೆ ತೊಗೊಂಡಿದ್ದರಿಂದ ಇತ್ತೀಚಿಗೆ ನನ್ನ ಆರೋಗ್ಯ ಸ್ವಲ್ಪ ಸುಧಾರಿಸೈತಿ. ಮಗಳು ಇಲ್ಲಿಯೆ ಹತ್ತಿರದ ಮನೆಗಳಲ್ಲಿ ಕಸ ಮುಸುರೆ ಮತ್ತು ಮಕ್ಕಳನ್ನು ಆಡಿಸುವ ಕೆಲಸಕ್ಕೆ ಹೋಗ್ತಾಳೆ. ಎಸ್‍ಎಸ್‍ಎಲ್‍ಸಿ ಹೆಂಗೋ ಪಾಸ್ ಮಾಡಿದ ಮೇಲೆ ಸಾಲಿ ಬಿಡಿಸಿಬಿಟ್ಟೆ. ಹೆಂಗೋ ಈಕಿದೊಂದು ಮದುವೆಯೊಂದಾದ್ರೆ ಆರಾಮಾಗಿ ಕಣ್ಮುಚ್ಚತೀನಿ ಎಂದು ಹೇಳಿ ಶಾರಿ ನಿಟ್ಟುಸಿರು ಬಿಟ್ಟಳು.
* * *
(ಮುಂದುವರೆಯುವುದು….)