ಕುರಿಯ ಹಾಲಿನ ಐಸಕ್ರೀಮು (ಭಾಗ ೧): ಗುರುಪ್ರಸಾದ ಕುರ್ತಕೋಟಿ

ಅಮೇರಿಕೆಗೆ ಹೋಗುವುದು ಖಚಿತವಾಗಿ, ವೀಸಾ ಸಂಭ್ರಮಗಳೆಲ್ಲ ಮುಗಿದಾಗ ನಮ್ಮ ಕಂಪನಿಯಲ್ಲಿ ನನಗೆ ಕರೆಗಳು ಬರಲು ಶುರುವಾಗಿದ್ದವು. ಅಮೆರಿಕೆಯ ವೀಸಾ ಸೀಲು ಬಿದ್ದವರು ಅಂದರೆ ಮದುವೆಗೆ ತಯಾರಾದ ಕನ್ಯೆಯರು ಇದ್ದಂತೆ. ಹುಡುಗಿಗೆ ವಯಸ್ಸಾದಂತೆ ತಂದೆತಾಯಿಯರಿಗೆ ಎಷ್ಟು ಆತಂಕ ಇರುತ್ತದೋ (ನಮ್ಮ ಕಾಲದಲ್ಲಿ ಹಾಗಿತ್ತು, ಈಗ ಹುಡುಗನ ತಂದೆತಾಯಿಗೆ ಅಂತ ಓದಿಕೊಳ್ಳಿ!) ಅದಕ್ಕಿಂತ ಹೆಚ್ಚು ಆತಂಕ ಆಯಾ ವಿಸಾಧಾರಿಗಳ ಮ್ಯಾನೇಜರ್ ಗಳಿಗೆ. ನಾವು ಒಂಥರಹದ ಬಿಸಿ ತುಪ್ಪ ಅವರಿಗೆ. ಅದಕ್ಕೆ ಕಾರಣವೂ ಇದೆ. ವೀಸಾಕ್ಕೆ ಅಂತ ಸಿಕ್ಕಾಪಟ್ಟೆ ಖರ್ಚು ಮಾಡಿರುತ್ತಾರೆ. ಅದರ ಅವಧಿಯೂ ಮೂರೋ ನಾಲ್ಕೋ ವರ್ಷ ಇರುತ್ತೆ. ಆ ಅವಧಿಯೊಳಗಡೆಯೇ ವೀಸಾ ಹೊತ್ತ ಗಂಡಸು ಅಥವಾ ಹೆಂಗಸಿಗೆ ಒಂದು ಕಡೆ ಕಳಿಸಿ ಕೈತೊಳೆದುಕೊಂಡರೆ ಮುಗೀತು. ಅವನು ಅಲ್ಲಿ ರುಬ್ಬಿಸಿಕೊಳ್ಳುತ್ತಾನೆ ಇಲ್ಲಿ ಕಂಪನಿಗೆ ಒಳ್ಳೆಯ ಆದಾಯ ಬರಲು ಶುರು ಆಗುತ್ತೆ. ಹರಕೆಯ ಕುರಿ ತರಹ ಈ ವೀಸಾಕಂಠ ತಾನು ವಿದೇಶಕ್ಕೆ ಹಾರಲಿದ್ದೇನೆ ಎಂಬ ಧಿಮಾಕಿನೊಂದಿಗೆ ಎಲ್ಲ ಕಡೆ ಪ್ರಚಾರ ಮಾಡಿಕೊಂಡಿರುತ್ತಾನೆ. ಅವನಿಗೆ ಮುಂದೆ ಅಲ್ಲಿ ಹೋಗಿ ರುಬ್ಬಿಸಿಕೊಳ್ಳೋದು ಗೊತ್ತಿರುವುದಿಲ್ಲ ಅಂತಲ್ಲ. ಗೊತ್ತಿದ್ದರೂ ಆತ ತೋರಿಕೊಳ್ಳಲಾರ. ಅದೂ ಅಲ್ಲದೆ ಎಲ್ಲರಿಗೂ ಅದು ಗೊತ್ತಿರುವುದಿಲ್ಲ. ಹಾಗಂತ ಎಲ್ಲ ಪ್ರಾಜೆಕ್ಟ್ ಗಳಲ್ಲೂ ಕಷ್ಟಗಳು ಇರೋದಿಲ್ಲ. ನಮ್ಮ ನಮ್ಮ ನಸೀಬಿಗೆ ತಕ್ಕಂತೆ ಪ್ರಾಜೆಕ್ಟ್ ಗಳು ಸಿಗುತ್ತವೆ. ಹೀಗಾಗಿ software ಉದ್ಯಮದ ಪ್ರಾಜೆಕ್ಟಗಳಿಗೂ, ಮದುವೆಗಳಿಗೂ ತುಂಬಾ ಸಾಮ್ಯತೆಯಿದೆ!

ಇಂತಹ ಒಂದು ಘಟ್ಟದಲ್ಲಿ ನಾನಿದ್ದೆ. ನನಗೆ ವಿದೇಶಕ್ಕೆ ಹೋಗಿ ನೆಲೆಸುವ ಹುಚ್ಚು ಇರಲಿಲ್ಲವಾದ್ದರಿಂದ ಬಂದ ಅವಕಾಶ ಗಬಕ್ಕಂತ ಹಿಡಿಯುವ ಆತುರವೂ ಇರಲಿಲ್ಲ. ಈಗಾಗಲೇ ಎರಡು ಸಲ ಒಂದೆರಡು ತಿಂಗಳಿಗೆ ಅಂತ ಹೋಗಿ ಬಂದಿದ್ದೆನಾದ್ದರಿಂದ ಅದರ ಬಗ್ಗೆ ಅಷ್ಟೊಂದು ಹಪಹಪಿ ಇರಲಿಲ್ಲ. ಎಲ್ಲರಿಗೂ ಹಾಗೆಯೇ ಅಂತ ಹೇಳೋಕಾಗಲ್ಲ. ನನ್ನ ಒಬ್ಬ ಸಹೋದ್ಯೋಗಿ ಇದ್ದ. ಅವನೂ ಕೂಡ ಮೊದಲು ಸಣ್ಣ ಅವಧಿಗೆ ಅಮೆರಿಕೆಗೆ ಹೋಗಿ ಬಂದಿದ್ದವನೆ ಆದರೂ ಅವನಿಗೆ ತಾನು ಅಮೆರಿಕೆಯಲ್ಲಿ ನೆಲೆಸಬೇಕು ಅನ್ನುವುದು ಒಂದು ದೊಡ್ಡ ಕನಸಾಗಿತ್ತು. ಅದಕ್ಕಿಂತಲೂ ಮಿಗಿಲಾಗಿ ಪ್ರತಿಷ್ಠೆಯ ಸಂಗತಿಯಾಗಿತ್ತು. ಅವನ ಅಣ್ಣ ಅಲ್ಲಿಯೇ ಇದ್ದನಂತೆ, ಇವನು ಹೋಗಿಲ್ಲ ಅಂದರೆ ಹೇಗೆ?! ಅವನಿಗೂ ನನ್ನ ಸಂಗಡವೇ ವೀಸಾ ಪ್ರೊಸೆಸಿಂಗ್ ಶುರು ಮಾಡಲು ಹೇಳಿದ್ದರಿಂದ ಅವನು ನನ್ನ ಪ್ರಗತಿಯ ಬಗ್ಗೆ ತುಂಬಾ ಅಸ್ಥೆಯಿಂದ ಕೇಳೋನು. ಅಷ್ಟೇ ಅಲ್ಲದೇ ಎಷ್ಟೋ ಸಲ ಕೆಲವು ದಾಖಲಾತಿಗಳನ್ನು ಆಫೀಸ್ ನವರಿಗೆ ಕೊಡಲು ಸಿಕ್ಕಾಪಟ್ಟೆ ಸಮಯ ತೆಗೆದುಕೊಳ್ಳುತ್ತಿದ್ದ ನನ್ನ ಮೈಗಳ್ಳತನ ಕಂಡು ಬೆಕ್ಕಸ ಬೆರಗಾಗಿ, ನನ್ನ ಬೆನ್ನಹಿಂದೆಯೇ ಬೀಳೋನು. ನಾನು ಹೋಗೋದರಿಂದ ಅವನಿಗೆ ಏನೂ ಲಾಭ ಇರಲಿಲ್ಲ, ಅದರೂ ಅವನಿಗೆ ನನ್ನ ಹಿಂದೆ ಬೀಳೋದು ಒಂದು ಕೆಲಸ. ಯಾಕಂದರೆ ಅವನಿಗೆ ಬೇರೆ ಅಷ್ಟೊಂದು ಕೆಲಸ ಇರಲಿಲ್ಲ. ಹೀಗಾಗಿ ನನ್ನ ಎಲ್ಲ ತಯಾರಿಗಳಾಗಿ ನಾನು ವಿಸಾಕಂಠನಾಗುವದರಲ್ಲಿ ಅವನ ಪತ್ರ ತುಂಬಾ ದೊಡ್ಡದು. ಅವನಿಗೆ ನಾನು ಖಂಡಿತ ಋಣಿ! ಆದರೆ ವಿಪರ್ಯಾಸ ನೋಡಿ. ಬೇಡಾ ಬೇಡಾ ಅನ್ನುತ್ತಲೇ ಚೆನ್ನೈ ವೀಸಾ ಸಂದರ್ಶನಕ್ಕೆ ಹೋಗಿದ್ದ ನನ್ನ ಪಾಸ್ಪೋರ್ಟ್ ಮೇಲೆ ಸೀಲು ಬಿದ್ದಿತ್ತು. ಅವನದು ಪಾಪ reject ಆಗಿತ್ತು! ಆದರೆ ಅವನು ಅಷ್ಟಕ್ಕೆ ಬಿಡಲಿಲ್ಲ ಬಿಡಿ. ಏನೋ ಗುದ್ದಾಡಿ ಆಮೇಲೆ ತಾನೂ ಸೀಲು ಹಾಕಿಸಿಕೊಂಡು ಬಂದ ಅದು ಬೇರೆ ವಿಷ್ಯ.

ವೀಸಾ ಸಿಗುವವರೆಗೆ ಒಂದು ತರಹ ವಿಳಂಬ ಮಾಡಿದ ನಾನು ಸಿಕ್ಕ ಮೇಲೆ ಮತ್ತೆ ಅದೇ ಹಳೆ ಚಾಳಿ ಮುಂದುವರಿಸಿದ್ದೆ! ನನಗೆ ಅಮೆರಿಕೆ ಅಂದರೆ ಒಂದು ಕಾಂಕ್ರೀಟ್ ಜಂಗಲ್ ಅನ್ನುವ ಭಾವನೆ ಇತ್ತು. ಗಡಿಬಿಡಿ ಮಾಡಿಕೊಂಡು ಅಲ್ಲಿನ ಯಾವುದೋ ಒಂದು ಪಟ್ಟಣಕ್ಕೆ ಹೋಗಿ ಸಿಕ್ಕಿಕೊಳ್ಳೋದು ಬೇಡವಾಗಿತ್ತು. ತುಂಬಾ ವ್ಯವಧಾನದಿಂದ ಪ್ರಾಜೆಕ್ಟ್ ಗಳನ್ನು ಆರಿಸಲು ತೊಡಗಿದ್ದೆ, ಈಗಿನ ಕಾಲದ ಹುಡುಗಿಯರು ವರ ಹುಡುಕಿದ ಹಾಗೆ! ನನಗೆ ಯಾವ ಪ್ರಾಜೆಕ್ಟ್ ಅನ್ನೋಕಿಂತಲೂ ಅದು ಅಮೆರಿಕೆಯ ಯಾವ ಊರಿನಲ್ಲಿದೆ ಅನ್ನುವುದು ಮುಖ್ಯವಾಗಿತ್ತು. ಕೃಷಿಯ ಹಾಗೂ ಹಳ್ಳಿ ಜೀವನದ ಬಗ್ಗೆ ಮೊದಲಿನಿಂದಲೂ ಒಲವು ಇತ್ತಾದ್ದರಿಂದ ಅದೇ ತರಹದ ಪರಿಸರ ಇರುವ ಊರನ್ನು ಹುಡುಕುತ್ತಿದ್ದೆ. ಹೀಗಾಗಿ ಫ್ಲೋರಿಡಾ, ಡಲ್ಲಾಸ್ ನಂತಹ ಶಹರಗಳಲ್ಲಿ ಸಿಗಬಹುದಾಗಿದ್ದ ಪ್ರಾಜೆಕ್ಟ್ ಗೆ ಸಂಬಂಧಿಸಿದ ಕರೆಗಳನ್ನು ಜಾಣತನದಿಂದ ನಿರ್ಲಕ್ಷಿಸಿ ಸೈಡಿಗೆ ಸರಿಸಿದ್ದೆ. ಹಾಗೆ ತುಂಬಾ ದಿನ ಮಾಡಲು ಕಂಪನಿ ಯವರು ಬಿಡುವುದಿಲ್ಲ. ಅವರೂ ಥೇಟು ಅಪ್ಪ ಅಮ್ಮಂದಿರ ಹಾಗೇನೆ… ಅಷ್ಟರಲ್ಲಿ ನನಗಿಂತ ತಡವಾಗಿ, ನಾನೇ ವೀಸಾ ಮಾಡಿಸಿ ಕೊಟ್ಟಿದ್ದ, ನನಗೆ ರಿಪೋರ್ಟ್ ಮಾಡಿಕೊಂಡಿದ್ದವನೂ ಅಮೆರಿಕೆಗೆ ಹಾರಿದ್ದ. ಆದರೆ ನನಗಂತೂ ದೇವರಾಣೆಗೂ ಅರ್ಜೆಂಟ್ ಇರಲಿಲ್ಲ. ಹೀಗೆ ಆರು ತಿಂಗಳು ಕಳೆದಿತ್ತು. ನಾನು ಆರಾಮವಾಗಿ ನಾಟಕ, ಸಿನೆಮಾ ನೋಡಿಕೊಂಡಿದ್ದೆ. ವೀಸಾ ಸಿಕ್ಕು ಹೊರಗೆ ಹೋಗುವವರಿಗೆ ಭಾರತದಲ್ಲಿ ಯಾವುದೇ ಪ್ರಾಜೆಕ್ಟ್ ಕೊಟ್ಟಿರುವುದಿಲ್ಲ. ಹೀಗಾಗಿ ನನಗೆ ಆಗ ತುಂಬಾ ಸಮಯ ಸಿಗುತ್ತಿತ್ತು.

ನನಗೆ ತುಂಬಾ ಚೆನ್ನಾಗಿ ನೆನಪಿದೆ, ಅವತ್ತು ರಾಕ್ ಲೈನ್ ಮಾಲ್ ಅಲ್ಲಿ ಸಿನೆಮಾ ನೋಡುತ್ತಿದ್ದೆ. ಅಮೇರಿಕೆಯಿಂದ ಒಂದು ಕರೆ ಬಂತು. ಥೀಯೇಟರ್ ಹೊರಗೆ ಹೋಗಿ ಕರೆ ಸ್ವೀಕರಿಸಿದೆ. ನಾನು ಊಹಿಸಿದಂತೆ ಅದು ಯಾವುದೋ US ಪ್ರಾಜೆಕ್ಟ್ ಸಂಬಂಧಿಸಿದ interview ಕರೆ ಆಗಿತ್ತು. ಮರೆಯದೆ ಅದು ಯಾವ ಊರಿನಲ್ಲಿ ಅಂತ ಕೇಳಿದೆ, ಆ ಕಡೆಯಿಂದ ಓಮಾಹ ಅಂತ ಅವಳು ಉತ್ತರಿಸಿದಳು. ಒಬಾಮ , ಒಸಾಮಾ ಕೇಳಿದ್ದೆ ಇದ್ಯಾವ ವಿಚಿತ್ರ ಹೆಸರಿನ ಊರು ಅಂತ ತಲೆ ಕೆರೆದುಕೊಂಡೆ. ಕೂಡಲೇ ಕಮಿಟ್ ಆಗದೆ ಆಮೇಲೆ ವಿಚಾರ ಮಾಡಿ ಹೇಳುವೆ ಅಂದೆ. ಮನೆಗೆ ಬಂದು ಒಮಾಹಾ ಬಗ್ಗೆ ನೋಡಿದಾಗ ತಿಳಿದಿದ್ದು ಅದು ನೆಬ್ರಾಸ್ಕಾ ರಾಜ್ಯದ ಒಂದು ಊರು ಅಂತ. ಅಲ್ಲಿನ ಕೆಲವು ಫೋಟೋಗಳನ್ನು ಇಂಟರ್ನೆಟ್ ನಲ್ಲಿ ನೋಡಿದಾಗ ಕಂಡ ಕೃಷಿ ಭೂಮಿಯ, ಚಟುವಟಿಕೆಯ ಚಿತ್ರಣ ನನಗೆ ರೋಮಾಂಚನಗೊಳಿಸಿದವು. ಇತ್ತ ದೊಡ್ಡ ಪಟ್ಟಣವೂ ಅಲ್ಲದ ಹಳ್ಳಿಯೂ ಅಲ್ಲದ ಓಮಾಹ ನನ್ನನ್ನು ಕೈ ಬೀಸಿ ಕರೆಯುತ್ತಿತ್ತು. ನಾನು ಇನ್ನು ತಡ ಮಾಡದೆ ಕೂಡಲೇ ಪ್ರಾಜೆಕ್ಟ್ ಗೆ ಒಪ್ಪಿಗೆ ಕೊಟ್ಟೆ. ನನ್ನ ಮದುವೆಯ ತಯಾರಿ ಶುರುವಾಗಿತ್ತು!

-ಗುರುಪ್ರಸಾದ ಕುರ್ತಕೋಟಿ

(ಮುಂದುವರಿಯುವುದು…)

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

3 Comments
Oldest
Newest Most Voted
Inline Feedbacks
View all comments
trackback

[…] ಭಾಗ: https://panjumagazine.com/?p=16787) ನಾವು ಅಮೆರಿಕೆಯ, ನೆಬ್ರಾಸ್ಕಾ ರಾಜ್ಯದ […]

Gerald Carlo
Gerald Carlo
4 years ago

ಕುರಿಯ ಹಾಲಿನ ಐಸ್ ಕ್ರೀಮು ತಿನ್ನಬೇಕು ಅನಿಸುವಷ್ಟು ಕುತೂಹಲಕಾರಿಯಾಗಿದೆ.

Guruprasad Kurtkoti
4 years ago

ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು ಕಾರ್ಲೊ ಸರ್!

3
0
Would love your thoughts, please comment.x
()
x