ತಿರಸ್ಕಾರ (ಭಾಗ 4): ಜೆ.ವಿ.ಕಾರ್ಲೊ, ಹಾಸನ

’ರಾಕ್ಷಸರು. ಪಾಪ ಹುಡುಗಿ!’ ಅವಳು ಅನುಕಂಪ ವ್ಯಕ್ತಪಡಿಸಿದಳು. ಒಬ್ಬ ಮಿಡ್‌ವೈಫಳ ವಿಳಾಸವನ್ನು ಕೊಟ್ಟು ’ನಾನು ಕಳುಹಿಸಿದೆ ಎಂದು ಹೇಳಿ’ ಎಂದಳು. ಮಿಡ್‌ವೈಫ್ ಯಾವುದೋ ಔಷದವನ್ನು ಕೊಟ್ಟಳು. ಅದರಿಂದ ಏನೂ ಪ್ರಯೋಜನವಾಗಲಿಲ್ಲ. ಆನ್ನೆಟ್ ಮತ್ತೂ ಕಾಹಿಲೆ ಬಿದ್ದಳು. ಗರ್ಭ ಬೆಳೆಯುತ್ತಲೇ ಹೋಯ್ತು.
ಮೇಡಮ್ ಪೆರಿಯೆರ್‌ಳ ವೃತ್ತಾಂತವನ್ನು ಕೇಳಿದ ಹ್ಯಾನ್ಸ್ ಅರೆಗಳಿಗೆ ಸ್ತಬ್ಧನಾದ. ನಂತರ, ’ನಾಳೆ ಭಾನುವಾರ. ನಾವು ಪುರುಸೊತ್ತಾಗಿ ಕುಳಿತು ಮಾತನಾಡುವ.’ ಎಂದ.
’ನಮ್ಮಲ್ಲಿ ಹೊಲಿಯಲು ಸೂಜಿಗಳಿಲ್ಲ! ಮತ್ತೆ ಬರುವಾಗ ತರುವೆಯಾ?’ ಮೇಡಮ್ ಪೆರಿಯೆರ್ ಕೇಳಿದಳು.
’ಪ್ರಯತ್ನ ಮಾಡುತ್ತೇನೆ ಮೇಡಮ್!’ ತಲೆ ಕೆರೆದುಕೊಳ್ಳುತ್ತಾ ಹ್ಯಾನ್ಸ್ ಉತ್ತರಿಸಿದ.

ಸೌದೆ ಹೊರೆಯನ್ನು ಎತ್ತಿಕೊಳ್ಳುತ್ತಾ ಅವಳು ಹೊರಟಳು. ಹ್ಯಾನ್ಸ್ ವಾಪಾಸ್ಸಾದ. ಮರುದಿನ ಅವರನ್ನು ಎದುರ್ಗೊಳ್ಳಲು ಸೇನೆಯ ಬೈಕನ್ನು ಉಪಯೋಗಿಸುವ ಧೈರ್ಯ ಅವನಿಗೆ ಸಾಕಾಗಲಿಲ್ಲ. ಬಾಡಿಗೆಗೆ ಒಂದು ಮೋಪೆಡನ್ನು ತೆಗೆದುಕೊಂಡ. ಈ ಭಾರಿ ಅವನು ತೆಗೆದುಕೊಂಡು ಹೋಗುತ್ತಿರುವ ಗಂಟು ದೊಡ್ಡದಿತ್ತು. ಗಂಟಿನಲ್ಲಿ ಒಂದು ಶಾಂಫೇನ್ ಕೂಡ ಇತ್ತು. ಸಂಜೆಯ ವೇಳೆ ಎಲ್ಲರೂ ಮನೆಯಲ್ಲಿರುತ್ತಾರೆಂಬ ಖಾತರಿಯಿಂದ ಅವನು ಫಾರಮ್ಮಿಗೆ ಹೋದ. ಎಲ್ಲರೂ ಅಡುಗೆಮನೆಯಲ್ಲಿದ್ದರು. ಮೇಡಮ್ ಪೆರಿಯೆರ್ ಅಡುಗೆ ಮಾಡುವುದರಲ್ಲಿ ವ್ಯಸ್ತಳಾಗಿದ್ದಳು.. ಗಂಡಸು ಪತ್ರಿಕೆಯನ್ನು ಓದುವುದರಲ್ಲಿ ಮಗ್ನನಾಗಿದ್ದ. ಆನ್ನೆಟ್, ಅವಳ ಹಳೇ ಸ್ಟೊಕಿಂಗ್ಸಿಗೆ ತೇಪೆ ಹಚ್ಚುವ ಕಾರ್‍ಯದಲ್ಲಿ ಮಗ್ನನಾಗಿದ್ದಳು.

’ನಾನು ಸೂಜಿಗಳನ್ನು ತಂದಿದ್ದೇನೆ.’ ಗಂಟನ್ನು ಬಿಚ್ಚುತ್ತಾ ಹೇಳಿದ ಹ್ಯಾನ್ಸ್. ಮುಂದುವರೆಸಿ, ’ಆನ್ನೆಟ್ ನಿನಗಾಗಿ ಒಂದು ಬಟ್ಟೆಯನ್ನೂ ತಂದಿದ್ದೇನೆ.’ ಎಂದ.
’ನನಗೆ ಅದರ ಅಗತ್ಯವಿಲ್ಲ.’ ತಲೆ ಎತ್ತದೆಯೇ ಅವಳು ಹೇಳಿದಳು.
’ಅಗತ್ಯವಿಲ್ಲಾ?! ಇವತ್ತಲ್ಲ ನಾಳೆ ನೀನು ಮಗುವಿಗಾಗಿ ತಯಾರಿ ಮಾಡಲೇ ಬೇಕಾಗುತ್ತದೆ.’ ಅವನು ನಗೆಯಾಡಿದ.
’ಅವನು ಹೇಳೋದು ನಿಜ ಕಣೆ ಆನ್ನೆಟ್. ನಮ್ಮತ್ರ ಏನಿದೇಂತಾ?’ ಹೆಂಗಸು ಹೇಳಿದಳು. ಅವಳ ದೃಷ್ಟಿ ಹ್ಯಾನ್ಸ್ ತಂದ ಗಂಟಿನ ಮೇಲೊಂದು ಸುತ್ತು ಹಾಕಿತು.
’ಶಾಂಪೆನಿನ ಬಾಟಲು!’ ಅವಳ ಕಣ್ಣುಗಳು ಹಿರಿದಾದವು.
’ಅದ್ಯಾಕೆ ಎಂದು ಹೇಳುತ್ತೇನೆ.’ ಎನ್ನುತ್ತಾ ಅವನು ಕುರ್ಚಿಯನ್ನೆಳೆದು ಆನ್ನೆಟಳ ಮುಂದೆ ಕುಳಿತ.
’ಆ ರಾತ್ರಿಯ ಘಟನೆಯಿಂದ ನಾನು ನಿಜವಾಗಿಯೂ ಪಶ್ಚಾತ್ತಾಪಪಟ್ಟಿದ್ದೇನೆ ಆನ್ನೆಟ್. ನಿಜ ಹೇಳಬೇಕೆಂದರೆ ನನ್ನದೇನೂ ತಪ್ಪಿಲ್ಲ. ಸಂದರ್ಭವೇ ಹಾಗಿತ್ತು. ನನ್ನನ್ನು ಕ್ಷಮಿಸು.’ ಎಂದು ಅಂಗಲಾಚಿದ.
’ಎಂದಿಗೂ ಸಾಧ್ಯವಿಲ್ಲ!’ ಅವಳು ಭುಸುಗುಟ್ಟಿದಳು. ’ನೀನ್ಯಾಕೆ ಪಿಶಾಚಿ ತರ ನನ್ನ ಬೆನ್ನು ಹತ್ತಿದ್ದೀಯಾ? ನನ್ನ ಜೀವನವನ್ನೇ ನಾಶಮಾಡಿಬಿಟ್ಟೆ. ಮತ್ತೂ ನಿನಗೆ ಸಮಧಾನವಾಗುತ್ತಿಲ್ಲವೇ?’
’ನೀನು ನನ್ನ ಮಗುವಿನ ತಾಯಿಯಾಗಲಿದ್ದೀಯಾ ಎಂಬುದನ್ನು ಕೇಳಿದ ನಂತರ ನಾನು ಸಂಪೂರ್ಣ ಬದಲಾಗಿಬಿಟ್ಟೆ. ನನಗೆ ನನ್ನ ಮೇಲೆಯೇ ಗರ್ವ ಉಂಟಾಗಿದೆ.’ ಅವನು ಬಹಳ ಖುಷಿಯಿಂದ ಹೇಳಿದ.
’ಏನಂದೆ? ಗರ್ವ! ಓ ದೇವರೇ..’ ಅವಳ ಮಾತುಗಳು ಅವನನ್ನು ವಿಷಪೂರಿತ ಚೂರಿಯಂತೆ ಇರಿದವು.
’ಗರ್ಭ ತೆಗೆಸುವ ನಿಮ್ಮ ಪ್ರಯತ್ನ ಫಲಿಸಲಿಲ್ಲವೆಂದು ಕೇಳಿ ನನಗೆ ಆನಂದವಾಯ್ತು. ನೀನು ನನ್ನ ಮಗುವಿನ ತಾಯಿಯಾಗಲಿದ್ದೀಯಾ ಎಂದು ಕೇಳಿದಾಗಿನಿಂದ ನನಗೆಷ್ಟು ಖುಷಿಯಾಗಿದೆ ಎಂದು ನಿನಗೆ ಗೊತ್ತೆ?’
ಅವಳು ತಿರಸ್ಕಾರದಿಂದ ಅವನನ್ನೇ ನೋಡಿದಳು.
’ನೋಡು ಆನ್ನೆಟ್, ಯಾವಾಗಿಂದ ನನಗೆ ಈ ಸಮಾಚಾರ ತಿಳಿಯಿತೋ, ಬೇರಾವ ವಿಚಾರಗಳೂ ನನ್ನ ಮನಸ್ಸಿನಲ್ಲಿ ಸುಳಿಯುತ್ತಿಲ್ಲ. ಇನ್ನು ಆರು ತಿಂಗಳಲ್ಲಿ ಈ ಯುದ್ಧ ಮುಗಿಯುತ್ತದೆಂದು ನಾನು ಭಾವಿಸುತ್ತೇನೆ. ಅಷ್ಟರೊಳಗೆ ಈ ಇಂಗ್ಲಿಷರನ್ನು ನಾವು ಬಗ್ಗು ಬಡಿದಿರುತ್ತೇವೆ. ನನಗೆ ಸೇನೆಯಿಂದ ನಿಲಂಬಿತಗೊಳಿಸಿದ ದಿನದಂದೇ ನಾವಿಬ್ಬರೂ ಮದುವೆಯಾಗೋಣ.’
’ನಿನ್ನೊಟ್ಟಿಗೆ ಮದುವೆ! ಯಾತಕ್ಕಾಗೋ?’ ಅವಳು ವ್ಯಂಗ್ಯದಿಂದ ಕೇಳಿದಳು.

ಅವನ ಮುಖ ರಂಗೇರಿತು. ಅವನಿಗೆ ಫ್ರೆಂಚಿನಲ್ಲಿ ಉತ್ತರಿಸಲು ಸಾಧ್ಯವಾಗಲಿಲ್ಲ. ಅವಳಿಗೆ ಅರ್ಥವಾಗುತ್ತದೆಂಬ ಭರವಸೆಯಿಂದ ಅವನು ಜರ್ಮನಲ್ಲೇ ಹೇಳಿದ:
’Ich liebe dich..’
’ಏನಂತೆ?’ ಮೇಡಮ್ ಪೆರಿಯೆರ್ ಕೇಳಿದಳು.
’ಅವನು ನನ್ನನ್ನು ಪ್ರೀತಿಸುತ್ತಾನಂತೆ!’ ಎಂದು ಹೇಳಿ ಆನ್ನೆಟ್ ಬಾಯಿಯನ್ನು ಸೊಟ್ಟ ಮಾಡಿ ಜೋರಾಗಿ ನಗತೊಡಗಿದಳು. ನಕ್ಕು, ನಕ್ಕು ಅವಳ ಕಣ್ಣಾಲಿಗಳು ತುಂಬಿದವು. ಆದರೂ ನಗುತ್ತಲೇ ಇದ್ದಳು. ಅವಳ ತಾಯಿ ಮುಂದೆ ಬಂದು ಆನ್ನೆಟಳ ಎರಡೂ ಕೆನ್ನೆಗೂ ಬಾರಿಸಿದಳು.
’ನೀವು ಸುಮ್ಮನಿರಿ ಅಮ್ಮ!’ ಹ್ಯಾನ್ಸ್ ಹೇಳಿದ. ’ಈ ಸ್ಥಿತಿಗೆ ’ಹಿಸ್ಟಿರಿಯಾ’ ಎನ್ನುತ್ತಾರೆ’
ಸ್ವಲ್ಪ ಸಮಯದ ನಂತರ ಆನ್ನೆಟ್ ಮೊದಲಿನ ಸ್ಥಿತಿಗೆ ಬಂದಳು.
’ನಮ್ಮ ನಿಶ್ಚಿತಾರ್ಥಕ್ಕಾಗಿ ನಾನು ಶಾಂಪೇನ್ ತಂದಿದ್ದೆ.’ ಅವನು ಹೇಳಿದ.
’ಮೂರ್ಖರೊಂದಿಗೆ ಸೋಲುವುದಕ್ಕಿಂತ ದೊಡ್ಡ ಅಪಮಾನ ಪ್ರಪಂಚದಲ್ಲಿ ಬೇರೊಂದಿರಲಾರದು.’
ಅವನು ಜರ್ಮನ್ ಬಾಷೆಯಲ್ಲಿ ಮಾತನಾಡುತ್ತಲೇ ಹೋದ.
’ನೀನು ಗರ್ಭವತಿಯಾದ ಮೇಲೆಯೇ ನಾನು ನಿನ್ನನ್ನು ಪ್ರೀತಿಸುತ್ತಿರುವ ವಿಚಾರ ಮನದಟ್ಟಾಯಿತು’
’ಏನಂತೆ?’ ಮೇಡಮ್ ಪೆರಿಯೆರ್ ಮತ್ತೊಮ್ಮೆ ಕೇಳಿದಳು.
’ಅದೇನು ಅಂತ ಮಹತ್ವದಲ್ಲ ಬಿಡಮ್ಮ.’ ಎಂದಳು ಆನ್ನೆಟ್.
ಅವನು ಮತ್ತೆ ಫ್ರೆಂಚಿನಲ್ಲಿ ಮಾತನಾಡಲು ಶುರುಮಾಡಿದ. ಅವಳ ತಂದೆ ತಾಯಿಯರಿಗೂ ಗೊತ್ತಾಗಲಿ ಎನ್ನುವುದು ಅವನ ಉದ್ದೇಶವಾಗಿತ್ತು.

’ನಿನ್ನೊಡನೆ ನಾನು ಈಗಿಂದೀಗಲೇ ಮದುವೆಯಾಗಲು ಸಿದ್ಧನಿದ್ದೇನೆ. ಆದರೆ ಸೇನೆಯ ನಿಯಮಗಳಲ್ಲಿ ಅದಕ್ಕೆ ಅಸ್ಪದವಿಲ್ಲ. ನಮ್ಮ ಮನೆಯಲ್ಲಿ ನಾನೇ ಹಿರಿಯವನು. ನಮ್ಮದು ಅನುಕೂಲಸ್ಥ ಕುಟುಂಬವೇ. ನಿನಗೆ ಯಾವುದೇ ರೀತಿಯಲ್ಲೂ ಕೊರತೆಯಿಲ್ಲ. ಸಮಾಜದಲ್ಲಿ ನಮ್ಮ ಕುಟುಂಬಕ್ಕೆ ಒಳ್ಳೆಯ ಗೌರವವಿದೆ..’
’ನೀನು ಕಥೊಲಿಕ ಕ್ರೈಸ್ತನೇ?’ ಮೇಡಮ್ ಪೆರಿಯರ್ ಮಧ್ಯೆ ಬಾಯಿ ಹಾಕಿದಳು.
’ಹೌದು. ನಾನು ಕಥೊಲಿಕ ಕ್ರೈಸ್ತ.’
’ಹಾಗಾದರೆ ನನ್ನದೇನು ಅಡ್ಡಿಯಿಲ್ಲ.’
’ನಮ್ಮ ಹಳ್ಳಿನೂ ನಿಮ್ಮಷ್ಟೇ ಸುಂದರವಾಗಿದೆ. ಬಂಗಾರ ಬೆಳೆಯುವಂತ ಕೃಷಿ ಪ್ರದೇಶ. ಇದನ್ನು ನಮ್ಮಜ್ಜ ೧೮೭೦ ರಲ್ಲೇ ಕೊಂಡಿದ್ದರಂತೆ. ನಮ್ಮ ಮನೆಯಲ್ಲಿ ಒಂದು ಕಾರು, ಟೆಲಿಫೋನ್ ಮತ್ತು ಒಂದು ರೇಡಿಯೋ ಇದೆ.’
ಆನ್ನೆಟ್ ತಂದೆಯ ಕಡೆಗೆ ತಿರುಗಿ ಹೇಳಿದಳು: ’ಅಪ್ಪ, ಇವನು ಬಹಳ ಚೆನ್ನಾಗಿ ಮಾತನಾಡುತ್ತಾನೆ!  ಯುದ್ಧದಲ್ಲಿ ಸೋತು ಶರಣಾದ ದೇಶದ, ಅತ್ಯಾಚಾರಕ್ಕೊಳಪಟ್ಟು ಗರ್ಭವತಿಯಾದ ಹೆಣ್ಣನ್ನು ತನ್ನ ದೇಶಕ್ಕೆ ಕರೆದೊಯ್ದು ತನ್ನ ಮರ್ಯಾದಸ್ಥ ಸಾಂಪ್ರಾದಾಯಿಕ ಹಳ್ಳಿಯ ಕಥೊಲಿಕ ಕ್ರೈಸ್ತ ಕುಟುಂಬದ ರಾಣಿಯನ್ನಾಗಿ ಪಟ್ಟಕೇರಿಸುತ್ತಾನಂತೆ! ನಾನಲ್ಲಿ ಸುಖವಾಗಿ ಸಂಸಾರ ನಡೆಸಬಹುದಂತೆ! ನೋಡಪ್ಪ, ಎಂತಾ ಭಾಗ್ಯ ನನ್ನದು!’

ಮೊನ್ಸಿಯೊರ್ ಪೆರಿಯೆರ್ ಮಾತೇ ಮಾಣಿಕ್ಯವೆಂಬ ನಿಲುವಿನ ಗಂಡಸಾಗಿದ್ದ. ಅವನು ಮೊದಲ ಭಾರಿ ಹ್ಯಾನ್ಸನನ್ನು ಉದ್ದೇಶಿಸಿ ಮಾತನಾಡಿದ.
’ನಿನ್ನ ಮಾತುಗಳಲ್ಲಿ ಪ್ರಾಮಾಣಿಕತೆಯಿಲ್ಲವೆಂದು ನಾನು ಹೇಳುತ್ತಿಲ್ಲ. ಕಳೆದ ಯುದ್ಧದಲ್ಲಿ ನಾನೂ ಭಾಗವಹಿಸಿದ್ದೆ. ಶಾಂತಿಯ ವಾತಾವರಣದಲ್ಲಿ ಯೋಚಿಸಲೂ ಹೇಸಿಗೆಪಡುವಂತ ಕೆಲಸಗಳನ್ನು ಯುದ್ಧದ ಸಂದರ್ಭದಲ್ಲಿ ನಾವೂ ಎಸಗಿದ್ದೇವೆ. ಮನುಷ್ಯ ಮೂಲತಃ ಒಂದು ಪ್ರಾಣಿಯೇ. ಇದ್ದ ಒಬ್ಬನೇ ಮಗನನ್ನು ನಾವು ಯುದ್ಧದಲ್ಲಿ ಕಳೆದುಕೊಂಡೆವು. ಈಗ ಮಗಳನ್ನೂ ಕಳೆದುಕೊಳ್ಳಲು ನಾವು ತಯಾರಿಲ್ಲ.’
’ನೀವು ಹಾಗಾಂತೀರಾ ಎಂತಲೇ ನಾನು ಯೋಚಿಸಿದ್ದೆ. ಅದಕ್ಕೂ ನಾನೊಂದು ದಾರಿಯನ್ನು ಹುಡುಕಿಕೊಂಡಿದ್ದೇನೆ. ನಾನು ಇಲ್ಲಿಯೇ ನಿಮ್ಮಲ್ಲಿಯೇ ಉಳಿಯುತ್ತೇನೆ!’
ಆನ್ನೆಟ್ ಒಮ್ಮೆಲೇ ಅವನ ಕಡೆಗೆ ಆಶ್ಚರ್ಯದಿಂದ ನೋಡಿದಳು.

’ಅಂದರೆ?’ ಮೇಡಮ್ ಪೆರಿಯೆರ್ ಕೇಳಿದಳು.
’ನನ್ನ ಕಿರಿಯ ತಮ್ಮ ಊರಿನ ಮನೆಯಲ್ಲೇ ಉಳಿಯುತ್ತಾನೆ. ಹೇಗೂ ಈ ಹಳ್ಳಿ ನನಗೆ ಇಷ್ಟವಾಗಿದೆ. ಶ್ರಮಪಟ್ಟು ದುಡಿದರೆ ನಿಮ್ಮ ಭೂಮಿಯಲ್ಲೂ ಬಂಗಾರ ಬೆಳೆಯಬಹುದು. ನೀವು ನೋಡುತ್ತಿರಿ. ಯುದ್ಧಾನಂತರ ಬಹಳಷ್ಟು ಜರ್ಮನ್ ಯುವಕರು ಇಲ್ಲೇ ಉಳಿಯುತ್ತಾರೆ. ಹೇಗೂ, ಕೃಷಿಕಾರ್ಯಗಳಲ್ಲಿ ದುಡಿಯಲು ನಿಮ್ಮಲ್ಲಿ ಸಾಕಷ್ಟು ಗಂಡಸರಿಲ್ಲ. ಕಳೆದವಾರ ನಮಗೆ ಉಪನ್ಯಾಸ ಕೊಡಲು ಬಂದಿದ್ದ ಒಬ್ಬರು ಹೇಳಿದಂತೆ ದುಡಿಯುವ ಕೈಗಳಿಲ್ಲದೆ ನಿಮ್ಮಲ್ಲಿನ ೧/೩ ಕೃಷಿ ಭೂಮಿ ಪಾಳು ಬಿದ್ದಿದೆಯಂತೆ!’

ಆನ್ನೆಟಳ ತಂದೆ ತಾಯಿಯರಿಬ್ಬರೂ ಒಬ್ಬರನ್ನೊಬ್ಬರ ಮುಖ ನೋಡಿಕೊಂಡರು. ಅವರು ಗೊಂದಲದಲ್ಲಿ ಸಿಕ್ಕಿಕೊಂಡಿರುವುದು ಅವಳಿಗೆ ಸ್ಪಷ್ಟವಾಯಿತು. ಇದ್ದ ಒಬ್ಬ ಮಗ ಮಡಿದ ನಂತರ ಇಂಥ ವ್ಯವಸ್ಥೆಗೆ ಅವರು ರಾಜಿಯಾಗಿದ್ದರು. ತಮ್ಮಲ್ಲಿಯೇ ಉಳಿದು ಕೃಷಿ ಕಾರ್ಯಗಳಲ್ಲಿ ನೆರವಾಗುವ ಒಬ್ಬ ಯುವಕನ ಸಹಾಯ ಅವರಿಗೆ ಅಗತ್ಯವಿತ್ತು. ಅವನು ಮನೆ ಅಳಿಯನೇ ಆಗಿದ್ದರೆ ಎಷ್ಟು ಚೆನ್ನಾಗಿತ್ತು!
’ಈ ಬಗ್ಗೆ ನಾವು ಸ್ವಲ್ಪ ಯೋಚಿಸಬೇಕಾಗುತ್ತದೆ.’ ಮೇಡಮ್ ಪೆರಿಯರ್ ಮೊದಲು ಬಾಯಿಬಿಟ್ಟಳು.
’ಅಮ್ಮಾ, ನೀನು ಸ್ವಲ್ಪ ತೆಪ್ಪಗಿರುತ್ತೀಯಾ?’ ಆನ್ನೆಟ್ ಎದ್ದು ನಿಂತಳು. ಅವಳ ಕಣ್ಣುಗಳು ಕಿಡಿಕಾರುತ್ತಿದ್ದವು.

’ಈಗಾಗಲೇ ನನ್ನ ನಿಶ್ಚಿತಾರ್ಥ ಒಬ್ಬ ಶಿಕ್ಷಕನೊಡನೆ ಆಗಿದೆ ಎಂಬ ಸಂಗತಿ ನಿನಗೆ ಮರೆತು ಹೋಗಿಲ್ಲತಾನೆ? ಅವನು ನಾನು ಕಲಿಸುತ್ತಿದ್ದ ಪೇಟೆಯಲ್ಲೇ ಹುಡುಗರ ಸ್ಕೂಲಿನ ಶಿಕ್ಷಕನಾಗಿದ್ದ. ಯುದ್ಧಾನಂತರ ನಾವು ಮದುವೆಯಾಗುವುದೆಂದು ನಿಶ್ಚಯಿಸಿದ್ದೆವು. ಅವನು ಇವನಷ್ಟು ಸುಂದರನಾಗಲೀ ಧೃಡಕಾಯನಾಗಲೀ ಆಗಿರಲಿಲ್ಲ. ಬಹಳ ನಾಜೂಕು ಪ್ರಕೃತಿಯವನಾಗಿದ್ದ. ಅವನ ಬುದ್ಧಿವಂತಿಕೆಯೇ ಅವನ ಹೆಗ್ಗಳಿಕೆಯಾಗಿತ್ತು, ಅವನೊಬ್ಬ ಸುಸಂಸ್ಕೃತ ಯುವಕನಾಗಿದ್ದ. ಒಂದು ಸಹಸ್ರಮಾನದ ನಾಗರಿಕತೆ ಅವನ ವ್ಯಕ್ತಿತ್ವದಲ್ಲಿ ಅಡಗಿತ್ತು. ನಾನು ಅವನನ್ನು ಹೃದಯಾಂತಾರಳದಿಂದ ಪ್ರೀತಿಸುತ್ತಿದ್ದೇನೆ. ಅವನೇ ನನ್ನ ಸರ್ವಸ್ವ.’
ಇದನ್ನು ಕೇಳಿದ ಹ್ಯಾನ್ಸ್ ತೆಪ್ಪಗಾದ. ಆನ್ನೆಟಳಂತ ಹುಡುಗಿ ಯಾವನೇ ಒಬ್ಬನನ್ನು ಪ್ರೇಮಿಸುವಷ್ಟು ಶಕ್ತಳೇ ಎನ್ನುವ ಅನುಮಾನ ಅವನನ್ನು ಕಾಡಿತು.

’ಅವನು ಎಲ್ಲಿದ್ದಾನೆ?’
’ಎಲ್ಲಿದ್ದಾನೆ? ಜರ್ಮನಿಯಲ್ಲಿ! ಅದೂ ಒಬ್ಬ ಯುದ್ಧಕೈದಿಯಾಗಿ! ನೀನು ಇಲ್ಲಿ ನಮ್ಮ ಜನರನ್ನು ಲೂಟಿಮಾಡಿ ತಿಂದು ಕೊಬ್ಬಿ ಹೋಗಿದ್ದೀಯಾ! ನಾನು ನಿನ್ನನ್ನು hate ಮಾಡುತ್ತೇನೆಂದು ಎಷ್ಟು ಭಾರಿ ಹೇಳಲಿ? ನೀನು ನನ್ನ ಕ್ಷಮೆ ಕೇಳುತ್ತಿದ್ದೀಯಾ! ಅದು ಯಾವತ್ತಿಗೂ ಸಾಧ್ಯವಿಲ್ಲ. ನನ್ನನ್ನು ಮದುವೆಯಾಗಿ ನಿನ್ನ ಪಾಪಕ್ಕೆ ಪ್ರಾಯಶ್ಚಿತ್ತ ಗಳಿಸಲು ನಿನ್ನ ಹುನ್ನಾರ ಎಂದಿಗೂ ಸಫಲವಾಗಲಾರದು.’ ಅವಳು ಒಮ್ಮೆಲೇ ಭಾವುಕಳಾಗಿ ಜೋರಾಗಿ ಅಳತೊಡಗಿದಳು.

’ನನ್ನ ಸರ್ವನಾಶವಾಗಿ ಹೋಯ್ತು. ಅವನು ತುಂಬಾ ಒಳ್ಳೆಯ ಮನುಷ್ಯ. ಖಂಡಿತಾ ನನ್ನನ್ನು ಕ್ಷಮಿಸುತ್ತಾನೆ. ಆದರೂ ಒಂದು ದಿನ ಕೇವಲ ಒಂದು ತುಂಡು ಚೀಜ್, ಬೆಣ್ಣೆ ಮತ್ತು ಮಾಂಸಕ್ಕಾಗಿ ವೈರಿಯೊಟ್ಟಿಗೆ ಮಲಗಿದ್ದೆ ಎನ್ನುವ ಅನುಮಾನ ಅವನಿಗೆ ಕಾಡಿದರೆ? ಇದನ್ನು ಯೋಚಿಸಿದರೂ ಸಾಕು, ನಾನು ಕಂಗಾಲಾಗುತ್ತೇನೆ. ಇಷ್ಟೇಯಲ್ಲ. ನಮ್ಮಿಬ್ಬರ ಮಧ್ಯೆ ಇದೊಂದು ದರಿದ್ರ ಮಗು ಬೇರೆ ವಕ್ಕರಿಸಿಕೊಂಡಿರುತ್ತದೆ. ಹೊಂಗೂದಲಿನ, ನೀಲಿ ಕಣ್ಣುಗಳ ವೈರಿಯ ಮಗು! ದೇವರೇ, ನನಗ್ಯಾಕೆ ಉಳಿಸಿದೆ?’
ಅವಳು ಅಡುಗೆಮನೆಯಿಂದ ಎದ್ದು ಹೊರನಡೆದಳು. ಅವರ ಮಧ್ಯೆ ಮೌನ ಕವಿಯಿತು. ಹ್ಯಾನ್ಸ್, ತಾನು ತಂದಿದ್ದ ಶಾಂಪೇನ್ ಬಾಟಲಿಯ ಕಡೆಗೆ ಕನಿಕರದಿಂದೆಂಬಂತೆ ನೋಡಿದ. ಒಂದು ದೀರ್ಘ ಶ್ವಾಸವನ್ನು ಎಳೆದುಕೊಳ್ಳುತ್ತಾ ಅವನು ಎದ್ದು ನಿಂತ. ಮೇಡಮ್ ಪೆರಿಯೆರ್ ಕೂಡ ಅವನೊಟ್ಟಿಗೆ ಎದ್ದಳು.

’ನೀನು ಆನ್ನೆಟಳೊಂದಿಗೆ ಮದುವೆಯಾಗುತ್ತೇನೆಂದಿದ್ದು ನಿಜವೇ?’ ಅವಳು ತಗ್ಗಿದ ಸ್ವರದಲ್ಲಿ ಕೇಳಿದಳು.
’ನಿಜವಾಗಲೂ ಕಣಮ್ಮ. ನಾನು ಅವಳನ್ನು ಪ್ರೀತಿಸುತ್ತೇನೆ.’
’ನೀನು ಅವಳನ್ನು ಜರ್ಮನಿಗೆ ಕರೆದುಕೊಂಡು ಹೋಗುವುದಿಲ್ಲ ತಾನೆ? ನೀನು ಇಲ್ಲಿಯೇ..’
’ನಿನ್ನಾಣೆ ಕಣಮ್ಮ.’
’ಇವರೂ ಎಷ್ಟು ದಿನಾಂತ ಕೆಲಸ ಮಾಡಲು ಸಾಧ್ಯ? ಅಲ್ಲಾದ್ರೆ ನಿನ್ನ ತಮ್ಮನಿದ್ದಾನೆ. ಇಲ್ಲಿ ಎಲ್ಲವೂ ನಿನ್ನದೇ..’
’ಹೌದಮ್ಮ. ನನಗೆ ಎಲ್ಲಾ ಅರ್ಥವಾಗುತ್ತದೆ.’
’ನಮಗೆ ಮೊದಲಿಂದಲೂ ಅಷ್ಟೆ..  ಆನ್ನೆಟ್ ಆ ಮೇಷ್ಟರೊಡನೆ ಮದುವೆಯಾಗುವುದು ಇಷ್ಟವಿರಲಿಲ್ಲ. ಅವನ ಮೇಲಣ ಪ್ರೀತಿಯಿಂದ ಅವಳು ಹುಚ್ಚಿಯೇ ಆಗಿದ್ದಳು. ಆಗ ನಮ್ಮೊಡನೆ ಮಗನಿದ್ದ. ಅವಳು ಅವನನ್ನು ಇಷ್ಟಪಟ್ಟರೆ ಅವನನ್ನೇ ಮದುವೆಯಾಗಲಿ ನೀವ್ಯಾಕೆ ಅಡ್ಡಿಪಡಿಸುತ್ತೀರಾ ಎಂದು ನಮಗೇ ಹೇಳುತ್ತಿದ್ದ. ಈಗ ಅವನಿಲ್ಲ. ಎಲ್ಲವೂ ಬದಲಾಗಿದೆ. ಮನಸ್ಸಿದ್ದರೂ ಒಬ್ಬರೇ ಕೃಶಿ ಮಾಡುವುದು ಸಾಧ್ಯವಿಲ್ಲ. ಇಷ್ಟೊಂದು ವರ್ಷಗಳಿಂದ ಬೇಸಾಯ ಮಾಡಿ ಕೊನೆಗಾಲದಲ್ಲಿ ಮಾರುವುದೆಂದರೆ ಯಾಕೋ ಮನಸ್ಸು ಒಪ್ಪುತ್ತಿಲ್ಲ.’
ಮಾತನಾಡುತ್ತಾ ಮೇಡಮ್ ಪೆರಿಯೆರ್ ಅವನಗುಂಟ ರಸ್ತೆಯವರೆಗೆ ಬಂದಳು. ಬೀಳ್ಕೊಡುವಾಗ ಅವನ ಕೈಯನ್ನು ಗಟ್ಟಿಯಾಗಿ ಹಿಡಿದು, ’ನೀನು ಮತ್ತೊಮ್ಮೆ ಬಾರಪ್ಪಾ’ ಎಂದಳು.

*****

(ಮುಂದುವರೆಯುವುದು…)

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

2 Comments
Oldest
Newest Most Voted
Inline Feedbacks
View all comments
ಗುರುಪ್ರಸಾದ ಕುರ್ತಕೋಟಿ

ಕಾರ್ಲೊ ಸರ್, ಕತೆ ಚೆನ್ನಾಗಿ ಮುಂದುವರಿಯುತ್ತಿದೆ!

trackback

[…] (ಇಲ್ಲಿಯವರೆಗೆ…) […]

2
0
Would love your thoughts, please comment.x
()
x