ಆಗ್ಲೇ ನಮ್ಮ ಪಯಣ ಅಥವಾ ನಡಿಗೆ ಸ್ಟಾರ್ಟ ಆಗಿ ೪ ಘಂಟೆಗಳ ಮೇಲಾಗಿತ್ತು ಅನ್ಸುತ್ತೆ, ನಡಿತಾ ಹಾಗೇ ಮುಂದೆ ಹೋದೊರಿಗೆ ಕಣ್ಣಿಗ್ ಬಿತ್ತು ನೋಡಿ ಗೋವಾ ರಾಜ್ಯದ ಭಾಗಕ್ಕೆ ಒಳಪಟ್ಟಿದ್ದ ಒಂದು ಸಣ್ಣ ರೈಲು ನಿಲ್ದಾಣ. ಅಲ್ಲೆ ಹಳಿಗಳ ದುರಸ್ಥಿ ಕಾರ್ಯ ನಿರ್ವಹಿಸುತ್ತಿದ್ದ ಕಾರ್ಮಿಕರನ್ನು ಇನ್ನೆಷ್ಟು ದೂರ ಎಂದು ವಿಚಾರಿಸಿದಾಗ ಅವರು ಹೇಳಿದ್ದು ಕೇಳಿ ನಮ್ ಹುಡ್ಗುರೆಲ್ಲಾ ತಕ್ಷಣ ಹೌಹಾರಿ ಉಸ್ಸಪ್ಪಾ ಎಂದ್ರು..ನಾವಿನ್ನು ಆ ರೈಲ್ವೇ ಸ್ಟೇಷನ್ ಇಂದ ಸುಮಾರು ೮ ಕಿ.ಮೀ ಕ್ರಮಿಸಬೇಕಿತ್ತು. ಯಾವ್ದಾದ್ರು ಗೂಡ್ಸ ಗಾಡಿ ಬರತ್ತೆ ಹತ್ಕೊಂಡು ಹೋಗ್ರಪ್ಪಾ ಅಂತಾ ಹಿರಿಯರೊಬ್ಬರು ಹೇಳಿದ್ರೂ ಆ ಗೂಡ್ಸ ಗಾಡಿ ಎಷ್ಟೊತ್ತಿಗೆ ಬರತ್ತೊ ಕಾಯೊದ್ ಯಾರು ಅಂತ ಮತ್ತೆ ನಡೆದೇ ನಮ್ಮ ಹಾದಿ ಕ್ರಮಿಸೋದು ಅಂತ ತೀರ್ಮಾನ ಮಾಡಿ ಮತ್ತೆ ರೈಲ್ವೇ ಹಳಿಗಳ ಮೇಲೆ ಹೆಜ್ಜೆ ಇಡೋಕೆ ಶುರು ಮಾಡಿದ್ವಿ.
ಹೆಜ್ಜೆ ಸಾಗಿದಷ್ಟು ಕಾಡು ದಟ್ಟವಾಗ್ತಾನೆ ಇತ್ತು ಜೊತೆಗೆ ಮಳೆ ಕೂಡ ಸುರಿತಾನೆ ಇತ್ತೆ ಹೊರತು ಒಂದು ಚೂರು ಕಮ್ಮಿ ಆಗಿರ್‍ಲಿಲ್ಲ ತೊಟ್ಟ ಬಟ್ಟೆ ಒದ್ದೆಯಾಗಿ ನೀರು ತೊಟ್ಟಿಕ್ಕೋಕೆ ಶುರುವಿಟ್ಟು ಅದೆಷ್ಟೋ ಹೊತ್ತಾಗಿತ್ತು. ಸಾಗ್ತಾ ಇದ್ದ ದಾರಿ ಹಾವು ಮಲಗಿದ್ದ ರೀತೀಲಿ ಹೆಜ್ಜೆ ಹೆಜ್ಜೆಗು ಜೊತೆಗೇ ಬರ್‍ತಾ ಇದ್ದ ಹಾಗೆ ಬಾಸವಾಗ್ತಾ ಇದ್ದ ರೈಲು ಹಳಿ, ಮಾನವ ನಿರ್ಮಿತ ಸುರಂಗ ಮಾರ್ಗಗಳು ಇವನ್ನೆಲ್ಲಾ ನಿರ್ಮಿಸಿರೋ ಕೈಗಳ ಶ್ರಮವನ್ನ ನೆನದ ಮನ ತನ್ನಷ್ಟಕ್ಕೆ ತಾನೇ ಅವರಿಗೆಲ್ಲಾ ವಂದನೆ ಸಲ್ಲಿಸಿತ್ತು.
ಸಾಗಿದ ದಾರೀಲಿ ನಮ್ ಜೊತೇನೆ ಅದೆಷ್ಟೋ ರೈಲು ಗಾಡಿಗಳು ಅತ್ತ ಕಡೆಇಂದ ಇತ್ತ ಕಡೆಗೆ ಸಾಗ್ತಾ ಇದ್ವು, ಈ ರೈಲು ಗಾಡಿಗಳನ್ನು ಪ್ರಯಾಣದ ಜೊತೇಲಿ ಹಳಿಗಳ ಪಕ್ಕದಲ್ಲಿ ನಿಂತು ಹತ್ತಿರದಿಂದ ಆ ರೈಲು ಗಾಡಿಗಳನ್ನ ನೋಡೇದೆ ಒಂದು ಖುಷಿ ವಿಷಯ ಆಗಿತ್ತು. ಮೊದಲೇ ಹೇಳಿದ್ದೆ ಇದು ಪಶ್ಚಿಮ ಘಟ್ಟಗಳ ಮಡಿಲಿನಲ್ಲಿ ಇರೋ ರಮಣೀಯ ತಾಣ ಅಂತ ಘಟ್ಟ ಪ್ರದೇಶವಾಗಿದ್ದರಿಂದ ರೈಲು ಹಳಿ ನಿರ್ಮಿಸಿರೋದೆ ಒಂದು ಸಾಹಸವಾದರೆ ಇನ್ನು ರೈಲುಗಳ ಸಂಚಾರ ಅತೀ ಪ್ರಯಾಸಕರ ಆದ್ದರಿಂದ ಇಲ್ಲಿ ಸಾಗುವ ರೈಲುಗಳಿಗೆ ೨ ಇಂಜಿನ್‌ಗಳ ಸಹಾಯ ಅತ್ಯವಶ್ಯಕ ಒಂದು ತಳ್ಳಲು ಮತ್ತೊಂದು ಮುಂಭಾಗದಿಂದ ಎಳೆಯಲು ಈ ದೃಶ್ಯವಂತೂ ಇನ್ನು ಮನಮೋಹಕ.
ಒಂದು ಇಂಜಿನ್ ಹೀಗೆ ಸಾಗ್ತು ಅದನ್ನ ನೋಡಿ ಸ್ವಲ್ಪ ಧಣಿವಾರಿಸಿಕೊಳ್ಳೋಣ ಅಂತ ಕೂತ್ವಿ, ಏನಾಯ್ತೋ ಅನ್ನೋ ಹಾಗೆ ಎಲ್ಲಿರಿಗಿಂತ ಹಿಂದಿದ್ದ ಮಾರ್ಟಿನ್ ಓಡೋಡಿ ಬಂದ, ಏನಾಯ್ತೋ ಅಂತ ಕೂತಿದ್ ನಾವು ದಿಗಿಲುಗೊಂಡು ಎದ್ದು ಕೂತ್ರೆ ಏದುಸಿರು ಬಿಡ್ತಾ ಕಾಲಿಗೆ ಅಂಟಿಕೊಂಡಿದ್ದ ಒಂದು ಜಿಗಣೆನಾ ( ನಮ್ಮ ಮಲೆನಾಡಲ್ಲಿ ಇದನ್ನ ಇಂಬಳ ಅಂತ ಕರೆದರೆ, ಉತತ್ತರ ಕನ್ನಡ ಜಿಲ್ಲೆಯಲ್ಲಿ ಉಂಬಳ ಅಂತಾರೆ) ಅದು ರಕ್ತ ಹೀರ್‍ತಾ ಇದ್ರು ಅದನ್ನ ನಮಗೆಲ್ಲಾ ತೋರ್‍ಸೋಕೆ ಅಂತಾನೆ ಓಡೋಡಿ ಬಂದಿದ್ದ, ಅವನು ತಂದ ಈ ಹೊಸ ಸುದ್ದಿ ಮತ್ತೆ ಎಲ್ಲರಿಗೂ ದಿಗಿಲು ಹುಟ್ಟಿಸಿತ್ತು ಎಲ್ಲರು ನಮ್ಮ ನಮ್ಮ ಕೈ ಕಾಲು ನೋಡಿಕೊಳ್ಳೋಕೆ ಶುರು ಮಾಡಿದ್ವಿ, ಪಾಪ ಓಡಿ ಬಂದು ಸುದ್ದಿ ಮುಟ್ಟಿಸಿದ್ದ ಮಾರ್ಟಿನ್‌ನ ಬಿಟ್ಟು ಯಾರ ರಕ್ತಾನೂ ಈ ಜಿಗಣೆಗಳಿಗೆ ರುಚಿಸಿರಲಿಲ್ಲ ಅಂತ ಕಾಣತ್ತೆ ಅದಕೆ ಅವು ಯಾರಿಗೂ ಹಿಡಿದಿರಲಿಲ್ಲ.
ಈ ಸಂಗತಿಯಿಂದ ಮಾರ್ಟಿನ್ ಮತ್ತೆ ಎಲ್ಲರನ್ನು ನಗೆಗಡಲಲ್ಲಿ ತೇಲಿಸಿದ್ದ, ಮತ್ತೆ ಹೆಜ್ಜೆಗಳು ಹಳಿಗಳ ಜೊತೆಯಾಗಿದ್ವು,ಅಲ್ಲಿ ಕಂಡ ಒಂದು ಕಬ್ಬಿಣದ ಸೇತುವೆ ತುಂಬಾ ಆಕರ್ಷಕವಾಗಿತ್ತು ಅದು ಒಂದು ಸುರಂಗಮಾರ್ಗ ಮುಗಿದ ನಂತರವೇ ಇತ್ತು ಹೀಗೆ ಮುಂದೆ ಸಾಗಿದ ನಮಗೆ ನಿಸರ್ಗದ ನೀರವತೆಯ ನಡುವೆ ಅಬ್ಬರದ ಬೋರ್ಗರೆತ ಕೇಳಿ ಜಲಪಾತ ಬಂದೇ ಬಿಡ್ತು ಅಂತ ಧಣಿದ ಕಾಲುಗಳು ಸೋತ ಜೋಲು ಮುಖಗಳು ಹಿರಿ ಹಿರಿ ಹಿಗ್ಗಿದ್ದವು, ಬಿರುಸಾಗಿ ಹೆಜ್ಜೆ ಹಾಕಿ ಶಬ್ದ ಬರುತ್ತಿದ್ದ ದಿಕ್ಕಿನತ್ತ ಸಾಗಿದರೆ ಮತ್ತೊಂದು ನಿರಾಸೆ ಎಲ್ಲರನ್ನು ಕಾದಿತ್ತು ಅಲ್ಲಿ ನಾವು ಕಂಡ ಜಲಧಾರೆ ಅದು ಧೂದ್ ಸಾಗರ್ ಜಲಧಾರೆಯಾಗಿರಲಿಲ್ಲ ಅದು ಒಂದು ಪುಟ್ಟ ಬಹು ರಭಸವಾಗಿ ಬಳುಕುತಿದ್ದ ಸುಂದರ ಜಲಧಾರೆಯಾಗಿತ್ತು, ಅದಕ್ಕೆ ನಮ್ಮ ತಂಡವೇ ಒಂದು ನಾಮಕರಣ ಮಾಡಿತ್ತು ಅದರ ಹೆಸರು ಘೀ ಸಾಗರ್ ಎಂದಾಗಿತ್ತು. ಜಲಧಾರೆಗೆ ಕಲ್ಲೆಸದು ಸ್ವಲ್ಪ ಮೋಜಿನ ನಂತರ ಮತ್ತೆ ರೈಲು ಹಳಿಗಳು ನಮ್ಮನ್ನು ಕೂಗಿ ಕರೆದಿದ್ದವು.
ಜಿಗಣೆ, ಸುಸ್ತು ಎಲ್ಲಾ ಸಮಸ್ಯೆಗಳ ಜೊತೆ ಮತ್ತೊಂದು ಸಮಸ್ಯೆ ನಮಗೆ ಎದುರಾಗಿತ್ತು, ಒಬ್ಬೊಬ್ಬರದೆ ಶೂನ ಸೌಲ್ ಕಿತ್ತು ಹೋಗುತ್ತಾ ಬಂದಿದ್ದವು, ಬಸವೇಶ್‌ನ ಶೂ ಸೌಲ್ ಕಿತ್ತೇ ಹೋಗಿತ್ತು. ಕಿತ್ತ ಸೌಲಗಳನ್ನ ಹಾಗೂ ಕೀಳುವ ಹಂತದಲ್ಲಿದ್ದ ಶೂ ಸೌಲ್‌ಗಳನ್ನ ಒಂದೊದಾಗಿ ಸರಿಪಡಿಸಿ, ಜೀವ ಹಿಂಡುವಂತಿದ್ದ ಕಾಲು ನೋವಿನ ನಡುವೆಯೇ ಗುರಿ ಮುಟ್ಟಿ ತೀರೀಯೇ ಬೇಕೆಂಬ ಬೃಹತ್ ಬಯಕೆಯೊಂದಿಗೆ ಮತ್ತೆ ಹೆಜ್ಜೆಯ ಮೇಲೊಂದು ಹೆಜ್ಜೆ ಇಢಲು ಆರಂಭಿಸಿದ್ದೆವು. ಅಂತೂ ನಾವು ದೂದ್ ಸಾಗರ್ ರೈಲ್ವೇ ನಿಲ್ದಾಣವನ್ನು ತಲುಪಿದ್ದೆವು ಅಲ್ಲಿಂದ ಕೇವಲ ಒಂದೇ ಒಂದು ಕಿ.ಮೀ ಗಳಷ್ಟು ಮಾತ್ರವೇ ನಮ್ಮ ಪ್ರಯಾಣ ಉಳದಿತ್ತು, ಆಗ ಅಲ್ಲಿಗೆ ಬಂದ ಒಂದು ಕಿಕ್ಕಿರಿದು ತುಂಬಿದ್ದ ರೈಲು ಗಾಡಿಯಿಂದಿಳಿದ ಜನಸಾಗರದ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು, ಆ ಜನ ಸಂದಣಿಯ ಹರ್ಷೋದ್ಗಾರ ನಮ್ಮನ್ನು ಇನ್ನಷ್ಟು ಪುಳಕಿತರನ್ನಾಗಿಸಿತ್ತು ಜನ ಸಂದಣಿಯ ನಡುವೆಯೇ ನಮ್ಮ ಕಾತರತೆಯ ಹೆಜ್ಜೆಗಳು ಇನ್ನಷ್ಟು ಬಿರುಸಾಗಿ ಸಾಗಿದ್ದವು. ಮತ್ತೊಂದು ಸುರಂಗವ ದಾಟಿ ಇನ್ನಷ್ಟು ದೂರ ಸಾಗಿದ್ದೆವು ಆಗ ಕಿವಿಗೆ ಬಿತ್ತು ನೋಡಿ ಕಿವಿ ಗಡಕಿಚ್ಚಿಸುವಂತಹ ಆರ್ಭಟ, ಜೊತೆಗೆ ದಟ್ಟ ಹೊಗೆ ಆಕಾಶದೆತ್ತರಕ್ಕೆ ಹಬ್ಬಿತ್ತು ಜಲಪಾತವನ್ನು ಇನ್ನು ಕಣ್‌ತುಂಬಿಕೊಳ್ಳುವ ಮೊದಲೇ ಆಗುತ್ತಿದ್ದ ಹರ್ಷಕ್ಕೆ ಪಾರವೇ ಇರಲಿಲ್ಲ.
ಕನಸು ನನಸಾಗಿತ್ತು ಕನಸಲ್ಲಿ ಕಂಡ ಸ್ವರ್ಗ ಕಣ್ಣೆದುರಿಗಿತ್ತು ಆದರೂ ಇನ್ನು ನಾವು ಎಲ್ಲಿದ್ದೇವೆ ಎಂಬ ಭ್ರಮೆ ನನ್ನನ್ನಾವರಿಸಿತ್ತು, ಕಣ್ಣೆದುರು ಹಾಲಿನಂತೆಯೇ ಬಳುಕಿ ವಯ್ಯಾರದಿಂದ ಭಾಗಿ ಬಳುಕಿ ಭೋರ್ಗರೆಯುತಿದ್ದ ಹಾಲ್ನೊರೆಯ ಸುಂದರ ಜಲಧಾರೆ ಅದೇ ದೂದ್ ಸಾಗರ್ ಜಲಧಾರೆ. ನಿಸರ್ಗದ ರಮಣೀಯ ಅದ್ಭತ ಕಣ್ಣೆದುರಿಗಿದ್ದದ್ದು ಸತತ ೬ ರಿಂದ ೭ ಘಂಟೆಗಳಷ್ಟು ಸಮಯ ಸಾಗಿ ಬಂದಿದ್ದ ೧೭ ಕಿ.ಮೀ ಪ್ರಯಾಸಕರ ಹಾದಿಯ ಸುಸ್ತನ್ನೆಲ್ಲಾ ಕ್ಷಣದಲ್ಲಿ ಮರೆಸಿತ್ತು.
ಆ ಸುಂದರ ದೂದ್ ಸಾಗರ್ ಜಲಧಾರೆ ನಾವು ಮೈನಾ ಚಿತ್ರದಲ್ಲಿ ನೋಡಿದ್ದಕ್ಕಿಂತ ಅತೀ ಸುಂದರವಾಗಿತ್ತು. ಬೆಳ್ಳನೆ ಹಾಲ್ನೊರೆಯಂತೆ ಬಳುಕುತಿದ್ದ ಜಲಸುಂದರಿಯನ್ನು ಅದಕ್ಕೆ ನೇರವಾಗಿ ಕಟ್ಟಿದ್ದ ಕಟ್ಟೆಯ ಮೇಲೆ ನಿಂತು ನೋಡಲು ಎರಡೂ ಕಣ್ಣು ಸಾಲದು, ಆ ಕಟ್ಟೆಯ ಪಕ್ಕದಲ್ಲೆ ಸಣ್ಣ ಸೇತುವೆಯ ಮೇಲೆ ರೈಲು ಹಳಿ ಸಾಗುತಿತ್ತು, ಆ ಸೇತುವೆಯ ಕೆಳಗೆ ಉಳಿದರ್ಧ ಜಲಧಾರೆ ಹರಿಯುತ್ತಿತ್ತು.
ಆ ಜಲಧಾರೆಯನ್ನು ಕಂಡಾಕ್ಷಣ ಮೈನಾ ಚಿತ್ರದಲ್ಲಿ ನಾಯಕಿ ಕೂಗಿದಂತೆ ಕಲರ್ ಫುಲ್ ಎಂದು ಎಷ್ಟು ಬಾರಿ ಚೀರಿದೆವೋ ದೇವನೊಬ್ಬನೇ ಬಲ್ಲ, ಸರಿ ಸುಮಾರು ೩೦ ರಿಂದ ೪೦ ನಿಮಿಷಗಳ ಕಾಲ ಜಲಧಾರೆಯ ಸನ್ನಿಧಿಯಲ್ಲಿ ಹಾಡಿ ಹುಚ್ಚೆದ್ದು ಕುಣಿದು ಕುಪ್ಪಳಿಸಿದ್ದೆವು, ಜಗಳ ಮರೆತು ನಾನು ಸಂತ್ಯ ಬಿಗಿದಪ್ಪಿ ಖುಷಿ ಪಟ್ಟೆವು. ಅಲ್ಲಿ ಮಳೆಯ ನಡುವೆಯೂ ನಾವು ಕ್ಲಿಕ್ಕಿಸಿದ ಫೋಟೋಗಳಿಗೆ ಲೆಕ್ಕವೇ ಇಲ್ಲ ಗುಂಪು ಫೋಟೋ ಅದಾದ ನಂತರ ಒಬ್ಬರಾಗಿ, ಇಬ್ಬಿಬ್ಬರಾಗಿ ತೆಗಿಸಿಕೊಂಡ ಫೋಟೋಗಳಿಗಂತು ಲೆಕ್ಕವಿರಲಿಲ್ಲ.
ಧೂದ್ ಸಾಗರ್ ಜಲಪಾತವನ್ನು ಜಲಧಾರೆಯ ಮುಂದಿರುವ ರೈಲ್ವೇ ಸೇತುವೆಯ ಮೇಲಿಂದ ನೋಡಬಹುದಾದರು ಅಲ್ಲಿಂದ ಕೇವಲ ಧೂದ್ ಸಾಗರ್ ಜಲಪಾತದ ಅರ್ಧ ಜಲಧಾರೆಯನ್ನು ಕಣ್ ತಂಬಿಸಿಕೊಳ್ಳಬಹುದೇ ವಿನಃ ಪೂರ್ತಿ ಜಲಧಾರೆಯನ್ನಲ್ಲ, ಆ ಸ್ಥಳದಿಂದ ನಾವು ಜಲಪಾತ ವೀಕ್ಷಿಸಿದ ಸಂದರ್ಭದಲ್ಲಿ ಎಡಬಿಡದೆ ಸುರಿಯುತ್ತಿದ್ದ ಮಳೆಯ ಕಾರಣ ಜಲಪಾತದ ಸಂಪೂರ್ಣ ದೃಶ್ಯ ಮಂಕು ಮಂಕಾಗೆ ಇತ್ತು, ಜಲಪಾತದ ಪೂರ್ಣ ದೃಶ್ಯ ಸವಿಯಲಿಚ್ಚಿಸುವ ಚಾರಣಿಗರು ಅದೇ ರೈಲು ಹಳಿಗಳ ಮೇಲೆ ಕೊಲ್ಲೆಂ ಮಾರ್ಗವಾಗಿ ಸುಮಾರು ಒಂದು ಕಿ.ಮೀ ಗಳಷ್ಟು ಕ್ರಮಿಸಿದರೆ ಒಂದು ವೀಕ್ಷಣಾ ಸ್ಥಳ ದೊರಕುತ್ತದೆ ಅಲ್ಲಿಂದ ರೈಲು ಸೇತುವೆಯ ನಡುವಿಂದ ಧುಮುಕುವ ಸಂಪೂರ್ಣ ಜಲ ಸುಂದರಿಯನ್ನು ಕಣ್ ತುಂಬಿಕೊಳ್ಳಬಹುದಾಗಿದೆ.
ಮೊದಲೇ ನಡೆದು ನಡೆದೂ ಸುಸ್ತಾಗಿದ್ದ ನಾವು ಸೇತುವೆಯ ಬಳಿಯಿಂದಷ್ಟೇ ಜಲಪಾತ ವೀಕ್ಷಿಸಿದೆವೇ ಹೊರೆತು ವೀಕ್ಷಣಾ ಸ್ಥಳದ ಬಳಿ ತೆರಳಿ ವೀಕ್ಷಿಸುವ ಗೋಜಿಗೆ ಹೋಗಲಿಲ್ಲ ಹೋಗುವ ಮನಸಿತ್ತು ಆದರೆ ಕಾಲುಗಳು ಮಾತು ಕೇಳುವ ಸ್ಥಿತಿಯಲ್ಲಿರಲಿಲ್ಲ. ನಿಸರ್ಗದ ಸೌಂದರ್ಯದ ಗಣಿಯನ್ನು ಆಸ್ವಾದಿಸುತ್ತ ಜಗವ ಮರೆತಿದ್ದ ಘಳಿಗೆಯಲ್ಲಿ ಹೊಟ್ಟೆ ಮತ್ತೊಮ್ಮೆ ನಾನಿದ್ದೀನಿ ಅಂತ ಎಲ್ಲರ ಗಮನಾನ ಧಾರವಾಡದಿಂದ ನಾವು ತಂದಿದ್ದ ಬುತ್ತಿ ಗಂಟಿನ ಕಡೆಗೆ ಸೆಳೆದಿತ್ತು. ಸರಿ ಊಟ ಮಾಡೋಣ ಅಂತ ಎಲ್ಲರೂ ಹೊರಟ್ವಿ ನಾಗು ಮತ್ತು ವೆಂಕಿ ಇಲ್ಲೆ ಹೊಗಿ ಬರ್ತಿವಿ ಸ್ವಲ್ಪ ಅಂತ ಹೋದೋರು ತುಂಬಾ ಹೊತ್ತಾದ್ರು ಬರದೇ ಮಿಸ್ ಆಗಿ ಬಿಟ್ರು, ಅವರನ್ನ ಹುಡುಕೋಕೆ ರವಿ ಮತ್ತೆ ಬಾಲು ಹೋದ್ರು ಆದ್ರೆ ಅವರಿಬ್ಬರ ಸುಳಿವೂ ಸಿಗದೇ ವಾಪಾಸ್ಸಾದ್ರು, ಮೊದಲೇ ಹಸಿದು ಕೆರಳಿದ್ದ ಉಳಿದೆಲ್ಲಾವ್ರು ಊಟಕ್ಕೆ ಜಾಗ ಹುಡುಕಿ ಗಂಟ್ ಬಿಚ್ಚಿ ಊಟ ಮಾಡೋಕೆ ಶುರು ಮಾಡಿ ಊಟ ಮುಗಿಸಿ ಬಿಟ್ಟೆವು, ಹಸಿದಿದ್ದ ನಮಗೆ ಯಾವತ್ತು ಇಷ್ಟ ಆಗ್ದೆ ಇರೋ ಜೋಳದ ರೊಟ್ಟಿ ತುಂಬಾನೇ ರುಚಿ ಅನ್ಸಿದ್ದಂತು ಸುಳ್ಳಲ್ಲ, ಪಾಪ ವೆಂಕಿ ಮತ್ತು ನಾಗುಗೆ ನಾವು ಊಟಕ್ಕೆ ಕೂತ ಹೊಸ ಜಾಗ ಗೊತ್ತಿಲ್ಲ ನಮ್ಮನ್ನ ಹುಡುಕೋಕೆ ಪಾಪ ಮೊದ್ಲೇ ಹಸಿದು ಸುಸ್ತಾಗಿದ್ರು ಸಹ ಅವರು ಮತ್ತೆ ೧ ಕಿ.ಮೀ ಹಿಂದಿದ್ದ ಧೂದ್ ಸಾಗರ್ ರೈಲ್ವೇ ನಿಲ್ದಾಣದ ತನಕ ಹೋಗಿ ನೋಡಿ ವಾಪಸ ಬಂದು ಮೊದಲಿದ್ದ ಜಾಗದ ಬಳಿಯೇ ಕೂತಿದ್ರು ಮತ್ತೆ ಅವರಿಬ್ಬರನ್ನ ಊಟ ಮಾಡಿಸಿಕೊಂಡು, ಅಲ್ಲೆ ಬಿಸಿ ಬಿಸಿ ಚಹಾ ಕುಡಿದಾಗ ಚಳಿಗೆ ಬಹಳ ಹಿತ ಎನಿಸಿತ್ತು.
ನಾವು ಧಾರವಾಡದಿಂದ ಸೀಸೆಗಳಲ್ಲಿ ತುಂಬಿಸಿಕೊಂಡು ತಂದಿದ್ದ ನೀರು ನಮ್ಮ ಹಳಿಗಳ ನಡುವಿನ ಪ್ರಯಾಣದಲ್ಲೇ ಖಾಲಿಯಾಗಿ ಹೋಗಿತ್ತು, ಆ ದಟ್ಟ ಕಾನದಲ್ಲಿ ಮಾನವನ ಸಂಚಾರವೇ ವಿರಳವಾಗಿರುವಾಗ ನಮಗ್ಯಾರು ಕೊಡ್ತಾರೆ ಅಲ್ಲಿ ನೀರು, ದಾಹ ಆದಾಗ ಪ್ರಕೃತಿಯಲ್ಲೆ ಅಂದರೆ ಅಲ್ಲೆ ಹರೀತಿದ್ದ ಝರಿಯಲ್ಲಿ ನೀರು ಹಿಡಿದು ಕುಡುದ್ವಿ, ಅಬ್ಬಾ ಅಮೃತಾನೇ ಕುಡಿದ ಹಾಗೆ ಅನ್ಸಿತ್ತು ಅಷ್ಟು ರುಚಿಕರ ಸ್ವಚ್ಚವಾಗಿತ್ತು ಆ ನೀರು ನಗರದ ಬಾಟಲಿಯಲ್ಲಿ ತುಂಬಿಸಿದ ಮಿನರಲ್ ವಾಟರ್ ಈ ನೀರಿನ ಮುಂದೆ ಏನೇನು ಅಲ್ಲ ಅನ್ನಿಸಿತ್ತು.
ನಾವು ಉಟ ಮುಗಿಸಿ ಹೊರಡುವ ವೇಳೆಗೆ ಮಳೆ ಸ್ವಲ್ಪ ವಿಶ್ರಾಂತಿ ಪಡೆದಿತ್ತು, ಆಗ ಜಲಪಾತದ ನಿಚ್ಚಳ ಸುಂದರ ನೋಟವನ್ನು ಸವಿದು ಹೊರಡಲು ಅಣಿಯಾದೆವು, ಅಲ್ಲಿಂದ ಕದಲಲು ಹೆಜ್ಜೆ ತುಂಬಾನೇ ಬಾರವಾಗಿತ್ತು ಆದ್ರೂ ಹೊಗಲೇ ಬೇಕಾದ ಅನಿವಾರ್ಯತೆ ಅಲ್ಲಿಂದ ಕದಲಲೇ ಬೇಕಲ್ವ, ಮತ್ತೆ ಅದೇ ಹಳಿಗಳ ಮೇಲೆ ಬಾರವಾದ ಹೆಜ್ಜೆ ಇಡ್ತ ೫ ಘಂಟೆಯ ಧಾರವಾಡದ ರೈಲಿಗೆ ವಾಪಾಸ್ಸಾಗುವ ಸಲುವಾಗಿ ಮತ್ತೆ ಧೂದ್ ಸಾಗರ್ ರೈಲ್ವೇ ನಿಲ್ದಾಣದ ಕಡೆಗೆ ನಡೆಯಲು ಶುರುವಿಟ್ಟೆವು.
ಇನ್ನೇನು ಕೆಲವೇ ಹೆಜ್ಜೆಗಳಲ್ಲಿ ಧೂದ್ ಸಾಗರ್ ರೈಲ್ವೇ ನಿಲ್ದಾಣ ತಲುಪುತ್ತೇವೆ ಎನ್ನುವಷ್ಟರಲ್ಲಿ ನಿಲ್ದಾಣಕ್ಕೆ ಬಂದ ಒಂದು ರೈಲ್ವೇ ಇಂಜಿನ್‌ಗೆ ಜನ ಹತ್ತುತಾ ಇದ್ರು, ನಮ್ಮ ಗುಂಪಿನಲ್ಲಿದ್ದ ಕೆಲವು ಸ್ನೇಹಿತರು ಸಹ ಆ ರೈಲ್ವೇ ಇಂಜಿನ್‌ನಲ್ಲಿ ಹತ್ತಿ ಸ್ವಲ್ಪ ಹಿಂದಿದ್ದ ನಮ್ಮನ್ನು ಕೂಗಿ ಕರೆದು ಇಂಜಿನ್ ಹತ್ತುವಂತೆ ಸೂಚಿಸಿದರು ನಾವೂ ಕೂಡ ಸೈರನ್ ಮೊಳಗಿಸುತಿದ್ದ ರೈಲ್ವೇ ಇಂಜಿನ್ ಇನ್ನೇನು ಹೊರಟೇ ಬಿಟ್ಟಿತೇನೋ ಎಂದು ಕಾಲು ನೋವನ್ನು ಲೆಕ್ಕಿಸದೆ ವೇಗವಾಗಿ ಓಡಿ ಇಂಜಿನ್ ಹತ್ತಿದ್ದೆವು. ಎಲ್ಲಿಗೆ ಹೋಗುತ್ತಿದ್ದೇವೆ ಎಂಬುದರ ಬಗ್ಗೆ ಯೋಚಿಸುವುದರೊಳಗಾಗಿ ಇಂಜಿನ್ ಹೊರಟೇ ಬಿಟ್ಟಿತ್ತು. ಹಲವಾರು ಬಾರಿ ರೈಲಿನಲ್ಲಿ ಪಯಣಿಸಿದ್ದೆವೇ ಹೊರತು ಇದೇ ಮೊದಲ ಇಂಜಿನ್ ಸವಾರಿಯಾಗಿತ್ತು.
ನಮ್ಮನ್ನು ಹೊತ್ತ ಆ ಇಂಜಿನ್ ಮತ್ತೆ ಅದೇ ಧೂದ್ ಸಾಗರ್ ಜಲಪಾತದ ಕಡೆಗೇ ಹೊರಟಿತ್ತು, ಮತ್ತೆ ರೈಲು ಜಲಪಾತದ ಮುಂದಿನ ಸೇತುವೆಯ ಮೇಲೆ ಸಾಗಬೇಕಾದರೆ ಕಣ್ಣಿನ ಕ್ಯಾಮರಾಗೆ ಸೆರೆ ಸಿಕ್ಕ ಜಲಸುಂದರಿ ಮತ್ತಷ್ಟು ಮೋಹಕವಾಗಿ ಕಂಡಿದ್ದಳು. ಹಾಗೆ ಸಾಗುತ್ತಿದ್ದ ರೈಲು ಗೋವಾ ರಾಜ್ಯದ ಕೊಲ್ಲೆಂನಡೆಗೆ ಸಾಗುತಿತ್ತು. ಮೊದಲೇ ತಿಳಿಸಿದ್ದೆ ಇದೇ ಮಾರ್ಗದಲ್ಲಿ ಜಲಪಾತದ ಸಂಪೂರ್ಣ ವೀಕ್ಷಣಾ ಸ್ಥಳ ದೊರಕುತ್ತದೆ ಎಂದು ನಾವು ನಡೆದು ಹೋಗಲಾಗದಿದ್ದ ಜಾಗಕ್ಕೆ ಇಂಜಿನ್ ನಮ್ಮನ್ನು ಕರೆದೊಯ್ದಿತ್ತು ಅಲ್ಲಿಂದ ಕಂಡ ಜಲಧಾರೆಯ ದೃಶ್ಯ ಇಂದಿಗೂ ಕಣ್ಣ ಮುಂದಿದೆ.
ದಟ್ಟ ಕಾನನದ ನಡುವೆ ಸಾಗುತ್ತಿದ್ದ ಇಂಜಿನ್ ಸಫಾರಿಯ ಮದುರ ಕ್ಷಣಗಳು ಬದುಕಿನ ಅವಿಸ್ಮರಣೀಯ ನೆನಪುಗಳು. ಈ ಹಾದಿಯಲ್ಲೂ ಕೆಲವು ಸುರಂಗ ಮಾರ್ಗಗಳಿವೆ ಆ ಸುರಂಗ ಮಾರ್ಗಗಳ ಕತ್ತಲಿನಲ್ಲಿ ನಾವಿದ್ದ ಇಂಜಿನ್ ಚಲಿಸುತಿದ್ದಾಗ ಆದ ಅನುಭವ ರೋಚಕವಾಗಿದ್ದಲ್ಲದೆ ಸ್ನಾತಕ ಪದವಿಯ ಸಮಯದಲ್ಲಿ ಭಾರತ ಪ್ರವಾಸಕ್ಕೆ ಹೋದಾಗ ಮುಂಬೈ ಸನಿಹದ ಖಂಡಾಲಾ ಘಟ್ಟ ಪ್ರದೇಶದಲ್ಲಿ ರೈಲಿನಲ್ಲಿ ಸುರಂಗ ಮಾರ್ಗದ ನಡುವೆ ಪಯಣಿಸಿದ ನೆನಪು ಮತ್ತೊಮ್ಮೆ ಮರುಕಳಿಸಿತು.
ಮೊದಲೇ ತಿಳಿಸಿದ್ದೆ ಘಟ್ಟ ಪ್ರದೇಶದ ಕಾನನದ ಹಾದಿಯಲ್ಲಿ ರೈಲು ಹಳಿ ಹೇಗಿತ್ತು ಎಂಬುದನ್ನು, ಧೂದ್ ಸಾಗರ್ ರೈಲ್ವೇ ನಿಲ್ದಾಣದಿಂದ ಕೊಲ್ಲೆಂ ರೈಲ್ವೇ ನಿಲ್ದಾಣಕ್ಕಿರುವ ದೂರ ಕೇವಲ ೧೫ ಕಿ,ಮೀ ಗಳಷ್ಟು ಸಾಮಾನ್ಯ ಮಾರ್ಗದಲ್ಲಾದರೆ ಈ ದೂರವನ್ನು ಒಂದು ರೈಲು ೧೦ ನಿಮಿಷಗಳಲ್ಲಿ ಕ್ರಮಿಸಬಹುದು ಆದರೇ ಈ ದುರ್ಗಮ ಹಾದಿಯಲ್ಲಿ ನಾವಿದ್ದ ಇಂಜಿನ್ ತೆಗೆದುಕೊಂಡ ಸಮಯ ಸುಮಾರು ಒಂದು ಘಂಟೆಗಳು ಹಾಗಿತ್ತು ಆ ಕಾನನದ ಹಾದಿ.
ಕೊಲ್ಲೆಂ ತಲುಪಿದ ನಾವು ಅಲ್ಲಿ ಸ್ವಲ್ಪ ಸುಧಾರಿಸಿಕೊಂಡು ಬಟ್ಟೆ ಬದಲಿಸಿ ಗೋವಾ ರಾಜ್ಯ ಸಾರಿಗೆ ಮುಖಾಂತರ ಸನಿಹದ ಮೊಲ್ಲೆಂ ತಲುಪಿದೆವು ಅಲ್ಲಿಂದ ಕರ್ನಾಟಕ ರಾಜ್ಯ ಸಾರಿಗೆ ಮುಲಕ ಬೆಳಗಾವಿಯನ್ನು ತಲುಪಿ ಅಲ್ಲಿಂದ ಧಾರವಾಡ ತಲುಪುವಷ್ಟರಲ್ಲಿ ಘಂಟೆ ರಾತ್ರಿ ೧೨ ದಾಟಿತ್ತು.
ನಗರದ ಜನ ನಿಬಿಡತೆ, ವಾಹನ ದಟ್ಟಣೆ, ಕಲಹ, ಕಳವಳಗಳ ನಡುವಿನ ಬದುಕಿಗೆಕಾನನದ ನಡುವಿನ ಕಲ್ಮಷಗಳಿಲ್ಲದ ಪ್ರಶಾಂತ ಸುಂದರ ನರ್ಭೀತ ಮಡಿಲು, ಹಾಲಿನಂತೆಯೇ ಬಳುಕಿ ಭೋರ್ಗರೆದು ಮುದ ನೀಡಿ ಹರಿಯತಿದ್ದ ಜಲಧಾರೆ ೧ ದಿನದ ಭವದ ಇರುವಿಕೆಯ ಮರೆಸಿತ್ತು. ಬಸವಳಿದ ದೇಹ, ಕಾಲುಗಳ ನೋವಿನೊಡನೆ ರೂಂ ತಲುಪಿ ಬಿಸಿ ನೀರಲ್ಲಿ ಮಿಂದು ಹಾಸಿಗೆಯಲ್ಲಿ ಹೊರಳಿದಾಗ ನಿದ್ದೆ ಕವಿದಿದ್ದೆ ತಿಳಿಯಲಿಲ್ಲ ಅದೆಲ್ಲೋ ದೂರದಲ್ಲಿ ಧೂದ್ ಸಾಗರ್ ಜಲಪಾತದ ಭೋರ್ಗರೆತ ಜೋಗುಳದಂತೆ ಕಿವಿಯಲ್ಲಿ ಮೊರೆಯುತಿತ್ತು. ಆಗ ಮುಚ್ಚಿದ್ದ ಕಣ್ಣು ತೆರದಾಗ ಮರುದಿನದ ಸೂರ್ಯ ಮನೆಯತ್ತ ಹೊರಟಿದ್ದ.
-ನಿಶಾಂತ್ ಜಿ.ಕೆ