ಕಥಾಲೋಕ

ಕಾಲೇಜು ದಿನಗಳ ವಾಕಿಂಗ್: ಅಕ್ಷಯ ಕಾಂತಬೈಲು


ನನ್ನ ಇಂಜಿನಿಯರಿಂಗ್ ಕಲಿಕೆಯ ದಿನಗಳವು; ಅಸೈನ್ಮೆಂಟ್ ಬರೆಯದ್ದರಿಂದ, ಕ್ಲಾಸಿಗೆ ತಡವಾಗಿ ಹಾಜರಾಗುತ್ತಿದ್ದ ಕಾರಣ, ಲ್ಯಾಬ್ ರೆಕಾರ್ಡ್ ಸಮಯಕ್ಕೆ ಸರಿಯಾಗಿ ಕೊಡದ್ದರಿಂದ ಲೆಕ್ಚರರ ಕೈಯಲ್ಲಿ ನಾನು ಸಿಕ್ಕಾಪಟ್ಟೆ ಉಗಿಸಿಕೊಳ್ಳುತ್ತಿದ್ದೆನು. ನನ್ನೀ ಉದಾಸೀನತೆ ಅತಿರೇಕ ತಲುಪಿ ಲೆಕ್ಚರುಗಳು ಕ್ಲಾಸಿನಿಂದ ಉಚ್ಚಾಟನೆ ಮಾಡಿದ ಪ್ರಸಂಗವೂ ಬೇಜಾನ್ ಇದೆ. ಕಾಲೇಜಿನಲ್ಲಿ ಚೆಂದಮಾಡಿ ಬೈಗುಳ ಉಂಡು ಸಂಜೆ ಹೊತ್ತು ರೂಂಗೆ ಹಿಂತಿರುಗಿದಾಗ ಆ ದಿನದ ನಿರ್ವಹಣೆಯ ಬಗೆಗೆ ನನ್ನ ಮೇಲೆ ನನಗೇ ಬೇಸರ ಮೂಡುತ್ತಿತ್ತು. ಮನಸಿಗೆ ಮೂಡಿದ ಬೇಸರವ ಕಳೆಯಲು ಮಿತ್ರ -ಶಿವಕುಮಾರನ ಜೊತೆ ವಾಕಿಂಗ್ ಹೋಗುತ್ತಿದ್ದೆ. ನಾನು ಪ್ರತೀದಿನ ಸಂಜೆ ವಾಕಿಂಗ್ ಹೋಗಲೇಬೇಕು ಎಂಬುವುದಾಗಿ ಟೈಂ ಟೇಬಲ್ ಖಂಡಿತಾ ಹಾಕಿದವನಲ್ಲ, ಇದು ಶಿವಕುಮಾರನಿಗೂ ಗೊತ್ತು. ಯಾವತ್ತು ನಾನು ವಾಕಿಂಗೆ ಹೋಗಲು ಅವನನ್ನು ಕಾತರಿಸುತ್ತಿದ್ದೆನೋ ಅವತ್ತು ನನಗೆ ಕಾಲೇಜಿನಲ್ಲಿ ಏನೋ ಘಟಿಸಿದೆ, ಎಂಬ ವಿಚಾರ ಚತುರ ಮಿತ್ರನಿಗೆ ನಾನು ಹೇಳದೆಯೇ ತಿಳಿಯುತ್ತಿತ್ತು!

ನೋಡಲು ದುಂಡು ಮುಖದ, ಹರೆಯ ಕಳೆದರೂ ಇನ್ನೂ ಸ್ಟೂಡೆಂಟ್ ಥರಾನೆ ಕಾಣುವ ನನ್ನ ಮಿತ್ರ ಶಿವಕುಮಾರ ಮೂಲತಃ ಧಾರವಾಡದವನು. ಪ್ರಸ್ತುತ ವಾರ್ತಾ ಇಲಾಖೆಯಲ್ಲಿ ಉದ್ಯೋಗಿಯಾಗಿದ್ದಾನೆ ಬದಲಾಗಿ ನನ್ನಂತೆ ಇಂಜಿನಿಯರಿಂಗ್ ವಿದ್ಯಾರ್ಥಿಯಲ್ಲ… ಅಂದು ನಾನು ಸಪ್ಪೆ ಮೋರೆ ಹಾಕಿಕೊಂಡು ಕಾಲೇಜಿನಿಂದ ಬಂದಿದ್ದೇ ರೂಢಿಯಂತೆ ಮಿತ್ರನ ಜೊತೆಯಾಗಿ ವಾಕಿಂಗ್ ಹೊರಟೆ. ದಿವಾಸಲೂ ಒಂದೇ ಗೋಳು ಇರುತ್ತಿದ್ದ ನನಗೆ ಈ ಸಾರಿ ಮಿತ್ರ ಹೊಸ ತೆರದಿ ಹುರಿದುಂಬಿಸಲು ಅಣಿಯಾದ. ’ಅಲ್ಲಲ್ಲೇ ಕಂದಾ ಇವತ್ತೂ ಯಾಕ್ಲಾ ಡಲ್ಲು? ನನ್ ಪಿ.ಯು.ಸಿ. ಸ್ಟೋರಿ ಕೇಳ್ಲಾ ಆಮ್ಯಾಕೆ ಹೇಳು… ನಾನು ಬದುಕಿದ್ದೇ ದೊಡ್ದು’, ಎನ್ನುತ್ತಾ ಒಂದು ದೊಡ್ಡ ಉಸಿರು ತೆಗೆದುಕೊಂಡ ಶಿವಕುಮಾರ. ಇವನು ಬಡಾಯಿ ಕೊಚ್ಚುವವನಲ್ಲ ಎಂಬ ನಂಬಿಕೆಯಿಂದ, ಎಂದೂ ಕೂಡ ತನ್ನ ಕಾಲೇಜು ಜೀವನದ ಬಗ್ಗೆ ನನ್ನೊಟ್ಟಿಗೆ ಹಂಚಿಕೊಳ್ಳದಿದ್ದ ಅವನ ಮಾತುಗಳನ್ನು ಬಹಳ ಆಸಕ್ತಿಯಿಂದ ಕೊರಳು ಉದ್ದ ಮಾಡಿ ಕೇಳತೊಡಗಿದೆ.

ಸ್ವಲ್ಪ ಭಾವುಕತೆ ಇನ್ನೂ ಸ್ವಲ್ಪ ಉದ್ವೇಗದಿಂದ ಮಾತು ಮುಂದುವರಿಸಿದ ಶಿವಕುಮಾರ ’ಫಸ್ಟು ಪಿ.ಯು.ಸಿ. ನ ಫಸ್ಟು ಗ್ರೇಡ್ನಾಗೆ ಮುಗುಸ್ಕೊಂಡೆ. ಮುಂದೆ ಸೆಕೆಂಡು ಪಿ.ಯು.ಸಿ. ಪಬ್ಲಿಕ್ ಎಗ್ಜಾಮು ನಾ ಹೋಯ್ತಿದ್ದ ಕಾಲೇಜಿನ್ಯಾಗೆ ನಡೆದಿತ್ತು. ಅವತ್ತು ಐಚ್ಚಿಕ ಸಬ್ಜೆಕ್ಟಾದ ಕನ್ನಡ ಪರೀಕ್ಷೆ. ನಮ್ ಭಾಸೆಲಿ ಎಗ್ಜಾಮು ಅಂದ್ಮೇಲೆ ಹೇಳ್ಬೇಕಾ… ನಾನು ಬೇರೆ ಕನ್ನಡದಾಗೆ ಬೋ ಶಾಣೆ ಇರಾವ. ಹಾಲ್ ಟಿಕೇಟಿನ ಪ್ರಕಾರ ನಂಗೆ ಸೀಟು ಕೊಠಡಿಯ ಕಿಟಕಿಯ ಹತ್ರ ಸಿಕ್ತು ಬುಡು. ನನ್ ಪಕ್ಕದ ಆಮ್ಯಾಲೆ ಹಿಂಬದಿ ಬೆಂಚಿನವ್ರೆಲ್ಲಾ ಕಾಪಿ ಚೀಟಿ ತಕ್ಕಂಡು ಬಂದಿದ್ರು. ಆ ಬಡ್ಡಿ ಹೈಕ್ಲು ಪ್ರತೀ ಎಗ್ಜಾಮ್ನಾಗ ಮಾರಮ್ಮನ ಜಡೀಯಷ್ಟುದ್ದ ಇರೋ ಕಾಪಿ ಚೀಟಿ ತರೋದು ಕಾಮನ್. ಹಂಗಾಗಿ ಸಮ್ಕೆ ಕುಂತೆ, ಮಾದೇಸಪ್ಪನ ಆಣೆಗೂ ನಾನು ಯಾವ ಕಾಪಿ ಗೀಪಿ ಚೀಟಿಯಾಗ್ಲಿ ತರೋನಲ್ಲ. ಪರೀಕ್ಷೆ ಬರೀತಾ ಬರೀತಾ ಟಯಿಮು ಮದ್ಯಾಹ್ನದೆಡೆ ಕಳದೋಗಿತ್ತು. 

ಎಗ್ಜಾಮು ಹಾಲ್ ಪೂರ್ತಿ ಅದೇನೋ ಸೂಜಿ ಬಿದ್ರೂ ಸೌಂಡಾಗುತ್ತಲ್ಲ ಆ ಥರ ಸೈಲೆಂಟು. ಬಡಾನೆ ಬಿಳಿ ಕಲರಿನ ಶರ್ಟು, ಕಪ್ಪು ಪ್ಯಾಂಟು, ಬೂಟು ಹಾಕಿದ ಮೂವರು ಚೆಕಿಂಗ್ ಅಧಿಕಾರಿಗಳು ಕೊಠಡಿಯೊಳಕ್ಕೆ  ನುಗ್ಗಿದ್ರು! ಮೂರು ಮಂದಿಯಾಗೆ ಒಬ್ರು ಹಾಲ್ನ ಕೊನೆಯಿಂದ, ಮತ್ತೊಬ್ರು ಮಧ್ಯದಿಂದ, ಇನ್ನೊಬ್ರು ಎದುರುಗಡೆಯಿಂದ ವಿದ್ಯಾರ್ಥಿಗಳು ಕಾಪಿ ಚೀಟಿ ತಂದಿದ್ದಾರೆಯೇ ಎಂಬುವುದ ತಲಾಶ್ ಮಾಡತೊಡಗಿದ್ರು. ತಪಾಸಣೆಗೆ ಮೊದಲೇ ದಪ್ಪ ಮೀಸೆಯ ಧಡೂತಿ ಅಧಿಕಾರಿಯೊಬ್ಬ ’ಚೀಟಿ ಗೀಟಿ ತಂದಿದ್ರೆ ಇವಾಗ್ಲೇ ಕೊಡ್ರಪ್ಪಾ ಆಮ್ಯಾಕೆ ಸಿಕ್ಕಿದ್ರೆ ಡಿಬಾರ್ ಮಾಡ್ತೀವಿ ಅಷ್ಟೆ…’, ಎಂದು ವಾರ್ನಿಂಗು ಬೋ ಜೋರಾಗೇ ಕೊಟ್ಟಿದ್ರು. ಸಾಹೇಬ್ರು ತಪಾಸಣೆ ಮಾಡ್ತಾ ಮಾಡ್ತಾ ಬರುತ್ತಿದ್ದಂಗೆ ನನ್ ಪಕ್ಕದಲ್ಲೇ ಕುಂತ ಅಷ್ಟೂ ಪೋಲಿ ಹುಡುಗ್ರು ತಂದಿದ್ದ ಕಾಪಿ ಚೀಟಿನೆಲ್ಲಾ ಕಿಟಕಿ ಹೊರ ಒಗೆದ್ರು. ಕೆಲವು ಚೀಟಿಗಳು ಹೊರಕ್ಕೆ ಹೋಗದೆ ಅಲ್ಲೇ ಕಿಟಕಿ ಬಳಿ ಕುಂತಿದ್ದ ನನ್ನ ಕಾಲ ಕೆಳಗೇ ಬಿದ್ದು ಬಿಡ್ತು!’, ಇಷ್ಟು ಹೇಳಿ ತಲೆಯನ್ನೊಮ್ಮೆ ಕೆರೆದ ಶಿವಕುಮಾರ. 

ಮಿತ್ರ ತನ್ನ ಕಥೆಯ ಬಿಚ್ಚಿಡುತ್ತಿದ್ದರೂ ಗೋಣು ಅಲ್ಲಾಡಿಸುವುದೊಂದು ಬಿಟ್ಟರೆ ನಾನು ತುಟಿ ಅದುಮಿಟ್ಟು ಬೆಪ್ಪನಾಗಿ ಅವನನ್ನೇ ನೋಡತೊಡಗಿದೆನು. ನನ್ನಿಂದ ಏನೂ ಪ್ರತಿಕ್ರಿಯೆಗೆ ಕಾಯದೆ ಆತ ಮಾತು ಮುಂದುವರಿಸಿದ ’ತಕ್ಷಣ ಅಧಿಕಾರಿಗಳು ನನ್ನ ಕಾಲ ಬುಡದಲ್ಲಿ ಬಿದ್ದ ಚೀಟಿಗಳ ನೋಡಿದ್ರು. ಪೋಲಿ ಹುಡುಗ್ರ ಜೊತೆ ಅಮಾಯಕನಾದ ನನ್ನನ್ನೂ ಬಂಧಿಸಿ, ಹಾಲ್ ಟಿಕೇಟ್ನಾಗೆ ಕೆಂಪು ಶಾಯಿಲಿ ಏನೇನೋ ಬರ್ದು ಡಿಬಾರ್ ಮಾಡಿಹಾಕಿದ್ರು! ನಮ್ಮೂರಿನ ಅಷ್ಟೂ ಈ ಸುದ್ದಿ ಗುಸುಗುಸು ಅಂತ ಹಬ್ಬಿ ಬಿಡ್ತು. ಊರ ಮಂದಿ ಎಲ್ರೂ ನನ್ನ ಕಡೆ ಕೈ ತೋರಿಸಿ ಮಾತನಾಡತೊಡಗಿದ್ರು. ಇದರಿಂದ ತುಂಬಾನೆ ಡಿಪ್ರೆಸ್ ಆಗ್ಬಿಟ್ಟೆ ಮುಂದೆರಡು ತಿಂಗಳಲ್ಲೇ ನನ್ ಅಪ್ಪಾಜಿ ಸತ್ತು ಹೋದ್ರು ಕಣೋ… ಅಮ್ಮ ಕೂಲಿ ಮಾಡಿ ಬಂದ ಕಾಸಿಂದ ನಮ್ಮೆಲ್ಲರ ಹೊಟ್ಟೆ ತುಂಬಬೇಕಿತ್ತು. ಮನೆಯ ಪರಿಸ್ಥಿತಿ ಯೋಚನೆ ಮಾಡತೊಡಗಿದೆ; ನಂಗೆ ಇಬ್ರು ತಂಗೀರು ಬೇರೆ ಇದಾರೆ. ಹಿರೇ ಗಂಡು ಮಗನಾದ ನನ್ನಲ್ಲಿ ಇರಬೇಕಾದ ಜವಾಬ್ದಾರಿ ಬಹಳ. ನಿನೆಯಿಂದ ಹೊರಗಡೆ ಕಾಲಿಟ್ರೆ ಭಯದ ಜೊತೀಲಿ ನಾಚಿಗೆ. 

ಪರೀಕ್ಷೆಲಿ ಡಿಬಾರ್ ಆದ ನನ್ನನ್ನು ಊರಿಗೆ ಊರೇ; ಚಿಕ್ಕ ಮಕ್ಳಿಂದ ಹಿಡಿದು ಮುದುಕರ ತನಕ ’ಗೆಂಡೆ ತಿಮ್ಮ’, ಅಂತ ಆಡಿಕೊಳ್ತಿದ್ರು. ಕಾಲೇಜಿನಾಗೆ ನಡೆದ ಆ ಘಟನೆ ನನ್ನ ಪೂರ್ತಿಯಾಗಿ ಒಗ್ದು ಬುಡ್ತು. ಕೋರ್ಟಿಗೆ ಹೋದ್ರೆ ನಾನೊಬ್ಬ ಅವಾಯಕನೆಂದು ಹೇಳೋ ಯಾವ ಸಾಕ್ಷೀನೂ ಪುರಾವೆನೂ ಇಲ್ಲ. ಹಿಂದೂ ಮುಂದೂ ಯೋಚಿಸದೆ ಕೊನೆಗೊಂದು ಗಟ್ಟಿ ನಿರ್ಧಾರ ತೆಗೊಂಡೆ; ಸಂಜೆ ಹೊತ್ತು ಅಮ್ಮ ಕೆಲಸ ಮುಗಿಸಿ ಆಗಷ್ಟೆ ಬಂದಿದ್ಲು ನಾನು ಯಾರಿಗೂ ತಿಳಿಯದ ಹಂಗೆ ಸಾಯಿಬೇಕೂಂತ ಇಲಿ ಪಾಷಣ ತಿಂದಿದ್ದೆ. ವಿಷದ ಮತ್ತಲ್ಲಿ ನನ್ನ ಮೈಬಣ್ಣ ನೀಲಿಯಾಗತೊಡಗ್ತು, ನರ ಹೊಡೆದುಕೊಳ್ಳುತ್ತಿತ್ತು, ಹೊಟ್ಟೆ ಕಚ್ಚಿ ಒಂದೇ ಸಮನೆ ರಕ್ತ ಮಿಶ್ರಿತ ವಾಮಿಟ್ಟು ಮಾಡುವುದನ್ನ ನೋಡಿದ ತಂಗೀರು ಭಯಬಿದ್ದು ಅಮ್ಮಂಗೆ ಹೇಳಿದ್ರು. ಎಲ್ರೂ ಎದೆಯೊತ್ತಿ ಅಳಾಕತ್ರು. ನಮ್ ಮನೆಯ ಚೀರಾಟ ಕೇಳ್ಬಿಟ್ಟು ಊರ ಮಂದಿ ಗುಂಪು ಹಾಕಿ ನನ್ನನ್ನು ಹಾಸ್ಪಿಟಲ್‌ಗೆ ಸೇರಿಸಿ ಕೊನೆಗೂ ಬದುಕಿಸಿ ಬಿಟ್ರು. ಈಗ ನಾನು ಊರಿಗೆ ಹತ್ರ ಆಗ್ಬಿಟ್ಟೆ. ಅಕ್ಕ ಪಕ್ಕದ ಮನೆಯವರು ತುಂಬಾ ಪ್ರೀತಿ ಕಾಳಜಿಯಿಂದ ನನ್ನನ್ನು ನೋಡತೊಡಗಿದ್ರು. ನಾನೊಂದು ಹೊಸ ಪ್ರಪಂಚಕ್ಕೆ ಬಂದು ಬಿಟ್ಟಿದ್ದಿನೋ ಅನ್ನೋ ಥರ ಅನ್ನಿಸ್ತಿತ್ತು. ಎಲ್ಲರೂ ತೋರಿಸುವ ಅಕ್ಕರೆಯ ಆದರದ ಮುಂದೆ ಕಳೆದ ಕೆಟ್ಟ ಕ್ಷಣಗಳ ಮರೆತೆ. ಮುಂದೆ ಶಾಣೆ ಕಷ್ಟಪಟ್ಟು ಸ್ಟಡಿ ಮಾಡಿ ಎಂಟ್ರೆನ್ಸು ಎಗ್ಜಾಮುನೂ ಬರ್ದು ಎಸ್.ಎಸ್.ಎಲ್.ಸಿ. ಗ್ರೇಡ್ನಾಗೆ ವಾರ್ತಾ ಇಲಾಖೆಲಿ ನೌಕರಿ ಗಿಟ್ಟಿಸಿಕೊಂಡೆ…’, ಎಂದು ಹೇಳಿ ಆರ್ದಗೊಂಡ ಶಿವಕುಮಾರ. ಭಾವೋದ್ವೇಗದಿಂದ ಕಂಪಿಸುತ್ತಿದ್ದ ಅವನ ಕೈಬೆರಳುಗಳ ಸಂಧಿಗೆ ನನ್ನ ಬೆರಳುಗಳುನ್ನು ಜೋಡಿಸಿದೆ. ಕಣ್ಣಾಲೆಗಳು ಆಗಲೇ ಹನಿಗೂಡಿದ್ದವು, ನನಗೆ ಏನೂ ಮಾತನಾಡಲು ತೋಚಲೇ ಇಲ್ಲ. 

ಮಿತ್ರ ಹೇಳಿದ ’ಬೇಸರದಿಂದ ಇರಬೇಡ್ವೋ ನೀನು ಈ ಪಾಟಿ ಸಪ್ಪೆಯಾಗಿರೋದನ್ನು ನೋಡಿ ನನ್ ಕಾಲೇಜಿನ ದಿನಗಳು ನೆನಪಾದವು ನೋಡು, ನೀನು ಆರಾಮಾಗಿ ಇರಬೇಕು ಕಣೋ’. ಮಿತ್ರನ ಕಾಲೇಜು ಜೀವನದ ವ್ಯಥೆಯ ಫಟನೆ ನನ್ನಿಂದಲಾಗಿ ನೆನಪಾದವು ಎಂದು ಯೋಚಿಸಿ ನಾನು ತಲೆತಗ್ಗಿಸುತ್ತಾ ಹೇಳಿದೆ ’ನಿನ್ನ ಕಾಲೇಜು ಕಥೆಯ ಮುಂದೆ ನನ್ನೀ ಸಣ್ಣ ಪುಟ್ಟ ವಿಚಾರಗಳು ಯಾವ ಲೆಕ್ಕಾನು ಅಲ್ಲ ಕಣೋ ನಾನೇ ಸ್ವಲ್ಪ ಆಲಸಿ ಅನ್ನಿಸುತ್ತೆ’. ಶಿವಕುಮಾರ ’ಹೌದು’, ಎಂಬ ಸಮ್ಮತಿಯಲ್ಲಿ ತನ್ನ ತೋಳುಗಳಿಂದ ನನ್ನ ಹೆಗಲ ಬಾಚಿ ಸೆಳಕೊಂಡ. ಅಲ್ಲಿಗೆ ನಾವಿಬ್ಬರೂ ಸಮಾಧಾನಗೊಂಡೆವು, ಸಂಜೆ ಕರಗುತ್ತಾ ಬಂದುದರಿಂದ ವಾಕಿಂಗೂ ಮುಗಿಸಿದೆವು.     
   
 -ಅಕ್ಷಯ ಕಾಂತಬೈಲು

                                         ****             

ಕನ್ನಡದ ಬರಹಗಳನ್ನು ಹಂಚಿ ಹರಡಿ

5 thoughts on “ಕಾಲೇಜು ದಿನಗಳ ವಾಕಿಂಗ್: ಅಕ್ಷಯ ಕಾಂತಬೈಲು

  1. ಕಾಲೇಜು ದಿನಗಳಬಗ್ಗೆ ನೆನಪಿಸಿದಿರಿ. ಹದಿ ಹರೆಯದ ಕಾಲೇಜಿನಲ್ಲಿ ಕಲಿಯುವವರ ಪ್ರತಿಯೊಬ್ಬರ ಕತೆನೂ ಒಂದೊದು ಥರಾ ಇರುತ್ತೆ. ಕೊಂಚ ಸ್ವಾರಸ್ಯ, ಕೊಂಚ ಭಯಾನಕ, ಕೊಂಚ ಚಿಂತಾಜನಕ. ಎಷ್ಟು ಕಷ್ಟವಾದರೂ ಆತ್ಮ ಹತ್ಯೆಯಂತ ಪ್ರಯತ್ನಕ್ಕೆ ಯಾರೂ ಕೈ ಹಾಕಬಾರದು. ಪುಸ್ತಕದ ಬದನೆ ಕಾಯಿ ಖಂಡಿತಾ ಪಲ್ಯಕ್ಕೆ ಬರುವುದಿಲ್ಲ. ಜೀವನ ಅಂದರೆ ಕೇವಲ ಕಾಲೇಜಿನಲ್ಲಿ ರಾಂಕ್ ಬರುವುದು ಅಲ್ಲ. ನಾನಂತೂ ಥರ್ಡ್ ಕ್ಲಾಸ್ ಪಾಸಾಗಿದ್ದೆ. ಆದರೆ ಜೀವನದಲ್ಲಿ ಗೆದ್ದಿದ್ದೇನೆ. ಕಲಿಕೆ ಜೀವನ ಪರ್ಯಂತ ನಿರಂತರವಾಗಿರಬೇಕು. ಕತೆ ಚೆನ್ನಾಗಿದೆ.

Leave a Reply

Your email address will not be published. Required fields are marked *