ಆಗ ಹೆಚ್ಚೆಂದರೆ ನನಗೆ ಐದು ವರ್ಷ.
ಅಕ್ಕ ಅಮನ್ ಗೆ ‘ಅದನ್ನು’ ಮಾಡಿಸುವುದರ ಬಗ್ಗೆ ಮನೆಯೆಲ್ಲಾ ಗುಲ್ಲು. ‘ಅದನ್ನು’ ಮಾಡಿಸಿಕೊಂಡರೆ ನಮ್ಮಲ್ಲಿಯ ಹೆಣ್ಣುಮಕ್ಕಳಿಗೆ ಭಾರೀ ಬೇಡಿಕೆ. ಒಂದು ಪ್ರತಿಷ್ಠೆಯ ಸಂಕೇತ. ಅಧಿಕೃತವಾಗಿ ಹೆಂಗಸಿನ ಪಟ್ಟಕ್ಕೆ ಭಡ್ತಿ. ನನಗಂತೂ ಈ ಬಗ್ಗೆ ಭಾರೀ ಕುತೂಹಲ. ‘ಅದು’ ಎಂಬುದು ಏನೆಂದು ತಲೆಬುಡ ಗೊತ್ತಿಲ್ಲದಿದ್ದರೂ ಅಮ್ಮನ ಕೊರಳಿಗೆ ಜೋತುಬಿದ್ದು ‘ಅಕ್ಕನಿಗೆ ಮಾಡಿಸುತ್ತೀರಲ್ಲಾ. ನನಗೂ ಮಾಡಿಸಿ’ ಎಂದು ಗೋಳು ಹುಯ್ದುಕೊಳ್ಳುವಷ್ಟರ ಮಟ್ಟಿಗೆ. ‘ಥೂ ಹೋಗೇ’ ಎಂದು ತಳ್ಳಿಹಾಕುವ ಅಮ್ಮ. ಕಣ್ಣಲ್ಲೇ ತುಂಟನಗೆಯೊಂದಿಗೆ ಕೆಣಕುವ ಅಕ್ಕ. ಏನಾದರೂ ಆಗಲಿ, ಈ ಬಾರಿ ಅದೇನೆಂಬುದನ್ನು ಪತ್ತೆಹಚ್ಚಿಯೇ ಸಿದ್ಧ ಎಂಬುದನ್ನು ನಾನು ಮನದಲ್ಲೇ ಶಪಥ ಮಾಡಿದ್ದೆ. ಅದರಂತೆಯೇ ಒಂದು ಯೋಜನೆಯನ್ನು ಹಾಕಿ ಪೊದೆಯೊಂದರ ಹಿಂದೆ ಅಡಗಿ ಕುಳಿತು ಅಕ್ಕ ಹೆಂಗಸಾಗುವ ಪರಿಯನ್ನು ಕುತೂಹಲದಿಂದ ದಿಟ್ಟಿಸುತ್ತಿದ್ದೇನೆ ನಾನು.
ಅಕ್ಕನನ್ನು ನೆಲದ ಮೇಲೆ ಕೂರಿಸಿ ಅಮ್ಮ ಮತ್ತು ಆಕೆಯ ಗೆಳತಿಯರು ಅವಳ ಭುಜವನ್ನು ಬಿಗಿಯಾಗಿ ಅಮುಕಿ ಹಿಡಿದಿದ್ದಾರೆ. ಅಕ್ಕನ ಸೊಂಟದ ಕೆಳಗೆ ಯಾವ ವಸ್ತ್ರವೂ ಕಾಣುತ್ತಿಲ್ಲ. ಅಕ್ಕನ ತಲೆಯನ್ನು ಹಿಂಭಾಗಕ್ಕೆ ತಂದು ದೇಹವನ್ನು ಮಲಗಿದ ಶೈಲಿಯಲ್ಲಿ ಇರಿಸಿದಂತೆಯೇ ಅಕ್ಕ ಮೆಲ್ಲಗೆ ತನ್ನ ಕಾಲುಗಳನ್ನು ಅಗಲಿಸಿಕೊಂಡಳು. ಅಮ್ಮ ಅವಳ ಮುಖವನ್ನು ಬೇರೆಡೆಗೆ ತಿರುಗಿಸಿ ಅವಳ ಮುಖವನ್ನು ತನ್ನ ವಸ್ತ್ರದಿಂದ ಮುಚ್ಚಿದಳು. ಅಷ್ಟರಲ್ಲಿ ಕೈಚೀಲ ಹಿಡಿದಿದ್ದ ಮುದುಕಿಯೊಬ್ಬಳು ಅಕ್ಕನಿಗೆ ಎದುರಾಗಿ ಕುಳಿತು ತನ್ನ ಜೋಳಿಗೆಯಿಂದ ಒಂದೊಂದೇ ವಸ್ತುಗಳನ್ನು ತೆಗೆದು ಅಕ್ಕನ ಗುಪ್ತಾಂಗದಲ್ಲಿ ಏನೋ ಮಾಡುತ್ತಿದ್ದಂತೆ ತೋರಿತು. ಕೆಲ ನಿಮಿಷಗಳಲ್ಲೇ ಅಕ್ಕ ಜೋರಾಗಿ ಚೀರಾಡಿಕೊಂಡು ತನ್ನನ್ನು ಹಿಡಿದಿದ್ದ ಎಲ್ಲರನ್ನೂ ಕೊಡವಿ ಮುದುಕಿಗೆ ಬಲವಾಗಿ ಒದ್ದು ಓಡಲು ಪ್ರಯತ್ನಿಸಿದಳು. ಆದರೆ ಒಂದೆರಡು ಹೆಜ್ಜೆಗಳಲ್ಲೇ ಅವಳು ಓಡಲು ಶಕ್ತಿ ಸಾಕಾಗದೆ ಕುಸಿದುಬಿದ್ದಳು. ಇವೆಲ್ಲವನ್ನೂ ಪಳಗಿಸಿದಂತೆ ಕಂಡ ಮುದುಕಿ ವಿಚಲಿತಳಾಗದೆ ಅಕ್ಕ ಕುಸಿದುಬಿದ್ದ ಜಾಗದಲ್ಲೇ ಅಮ್ಮ ಮತ್ತು ಇತರ ಹೆಂಗಸಿನ ನೆರವಿನಿಂದ ತನ್ನ ಕೆಲಸವನ್ನು ಮುಂದುವರೆಸಿದಳು. ಆ ಮುದುಕಿ ಅದೇನು ಮಾಡಿತೋ ತಿಳಿಯದು. ಕೆಲ ನಿಮಿಷಗಳಲ್ಲೇ ಅಕ್ಕನ ಕಾಲುಗಳ ಮೇಲೆ ಧಾರಾಕಾರವಾಗಿ ಸುರಿಯುತ್ತಿರುವ ರಕ್ತವನ್ನು ಕಂಡು ನನಗೆ ಜೀವವೇ ಬಾಯಿಗೆ ಬಂದಂತಾಯಿತು. ಎದ್ದೆನೋ ಬಿದ್ದೆನೋ ಎಂದು ಭಯದಿಂದ ನಾನು ತಿರುಗಿ ನೋಡದೆ ಮನೆಕಡೆಗೆ ವಾಪಾಸು ಓಡತೊಡಗಿದೆ. ಅಕ್ಕನ ಚೀರಾಟ ಮುಗಿಲು ಮುಟ್ಟಿತ್ತು.
ಎರಡು ದಿನ ಅವಳನ್ನು ಪ್ರತ್ಯೇಕ ಇಟ್ಟಿದ್ದಷ್ಟೇ ಅಲ್ಲದೆ, ಮೂತ್ರವಿಸರ್ಜನೆ ಮಾಡಕೂಡದು ಎಂದು ಅವಳಿಗೆ ಎರಡು ದಿನ ಹನಿನೀರನ್ನೂ ಕೊಟ್ಟಿರಲಿಲ್ಲ. ಮೂರನೇ ದಿನ ನೀರಹನಿಯು ಅವಳ ಗಂಟಲು ಸೋಕುವಷ್ಟರಲ್ಲಿ ಅಕ್ಕ ಹೈರಾಣಾಗಿದ್ದಳು. ಇದಾದ ಕೆಲದಿನಗಳ ನಂತರ ‘ಏನಾಯಿತೇ ಆ ದಿನ?’, ಎಂದು ಅವಳನ್ನು ಮಾತಿಗೆಳೆದೆ. ‘ಅಬ್ಬಾ, ಅದೊಂದು ನರಕ’, ಎಂದು ನಿಟ್ಟುಸಿರಿಡುತ್ತಾ ‘ನಿನಗೂ ಆಗುತ್ತದೆ ಬಿಡು, ಆಗ ನೋಡುವಂತೆ’ ಎಂದು ಕಣ್ಣು ಮಿಟುಕಿಸಿದಳು. ಥೇಟು ಅಮ್ಮನಂತೆಯೇ ಅವಳು, ಭಲೇ ಕಿಲಾಡಿ ಹೆಣ್ಣು. ಅಂತೂ ನನ್ನ ಕೆಟ್ಟ ಕುತೂಹಲಕ್ಕೆ ಉತ್ತರ ಸಿಗಲಿಲ್ಲ. ‘ಏನಾದರೂ ಆಗಲಿ, ನನಗೂ ‘ಅದು’ ಆಗುವಂತೆ ಮಾಡು, ಬೇಗ ನನ್ನನ್ನು ಹೆಂಗಸಾಗಿಸು’, ಎಂದು ಅದಮ್ಯ ಮೋಹದಿಂದ ದೇವರಲ್ಲಿ ಪರಿಪರಿಯಾಗಿ ಆ ರಾತ್ರಿ ಬೇಡಿಕೊಂಡೆ.
ಇದಾದ ಕೆಲದಿನಗಳಲ್ಲೇ ನನ್ನ ಬಹುದಿನದ ಕುತೂಹಲಕ್ಕೆ ಉತ್ತರ ಸಿಗುವ ಸಮಯ ಬಂದೇಬಿಟ್ಟಿತ್ತು. ಬೆಳಕು ಹರಿಯುವ ಸಾಕಷ್ಟು ಮುನ್ನವೇ ಅಮ್ಮ ನನ್ನನ್ನು ಬೇಗನೆ ಎಬ್ಬಿಸಿ ಮನೆಯಿಂದ ಅನತಿದೂರದಲ್ಲಿರುವ ನಿರ್ಜನ ಜಾಗವೊಂದಕ್ಕೆ ನನ್ನೊಂದಿಗೆ ಮತ್ತು ಅದೇ ಮುದುಕಿಯೊಂದಿಗೆ ಹೆಜ್ಜೆಹಾಕತೊಡಗಿದಳು. ಕಳೆದ ಒಂದೆರಡು ದಿನಗಳಿಂದ ನನ್ನ ಊಟೋಪಚಾರದಲ್ಲಿ ಸಾಕಷ್ಟು ನಿಗಾವಹಿಸುತ್ತಿದ್ದಾಗಲೇ ಏನೋ ಆಗಲಿದೆಯೆಂಬ ಸುಳಿವು ನನಗೆ ಸಿಕ್ಕಿತ್ತು. ಇಷ್ಟು ದಿನ ಭಾರೀ ಕುತೂಹಲವಿದ್ದರೂ ಒಮ್ಮೆಲೇ ಅಕ್ಕನ ಚೀರಾಟದ ನೆನಪಾಗಿ ನನಗೆ ಸಣ್ಣಗೆ ಭಯವಾಗತೊಡಗಿತ್ತು. ಆಕಾಶ ಛಿದ್ರಗೊಳ್ಳುವಷ್ಟು ಚೀರಾಡಿದರೂ ಯಾರಿಗೂ ಕೇಳಿಸುವಂತಿರಲಿಲ್ಲ ಈ ಜಾಗ. ಅಷ್ಟೇ ಅಲ್ಲದೆ ಇಡೀ ಊರಿಗೆ ಊರೇ ಮುಂಜಾವಿನ ಸುಖನಿದ್ರೆಯಲ್ಲಿ ಮುಳುಗಿತ್ತು. ‘ಸ್ವಲ್ಪ ನೋವಾಗಬಹುದು ಹುಡುಗೀ, ಜಾಣಮರಿಯಲ್ವಾ ನೀನು, ಭಯಪಡಬೇಡ…ಎಲ್ಲವೂ ಬೇಗನೇ ಮುಗಿದುಹೋಗುತ್ತದೆ’. ಎಂದು ಮುದುಕಿ ನನ್ನನ್ನು ಪುಸಲಾಯಿಸತೊಡಗಿದಳು. ಅಂತೂ ಆ ಘಳಿಗೆ ಬಂದೇ ಬಿಟ್ಟಿತ್ತು.
ಅಕ್ಕನಂತೆಯೇ ನನ್ನನ್ನೂ ಒಂದು ಕಲ್ಲ ಮೇಲೆ ಕೂರಿಸಿದರು. ಅಮ್ಮ ನನ್ನ ಹಿಂಭಾಗದಲ್ಲಿ ಕುಳಿತು ತನ್ನ ಎರಡೂ ತೊಡೆಗಳನ್ನು ಬಿಗಿಯಾಗಿ ನನ್ನ ಭುಜದ ಮೇಲಿರಿಸಿ ನನ್ನನ್ನು ಮಿಸುಕಾಡದಂತೆ ಹಿಡಿದುಕೊಂಡಳು. ನನ್ನ ತಲೆಯನ್ನು ಅಮ್ಮ ತನ್ನ ಎದೆಗೆ ಒತ್ತಿ ಹಿಡಿದುಕೊಂಡಳು. ಸೊಂಟದ ಕೆಳಭಾಗದಿಂದ ನಗ್ನಳಾಗಿದ್ದ ನಾನು ತನ್ನ ಎರಡೂ ಕಾಲುಗಳನ್ನೂ ಅಗಲಿಸಿಕೊಂಡೆ. ನನ್ನ ಅಗಲಿಸಿದ ಕಾಲುಗಳ ಎದುರಿಗೆ ಕುಳಿತಿದ್ದ ಮುದುಕಿ ತನ್ನ ಧೂಳು ಹಿಡಿದ ಹಳೇ ಕೈ ಚೀಲದಿಂದ ಜಾಲಾಡಿ ಒಂದೊಂದೇ ವಸ್ತುಗಳನ್ನು ಹೊರತೆಗೆಯುತ್ತಿದ್ದುದನ್ನು ಕುತೂಹಲದ ಕಣ್ಣುಗಳಿಂದ ನಾನು ನೋಡುತ್ತಿದ್ದೆ. ‘ನನ್ನ ಮುದ್ದುಮರಿ ನೀನು, ತುಂಬಾ ನೋವಾದರೆ ಈ ಬೇರನ್ನು ಕಚ್ಚಿ ಹಿಡಿದುಕೋ, ಎಲ್ಲವೂ ಬೇಗನೇ ಮುಗಿದುಹೋಗುತ್ತದೆ’, ಎಂದು ಬೇರಿನ ತುಂಡೊಂದನ್ನು ಅಮ್ಮ ಮೆಲ್ಲಗೆ ನನ್ನ ಬಾಯಲ್ಲಿರಿಸಿದಳು. ಮುದುಕಿ ಒಂದು ಹಳೆಯದಾದ, ಒಣಗಿದ ರಕ್ತದ ಕಲೆಯುಳ್ಳ ಬ್ಲೇಡನ್ನು ತೆಗೆದು, ಅದರ ಎರಡೂ ಅಲಗುಗಳನ್ನು ವರುಷಗಳಿಂದ ನೀರಿನ ಮುಖ ಕಾಣದ ಬಟ್ಟೆಯೊಂದರಿಂದ ಒರೆಸತೊಡಗಿದಳು. ಒಂದು ಸೂಜಿ, ದಾರವನ್ನೂ ಅವಳ ಸೊರಗಿದ ಕೈಗಳಲ್ಲಿ ನಾನು ನೋಡಿದೆ. ಜಂಘಾಬಲವೇ ಉಡುಗಿಹೋದಂತಾಗಿ ನನಗೆ ಮೈಯೆಲ್ಲಾ ಸಣ್ಣಗೆ ಬೆವರಿತು. ಅಷ್ಟರಲ್ಲಿ ನನ್ನ ಕಣ್ಣುಗಳಿಗೆ ಕತ್ತಲು ಕವಿಯಿತು. ಅಮ್ಮನ ವಸ್ತ್ರ ನನ್ನ ಮುಖವನ್ನು ಮುಚ್ಚಿತ್ತು.
ಅನಂತರ ಆಗಿದ್ದು ನನ್ನ ಭಾಗಶಃ ಮೃತ್ಯು. ನನ್ನ ಗುಪ್ತಾಂಗಗಳ ಜೊತೆ ತನ್ನ ಹಳೆಯ ಧೂಳುಹಿಡಿದ ಸಾಧನಗಳೊಂದಿಗೆ ಏನೋ ಮಾಡತೊಡಗಿದಳು ಈ ಮುದುಕಿ. ಕ್ಷಣಾರ್ಧದಲ್ಲಿ ಭಯಾನಕವಾದ ಒಂದು ನೋವು ನನ್ನ ನರನಾಡಿಗಳಲ್ಲೆಲ್ಲಾ ಆವರಿಸಿದಂತೆಯೇ ನಾನು ಬೇರಿನ ತುಂಡನ್ನು ಇನ್ನಿಲ್ಲದಂತೆ ಕಚ್ಚಿಹಿಡಿದೆ. ನನ್ನ ದೇಹದ ಒಂದೊಂದು ಭಾಗವನ್ನು ಕೊಚ್ಚಿಹಾಕುತ್ತಿದ್ದಾರೆ ಎಂದನಿಸುತ್ತಿತ್ತು ನನಗೆ. ಆ ಯಮಸದೃಶ ನೋವು ನನ್ನ ಒಂದೊಂದು ಸೆಕೆಂಡುಗಳನ್ನೂ ಯುಗಗಳನ್ನಾಗಿಸಿತು. ಕಣ್ಣೀರು, ಕಂಪಿಸುವ ಮೈಯಿಂದ ಬೆವರು ಮತ್ತು ತೊಡೆಸಂದಿಗಳಿಂದ ರಕ್ತ ನಿರಂತರವಾಗಿ ಹರಿಯತೊಡಗಿತು. ‘ಒಳ್ಳೆಯ ಮಗಳು’, ಎಂದು ಹೇಳಿಸಿಕೊಳ್ಳುವ ಆಸೆಯಲ್ಲಿ ಅಕ್ಕನಂತೆ ಚೀರಾಡದೆ ಬೇರಿನ ತುಂಡನ್ನು ಬಲವಾಗಿ ಕಚ್ಚಿಹಿಡಿದಿದ್ದೆ. ಕೆಲ ನಿಮಿಷಗಳಲ್ಲೇ ನೋವು ತಡೆಯಲು ಅಸಾಧ್ಯವಾದಂತಾಗಿ ಕಣ್ಣಿಗೆ ಕತ್ತಲು ಕವಿಯಿತು. ನಾನು ಮೂರ್ಛೆ ಹೋಗಿದ್ದೆ.
ನನಗೆ ಎಚ್ಚರವಾದಾಗ ನನ್ನ ತೊಡೆಗಳ ಮಧ್ಯದಲ್ಲಿ ಹಳೇ ಬಟ್ಟೆಗಳನ್ನು ತುರುಕಿ, ಕಾಲುಗಳನ್ನು ಅಗಲಿಸದಂತೆ ಬಿಗಿಯಾಗಿ ಕಟ್ಟಿಹಾಕಲಾಗಿತ್ತು. ನನ್ನನ್ನು ಭಾಗಶಃ ಕೊಚ್ಚಿಹಾಕಿದ್ದ, ಪ್ರಾಣಿಗಳನ್ನು ಬಲಿಕೊಡುವ ಸ್ಥಳದಂತಿದ್ದ ಆ ಕಲ್ಲಿನ ಜಾಗ ರಕ್ತದಿಂದ ತೊಯ್ದುಹೋಗಿತ್ತು. ಅದರ ಮೇಲೆಯೇ ನನ್ನ ಕತ್ತರಿಸಲ್ಪಟ್ಟ ಗುಪ್ತಾಂಗದ ಕೆಲ ತುಣುಕುಗಳು ಅನಾಥವಾಗಿ ಬಿದ್ದಿದ್ದವು. ಅಮ್ಮ ಮತ್ತು ಅಕ್ಕ ಪಕ್ಕದಲ್ಲೇ ಮಾಡಿಟ್ಟಿದ್ದ ಗುಡಿಸಲೊಂದಕ್ಕೆ ನನ್ನನ್ನು ನಿಧಾನವಾಗಿ ಎಳೆದೊಯ್ದರು. ಏನಾಗುತ್ತಿದೆಯೆಂಬುದನ್ನು ಅರ್ಥಮಾಡಿಕೊಳ್ಳುವಷ್ಟರಲ್ಲೇ ರಾಕ್ಷಸನೋವು ಮರುಕಳಿಸಿ ಕಣ್ಣುಗಳು ಮತ್ತೊಮ್ಮೆ ಕತ್ತಲಾದವು.
ಎರಡು ದಿನಗಳ ನಂತರ ನನ್ನನ್ನು ಮನೆಗೆ ಕರೆದೊಯ್ಯಲಾಯಿತು. ಅಂದಹಾಗೆ ನನ್ನ ಯೋನಿಯನ್ನು ಬಹುತೇಕ ಹೊಲಿದು ಮುಚ್ಚಿ, ಮೂತ್ರವಿಸರ್ಜನೆಗೆಂದೇ ಚಿಕ್ಕದಾದ ರಂಧ್ರವನ್ನು ಉಳಿಸಿದ್ದರು. ಹಲವು ದಿನಗಳವರೆಗೆ ನಾನು ನಡೆಯುವ ಸ್ಥಿತಿಯಲ್ಲಿರಲಿಲ್ಲ. ಗಾಯ ಮಾಯುವುದರ ಬದಲು ಸೋಂಕಿನಿಂದ ಬಾತುಹೋಗಿ, ತೀವ್ರ ಜ್ವರದಿಂದ ದಿನಗಟ್ಟಲೆ ನರಳಿ ಹೈರಾಣಾಗಿ ಹೋದೆ.
ಕಲ್ಪಿಸಲೂ ಕ್ರೂರವೆನಿಸುವ ಈ ಮೇಲೆ ನಡೆದ ಪ್ರಕ್ರಿಯೆಯ ಹೆಸರು ‘ಫೀಮೇಲ್ ಜನೈಟಲ್ ಮ್ಯುಟಿಲೇಷನ್ (ಎಫ್. ಜಿ. ಎಮ್)’ ಅಥವಾ ‘ಯೋನಿ ವಿಚ್ಛೇದನ ಪ್ರಕ್ರಿಯೆ’. ಅಂದ ಹಾಗೆ ನನ್ನ ಹೆಸರು ವಾರಿಸ್ ಡಿರೀ.
ಮುಂದೆ ನೀವು ಓದಲಿರುವುದು ವಾರಿಸ್ ಡಿರೀ ಎಂಬ ಹೆಣ್ಣುಮಗಳ ಮತ್ತು ಎಫ್. ಜಿ. ಎಮ್ ಎಂಬ ಕ್ರೂರ, ಅಮಾನುಷ ಸಾಮಾಜಿಕ ಅನಿಷ್ಟದ ವಿರುದ್ಧ ವಾರಿಸ್ ಸಾರಿದ ಮಹಾಯುದ್ಧದ ಕಥೆ.
*****************
ಹೀಗೆ ವಾರಿಸ್ ಡಿರೀ ಎಂಬ ಜಗತ್ಪ್ರಸಿದ್ಧ ರೂಪದರ್ಶಿ, ಲೇಖಕಿ, ಸಾಮಾಜಿಕ ಕಾರ್ಯಕರ್ತೆ, ವಿಶ್ವಸಂಸ್ಥೆಯ ಮಾಜಿ ವಿಶೇಷ ರಾಯಭಾರಿ ತನ್ನ ‘ಡೆಸರ್ಟ್ ಫ್ಲವರ್’ (ಮರುಭೂಮಿಯ ಹೂ) ಎಂಬ ತನ್ನ ಆತ್ಮಕಥನದಲ್ಲಿ ನಿರ್ಭಿಡೆಯ ಅಕ್ಷರಗಳಿಂದ ಓದುಗರನ್ನು ಬೆಚ್ಚಿಬೀಳಿಸುತ್ತಾರೆ. ‘ವಾರಿಸ್’ ಎಂದರೆ ಸೊಮಾಲಿಯನ್ ಭಾಷೆಯಲ್ಲಿ ಮರುಭೂಮಿಯಲ್ಲಿ ಬೆಳೆಯುವ ಹಳದಿ ಬಣ್ಣದ ಒಂದು ಸುಂದರವಾದ ಹೂ. ವಾರಿಸ್ ಸೊಮಾಲಿಯಾದ ಒಂದು ಅಲೆಮಾರಿ ಬುಡಕಟ್ಟಿನ ಜನಾಂಗಕ್ಕೆ ಸೇರಿದವರು. ಅಪ್ಪ, ಅಮ್ಮ ಮತ್ತು ಅಣ್ಣ, ಅಕ್ಕ, ತಮ್ಮ, ತಂಗಿಯರ ತುಂಬು ಕುಟುಂಬವೊಂದರಲ್ಲಿ ಬಾಲ್ಯವನ್ನು ಕಂಡ ಓರ್ವ ಅನಕ್ಷರಸ್ಥೆ ಹೆಣ್ಣುಮಗಳು. ತುಂಬು ಕುಟುಂಬ, ಮೇಕೆ, ಕುರಿ, ಒಂಟೆ ಮತ್ತು ಅಲೆದಾಟಗಳೇ ಇವರ ಪುಟ್ಟ ಜಗತ್ತು. ಎತ್ತ ನೋಡಿದರೂ ಮರಳುಗಾಡೇ ಕಾಣುವ ಸೊಮಾಲಿಯಾದ ಈ ಭಾಗದ ಜನ ವಿದ್ಯುತ್ತು, ಓದು, ಟೆಲಿಫೋನುಗಳನ್ನು ಕಂಡವರಲ್ಲ. ಅಲೆಮಾರಿಗಳಾಗಿದ್ದ ಈ ಜನಾಂಗದ ಜನ ಯಾವ ಜಾಗದಲ್ಲೂ ಗಟ್ಟಿಯಾಗಿ ನೆಲೆ ನಿಂತವರಲ್ಲ. ತಮ್ಮ ಬೆರಳೆಣಿಕೆಯ ಪಾತ್ರೆ, ಪಗಡಿ, ಬಟ್ಟೆ ಮತ್ತು ಕಂಕುಳ ತುಂಬಾ ಮಕ್ಕಳನ್ನು ಹಿಡಿದುಕೊಂಡು ತಮ್ಮ ಕುರಿ, ಮೇಕೆ, ಒಂಟೆಗಳ ಹಿಂಡಿನೊಂದಿಗೆ ರಾತ್ರಿ-ಹಗಲುಗಳ ಪರಿವೆಯಿಲ್ಲದೆ ವಲಸೆ ಹೋಗುವುದು ಇವರಿಗೆ ಸಾಮಾನ್ಯ.
೧ : ವಾರಿಸ್ ಡೆರೀ – ಒಂದು ಶುಭ್ರ ಮುಗುಳ್ನಗೆ
ಇಂಥಾ ಕಗ್ಗತ್ತಲೆಯ ಖಂಡದ ಕತ್ತಲೆಯ ಕೂಪವೊಂದರಲ್ಲಿ ವಾರಿಸ್ ಎಂಬ ಹೂ ಜನ್ಮವೆತ್ತಿತು. ಈ ಭಾಗದ ಎಲ್ಲರಂತೆ ವಾರಿಸ್ ಗೂ ಜನ್ಮದಿನದ ಲೆಕ್ಕಾಚಾರವಿಲ್ಲ. ಅಪೌಷ್ಟಿಕತೆ, ಆರೋಗ್ಯದ ಸೌಲಭ್ಯಗಳ ಕೊರತೆಯಿಂದಾಗಿ ಮರಣವೆಂಬುದು ಇಲ್ಲಿ ಸರ್ವೇಸಾಮಾನ್ಯವಾದ ಸಂಗತಿ. ಮಗುವೊಂದು ಹುಟ್ಟಿ ಅದು ಎರಡು ವರ್ಷಗಳ ಮಟ್ಟಿಗೆ ಬದುಕುಳಿದರೆ ಮಾತ್ರವಷ್ಟೇ ಅದನ್ನು ಗಣನೆಗೆ ತೆಗೆದುಕೊಳ್ಳುತ್ತಾರಂತೆ ಇಲ್ಲಿ. ವಾರಿಸ್ ಹೇಳುವ ಪ್ರಕಾರ ಅವರ ಮನೆಯಲ್ಲೇ ಅಪೌಷ್ಟಿಕತೆ ಮತ್ತು ಇತರೆ ರೋಗಗಳಿಗೆ ಬಲಿಯಾಗಿ ಮಕ್ಕಳ ಸಂಖ್ಯೆ ಹನ್ನೆರಡರಿಂದ ಆರಕ್ಕಿಳಿದಿತ್ತು. ಹಾಗೆಯೇ ಸರ್ಕಾರ, ಮಿಲಿಟರಿ ಮತ್ತು ಸ್ಥಳೀಯ ಬಂಡುಕೋರರ ನಡುವಿನ ನಿರಂತರ ತಿಕ್ಕಾಟ, ಘರ್ಷಣೆಗಳ ಮಧ್ಯೆಯೇ ತಮ್ಮನ್ನು ತಾವು ರಕ್ಷಿಸಿಕೊಳ್ಳಬೇಕಾದ ಅನಿವಾರ್ಯತೆ ಈ ಅನಕ್ಷರಸ್ಥ ಬುಡಕಟ್ಟು ಜನಾಂಗಗಳದ್ದು. ಕೊಲೆ, ಅಪಹರಣ, ಅತ್ಯಾಚಾರ ಹೀಗೆ ಹಲವು ಅಪರಾಧಗಳ ಭೀತಿಯ ನೆರಳಲ್ಲೇ ಇಲ್ಲಿ ಇಂಥಾ ಹಲವು ಅಲೆಮಾರಿ ಜನಾಂಗಗಳು ಬದುಕುತ್ತಿದ್ದವು. ಇಂದಿಗೂ ಬದುಕುತ್ತಿವೆ. ಇಂತಹಾ ಪ್ರತಿಕೂಲ ವಾತಾವರಣದಲ್ಲಿ ಜನ್ಮವೆತ್ತಿದ ಅನಾಮಿಕ ಹೆಣ್ಣುಮಗಳೊಬ್ಬಳು ವಾರಿಸ್ ಡಿರೀ ಎಂಬ ದಂತಕಥೆಯಾಗಿ, ಆಫ್ರಿಕಾದ ಭರವಸೆಯ ಬೆಳಕಾಗಿ ಮೂಡಿಬರುವ ಕಥೆ ಮೈನವಿರೇಳಿಸುವಂಥದ್ದು.
ಹೀಗೆ ತನ್ನ ಐದನೇ ವಯಸ್ಸಿನಲ್ಲೇ ಎಫ್. ಜಿ. ಎಮ್ ಎಂಬ ಸಾಮಾಜಿಕ ಅನಿಷ್ಟಕ್ಕೆ ಒಳಗಾದ ವಾರಿಸ್ ಎಲ್ಲಾ ಹೆಣ್ಣುಮಕ್ಕಳಂತೆಯೇ ನೋವಿನಿಂದ ದಿನ ತಳ್ಳುತ್ತಿರುತ್ತಾರೆ. ಮೊದಲಿನ ಓಡಾಟ, ಹಾರಾಟ, ಮರ ಹತ್ತುವಿಕೆ, ಹುಡುಗಾಟ ಮಾಯವಾಗುತ್ತದೆ. ಅಂದ ಹಾಗೆ ಎಫ್. ಜಿ. ಎಮ್ ಅಂದರೆ ಯೋನಿಯ ಹೊರಭಾಗದ ಕೆಲ ಭಾಗ, ಗರ್ಭಾಷಯದ ಕೊರಳಿನ ತುದಿಯಲ್ಲಿರುವ ಚಿಕ್ಕ ಕಾಳಿನ ಗಾತ್ರದ ಲೈಂಗಿಕ ಸ್ಪರ್ಷ ಮತ್ತು ಸಂವೇದನೆಯ ಬಹುಮುಖ್ಯ ಭಾಗವನ್ನು ತೆಗೆದುಹಾಕಿ ಯೋನಿಯನ್ನು ಹೊಲಿಯುವ ಪ್ರಕ್ರಿಯೆ. ಈ ಪ್ರಕ್ರಿಯೆಯಲ್ಲಿ ಯೋನಿಯನ್ನು ಬಹುತೇಕ ಹೊಲಿದು ಮುಚ್ಚಿಬಿಟ್ಟು, ಮೂತ್ರವಿಸರ್ಜನೆಗಷ್ಟೇ ಚಿಕ್ಕದಾದ ರಂಧ್ರವನ್ನು ಉಳಿಸಿರುತ್ತಾರೆ. ಸುಮಾರು ಐದರಿಂದ ಹದಿನಾಲ್ಕು ವರ್ಷಗಳ ನಡುವಿನಲ್ಲಿ ಹೆಣ್ಣುಮಕ್ಕಳಿಗೆ ಈ ಪ್ರಕ್ರಿಯೆಯನ್ನು ಮಾಡಿಸಲಾಗುತ್ತದೆ. ಬಹು ವರ್ಷಗಳಿಂದ ಎಫ್. ಜಿ. ಎಮ್ ಮಾಡಿಸುವುದನ್ನೇ ಹಲವು ಮಧ್ಯವಯಸ್ಸಿನ ಹೆಂಗಸರು, ವೃದ್ಧೆಯರು ತಮ್ಮ ಪೂರ್ಣಾವಧಿ ಜೀವನೋಪಾಯವನ್ನಾಗಿ ಮಾಡಿಕೊಂಡು ಹಳ್ಳಿಯಿಂದ ಹಳ್ಳಿಗೆ ಅಲೆಯುತ್ತಾ ಸಾಕಷ್ಟು ಸಂಪಾದಿಸುತ್ತಾ ಬಂದಿದ್ದಾರೆ. ಬರೋಬ್ಬರಿ ಮೂರು ಸಾವಿರಕ್ಕೂ ಹೆಚ್ಚು ವರ್ಷದ ಇತಿಹಾಸವಿದೆಯೆಂದು ಹೇಳಗಾಗುವ ಈ ಅಮಾನವೀಯ ಸಾಮಾಜಿಕ ಆಚರಣೆಯ ಪ್ರಕ್ರಿಯೆ, ಪುರುಷ ಶಕ್ತಿಯ ಸ್ವಾರ್ಥಕ್ಕನುಗುಣವಾಗಿ ಕಾಲಕಾಲಕ್ಕೆ ಬದಲಾಗಿ ಮಹಿಳೆಯನ್ನು ಯಶಸ್ವಿಯಾಗಿ ತನ್ನ ಹದ್ದುಬಸ್ತಿನಲ್ಲಿಟ್ಟಿದೆ. ವಿವಾಹದ ಮೊದಲು ಹೆಣ್ಣು ಯಾವುದೇ ಪ್ರಕಾರದ ಲೈಂಗಿಕ ಸುಖವನ್ನು ಅನುಭವಿಸಕೂಡದು, ಪತಿಗಾಗಿ ಅವಳು ತನ್ನ ಪರಿಶುದ್ಧತೆಯನ್ನು ಕಾಯ್ದುಕೊಳ್ಳಬೇಕು ಎಂಬ ವಿವರಣೆ ಈ ಸಾಮಾಜಿಕ ಅನಿಷ್ಟದ್ದು.
ಪತ್ನಿಯಾಗುವ, ತಾಯಿಯಾಗುವ ಒಂದು ಸಹಜ ಸಾಮಾಜಿಕ ಹಕ್ಕನ್ನು ಪಡೆಯಲೂ ಕೂಡ ಯೋನಿ ವಿಚ್ಛೇದನಾ ಪ್ರಕ್ರಿಯೆಗೊಳಪಡುವುದು ಇಲ್ಲಿನ ಹೆಣ್ಣುಮಕ್ಕಳಿಗೆ ಅನಿವಾರ್ಯ. ಎಫ್. ಜಿ. ಎಮ್ ಮಾಡಿಸಿಕೊಳ್ಳದ ಹೆಣ್ಣು ಇವರಿಗೆ ಕಸಕ್ಕಿಂತಲೂ ಕೀಳು. ವೇಶ್ಯೆಯೆಂಬ ಪಟ್ಟ ಬೇರೆ. ಆಕೆ ಅಪವಿತ್ರ ಹೆಣ್ಣಾದರಿಂದ ಯಾವ ಗಂಡೂ ಅವಳನ್ನು ವಿವಾಹವಾಗಲು ಮುಂದಾಗುವುದಿಲ್ಲ. ಈ ವಿಷಯದಲ್ಲಿ ಮುಂಚೂಣಿಯಲ್ಲಿರುವ ಸೊಮಾಲಿಯಾವಷ್ಟೇ ಅಲ್ಲದೆ ಆಫ್ರಿಕಾದ ಬರೋಬ್ಬರಿ ಇಪ್ಪತ್ತೆಂಟು ದೇಶಗಳ ಹೆಣ್ಣುಮಕ್ಕಳ ಬದುಕುಗಳು ಈ ಪೈಶಾಚಿಕ ಆಚರಣೆಗೆ ಬಲಿಯಾಗಿವೆ. ಆಫ್ರಿಕಾ ಖಂಡವನ್ನು ಹೊರತು ಪಡಿಸಿ, ಈಜಿಪ್ಟ್, ಗಲ್ಫ್ ಮತ್ತು ಮಧ್ಯಪೂರ್ವ ಭಾಗದ ಕೆಲವು ದೇಶಗಳಲ್ಲೂ ಈ ಪ್ರಕ್ರಿಯೆ ಹಬ್ಬಿಕೊಂಡಿದೆ. ವಿಶ್ವಸಂಸ್ಥೆಯ ಒಂದು ಅಂಕಿ ಅಂಶದ ಪ್ರಕಾರ ಸೊಮಾಲಿಯಾದಲ್ಲೇ ತೊಂಭತ್ತೆಂಟು ಪ್ರತಿಶತದಷ್ಟು ಹೆಣ್ಣುಮಕ್ಕಳು ಎಫ್. ಜಿ. ಎಮ್ ಅನ್ನುವ ಈ ಅಮಾನವೀಯ ಆಚರಣೆಯ ಹೆಸರಿನಲ್ಲಿ ಸಾವಿನ ಕದ ತಟ್ಟಿ ಬರುತ್ತಾರೆ. ಎಫ್. ಜಿ. ಎಮ್ ಮಾಡಿಸಿಕೊಂಡ ಬಹುಪಾಲು ಹೆಣ್ಣುಮಕ್ಕಳು ತುಕ್ಕು ಹಿಡಿದ ಬ್ಲೇಡು, ಕತ್ತರಿಯ ಪರಿಣಾಮವಾಗಿ ಸೋಂಕಿಗೆ ತುತ್ತಾಗಿ ಅಸುನೀಗಿದರೆ, ಇನ್ನುಳಿದ ಪಾಲು ಟಿಟಾನಸ್ ಸೋಂಕು, ಲೈಂಗಿಕ ತೊಂದರೆಗಳು, ಕಿಡ್ನಿ ಮತ್ತು ಮೂತ್ರ ಸಂಬಂಧಿ ಸಮಸ್ಯೆಗಳು, ಗರ್ಭಧಾರಣಾ ಸಮಸ್ಯೆಗಳು, ಋತುಚಕ್ರದಲ್ಲಿ ಅಸಾಧ್ಯವಾದ ನೋವು ಹೀಗೆ ಹತ್ತು ಹಲವು ಸಮಸ್ಯೆಗಳನ್ನು, ನೋವನ್ನು ಒಡಲಾಳದಲ್ಲಿ ಹೊತ್ತು ಜೀವನವಿಡೀ ಮೌನವಾಗಿ ಅವಡುಗಚ್ಚಿ ನರಳುತ್ತಿರುತ್ತಾರೆ. ವಾರಿಸ್ ಸ್ವತಃ ಹೇಳಿರುವ ಪ್ರಕಾರ ಅವರಿಗೆ ಹಲವು ವರ್ಷಗಳ ವರೆಗೆ ಮೂತ್ರವಿಸರ್ಜನೆಯೆಂಬುದು ಬಹು ಯಾತನಾಮಯ ಕೆಲಸವಾಗಿತ್ತು, ಬರೋಬ್ಬರಿ ಎಂಟರಿಂದ ಹತ್ತು ನಿಮಿಷಗಳು ಹಿಡಿದುಕೊಳ್ಳುತ್ತಿದ್ದ ಈ ಸಹಜ ಕ್ರಿಯೆಯನ್ನು, ಯೋನಿಯಿಂದ ಹನಿಹನಿಯಾಗಿ ಆಸಿಡ್ ಹೊರಬರುತ್ತಿದೆಯೇನೋ ಎಂಬಂತೆ ಮಾಡಬೇಕಾಗುತ್ತಿತ್ತು ಎನ್ನುತ್ತಾರೆ. ಅಷ್ಟೇ ಅಲ್ಲದೆ ಆ ನೋವಿನ ತೀವ್ರತೆ ಋತುಚಕ್ರದ ದಿನಗಳಲ್ಲಿ ಚಿಕ್ಕಂದಿನಲ್ಲಿ ಯಾವ ಮಟ್ಟಿಗಿತ್ತೆಂದರೆ ನಾವೆಲ್ಲಾ ಒದ್ದೆ ಮರಳಿನಲ್ಲಿ ಗುಂಡಿಯನ್ನು ತೋಡಿ ಸೊಂಟದ ಕೆಳಭಾಗ ಪೂರ್ತಿಯಾಗಿ ಒದ್ದೆ ಮರಳಿನಲ್ಲಿರುವಂತೆ ಗಂಟೆಗಟ್ಟಲೆ ತಮ್ಮನ್ನು ತಾವೇ ಹೂತುಕೊಳ್ಳುತ್ತಿದ್ದೆವು ಎಂದು ಮುಚ್ಚುಮರೆಯಿಲ್ಲದೆ ದಾಖಲಿಸುತ್ತಾರೆ.
(ಮುಂದುವರೆಯುವುದು…..)
ಅಮ್ಮಾ ! ಓದೋದಕ್ಕೇ ಭಯಾನಕವಾಗಿದೆ….
[…] “ವಾರಿಸ್ ಡಿರೀ: ಮರುಭೂಮಿಯ ಒಂದು ಹೂವಿನ ಕಥೆ” (): ಪ್ರಸಾದ್ ಕೆ. February 2nd, 2016 editor [ ಪಂಜು-ವಿಶೇಷ ] https://www.panjumagazine.com/?p=12628 ಇಲ್ಲಿಯವರೆಗೆ […]