ಕಾಡು(ವ) ಕಟ್ಟುವ ಕತೆ!! ಭಾಗ-8: ಅಖಿಲೇಶ್ ಚಿಪ್ಪಳಿ


ತಾನೊಂದು ಬಗೆದರೆ ದೈವವೊಂದು ಬಗೆಯಿತು ಎನ್ನುವ ಮಾತೊಂದು ಪ್ರಚಲಿತದಲ್ಲಿದೆ. ವರ್ಷದ ಎಲ್ಲಾ ಋತುಮಾನಗಳು ನಿಸರ್ಗದತ್ತವಾಗಿ ಸಸೂತ್ರವಾಗಿ ನಡೆದರೆ ಭೂಮಿಯ ಮೇಲೆ ವಾಸಿಸುವ ಜೀವಿಗಳು ಸುರಕ್ಷಿತವಾಗಿ ಇರಬಲ್ಲವು. ಭೂತಾಯಿಯ ಬುದ್ಧಿವಂತ ಮಕ್ಕಳಾದ ನಾವು ಮಾಡಿದ್ದೇ ಸರಿ ಎಂಬ ಅಹಂಕಾರವನ್ನು ಹೊಂದಿದ್ದೇವೆ. ಇಡೀ ಭೂಮಿ ಇರುವುದೇ ನಮ್ಮ ಲಾಭಕ್ಕಾಗಿ, ನಮ್ಮ ಸುಖಕ್ಕಾಗಿ ಎಂದು ಭಾವಿಸಿಕೊಂಡಿದ್ದೇವೆ. ಪ್ರಕೃತಿಯ ನೈಸರ್ಗಿಕ ಪ್ರಯೋಗಾಲವನ್ನು ಛಿಧ್ರ ಮಾಡಿ, ಇಡೀ ನಿಸರ್ಗವನ್ನು ನಮ್ಮ ಸುಖದ ಹುಡುಕುವಿಕೆಯ ಪ್ರಯೋಗಾಲಯವನ್ನಾಗಿ ಪರಿವರ್ತಿಸಿದ್ದೇವೆ. ಹವಾಗುಣ ಬದಲಾವಣೆಯಿಂದಾಗಿ ಇಡೀ ಪ್ರಪಂಚದ ಎಲ್ಲಾ ಪ್ರದೇಶಗಳು ವಿವಿಧ ರೀತಿಯಲ್ಲಿ ಸಂಕಷ್ಟಕ್ಕೀಡಾಗಿದೆ. ಪಶ್ಚಿಮಘಟ್ಟದ ಕಾಲುಬುಡದಲ್ಲಿರುವ ಸಾಗರ ತಾಲ್ಲೂಕಿನಲ್ಲಿ ಅಭಿವೃದ್ಧಿ ಹೆಸರಿನಲ್ಲಿ ಹಾಗೂ ರೈತರನ್ನು ಪ್ರೇರಪಿಸಿ ಸಾವಿರಾರು ಹೆಕ್ಟೆರ್ ಕಾಡು ನಾಶ ಮಾಡಲಾಗಿದೆ. ಅದರ ಪರಿಣಾಮ ಈ ವರ್ಷ ಸ್ಪಷ್ಟವಾಗಿ ಗೋಚರಿಸುತ್ತಿದೆ. ಉಷಾಕಿರಣದಲ್ಲಿ ನೆಟ್ಟ ಗಿಡಗಳಿಗೆ ನೀರು ಹಾಕುವ ನನ್ನ ಪ್ರಯತ್ನ ದಿನೇ ದಿನೇ ವಿಫಲವಾಗುತ್ತಿತ್ತು. ಗಿಡಗಳು ಮೊದಲಿನಿಕ್ಕಿಂತ ವೇಗವಾಗಿ ಬಲಿಯಾಗ ತೊಡಗಿದವು. ನನ್ನ 2 ಲೀಟರ್ ಬಾಟಲಿಯಲ್ಲಿ ನೀರು ಹಾಕುವ ಪ್ರಯತ್ನ ಸೂರ್ಯನ ಧಗೆಯನ್ನು ಎದುರಿಸಲು ಎನೇನೂ ಸಾಲದಾಯಿತು. ಓಮಿನಿ ಕಾರಿನಲ್ಲಿ 200 ಲೀ ನೀರು ತುಂಬಿಕೊಂಡು ಜೊತೆಗೆ 2 ಆಳು ಕರೆದುಕೊಂಡು ನೀರು ಹಾಕುವ ಹೊಸ ಪ್ರಯತ್ನ ಮಾಡಿದೆವು.

ಫೆಬ್ರುವರಿಯಲ್ಲೇ ಮಾರ್ಚ್ ತಿಂಗಳ ಉಷ್ಣಾಂಶ. ಆ ಉಷ್ಣಾಂಶವೋ ಥರ್ಮಾಮೀಟರನ್ನು ಗ್ಯಾಸ್ ಒಲೆಯ ಮೇಲಿಟ್ಟಾಗ ಏರುವಂತೆ ಏರುತ್ತಿದೆ. 2 ಲೀಟರ್ ನೀರಿನಿಂದ 200ಕ್ಕೆ ಏರಿಸಿದರೂ ಏನೂ ಪ್ರಯೋಜನವಾಗುವ ತರಹ ಕಾಣಲಿಲ್ಲ. ಏನಾದರಾಗಲೀ ಎಂದು ಬಿಡುವಂತೆಯೂ ಇಲ್ಲ. ಇಡೀ ವರ್ಷದ ಫಸಲನ್ನು ಕಳೆದುಕೊಳ್ಳಲಿರುವ ರೈತನ ಮನ:ಸ್ಥಿತಿ ನನ್ನದಾಗಿತ್ತು. ಕೊಳವೆ ಬಾವಿಯಲ್ಲಿ ನೀರು ಸಿಕ್ಕಿದ್ದರೂ ಸಾಕಿತ್ತು. ಅದೂ ಇಲ್ಲ. ನೀರಿನ ಮೂಲಗಳೇ ಇಲ್ಲ. ಪಾಪ ಗಿಡ ಎಷ್ಟು ದಿನ ತಾನೆ ಗರಿಷ್ಟ ಉಷ್ಣಾಂಶದ ವಿರುದ್ದ ಬದುಕೀತು? ಇಷ್ಟರಲ್ಲೆ ಫೆಬ್ರುವರಿ ಮುಗಿಯುತ್ತಾ ಬಂದಿತ್ತು. ಮಾರ್ಚ್ ತಿಂಗಳಲ್ಲಂತೂ ಹಿಂಗಾರು ಮಳೆ ಬರುತ್ತದೆ. ಇಡೀ ಉಷಾಕಿರಣ ಒದ್ದೆಯಾಗುತ್ತದೆ ಎಂಬ ಕ್ಷೀಣವಾದ ಆಸೆ ಬಿಟ್ಟರೆ ಬೇರೇನೂ ಮಾಡಲು ತೋಚಲಿಲ್ಲ. 

ಪ್ರತಿದಿನ ನೀರು ಹಾಕುವ ಬದಲು, ಚೆನ್ನಾಗಿರುವ ಗಿಡಗಳ ಬುಡಕ್ಕೆ ದರಗೆಲೆ ಮುಚ್ಚುಗೆ ಮಾಡಿ ವಾರಕ್ಕೊಂದಾವರ್ತಿ ನೀರು ಕೊಟ್ಟರೆ ಹೇಗೆ ಎಂಬ ಯೋಚನೆಯೊಂದು ತಲೆಯಲ್ಲಿ ಸುಳಿಯಿತು. ಮಲೆನಾಡಿನ ಕೆರೆ-ಕುಂಟೆ, ಬಾವಿ, ಕೊಳವೆಬಾವಿ ಎಲ್ಲಾ ಬರಿದಾಗಿರುವಾಗ ನಮಗೆ ನೀರು ಎಲ್ಲಿಂದ ಸಿಗುತ್ತದೆ. ಅದೆಲ್ಲೋ ನೀರು ಸಿಕ್ಕರೂ ತರುವ ಬಗೆ ಹೇಗೆ, ಎಲ್ಲಾ ಗಿಡಗಳ ಬುಡಕ್ಕೆ ಹಾಕುವ ಬಗೆ ಹೇಗೆ? ಹೀಗೆ ನೂರೆಂಟು ಸವಾಲುಗಳು. ಬೇಸಿಗೆ ಶುರುವಾಗುತ್ತಿದ್ದಂತೆ ನಮ್ಮಲ್ಲಿ ನೀರಿನ ವ್ಯಾಪಾರಿಗಳು ಹುಟ್ಟಿಕೊಳ್ಳುತ್ತಾರೆ. ತಮ್ಮ ಬಳಿಯಿರುವ ಕೊಳವೆ ಬಾವಿಯಿಂದ ನೀರನ್ನೆತ್ತಿ ಟ್ಯಾಂಕರ್‍ಗೆ ತುಂಬಿ ಮಾರುತ್ತಾರೆ. ಇವರಿಗೆ ಬರವೆಂದರೆ ಒಂಥರಾ ಸುಗ್ಗಿಯ ಕಾಲ. ಇವರಿಂದ ನೀರನ್ನು ಕೊಂಡು ಗಿಡಗಳಿಗೆ ಹಾಕುವುದು ಅತ್ಯಂತ ದುಬಾರಿ ಹಾಗೂ ಶ್ರಮದ ಕೆಲಸ. ಅಂತೂ ಹೇಗಾದರೂ ಮಾಡಿ ಕೆಲವು ಗಿಡಗಳನ್ನಾದರೂ ಬದುಕಿಸಲೇ ಬೇಕು ಎಂಬ ಹಠಕ್ಕೆ ಬಿದ್ದು, ನೀರಿನ ಮೂಲಕ್ಕಾಗಿ ಹುಡುಕಾಡಿದೆ. ವಾರಕ್ಕೆ ಒಂದೆರೆಡು ಟ್ಯಾಂಕ್ ನೀರಾದರೆ ಸಾಕಲ್ಲ. ಹತ್ತಿರದ ಕೆರೆಯಿಂದ ತುಂಬಿಸಿಕೊಳ್ಳಿ ಎನ್ನುವ ಸಲಹೆ ಬಂತು. ಸಲಹೆಯನ್ನು ಕಾರ್ಯರೂಪಕ್ಕೆ ತರಲು ಹತ್ತಿರದಲ್ಲಿ ನೀರಿರುವ ಕೆರೆಯಲ್ಲಿದೆ. ಇದ್ದರೂ, ತುಂಬಿಕೊಳ್ಳಲು ಯಾರು ಬಿಡುತ್ತಾರೆ. ಯಾರೂ ಕೂಡ ಕೆರೆಯ ನೀರನ್ನು ಇತರೆ ಕೆಲಸಕ್ಕೆ ಬಳಸಬಾರದು ಎಂದು ಜಿಲ್ಲಾಧಿಕಾರಿಗಳು ಆದೇಶ ಮಾಡಿದ್ದು ಎಲ್ಲರಿಗೂ ಗೊತ್ತೇ ಇದೆ. 
ಸಾಗರ ನಗರ ಸಭೆಯವರು ನಗರಕ್ಕೆ ಕುಡಿಯುವ ನೀರಿನ ಶುದ್ಧಿಕರಣ ಘಟಕವನ್ನು ಸ್ಥಾಪಿಸಿಕೊಂಡು, ಸಾಗರಿಗರಿಗೆ ಕುಡಿಯುವ ನೀರನ್ನು ನೀಡುತ್ತಾರೆ. ಈ ಶುದ್ಧಿಕರಣಗೊಳಿಸುವ ಪ್ರಕ್ರಿಯೆಯಲ್ಲಿ ಒಂದಷ್ಟು ನೀರು ಮತ್ತೆ ಶುದ್ಧಿಕರಣಗೊಳ್ಳದೇ ವಾಪಾಸು ಕೆರೆಗೆ ಸೇರುತ್ತದೆ. ಇದನ್ನು ಒಂದು ರೀತಿಯಲ್ಲಿ ವೇಸ್ಟ್ ವಾಟರ್ ಎನ್ನಲಾಗುತ್ತದೆ. ಹಾಗಂತ ಬಯಲುಸೀಮೆಯ ಕೆಂಬಣ್ಣದ ನೀರಿಗೋ ಅಥವಾ ಗಾಜಿನಷ್ಟು ಶುಭ್ರವಾದ ಬಾಟಲಿಯಲ್ಲಿ ದೊರೆಯುವ ನೀರಿಗಿಂತ ಕುಡಿಯಲು ಯೋಗ್ಯವಾದ ನೀರಿದು. ಆ ನೀರಾದರೂ ಸಿಕ್ಕಿದರೆ ಗಿಡಗಳನ್ನು ಬದುಕಿಸಬಹುದು ಎಂಬಾಲೋಚನೆ ತಲೆಯಲ್ಲಿ ಬಂತು. ಕಾಣಬೇಕಾದವರನ್ನು ಕಂಡು, ನೀರಭಿಯಂತರರಿಗೆ ಹೇಳಿಸಿ, ರೇಷನ್ ಪ್ರಕಾರ ವಾರಕ್ಕೆರೆಡು ಟ್ಯಾಂಕರ್ ಸಿಗುವ ಭರವಸೆ ಸಿಕ್ಕಿತು. ಸರಿ, ಟ್ಯಾಂಕರ್‍ನಿಂದ ನೀರು ಸಾಗಿಸಬೇಕಲ್ಲ, ಬರೀ ಸಾಗಿಸಿದರೆ ಸಾಲದು, ಪ್ರತಿ ಗಿಡಗಳ ಬುಡಕ್ಕೂ ಅ ನೀರು ಸಮರ್ಪಕವಾಗಿ ತಲುಪಬೇಕಲ್ಲ. ಇದಕ್ಕೆಲ್ಲಾ ಪೂರ್ವ ತಯಾರಿಯಾಯಿತು. ಐವತ್ತು ಅಡಿ ಪೈಪನ್ನು ಟ್ಯಾಂಕರ್ ಹೊರಸುರಿಯ ಭಾಗಕ್ಕೆ ಜೋಡಿಸಲಾಯಿತು. ಪೈಪು ತಲುಪದಿರುವ ಗಿಡಗಳಿಗೆ ಟ್ಯಾಂಕರ್‍ನ ನಲ್ಲಿಯಿಂದಲೇ ಕೊಡಗಳಿಗೆ ತುಂಬಿ ಗಿಡದ ಬುಡಕ್ಕೆ ಹಾಕುವಷ್ಟು ಜನಶಕ್ತಿಯನ್ನು ಒಟ್ಟು ಮಾಡಲಾಯಿತು. ಹೀಗೆ 27/03/2016ರ ಭಾನುವಾರದಿಂದ ಗಿಡಗಳಿಗೆ ನೀರುಣ್ಣಿಸುವ ಕಾಯಕ ಸಮರೋಪಾದಿಯಲ್ಲಿ ಶುರುವಾಯಿತು. ಪ್ರತಿ ಭಾನುವಾರ ಎರಡು ಗಂಡಾಳು ಹಾಗೂ ಮೂರು ಹೆಣ್ಣಾಳುಗಳಿಗೆ ನೀರು ಹಾಕುವ ಕೆಲಸ, ಮೇಲ್ವಿಚಾರಣೆಗಾಗಿ ಬಿಸಿಲಿನಲ್ಲಿ ನಿಲ್ಲುವ ಸರದಿ ನನ್ನದೇ. 

ನೆಟ್ಟ ಎಲ್ಲಾ ಗಿಡಗಳಿಗೂ ನೀರು ಹಾಕಿ ಬದುಕಿಸಬೇಕೆಂಬ ಇಚ್ಛೆಯಿಂದ ಟ್ಯಾಂಕರ್‍ನಿಂದ ನೀರು ಬಿಡುವ ಕೆಲಸ ಶುರುವೇನೋ ಆಯಿತು. ಇಲ್ಲೊಂದು ಕೆಮಿಸ್ಟ್ರಿ ಇದೆ. ನೈಸರ್ಗಿಕವಾಗಿ ಬೆಳೆಯುವ ಗಿಡಗಳಿಗೆ ಯಾರೂ ನೀರು ಹಾಕುವುದಿಲ್ಲ. ವರ್ಷಕ್ಕೊಂದಷ್ಟು ದಿನ ಪ್ರಕೃತಿಯೇ ಮಳೆಯ ರೂಪದಲ್ಲಿ ನೀರೆರೆಯುತ್ತದೆ. ಇನ್ನುಳಿದ ಋತುಮಾನಗಳಲ್ಲಿ ಗಿಡದ ಎಲೆಗಳೇ ವಾತಾವರಣದಲ್ಲಿನ ತೇವಾಂಶವನ್ನು ಹೀರಿಕೊಂಡೋ ಅಥವಾ ಮಣ್ಣಿನಡಿಯಲ್ಲಿನ ನೀರಿನ ಪಸೆಯ ಸಹಾಯದಿಂದ ಬದುಕುಳಿಯುತ್ತವೆ. ನಾವು ನೆಟ್ಟದ್ದು ಕಾಡು ಗಿಡಗಳೇ ಆದರೂ, ನೈಸರ್ಗಿಕ ರೂಪದಲ್ಲಿ ನೆಟ್ಟಿದ್ದಲ್ಲ. ಅರಣ್ಯ ಇಲಾಖೆಯ ನರ್ಸರಿಯಿಂದ ತಂದ್ದದ್ದು. ಸಾಮಾನ್ಯವಾಗಿ ಅರಣ್ಯ ಇಲಾಖೆಯ ಗಿಡಗಳಿಗೆ ಅಲ್ಪ ಪ್ರಮಾಣದ ಯೂರಿಯಾ ಗೊಬ್ಬರವನ್ನು ನೀಡಲಾಗುತ್ತದೆ. ಇದರಿಂದ ಗಿಡಗಳು ಹಸುರಿನಿಂದ ನಳನಳಿಸುತ್ತವೆ. ಮೇಲಾಧಿಕಾರಿಗಳು ನರ್ಸರಿ ವೀಕ್ಷಣೆಗೆ ಬಂದಾಗ ಗಿಡಗಳು ಹಸುರಿನಿಂದ ನಳನಳಿಸುತ್ತಿದ್ದರೆ ಅಲ್ಲಿನ ವಾಚ್‍ಮನ್, ಗಾರ್ಡ್, ಫಾರೆಸ್ಟರ್, ರೇಂಜರ್‍ಗಳಿಗೆ ಮೇಲಾಧಿಕಾರಿಗಳ ಕೃಪಾಕಟಾಕ್ಷ ದೊರಕುತ್ತದೆ. ಹೀಗೆ ಮಾಡುವುದರಿಂದ ಆ ಗಿಡಗಳು ತಮ್ಮ ಅಂತರ್ಗತವಾದ ನಿರೋಧಕ ಶಕ್ತಿಯನ್ನು ಕೊಂಚ ಮಟ್ಟಿಗೆ ಕಳೆದುಕೊಳ್ಳುತ್ತವೆ. ಅತಿ ಮಳೆ, ಚಳಿ ಅಥವಾ ಶುಷ್ಕ ವಾತಾವರಣದಲ್ಲಿ ಬದುಕುಳಿಯುವ ಧಾರಣ ಶಕ್ತಿ ಕಡಿಮೆಯಾದ ಗಿಡಗಳು ವೈಪರೀತ್ಯಗಳನ್ನು ಎದುರಿಸುವಲ್ಲಿ ಸೋಲುತ್ತವೆ. ಒಂದು ಬಾರಿ ನೀರು ನೀಡಲು ಪ್ರಾರಂಭಿಸಿದರೆ, ಮಧ್ಯೆ ನಿಲ್ಲಿಸುವ ಹಾಗಿಲ್ಲ. ಎಂಟು ದಿನಕ್ಕೆ ಸಾಕಾಗುವಷ್ಟು ನೀರು ನೀಡಿದರೆ, ಮತ್ತೆ ಒಂಬತ್ತನೇ ದಿನವೇ ನೀರು ನೀಡಬೇಕು. ಇಲ್ಲವಾದಲ್ಲಿ ಸಸಿಗಳು ಒಣಗಲು ಶುರುವಾಗುತ್ತವೆ. ನೀರು ನೀಡುವ ಕಾಯಕಕ್ಕೆ ರಜೆ ನೀಡುವ ಹಾಗಿಲ್ಲ. ಒಂದು ವಾರ ರಜೆ ಮಾಡಿದರೂ ಸಾಕು, ಮಾರನೇ ವಾರದಷ್ಟೊತ್ತಿಗೆ ಒಂದಷ್ಟು ಗಿಡಗಳು ಬಲಿಯಾಗಿರುತ್ತವೆ.

ಪ್ರತಿ ಭಾನುವಾರ ನೀರು ಹಾಕಲು ಐದರಿಂದ ಆರು ಆಳುಗಳ ಅಗತ್ಯವಿತ್ತು. ರಜಾ ದಿನವಾದ್ದರಿಂದ, ಕಾಲೇಜಿಗೆ ಹೋಗುವ ಹೆಣ್ಣು ಮಕ್ಕಳು ನೀರೆರೆಯಲು ಬಂದರು. ಹೊಸ ಜನರೇಷನ್ ಮಕ್ಕಳಲ್ಲೂ ಒಂದು ತರಹದ ಕುತೂಹಲವಿತ್ತು. ಯಾವುದೇ ಲಾಭ ತಾರದ ಕಾಡುಗಿಡಗಳಿಗೆ ಇಷ್ಟೊಂದು ಖರ್ಚು ಮಾಡಿ ನೀರು ಹಾಕಿದರೆ ಏನು ಲಾಭ? ಯಾರಿಗೆ ಲಾಭ? ಇತ್ಯಾದಿ ಪ್ರಶ್ನೆಗಳು ಪುಂಖಾನುಪುಂಖವಾಗಿ ಅವರಿಗೆ ಉದ್ಬವಿಸುತ್ತಿದ್ದವು. ಹಕ್ಕಿ-ಪಕ್ಷಿ, ಪ್ರಾಣಿಗಳಿಗೆ ನೆರವಾಗುವಂತಹ ಈ ಕೆಲಸವು ನಿಮ್ಮ ಮಾರಿಪೂಜೆಗಿಂತ ಶ್ರೇಷ್ಠವಾದದು ಎಂದು ನನ್ನ ವಾದ ಮುಂದಿಟ್ಟೆ, ನನಗೆ ಜೀವಗಾಳಿ ಹಾಗೂ ಜೀವಜಲ ನೀಡುವ ಮರ-ಗಿಡಗಳಿರುವ ಪ್ರದೇಶವೇ ನನಗೆ ದೇವಸ್ಥಾನ, ಕಾಡು ಬೆಳೆಸುವ ವನ್ಯಸಂಪತ್ತೇ ನನಗೆ ದೇವರು ಎಂದು ವಾದ ಮುಂದುವರೆಸಿದೆ. ಇವೆಲ್ಲವನ್ನೂ ಪೊರೆಯುವ ಸೂರ್ಯ, ಭೂಮಿ ಯಾಕೆ ದೇವರಲ್ಲ, ಇವುಗಳೇ ನಿಜವಾದ ದೇವತೆಗಳು ಎಂದಿದ್ದಕ್ಕೆ, ಆಧುನಿಕ ಯುಗದ ಗೊಡ್ಡು ನಂಬಿಕೆಗಳನ್ನು ಹೊತ್ತ ಕಾಲೇಜಿನಲ್ಲಿ ವ್ಯಾಸಂಗ ಮಾಡುವ ಆ ಹುಡುಗ-ಹುಡುಗಿಯರು ನನ್ನ ಎಲ್ಲಾ ವಾದಗಳನ್ನು ಬುಡಮೇಲು ಮಾಡುವಂತೆ, ದೇವರಿರುವುದರಿಂದಲೇ ಈ ಮರ-ಗಿಡ-ಪ್ರಾಣಿ-ಪಕ್ಷಿಗಳು ಇರುವುದು ತಿಳ್ಕಳಿ ಎಂದರು. ಹಾಗಾದರೆ ಆ ದೇವರನ್ನು ತೋರಿಸಿ ಎಂದರೆ, ಅದೆಲ್ಲಾ ನಂಬಿಕೆಯ ಪ್ರಶ್ನೆ ಎಂದು ಹಾರಿಕೆಯ ಉತ್ತರ ಕೊಟ್ಟು ಚರ್ಚೆಗೊಂದು ಕೊನೆಗಾಣಿಸಿದರು. ನನ್ನ ಈ ವಾದದಿಂದ ಅವರು ನನ್ನನ್ನು ನೋಡುವ ದೃಷ್ಟಿಯೇ ಬದಲಾಯಿತು. ನಾನೋರ್ವ ಬಲುದೊಡ್ಡ ಅಪರಾಧ ಮಾಡುತ್ತಿರುವ ದುರುಳನಂತೆ ತೋರಿರಬೇಕು.

ಹಾಕಿದ ನೀರು ಆವಿಯಾಗದಿರಲೆಂದು ದರಗೆಲೆಗಳನ್ನು ತಂದು ಗಿಡದ ಬುಡದ ಸುತ್ತಲೂ ದಪ್ಪಗೆ ಮುಚ್ಚುಗೆ ಮಾಡಿಡಲಾಗಿತ್ತು. ಭಾನುವಾರ ಸಂಜೆಯವರೆಗೂ ನೀರು ಹಾಕಿ ಮನೆಗೆ ಹೋಗಿಯಾಗಿತ್ತು. ಸೋಮವಾರ ಮದ್ಯಾಹ್ನ ಹೋಗಿ ನೋಡಿದರೆ, ಗಿಡದ ಬುಡದಲ್ಲಿ ಹಾಕಿದ ದರಗೆಲೆಗಳೆಲ್ಲಾ ಚೆಲ್ಲಾಪಿಲ್ಲಿ. ಯಾರೋ ಉದ್ಧೇಶಪೂರ್ವಕವಾಗಿ ಕೆದರಿದಂತೆ ಇತ್ತು. ಇದೊಂದು ಹೊಸ ಸಮಸ್ಯೆ ಹೆಗಲಿಗೇರಿತು. ಎಲ್ಲಾ ಗಿಡಗಳ ಬುಡಗಳೂ ಹಾಗಾಗಿರಲಿಲ್ಲ. ಆದರೂ ದರಗೆಲೆ ಮುಚ್ಚುಗೆ ಇಲ್ಲವಾದಲ್ಲಿ, ಹಾಕಿದ ನೀರು ಒಂದೇ ದಿನದಲ್ಲಿ ಆವಿಯಾಗಿ ಹೋಗುತ್ತದೆ. ಮತ್ತೊಂದು ಭಾನುವಾರ ಬರುವಷ್ಟರಲ್ಲಿ ಆ ಗಿಡ ಸತ್ತು ಹೋಗಿರುತ್ತದೆ. ಯಾರ ಕಿತಾಪತಿ ಇರಬಹುದು? ತಲೆ ಕೆರೆದುಕೊಂಡೆ! ಉರಿಯಿತೇ ಹೊರತು ಉತ್ತರ ಸಿಗಲಿಲ್ಲ. ಸರಿ, ಪತ್ತೆದಾರಿ ಶುರು ಮಾಡಿದೆ. 


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
Anantha Ramesh
8 years ago

ಕೃಷಿಯ ಕಷ್ಟಗಳ ಪಟ್ಟಿಗೆ ಪತ್ತೇದಾರಿ ಕೆಲಸವೂ ಸೇರಿದ್ದು ಖೇದ ತಂದಿತು. ನಿಮ್ಮ ಅನುಭವಗಳನ್ನು ಓದುಗರೊಂದಿಗೆ ಹಂಚಿಕೊಳ್ಳುವ ಪರಿ ಅನನ್ಯ.

1
0
Would love your thoughts, please comment.x
()
x