ಕುರಿಯ ಹಾಲಿನ ಐಸ್ ಕ್ರೀಮು (ಭಾಗ ೨): ಗುರುಪ್ರಸಾದ‌ ಕುರ್ತಕೋಟಿ

ಇಲ್ಲಿಯವರೆಗೆ
ನಾವು ಅಮೆರಿಕೆಯ, ನೆಬ್ರಾಸ್ಕಾ ರಾಜ್ಯದ ಒಮಾಹಾದಲ್ಲಿ ಧರೆಗೆ ಬಂದು ಇಳಿದಿದ್ದು ಸೆಪ್ಟೆಂಬರದಲ್ಲಿ. ಆಗ ಅಲ್ಲಿ ಜಿಟಿ ಜಿಟಿ ಮಳೆ ಶುರು ಆಗಿತ್ತು. ಆದರೆ ಕಿಚಿ ಪಿಚಿ ಕೆಸರು ಇರಲಿಲ್ಲ! ಮಹಾ ನಿರ್ದಯಿ ಚಳಿಗಾಲಕ್ಕಿಂತ ಸ್ವಲ್ಪ ಮೊದಲು. ಹೀಗಾಗಿ ಮಳೆಯ ಜೊತೆಗೆ ಸ್ವಲ್ಪ ಚುಮು ಚುಮು ಚಳಿಯೂ ಇತ್ತು. ನಾವು ಹೋದ ಆ ಸಮಯ ಮುಂಬರುವ ಚಳಿಯ ಪರಿಚಯ ಮಾಡಿಕೊಳ್ಳಲು ತುಂಬಾ ಸಹಾಯ ಮಾಡಿತು. ಒಂದು ವೇಳೆ ಚಳಿಗಾಲದ ಹೊತ್ತಿನಲ್ಲಿ ಅಲ್ಲಿಗೆ ಹೋಗಿದ್ದರೆ ಹೊಂದಿಕೊಳ್ಳಲು ತುಂಬಾ ಕಷ್ಟ ಪಡುತ್ತಿದ್ದೆವೇನೋ ಅನಿಸಿತು. ಆದರೆ ಹೆಚ್ಚು ಕಡಿಮೆ ಎಂಟು ತಿಂಗಳ ಆ ಚಳಿಗಾಲ ಇರುತ್ತದೆ ಅಂತ ಗೊತ್ತಾದ ಮೇಲೆ ಕೃಷಿ ಚಟುವಟಿಕೆಯ ಹಳ್ಳಿಯ ವಾತಾವರಣ ನಿರೀಕ್ಷಿಸಿ ಬಂದಿದ್ದ ನನಗೆ ಕೊಂಚ ನಿರಾಸೆ ಆಗಿತ್ತು. ಫೂಟುಗಟ್ಟಲೆ ಹಿಮ ಆವರಿಸಿಕೊಳ್ಳುತ್ತಿದ್ದ ಆ ಪ್ರದೇಶದಲ್ಲಿ ಬೆಳೆ ಮಾತು ಹಾಗಿರಲಿ ಕಳೆಯೂ ಬೆಳೆಯುತ್ತಿರಲಿಲ್ಲ! ಚಳಿಗಾಲ ಮುಗಿದ ಮೇಲೆ ಕೆಲವು ತಿಂಗಳು ಮಾತ್ರ ಅಲ್ಲಿಯ ಹೊಲದಲ್ಲಿ ಬೆಳೆ ತೆಗೆಯುತ್ತಿದ್ದರು. ಅದೂ ಜೋಳ, ಗೋದಿ ಇಲ್ಲವೇ ಸೋಯಾ. ಮತ್ತೇನು ನಮ್ಮ ಹಾಗೆ ಶೇಂಗಾ, ಅಲಸಂದಿ, ಹುರುಳಿ ಬೆಳೆಯುತ್ತಾರೆ ಅಂದುಕೊಂಡಿದ್ದೆಯಾ ಮರುಳೆ? ಅಂತ ನನಗೆ ನಾನೇ ಸಮಾಧಾನ ಮಾಡಿಕೊಂಡಿದ್ದೆ. ಆದರೂ ಕರಿಮೋಡದ ಸುತ್ತಲು ಒಂದು ಬೆಳ್ಳಿ ಗೆರೆ ಇಣುಕುತ್ತಿತ್ತು! ಸುತ್ತಲಿನ ರಾಜ್ಯಗಳಲ್ಲಿ ಸೇಬು, ಸ್ಟ್ರಾಬೆರಿ, ಬ್ಲೂಬೆರ್ರಿ ತರಹದ ಕೆಲವು ಬೆಳೆ ಬೆಳೆಯುವ ರೈತರು ಇದ್ದರು. ಅಲ್ಲಿಗೆ ಹೋಗಿ ನೋಡುವ ಅವಕಾಶವೂ ಇತ್ತು. ಅದು ನನಗೆ ಕ್ರಮೇಣ ಸಮಾಧಾನವನ್ನು ತಂದುಕೊಟ್ಟಿತು.

ಅಲ್ಲಿ ನನ್ನ ಜೊತೆ ಕೆಲಸ ಮಾಡುತ್ತಿದ್ದ ಎಷ್ಟೋ ಅಮೆರಿಕನ್ನರು ಹಳ್ಳಿಯಲ್ಲೇ ವಾಸಿಸುತ್ತಿದ್ದರು. ಒಬ್ಬನಂತೂ ಸ್ವಲ್ಪ ಕೇಳಿದರೂ ಸಾಕು ತನ್ನ ಹಳ್ಳಿ ಜೀವನದ ಬಗ್ಗೆ ತಾನು ವಾಸಿಸುತ್ತಿದ್ದ ಮನೆಯ ಬಗ್ಗೆ ಸರಿಯಾಗಿ ಕೊರೆಯುತ್ತಿದ್ದ. ಕೊರಕರು ಎಲ್ಲಾ ಕಡೆ ಇರುತ್ತಾರೆ! ಅವನು ಮಾತೆತ್ತಿದರೆ ತಾನು ಸಾಕಿರುವ ಬಾತುಕೋಳಿಗಳ ಬಗ್ಗೆ ವಿವರಿಸುತ್ತಿದ್ದ. ನಾವು ಎಷ್ಟೋ ಸಲ ಅವನ ಕಾಲೆಳೆಯುವುದಕ್ಕೆ ಅಂತಲೇ ಆ ವಿಷಯ ತೆಗೆಯುತ್ತಿದ್ದೆವು. ಅವನೂ ಬೇಜಾರಿಲ್ಲದೆ ಹೇಳಿದ್ದನ್ನೇ ಹೇಳುತ್ತಿದ್ದ ಪುಣ್ಯಾತ್ಮ! ಆ ಮನೆ ಅವನ ಹೆಂಡತಿಯ ಅಮ್ಮನ ಕಡೆಯಿಂದ ಬಂದಿದ್ದಂತೆ. ಅವಳಿಗೆ ಆ ಮನೆ ಬಿಡಲು ಇಷ್ಟವಿಲ್ಲ ಅಂತ ಅಲ್ಲೇ ಇದ್ದೇವೆ ಅಂದಾಗ ಅರೇ ಅಮೆರಿಕನ್ನರು ಹೀಗೂ ಇರುತ್ತಾರೆಯೇ ಎಂದು ಮೂಗಿನ ಮೇಲೆ ಬೆರಳಿಟ್ಟುಕೊಂಡಿದ್ದೆ (ಆಗ ಇನ್ನೂ ಕೊರೋನಾ ಬಂದಿರಲಿಲ್ಲ ಬಿಡಿ!)  

ಸೂಸನ್ ಅನ್ನುವ ಇನ್ನೊಬ್ಬಳು ಕೂಡ ಹಳ್ಳಿಯಿಂದಲೇ ಬರುತ್ತಿದ್ದಳು. ನಾನು ನಿಮ್ಮ ಹಳ್ಳಿಗೆ ಬರಬಹುದೇ ಅಂತ ಕೇಳಿದ್ದಕೆ ಹುಬ್ಬು ಗಂಟು ಹಾಕಿ ಆಶ್ಚರ್ಯದಿಂದ ನೋಡಿದ ಅವಳು “ಯಾಕೆ?” ಅಂತ ಕೇಳಿದಳು. ಹಳ್ಳಿಯವರಾದರೂ ಅಲ್ಲೆಲ್ಲ ನಮ್ಮ ಹಾಗೆ ಬರ್ತೀವಿ ಅಂದ ಕೂಡಲೇ ಬನ್ನಿ ಬನ್ನಿ ಅಂತ ಖಂಡಿತ ಹೇಳೋಲ್ಲ. ಅಲ್ಲೆಲ್ಲ ‘ಹಾಗೆ ಸುಮ್ಮನೆ’ ಅನ್ನುವ ಅನ್ನುವ ಪದವೇ ಇಲ್ಲ, ಆದರೆ ‘ಹಾಗೆ ತಮಾಷೆಗೆ’ ಅನ್ನುವ ಪದ ಮಾತ್ರ ತುಂಬಾ ಬಳಕೆ ಆಗುತ್ತೆ… ಹೇಳೋದೆಲ್ಲ ಹೇಳಿಬಿಟ್ಟು ‘ಜಸ್ಟ್ ಕಿಡ್ಡಿಂಗ್’ ಅಂದು ಬಿಡ್ತಾರೆ!

ನಾನು ಸೂಸನ್ ಗೆ “ಅಮೆರಿಕಾದ ಹಳ್ಳಿಗಳು ಹೇಗಿರ್ತವೆ ಎಂದು ಅರಿಯುವ ಆಸೆ..” ಅಂದೆ.

“ಬರಬಹುದು, ಆದರೆ ತಲೆಗೆ ರುಮಾಲು ಸುತ್ತಿಕೊಂಡು ಬರಬೇಡ, ಹಾಗೇನಾದರೂ ಬಂದರೆ ಗುಂಡು ಹೊಡೆದುಬಿಡುತ್ತಾರೆ” ಅಂತ ಜೋರಾಗಿ ನಕ್ಕಳು.

ನನಗೆ ಮೊದಲ ಬಾರಿ ಮೈ ಝುಂ ಅಂದಿತ್ತು. ರುಮಾಲು ಅಂದರೆ ಒಸಾಮಾ ಬಿನ್ ಲಾಡೆನ್ ಹಾಕುತ್ತಿದ್ದನಲ್ಲ ಆ ತರಹದ್ದು. ರುಮಾಲು ಹಾಕಿಕೊಂಡವರೆಲ್ಲ ಲಾಡೆನಗಳೆ? ಅಲ್ಲಿ ಮುಂದೆ ಒಂದು ಸಲ ಯಾವನೋ ಒಬ್ಬ ಭಾರತೀಯನಿಗೆ ಅಮೆರಿಕನ್ ಹಿಗ್ಗ ಮುಗ್ಗ ಹೊಡೆದಿದ್ದ ಸುದ್ದಿ ಕೇಳಿದ್ದೆವು. ಯಾಕೆ ಹೊಡೆದಿದ್ದ ಅಂದರೆ ಅವನಿಗೆ ಗಡ್ಡ ಇತ್ತಂತೆ. ಗಡ್ಡ ಇದ್ದ ಮಾತ್ರಕ್ಕೆ ಲಾಡೆನ್ ಆಗುತ್ತಾರೆಯೇ? ಅಮೆರಿಕನ್ನರಲ್ಲಿ ಬಹುತೇಕರು ಬಾವಿಯೊಳಗಿನ ಕಪ್ಪೆಗಳು, ಅವರಿಗೆ ಬೇರೆ ತುಂಬಾ ವಿಷಯಗಳು ಗೊತ್ತೇ ಇಲ್ಲ ಅಂತ ಆಗ ನನಗೆ ಅನ್ನಿಸಲು ಶುರು ಆಗಿತ್ತು. ಅಲ್ಲಿ ಎಷ್ಟೋ ಜನರ ಬಳಿ ಬಂದೂಕು ಇರುತ್ತವೆ. ಹೆಚ್ಚು ಕಡಿಮೆ ನಮ್ಮ ಮೇಲೆ ಸಂಶಯ ಬಂದರೆ ಆತ್ಮರಕ್ಷಣೆಗೆ ಅಂತ ಗುಂಡು ಹಾರಿಸಬಹುದಂತೆ ಅವರು! ಅಪರಿಚಿತರೊಂದಿಗೆ ವ್ಯವಹರಿಸುವಾಗ ಹುಷಾರಾಗಿರಬೇಕು, ನಮ್ಮೂರಲ್ಲಿ ಹೋದಂತೆ ಹೇಳದೆ ಕೇಳದೆ ಹೋದರೆ ಅಲ್ಲಿಯವರಿಗೆ ಇಷ್ಟವಾಗೋದಿಲ್ಲ ಅಂತ ಮನದಟ್ಟಾಯಿತು. ಅಮೆರಿಕನ್ನರು ಒಂತರಹ ವಿಚಿತ್ರ ಪ್ರಾಣಿಗಳು ಅಂತ ಅನಿಸಿತು. ಆದರೆ ಅಲ್ಲೂ ಕೆಲವು ಒಳ್ಳೆಯ ಪ್ರಾಣಿಗಳು ಇದ್ದವು! ರಾನ್ ಡೆಕರ್ಡ್, ಮೈಕಲ್ ಸುಲ್ಲಿವಾನ್, ಜಿಮ್  ತರಹದವರು…

ಚಳಿಗಾಲ, ಹಿಮ ಮೊದಮೊದಲು ಚೇತೋಹಾರಿ ಅನಿಸಿದರೂ ಹೋದ ಹೋದಂತೆ ತುಂಬಾ ಕ್ರೂರವಾಗಿ ಕಾಣತೊಡಗಿತು. ಹಿಮ ಬಿದ್ದಾಗ ರೋಡುಗಳನ್ನೆಲ್ಲ ಸ್ವಚ್ಛ ಮಾಡೋಕೆ ಗಾಡಿಗಳು ಬರುತ್ತಿದ್ದವು. ಆದರೂ ಮತ್ತೆ ಮತ್ತೆ ಹಿಮ ಬೀಳುತ್ತಿತ್ತಾದ್ದರಿಂದ ರಸ್ತೆ ಮೇಲೆ ಗಾಡಿ ಓಡಿಸುವುದಕ್ಕೆ ಕೂಡ ಸ್ವಲ್ಪ ಚಾಕಚಕ್ಯತೆ ಬೇಕಾಗುತ್ತಿತ್ತು. ಅವತ್ತು ಮೊದಲ ಬಾರಿಗೆ ರಾತ್ರಿಯೆಲ್ಲಾ ಸಿಕ್ಕಾಪಟ್ಟೆ ಹಿಮ ಬಿದ್ದಿತ್ತು. ಮರುದಿನ ಕಾರಿನ ಮೇಲೆಲ್ಲಾ ಹಿಮದ ಆವರಣ. ಅದನ್ನೆಲ್ಲ ತೆಗೆದು ಹಾಕುವುದರೊಳಗೆ ನನ್ನ ಕೈ ಮರಗಟ್ಟಿದ ಅನುಭವ. ಹಿಮ ಬಿದ್ದಾಗಲೊಮ್ಮೆ ಭಾರತಕ್ಕೆ ಮರಳಬೇಕು ಎನ್ನುವ ಧೃಡ ಸಂಕಲ್ಪ ಮಾಡುತ್ತಿದ್ದೆ! ಇಂತಹ ಸಂದರ್ಭದಲ್ಲಿ ಅಲ್ಲಿ ಬೇಸಿಗೆ ಬಂತು. ಅದೊಂದು ದೊಡ್ಡ ಸಂಭ್ರಮ ಅಲ್ಲಿಯವರಿಗೆ. ಎಂಟು ತಿಂಗಳು ಹಿಮಭರಿತ ಚಳಿಯಲ್ಲಿ ನಡುಗಿದವರಿಗೆ ಬಿಸಿಲಿನ ಮಹತ್ವ ಗೊತ್ತಾಗದೆ ಇನ್ನೇನು! ನನಗೂ ಆ ಪರಿಸ್ಥಿತಿಯಲ್ಲಿ ಅದೊಂದು ಅಪರೂಪವೇ ಆಗಿತ್ತು. ಅದಕ್ಕೆ ಅಲ್ಲಿನವರು ಭಾರತದ ಬೀಚಿಗೆ ಬಂದಕೂಡಲೇ ಯಾಕೆ ಎಲ್ಲ ಬಿಚ್ಚಿ ನಲಿದಾಡುತ್ತಾರೆ ಎಂಬುದು ಆಗ ನನಗೆ ಅರಿವಿಗೆ ಬಂತು!

ಅಂಥದ್ದರಲ್ಲಿ ನೆಬ್ರಾಸ್ಕಾದ ಪಕ್ಕದ ರಾಜ್ಯ ಐಯೊವಾದಲ್ಲಿ ಒಂದು ಕುರಿ ಸಾಕಾಣಿಕೆ ಕೇಂದ್ರಕ್ಕೆ ಪಿಕನಿಕ್ ಹೋಗೋಣ ಅಂತ ಗೆಳೆಯನೊಬ್ಬ ಪ್ರಸ್ತಾಪಿಸಿದ. ನಾನೂ ಖುಷಿಯಿಂದಲೇ ಒಪ್ಪಿದೆ. ಅಮೆರಿಕೆಯಲ್ಲಿ ಕುರಿಯ ಹಾಲು ತುಂಬಾ ಕಡೆ ಸಿಗುತ್ತದೆ. ಅದು ತುಂಬಾ ಸುಲಭವಾಗಿ ಜೀರ್ಣ ಆಗುತ್ತದೆ ಎಂಬ ಕಾರಣದಿಂದ ಮಕ್ಕಳಿಗೆ ಅದನ್ನು ಕೊಡಬಹುದು ಅಂತ ತಿಳಿಯಿತು. ಗಾಂಧೀಜಿ ಅವರ ಭಕ್ತನಾದ ನಾನು (ಈ ‘ಭಕ್ತಿ’ಯ ಬಗ್ಗೆ ಇನ್ನೊಮ್ಮೆ ಬರೆದೇನು!) ಕುರಿಯ ಹಾಲಿನ ಬಗ್ಗೆ ಅವರು ಹೇಳಿದ್ದು ತಲೆಯಲ್ಲಿತ್ತಾದ್ದರಿಂದ ನನ್ನ ಮಗಳಿಗೆ ಕುಡಿಯಲು ಅದರ ಹಾಲನ್ನು ಆಗಾಗ ತರುತ್ತಿದ್ದೆವು. ಛೆ ಛೆ… ನಾನು ಕುಡಿಯುತ್ತಿರಲಿಲ್ಲ. ಉತ್ಕೃಷ್ಟ ಮಟ್ಟದ ಅಲ್ಕೋಹಾಲು ಸಿಗುವ ಅಮೇರಿಕೆಗೆ ಹೋಗಿ ಕುರಿಯ ಹಾಲು ಕುಡಿಯೋದೆ?! ನಾವು ತರುತ್ತಿದ್ದ ಕುರಿಯ ಹಾಲು ಈ ತರಹದ ಫಾರ್ಮ್ ಗಳಿಂದ ಪ್ಯಾಕ್ ಆಗಿ ಬರುತ್ತಿತ್ತು. ಅಂತಹ ಒಂದು ಫಾರ್ಮ್ ಗೆ ಹೋಗುತ್ತಿರುವ ವಿಚಾರ ಸಹಜವಾಗಿಯೇ ನನಗೆ ಖುಷಿ ಕೊಟ್ಟಿತ್ತು. ಅದೂ ಅಲ್ಲದೆ ಅಮೇರಿಕೆಗೆ ಬಂದ ಮೇಲೆ ಅದು ನನ್ನ ಮೊದಲ ಕೃಷಿ ಸಂಬಂಧಿ ಪ್ರವಾಸ ಆಗಿತ್ತು.


(ಮುಂದುವರಿಯುವುದು…)

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

3 Comments
Oldest
Newest Most Voted
Inline Feedbacks
View all comments
Manju
Manju
3 years ago

sakkathaagide…..

Guruprasad Kurtkoti
3 years ago

ಬರಹವನ್ನು ಓದಿ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು ಮಂಜು ಅವರೇ! 🙂

3
0
Would love your thoughts, please comment.x
()
x