ಯಶಸ್ಸಿನ ಗುಟ್ಟು…ಅಧ್ಯವಸಾಯ: ಸುಮನ್ ದೇಸಾಯಿ

ನಾವು ಮಾನವ ಜನ್ಮ ತಳೆದಿದ್ದು ಒಂದೇ ರಾತ್ರಿಯಲ್ಲಲ್ಲ. ಯುಗಯುಗಾಂತರಗಳಲ್ಲಿ ಸುಮಾರು ಎಂಭತ್ನಾಕು ಕೋಟಿ ಜೀವರಾಶಿಯಾಗಿ ಪರಿವರ್ತನೆಯಾಗಿದ್ದೇವೆ,ಈ ಮಾನವ ಜನ್ಮ ಅತ್ಯಂತ ದುರ್ಲಭವಾದುದು.

ನಮ್ಮ ಐದು ಬೆರಳುಗಳು ಹೇಗೆ ಸಮನಾಗಿರುವ್ದಿಲ್ಲವೋ ಹಾಗೆಯೇ ಪ್ರತಿ ಮನುಷ್ಯನ ಆಂತರಿಕ ಶಕ್ತಿಯು ಕೂಡಾ ಭಿನ್ನ ವಿಭಿನ್ನವಾಗಿರುತ್ತದೆ. ಭಗವಂತನ ದಿವ್ಯ ಸನ್ನಿಧಿಯಲ್ಲಿ ಏಕನಿಷ್ಠೆಯಿಂದ ಪ್ರಾರ್ಥನೆ ಮಾಡುವದರಿಂದ ನಮ್ಮಲ್ಲಿಯ ಆಂತರಿಕ ಶಕ್ತಿ ದ್ವಿಗುಣವಾಗುವದರ ಜೊತೆಗೆ ದೇಹಕ್ಕೆ ವಿಶೇಷ ಚೈತನ್ಯ ಲಭಿಸುತ್ತದೆ.ಹಾಗಂತ ಬರೀ ಮೂರೂ ಹೊತ್ತು ಭಗವಂತನ ಮುಂದೆ ಮಂಡಿಯೂರಿ ಪ್ರಾರ್ಥಿಸುವದರಿಂದ ಏನನ್ನು ಸಾಧಿಸಲು ಸಾಧ್ಯವಿಲ್ಲ. ನಾವುಗಳು ಏನನ್ನಾದರು ಸಾಧಿಸಬೇಕಾದರೆ ಸತತ ಪ್ರಯತ್ನ ಮಾಡಲೇಬೇಕು.

ಈ ಸತತ ಪ್ರಯತ್ನವೇ " ಅಧ್ಯವಸಾಯ " . ಹಿಡಿದ ಕಾರ್ಯವನ್ನು ಅಪೂರ್ಣಗೊಳಿಸದೇ ನಿರಂತರವಾಗಿ ಪ್ರಯತ್ನ ಮಾಡುತ್ತಾ ತನ್ನನ್ನೇ ಅದರಲ್ಲಿ ತೊಡಗಿಸಿಕೊಂಡು ಆ ಕೆಲಸದ ಮೇಲೆ ಹಿಡಿತ ಸಾಧಿಸುವುದು  ಅಧ್ಯವಸಾಯಿಯ ಲಕ್ಷಣ. ಜಪಾನಿನವರು ಇದನ್ನು "ಕೆಝೇನ್" ಎಂದು ಕರೆದರು." ಕೈ " ಎಂದರೆ " ಒಳ್ಳೆಯದು ", "ಝೇನ್ " ಎಂದರೆ ಬದಲಾವಣೆ. ಯಾವುದೇ ಕೆಲಸದಲ್ಲಿ ನಿರ್ದಿಷ್ಟ ಫಲಿತಾಂಶ ಬಾರದೇ ಹೋದರು, ಫಲಿತಾಂಶಕ್ಕಾಗಿ ಕಾಯದೇ ಆ  ಕೆಲಸ ಮಾಡಲು ಅತ್ಯಂತ ಸುಲಭವಾದ ಮಾರ್ಗವನ್ನು ಕಂಡುಹಿಡಿಯಲು ಮತ್ತು ಆ ಕೆಲಸದಲ್ಲಿ ಮಹೋನ್ನತಿಯನ್ನು ಸಾಧಿಸಲು ಪ್ರಯತ್ನಿಸಬೇಕು. ಜಪಾನಿಯರ ಮೂಲ ತತ್ವ ಅಡಗಿರುವದೇ ಇಲ್ಲಿ.

ಜಪಾನ ಒಂದು ಪುಟ್ಟ ರಾಷ್ಟ್ರವಾದರು ವಿಜ್ಞಾನದಲ್ಲಿ , ತಂತ್ರಜ್ಞಾನದಲ್ಲಿ ಪರಿಣತಿಯನ್ನು ಸಾಧಿಸಿದ್ದು ನಿಸ್ಸಂಕೋಚವಾಗಿ ಇದೇ ಕಾರಣದಿಂದಾಗಿ ಆಡಳಿತಾತ್ಮಕ ಶಾಸ್ತ್ರದ (ಮ್ಯಾನೇಜಮೆಂಟ) ಗುರುಗಳಾದ ಡೆಮ್ಮಿಂಗ, ಜುರಾನ್ ಮುಂತಾದವರು ಅಮೇರಿಕಾ ಜಪಾನಿಗೆ ಪ್ರಯಾಣ ಬೆಳೆಸಿದ್ದು ತಿಳಿದು ಬಂದಿದೆ. ಯಾವುದೇ ಯಶಸ್ವಿ ಕಾರ್ಯದಲ್ಲಿ ಅದೄಷ್ಟದ ಪಾಲು ಪ್ರತಿಶತ ೨ ರಷ್ಟು ಮಾತ್ರ. ಉಳಿದ ಪ್ರತಿಶತ ೯೮ ರಷ್ಟು ಪ್ರಯತ್ನದ ಫಲವೇ ಆಗಿದೆ. ಜಗತ್ತಿನ ಎಲ್ಲ ಸಿದ್ಧಿ ಸಾಧನೆಗಳಿಗೆ ಪ್ರತಿಭೆ, ಕೌಶಲ್ಯ, ಅದೄಷ್ಟ ಅನುಭವ ಕಾರಣಗಳಾಗಿರಬಹುದು. ಆದರೆ ಅವುಗಳ ಹಿಂದಿರುವದು ಅಧಿಕ ಪ್ರಮಾಣದ ಪ್ರಯತ್ನಶೀಲ ವ್ಯಕ್ತಿತ್ವವೇ ಆಗಿದೆ.

" ಅಧ್ಯವಸಾಯ " ನಿರಂತರ ಪರಿಶ್ರಮದ ವ್ಯವಸಾಯ, ಕಾರ್ಯಸಿದ್ಧಿಯಾಗುವ ವರೆಗೂ ಬಿಡದೇ ಮಾಡುವ ಪ್ರವೄತ್ತಿ. ಎಂಥ ಅಡಚಣೆಗಳನ್ನು ಅಲಕ್ಷಿಸಿ ಉದ್ದೇಶಸಾಧನೆಗೆ ಮುಂದೆ ಸಾಗುವುದೇ,ತೊಡಗಿಸಿಕೊಂಡ ಯಾವುದೇ ಕೆಲಸದಲ್ಲಿ ನಿರಂತರವಾಗಿ ಮುಂದುವರೆಯುವದೇ " ಅಧ್ಯವಸಾಯಿ" ಯ ಲಕ್ಷಣ. ಮಹಾತ್ಮಾ ಗಾಂಧೀಜಿಯವರು ಭಾರತದಿಂದ ಬ್ರಿಟೀಶರನ್ನು ಓಡಿಸಿದ್ದಾಗಲಿ, ತೇನ್ಸಿಂಗ ಗೌರಿಶಂಕರ ಶಿಖರವನ್ನು ಏರಿದ್ದಾಗಲಿ, ವಿಶ್ವೇಶ್ವರಯ್ಯನವರು ಕಾವೇರಿನದಿಗೆ ಆಣೆಕಟ್ಟನ್ನು ನಿರ್ಮಿಸಿದ್ದಾಗಲಿ ಸತತ ಪ್ರಯತ್ನದಿಂದಲೇ, " ಉತ್ತಿಷ್ಠತ ಜಾಗೄತ ಪ್ರಾಪ್ಯವರಾನ್ ನಿಭೋಧತ" ಎಂಬ ಕಠೋಪನಿಷತ್ ವಾಕ್ಯ ಹೇಳುವದೂ ಸತತ ಪ್ರಯತ್ನದ ಮಹತ್ವವನ್ನೇ.

ಒಂದು ಕಿವಿ ಕೇಳದ, ಒಂದು ಕಣ್ಣೂ ಕಾಣದ ಇತಿಹಾಸ ತಜ್ಞ ಎಸ್. ಶ್ರೀಕಂಠಶಾಸ್ತ್ರಿ ಹದಿನೆಂಟು ಭಾಷೆಗಳನ್ನು ಕಲಿತು ಮಹಾಸಂಶೋಧಕರಾಗಿದ್ದು ಪರಿಶ್ರಮದಿಂದ, ಗಳಿಗೆಗೊಮ್ಮೆ ಬಿಕ್ಕುತ್ತಿದ್ದ ಡೆಮಾಸ್ತನೀಸ್ ನಾಲಗೆ ಕೆಳಗೆ ಸಣ್ಣ ಕಲ್ಲೊಂದನ್ನು ಇಟ್ಟುಕೊಂಡು ಕಡಲ ತೀರದಲ್ಲಿ ಕೂಗಿ ಕೂಗಿ ಬಿಕ್ಕಲನ್ನು ಪರಿಹರಿಸಿಕೊಂಡು ಪ್ರಚಂಡ ವಾಗ್ಮಿತೆಯ ವಕೀಲನಾದದ್ದು ತಾಳ್ಮೆಯ ಪ್ರಯತ್ನದಿಂದ. ಹೀಗೇಯೆ ಅದೆಷ್ಟೊ ಉದಾಹರಣೆಗಳು ನಮ್ಮ ಕಣ್ಣ ಮುಂದೆ ಇವೆ. ಚಿಕ್ಕ ಹೆಜ್ಜೆಗಳಿಂದಲೇ ದೀರ್ಘ ಪ್ರಯಾಣ ಸಂಭವ, ಆದ್ದರಿಂದ ಅಧ್ಯವಸಾಯದ ಆದಿಯೆಂದರೆ ಕೆಲಸದ ಆರಂಭ. ಪ್ರಯತ್ನದ ಪ್ರಾರಂಭ, ಬಳಿಕ ಅಧ್ಯವಸಾಯದ ಮುಖ್ಯ ಭಾಗ ಪಟ್ಟು ಹಿಡಿಯುವಿಕೆ, ಅಚಲ ನಿರ್ಧಾರವಾಗಿರುತ್ತದೆ.

ಒಂದು ಮಾತಂತು ಸದಾ ನೆನಪಿನಲ್ಲಿಡಬೇಕಾದದ್ದು, ಅದೇಂದರೆ – " ಸತತ ಪ್ರಯತ್ನಕ್ಕೆ ಅಪಜಯವೆಂಬುದೇ ಇಲ್ಲ. ಆದರದು ವಿಳಂಬದ ಜಯ" ಅಷ್ಟೇ! ನೀವೆನಂತಿರಾ?!

*****                          

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x