
ಬೆಳಗಾಗುವುದೇ ಕಾಯುತ್ತಿದ್ದೆ. ಅಯೋವಾದ ಕುರಿ ಸಾಕಾಣಿಕಾ ಕೇಂದ್ರಕ್ಕೆ ಹೋಗುವ ಯೋಜನೆ ಆಗಲೇ ಸಿದ್ಧವಾಗಿತ್ತು. ಅಮೇರಿಕಾದಲ್ಲಿ ಪರಿಚಯವಾಗಿ ಚಡ್ಡಿ ದೊಸ್ತನಾಗಿದ್ದ ಮಂಜು ಎಲ್ಲ ಸಿದ್ಧತೆ ಮಾಡಿಕೊಂಡಿದ್ದ. ಅಲ್ಲಿ ದೂರ ಪ್ರವಾಸ ಹೋಗಬೇಕೆಂದರೆ ನಮ್ಮದೇ ಕಾರ್ ಒಯ್ಯಬೇಕೆಂದಿಲ್ಲ. ಬಾಡಿಗೆಗೆ ತರ ತರಹದ ಕಾರುಗಳು, ವ್ಯಾನುಗಳು ಅಲ್ಲಿ ದೊರಕುತ್ತವೆ. ಎಷ್ಟು ಸೀಟಿನ ವಾಹನ ಬೇಕು ಅಂತ ನಿರ್ಧರಿಸಿ, ಗ್ಯಾಸ್ ಹಾಕಿಸಿಕೊಂಡು ಹೊರಟರೆ ಆಯ್ತು. ಹೌದು ಅಲ್ಲಿ ಪೆಟ್ರೋಲ್ ಗೆ ಗ್ಯಾಸು ಅಂತಾರೆ. ಅವರು ಹಂಗೆ… ನಾವೇ ಬೇರೆ ನಮ್ಮ ಸ್ಟೈಲೇ ಬೇರೆ ಅನ್ನೋ ತರಹ! ನಾನು ಸ್ವಂತಕ್ಕೆ ಓಡಾಡಲು ಅಂತ ೨೦೦೦ ಇಸ್ವಿಯ ಸೆಕೆಂಡ್ ಹ್ಯಾಂಡ್ ಟೊಯೋಟಾ ಕ್ಯಾಮ್ರಿ ಕಾರ್ ಇಟ್ಟುಕೊಂಡಿದ್ದೆ. ಅದಕ್ಕೆ ನಾನು ಕೊಟ್ಟಿದ್ದು ಕೇವಲ ಎರಡುವರೆ ಸಾವಿರ ಡಾಲರ್. ಅದು ಓಡುತ್ತಿತ್ತು. ನನಗೆ ಅಷ್ಟು ಸಾಕಾಗಿತ್ತು! ಹಾಗೆ ಮಾಡಿದ್ದು ದುಡ್ಡು ಉಳಿಸಲು ಖಂಡಿತ ಅಲ್ಲ. ಹೊಸ ಹೊಸ ಸಾಮಾನುಗಳ ಮೋಹಜಾಲದಲ್ಲಿ ಸಿಲುಕಿ ಹೊರಗೆ ಬರಲು ಮನಸ್ಸು ಒಪ್ಪದೇ ಅಲ್ಲೇ ಉಳಿದುಬಿಡುವುದು ನನಗೆ ಬೇಡವಾಗಿತ್ತು. ಅದಷ್ಟೇ ಅಲ್ಲ ನಮ್ಮ ಮನೆಯಲ್ಲಿ ಸಹ ತುಂಬಾ ಕಡಿಮೆ ಬೆಲೆಯ ಸೋಫಾ, ೧೦೦ ಡಾಲರ್ TV ಹೀಗೆ ಎಲ್ಲವೂ ಅಲ್ಲೇ ಎಸೆದು ಬಂದರೂ ಬೇಜಾರಾಗದಷ್ಟು ಬೆಲೆಯ ವಸ್ತುಗಳು. ಹೀಗೆ ಉಳಿಸಿದ ದುಡ್ಡನ್ನು ಅಮೆರಿಕವನ್ನು ಸುತ್ತಿ ಕಳೆಯುತ್ತಿದ್ದೆವು. ಅಲ್ಲಿದ್ದ ಬರಿ ಒಂದೂವರೆ ವರ್ಷದಲ್ಲಿ ಆ ದೇಶದ ತುಂಬಾ ಕಡೆ ಸುತ್ತಾಡಿದೆವು. ‘ನೀನು ಕೆಲಸ ಮಾಡೋಕಿಂತ ಊರೂರು ಅಡ್ಡಾಡೋದೇ ಜಾಸ್ತಿ ಆಯ್ತಲ್ಲ’ ಅಂತ ರಾನ್ ಡೆಕ್ಕರ್ಡ್ ಯಾವಾಗಲೂ ‘ಜಸ್ಟ್ ಕಿಡ್ಡಿಂಗ್’ ಮಾಡುತ್ತಿದ್ದ! ಅಷ್ಟು ದೂರದ ಹೊಸ ದೇಶಕ್ಕೆ ಹೋಗಿ ಸುತ್ತಾಡದೆ ವಾಪಸ್ಸು ಭಾರತಕ್ಕೆ ಬಂದ ಮೇಲೆ ಅಲ್ಲಿ ಹೋಗಲಿಲ್ಲ ಇಲ್ಲಿ ಹೋಗಲಿಲ್ಲ ಅಂತ ಕೊರಗುವುದು ಸರಿಯೇ?
ನನ್ನ ಗೆಳೆಯನೊಬ್ಬನಿಗೆ ಹಾಗೆ ಆಯ್ತು. ಅವನು ಅಲ್ಲಿಗೆ ಬಂದು ಒಂದು ವರ್ಷ ಆಗಿತ್ತು. ಏನೋ ಕಾರಣಕ್ಕೆ ಅವನನ್ನು ಪ್ರಾಜೆಕ್ಟಿನಿಂದ ತೆಗೆದರು. ಬೇರೆ ಪ್ರಾಜೆಕ್ಟ್ ಸಿಗುವ ಸಾಧ್ಯತೆಗಳು ತುಂಬಾ ಕಡಿಮೆ ಇದ್ದವು. ಹದಿನೈದು ದಿನಗಳ ಒಳಗೆ ಬೇರೆ ಪ್ರಾಜೆಕ್ಟ್ ಗೆ ಅವನು assign ಆಗದಿದ್ದರೆ ಭಾರತಕ್ಕೆ ಹೋಗಲೇಬೇಕು, ಅಲ್ಲಿಂದ ಮತ್ತೆ ವಾಪಸ್ಸು ಬರಬಹುದಿತ್ತಾದರೂ ಎಲ್ಲವನ್ನೂ ಕಿತ್ತುಕೊಂಡು, ಹೋಗಿ ಬಂದು ಮಾಡಲು ಅದೇನು ಹುಬ್ಬಳ್ಳಿ ಧಾರವಾಡದಷ್ಟು ಹತ್ತಿರವೇ? ಆಗ ಅವನ ಗೋಳು ನೋಡಬೇಕಿತ್ತು. ತುಂಬಾ ಹೆಚ್ಚಿನ ಮೊತ್ತ ಕೊಟ್ಟು (ಸಾಲ ಮಾಡಿ!) ಹೊಚ್ಚ ಹೊಸ ಕಾರ್ ಕೊಂಡಿದ್ದ, ಮನೆಯಲ್ಲಿ ವೈಭವೋಪೇತ ಸೋಫಾ ಸೆಟ್, ಟೀವಿ ಹೀಗೆ ಎಲ್ಲವೂ ಮಿರಿ ಮಿರಿ ಮಿಂಚುವ, ಕಣ್ಣಿಗೆ ಕುಕ್ಕುವಂತಹ ಸಾಮಾನುಗಳು! ಈ ಎಲ್ಲವನ್ನು ಬಿಟ್ಟು ಭಾರತಕ್ಕೆ ಮರಳುವ ಯೋಚನೆಯೇ ಅವನನ್ನು ತಲ್ಲಣಗೊಳಿಸಿತ್ತು. ಅದೂ ಅಲ್ಲದೆ ವಿದೇಶದಲ್ಲೇ ಸೆಟ್ಲ್ ಆಗುತ್ತೇವೆ ಅಂದುಕೊಂಡು ಬಂದಿದ್ದವರು ಒಂದೇ ವರ್ಷದಲ್ಲಿ ವಾಪಸ್ಸು ಹೋದರೆ ಊರಲ್ಲಿ ಜನ ಏನಂದುಕೊಂಡಾರು ಎಂಬ ಚಿಂತೆ, ಈಗಾಗಲೇ ತಲೆ ಮೇಲೆ ಹಾಕಿಕೊಂಡಿದ್ದ ಸಾಲಗಳು ಅವನನ್ನು ಇನ್ನೂ ಧೃತಿಗೆಡಿಸಿ ಅವನ ಬೀಪಿ ಆಲ್ ಟೈಮ್ ಹೈ ಆಗಿತ್ತು! ಅಯ್ಯೋ ಇಲ್ಲಿ ಇರೋತನಕ ಒಂದು ಬಾರಿಯೂ ಎಲ್ಲೂ ಪ್ರವಾಸಕ್ಕೂ ಹೋಗಲಿಲ್ಲ ಅನ್ನುವ ಕೊರಗು ಬೇರೆ… ಹೀಗಾಗಿ ಅವನು ಹಾಗೂ ಹೀಗೂ ಗುದ್ದಾಡಿ, ಮ್ಯಾನೇಜರ್ ಗೆ ಗೋಗರೆದು, ಯಾವ ಕೆಲಸಕ್ಕೂ ಸಿದ್ಧ ಅಂತ ತನ್ನನ್ನು ತಾನೇ ಸಮರ್ಪಿಸಿಕೊಂಡು ಒಂದು ಪ್ರಾಜೆಕ್ಟ್ ಗಿಟ್ಟಿಸಿಕೊಂಡ. ಹೊಸ ಪ್ರಾಜೆಕ್ಟ್ ನಲ್ಲಿ ಕತ್ತೆ ಕೆಲಸ. ಹಗಲು ರಾತ್ರಿ ದುಡಿಯುತ್ತಿದ್ದ. ಇನ್ನೂ ದುಡಿಯುತ್ತಿದ್ದಾನೆ. ಅದು ಒಂದು ಜೀವನವೇ?
… ಬಿಡಿ ಕತ್ತೆಗಳ ಕೆಲಸವೇ ಅದು. ಈಗ ಕುರಿಗಳ ಬಗ್ಗೆ ಮಾತಾಡೋಣ! ಸಣ್ಣವನಿದ್ದಾಗ ನಮ್ಮೂರಲ್ಲಿ ಕುರಿಗಳು ಬಹಳ ಕಾಣುತ್ತಿದ್ದವು. ಈಗಲೂ ಕಾಣುತ್ತವೆ. ಆದರೆ ನಾನು ಮಾತಾಡುತ್ತಿರುವುದು ನಿಜವಾದ ಕುರಿ ಎಂಬ ಪ್ರಾಣಿಗಳ ಬಗ್ಗೆ! ಅವುಗಳ ದಂಡು, ಬ್ಯಾ ಬ್ಯಾ ಅನ್ನುತ್ತ ಅವು ಒಂದನ್ನೊಂದು ಹಿಂಬಾಲಿಸುವ ಪರಿ, ಆ ದಂಡನ್ನು ಕಾಯುವುದೇ ನಮ್ಮ ಗುರುತರ ಜವಾಬ್ದಾರಿ ಎಂಬಂತೆ ಅವುಗಳ ರಕ್ಷಣೆಯ ಹೊಣೆ ಹೊತ್ತು ಅತ್ತಿತ್ತ ತಿರುಗಾಡುತ್ತ ಆಗಾಗ ಬೊಗಳುತ್ತ ಅಡ್ಡಾಡುವ ಒಂದೆರಡು ನಾಯಿಗಳು. ಚಿತ್ರ ವಿಚಿತ್ರ ಧ್ವನಿ ಹೊರಡಿಸುತ್ತ, ಎಲ್ಲ ಕುರಿಗಳಿಗೂ ನಿರ್ದೇಶನ ನೀಡುತ್ತ ಸಾಗುವ ಕುರಿ ಕಾಯುವವರು… ಇವೆಲ್ಲ ನೆನಪಿನಾಳದಿಂದ ಹೊರಗೆ ಇಣುಕಲು ಶುರು ಮಾಡಿದ್ದವು. ನಾವಾಗಲೇ ನೆಬ್ರಾಸ್ಕಾ ಗಾಡಿಯನ್ನು ದಾಟಿ ಅಯೋವಾ ರಾಜ್ಯವನ್ನು ಹೊಕ್ಕಾಗಿತ್ತು. ಕುರಿ ಕೇಂದ್ರವನ್ನು ತಲುಪಿದೆವು. ನಿರೀಕ್ಷಿಸಿದಂತೆ ಅಲ್ಲೂ ಕುರಿಗಳಿದ್ದವು! ಅಲ್ಲಿನ ಕುರಿ ಕಾಯುವವರು ಜೀನ್ಸು ಹಾಕಿದ್ದರು, ಇಂಗ್ಲಿಷ್ ಮಾತಾಡುತ್ತಿದ್ದರು ಅನ್ನೋದು ಬಿಟ್ಟರೆ ಕುರಿಗಳಂತೂ ನಮ್ಮ ದೇಶದ ಕುರಿಗಳಂತೆಯೇ ಇದ್ದವು ಪಾಪ!
ಅಲ್ಲೊಬ್ಬಳು ನಮ್ಮನ್ನೆಲ್ಲ ಸುತ್ತಾಡಿಸಿ ಕುರಿ ದೊಡ್ಡಿ, ಹಾಲು ಸಂಸ್ಕರಣಾ ಕೇಂದ್ರ, ಶೈತ್ಯೀಕರಣ ಘಟಕ ಎಲ್ಲ ತೋರಿಸಿ ವಿವರಿಸಿದಳು. ಕಾಲ ಕಾಲಕ್ಕೆ ಸರಕಾರಿ ಅಧಿಕಾರಿಗಳು ಬಂದು ನಾವೂ ಎಲ್ಲ ನಿಯಮಗಳನ್ನು ಪಾಲಿಸುತ್ತಿದ್ದೆವೆಯೇ ಅಂತ ಪರಿಶೀಲಿಸಿ ಹೋಗುತ್ತಾರೆ ಅಂತ ಹೇಳಿದಳು. ಅಲ್ಲಿ ತುಂಬಾ ವರ್ಷಗಳಿಂದ ವಾಸವಾಗಿದ್ದ ಇಬ್ಬೊಬ್ಬ ಭಾರತೀಯ ನನ್ನ ಕಡೆ ನೋಡಿ ಹೇಳಿದ ‘ನಿಮ್ಮ ಇಂಡಿಯಾ ತರ ಅಲ್ಲ, ಭಾರಿ ರೂಲ್ಸ್ ಫಾಲೋ ಮಾಡ್ತಾರ ಇಲ್ಲೇ!’ ಅವನು ಅಮೇರಿಕಾದ ಕಟ್ಟಾ ಅಭಿಮಾನಿ. ನನಗೆ ಅವನ ಗಡ್ಡ ಅಲ್ಲಿದ್ದ ಹೋತಿನ ಗಡ್ಡದಂತೆಯೇ ಕಂಡಿದ್ದು ಕಾಕತಾಳೀಯ ಇರಬಹುದು! ಎಲ್ಲ ಅಡ್ಡಾಡಿ ಆದ ನಂತರ ಒಂದು ಕುರಿಯನ್ನು ಕರೆದು ತಂದು ಒಂದು ಕಟಕಟೆಯ ಮೇಲೆ ನಿಲ್ಲಿಸಿದಳು. ಕತ್ತಿ ತೊಗೊಂಡು ಕಡೆದೇ ಬಿಡುತ್ತಾಳೆಯೇ ಅಂತ ಭಯ ಆಯ್ತು. ಅವಳು ಅದನ್ನು ನಿಲ್ಲಿಸಿದ್ದು ನಮ್ಮ ಅಮೃತ ಹಸ್ತಗಳಿಂದ ಅದರ ಹಾಲು ಕರೆಸಲು ಅಂತ ತಿಳಿದು ತುಸು ಸಮಾಧಾನ ಆಯ್ತು. ಅದರ ಮುಂದೆ ಒಂದಿಷ್ಟು ಹುಲ್ಲು ತಿನ್ನಲು ಕೊಟ್ಟರು. ಅವತ್ತು ಆಗಮಿಸಿದ್ದ ಒಬ್ಬೊಬ್ಬರಿಗೆ ಕರೆದು ಕುರಿಯ ಹಾಲು ಹಿಂಡಿ ಅಂತ ಹೇಳಿದಳು. ಎಲ್ಲರೂ ತಮಗೆ ತಿಳಿದ ರೀತಿಯಲ್ಲಿ ಹಿಂಡಿ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸುತ್ತಿದ್ದರೆ ಕುರಿ ಎಷ್ಟು ಒದ್ದಾಡುತ್ತಿತ್ತೋ ಅಂತ ಬೇಜಾರಾಯ್ತು. ಪಾಪ ಕುರಿ!
ಅಂತೂ ಇವೆಲ್ಲ ಸಂಭ್ರಮಗಳು (ನಮಗೆ!) ಮುಗಿದು ಅಲ್ಲಿಯೇ ಅವರಣದಲ್ಲಿದ್ದ ಅವರ ಅಂಗಡಿಗೆ ನಮ್ಮ ಸವಾರಿ ಹೋಯಿತು. ಅಲ್ಲಿ ಕುರಿಯ ಹಾಲಿನ ಉತ್ಪನ್ನಗಳು ಇದ್ದವು. ಅದರಲ್ಲಿ ಒಂದು ಉತ್ಪನ್ನ ಐಸ್ ಕ್ರೀಮ್. ನನಗೆ ಅದು ಸರ್ವಕಾಲಕ್ಕೂ ಇಷ್ಟ. ಹೀಗಾಗಿ ನಾನೂ ಒಂದು ದೊಡ್ಡ ಸ್ಕೂಪ್ ತೊಗೊಂಡೆ. ಇದು ಕುರಿಯ ಹಾಲಿನದು ಅನ್ನೋದು ಬಿಟ್ಟರೆ ಬೇರೆ ಏನೂ ವ್ಯತ್ಯಾಸ ಇರದು ಅಂತ ಭಾವಿಸಿ ಬಾಯಿಗಿಟ್ಟ ಕೂಡಲೇ ನನಗೆ ತುಂಬಾ ನಿರಾಸೆ ಆಯ್ತು. ಅದೊಂತರಹ ವಿಚಿತ್ರ ವಾಸನೆ. ನನಗೆ ಸಹಿಸಲಾಗುತ್ತಿರಲಿಲ್ಲ. ಕೆಟ್ಟದು ಅಂತಲ್ಲ ಆದರೆ ನನ್ನ ನಾಲಿಗೆಗೆ ಅದರ ರುಚಿ ರೂಡಿ ಇರಲಿಲ್ಲವಾದ್ದರಿಂದ ಹಾಗನ್ನಿಸಿರಬೇಕು. ಕಷ್ಟ ಪಟ್ಟು ತಿನ್ನುತ್ತಿದ್ದೆ. ಅಷ್ಟರಲ್ಲಿಯೇ ನಡೆದ ಒಂದು ಆಕಸ್ಮಿಕ ಘಟನೆ ನನಗೆ ತುಂಬಾ ಸಮಾಧಾನ ತಂದುಕೊಟ್ಟಿತ್ತು. ಅದೇನೋ ಆಗಿ ಜಾರಿ ನನ್ನ ಕೈಯಿಂದ ಕುರಿಯ ಹಾಲಿನ ಐಸ್ ಕ್ರೀಮ್ ಬಿದ್ದೆ ಹೋಯಿತು! ನನಗೋ ಸಿಕ್ಕಾಪಟ್ಟೆ ಆನಂದವಾಯಿತು. ಅದನ್ನು ತೋರಿಸಲು ಸಾಧ್ಯವೇ. ಅಯ್ಯೋ ನನ್ನ ಐಸ್ ಕ್ರೀಮ್ ಬಿತ್ತು ಅಂತ ಸ್ವಲ್ಪ ಎಕ್ಸ್ಟ್ರಾರ್ಡಿನರಿ ನಾಟಕ ಮಾಡಿದೆ. ಅದೊಂದು ದೊಡ್ಡ ತಪ್ಪಾಗಿತ್ತು! ಕೌಂಟರಲ್ಲಿ ಇದ್ದ ಮಹಿಳೆ ಎಷ್ಟು ಒಳ್ಳೆಯವಳಾಗಿದ್ದಳು ಎಂದರೆ, “No worries you can have one more!” ಅಂತ ಮಿಲಿಯನ್ ಡಾಲರ್ ಸ್ಮೈಲ್ ಜೊತೆಗೆ ಇನ್ನೊಂದು ಸ್ಕೂಪ್ ಕೊಟ್ಟೆ ಬಿಟ್ಟಳು! ಅಯ್ಯೋ ಕರ್ಮವೇ ಹೋದೆಯಾ ಪಿಶಾಚಿ ಅಂದರೆ ಬಂದೆಯಾ ಗವಾಕ್ಷೀಲಿ ಎಂಬಂತಾಗಿತ್ತು ನನ್ನ ಸ್ಥಿತಿ! ಅಂತೂ ಇಂತೂ ಅದನ್ನು ಮತ್ತೆ ಬೀಳಿಸಲಾರದ ಹಾಗೆ ಜೋಪಾನವಾಗಿ ತಿಂದು ಮುಗಿಸಿದೆ. ಅದೂ ಬಿದ್ದು ಮತ್ತೊಂದು ಕೊಟ್ಟರೆ ಏನು ಗತಿ?! ಮರಳಿ ಮನೆಗೆ ಹೊರಟೆವು.
ಆ ಘಟನೆ ಅಲ್ಲಿನ ಆಗಿನ ನನ್ನ ಸ್ಥಿತಿಯನ್ನೇ ಹೋಲುತ್ತಿತ್ತು ಅಂತ ಈಗ ಅನಿಸುತ್ತದೆ. ನನಗೆ ಅಮೆರಿಕೆಯಲ್ಲಿ ಇರಲು ಇಷ್ಟ ಇರಲಿಲ್ಲ. ಆದರೂ ಇದ್ದೆ, ಇಷ್ಟವಿಲ್ಲದ ಐಸ್ ಕ್ರೀಮ್ ತಿಂದ ಹಾಗೆ. ಇನ್ನೊಂದೆರಡು ಸಲ ತಿಂದಿದ್ದರೆ ಅದೂ ರೂಡಿಯಾಗುತ್ತಿತ್ತು, ಹಾಗೆಯೇ ಇನ್ನೊಂದೆರಡು ವರ್ಷ ಇದ್ದಿದ್ದರೆ ಅಲ್ಲಿಯೇ ಇದ್ದುಬಿಡುತ್ತಿದ್ದೆವೇನೋ! ಆದರೆ ನನಗೆ ಹಾಗೆ ಆಗುವುದು ಇಷ್ಟ ಇರಲಿಲ್ಲ. ಹಾಗಂತ ನಾನು ಅಲ್ಲಿ ದುಖಿಯಾಗಿಯೂ ಇರಲಿಲ್ಲ. ಇದ್ದಷ್ಟು ದಿನಗಳು ಮಜವಾಗಿಯೇ ಕಳೆದೆವು. ಆದಷ್ಟು ಬೇಗನೆ ಅಲ್ಲಿಂದ ಕಾಲು ಕಿತ್ತಬೇಕು ಅನ್ನುವ ಯೋಚನೆ ಯಾವಾಗಲೂ ಇದ್ದೇ ಇರುತ್ತಿತ್ತು. ಅಲ್ಲಿನ ಕನ್ನಡಿಗರು ನಮಗೆ ಊರಿನ ಚಿಂತೆ ಅಷ್ಟೊಂದು ಕಾಡಲು ಬಿಡಲಿಲ್ಲ. ಅಷ್ಟೊಂದು ಒಳ್ಳೆಯ ಬಳಗ, ಹೊಸ ಗೆಳೆಯರು, ಅವರ ಪ್ರೀತಿ ಇವೆಲ್ಲದರ ಬಗ್ಗೆ ಹೇಳದಿದ್ದರೆ ಈ ಸರಣಿ ಅಪೂರ್ಣ!
–ಗುರುಪ್ರಸಾದ ಕುರ್ತಕೋಟಿ
(ಮುಂದುವರಿಯುವುದು…)
[…] […]