ಕಾಡು(ವ) ಕಟ್ಟುವ ಕತೆ!! ಭಾಗ-4: ಅಖಿಲೇಶ್ ಚಿಪ್ಪಳಿ


ಶುಭಸೂಚನೆ ನೀಡಿ ಬಂದ ಮಳೆ ಅದೇಕೋ ಮತ್ತೆ ಮುನಿಸಿಕೊಳ್ಳುವ ಹವಣಿಕೆಯಲ್ಲಿದ್ದಂತೆ  ತೋರಿತು. ಇನ್ನಷ್ಟು ಜನರನ್ನು ಕರೆದುಕೊಂಡು ಬಂದು ಆದಷ್ಟು ಬೇಗ ಗಿಡ ನೆಡಲು ತರಾತುರಿ ಮಾಡಿದೆ. ಆಳುಗಳ ನಿರ್ವಹಣೆ ಮಾಡುವ ನಿರ್ವಾಹಕನಿಗೆ ಕೆಲವು ಷರತ್ತುಗಳನ್ನು ಮೊದಲೇ ಹಾಕಿದ್ದೆ. ಗಿಡಗಳನ್ನು ನೆಟ್ಟ ನಂತರ ಖಾಲಿ ಪ್ಲಾಸ್ಟಿಕ್ ಕೊಟ್ಟೆಗಳನ್ನು ಎಲ್ಲೆಂದರಲ್ಲಿ ಎಸೆಯಬಾರದು. ಯಾವುದೇ ಪ್ರಾಣಿ-ಪಕ್ಷಿ-ಕೀಟ-ಹಾವು-ಕಪ್ಪೆಗಳನ್ನು ಅಪ್ಪಿ-ತಪ್ಪಿಯೂ ಕೊಲ್ಲಬಾರದು. ಅಕೇಶಿಯಾ-ನೀಲಗಿರಿ ಹಾಗೂ ಯುಪಟೋರಿಯಂ ಬಿಟ್ಟು ಮತ್ಯಾವುದೇ ನೈಸರ್ಗಿಕ ಗಿಡ-ಬಳ್ಳಿ-ಮುಳ್ಳುಕಂಟಿಗಳನ್ನು ಕಡಿಯಬಾರದು. ಈ ಯಾವುದೇ ಷರತ್ತುಗಳನ್ನು ಉಲ್ಲಂಘನೆ ಮಾಡಿದರೂ ಮತ್ತೆ ಕೆಲಸಕ್ಕೆ ಬರುವುದು ದೂರದ ಮಾತು ಎಂದು ಎಚ್ಚರಿಸಿದ್ದೆ.  ಈ ವಿಚಿತ್ರವಾದ ಷರತ್ತುಗಳಿಗೆ ವ್ಯಂಗ್ಯದಿಂದಲೇ ಒಪ್ಪಿ ತಲೆಯಾಡಿಸಿದ್ದ. ಅವನಾದರೂ ಅರಣ್ಯ ಇಲಾಖೆಯ ನೆಡುತೋಪುಗಳಲ್ಲಿ ಕೆಲಸ ಮಾಡಿದವನೇ, ಆದರೂ ಇಲಾಖೆಯವರು ಕೂಡ ಈ ತರಹದ ಷರತ್ತನ್ನು ಯಾವತ್ತೂ ಹಾಕಿರಲಿಲ್ಲ. ಈ ತರಹ ಷರತ್ತು ವಿಧಿಸಲು ಕಾರಣವಿತ್ತು. ಈ ಹಿಂದೆ ಕಳೆ ಕೂಳೆಗಳನ್ನು ತೆಗೆಸಲು ಜೆಸಿಬಿಯನ್ನು ತರಿಸಿದ್ದೆ. ಬೆಳಗಿನ ತಿಂಡಿ ಹಾಗೂ ಮಧ್ಯಾಹ್ನ ಊಟ ಮಾಡಿದ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಎಸೆದಿದ್ದರು. ಜೆಸಿಬಿಯ ಮಾಲಿಕ ಹೋಟೆಲ್‍ನಿಂದ ಊಟ-ತಿಂಡಿಗಳನ್ನು ಪ್ಲಾಸ್ಟಿಕ್ ಕೊಟ್ಟೆಯಿಂದ ಕಟ್ಟಿಸಿಕೊಂಡು ಪಾರ್ಸೆಲ್ ತರಿಸಿದ್ದ. ಸುಮಾರು 15 ದಿನಗಳಲ್ಲಿ ಇಡೀ 20 ಎಕರೆಯಲ್ಲಿ ಏನಿಲ್ಲವೆಂದರೂ 250 ಪ್ಲಾಸ್ಟಿಕ್ ಕೊಟ್ಟೆಗಳು ಬಿದ್ದು ಹೊಳ್ಳಾಡುತ್ತಿದ್ದವು. ಅವರಿಗೂ ಹೀಗೆಲ್ಲಾ ಎಸೆಯಬಾರದು ಎಂದು ತಾಕೀತು ಮಾಡಿದ್ದೆ. ಎಲ್ಲಾ ಒಟ್ಟಿಗೆ ತೆಗೆಯುತ್ತೇವೆ ಎಂದು ಕಾಗೆ ಹಾರಿಸಿ, ಸ್ವಚ್ಛ ಮಾಡದೇ ಹಾಗೆಯೇ ಹೊರಟು ಹೋಗಿದ್ದರು. ಆಮೇಲೆ ಇಡೀ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸ್ವಚ್ಛ ಮಾಡಲು ನನಗೆ ಇಡೀ ದಿನ ಹಿಡಿಯಿತು.

20 ದಿನಗಳಲ್ಲಿ ಗಿಡ ನೆಡುವ ಕಾರ್ಯಕ್ರಮ ಮುಗಿಯಿತು. ಒಟ್ಟು 1200 ಗಿಡಗಳು ವಿವಿಧ ಜಾತಿಯವು. ಹೊನ್ನಾವರದಿಂದ ಇಲಾಖೆಯವರೇ ಊರಹೊನ್ನೆ ಎಂಬ ಗಿಡಗಳನ್ನು ಒಂದಿಷ್ಟು ತರಿಸಿದ್ದರು, ನೋಡಲು ಚೆಂದವಿದ್ದ ಬೇಗನೆ ಬೆಳೆಯುವ ಜಾತಿ ಈ ಗಿಡಗಳನ್ನು ನಮಗೊಂದಿಷ್ಟು ಕೊಡಿ ಎಂದು ಸಾಗರದ ಡಿ.ಎಫ್.ಓರನ್ನು ವಿನಂತಿಸಿದ್ದೆ. ಆಗಲಿ ಎಂದು 20 ಗಿಡ ಕೊಟ್ಟರು. ಸಮುದ್ರ ತೀರದ ಗಿಡಗಳು ನಮ್ಮ ಜಾಗಕ್ಕೆ ಹೇಗೆ ಒಗ್ಗಿಕೊಳ್ಳುತ್ತವೆ ಎಂಬ ಅನುಮಾನ ಇದ್ದೇ ಇತ್ತು. ಆಗಲಿ ಎಂದು ಆಯಾಕಟ್ಟಿನ ಜಾಗದಲ್ಲಿ ಅವುಗಳನ್ನು ನೆಡಿಸಿದೆ. ಜೂನ್ ಕಳೆದು ಜುಲೈ ಬಂದರೂ ಒಳ್ಳೆ ಹದ ಸಿಗುವ ಮಳೆಯಾಗಲೇ ಇಲ್ಲ. ಆಗಸ್ಟ್-ಸೆಪ್ಟೆಂಬರ್ ಕೂಡ ಹನಿ ಮಳೆಯಿಲ್ಲದೆ ಕಳೆಯಿತು. ನೆಟ್ಟ ಗಿಡಗಳೇನು ಸಾಯಲಿಲ್ಲ. ನೂರಕ್ಕೆ ಸುಮಾರು 80ರಷ್ಟು ಗಿಡಗಳು ಬದುಕಿವೆ. ಆದರೆ, ನಿರೀಕ್ಷೆಯಷ್ಟು ಬೆಳೆದಿಲ್ಲ. ಹೊನ್ನಾವರದಿಂದ ತಂದು ನೆಟ್ಟ ಊರಹೊನ್ನೆ ಗಿಡಗಳ ಎಲೆಗಳು ಒಣಗಲು ಶುರುವಾಗುತ್ತಿದ್ದಂತೆ ಅಪಾಯದ ಮುನ್ಸೂಚನೆ ಸಿಕ್ಕಿತು. 20 ಗಿಡಗಳಲ್ಲಿ ಅಗಳದ ಏರಿಯ ಮೇಲೆ ನೆಟ್ಟಿದ್ದ ಗಿಡವೊಂದು ಎರಡೇ ದಿನದಲ್ಲಿ ಒಣಗಿ ಹೋಯಿತು. ಅದರ ಪಕ್ಕದಲ್ಲಿರುವುದು ಒಣಗುತ್ತಿರುವ ಸೂಚನೆ ನೀಡಿತು.

ಎಲ್‍ನಿನೋ ಕಾರಣಕ್ಕೆ ಈ ಬಾರಿ 40% ಮಳೆ ಕಡಿಮೆಯಾಗುತ್ತದೆ ಎಂದು ಕೇಂದ್ರ ಹವಾಮಾನ ಇಲಾಖೆ ಎಚ್ಚರಿಕೆಯನ್ನೇನೋ ನೀಡಿತ್ತು. ಆದರೆ ಇಲ್ಲಿ ನೋಡಿದರೆ ವಾಡಿಕೆಯ 20% ಮಳೆಯೂ ಸುರಿದಿಲ್ಲ. ಬತ್ತ ಬೆಳೆದ ರೈತರ ಪಾಡಂತೂ ಹೇಳತೀರದು. ಕೆರೆಯಿಂದ ನೀರು ಹಾಯಿಸುವ ಎಂದರೆ, ಕೆರೆಗಳೇ ತುಂಬಿಲ್ಲ. ಅಡಕೆಯ ತೋಟಗಳಿಗೆ ಹೆಚ್ಚು ನೀರು ಬೇಕಾಗುವುದಿಲ್ಲ. ಮಳೆ ಹೆಚ್ಚಾದರೆ, ಅಡಕೆಗೆ ಕೊಳೆ ರೋಗ ಬರುವ ಸಂಭವ ತೀರಾ ಹೆಚ್ಚು. ಈ ಬಾರಿ ಮಳೆ ಕಡಿಮೆಯಾದ್ದರಿಂದ ಅಡಕೆ ಫಸಲು ಚೆನ್ನಾಗಿಯೇ ಇದೆ. ಆದರೇನು ಅಡಕೆಯೆಂಬುದು ಊಟವಾದ ಮೇಲೆ ಮೆಲ್ಲುವ ವಸ್ತುವಲ್ಲವೇ! ಅಡಕೆಯೇ ಊಟವಾಗಲು ಸಾಧ್ಯವಿಲ್ಲ. ಅಡಕೆ ಬೆಳೆದವರ ಕೊಳ್ಳುವ ಸಾಮಥ್ರ್ಯ ತುಸು ಹೆಚ್ಚಾಗಬಹುದೇ ವಿನ: ಬತ್ತ ಬೆಳೆದು ಬೆಂಡಾದವರ ಕಣ್ಣೀರು ಒರೆಸುವ ಕರವಸ್ತ್ರವಂತೂ ಆಗಲಾರದು.

ನನ್ನ ಮನೆಗೂ ಮತ್ತು ಕಾಡು ಕಟ್ಟುತ್ತಿರುವ ಜಾಗಕ್ಕೂ ಸುಮಾರು 10 ಕಿ.ಮಿ. ದೂರವಾಗುತ್ತದೆ. ಅಲ್ಲದೇ ಕೆಲಸ ಮಾಡುವ ಸ್ಥಳಕ್ಕೂ, ಕಾಡಿಗೂ ಇಷ್ಟೇ ದೂರ. ಮದ್ಯಾಹ್ನ ಊಟದ ನಂತರ ಅಲ್ಲಿಗೆ ಹೋಗುವುದು ನನ್ನ ನಿತ್ಯದ ದಿನಚರಿ. ಯಾರಾದರೂ ಎಲ್ಲಿಗೆ ಹೊರಟೆ ಎಂದು ಕೇಳಿದರೆ ಇಷ್ಟು ಕತೆಯನ್ನು ಹೇಳಲು ಸಾಧ್ಯವಿಲ್ಲ. ಹಾಗಾಗಿ ಕಾಡಿಗೊಂದು ಹೆಸರಿಡಬೇಕು ಎಂದಾಯಿತು. ಕಾಡಿನ ಮಾಲಿಕರು ಸೂಕ್ತವಾದ ಹೆಸರನ್ನು ಹುಡುಕು ಎಂದು ಹೇಳಿದ್ದರು. ಹಿತೈಷಿಗಳೊಡನೆ ಆ ಜಾಗದಲ್ಲಿ ವಿಹರಿಸುವಾಗ ಒಂದು ಮರದಿಂದ ನೂರಾರು ಗಿಳಿಗಳು ಹಾರಿಹೋದವು. ಒಂದು ಕ್ಷಣ ಮರದ ಎಲೆಗಳೇ ಎದ್ದು ಆಕಾಶಕ್ಕೆ ಜಿಗಿದವೇನೋ ಅನಿಸುವ ಹಾಗೆ ಹಾರಿದವು. ಹಾರುತ್ತಲೇ ಕೂಗಿದ ಹಿಂಡು ನಾವು ಮರದ ಎಲೆಗಳಲ್ಲ, ಗಿಳಿಗಳು ಎಂದು ಸಾರಿದವು.  ಗಿಳಿಗಳು ಬಹಳ ವೇಗವಾಗಿ ಹಾರುವ ಹಕ್ಕಿಗಳು. ಮಲೆನಾಡಿನ ದಟ್ಟ ಕಾನನದ ಮಧ್ಯದಲ್ಲಿ ಬಾಣದಂತೆ ತೂರಿ ಹೋಗುವ ಗಿಳಿಗಳು ಅದೇಗೆ ಅಪಘಾತಕ್ಕೆ ಈಡಾಗದಂತೆ ಅಷ್ಟು ವೇಗವಾಗಿ ಹಾರುತ್ತವೆ ಎಂದು ಆಶ್ಚರ್ಯವಾಗುತ್ತದೆ. ಸರ್ಕಾರಗಳು ಕಾಡಿನ ಬಗ್ಗೆ ಕೊಂಚ ಗಮನ ಹರಿಸಿದರೆ ಅವುಗಳಿಗೂ ಹೆಲ್ಮೆಟ್ ಧರಿಸಲೇ ಬೇಕು ಎಂದು ಕಡ್ಡಾಯ ಮಾಡಬಹುದೇನೋ? ಆಗ ತೋಚಿದ ಹೆಸರು ಕಾಡಿಗೆ “ಗಿಳಿವಿಂಡು”. ಇಷ್ಟರಲ್ಲೇ ಮಾಲಿಕರೇ ಒಂದು ಹೆಸರನ್ನು ಸೂಚಿಸಿದರು. ನಿಜವಾಗಲೂ ಇದೊಂದು ಉತ್ತಮ ಆಯ್ಕೆಯೆಂದು ನಮ್ಮೆಲ್ಲರಿಗೂ ಅನಿಸಿತು. ಓಕೆ ಎಂದೆವು. ಇಲ್ಲಿಂದ ಮುಂದೆ ಕಾಡಿಗೊಂದು ಹೆಸರಾಯಿತು. ಮಾನ್ಯ ಗೌರವಾನ್ವಿತ ಓದುಗರೆ, ಇಲ್ಲಿಂದ ಮುಂದೆ “ಉಷಾಕಿರಣ”ವೆಂದು ಬಳಸಿದಾಗಲೆಲ್ಲಾ ನಿಮ್ಮ ಕಲ್ಪನೆಯಲ್ಲಿ ಕಾಡು ಕಟ್ಟುವ ಚಿತ್ರಣವೇ ಮೂಡಿಬರಲಿದೆ ಎಂಬ ವಿಶ್ವಾಸವಿದೆ.

ಮಂಗ ಮೇಲೆದ್ದು ಎರಡೇ ಕಾಲಿನಲ್ಲಿ ನಡೆಯುವ ಹಂತ ಬಂದು ಹತ್ತಿರ ಹತ್ತು ಸಾವಿರ ವರ್ಷವಾಯಿತು. ಆದಿಮಾನವನಿಗೆ ಕಾಡಿನಲ್ಲಿ ಬದುಕು ಅನಿವಾರ್ಯತೆ ಇದ್ದಾಗಿನ ಮಾನವನಿಗೆ ಕಾಡೊಂದು ದೊಡ್ಡ ಶತ್ರುವಂತೆ ತೋರಿದ್ದರೆ ಆಶ್ಚರ್ಯವೇನು ಆಗಿರಲಿಲ್ಲ. ಬಲಿಷ್ಟವಾದದು ಉಳಿಯುತ್ತದೆ ಎಂಬ ನಿಯಮಕ್ಕೆ ಅನುಗುಣವಾಗಿ ಕಾಡು ಪ್ರಾಣಿಗಳ ಜೊತೆಯಲ್ಲಿ ಬದುಕು ಏಗಬೇಕಾದ ಅನಿವಾರ್ಯತೆ ಆಗ ಇತ್ತು. ಅಷ್ಟೇಕೆ ವ್ಯಾಪಾರಕ್ಕಾಗಿ ಬಂದ ಬ್ರಿಟೀಷರು 300 ವರ್ಷಗಳ ಕಾಲ ಭಾರತವನ್ನು ಆಳುತ್ತಿರುವಾಗಲೂ, ಕಾಡು ಪ್ರಾಣಿಗಳನ್ನು ಮಾನವ ಸಂತತಿಗೊಂದು ಪಿಡುಗು ಎಂದೇ ಭಾವಿಸಲಾಗುತ್ತಿತ್ತು. ಬೇಟೆಯ ನೆಪದಲ್ಲಿ ಹಿಂಸ್ರಪಶುಗಳನ್ನು ಕೊಂದು ಮೆರವಣಿಗೆ ಮಾಡಲಾಗುತ್ತಿತ್ತು. ಆಗಿನ ರಾಜರು ಬೇಟೆಯನ್ನು ಪ್ರೋತ್ಸಾಹಿಸುವ ದಾಖಲೆಗಳು ಇತಿಹಾಸದ ಪುಟದಲ್ಲಿ ನೋಡ ಸಿಗುತ್ತವೆ. ಕಾಡುಪ್ರಾಣಿಗಳನ್ನು ಕೊಲ್ಲುವುದು, ಮರಗಳನ್ನು ಕಡಿಯುವುದು ಆಗಿನ ಸಮಾಜದಲ್ಲಿ ಅಪರಾಧವೇ ಆಗಿರಲಿಲ್ಲ. ಅಷ್ಟೇಕೆ, ಖುದ್ಧು ಬ್ರಿಟೀಷ್ ಸರ್ಕಾರವೇ ಅರಣ್ಯ ಸಂಪತ್ತನ್ನು ದೋಚಲು ಹೊಸ ಇಲಾಖೆಯನ್ನೇ ಸೃಷ್ಠಿ ಮಾಡಿ “ಅರಣ್ಯ ಇಲಾಖೆ”ಯೆಂದು ಹೆಸರಿಟ್ಟಿತು. ಈಗಲೂ ಇದೇ ಹೆಸರನ್ನೇ ಇಟ್ಟುಕೊಂಡ ಈ ಇಲಾಖೆ ಅರಣ್ಯ ರಕ್ಷಣೆಯ ಕಾರ್ಯವನ್ನು ಮಾಡುತ್ತಿದೆ ಎಂದು ಹೇಳಿಕೊಳ್ಳುತ್ತಿದೆ. 

ಗಿಡ ನೆಡುವ ಕಾರ್ಯಕ್ರಮ ಒಂದು ಹಂತದಲ್ಲಿ ಮುಗಿಯಿತು. ಇನ್ನು ಯುಪಟೋರಿಯಂ, ನೀಲಗಿರಿ ಮತ್ತು ಅಕೇಶಿಯಾ ಕಳೆಗಳನ್ನು ಕಿತ್ತು ತೆಗೆಯುವ ಕಾರ್ಯಕ್ರಮ. ಆಗಾಗ ಬರುವ ಜಿನುಗು ಮಳೆಯಿಂದ ನೆಲವೆನೋ ಕೊಂಚ ಮಟ್ಟಿಗೆ ಮೆತ್ತಗಾಗಿತ್ತು. ನೀಲಗಿರಿ ಬುಡವನ್ನು ಕಿತ್ತು ತೆಗೆಯುವುದು ಸುಲಭದ ಮಾತಲ್ಲ. ಅದಕ್ಕೆ ಜೆಸಿಬಿಯಂತಹ ಯಂತ್ರವೇ ಬೇಕು. ಅಕೇಶಿಯಾ ಗಿಡಗಳನ್ನು ಬೇರು ಸಮೇತ ಕಿತ್ತು ಹಾಕಬಹುದು ಅಥವಾ ದೊಡ್ಡದಾದರೆ ಕಡಿದು ಹಾಕಿದರೂ ಆಯಿತು. ಯುಪಟೋರಿಯಂ ಗಿಡಗಳನ್ನು ಆದಷ್ಟು ಬೇರು ಸಮೇತ ಕೀಳುವುದೇ ದೀರ್ಘಕಾಲಿಕ ಸಮಸ್ಯೆಗೊಂದು ಶಾಶ್ವತ ಪರಿಹಾರ. ಅಲ್ಪ ಮಳೆಯಿಂದಲೇ ಚಿಗುರಿ ಮೇಲೆದ್ದು ಬಂದ ಯುಪಟೋರಿಯಂನಿಂದಾಗಿ ಇಡೀ ಪ್ರದೇಶ ಜೀಡುಗಟ್ಟಿತ್ತು. ಈ ಮೊದಲೇ ಹೇಳಿದಂತೆ ಇಪ್ಪತ್ತು ಎಕರೆಯನ್ನು + ಆಕಾರದಲ್ಲಿ ವಿಭಜನೆ ಮಾಡಿ ನಾಲ್ಕು ಭಾಗಗಳಾಗಿ ವಿಂಗಡಿಸಲಾಗಿತ್ತು. ಇದರಲ್ಲಿ ಒಂದು ಭಾಗದಿಂದ ಕಳೆ ಸವರುವ ಕೆಲಸ ಶುರುವಾಯಿತು. ನಾಲ್ಕಾರು ಗಂಡಾಳು ಹಾಗೂ ಎಂಟತ್ತು ಹೆಣ್ಣಾಳು.

ಉಷಾಕಿರಣಕ್ಕೆ ಕೆಲಸಕ್ಕೆ ಬರುವವರು ಕೆಳದಿಯಿಂದ ಬರಬೇಕು. ಮೇಸ್ತ್ರಿ ಅಥವಾ ಶೇರೆಗಾರ ಎನ್ನುವ ಮ್ಯಾನೇಜರ್ ಅವರನ್ನು ಕಾರಿನಲ್ಲಿ ಕರೆದುಕೊಂಡು ಬರಬೇಕು. ಅಂತೂ ಅವರು ಬಂದು ಕೆಲಸ ಶುರು ಮಾಡುವುದು ಬೆಳಗಿನ ಹತ್ತೂವರೆಯಾಗುತ್ತದೆ. ಈಗೊಂದು 25 ವರ್ಷದ ಕೆಲದ ಪ್ರಮಾಣಕ್ಕೆ ಹೋಲಿಸಿದರೆ ಈಗಿನವರು ಕೆಲಸ ಮಾಡುವ ಸಮಯ ಹಾಗೂ ಪ್ರಮಾಣ ಎರಡೂ ಗಣನೀಯವಾಗಿ ಕಡಿಮೆ. ಆಗ ಬೆಳಗಿನ 7 ಗಂಟೆಗೆ ಕೆಲಸ ಶುರು ಮಾಡುತ್ತಿದ್ದರು, ಸರಿಯಾಗಿ 12.30ಗೆ ಊಟ ನಂತರ 1 ತಾಸು ವಿಶ್ರಾಂತಿ. ಮತ್ತೆ 1.30ಗೆ ಕೆಲಸ ಶುರು ಮಾಡಿದರೆ ಸಂಜೆ 5 ಗಂಟೆಯವರೆಗೂ ಕೆಲಸ ಮಾಡುತ್ತಲೇ ಇರುತ್ತಿದ್ದರು. ಆಗ ಕೂಲಿ ಸಮಸ್ಯೆಯೂ ಇರಲಿಲ್ಲ. ಆದರೆ ಕೆಲಸದಾಳುಗಳನ್ನು ಶೇರೆಗಾರನೆಂಬ ಮ್ಯಾನೇಜರ್ ತುಂಬಾ ಶೋಷಣೆ ಮಾಡುತ್ತಿದ್ದ ಎಂದು ಗೊತ್ತಾಗುತ್ತಿತ್ತು. ಭಾರತದಲ್ಲಿ ಪುಡಿರಾಜರ ಆಳ್ವಿಕೆ ಮುಗಿದು, ಅಖಂಡ ಭಾರತ ಮುನ್ನೆಲೆಗೆ ಬಂದ ನಂತರ 600 ಚಿಲ್ಲರೆ ಪುಡಿ ರಾಜರ ಯುಗ ಮುಗಿದು ಬಹುತೇಕರು ಹಿನ್ನೆಲೆಗೆ ಸರಿದ ಹಾಗೆಯೇ, ಮಲೆನಾಡಿನ ಕೃಷಿ ಕ್ಷೇತ್ರದಲ್ಲಿ ಶೇರೆಗಾರರ ಆಳ್ವಿಕೆಯು ಮುಗಿಯಿತು. ಘಟ್ಟದ ಕೆಳಗಿನಿಂದ ಬಂದ ಬಹುತೇಕ ಕೂಲಿಯಾಳುಗಳು ಇಲ್ಲೆ ಶಾಶ್ವತವಾಗಿ ನೆಲೆ ನಿಂತು, ಇದೀಗ ಇಲ್ಲಿಯವರೇ ಆಗಿದ್ದಾರೆ. 

ಮಲೆನಾಡಿನಲ್ಲಿ ಕಾಡು ಬೆಳೆಸುವುದು ಒಂದು ತರದಲ್ಲಿ ಸುಲಭವೂ ಹೌದು. ಇನ್ನೊಂದು ತರದಲ್ಲಿ ಕಷ್ಟ. ಯಾವುದೇ ಒಂದು ಪ್ರದೇಶಕ್ಕೆ ಮನುಷ್ಯ ಮತ್ತು ಜಾನುವಾರು ಒಂದು ಹತ್ತು ವರ್ಷ ಕಾಲಿಡದೇ ಹೋದಲ್ಲಿ ಅಲ್ಲೊಂದು ವಿಶಿಷ್ಠವಾದ ಕಾಡು ನಿರ್ಮಾಣವಾಗುತ್ತದೆ. ಇನ್ನು ಕಷ್ಟ ಏಕೆಂದರೆ, ಅಂತಹ ಜಾಗ ಯಾವುದೂ ಇಲ್ಲ. ಜನ ತಮ್ಮ ಅಗತ್ಯಗಳಿಗೆ ಕಾಡಿನ ಸೊಪ್ಪು, ಕಟ್ಟಿಗೆ, ದರಖು ಇತ್ಯಾದಿಗಳನ್ನು ಅತಿಯಾಗಿ ಬಳಸಿ, ಅಲ್ಲಿ ಕಾಡು ನಿರ್ಮಾಣವಾಗುವ ಸಾಧ್ಯತೆಯನ್ನು ಮೊಟಕುಗೊಳಿಸಿದರೆ, ಜಾನುವಾರುಗಳು ಕೆಲವು ತರಹದ ಸಸ್ಯಗಳನ್ನು ತಿಂದು ಹಾಳು ಮಾಡುತ್ತವೆ. ಕಾಡು ನಿರ್ಮಾಣವಾಗಲು ನಿಸರ್ಗದ ಎಲ್ಲರ ಸಹಕಾರ ಬೇಕು. ಈ ಹಿಂದೆ ಈ ಭಾಗದಲ್ಲಿ ಹೇರಳವಾಗಿದ್ದ ಗೀಜಗ ಹಕ್ಕಿಗಳು ಹೆಚ್ಚು ಕಡಿಮೆ ಕಣ್ಮರೆ ಹಂತಕ್ಕೆ ಬಂದು ತಲುಪಿವೆ. ಇಂಗ್ಲೀಷ್‍ನಲ್ಲಿ ವೀವರ್ ಬರ್ಡ್ ಎಂದು ಕರೆಯಲಾಗುವ ಗೀಜಗ ಗೂಡು ಕಟ್ಟುವುದೇ ಅತ್ಯಂತ ವಿಶೇಷವಾಗಿರುತ್ತದೆ. ರೈತರೆಲ್ಲಾ ಬತ್ತ ಬೆಳೆಯುವುದು ಲಾಭದಾಯಕವಲ್ಲವೆಂದು ಬತ್ತ ಬೆಳೆಯುವುದನ್ನು ಕಡಿಮೆ ಮಾಡಿದರು. ಜೊತೆಗೆ ಅಳಿದುಳಿದ ರೈತರು ಅತಿಯಾಗಿ ಕೀಟನಾಶಕಗಳನ್ನು ಬಳಸಿದರು. ಮುಖ್ಯವಾಗಿ ಬತ್ತವನ್ನೇ ಆಶ್ರಯಿಸಿದ್ದ ಗೀಜಗ ಸಂತತಿ ಸೊರಗಿತು. ಗೂಡು ಕಟ್ಟಲು ಬೇಕಾದ ಕಚ್ಚಾವಸ್ತುಗಳ ಅಭಾವ ಹಾಗೂ ವಿಷಯುಕ್ತ ಆಹಾರ ಅವುಗಳನ್ನು ಅಳಿವಿನಂಚಿಗೆ ತಂದು ನಿಲ್ಲಿಸಿದೆ. ಗೀಜಗ ಹಕ್ಕಿಗಳನ್ನು ಆಕರ್ಷಿಸಿ, ಮತ್ತೆ ಮರುಪ್ರತಿಷ್ಠಾನಗೊಳಿಸುವ ಯೋಚನೆಯಿಂದ, ಒಂದು ಕೆ.ಜಿ. ಬತ್ತದ ಬೀಜವನ್ನು ತಂದು ಅಗಳದ ಏರಿಯಲ್ಲಿ ಬಿತ್ತಲಾಯಿತು. ಗೂಡು ಕಟ್ಟಲು ಲಗತ್ತಾಗುವ ಲಾವಂಚ ಹುಲ್ಲನ್ನು ತಂದು ಹಚ್ಚಲಾಯಿತು. ಆದಷ್ಟು ಬೇಗ ಬತ್ತ ಬೆಳೆದು ಹಕ್ಕಿಗಳಿಗೆ ಆಹಾರವಾಗಲಿ ಎಂದು ಬಯಸಿದರೆ, ವರುಣನ ಅವಕೃಪೆಗೆ ತುತ್ತಾದ ಬತ್ತ ಸಸಿಯಾಗಲೇ ಇಲ್ಲ.


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x