ಹವಾಮಾನ ಬದಲಾವಣೆಯ ಪರಿಣಾಮವೋ ಏನೋ ಮಲೆನಾಡಿನಲ್ಲಿ ಇನ್ನೂ ಮಳೆ ಬಿಟ್ಟಿಲ್ಲ. ಮೇಲಿಂದ ಮೇಲೆ ಚಂಡಮಾರುತಗಳು ರುಧ್ರನರ್ತನಗೈಯುತ್ತಿವೆ. ಪ್ರಕೃತಿವಿಕೋಪಕ್ಕೆ ಸಿಕ್ಕ ಮಾನವನ ಬದುಕು ಮೂರಾಬಟ್ಟೆಯಾಗಿದೆ. ಸ್ವಯಂಕೃತಾಪರಾಧವೆನ್ನಬಹುದೆ? ಮಳೆಗಾಲ ಕ್ಷೀಣವಾಗಿ ನಿಧಾನವಾಗಿ ಚಳಿ ಹೆಜ್ಜೆಯ ಮೇಲೆ ಹೆಜ್ಜೆಯಿಡುತಾ ಬರುವಾಗಿನ ಸಂಭ್ರಮ ಮತ್ತು ಅದರ ಮಜ ಬೇರೆ. ತೆಳ್ಳಗಿನ ಇಬ್ಬನಿ ಎಲೆಗಳ ಮೇಲೆ ಹುಲ್ಲಿನ ಮೇಲೆ, ಜೇಡದ ಬಲೆಯಲ್ಲಿ ಮುತ್ತು ಪೋಣಿಸಿದಂತೆ ಅತ್ಯಾಕರ್ಷಕವಾಗಿ ತೋರುತ್ತದೆ. ಚಳಿಗಾಲದ ಮುಂಜಾವಿನ ಸೊಗಸನ್ನು ಅನುಭವಿಸಿದವನೇ ಧನ್ಯ. ಸೂರ್ಯವಂಶಿಗಳಿಗೆ ಈ ಭಾಗ್ಯವಿಲ್ಲ. ಇವರೆದ್ದು ವಾತಾವರಣದ ಸಂಪರ್ಕಕ್ಕೆ ಬರುವ ಹೊತ್ತಿಗೆ ಇಬ್ಬನಿಯೆಲ್ಲಾ ಬೆಳಗಿನ ಎಳೆ ಬಿಸಿಲಿಗೆ ಅರ್ಧ ಆರಿಹೋಗಿರುತ್ತವೆ. ಅದೇನೇ ಇರಲಿ, ತಲಾತಲಾಂತರದಿಂದ ನಮ್ಮಲ್ಲಿಗೆ ವಲಸೆ ಬರುವ ಬೂದು ಬಣ್ಣದ ಕುಂಡೆಕುಸ್ಕ ಮಲೆನಾಡಿಗೆ ಬಂದಿದೆ. ಬೆಳಗಿನ ಹೊತ್ತು ಮನೆಯಂಗಳದಲ್ಲಿ ಅದೇನೋ ಹುಡುಕುತ್ತಾ ನಿರಂತರವಾಗಿ ಬಾಲವನ್ನು ಕುಣಿಸುತ್ತಾ, ಹುಳು-ಹಪ್ಪಟೆಗಳನ್ನು ತಿನ್ನುತ್ತಾ, ಹತ್ತಿರ ಹೋದರೆ ಚೀಕ್ ಎಂದು ಕೂಗಿ ಹಾರಿಹೋಗಿ ಮಾಡಿನ ಮೇಲೆ ಕೂರುತ್ತದೆ. ಗಮನಿಸುವ ಕಣ್ಣುಗಳಿದ್ದಲ್ಲಿ ರಸ್ತೆ ಬದಿಯಲ್ಲೂ ಕಾಣ ಸಿಗುತ್ತವೆ. ಗುಬ್ಬಿಯಷ್ಟೆ ಗಾತ್ರದ ಈ ಹಕ್ಕಿ ಪೂರ್ವ ಯೂರೋಪಿನಿಂದ ಚಳಿಗಾಲದಲ್ಲಿ ನಮ್ಮಲ್ಲಿಗೆ ಬರುತ್ತದೆ. ಮೊನ್ನೆ ಈ ಹಕ್ಕಿಯನ್ನು ನೋಡಿದವ ಮತ್ತೊಬ್ಬರಿಗೆ ಅವರೂ ಹಳ್ಳಿಯವರೆ ಹೇಳಿದರೆ ನಂಬಲು ತಯಾರಿಲ್ಲ. ಇಲ್ಲಪ್ಪ ಇದು ಯಾವಾಗಲೂ ಇಲ್ಲೇ ಇರುತ್ತದೆ ಎಂದರು. ಮತ್ತೆ ಕೆದಕಿದೆ ನೋಡಪ್ಪಾ ಶಾಣ್ಯ ಈಗೊಂದು ತಿಂಗಳ ಹಿಂದೆ ಈ ಹಕ್ಕಿಯನ್ನು ನೋಡಿದ್ದೆಯಾ? ಕಣ್ಣು-ಕಣ್ಣು ಬಿಟ್ಟ. ಇಲ್ಲಾ ಮಾರಾಯ ಗಮನಿಸಿಲ್ಲ. ನಮ್ಮ ತಾಪತ್ರಯವೇ ನಮಗೆ, ಮಳೆಯಿಂದ ಅಡಿಕೆಗೆ ಕೊಳೆ ಬಂದು ಔಷಧ ಹೊಡಿಲಿಕ್ಕೆ ಜನ ಇಲ್ಲ ಎಂದು ಎನೇನೋ ವರಾತ ತೆಗೆದ.
ವಲಸೆ ಹಕ್ಕಿಗಳು ಬಗ್ಗೆ ತಿಳಿದು ಕೊಳ್ಳುತ್ತಾ ಹೋದರೆ ನಮ್ಮೆದುರಿಗೆ ಒಂದು ರೋಚಕ ಪ್ರಪಂಚವೇ ತೆರೆದುಕೊಳ್ಳುತ್ತದೆ. ಪುಟ್ಟ ಹಕ್ಕಿಗಳ ಅಸೀಮ ಶಕ್ತಿಯ ಬಗ್ಗೆ ಹೆಮ್ಮೆಯುಂಟಾಗುತ್ತದೆ. ಜಗತ್ತಿನಲ್ಲಿ ವಲಸೆ ಹಕ್ಕಿಗಳಿಗೆ ಎಂದು ಮೀಸಲಾಗಿಟ್ಟ ಪ್ರತ್ಯೇಕ ಪ್ರದೇಶಗಳಿವೆ. ಗುಡವಿ-ರಂಗನತಿಟ್ಟುಗಳೀಗೂ ಬೇರೆ ದೇಶಗಳಿಂದ ಪಕ್ಷಿಗಳು ಕಾಲ-ಕಾಲಕ್ಕೆ ವಲಸೆ ಬರುತ್ತವೆ. ದೂರದ ಪೂರ್ವಯೂರೋಪಿನಲ್ಲ್ಲಿ ೮ ತಿಂಗಳು ಕಳೆಯುವ ಕುಂಡೆಕುಸ್ಕ ಹಕ್ಕಿಗಳು ಅಲ್ಲಿ ವಿಪರೀತ ಚಳಿಯೆಂದು ಸಮಶೀತೋಷ್ಣ ಹವಾಮಾನಕ್ಕೆ ಹಾರಿಬರುತ್ತವೆ. ಗಾಳಿಯಲ್ಲೇ ತೇಲಿ ಬಂದರೂ ಎಲ್ಲಿ ಸೈಬೀರಿಯಾ ಎಲ್ಲಿಯ ಮಲೆನಾಡು. ದೂರವೆಷ್ಟು? ನಾಗರೀಕತೆ, ಆಧುನಿಕತೆ ಇತ್ಯಾದಿ ದೊಡ್ಡ ಶಬ್ಧಗಳು ಆಚರಣೆಯಲ್ಲಿ ಇಲ್ಲದಿದ್ದ ಕಾಲದಲ್ಲಿ ನಮ್ಮ ಮನೆಗೆ ಯಾರಾದರೂ ಅತಿಥಿ ಬಂದಾಗ ನಮಗಾಗುವ ಸಂತೋಷವನ್ನು ವರ್ಣಿಸಲು ಶಬ್ಧಗಳಿರುತ್ತಿರಲಿಲ್ಲ. ಇಂದಿನ ಟಿ.ವಿ.ಗಳು ಎಲ್ಲರ ಆತ್ಮೀಯ ಸಂಬಂಧಗಳನ್ನು ತಿಂದು ಹಾಕಿವೆ.
ಕುಂಡೆಕುಸ್ಕ ಹಕ್ಕಿ ನಮ್ಮಲ್ಲಿ ನೋಡಿದವನಿಗೆ ಅದೇ ಹಿಂದಿನ ಸಂತೋಷ ಮರುಕಳಿಸಿತು. ಬಸ್ಕಿ ಹೊಡೆದಂತೆ ನಿರಂತರ ಹಿಂದಿನ ಪುಕ್ಕವನ್ನು ಕುಣಿಸುತ್ತಲೇ ಇರುವ ಆ ಹಕ್ಕಿಯ ಶಕ್ತಿಯ ಬಗ್ಗೆ ಅಭಿಮಾನ ಹುಟ್ಟಿತು. ಈ ಬಗ್ಗೆ ಇಲ್ಲಿ ಗುರುಗಳಾದ ದಿ.ಪೂರ್ಣಚಂದ್ರ ತೇಜಸ್ವಿಯವರು ಮಲೆನಾಡಿನ ಪಕ್ಷಿಗಳ ಬಗ್ಗೆ ಮಾಹಿತಿ ನೀಡಿ ಬರೆದ ಹಕ್ಕಿ-ಪುಕ್ಕ ಪುಸ್ತಕದ (ಪುಸ್ತಕದ ಪುಟ ಸಂಖ್ಯೆ ೧೧೪) ಯಥಾವತ್ ವಿವರಣೆ ನೀಡುವುದು ಸೂಕ್ತವಾದೀತು. ತೆಳ್ಳಗಿರುವ, ಉದ್ದ ಬಾಲದ, ಗುಬ್ಬಚ್ಚಿ ಗಾತ್ರದ, ಹಳದಿ ಬಣ್ಣ ಪ್ರಧಾನವಾಗಿರುವ ಹಕ್ಕಿ, ಹೊಟ್ಟೆ ಎದೆ ಹಳದಿ ಬಣ್ಣ, ಬೆನ್ನು ರೆಕ್ಕೆಗಳು ಕಡು ಹಸುರು ಬಣ್ಣ, ಹುಲ್ಲುಗಾವಲು, ಗೋಮಾಳ, ಝರಿ, ಹೊಳೆಗಳ ದಂಡೆಯಲ್ಲಿ ಕಾಣಬಹುದು. ಚಳಿಗಾಲದಲ್ಲಿ ಭಾರತಕ್ಕೆ ವಲಸೆ ಬರುವ ಹಕ್ಕಿ, ಭಾರತ, ಬಂಗ್ಲಾದೇಶ, ಸಿಲೋನ್, ಬರ್ಮಾ, ಪಾಕೀಸ್ತಾನಗಳಲ್ಲಿ ಇವೆ. ಇವುಗಳ ಸೂಕ್ಷ್ಮ ವರ್ಣ ವ್ಯತ್ಯಾಸವನ್ನಾಧರಿಸಿ ಮೂರು ಉಪಜಾತಿಗಳನ್ನಾಗಿ ವಿಂಗಡಿಸಿದ್ದಾರೆ. ಗಂಡು ಹೆಣ್ಣುಗಳಲ್ಲಿ ವ್ಯತ್ಯಾಸವಿಲ್ಲ. ಜೌಗು ಜಾಗಗಳಲ್ಲೂ ಬಯಲಿನಲ್ಲೂ ಹುಳು-ಹಪ್ಪಟೆಗಳನ್ನು ಹುಡುಕುತ್ತಾ ಗುಡುಗುಡು ಓಡಾಡುತ್ತದೆ. ಇದು ಯಾವಾಗಲೂ ಬಾಲ ಮೇಲೆ ಕೆಳಗೆ ಅಲ್ಲಾಡಿಸುವುದರಿಂದ ಇದನ್ನು ಕುಂಡೆಕುಸ್ಕ ಎಂದು ಕರೆಯುವುದು. ನಿಂತಲ್ಲಿಂದ ಚಕ್ಕನೆ ಹಾರಿ, ಹಾರುವ ಹುಳುಗಳನ್ನು ಹಿಡಿಯುತ್ತದೆ. ಹಾರುವಾಗ ಚೀ ಚಿಕ್ ಚಿಕ್ ಚಿಕ್ ಎಂದು ಕೂಗುತ್ತಾ ಹಾರುತ್ತದೆ. ಹಾರುವಾಗ ನಿರಂತರವಾಗಿ ರೆಕ್ಕೆ ಬಡಿಯುವುದಿಲ್ಲ. ಆಗಾಗ ರೆಕ್ಕೆ ಬಡಿಯುತ್ತಾ ಏರಿಳಿತದಲ್ಲಿ ಹಾರುತ್ತದೆ. ಇವು ವಲಸೆ ಬರುವಾಗ ಲಕ್ಷಗಟ್ಟಲೆ ಹಕ್ಕಿಗಳು ಒಟ್ಟಾಗಿ ಮೋಡದಂತೆ ಹಾರಿಬರುತ್ತದೆ. ಗೂಡು ಕಟ್ಟಿ ಮರಿಮಾಡುವುದು ಪೂರ್ವ ಯೂರೋಪಿನಲ್ಲಿ.
ಲಭ್ಯವಿರುವ ಭೂಪ್ರದೇಶದಲ್ಲಿ ಅಲ್ಲಿಂದೆಲ್ಲಿಗೋ ಇಲ್ಲಿಂದೆಲ್ಲಿಗೋ ಹಾರಿ ತಮ್ಮ ಬದುಕನ್ನು ಕಂಡುಕೊಳ್ಳುವ, ಸಂತತಿಯನ್ನು ಮುಂದುವರೆಸಲು ಪಕ್ಷಿಗಳು ಹಲವಾರು ತಂತ್ರಗಳನ್ನು ಬಳಸುತ್ತವೆ. ಈ ಪಕ್ಷಿಗಳಿಗೆ ಮಾನವ ನಿರ್ಮಿತ ಗಡಿಗಳ ನಿರ್ಭಂಧನೆಯಿಲ್ಲ ಎಂಬುದು ಗಮನಿಸಬೇಕಾದ ಅಂಶ. ನಮ್ಮದಾದರೆ ತಾಲ್ಲೂಕು, ಜಿಲ್ಲೆ, ರಾಜ್ಯ, ದೇಶ, ವಿದೇಶ ಅಲ್ಲದೆ ನೀರಿನಲ್ಲೂ ಆ ಗಡಿ, ಈ ಗಡಿ ಎಂಬುದನ್ನು ವಿಂಗಡಿಸಲಾಗಿದೆ. ಇಡೀ ಭೂಮಂಡಲದ ಸೇವೆಗೆ ನಿಂತ ಕೋಟ್ಯಾಂತರ ಜೀವಜಂತುಗಳ ಪೈಕಿ ಹಕ್ಕಿಗಳದು ಸಿಂಹ ಪಾಲು. ಅವಕ್ಕೆ ಯಾವುದೇ ಗಡಿಯಿಲ್ಲ. ಪಾಕೀಸ್ತಾನದ ಹಕ್ಕಿ ಯಾವುದೇ ನಿರ್ಭಂಧವಿಲ್ಲದೇ ಇಂಡಿಯಾದ ಗಡಿಯೊಳಕ್ಕೆ ಬಂದು ಮೊಟ್ಟಯಿಟ್ಟು ಮರಿ ಮಾಡಿ ಹಾರಿಸಿಕೊಂಡು ಹೋಗಬಹುದು.
ಇಲ್ಲೊಂದಿಷ್ಟು ರಾಜಕೀಯ ಬೆರಸದಿದ್ದಲ್ಲಿ ಹಕ್ಕಿಗಳಿಗೆ ಅಪಚಾರವಾದೀತು???. ಮನುಷ್ಯರಲ್ಲದ ಯಾವುದೇ ಪ್ರಾಣಿಗಳೂ ಇವತ್ತು ಭೂಮಿಯ ಮೇಲೆ ಬದುಕುವ ಹಕ್ಕನ್ನು ಪಡೆದಿಲ್ಲ!! ಸಮಗ್ರ ಭೂಮಿ ಮನುಷ್ಯನಿಗೆ ಮಾತ್ರ ಸೀಮಿತ ಎಂದು ತಿಳಿದುಕೊಂಡವರು ನಾವು. ಅಂತೆಯೇ ನಡೆದುಕೊಳ್ಳುವವರು. ನಮ್ಮ ಮನೆ ಹಿತ್ತಲಿಗೆ ಬಂದು ಒಂದಷ್ಟು ಅನಿಷ್ಟ ಕೀಟಗಳನ್ನು ತಿಂದುಪಕಾರ ಮಾಡುವ ಕುಂಡೆಕುಸ್ಕಕ್ಕೆ ನಾವು ಬೆಲೆ ಕೂಡುವುದು ನ್ಯಾಯವೇ?. ಇಲ್ಲಾ ಎಂಬುದೇ ನಮ್ಮ ಉತ್ತರ. ನಮ್ಮಲ್ಲಿರುವ ರಾಜಕೀಯ ಪಕ್ಷಗಳು ಏನನ್ನು ಮಾಡುತ್ತವೆ? ಓಟು ಹಾಕುವವರನ್ನು ಒಡೆದು ಆಳುತ್ತವೆ. ಯಾವುದೇ ರಾಜ್ಯದ ಅಥವಾ ದೇಶದ ಮುಖ್ಯಮಂತ್ರಿ ನಮಗೆ ಪಿಡುಗಾಗಿರುವ ಕೀಟಗಳನ್ನು ತಿಂದು ನಮ್ಮನ್ನು ಬದುಕಿಸುವುದಿಲ್ಲ ಅಥವಾ ಇದರ ಬಗ್ಗೆ ಯೋಚಿಸುವುದೇ ಇಲ್ಲಾ.
ಪ್ರಪಂಚದಲ್ಲಿ ವಾತಾವರಣದ ಕಾರಣಕ್ಕೆ ಹಲವು ಪ್ರಭೇಧಗಳು ಒಂದು ಸ್ಥಳದಿಂದ ಒಂದು ಸ್ಥಳಕ್ಕೆ ವಲಸೆ ಹೋಗುತ್ತವೆ. ಇದು ಮಾನವ ಕಂಡುಕೊಂಡ ಸತ್ಯ. ಯಾವ ಹಕ್ಕಿ, ಯಾವ ಸರಿಸೃಪ, ಯಾವ, ಪ್ರಾಣಿ ಎಲ್ಲಿಗೆ ಹೋಗುತ್ತದೆ ಎಂಬುದನ್ನು ಇವತ್ತೂ ಅರಿಯ. ೫೦ ಶತಕೋಟಿ ಹಕ್ಕಿಗಳು ಪ್ರಪಂಚಾದ್ಯಂತ ವಲಸೆ ಪ್ರಕ್ರಿಯೆಯಲ್ಲಿ ತೊಡಗಿವೆ ಎಂಬುದೇ ಪ್ರಪಂಚದೆ ಅದ್ಬುತಗಳಲ್ಲೊಂದು (ಶಹಜಾನನ ತಾಜಮಹಲ್ ಅಲ್ಲ ಅಥವಾ ನಾವು ತಿಳಿದುಕೊಂಡ ಮತ್ಯಾವುದೇ ಅದ್ಬುತಗಳಲ್ಲ).
ನಮ್ಮನ್ನು ನಾವು ದೂರಿಕೊಳ್ಳಲೇ ಬೇಕು. ಅನಿವಾರ್ಯ. ನಾವು ಮಾಡಿದ ತಪ್ಪುಗಳಿಗೆ ಬೆಲೆ ತೆರಬೇಕಾದವು ಇನ್ನಿತರೆ ಪ್ರಭೇಧಗಳು. ಅವು ಸಸ್ತನಿಗಳಿರಬಹುದು, ಕಶೇರಕಗಳಿರಬಹುದು, ಅಕಶೇರುಕಗಳಿರಬಹುದು, ಪಕ್ಷಿಗಳಿರಬಹುದು, ಜೇನಿನಂತಹ ಕೀಟಗಳಿರಬಹುದು. ನಾವೇನು ಚಿರಂಜೀವಿಗಳಲ್ಲ. ಮೇಲೆ ಮಂಗಳನ ಹತ್ತಿರ ಹೋದರೂ ಅಷ್ಟೆ. ಕೆಳಗೆ ಶನಿಯ ಹತ್ತಿರ ಹೋದರೂ ಅಷ್ಟೆ. ಜೀವ ಇರುವುದು ಭೂಮಿಯಲ್ಲಿ ಮಾತ್ರ!! ಜೀವ ಜಲವಿರುವುದು ಇಲ್ಲಿ ಮಾತ್ರ. ನಾವು ಬದುಕುವುದಿದ್ದರೆ ಸಹಭಾಳ್ವೆಯಿಂದ ಮಾತ್ರ ಸಾಧ್ಯ. ಸಹಭಾಳ್ವೆಗಾಗಿ ಈ ಹೊತ್ತು ಎಲ್ಲವನ್ನು ಉಳಿಸುವ ಜವಾಬ್ದಾರಿ ನಮ್ಮ ಅಂದರೆ ಭೂಮಿಯನ್ನು ನುಂಗುವ ರಾಕ್ಷಸರ ಮೇಲಿದೆ.
ಪಕ್ಷಿಗಳು ವಲಸೆ ಹೋಗುತ್ತವೆ ಎಂದು ಮೊಟ್ಟ ಮೊದಲಿಗೆ ಗಮನಿಸಿದವನು ಅರಿಸ್ಟಾಟಲ್. ತದನಂತರದಲ್ಲಿ ಹಲವಾರು ಪಕ್ಷಿತಜ್ಞರು ಪಕ್ಷಿಗಳ ವಲಸೆ ಬಗ್ಗೆ ಅನೇಕ ರೀತಿಯ ಸಂಶೋಧನೆಗಳನ್ನು ನಡೆಸಿದರು. ಈಗಲೂ ನಡೆಸುತ್ತಿದ್ದಾರೆ. ಹೆಚ್ಚು ಚಳಿ ಇರುವ ಪ್ರದೇಶದಲ್ಲಿ ಚಳಿಗಾಲದಲ್ಲಿ ಆಹಾರದ ಕೊರತೆಯಾಗುತ್ತದೆ. ಈ ಕೊರತೆಯನ್ನು ನೀಗಿಸಲು ಕಂಡುಕೊಂಡ ಉಪಾಯವೇ ವಲಸೆ. ಆಹಾರಕ್ಕಾಗಿ ಮತ್ತು ಕೆಲವು ಬಾರಿ ವಂಶಾಭಿವೃದ್ಧಿಗಾಗಿ ಪಕ್ಷಿಗಳು ವಲಸೆ ಪ್ರಕ್ರಿಯೆಯಲ್ಲಿ ತೊಡಗುತ್ತವೆ. ಉತ್ತರ ಅಮೇರಿಕಾದ ೪.೮ ಗ್ರಾಂ ತೂಗುವ ಹಮ್ಮಿಂಗ್ ಪಕ್ಷಿ ಒಂದೇ ದಿನದಲ್ಲಿ ೭೦೦ ಕಿ.ಮಿ. ಪ್ರಯಾಣ ಮಾಡಿ ಪಕ್ಕದ ಮೆಕ್ಸಿಕೊವನ್ನು ತಲುಪುತ್ತದೆ.
ಸಾಮಾನ್ಯವಾಗಿ ವಲಸೆ ಹೊರಡುವ ಮೊದಲು ಪಕ್ಷಿಗಳು ಹೆಚ್ಚು-ಹೆಚ್ಚು ಆಹಾರವನ್ನು ತಿಂದು ಕೊಬ್ಬುತ್ತವೆ. ಇದೇ ಕೊಬ್ಬನ್ನು ವಲಸೆ ಸಮಯದಲ್ಲಿ ಆಹಾರವಾಗಿ ಪರಿವರ್ತಿಸಿಕೊಳ್ಳುತ್ತವೆ. ಅತಿಯಾದ ಚಳಿ, ಆಹಾರದ ಅಭಾವ, ಸಂತಾನೋತ್ಪತ್ತಿ ಹೀಗೆ ಹಲವು ಕಾರಣಗಳಿಂದಾಗಿ ಪಕ್ಷಿಗಳು ವಲಸೆ ಹೋಗುತ್ತವೆ. ಗುಡವಿ ಪಕ್ಷಿಧಾಮಕ್ಕೆ ಬೆಳ್ಳಕ್ಕಿಗಳು ಮಧ್ಯ ಏಷ್ಯಾದಿಂದ ವಲಸೆ ಬರುತ್ತವೆ. ಪ್ರತಿವರ್ಷ ಸೆಪ್ಟೆಂಬರ್ ಮಧ್ಯದಲ್ಲಿ ಅಲಾಸ್ಕದಿಂದ ನ್ಯೂಜಿಲೆಂಡ್‌ಗೆ ಲಕ್ಷಾಂತರ ಸಂಖ್ಯೆಗಳಲ್ಲಿ ವಲಸೆ ಬರುವ ಬಾರ್-ಟೈಲ್ಡ್ ಗಾಡ್‌ವಿಟ್ ಎಂಬ ಪಕ್ಷಿಯ ಅಸೀಮ ಶಕ್ತಿಯನ್ನು ನೋಡಿದರೆ ನಂಬಲು ಕಷ್ಟಸಾಧ್ಯ! ಇದು ಒಟ್ಟು ಕ್ರಮಿಸುವ ದೂರ ೧೧೦೦೦ ಕಿಲೋ ಮೀಟರ್‌ಗಳು. ಈ ವಲಸೆ ಹೊರಡುವ ಮೊದಲು ಹೆಚ್ಚು-ಹೆಚ್ಚು ಆಹಾರ ಸೇವಿಸಿ ತನ್ನ ದೇಹದ ತೂಕದ ೫೫ ಭಾಗದಷ್ಟು ಕೊಬ್ಬನ್ನು ಶೇಖರಿಸುತ್ತವೆ, ಜಠರ, ಮೂತ್ರಪಿಂಡಗಳನ್ನು ೨೫ ಭಾಗದಷ್ಟು ಸಂಕುಚಿತಗೊಳಿಸುತ್ತವೆ. ಈಗ ಹೊರಡಲು ತಯಾರು, ಸತತವಾಗಿ ಎಂಟು ದಿನಗಳವರೆಗೆ ಹಾರುತ್ತಾ ಎಲ್ಲೂ ನಿಲ್ಲದೆ ನ್ಯೂಜಿಲೆಂಡ್‌ಗೆ ಬಂದು ಸೇರುತ್ತವೆ. ಈಗ ಈ ಪಕ್ಷಿಯ ತಾಕತ್ತು ಎಂಥಾದ್ದು ನೋಡಿ. ನಾವು ತಯಾರಿಸಿದ ವಿಮಾನಗಳೂ ಡಬ್ಬಲ್ ಎಂಜಿನ್ ಇಲ್ಲದಿದ್ದರೆ ಇಷ್ಟು ದೂರ ನಾನ್-ಸ್ಟಾಪ್ ಕ್ರಮಿಸಲು ಸಾಧ್ಯವಿಲ್ಲ. ಮಾರ್ಚ್ ತಿಂಗಳ ಕೊನೆಯಲ್ಲಿ ಅಲಾಸ್ಕಗೆ ಮರಳುತ್ತವೆ. ನಾನ್-ಸ್ಟಾಪ್!!! ಇನ್ನೊಂದು ವಲಸೆ ಪಕ್ಷಿಯ ಹೆಸರು ಆರ್ಕ್‌ಟಿಕ್ ಟರ್ನ್. ಇದು ಮೊಟ್ಟೆಯಿಡುವುದು ಯುರೋಪ್, ಏಷ್ಯಾ, ಉತ್ತರ ಅಮೇರಿಕದಲ್ಲಿ. ಈ ಪಕ್ಷಿಗಳು ಅರ್‍ಕ್‌ಟಿಕ್ ಕೇಂದ್ರ ಪ್ರದೇಶದಿಂದ ಅಟ್ಲಾಂಟಿಕ್ ಸಾಗರವನ್ನು ಬಳಸಿ ಉತ್ತರಾಭಿಮುಖವಾಗಿ ಚಲಿಸಿ ಉತ್ತರ ಮತ್ತು ದಕ್ಷಿಣ ಅಮೇರಿಕದಲ್ಲಿ ಇಳಿಯುತ್ತವೆ. ಅಂದರೆ ೯೦ ದಿನಗಳಲ್ಲಿ ೩೮೦೦೦ ಕಿ.ಮಿ.ಚಲಿಸಿ ಗಮ್ಯ ತಲುಪುತ್ತವೆ. ಇವು ತಮ್ಮ ಜೀವಿತಾವಧಿಯಲ್ಲಿ ಸುಮಾರು ೮೦ ಲಕ್ಷ ಕಿಲೋಮೀಟರ್ ಪ್ರಯಾಣ ಮಾಡುತ್ತವೆ.
ಪಕ್ಷಿಗಳು ವಲಸೆ ಬರುವಾಗ ಅಥವಾ ಹೋಗುವಾಗ ಅವುಗಳಿಗೆ ದಿಕ್ಕು ತೋರುವವರ್‍ಯಾರು ಎಂಬುದು ವಿಜ್ಞಾನಿಗಳು ಪಕ್ಷಿ ತಜ್ಞರ ಬುದ್ಧಿಗೆ ಸವಾಲಾದ ಪ್ರಶ್ನೆ. ಇದಕ್ಕಾಗಿ ಹಲವಾರು ಉತ್ತರಗಳನ್ನು ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ವಿವಿಧ ಪಕ್ಷಿಗಳು ವಿವಿಧ ತಂತ್ರವನ್ನು ಬಳಸುತ್ತವೆ. ಕೆಲವು ಪಕ್ಷಿಗಳು ಸೂರ್ಯ, ಚಂದ್ರ, ನಕ್ಷತ್ರಗಳನ್ನು ಮಾನದಂಡವಾಗಿಟ್ಟುಕೊಂಡು ಚಲಿಸಿದರೆ, ಹಲವು ಪಕ್ಷಿಗಳು ಸಮುದ್ರದ ಬೋರ್ಗರತೆದ ಶಬ್ಧವನ್ನು ನಕಾಶೆಯಾಗಿ ಬಳಸುತ್ತವೆ. ಇನ್ನು ಕೆಲವು ಪಕ್ಷಿಗಳು ಭೂಮಿಯ ಅಯಸ್ಕಾಂತೀಯ ಶಕ್ತಿಯನ್ನು ಗೊತ್ತುಮಾಡಿಕೊಂಡು ಚಲಿಸುತ್ತವೆ. ಇದಕ್ಕಾಗಿ ಒಂದು ಪ್ರಯೋಗವನ್ನು ಮಾಡಲಾಯಿತು. ವಲಸೆ ಹೋಗುವ ಪಾರಿವಾಳಗಳನ್ನು ಹಿಡಿದು ಅವುಗಳಲ್ಲಿ ಕೆಲವು ಪಾರಿವಾಳಗಳ ಬೆನ್ನಿನ ಮೇಲೆ ಒಂದು ಚೂರು ಕಬ್ಬಿಣವನ್ನು ಇನ್ನು ಕೆಲವಕ್ಕೆ ತಾಮ್ರವನ್ನು ಅಂಟಿಸಿದರು. ಕಬ್ಬಿಣ ಅಂಟಿಸಿದ ಪಕ್ಷಿಗಳು ದಿಕ್ಕು ಗೊತ್ತು ಮಾಡಿಕೊಳ್ಳುವಲ್ಲಿ ವಿಫಲವಾದವು. ತಾಮ್ರದ ಚೂರು ಅಂಟಿಸಿದ ಪಾರಿವಾಳಗಳು ಯಾವುದೇ ಅಡೆತಡೆಯಿಲ್ಲದೆ ಗಮ್ಯ ತಲುಪಿದವು.
ಮನುಷ್ಯನ ಅಭಿವೃದ್ಧಿಯ ಹಪಾಹಪಿ, ಅತಿಯಾದ ತೈಲ-ವಿದ್ಯುತ್ ಮೇಲಿನ ಅವಲಂಬನೆಯಿಂದಾಗಿ ಹವಾಮಾನದಲ್ಲಿ ಏರುಪೇರಾಗುತ್ತದೆ. ಅಕಾಲಿಕ ಚಂಡಮಾರುತಗಳು ವಲಸೆ ಹಕ್ಕಿಗಳಿಗೆ ಮಾರಣಾಂತಿಕವಾಗಿ ಪರಿಣಮಿಸಬಲ್ಲವು.
*****
ಛಂದಾದ ಲೇಖನ… ಪಕ್ಷಿ ಪ್ರಪಂಚದ ರೋಚಕ ವಿಷಯಗಳನ್ನೊದಿ ಖುಷಿಯಾಯ್ತು……
ಸಖತ್ತಾದ ಲೇಖನ.. ಕುಂಡೆಕುಸ್ಕ ವಲಸೆಹಕ್ಕಿ ಅಂತ ಗೊತ್ತಿರಲಿಲ್ಲ !
ವಲಸೆಹಕ್ಕಿಗಳ ಬಗ್ಗೆ ಸಂಗ್ರಹಯೋಗ್ಯ ಲೇಖನ ..
ಕಪ್ಪು ಬಣ್ಣದ ಕುಂಡೆಕುಸ್ಕ ವಲಸೆ ಹಕ್ಕಿಯಲ್ಲ. ಹಳದಿ ಬಣ್ಣದ ಕುಂಡೆಕುಸ್ಕ ವಲಸೆ ಬರುವ ಹಕ್ಕಿ
ಪ್ರತಿಕ್ರಯಿಸಿದ ಎಲ್ಲರಿಗೂ ಧನ್ಯವಾದಗಳು.