ಅದೊಂದು ದಿನ ಸಂಜೆ ನನ್ನ ಪಯಣ ಬೆಂಗಳೂರಿನ ಕಡೆಗೆ ಸಾಗಿತ್ತು. ನನ್ನ ಸಂಬಂಧಿಕರ ಮದುವೆಸಮಾರಂಭಕ್ಕೆ ಹೋಗಬೇಕಾಗಿದ್ದರಿಂದ ನನ್ನ ವೃತ್ತಿ ಮುಗಿಸಿಕೊಂಡು ಕೆಎಸ್‍ಆರ್‍ಟಿಸಿ ಬಸ್‍ಗೆ ಹತ್ತಿದೆ. ಮನಸಿಗೆ ಉಲ್ಲಾಸ ನೀಡುವ ಮೌನಗೀತೆ ಹಾಗೂ ಭಾವಗೀತೆಗಳನ್ನು ಕೇಳುವ ಹವ್ಯಾಸ ಸ್ವಲ್ಪ ಇರುವುದರಿಂದ ಏನಾಗಲಿ ಮುಂದೆ ಸಾಗು ನೀ ಎಂಬ ಗೀತೆಯನ್ನು ಕೇಳುತ್ತಾ ಪ್ರಯಾಣ ಆರಂಭವಾಗಿ ಚಂದಿರ ಬರುವ ವೇಳೆಗೆ ಬೇಂಗಳೂರು ತಲುಪಿದೆ.
ಪ್ರಯಾಣ ಅಲ್ಲಿಗೆ ಮುಗಿಯಲಿಲ್ಲ ಅಲ್ಲಿಂದ ನಮ್ಮ ಸಂಬಂಧಿಕರ ಕಾರಿನಲ್ಲಿ ಮದುವೆ ನಡೆಯುತ್ತಿದ್ದ ಸ್ಥಳಕ್ಕೆ ಹೊರಟೆ. ಹಿಂದೆ ಮುಂದೆ ಸಾಕಷ್ಟು ವಾಹನಗಳು, ನಾ ಮುಂದು ತಾ ಮುಂದು ಎಂದು ಥರಥರದ ಶಬ್ಧಗಳು, ಜೊತೆಗೆ ಟ್ರಾಫಿಕ್ ಗಳು, ಆಗ ತಾನೇ ಏನನ್ನೋ ತಿಂದು ತೆವಳುತ್ತಿರುವ ಹಾವಿನಂತೆ ಮೆಲ್ಲ ಮೆಲ್ಲಗೆ ನಮ್ಮ ಕಾರು ಸಾಗುತ್ತಿತ್ತು. ಕಿಟಕಿಯ ತೆಗೆದರೆ ಬರೀ ಬಿಸಿಯ ಹವೆ ಜೊತೆಗೆ ಧೂಳು. ಕಿಟಕಿಯ ಹಾಕಿ ಕೃತಕ ಗಾಳಿಯನ್ನು ಸೇವಿಸುತ್ತಾ ವಟವಟನೆ ಮಾತಾಡುವ ರೇಡಿಯೋ ಕಾರ್ಯಕ್ರಮವನ್ನು ಕೇಳುತ್ತಾ ಕಲ್ಯಾಣ ಮಂಟಪದ ಬಳಿಗೆ ತಲುಪಿದೆವು. ಕಲ್ಯಾಣ ಮಂಟಪದ ಶೃಂಗಾರ ಜೋರಾಗಿಯೇ ಇತ್ತು. ನೂರಾರು ವಾಹನಗಳು ನಿಲ್ಲುವಷ್ಟು ಜಾಗ ಪಾರ್ಕಿಂಗ್ ಮಾಡಲು ಯಾವ ತೊಂದರೆಯೂ ಆಗಲಿಲ್ಲ.
ಹೂಗಳ ಅಲಂಕಾರ ಎಲ್ಲರನ್ನೂ ಸ್ವಾಗತಿಸುತ್ತಿತ್ತು. ಕಲ್ಯಾಣಮಂಟಪದ ಒಳಗಡೆ ಭಾರೀ ಗಾತ್ರದ ಗಾಜಿನ ದೀಪಗಳು ಆ ಕಡೆಗೆ ವಧು ವರರನ್ನು ಆಶೀರ್ವದಿಸಲು ಜನರ ಸಾಲು, ಈ ಕಡೆ ವಾದ್ಯಗೋಷ್ಟಿ ಸಂಗೀತ ತಂಡದವರಿಂದ ಕಾರ್ಯಕ್ರಮ, ನಡುವಲ್ಲಿ ನವಜೋಡಿ. ಛಾಯಾಗ್ರಾಹಕರ ಕ್ಯಾಮರಾ ಮುಂದೆ ಗೊಂಬೆಗಳಂತೆ ನಿಂತಿದ್ದರು. ಒಟ್ಟಾರೆ ವಿಜೃಂಭಣೆಯ ವ್ಯವಸ್ಥೆ ಮಾಡಲಾಗಿತ್ತು.
ಊಟ ಮುಗಿಸಿಕೊಂಡು ಹೊರಟ ನಾವು ಮನೆಗೆ ಬಂದು ಸೇರುವಷ್ಟರಲ್ಲಿ ರಾತ್ರಿ ಸುಮಾರು 11.00 ಗಂಟೆಯಾಗಿತ್ತು. ನಿದ್ರಾದೇವಿ ಆವರಿಸಿ ಸ್ವಾಗತ ಕೋರುತ್ತಿದ್ದಳು. ಮಲಗಿದ್ದಷ್ಟೇ ನೆನಪು ಗಾಢ ನಿದ್ರೆಯಲ್ಲಿ ಮುಳುಗಿ ಹೋದೆನು. ಅಷ್ಟೊಂದು ಗಾಢ ನಿದ್ರೆಯಲ್ಲೂ ಮಧ್ಯರಾತ್ರಿಯ ಸಮಯ ನನ್ನ ಕಣ್ಣುಗಳು ಮುಚ್ಚಿಯೇ ಇದ್ದವು. ನನಗರಿವಿಲ್ಲದೆಯೇ ನನ್ನ ಕಣ್ಣುಗಳಲ್ಲಿ ಕಣ್ಣಿರು ಹರಿಯುತ್ತಿದ್ದವು. ಅದೇನೋ ಒಂಥರಾ ಮನಸಲಿ ಯಾತನೆ, ವೇದನೆ ನನ್ನ ಕಣ್ಣ ಮುಂದೆಯೇ ಎನೋ ಒಂದು ಘಟನೆ ನಡೆಯುತ್ತಿರುವುದು ಭಾಸವಾಗುತ್ತಿತ್ತು.
ಒಳಹೊಕ್ಕು ನೋಡಿದರೆ ಅದೊಂದು ದಿನ ಮಧ್ಯಾಹ್ನದ ಸಮಯವಿರಬಹುದು. ನಾನು ಯಾವುದೋ ಒಂದು ಬಸ್ ನಿಲ್ದಾಣದಲ್ಲಿ ನಿಂತು ಬಸ್‍ಗೆ ಕಾಯುತ್ತಿರುವ ದೃಶ್ಯ. ವಾಹನಗಳ ಭಾರೀ ಸದ್ದು, ಧೂಳು, ಹೊಗೆ ಇದರೊಡನೆ ಆ ಕಡೆಯ ಬಸ್ ನಿಲ್ದಾಣದಲ್ಲಿ ಒಂದು ಹುಡುಗಿ ಕುಳಿತಿದ್ದಳು. ಪಕ್ಕದಲ್ಲೇ ಒಂದು ದೊಡ್ಡ ಲಗ್ಗೇಜ್ ಬ್ಯಾಗ್ ಕೂಡ ಇತ್ತು. ತೆಳ್ಳನೆಯ ಬೆಳ್ಳನೆಯ ಆ ಹುಡುಗಿಯ ವಯಸ್ಸು ಸುಮಾರು 20 ಅಥವಾ 21 ಇರಬಹುದು. ನೋಡೋಕೆ ತುಂಬಾ ಲಕ್ಷಣವಾಗಿದ್ದ ಆಕೆಯ ಸೌಂದರ್ಯ ಗೌರವ ಕೊಡುವಷ್ಟು ಮನೋಭಾವನೆಯಾಗುತ್ತಿತ್ತು. ಆದರೂ! ಆಕೆಯ ಮುಖದಲ್ಲಿ ನಗು ಕಾಣುತ್ತಿರಲಿಲ್ಲ.
ಹಾಗೆ ಸುಮ್ಮನೆ ಆಕೆಯನ್ನೇ ನೋಡವಷ್ಟು ಕುತೂಹಲ ಹೆಚ್ಚಾಯಿತು. ಬರ್ರನೆ ಓಡಾಡುತ್ತಿದ್ದ ವಾಹನಗಳ ನಡುವೆಯೇ ನಾ ಆಕೆಯ ನೋಡುತ್ತಿದ್ದೆ. ಆಕೆ ತನ್ನ ಪಕ್ಕದಲ್ಲಿಯೇ ಇದ್ದ ಬ್ಯಾಗ್ ನಲ್ಲಿ ಏನನ್ನೋ ತಡಕುತ್ತಿದ್ದಳು. ಆ ಧೂಳು ಮತ್ತು ಬಿಸಿಲಿನ ಬೇಗೆಗೆ ಬಾಯಾರಿದಂತಾಗಿ ನೀರು ಕುಡಿಯಲು ನೀರಿನ ಬಾಟಲ್ ನನ್ನು ತಡಕುತ್ತಿದ್ದಳು.
ಎಂಥ! ಅಚ್ಚರಿ ಇಷ್ಟು ಸುಂದರವಾದ ಹುಡುಗಿ ಏಕೆ ತಡಕುತ್ತಿಹಳಲ್ಲ ಎಂದು ತುಂಬಾ ಆಶ್ಚರ್ಯವಾಯಿತು. ಎಷ್ಟು ಸುಂದರವಾಗಿದ್ದರೇನು? ಆಕೆ ತನ್ನ ಸೌಂದರ್ಯವನ್ನು ತಾನು ನೋಡಿಕೊಳ್ಳಲು ಸಾಧ್ಯವಾಗದ ಸ್ಥಿತಿಯಲ್ಲಿದ್ದಳು. ಅಯ್ಯೋ ಎಂಥಾ ದುಸ್ಥಿತಿ! ಪಾಪ ಆಕೆಗೆ ತನ್ನ ರೂಪವನ್ನು ತಾನು ಕಾಣಲು ಆ ದೇವರು ದೃಷ್ಟಿಸುವ ಸಾಮರ್ಥ್ಯವೇ ಕೊಟ್ಟಿಲ್ಲವಲ್ಲ ವಿಧಿ ಎಷ್ಟು ಘೋರ. ನನ್ನ ಕಣ್ಣಂಚಿನಲ್ಲಿ ಕಣ್ಣೀರು ತುಂಬಿತು.
ನಾನೊಬ್ಬ ಬಂಧುವಾಗಿಯೋ, ಅಣ್ಣನಾಗಿಯೋ, ತಮ್ಮನಾಗಿಯೋ ಎಲ್ಲೋ ಒಂದು ಕಡೆ ಸಹಾಯ ಮಾಡಬೇಕೆಂದು ಮನಸಲ್ಲಿ ಕಾಡುತ್ತಿತ್ತಾದರೂ ಅಸಹಾಯಕನಾಗಿ ಆಕೆಯ ಸ್ಥಿತಿಯನ್ನು ನೋಡುತ್ತಾ ಕಣ್ಣಂಚಿನ ಕಣ್ಣೀರಿಗೆ ಬೆರಳಾಡಿಸುತ್ತಾ ನಿಂತೆ.
ಹುಡುಕಿ ತಡಕಿ ಸಿಕ್ಕ ನೀರಿನ ಬಾಟಲ್ ನ ಮುಚ್ಚಳ ತೆಗೆದು ಮೇಲೆಲ್ಲಾ ಚೆಲ್ಲಿಕೊಂಡು ಕುಡಿಯುತ್ತಿದ್ದ ಆಕೆ ಯಾವ ದಾಹದ ಆಸೆ ತೀರಿಸಿಕೊಂಡಳೋ ನಾ ಕಾಣೆ. ಪಾಪ ಎಲ್ಲಿಗೆ ಹೋಗಬೇಕೋ? ಎಲ್ಲಿಂದ ಬಂದಳೋ? ಬಿಡುವಿಲ್ಲದೆ ಓಡಾಡುತ್ತಿರುವ ವಾಹನಗಳ ಸರಿಸಿ ಆಕೆ ಎಲ್ಲಿಗೆ ನಡೆದಾಳು? ಎನ್ನುವ ಪ್ರಶ್ನೆಗಳು ನನ್ನಲ್ಲಿ ಎದುರಾದವು. ಇಷ್ಟು ಹೊತ್ತಾದರೂ ಆಕೆ ತಾನಿರುವ ಜಾಗವ ಬಿಟ್ಟು ಕದಲದೇ ಅಲ್ಲಿಯೇ ಕುಳಿತಿದ್ದಾಳಲ್ಲ? ಯಾರಾದರೂ ಬರಬಹುದೆ? ಯಾರಿಗಾದರೂ ಕಾದಿರಬಹುದೆ? ಎಂಬ ಪ್ರಶ್ನೆಗಳೂ ಕಾಡಿದವು. ಹಾಗೆನಾದರೂ ಯಾರಾದರೂ ಬಂದರೆ, ಬಂದವರು ನಮ್ಮವರೆ? ಅಲ್ಲವೆ? ಎಂದು ಆಕೆಗೆ ಹೇಗೆ ತಿಳಿಯಬೇಕು ಅಲ್ಲವೇ?
ಹಲವು ಭಾಷೆಗಳನ್ನಾಡುವ ಹಲವು ರೀತಿಯ ಜನರೊಡನೆ ಆಕೆ ಏನನ್ನು ಹೇಳುತ್ತಾಳೆ? ಏನನ್ನು ಕೇಳುತ್ತಾಳೆ? ಎಷ್ಟೊಂದು ಜನ ಆಕೆಯ ಬಳಿಯಲ್ಲಿಯೇ ಹಾದು ಹೋಗುತ್ತಿದ್ದರು. ಯಾಕಿಲ್ಲಿ?ಏನಿಲ್ಲಿ?ಎಂದು ಕೇಳಲು ಯಾರು ಪ್ರಯತ್ನಿಸಲೇ ಇಲ್ಲ. ಯಾಕೋ? ಏನೋ ಆಕೆಯ ಸ್ಥಿತಿ ನೋಡಿದ ಮೇಲೆ ನನ್ನ ಪಾಡಿಗೆ ನಾ ಹೋಗಬೇಕು ಅಂತ ನನಗನಿಸಲೇ ಇಲ್ಲ. ಬಳಿ ಹೋಗಿ ತುಸು ಮಾತನಾಡಬೇಕು ಎನ್ನುವಷ್ಟರಲ್ಲಿಯೇ ಆ ಕಡೆಯಿಂದ ತೂರಾಡಿಕೊಂಡು ಒಬ್ಬ ವ್ಯಕ್ತಿ ಆಕೆಯ ಸಮೀಪ ಬರುತ್ತಿದ್ದ. ಅತ್ತೊಂದು ಇತ್ತೊಂದು ಹೆಜ್ಜೆ ಹಾಕುತ್ತಿದ್ದ ರೀತಿಯಲ್ಲೇ ಗೊತ್ತಾಯ್ತು ಆತ ಕುಡಿದಿದ್ದ ಎಂದು.
ಬಂದವನೇ ಆಕೆಯ ಬಗ್ಗೆ ಏನನ್ನೋ ಗೊಣಗುತ್ತಾ ಜರಕ್ಕನೆ ಜಾರಿ ಬಿದ್ದೇ ಬಿಟ್ಟ. ಆಗೊಮ್ಮೆ ಈಗೊಮ್ಮೆ ಅಂಬೆಗಾಲನ್ನಿಡುವ ಮಗುವಿನಂತೆ ಮೆಲ್ಲಗೆ ಎದ್ದು ಆಕೆಯ ಕೆನ್ನೆಗೆ ಪಟಾರ್ ಎಂದು ಬಾರಿಸಿದ. ಇದ್ದಕ್ಕಿದ್ದಂತೆ ಬಂದು ಕಣ್ಣಿಲ್ಲದ ಆಕೆಗೆ ಹೇಳದೆ ಕೇಳದೆ ಬಾರಿಸಿದ ಇವನ್ಯಾರು? ಪಾಪ ಆ ಮುಗ್ಧ ಹುಡುಗಿಗೆ ಹೊಡೆಯುವ ಮನಸ್ಸಾದರೂ ಹೇಗೆ ಬಂತು? ಎಂದು ಪ್ರಶ್ನೆ ಹಾಕಿದಾಗ ಆತ ಬೇರೆ ಯಾರು ಅಲ್ಲ ಆಕೆಯ ಗಂಡ. ಕಣ್ಣಿಲ್ಲದ ಆಕೆಗೆ ಕಣ್ಣಾಗಿರಲು ಈತನನ್ನು ಮದುವೆ ಮಾಡಿದ ಆಕೆಯ ತಂದೆ ತಾಯಿ ಯಾವ ಸಂತೋಷವನ್ನು ಅನುಭವಿಸುತ್ತಿದ್ದಾರೋ ಅಥವಾ ಹೇಗೋ ಕೈ ತೊಳೆದುಕೊಂಡೆವು ಎಂಬ ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದಾರೋ ತಿಳಿಯದ ಸಂಗತಿ.
ನೋಟವಿರದಿದ್ದರೇನು? ಅದು ಒಂದು ಜೀವ ಅದಕ್ಕೂ ಒಂದು ಮನಸು ಅದರೊಳಗೆ ಸಾಕಷ್ಟು ಕನಸು, ನೂರಾರು ಭಾವನೆಗಳು ಇರುವುದಿಲ್ಲವೇ? ದಾರಿ ಕಾಣದ ಆಕೆಗೆ ದಾರಿದೀಪವಾಗಬೇಕಿದ್ದ ಗಂಡ ದಾರಿ ತೋರದೆ ಆಕೆಯ ಕಾಣದ ಕಣ್ಣಲಿ ಕಣ್ಣೀರಾಗಿ ಕಾಡುತ್ತಿದ್ದಾನೆ. ಹೊತ್ತು ಹೋಯಿತು ಕಾಣದ ಕಣ್ಣಲಿ ಅತ್ತು … ಅತ್ತು … ಕತ್ತಲೆ ಇರುವ ಆಕೆಯ ಬಾಳು ಬೆಳಕಾಗುವುದೋ ಇಲ್ಲವೋ? ಆದರೆ ನನ್ನ ಕನಸಿನ ಕಣ್ಣೀರಿಗೆ ತೆರೆ ಸಿಕ್ಕಿತು. ನಿಟ್ಟುಸಿರು ಬಿಡುತ್ತಾ ಯಾಕೀಗಾಯ್ತು ನನ್ನೊಳಗೆ? ಎಂದುಕೊಂಡು ಕಣ್ಣೀರು ಒರೆಸುತ್ತಾ ಎದ್ದು ಕುಂತೆ.