ಮಲೆನಾಡಿನ ಮಣ್ಣಿನ ಗುಣ ವಿಶಿಷ್ಠವಾದದು. ಒಂದು ಮಳೆಗಾಲ ಮುಗಿಯುವಷ್ಟರಲ್ಲೇ ನೈಸರ್ಗಿಕವಾಗಿ ಸಳ್ಳೆ, ಮತ್ತಿ, ಹುಣಾಲು ಗಿಡಗಳು ಚಿಗುರಿ ಮೇಲೆದ್ದು ಬರುತ್ತಿದ್ದವು. ಜೊತೆಗೆ ಮುಳ್ಳಿನಿಂದ ಕೂಡಿದ ಪರಿಗೆ ಕಂಟಿಗಳು ಹೇರಳವಾಗಿ ಎದ್ದು ಬಂದವು. ಹಸಿರು ಮರಳುಗಾಡಾಗಿದ್ದ ಜಾಗ ನಿಧಾನಕ್ಕೆ ವೈವಿಧ್ಯಮಯ ಹಸಿರಾಗಿ ಕಂಗೊಳಿಸಿತು. ಒಂದಷ್ಟು ಬಿದಿರು ಮೆಳ್ಳೆಗಳಿದ್ದವು. ಹೂ ಬಂದಾದ ಮೇಲೆ ಸತ್ತು ಹೋದವು. ನೈಸರ್ಗಿಕವಾಗಿ ಬಿದಿರು ಮೇಲೆದ್ದು ಬರಲು ಇನ್ನೂ ಸಮಯ ಬೇಕು. ಅಗಳದ ಪಕ್ಕದಲ್ಲಿ ಸುತ್ತಲೂ ರಸ್ತೆಯನ್ನು ನಿರ್ಮಾಣ ಮಾಡಲಾಯಿತು. ಈ ರಸ್ತೆಯಲ್ಲಿ ಒಂದು ಸುತ್ತು ಹಾಕಿದರೆ ೧.೨ ಕಿ.ಮಿ. ದೂರವಾಗುತ್ತದೆ. ಇಡೀ ಜಾಗವನ್ನು + ಆಕಾರದಲ್ಲಿ ವಿಂಗಡಿಸಿ ನಾಲ್ಕು ಭಾಗ ಮಾಡಿದೆವು. + ಆಕಾರವು ಕಾಲುಹಾದಿಯ ರೂಪ ಪಡೆಯಿತು. ರಸ್ತೆಯನ್ನೇನೋ ಮಾಡಲಾಯಿತು. ಮಳೆ ಬಂದರೆ ಆ ರಸ್ತೆಯಲ್ಲಿ ತಿರುಗಾಡುವ ಹಾಗೆ ಇಲ್ಲ. ತೀರಾ ಅಂಟು ಮಣ್ಣು, ವಾಹನದಲ್ಲಿ ಬಿಡಿ, ನಡೆದುಕೊಂಡು ಹೋಗುವುದು ಕಷ್ಟ. ಸರಿ, ಖಾಲಿ ಜಾಗದಲ್ಲಿದ್ದ ಗೊಚ್ಚನ್ನು ತಂದು ರಸ್ತೆಗೆ ಹಾಕಿ, ಮೇಲೆ ರೋಡ್ ರೋಲರ್‌ನಿಂದ ಗಟ್ಟಿ ಮಾಡಿದೆವು. ಈಗ ವಾಹನ ಓಡಾಡಲು ಅಥವಾ ನಡೆದಾಡಲು ತೊಂದರೆಯಿಲ್ಲ.
ಅಗಳ ಸ್ವಚ್ಛಮಾಡಿದ್ದರಿಂದ ಎಲ್ಲಾ ಕಡೆಗಳಿಂದಲೂ ದನಗಳಿಗೆ ಒಳಕ್ಕೆ ಬರುವುದು ಕಷ್ಟವಾಯಿತು. ಮುಖ್ಯದ್ವಾರದಿಂದಲೇ ಒಳ ಹೋಗಿ ಸಂಜೆಯವರೆಗೂ ಮೇಯ್ದುಕೊಂಡು ಹೋಗುತ್ತಿದ್ದವು. ಹಿಂದೆಲ್ಲಾ ದನಗಳಿಗಾಗಿಯೇ ಗೋಮಾಳಗಳನ್ನು ಮೀಸಲಾಗಿಡುತ್ತಿತ್ತು. ಕೃಷಿ ಮತ್ತು ವಸತಿಗಾಗಿ ಬಹುತೇಕ ಗೋಮಾಳಗಳು ಈಗ ಉಳಿದಿಲ್ಲ. ಸಾರ್ವಜನಿಕ ಸ್ವತ್ತು ಯಾರದ್ದೂ ಅಲ್ಲವೆಂಬ ಭಾವ ನಮ್ಮಲ್ಲಿಯ ಎಲ್ಲಾ ಪ್ರಜೆಗಳಿಗೂ ಇದೆ. ಪ್ರಭಾವಿಗಳು ಒತ್ತುವರಿ ಮಾಡಿಕೊಂಡರೂ ಕೇಳುವವರಿಲ್ಲ. ಬೆಂಗಳೂರು ನಿರ್ಮಿಸಿದ ಕೆಂಪೆಗೌಡರ ಹೆಸರಿನ ಕೆರೆಯನ್ನೇ ಮಾಯ ಮಾಡಿದವರು ನಾವು. ಇನ್ನು ಹಳ್ಳಿಗಳ ಗೋಮಾಳಗಳನ್ನು ಕೇಳುವವರ್‍ಯಾರು? ದನಗಳೇನು ನಮ್ಮ ಜಾಗವನ್ನು ಹಾಳು ಮಾಡಲಿಲ್ಲ. ಖಾಲಿ ಜಾಗದಲ್ಲಿ ಬೆಳೆಯುವ ಹುಲ್ಲನ್ನೇ ಮೇಯ್ದುಕೊಂಡು ಹೋಗುತ್ತಿದ್ದವು. ೨೦೧೩ರಲ್ಲೇ ಒಂದಷ್ಟು ಗಿಡಗಳನ್ನು ತಂದು ನೆಟ್ಟಿದ್ದೆ. ಬೇರೆ-ಬೇರೆ ಜಾತಿಯ ಹಲಸು-ಮಾವು, ನೇರಲು, ಸಂಪಿಗೆ, ಸಾಲುಧೂಪ ಇತ್ಯಾದಿಗಳು. ಇದರಲ್ಲಿ ಹಲಸು-ಮಾವು ಗಿಡಗಳನ್ನು ದನಗಳು ತಿನ್ನಲು ಪ್ರಾರಂಭಿಸಿದವು. ನೆಟ್ಟ ಗಿಡಗಳು ೮-೧೦ ಅಡಿ ಬೆಳೆದರೆ ತೊಂದರೆಯಿಲ್ಲ. ಆಗ ದನಗಳು ಒಳ ಬಂದು ಮೇಯ ಬಹುದು. ಚಿಕ್ಕ ಗಿಡಗಳನ್ನೇ ತಿನ್ನುತ್ತಾ ಹೋದರೆ, ಕಾಡು ಕಟ್ಟುವುದು ಹೇಗೆ? ಇದಕ್ಕೊಂದು ಪರಿಹಾರವೆಂಬಂತೆ ಮುಖ್ಯದ್ವಾರಕ್ಕೊಂದು ಗೇಟು ಮಾಡಿ ಬಂದೋಬಸ್ತು ಮಾಡಿದೆವು. ಇನ್ನು ದನಗಳು ಬರಲಿಕ್ಕಿಲ್ಲ, ಗಿಡ ಚೆನ್ನಾಗಿ ಬೆಳೆಯುತ್ತದೆ ಎಂದೆಲ್ಲಾ ಯೋಚನೆ. ಗೇಟಿಗೆ ಬೀಗ ಹಾಕುತ್ತಿರಲಿಲ್ಲ. ಅಗಳಕ್ಕೆ ಪ್ಲಾಸ್ಟಿಕ್ ಹಾಕಿ ಉಪಕಾರ ಮಾಡಿದ ಗಣ್ಯರೇ ದಿನಾ ಬೆಳಗ್ಗೆ ಗೇಟು ತೆಗೆದು ಎಲ್ಲಾ ದನಗಳನ್ನು ಒಳಕ್ಕೆ ಬಿಡುವುದು. ೨೪ ತಾಸು ಎಲ್ಲವನ್ನೂ ಎಲ್ಲರಿಗೂ ನೋಡುತ್ತಾ ಕೂರಲು ಆಗುವುದಿಲ್ಲ. ಅಲ್ಲದೆ ಆ ಮಹಾಶಯನಿಗೆ ನನ್ನ ಕಾಡು ಬೆಳೆಸುವ ಯೋಜನೆಯನ್ನು ವಿವರವಾಗಿ ಹೇಳಿದ್ದೆ. ಯಾಕೆ ಹೀಗೆ ಮಾಡುತ್ತಾರೆ ಎಂದು ತರ್ಕಿಸಿದೆ. ಅವರ ೩೦ ಎಕರೆ ಜಾಗಕ್ಕೆ ಪೂರ್ತಿಯಾಗಿ ಅಗಳ ತೆಗೆದಿರಲಿಲ್ಲ. ಬರೀ ತಂತಿಬೇಲಿಯಿತ್ತು. ಅಲ್ಲಲ್ಲಿ ಹಾಳಾದ ತಂತಿಬೇಲಿಯಿಂದ ದನಗಳು ಅವರ ಸ್ವತ್ತಿನೊಳಕ್ಕೆ ಹೋಗಿ ಮೇಯುತ್ತಿದ್ದವು. ಬೆಳ್ಳಂಬೆಳಗ್ಗೆ ಎಲ್ಲಾ ದನಗಳನ್ನು ನಮ್ಮ ಭಾವಿ ಕಾಡಿಗೆ ಅಟ್ಟಿದರೆ, ಅವರಿಗೆ ತಲೆಬಿಸಿ ಕಡಿಮೆ. ಸರಿ ಇದಕ್ಕೊಂದು ಬೀಗ ಹಾಕಿದೆ. ಗೇಟಿನ ಪಕ್ಕದ ಮೂರಡಿ ಜಾಗವನ್ನು ಹಳೇ ಬಿದಿರು ಹಾಕಿ ಬೇಲಿ ಮಾಡಿದ್ದೆ. ಬೇಲಿಯನ್ನೇ ಅದ್ಯಾರೋ ಕಿತ್ತು ಹಾಕಿದರು. ಅಂತೂ ನಿರಂತರವಾಗಿ ದನಗಳು ನಮ್ಮ ಜಾಗದಲ್ಲೇ ಇಡೀ ದಿನವನ್ನು ಕಳೆಯುವಂತಾಯಿತು. ತಿನ್ನುವಷ್ಟು ಗಿಡಗಳನ್ನು ದನಗಳು ಅದಾಗಲೇ ತಿಂದಾಗಿತ್ತು. ಮಳೆಗಾಲವೂ ಮುಗಿಯಿತು. ಮುಂದಿನ ವರ್ಷ ನೋಡೋಣವೆಂದು ಗೇಟಿನ ಪಕ್ಕದ ಬೇಲಿಯನ್ನೇ ಹೈವೇ ಮಾಡಿಕೊಂಡ ದನಗಳಿಗೆ ಬಿಟ್ಟೆ.
೨೦೧೪ರ ಮೇ ತಿಂಗಳು ಕಳೆದು ಮಳೆಗಾಲ ಶುರುವಾಗುವ ಸಮಯ. ಇಡೀ ಬೇಲಿಯನ್ನು ಬಂದೋಬಸ್ತ್ ಮಾಡಿ ಗಿಡ ನೆಡಲು ತಯಾರು ಮಾಡುವ ಯೋಚನೆಯಲ್ಲಿದ್ದೆ. ನಮ್ಮ ಸ್ನೇಹಿತರು ಖರೀದಿಸಿದ ಜಾಗದ ಭೌಗೋಳಿಕ ಚರ್ಯೆಯನ್ನು ಇಲ್ಲಿ ಕೊಂಚ ಹೇಳಬೇಕು. ಮೇಲೆ ಹೇಳಿದ ನಮ್ಮ ನೆರೆ-ಹೊರೆಯವರು ತಮ್ಮ ಆಶ್ರಮಕ್ಕೆ ಹೋಗಲು ಒಂದು ರಸ್ತೆಯನ್ನು ಮಾಡಿಕೊಂಡಿದ್ದಾರೆ. ಅದೇ ರಸ್ತೆಯೇ ನಮ್ಮ ಕಾಡಿಗೆ ಹೋಗುವ ದಾರಿಯೂ ಹೌದು. ಇದು ಬಿಟ್ಟರೆ ನಮಗೆ ಬೇರೆ ದಾರಿಯಿಲ್ಲ. ಅದೇ ನೆರೆ-ಹೊರೆಯವರು ಮುಖ್ಯರಸ್ತೆಯಿಂದ ತಮ್ಮ ಆಶ್ರಮಕ್ಕೆ ತಿರುಗುವ ದಾರಿಯಲ್ಲಿ ಒಂದು ಗೇಟನ್ನು ನಿರ್ಮಿಸಿದರು. ಅವರ ಪ್ರಕಾರ ಆ ರಸ್ತೆಯನ್ನು ಅವರು ತಮ್ಮ ಸ್ವಂತ ಖರ್ಚಿನಲ್ಲಿ ನಿರ್ಮಿಸಿಕೊಂಡಿದ್ದರು. ಸರಿ, ನಾವು ನಮ್ಮ ಜಾಗಕ್ಕೆ ಹೋಗುವ ಬಗೆ ಹೇಗೆ? ಹಳೇ ದಾಖಲೆಗಳ ಉತ್ಖನನ ಕೆಲಸವನ್ನು ಶುರು ಮಾಡಿದೆ. ಸದರಿ ಆಶ್ರಮದವರು ಯಾರಿಂದ ಜಮೀನು ಖರೀದಿ ಮಾಡಿದ್ದಾರೆ ಇತ್ಯಾದಿಗಳು. ಒಂದೊಳ್ಳೆ ಕೆಲಸ ಮಾಡಲು ಎಷ್ಟೊಂದು ಅಡಚಣೆಗಳು ನೋಡಿ. ನಿವಾರಿಸಿಕೊಳ್ಳುತ್ತಲೇ ಮುಂದೆ ಸಾಗಬೇಕು. ಸರಿ, ಗ್ರಾಮ ಪಂಚಾಯ್ತಿಯಲ್ಲಿ ದಾಖಲೆಗಳನ್ನು ತೆಗೆಸಿಯಾಯಿತು. ಕಂದಾಯ ಇಲಾಖೆಯಿಂದ ಮತ್ತೊಮ್ಮೆ ನಕಾಶೆಗಳನ್ನು ಪಡೆಯಲಾಯಿತು. ಈ ಹಿಂದೆ ಜಮೀನು ಮಾರಿದವರ ಮನೆಯನ್ನು ಎಡತಾಕಿಯಾಯಿತು. ಎಲ್ಲರೂ ಸಹಕಾರವನ್ನು ನೀಡಿದರು. ರಸ್ತೆಗಾಗಿ ಆಶ್ರಮದವರು ೧೫ * ೩೦೦ ಅಡಿ ಜಾಗವನ್ನು ೫೦೦ ರೂಪಾಯಿಗಳಿಗೆ ಖರೀದಿ ಮಾಡಿದ ದಾಖಲೆ ಲಭ್ಯವಾಯಿತು. ಅದರಲ್ಲಿ ನಿಖರವಾಗಿ ರಸ್ತೆ ನಿರ್ಮಾಣಕ್ಕಾಗಿಯೇ ಜಾಗವನ್ನು ಮಾರಾಟ ಮಾಡಲಾಗಿದ್ದು ದಾಖಲಾಗಿತ್ತು. ಅಲ್ಲದೇ ಇವರು ಖರೀದಿಸಿದ ಜಾಗದ ಪಕ್ಕದಲ್ಲೇ ನಮಗೆ ಬೇಕಾದಷ್ಟು, ಅಂದರೆ ಓಡಾಡುವಷ್ಟು ಸರ್ಕಾರಿ ಜಾಗವೂ ಇತ್ತು. ಇಲ್ಲಿಗೆ ನಮ್ಮದು ರಸ್ತೆಯ ವಿಚಾರದಲ್ಲಿನ ತಲೆಬಿಸಿ ಕಡಿಮೆಯಾಯಿತು. ಇಷ್ಟರಲ್ಲಿ ಮತ್ತೊಂದು ಕ್ಯಾತೆ ತೆಗೆದರು, ರಸ್ತೆಗೆ ಟಾರನ್ನು ನಮ್ಮ ಖರ್ಚಿನಿಂದ ಹಾಕಿಸಿಕೊಂಡಿದ್ದೇವೆ!! ನೀವು ಒಡಾಡಿದರೆ ನಮ್ಮ ರಸ್ತೆ ಹಾಳಾಗುತ್ತದೆ. ಥತ್! ಇವರದೊಳ್ಳೆ ತರಲೆಯಾಯಿತಲ್ಲ!! ಮತ್ತೆ ಟಾರು ರಸ್ತೆಗೆ ಸಂಬಂಧಿಸಿದ ದಾಖಲೆ ತೆಗೆಸಲು ಜಿಲ್ಲಾ ಪಂಚಾಯತ್ ಇಲಾಖೆಯ ಮೊರೆ ಹೋದೆವು. ಸುಮಾರು ೮-೧೦ ವರ್ಷಗಳಷ್ಟು ಹಳೆಯ ಟಾರು ರಸ್ತೆಯದು. ಇಷ್ಟೆಲ್ಲಾ ತಕರಾರು-ತೊಂದರೆ ಮಾಡಿದರೂ, ಪಕ್ಕದವರೊಂದಿಗೆ ತರಲೆ-ತಕರಾರು ಏಕೆ? ದಿನ ಬೆಳಗಾದರೆ ಒಬ್ಬರ ಮುಖವೊನ್ನೊಬ್ಬರು ನೋಡಬೇಕಾದ ಅನಿವಾರ್ಯತೆಯಿದೆ. ಆದ್ದರಿಂದ, ಅವರೊಂದಿಗೆ ಸೌಹಾರ್ಧಯುತವಾಗಿಯೇ ಇರಬೇಕು ಎಂದು ದೃಢ ನಿರ್ಧಾರದೊಂದಿಗೆ ಇದ್ದೆ.
ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡು ಧನಾತ್ಮಕ ಯೋಚನೆಗಳು, ಯೋಜನೆಗಳನ್ನು ಮಾಡುತ್ತಿದ್ದರೆ ಅನುಭವದ ಜೊತೆಗೆ ಮನಸ್ಸೂ ಮಾಗುತ್ತದೆ. ಮಕ್ಕಳಾಗಿದ್ದಾಗಿನ ಅತ್ಯುತ್ಸಾಹ ಇರದಿದ್ದರೂ, ಯೌವನದ ಕಿಚ್ಚು-ಆಕ್ರೋಶ ಇಲ್ಲದಿದ್ದರೂ, ಜೀವನದ ಗಡಿಯಾರ ಲಯಬದ್ಧವಾಗಿ ಚಲಿಸಿದಂತೆ ನಡೆಯುತ್ತಿರುತ್ತದೆ. ಅದರಲ್ಲೂ ಮರ-ಗಿಡಗಳ ಜೊತೆಗಿನ ಒಡನಾಟ ಅವರ್ಚನೀಯ ಆನಂದವನ್ನು ಸದಾ ಲಭ್ಯವಾಗಿಸುತ್ತದೆ. ನಿರಂತರವಾದ ಆನಂದ-ಸಂತೋಷ ಲಭ್ಯವಾಗಬೇಕೆಂದರೆ, ಜಗಳ-ಈರ್ಷ್ಯೆ-ಅಸೂಯೆಗಳನ್ನು ತ್ಯಾಗ ಮಾಡುವುದು ಅನಿವಾರ್ಯ ಹಾಗೂ ಈ ತರಹದ ತ್ಯಾಗಗಳು ಯುಕ್ತವಾಗಿರುತ್ತವೆ. ಜಗಳ-ದೊಂಬಿಗೆ ಗೊಬ್ಬರ-ನೀರು ಎರೆದು ಉದ್ಧಾರವಾದವರು ಯಾರಿದ್ದಾರೆ? ಈ ತರಹದ ಮನೋಧೋರಣೆಯಿರುವವರು ತಾತ್ಕಾಲಿಕವಾದ ಜಯ ಪಡೆದುಕೊಂಡರೂ, ಶಾಶ್ವತವಾಗಿ ಆ ಜಯವನ್ನು ಇಟ್ಟುಕೊಳ್ಳಲು ವಿಫಲವಾಗುತ್ತಾರೆ. ಇತಿಹಾಸದ ಯಾವ ಪುಟಗಳನ್ನು ತೆಗೆದು ನೋಡಿದರೂ ಈ ಸತ್ಯ ಗೋಚರಿಸುತ್ತದೆ.
ಸದ್ದಿಲ್ಲದೇ ನಡೆಯುತ್ತಿರುವ ಈ ಮಹತ್ಕಾರ್ಯಕ್ಕೆ ತೀರಾ ಪ್ರಚಾರವನ್ನು ಕೊಡಲು ಹೋಗಲಿಲ್ಲ. ಬಹಳ ಆಸಕ್ತಿ ಹೊಂದಿರುವ ಕೆಲವು ಸ್ನೇಹಿತರು ಕಾಡು ಬೆಳೆಸುವ ಕಾರ್ಯಕ್ಕೆ ಸಂತೋಷ ವ್ಯಕ್ತಪಡಿಸಿ, ಬೆನ್ನು ಚಪ್ಪರಿಸಿದರು. ಕಾಯ್ದೆ-ಕಾನೂನು ರೂಪಿಸುವ ಭಾವಿ ರಾಜಕಾರಣಿಗಳಾದ ಹಾಲಿ ಗ್ರಾಮಪಂಚಾಯ್ತಿ ಸದಸ್ಯರನ್ನು ಕರೆದುಕೊಂಡು ಹೋಗಿ ತೋರಿಸಿದೆ. ಕೆಲವರು ಮೇಲ್ನೋಟಕ್ಕೆ ಸಂತೋಷ ವ್ಯಕ್ತಪಡಿಸಿದರೂ, ೨೦ ಎಕರೆಗಳಷ್ಟು ಜಾಗವನ್ನು ಅಲಿನೇಷನ್ ಮಾಡಿ, ಸೈಟ್ ಮಾಡಿ ಮಾರಿದರೆ ಎಷ್ಟೊಂದು ಹಣ ಗಳಿಸಬಹುದಿತ್ತು. ಸುಮ್ಮನೆ ಕಾಡು ಬೆಳೆಸಿ ಜಾಗವನ್ನು ಹಾಳು ಮಾಡುತ್ತಾರೆ ಎಂಬ ಧೋರಣೆ ಕಂಡು ಬಂದಿತು. ಅವರ ಈ ಧೋರಣೆಗೆ ಪ್ರತಿಕ್ರಿಯೆ ನೀಡಲು ಹೋಗಲಿಲ್ಲ. ನಕ್ಕು ಸುಮ್ಮನಾದೆ. ಒಂದು ಕಾಲದಲ್ಲಿ ಅಂದರೆ ಸುಮಾರು ೪೦-೫೦ ವರ್ಷಗಳ ಹಿಂದೆ ದಟ್ಟಾರಣ್ಯವಾಗಿದ್ದ ಈ ಜಾಗದಲ್ಲಿ ಎಲ್ಲವೂ ಸರ್ವನಾಶವಾಗಿ, ಅಕೇಶಿಯಾ-ನೀಲಗಿರಿ ತಲೆಯೆತ್ತಿ ಬೆಳೆಸಿದವರಿಗೆ ಲಾಭ ತಂದಿತ್ತು, ಮತ್ತೆ ಚಕ್ರ ತಿರುಗಿ ಚಿಕ್ಕ ಕಾಡು ಬೆಳೆಸುವ ಈ ಇಡೀ ಯೋಜನೆಯೇ ಒಂದು ವಿಪರ್ಯಾಸದ ಪ್ರತಿರೂಪದಂತೆ ತೋರುತ್ತದೆ. ಯೋಜಿತ ಈ ಕಾಡಿನಲ್ಲಿ ಮತ್ತೆ ಹುಲಿ-ಚಿರತೆಗಳನ್ನು, ಆನೆಗಳನ್ನು ಕಾಣುವುದು ದೂರದ ಮಾತಾದರೂ, ಚಿಕ್ಕ-ಪುಟ್ಟ ಪಕ್ಷಿ-ಸಂಕುಲ, ಕಾಡೆಮ್ಮೆ, ಜಿಂಕೆ, ಕಾನುಕುರಿ ಇವುಗಳನ್ನು ನಿಶ್ಚಿತವಾಗಿ ನೋಡಬಹುದಾದ ದಿನ ದೂರವಿಲ್ಲ ಎನ್ನಬಹುದು.