ಕಾಯಕಲ್ಪವಾಗಿ ಪ್ರವಾಸೋದ್ಯಮ: ಎಂ.ಎಚ್.ಮೊಕಾಶಿ

“ದೇಶ ಸುತ್ತಿ ನೋಡು ಕೋಶ ಓದಿ ನೋಡು” ಎಂಬ ಗಾದೆ ಮಾತಿದೆ. ಇದು ತನು ಮನದ ಜ್ಞಾನಕ್ಕಾಗಿ ನಮ್ಮ ಹಿರಿಯರು ಹೇಳಿದ ಮಾತಾಗಿದೆ. ಅನುಭವ, ತನ್ಮೂಲಕ ಅನುಭಾವಕ್ಕೆ ಬಾರದ ಜ್ಞಾನವನ್ನು ಪುಸ್ತಕದ ಬದನೇಕಾಯಿ ಎಂದು ಹೇಳುವುದೂ ಇದೆ. ಒಂದೇ ಒಂದು ಸುತ್ತಾಟ ಪುಸ್ತಕ ನೀಡುವ ಜ್ಞಾನಕ್ಕಿಂತ ಹೆಚ್ಚಿನ ಜ್ಞಾನ ನೀಡುವುದೆಂಬುದು ಅನುಭವದ ಮಾತಾಗಿದೆ. “ವಿಶ್ವ ಒಂದು ಪುಸ್ತಕವಿದ್ದಂತೆ, ಸುತ್ತಾಡಲಾರದವ ಯಾವ ಜ್ಞಾನವನ್ನೂ ಗಳಿಸಲಾರ” ಎಂದು ಸೇಂಟ್ ಆಗಸ್ಟಿನ್ ಹೇಳಿದ್ದಾರೆ.

ವಿಶ್ವಸಂಸ್ಥೆಯ ಅಂತರಾಷ್ಟ್ರೀಯ ಪ್ರವಾಸೋದ್ಯಮ ಸಂಸ್ಥೆಯು 1980 ರಿಂದಲೂ “ವಿಶ್ವ ಪ್ರವಾಸಿ ದಿನ”ವನ್ನಾಗಿ ಪ್ರತಿ ವರ್ಷ ಸಪ್ಟಂಬರ್ 27 ರಂದು ಆಚರಿಸುತ್ತ ಬರುತ್ತಿದೆ. 1970 ಸಪ್ಟಂಬರ್ 27 ರಂದು ಇದರ ಬಗ್ಗೆ ಶಾಸನಾತ್ಮಕ ತೀರ್ಮಾನ ಕೈಗೊಳ್ಳಲಾಯಿತು. ಹೀಗಾಗಿ ಈ ದಿನವನ್ನು “ವಿಶ್ವ ಪ್ರವಾಸಿ ದಿನ”ವನ್ನಾಗಿ ಆಚರಿಸಲಾಗುತ್ತಿದೆ. ಇದು ಪ್ರವಾಸೋದ್ಯಮ ಕ್ಷೇತ್ರದಲ್ಲಿ ಒಂದು ಮೈಲಿಗಲ್ಲಾಗಿದೆ.

ಪ್ರವಾಸವು ಪ್ರಾಚೀನ ಕಾಲದಿಂದಲೂ ಸಾಗಿ ಬಂದ ಪರಂಪರೆಯಾಗಿದೆ. ಆದಿಮಾನವನು ತನ್ನ ಆಹಾರಕ್ಕಾಗಿ ಮತ್ತು ಪರಿಸರದಲ್ಲಾಗುವ ಬದಲಾವಣೆಗಾಗಿ ತನ್ನ ನೆಲೆ ಬದಲಾಯಿಸಿ ಪ್ರವಾಸ ಕೈಗೊಂಡನು. ಪ್ರಾಣಿ, ಪಕ್ಷಿಗಳು ತಮ್ಮ ಆಹಾರ, ಸಂತಾನ, ಸಂರಕ್ಷಣೆಗಾಗಿ ತಮ್ಮ ನೆಲೆ ಬದಲಾಯಿಸಿ ಪ್ರವಾಸ ಕೈಗೊಂಡವು. ಆಧುನಿಕ ಮಾನವರು ನೆಮ್ಮದಿ, ಹೊಸ ಚೈತನ್ಯಕ್ಕಾಗಿ, ವ್ಯಾಪಾರ, ಅಧ್ಯಯನ, ಸಾಂಸ್ಕøತಿಕ ವಿನಿಮಯ, ಹೀಗೆ ಹಲವಾರು ಕಾರಣಗಳಿಂದ ಇಂದು ಪ್ರವಾಸ ಕೈಗೊಳ್ಳುತ್ತಿದ್ದಾರೆ. ಹೀಗೆ ಸ್ಥಳ ಬದಲಾವಣೆಯಿಂದ ಮನಸ್ಸಿಗೆ ಹೊಸ ಚೈತನ್ಯ ತರುವುದಲ್ಲದೇ ಹಲವಾರು ಉನ್ನತ ಕಾರ್ಯಗಳಿಗೆ ಪ್ರೇರೇಪಣೆ ದೊರೆಯುವುದು.

ಪ್ರವಾಸವೆಂದರೆ ಮನರಂಜನೆಗಾಗಿಯೋ, ಬಿಡುವುನಲ್ಲಿಯೋ, ಧಾರ್ಮಿಕ-ಕೌಟುಂಬಿಕ ಅಥವಾ ಉದ್ಯೋಗದ ಉದ್ದೇಶಗಳಿಗಾಗಿಯೋ ಅಲ್ಪಕಾಲಾವಧಿಯಲ್ಲಿ ಹಮ್ಮಿಕೊಳ್ಳುವ ಪ್ರಯಾಣವೇ ಪ್ರವಾಸವಾಗಿದೆ. ಸಾಮಾನ್ಯವಾಗಿ ಪ್ರವಾಸೋದ್ಯಮವು ಅಂತರಾಷ್ಟ್ರೀಯ ಪ್ರಯಾಣದೊಂದಿಗೆ ಸಂಬಂಧ ಹೊಂದಿದ್ದರೂ ದೇಶದೊಳಗೆಯೇ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಪ್ರಯಾಣಿಸುವುದಕ್ಕೂ ಅನ್ವಯವಾಗುವುದು. ವಿಶ್ವ ಪ್ರವಾಸೋದ್ಯಮ ಸಂಸ್ಥೆಯು ಪ್ರವಾಸಿ ಎನ್ನುವ ಪದಕ್ಕೆ “ತಮ್ಮ ಮಾಮೂಲಿ ಪರಿಸರದಿಂದ ಹೊರಹೋಗಿ ಒಂದು ವರ್ಷಕ್ಕಿಂತ ಹೆಚ್ಚಾಗದಂತೆ ತಮ್ಮ ಬಿಡುವನ್ನು ಕಳೆಯುವ, ಉದ್ಯೋಗ ನಡೆಸುವ, ಇಲ್ಲವೇ ಇನ್ನಾವುದಾದರೂ ಕೆಲಸಮಾಡುವ ಜನ”ಎಂದು ಹೇಳಿದೆ.

ಇಂದು ಪ್ರವಾಸೋದ್ಯಮವು ಒಂದು ಜಾಗತಿಕ ಮಟ್ಟದ ವಿರಾಮಕಾಲದ ಚಟುವಟಿಕೆಯಾಗಿದೆ. ಪ್ರವಾಸೋದ್ಯಮವು ದೇಶದೊಳಗಿನದೂ ಆಗಬಹುದು ವಿದೇಶಿಯೂ ಆಗಬಹುದು. ಹಾಗೆಯೇ ದೇಶದ ಪ್ರವಾಸೋದ್ಯಮವನ್ನು ಒಳಬರುವ ಮತ್ತು ಹೊರಹೋಗುವ ಪ್ರವಾಸೋದ್ಯಮ ಎಂದು ವಿಭಾಗಿಸಬಹುದು. ಇಂದು ಒಳಬರುವ ಪ್ರವಾಸೋದ್ಯಮವು ಹಲವು ದೇಶಗಳಿಗೆ ಆದಾಯದ ಮೂಲವಾಗಿದೆ. ಅದರಲ್ಲೂ ಒಂದು ದೇಶ ಒಟ್ಟಾರೆಯಾಗಿ ಗಳಿಸುವ ವಿದೇಶಿ ವಿನಿಮಯದ ದೊಡ್ಡ ಮೂಲವಾಗಿದೆ. ಅದು ಸ್ಥಳೀಯ ಆರ್ಥಿಕತೆಯ ಮೇಲೆ ಗಮನಾರ್ಹವಾದ ಪರಿಣಾಮ ಬೀರುವುದಲ್ಲದೇ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಯಾವಾಗಲೂ ಭೇಟಿ ನೀಡುವ ಸ್ಥಳದಲ್ಲಿ ಸ್ಥಳೀಯ ಉದ್ಯೋಗದ ಮೇಲೂ ಉತ್ತಮ ಪರಿಣಾಮ ಬೀರುವುದು.

ಜಾಗತಿಕ ಭೂಪಟದತ್ತ ಒಮ್ಮೆ ಕಣ್ಣು ಹಾಯಿಸಿದಾಗ ಭಾರತವು ನೈಸರ್ಗಿಕವಾಗಿ ಹಾಗೂ ಸಾಂಸ್ಕøತಿಕವಾಗಿ ಸಂಪನ್ನವಾಗಿರುವುದು ಸುವ್ಯಕ್ತ. ಪ್ರಾಕೃತಿಕ ಸೌಂದರ್ಯ, ಸಾಂಸ್ಕøತಿಕ ಪರಂಪರೆ, ಐತಿಹಾಸಿಕ ಸ್ಮಾರಕಗಳು, ನಿಬ್ಬೆರಗಾಗಿಸುವ ಕಲಾ ಚಾತುರ್ಯ, ವಿಶಿಷ್ಟ ಸಂಪ್ರದಾಯಗಳು, ದಾರ್ಮಿಕ ನಂಬಿಕೆಗಳು, ರುಚಿಕರ ಹಾಗೂ ಆರೋಗ್ಯಕರ ಆಹಾರ, ವಿಹಾರ, ಮೊದಲಾದ ಅಂಶಗಳು ಭಾರತದತ್ತ ಪ್ರವಾಸಿಗರನ್ನು ಆಕರ್ಶಿಸುತ್ತವೆ. ಭಾರತವು ಶ್ರೀಮಂತ ಪರಂಪರೆಯನ್ನು ಹೊಂದಿದ್ದು ಯಾವಾಗಲೂ ಪ್ರವಾಸಿಗರನ್ನು ರಂಜಿಸುತ್ತಿದೆ. ಮರಳುಗಾಡು, ಸಮುದ್ರ, ನದಿ, ಕಾಡು, ಪರ್ವತ, ಹೂ-ಹಣ್ಣು, ವನ್ಯಜೀವಿಗಳನ್ನೊಳಗೊಂಡ ಎಲ್ಲಾ ಬಗೆಯ ಪ್ರಕೃತಿಸೊಬಗನ್ನು ಒಂದೇ ಬೌಗೋಳಿಕ ಗಡಿಯೊಳಗೆ ಹೊಂದಿರುವ ವೈವಿದ್ಯತೆಯ ಆದರ ಈ ಭಾರತವಾಗಿದೆ. ಭಾರತಕ್ಕೆ ಭೇಟಿ ನೀಡುವ ಯಾರಿಗೇ ಆಗಲಿ ಒಂದೊಂದು ಪ್ರದೇಶದಲ್ಲಿ ಒಂದೊಂದು ಬಗೆಯ ಸಂಸ್ಕøತಿ, ಉಡುಗೆ-ತೊಡುಗೆ, ಬಗೆ ಬಗೆಯ ಆಹಾರ ಕ್ರಮಗಳು, ಸಸ್ಯ, ಪ್ರಾಣಿ ಪ್ರಬೇಧಗಳ ದರ್ಶನವಾಗುತ್ತದೆ. ಹೀಗಾಗಿ ಸಂಸ್ಕøತಿ, ಸಂಪ್ರದಾಯ ಮತ್ತು ಶ್ರೀಮಂತ ಪರಂಪರೆಯ ಈ ಸಂಯೋಜನೆಯನ್ನು ಅನುಭವಿಸಲು ಬಯಸುವ ಪ್ರವಾಸಿಗರಿಗೆ ಭಾರತವು ಹೇಳಿ ಮಾಡಿಸಿದ ತಾಣವಾಗಿದೆ. ಇದಲ್ಲದೇ ವಿದೇಶಿ ಪ್ರವಾಸಿಗರು ಪ್ರಪಂಚದಾದ್ಯಂತ ಈ ದೇಶದ ಹಿರಿಮೆಯನ್ನು ಸಾರುವ “ಭಾರತೀಯ ಸಂಸ್ಕøತಿಯ ರಾಯಭಾರಿಗಳು”ಆಗಿರುತ್ತಾರೆ.

ಸಮಾಜದ ಎಲ್ಲ ವರ್ಗಗಳ ಎಲ್ಲ ವಯಸ್ಸಿನ ವಿವಿಧ ಆಸಕ್ತಿಯುಳ್ಳ ಎಲ್ಲ ಜನರಿಗೂ ಸೂಕ್ತವಾದ ವೈವಿಧ್ಯಮಯ ಪ್ರವಾಸೋದ್ಯಮಗಳಿವೆ. ಧಾರ್ಮಿಕ, ಸಾಂಸ್ಕøತಿಕ, ಐತಿಹಾಸಿಕ, ಶೈಕ್ಷಣಿಕ, ಪಾರಂಪರಿಕ ಪ್ರವಾಸೋದ್ಯಮಗಳು ಒಂದು ಕಡೆಯಾದರೆ, ನೈಸರ್ಗಿಕ ಸಂಪನ್ಮೂಲಗಳಿಗೆ ಸಂಬಂಧಿಸಿದಂತೆ ಹಿಮಾಲಯ ಪರ್ವತ, ಪಶ್ಚಿಮ ಘಟ್ಟಗಳು, ಕಡಲ ತೀರ, ಸರೋವರ, ಕ್ರೀಡಾ,ಸಾಹಸ, ಮೊದಲಾದ ಪ್ರವಾಸೋದ್ಯಮಗಳಿದ್ದರೂ ಕೂಡ ನಾವುಗಳು, ನಮ್ಮಲ್ಲಿರುವ ವೈವಿದ್ಯಮಯ ಪ್ರವಾಸಿ ತಾಣಗಳ ಪರಿಚಯವನ್ನು ಪ್ರಚಾರ ಮಾಡುವಲ್ಲಿ ನಾವು ವಿಫಲಾರಾಗುತ್ತಿದ್ದೇವೆ. ಇದು ಮಾರುಕಟ್ಟೆಯ ಯುಗ. ಹಲವಾರು ರಾಷ್ಟ್ರಗಳು ಆಕರ್ಷಣೀಯವಲ್ಲದ ಪ್ರವಾಸಿ ತಾಣಗಳನ್ನು ಶೃಂಗಾರಗೊಳಿಸಿ ಪ್ರಚಾರ ಮಾಡುತ್ತಿವೆ. ಹೀಗಾಗಿ ನಾವು ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ ನಮ್ಮ ಪ್ರವಾಸಿ ತಾಣಗಳನ್ನು ಹೊರದೇಶಗಳಿಗೆ ಪರಿಚಯಿಸಬೇಕು. ನಮ್ಮಲ್ಲಿರುವ ವೈವಿಧ್ಯಮಯ ಸಂಸ್ಕøತಿ ಹಾಗೂ ಅದ್ಭುತ ಪ್ರವಾಸಿ ತಾಣಗಳನ್ನು ಇನ್ನೂ ಹೆಚ್ಚು ಆಕರ್ಶಣೆಗೊಳಿಸಿ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಮಾಡಬೇಕು.

ಪ್ರವಾಸೋದ್ದಿಮೆಯ ಯಶಸ್ಸು ಅನೇಕ ಸೇವಾ ಕ್ಷೇತ್ರಗಳ ಸಾಮಥ್ರ್ಯಗಳೊಂದಿಗೆ ತಳುಕು ಹಾಕಿಕೊಂಡಿದೆ. ಸಾರಿಗೆ, ವಸತಿ, ಊಟೋಪಚಾರ, ಮನರಂಜನೆ ಮೊದಲಾದ ಕ್ಷೇತ್ರಗಳಿಗೆ ಒತ್ತು ನೀಡುವುದು ಅಗತ್ಯವಾಗಿದೆ. ಹೊಸ ಹೊಸ ಅಭಿರುಚಿಯ ಪ್ರವಾಸಿ ತಾಣಗಳನ್ನು ಗುರುತಿಸುವ, ಬೆಳೆಸುವ, ಕಾರ್ಯವಾಗಬೇಕಿದೆ. ಪ್ರಖ್ಯಾತ ತತ್ವಜ್ಞಾನಿ ಫಲೋಸೋ ಲೋ ತುಜು ಹೇಳುವಂತೆ ‘ಸಾವಿರ ಮೈಲುಗಳ ಪ್ರಯಾಣವು ಒಂದು ಹೆಜ್ಜೆಯಿಂದ ಪ್ರಾರಂಭವಾಗುತ್ತದೆ’ ಈ ದಿಸೆಯಲ್ಲಿ ಭರತವು ಪ್ರವಾಸೋದ್ದಿಮೆ ಸಾಮಥ್ರ್ಯ ಬಳಕೆಗೆ ಈಗಾಗಲೇ ತನ್ನ ಪ್ರಥಮ ಹೆಜ್ಜೆಯಿರಿಸಿದೆ.

-ಎಂ.ಎಚ್.ಮೊಕಾಶಿ


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x