ಪ್ರಸಾದ್ ಕೆ ಅಂಕಣ

“ವಾರಿಸ್ ಡಿರೀ: ಮರುಭೂಮಿಯ ಒಂದು ಹೂವಿನ ಕಥೆ” (ಭಾಗ 3): ಪ್ರಸಾದ್ ಕೆ.

ಇಲ್ಲಿಯವರೆಗೆ

ಶ್ರಮಜೀವಿ ವಾರಿಸ್ ಮೆಕ್ ಡೊನಾಲ್ಡ್ ರೆಸ್ಟೊರೆಂಟಿನಲ್ಲಿ ನಿಷ್ಠೆಯಿಂದ ದುಡಿಯುತ್ತಾ ದಿನ ತಳ್ಳುತ್ತಿರುತ್ತಾಳೆ. ಆಗೊಮ್ಮೆ ಈಗೊಮ್ಮೆ ಹಾಲ್ವು ಳೊಂದಿಗೆ ವಾರಾಂತ್ಯಗಳಲ್ಲಿ ಕ್ಲಬ್ ಗಳಿಗೆ ತೆರಳಿ ಮಂದಬೆಳಕಿನಲ್ಲಿ ವೈಭವಿಸುವ ಹಾಡು, ನೃತ್ಯ, ಮದ್ಯಗಳನ್ನು ನಿರ್ಲಿಪ್ತತೆಯಿಂದ ಮೂಲೆಯಲ್ಲಿ ನಿಂತು ಸುಮ್ಮನೆ ನೋಡುತ್ತಿರುತ್ತಾಳೆ. ನಗರದ ಜನರ ಮುಕ್ತ ಲೈಂಗಿಕತೆ ಅವಳಿಗೆ ಅಸಹ್ಯ ಉಂಟುಮಾಡಿದರೆ, ಮೂತ್ರವಿಸರ್ಜನೆಗೂ ಬಾತ್ ರೂಮಿನಲ್ಲಿ ಬಹುಹೊತ್ತು ಹೊಟ್ಟೆಹಿಡಿದುಕೊಂಡು ನರಳಬೇಕಾಗಿ ಒದ್ದಾಡುವ ಅನಿವಾರ್ಯತೆ, ನೋವನ್ನು ಯಾರಲ್ಲೂ ಹೇಳಿಕೊಳ್ಳಲಾಗದ ಎಫ್.ಜಿ.ಎಮ್ ಬಗೆಗಿನ ಕೀಳರಿಮೆ ಅವಳನ್ನು ಮಾನಸಿಕವಾಗಿ ಬಳಲಿಸುತ್ತದೆ. ಆ ದಿನಗಳಲ್ಲಿ ತಕ್ಷಣದ ಕಾಮಕ್ಕಿಂತ, ಒಂದು ಸುಭದ್ರವಾದ ಜೀವನವನ್ನು ಕಟ್ಟಿಕೊಳ್ಳುವುದು ವಾರಿಸ್ ಳ ಪ್ರಥಮ ಆದ್ಯತೆಯಾಗಿತ್ತು. ಈ ತೊಳಲಾಟಗಳ ಮಧ್ಯದಲ್ಲೇ  ವಾರಿಸ್ ಳ ಭಾಗ್ಯದ ಬಾಗಿಲು ನಿಧಾನಕ್ಕೆ ತೆರೆಯಲಾರಂಭಿಸುತ್ತದೆ. ಹಿಂದೊಮ್ಮೆ ವಿಸಿಟಿಂಗ್ ಕಾರ್ಡು ಕೊಟ್ಟು ತನ್ನ ಹಿಂದೆ ಬಂದಿದ್ದ ಫೋಟೋಗ್ರಾಫರ್, ಈಗ ಮೆಕ್ ಡೊನಾಲ್ಡ್ ರೆಸ್ಟೊರೆಂಟಿನಲ್ಲೂ ತಿಂಡಿ ತಿನ್ನುವ ನೆಪದಲ್ಲಿ ಬಂದು ಮಾತನಾಡಲು ಪ್ರಯತ್ನಿಸುತ್ತಾನೆ. ಹಾಸ್ಟೆಲ್ ಗೆ ತೆರಳಿ ಹಾಲ್ವು ಜೊತೆ ಚರ್ಚಿಸಿದಾಗ, `ರೂಪದರ್ಶಿಯರ ವೃತ್ತಿ, ಜಗತ್ತು ತುಂಬಾನೇ ರೋಮಾಂಚಕಾರಿ, ಆದರೂ ಧೂರ್ತರು ಮಾಡೆಲಿಂಗ್ ಹೆಸರಿನಲ್ಲಿ ಹೆಣ್ಣುಮಕ್ಕಳನ್ನು ಬಲೆಗೆ ಬೀಳಿಸುವುದು ಇಲ್ಲಿ ತುಂಬಾ ಸಾಮಾನ್ಯ. ಯಾವುದಕ್ಕೂ ಇಬ್ಬರೂ ಹೋಗಿ ಒಮ್ಮೆ ಮಾತನಾಡಿ ಬರೋಣ. ನಿನ್ನ ಅದೃಷ್ಟಕ್ಕೆ ಏನಾದರೂ ಆದರೂ ಆದೀತು' ಎಂದು ಧೈರ್ಯ ತುಂಬುತ್ತಾಳೆ. ಇದ್ದ ಒಂದೆರಡು ಬಟ್ಟೆಯಲ್ಲೇ, ನೋಡಲು ತಕ್ಕುದಾದಂಥಾ ಬಟ್ಟೆಯನ್ನು ಧರಿಸಿ ಕಾರ್ಡಿನಲ್ಲಿ ಮುದ್ರಿಸಿದ್ದ ವಿಳಾಸಕ್ಕೆ ಗೆಳತಿಯರಿಬ್ಬರೂ ತೆರಳುತ್ತಾರೆ.

ವಾರಿಸ್ ಳನ್ನು ನೋಡಿದೊಡನೆಯೇ ಫೋಟೋಗ್ರಾಫರ್ ಮಾಲ್ಕಂ ಫೇರ್ ಚೇಲ್ಡ್ ನ ಮುಖ ಹುಣ್ಣಿಮೆಯ ಚಂದ್ರನಂತಾಗುತ್ತದೆ. ವಾರಿಸ್ ಳ ಆ ಕೋಲು ಮುಖದಲ್ಲಿ, ಕಡೆದ ಕಲ್ಲಿನಂತಿದ್ದ ಕಪ್ಪು ಕೃಶ ದೇಹದಲ್ಲಿ ಮಾಡೆಲಿಂಗ್ ಪ್ರಪಂಚದ `ಸ್ಟಾರ್' ಅನ್ನು ಮಾಲ್ಕಂ ಯಾವತ್ತೋ ಗುರುತಿಸಿದ್ದ. `ಇವಳಿಗಾಗಿ ಎಷ್ಟೆಲ್ಲಾ, ಎಲ್ಲೆಲ್ಲಾ ಅಲೆದಾಡಬೇಕಾಯಿತು ನಾನು' ಎಂದು ಮಾತಲ್ಲೇ ವಾರಿಸ್ ಳ ಕಾಲೆಳೆದಾಗ ಸ್ಟುಡಿಯೋ ತುಂಬಾ ಮುಗುಳ್ನಗು. ಮಾಡೆಲಿಂಗ್ ಜಗತ್ತಿನ ಒಂದು ಸಂಕ್ಷಿಪ್ತ ಪರಿಚಯದ ನಂತರ, ಸಾವಿರದ ಐನೂರು ಪೌಂಡ್ ಗಳ ಸಂಭಾವನೆಯ ಪ್ರಸ್ತಾಪವನ್ನು ಮಾಲ್ಕಂ ಇಟ್ಟಾಗ ವಾರಿಸ್ ಗೆ ಆಶ್ಚರ್ಯವಾಗಿ ಮಾತೇ ಹೊರಡಲಿಲ್ಲವಂತೆ. ತಿಂಗಳ ಪೂರ್ತಿ ಕತ್ತೆಯಂತೆ ದುಡಿದು ಒಂದಿಷ್ಟು ಸಂಬಳ ಪಡೆಯುತ್ತಿದ್ದ ಅವಳಿಗೆ, ಅದರ ಹತ್ತಾರು ಪಟ್ಟಿನ ಸಂಭಾವನೆಯನ್ನು ಒಂದೆರಡು ದಿನಗಳ ಸರಳ ಕೆಲಸಕ್ಕಾಗಿ ಮಾಲ್ಕಂ ಕೊಡಬಯಸಿದ್ದ. ಕೊನೆಗೂ ಸಾವರಿಸಿಕೊಂಡು, ಫೋಟೋಶೂಟ್ ನಡೆಯುವಾಗ ಹಾಲ್ವು ಕಡ್ಡಾಯವಾಗಿ ಅವಳೊಂದಿಗೆ ಇರತಕ್ಕದ್ದು ಎಂಬ ಶರತ್ತಿನೊಂದಿಗೆ ಮಾಡೆಲಿಂಗ್ ಜರ್ನಿ ಶುರುವಾಗುತ್ತದೆ. ಇಬ್ಬರೂ ಗೆಳತಿಯರಿಗೆ ಜಗತ್ತನ್ನೇ ಗೆದ್ದ ಖುಷಿಯಲ್ಲಿ ಆ ರಾತ್ರಿ ನಿದ್ರೆಯೇ ಬರಲಿಲ್ಲ.

 

ಮಾಡೆಲಿಂಗ್ ಎಂಬ ಹೈಫೈ ಜಗತ್ತು ನಿಧಾನಕ್ಕೆ ತೆರೆದುಕೊಳ್ಳುತ್ತಿದ್ದಂತೆಯೇ ಸಾಂಪ್ರದಾಯಿಕ ಮನೋಭಾವದ ವಾರಿಸ್ ಗೆ ಇದು ಅರಗಿಸಿಕೊಳ್ಳಲಾಗದ ತುತ್ತಾಗುತ್ತದೆ. ಆಗಂತುಕರ ನಡುವೆ, ಅದ್ಭುತ ಸೆಟ್ ಗಳಲ್ಲಿ ಕಣ್ಣಿಗೆ ರಾಚುವ ಕ್ಯಾಮೆರಾ ಬೆಳಕಿನೆದುರು ಬೆತ್ತಲಾಗಿ ನಿಲ್ಲುವುದು ಮೊದಮೊದಲಿಗೆ ಕಷ್ಟವೆನಿಸಿದರೂ ನಿಧಾನವಾಗಿ ಈ ಗ್ಲ್ಯಾಮರ್ ಜಗತ್ತಿಗೆ ವಾರಿಸ್ ಹೊಂದಿಕೊಳ್ಳುತ್ತಾಳೆ. ದೇಹಸಿರಿಯನ್ನು ಕ್ಯಾಮೆರಾ ಹಿಡಿದ ಆಗಂತುಕರೆದುರು ಪ್ರದರ್ಶಿಸಲು ಬೆತ್ತಲಾಗುವುದು ಸರ್ವೇಸಾಮಾನ್ಯ ಹಾಗೂ ಬೆತ್ತಲಾಗುವುದೆಂದರೆ ಅವರೊಂದಿಗೆ ಮಲಗುವುದಲ್ಲ ಎಂಬ ಕಟುಸತ್ಯಗಳು ದಿನಕಳೆದಂತೆ ಅವಳಿಗೆ ಅರಿವಾಗುತ್ತದೆ. ಬಾಲ್ಯದಲ್ಲಿ ಚಪ್ಪಲಿಯಿಲ್ಲದೆ ಕಲ್ಲು, ಮುಳ್ಳು ಎನ್ನದೆ, ಹಗಲು ರಾತ್ರಿಯ ಪರಿವೆಯಿಲ್ಲದೆ ಕಿಲೋಮೀಟರುಗಳಷ್ಟು ನಡೆದ, ಮರಳುಗಾಡಿನ ಹಾವು-ಚೇಳುಗಳಿಂದ ಲೆಕ್ಕವಿಲ್ಲದಷ್ಟು ಬಾರಿ ಕಚ್ಚಿಸಿಕೊಂಡ ತನ್ನ ತರಚಿಹೋದ, ಮಾಯದ ಗಾಯಗಳುಳ್ಳ ಕಾಲು, ಪಾದಗಳು, ಹಿಮ್ಮಡಿ ಅವಳಿಗೆ ಮೊದಮೊದಲಿಗೆ ಮುಜುಗರವನ್ನುಂಟುಮಾಡುತ್ತವೆ. ಆದರೂ ಬಹು ಪ್ರೀತಿಯಿಂದಲೇ ಎಲ್ಲರೂ ಈ ಹಳ್ಳಿಗುಗ್ಗುವನ್ನು ನೋಡಿಕೊಂಡರು ಎಂದು ಯಶಸ್ಸಿನ ದಿನಗಳಲ್ಲಿ ಕೃತಜ್ಞತೆಯಿಂದ ವಾರಿಸ್ ತನ್ನ ಸಹೋದ್ಯೋಗಿಗಳನ್ನು ನೆನಪಿಸಿಕೊಳ್ಳುತ್ತಾರೆ. 

ಸುಮಾರು ಒಂದು ವರ್ಷದ ಬಳಿಕ ಹಲವು ಏಜೆನ್ಸಿಗಳಿಂದ ಹೊಸ ಹೊಸ ಮಾಡೆಲಿಂಗ್ ನ ಆಫರ್ ಗಳನ್ನು ತಂದು ಮಾಲ್ಕಂ,  ವಾರಿಸ್ ರ ಕೈಗಿಡುತ್ತಾರೆ. ಮುಂದೆ 1987 ರಲ್ಲಿ ಪ್ರತಿಷ್ಠಿತ ಪಿರೆಲ್ಲಿ ಕ್ಯಾಲೆಂಡರ್ ಗಾಗಿ ಕ್ಯಾಲೆಂಡರ್ ಗರ್ಲ್ ಆಗಿ ಖ್ಯಾತ ಫೋಟೋಗ್ರಾಫರ್ ಟೆರೆನ್ಸ್ ಡೋನೋವನ್ ಫೋಟೋಗ್ರಫಿ ಕೈಚಳಕದಿಂದ ವಾರಿಸ್ ಮಿಂಚುತ್ತಾರೆ. ಈ ಮೂಲಕ ವಾರಿಸ್ ಡಿರೀ ಎಂಬ ಹೊಸ ಪರಿಚಯ ಅದ್ದೂರಿಯಾಗಿ ಮಾಡೆಲಿಂಗ್ ಲೋಕಕ್ಕಾಗುತ್ತದೆ. ಅದೇ ವರ್ಷ ಬಾಂಡ್ ಸಿನೇಮಾ ಸರಣಿಯ `ದ ಲಿವಿಂಗ್ ಡೇ ಲೈಟ್ಸ್' ಚಿತ್ರದಿಂದ ಆಫರ್ ಕೂಡ ಬರುತ್ತದೆ. ತುರ್ತಾಗಿ ಹೋಗಬೇಕಾಗಿದ್ದುದರಿಂದ ತನ್ನ ಗೆಳತಿ ಆಫ್ರಿಕನ್ ಮೂಲದ ಮರ್ಲಿನ್ ರವರ ಪಾಸ್ ಪೋರ್ಟ್ ಹಿಡಿದುಕೊಂಡು, ಅವರ ಸಹಿ ಮಾಡಲು ಕಲಿತುಕೊಂಡು ನಕಲಿ ದಾಖಲೆಯೊಂದಿಗೆ ಅನಿವಾರ್ಯವಾಗಿ ಮೊರೋಕ್ಕೋಗೆ ಚಿತ್ರೀಕರಣಕ್ಕಾಗಿ ಹಾರುತ್ತಾರೆ. ಚಿತ್ರೀಕರಣದ ತಂಡ ಅವರನ್ನು ಈ ಕಾರಣಕ್ಕಾಗಿ ಮರ್ಲಿನ್ ಮನ್ರೋ ಎಂದು ಚುಡಾಯಿಸುತ್ತಿತ್ತಂತೆ. ಈ ಬಾರಿ ವಾರಿಸ್ ಅದೃಷ್ಟ ನೆಟ್ಟಗಿತ್ತೋ ಏನೋ. ಇಮಿಗ್ರೇಷನ್ ವಿಭಾಗದಲ್ಲಿ ಎಲ್ಲೂ ಸಿಕ್ಕಿಹಾಕಿಕೊಳ್ಳದೆ, ಚಿತ್ರೀಕರಣವನ್ನು ಮುಗಿಸಿ ಯಶಸ್ವಿಯಾಗಿ ಹಿಂತಿರುಗಿ ಬರುವಷ್ಟರಲ್ಲಿ ನಿರಾಳತೆಯ ಭಾವವೊಂದು ಆವರಿಸುತ್ತದೆ.

ಆದರೆ ಮುಂದೆ ಹೊಸ ಪಾಸ್ ಪೋರ್ಟ್ ಗಾಗಿ ಪರದಾಡುವಂತಹಾ ಪ್ರಸಂಗ ವಾರಿಸ್ ಗೆ ಎದುರಾಗುತ್ತದೆ. ಸ್ಥಳೀಯ ಗಂಡಸಿನ ಜೊತೆ ವಿವಾಹವಾಗಿದೆಯೆಂದು ತೋರಿಸಿದರೆ ಹೊಸ ಪಾಸ್ ಪೋರ್ಟ್ ಸುಲಭವಾಗಿ ಮಾಡಿಸಿಕೊಳ್ಳಬಹುದು ಎಂಬ ಶಾರ್ಟ್‍ಕಟ್ ಐಡಿಯಾ ಕೊಡುವ ಏಜೆಂಟ್, ಒಬ್ಬ ನಕಲಿ ಪತಿಯನ್ನೂ ವಾರಿಸ್ ಗೆ ತಂದು ಕಟ್ಟುತ್ತಾನೆ. ಒ. ಸಲ್ಲಿವನ್ ಎಂಬ ಹೆಸರಿನ ಸುಮಾರು ಎಪ್ಪತ್ತು ವರ್ಷದ ಕುಡುಕ ವೃದ್ಧನನ್ನು ತಂದು ವಿವಾಹ ನೋಂದಣಾ ಕಛೇರಿಯಲ್ಲಿ ಮದುಮಗನಂತೆ ನಿಲ್ಲಿಸಿ ವಿವಾಹದ ಕಾಟಾಚಾರದ ನಾಟಕವನ್ನು ಪೂರ್ತಿಗೊಳಿಸುತ್ತಾರೆ. ಈ ವಿಲಕ್ಷಣ ಜೋಡಿಯನ್ನು ನೋಡಿದೊಡನೆಯೇ, ಇದೊಂದು ಪಾಸ್ ಪೋರ್ಟ್‍ಗಾಗಿ ಹೆಣೆದ ಸಂಚು ಎಂದು ಅರಿತ ವಿವಾಹ ನೋಂದಣಾ ಇಲಾಖೆ ಎರಡು ತಿಂಗಳ ಮಟ್ಟಿಗಷ್ಟೇ ತಾತ್ಕಾಲಿಕ ಪಾಸ್ ಪೋರ್ಟ್ ಮಂಜೂರಿಗೆ ಅನುಮತಿಯನ್ನಿತ್ತು, ಇಲಾಖೆಯ ತನಿಖೆ ಪೂರ್ಣಗೊಂಡ ಬಳಿಕವೇ ಪೂರ್ಣಾವಧಿ ಪಾಸ್ ಪೋರ್ಟ್ ಕೊಡಲಾಗುವುದು ಎಂದು ಮೊಹರನ್ನು ಒತ್ತುತ್ತದೆ. ಮುಂದೆ ಹಲವು ಪ್ರತಿಷ್ಠಿತ ಫ್ಯಾಷನ್ ಉತ್ಸವಗಳಲ್ಲಿ ಪಾಲ್ಗೊಳ್ಳಲು ಪ್ಯಾರಿಸ್, ಮಿಲಾನ್, ಯೂರೋಪ್ ಎಂದು ಕಾಲಿಗೆ ಚಕ್ರಕಟ್ಟಿಕೊಂಡವರಂತೆ ವಾರಿಸ್ ರ ತಿರುಗಾಟ ಆರಂಭವಾಗುತ್ತದೆ. 

ನಿರಂತರ ತಿರುಗಾಟದ ಈ ದಿನಗಳಲ್ಲಿ ಲಂಡನ್ ಮೂಲದ ಜ್ಯೂಲಿ ಎಂಬ ರೂಪದರ್ಶಿ ವಾರಿಸ್ ಗೆ ಪರಿಚಯವಾಗಿ ಇಬ್ಬರೂ ಒಳ್ಳೆಯ ಗೆಳತಿಯರಾಗುತ್ತಾರೆ. ಹೀಗಿರುವಾಗ ನ್ಯೂಯಾರ್ಕ್ ನಗರಕ್ಕೆ ಫ್ಯಾಷನ್ ಉತ್ಸವಕ್ಕಾಗಿ ತೆರಳಬೇಕಾಗಿರುವುದರಿಂದ ಅಮೇರಿಕಾದ ವೀಸಾವನ್ನು ಪಡೆಯಲು ಅಮೇರಿಕಾದ ರಾಯಭಾರ ಕಚೇರಿಗೆ ತಮ್ಮ ಅರ್ಜಿಯನ್ನು ವಾರಿಸ್ ಸಲ್ಲಿಸುತ್ತಾರೆ. ಇದಾದ ಕೆಲದಿನಗಳ ನಂತರ, `ನಿಮ್ಮ ಪಾಸ್ ಪೋರ್ಟು ಕಾನೂನುಬಾಹಿರವಾಗಿದ್ದು ಮೂವತ್ತು ದಿನಗಳೊಳಗಾಗಿ ಸೊಮಾಲಿಯಾಗೆ ಗಡೀಪಾರು ಮಾಡಲು ಬ್ರಿಟಿಷ್ ಸರ್ಕಾರ ನಿರ್ಧರಿಸಿದೆ', ಎಂಬ ಒಕ್ಕಣೆಯುಳ್ಳ ಪತ್ರ ಅಮೇರಿಕಾದ ರಾಯಭಾರ ಕಛೇರಿಯಿಂದ ವಾರಿಸ್ ರ ಕೈ ಸೇರುತ್ತದೆ. ನ್ಯೂಯಾರ್ಕ್ ನಗರದಲ್ಲಿ ಹಲವು ಅವಕಾಶಗಳ ಬಾಗಿಲು ತೆರೆಯುವ ಕನಸು ಕಾಣುತ್ತಿದ್ದ ವಾರಿಸ್ ಗೆ ಆಕಾಶವೇ ಕಳಚಿ ಬಿದ್ದಂತಾಗುತ್ತದೆ. ಇಷ್ಟಕ್ಕೂ ಆದದ್ದೇನೆಂದರೆ ವಿವಾಹ ನೋಂದಣಿ ಇಲಾಖೆಯ ತನಿಖೆಯಲ್ಲಿ ಸಲ್ಲಿವನ್ ಜತೆಗೆ ನಡೆದ ನಕಲಿ ಮದುವೆ, ಪಾಸ್ ಪೋರ್ಟ್ ಗಿಟ್ಟಿಸಿಕೊಳ್ಳಲಿಕ್ಕಾಗಿಯೇ ಮಾಡಿದ ಆಡಿದ ನಾಟಕ ಎಂಬುದು ಸಾಬೀತಾಗಿತ್ತು.

ವಾರಿಸ್ ಪಾಸ್ ಪೋರ್ಟ್ ವಿಷಯದಲ್ಲಿ ಅಡ್ಡದಾರಿ ಹಿಡಿದು ನಿಜಕ್ಕೂ ಇಕ್ಕಟ್ಟಿಗೆ ಸಿಲುಕಿದ್ದರು. ಸೊಮಾಲಿಯಾ ಎಂದಾಕ್ಷಣ ಬಾಲ್ಯದ ಕುರಿ-ಮೇಕೆ-ಒಂಟೆಗಳೇ ಕಣ್ಣ ಮುಂದೆ ಬರುತ್ತಿದ್ದುದರಿಂದ ವಾಪಾಸು ಮರಳಲು ವಾರಿಸ್ ಸುತಾರಾಂ ಸಿದ್ಧರಿರಲಿಲ್ಲ. ಅಂದರೆ ಈ ಬಾರಿಯೂ ಮೊದಲು ಮಾಡಿದ ತಪ್ಪನ್ನೇ ಇನ್ನೊಮ್ಮೆ ಅನಿವಾರ್ಯವಾಗಿ ಮಾಡಬೇಕಾಗಿ ಬಂದಿತು. ಗಡೀಪಾರಿನಂತಹಾ ಗಂಭೀರ ಶಿಕ್ಷೆಯನ್ನು ತಪ್ಪಿಸಿಕೊಳ್ಳಲು, ಮೊದಲ ವೃದ್ಧ ಕುಡುಕ ಪತಿ ಸಲ್ಲಿವನ್ ಗೆ ವಿಚ್ಛೇದನ ಕೊಟ್ಟು ಬೇರ್ಯಾವ ಬ್ರಿಟಿಷ್ ಪ್ರಜೆಯನ್ನೋ ವಾರಿಸ್ ವಿವಾಹವಾಗಬೇಕಿತ್ತು.  ವಿಚ್ಛೇದನಕ್ಕೆಂದು ಸಲ್ಲಿವನ್ ನನ್ನು ಸಂಪರ್ಕಿಸಿದಾಗ ಆತ ಇಹಲೋಕ ತ್ಯಜಿಸಿ, ತನಗೆ ವಿಧವೆಯ ಪಟ್ಟ ದಯಪಾಲಿಸಿದನೆಂದು ಮಾಹಿತಿ ಸಿಕ್ಕಿತು. ಪರೋಕ್ಷವಾಗಿ ವಾರಿಸ್ ಗೆ ಇದರಿಂದ ಲಾಭವೂ ಆಯಿತು ಅನ್ನುವುದು ಸತ್ಯ. ಮೊದಲ ಪತಿ ಸತ್ತ ಕಾರಣ ಎರಡನೇ ಮದುವೆಗೆ ಯಾವುದೇ ಅಡಚಣೆಯಿರಲಿಲ್ಲ. ಆದರೆ ಹೊಸ ಗಂಡು ಎಲ್ಲಿಂದ ತರುವುದು ಎಂಬುದೇ ಒಂದು ದೊಡ್ಡ ತಲೆನೋವಾಗಿಹೋಯಿತು. ಈ ಬಾರಿ ಬ್ರಿಟಿಷ್ ಸರ್ಕಾರದ ವಿವಾಹ ನೋಂದಣಾ ಇಲಾಖೆ ಖಂಡಿತವಾಗಿಯೂ ತನ್ನನ್ನು ಅಗ್ನಿಪರೀಕ್ಷೆಗೊಳಪಡಿಸುತ್ತದೆ ಎಂಬುದು ವಾರಿಸ್ ಗೆ ನಿಸ್ಸಂದೇಹವಾಗಿ ತಿಳಿದಿತ್ತು. ಅಕ್ಷರಜ್ಞಾನವಿಲ್ಲದೆ ಕಂಡವರ ಗಾಳಿ ಮಾತುಗಳನ್ನು ಕೇಳಿಕೊಂಡು ಮುಗ್ಧವಾಗಿ ತಲೆಯಾಡಿಸುತ್ತಿದ್ದ ವಾರಿಸ್ ಗೆ ಈ ಘಟನೆ ಪಾಠ ಕಲಿಸಿತ್ತು.

ಈ ಹೊತ್ತಿಗೆ ಗೆಳತಿ ಜ್ಯೂಲಿ ಮನೆಯಲ್ಲಿ ಸೋಮಾರಿಯಾಗಿ ಅಕ್ಕನ ಬಿಟ್ಟಿ ದುಡ್ಡು ತಿಂದು ತೇಗುತ್ತಿದ್ದ ಸಹೋದರ ನಿಗೆಲ್ ಎಂಬಾತ ಪತಿಯಾಗುತ್ತೇನೆ ಎಂದು ಮುಂದೆ ಬಂದ. ಅಕ್ಕ ದುಡಿದು ಹಾಕಿ ತಂದಿದ್ದರಲ್ಲೇ ಮಜಾ ಉಡಾಯಿಸುತ್ತಿದ್ದ ನಿರುದ್ಯೋಗಿ, ಸೋಮಾರಿ ನಿಗೆಲ್ ಈಗ ಪತ್ನಿಯೆಂಬ ಹೆಣ್ಣಿನ ಬಿಟ್ಟಿ ಸಂಪಾದನೆಗೆ ಕೈಚಾಚುತ್ತಿದ್ದ. ಇದರ ಬಗ್ಗೆ ಸಂಪೂರ್ಣವಾಗಿ ತಿಳಿದಿದ್ದ ವಾರಿಸ್ ತನ್ನ ಹಾಳು ಅದೃಷ್ಟವನ್ನು ಶಪಿಸುತ್ತಾ ಒಲ್ಲದ ಮನಸ್ಸಿನಿಂದ ಅಸ್ತು ಎನ್ನುತ್ತಾಳೆ. ಇದರಂತೆ ವಿವಾಹ ನೋಂದಣಾ ಕಛೇರಿಯ ತನಿಖೆ ಮುಗಿಯುವವರೆಗೆ ವಾರಿಸ್ ಮನೆಯಲ್ಲೇ ನಿಗೆಲ್ ಠಿಕಾಣಿ ಹೂಡುವುದೆಂದೂ, ಈ ಅವಧಿಯಲ್ಲಿ ಆತನ ಖರ್ಚುವೆಚ್ಚಗಳನ್ನು ವಾರಿಸ್ ನೋಡಿಕೊಳ್ಳುವುದೆಂದೂ, ಕಾಗದದ ಮೇಲೆ ಪತಿ ಎಂಬ ಲೇಬಲ್ ಒಂದನ್ನು ಬಿಟ್ಟರೆ ಯಾವುದೇ ರೀತಿಯ ಸಂಬಂಧವನ್ನೂ ಇಟ್ಟುಕೊಳ್ಳುವಂತಿಲ್ಲವೆಂದೂ ಇವರುಗಳ ಮಧ್ಯೆ ಒಂದು ರಹಸ್ಯ ಒಪ್ಪಂದವಾಯಿತು. ಈ ಬಾರಿ ಸೋ ಕಾಲ್ಡ್ ನವದಂಪತಿಗಳನ್ನು ತೀವ್ರ ತನಿಖೆಗೊಳಪಡಿಸುವ ಇಲಾಖೆ, ಸುಮಾರು ಹತ್ತು ತಿಂಗಳುಗಳ ದೀರ್ಘ ಪರೀಕ್ಷೆಯ ನಂತರ ಪೂರ್ಣಾವಧಿ ಪಾಸ್ ಪೋರ್ಟ್ ಅನ್ನು ವಾರಿಸ್ ಗೆ ಮಂಜೂರು ಮಾಡಿಕೊಡುತ್ತದೆ. ಮುಂದೆ ಇದೇ ಸೋ ಕಾಲ್ಡ್ ಪತಿರಾಯ ಹೋದಲ್ಲೆಲ್ಲಾ ಬೆನ್ನುಬಿದ್ದು, ಪಾಸ್ ಪೋರ್ಟ್ ಅನ್ನು ತನ್ನ ಸುಪರ್ದಿಯಲ್ಲಿರಿಸಿ ವಾರಿಸ್ ಗೆ ಇನ್ನೊಮ್ಮೆ ತಲೆನೋವಾಗಿ ಹೋಗುವುದು ಬೇರೆಯೇ ಕಥೆ. 

(ಮುಂದುವರೆಯುವುದು…)

**************************************

ಕನ್ನಡದ ಬರಹಗಳನ್ನು ಹಂಚಿ ಹರಡಿ

Leave a Reply

Your email address will not be published. Required fields are marked *