ಅಲೆಅಲೆಯಾಗಿ ತೇಲಿ ಬಂತು ಕೋಗಿಲೆಯ ಮಧುರ ಸ್ವರ. ಕೇಳುತ್ತಲೇ ವಿಶಾಲೂ ಮುಖ ಅರಳಿತು, ಮಂದಹಾಸ ಮಿನುಗಿತು. ಉಲ್ಲಸಿತಗೊಂಡಳು! ಪೇಪರಿನಿಂದ ತಲೆ ಎತ್ತಿ ಸ್ವರ ಬಂದ ದಿಕ್ಕನ್ನು ಗುರುತಿಸಲು ಪ್ರಯತ್ನಿಸಿದಳು.
’ದರಿದ್ರ, ಮತ್ತೆ ಬಂದು ವಕ್ಕರಿಸಿತು’ ವಿಶ್ವ ಶಪಿಸಿದ!
ವಿಶಾಲೂ ಬೆಚ್ಚಿದಳು! ಇಂತವರೂ ಇರ್ತಾರ? ಅಚ್ಚರಿಪಟ್ಟಳು! ಕೋಗಿಲೆಯ ಇಂಪಾದ ರಾಗವನ್ನು ದರಿದ್ರ ಎಂದು ಭಾವಿಸ್ತಾರಾ..?
ಬೆಳ್ಳಂಬೆಳಿಗ್ಗೆ ಗಡ್ಡ ಮೀಸೆಗಳಿರುವ ಜಾಗದಲ್ಲಿ ಚೂರುಚೂರೇ ಬೆಳೆದು ’ನೀನು ಮುದುಕನಾಗುತ್ತಿರುವೆ’ ಎಂಬುದನ್ನು ಜಗಜ್ಜಾಹೀರು ಮಾಡಲು ಹವಣಿಸುತ್ತಿದ್ದ ಬಿಳಿಕೂದಲುಗಳನ್ನು ನಿರ್ದಯದಿಂದ ಬೋಳಿಸುವ, ನವನಾಗರೀಕ ಭಾಷೆಯಲ್ಲಿ ’ಷೇವಿಂಗ್’ ಎನ್ನುವ ಪ್ರಕ್ರಿಯೆಯಲ್ಲಿ ತೊಡಗಿದ್ದ ವಿಶ್ವನ ಬಾಯಿಂದ ಬಂದ ’ದರಿದ್ರ’ ಎಂಬ ಪದಕ್ಕೆ ವಿಶಾಲೂ ಖಾರವಾಗಿ ಪ್ರತಿಕ್ರಿಯಿಸಿದಳು.
’ಎಂತಾ ಅರಸಿಕ ಪ್ರಾಣೀರೀ ನೀವು!? ಅಷ್ಟು ಸುಂದರವಾಗಿ ಕೇಳುವವರ ಕಿವಿಗೆ ಹಿತವಾಗುವ ಹಾಗೆ ಹಾಡ್ತಿರೋ ಕೋಗಿಲೇನ, ಅದೂ ನಮ್ಮ ಮನೆ ಹತ್ರಾನೇ ಬಂದು ಹಾಡ್ತಿರೋದನ್ನ ’ದರಿದ್ರ’ ಅಂತೀರಲ್ಲಾ..?’
’ಕೋಗಿಲೇನ ದರಿದ್ರ ಅಂದ್ರೆ ನಿನಗೇನು..? ನಿನಗೇನೂ ಅನ್ನಲಿಲ್ಲವಲ್ಲ? ಇಲ್ಲಾ ನಿಮ್ಮಪ್ಪನಿಗೂ ಏನೂ ಅನ್ನಲಿಲ್ಲವಲ್ಲ..?’
ಬಿಳಿಗೂದಲನ್ನು ನಿರ್ನಾಮ ಮಾಡುವ ಕ್ರಿಯೆಯಲ್ಲಿ ಕೆಲಕ್ಷಣ ಬಿಡುವುಮಾಡಿಕೊಂಡು ವಿಶಾಲೂ ಕಡೆ ತಿರುಗಿ ಹೇಳಿದ; ತನ್ನ ಮಾತು ಒಂದು ’ಮಹಾಭಾರತ’ ಯುದ್ಧಕ್ಕೆ ನಾಂದಿಯಾದೀತೆಂಬುದನ್ನು ಅರಿಯದೆ!
’ನಮ್ಮಪ್ಪನ್ನ ಯಾಕ್ರೀ ಇಲ್ಲಿಗೆ ತರ್ತೀರಾ..? ಅಂತಾದ್ದೇನು ಮಾಡಿದ್ದಾರೆ ನಮ್ಮಪ್ಪ..?’ ವಿಶಾಲೂ ಗುರ್ರೆಂದಳು.
ಈ ಸಂಭಾಷಣೆಗಳಿಂದಲೇ ತಿಳಿದುಹೋಗುತ್ತದೆ ಅಲ್ಲವೆ ? ವಿಶ್ವ-ವಿಶಾಲೂ ಇವರ ಸಂಬಂಧ! ಇವರು ಗಂಡ-ಹೆಂಡತಿಯರು ಎಂದು ಬೇರೆ ಹೇಳುವ ಅವಶ್ಯಕತೆಯೇ ಇಲ್ಲ! ಇದರ ಜೊತೆಗೆ ಈ ದಂಪತಿಗಳ ದಾಂಪತ್ಯ ಹತ್ತಾರು ವರ್ಷ ಹಳೆಯದು ಎಂದು ಕೂಡ ತಿಳಿದುಬಿಡುತ್ತದೆ!
’ಇಲ್ಲಾ ಮಹರಾಯ್ತಿ! ನಿಮ್ಮಪ್ಪನ್ನ ಇಲ್ಲಿಗೆ ಯಾಕೆ ತರ್ಲಿ..? ಆ ಮಹರಾಯ ಇದ್ದ ಕಡೇನೆ ತಣ್ಣಗಿರ್ಲಿ’
’ನಿಮ್ಮ ವ್ಯಂಗ್ಯ ಅತಿಯಾಯ್ತು! ಆ ನಿಮ್ಮ ಸ್ನೇಹಿತ ಹಾಸ್ಯ ಲೇಖಕನ ಜೊತೆ ಸೇರಿ ನಿಮ್ಮ ಮಾತು ಅಡ್ಡದಾರಿ ಹಿಡೀತಾ ಇದೆ! ನಮ್ಮಪ್ಪ ಅಂತಾದ್ದೇನು ಮಾಡಿದರೇಂತ ಹೀಗೆ ಅಣಕ-ತೂಕದ ಮಾತಾಡ್ತೀರಿ..?’
ತಮಿಳು ನಾಡಿಗೆ ನೀರು ಹರಿಸಿ ತಳಕಂಡ ಕಾವೇರಿ ವಿಶಾಲೂ ಕಣ್ಣಲ್ಲಿ ಪ್ರತ್ಯಕ್ಷಳಾಗಿಬಿಟ್ಟಳು!
’ನಿನ್ನನ್ನು ನನಗೆ ಕಟ್ಟಿ ಮಹದುಪಕಾರ ಮಾಡಿದ್ದು ಸಾಲದೇನು?’ ಎಂಬ ಮಾತು ವಿಶ್ವನ ಬಾಯಿ ತುದಿಗೆ ಬಂದರೂ ತಡೆದ!
’ತಪ್ಪಾಯ್ತು ಮಹರಾಯ್ತಿ! ಫ್ಯಾಕ್ಟ್ರಿಗೆ ಲೇಟಾಗುತ್ತೆ! ಇವತ್ತು ವಿಶ್ವಾಮಿತ್ರ, ನಕ್ಷತ್ರಿಕ ಎಲ್ಲಾ ಫ್ಯಾಕ್ಟ್ರಿ ವಿಸಿಟ್ಟಿಗೆ ಬರ್ತಿದ್ದಾರೆ..ತಡವಾದ್ರೆ ಕೆಲಸಕ್ಕೆ ಆಪತ್ತು! ಸ್ವಲ್ಪ ಬೇಗನೆ ತಿಂಡಿ ರೆಡಿಮಾಡಿಬಿಡು’ ವಿಶ್ವ ತಪ್ಪೊಪಿಕೊಂಡ!
ಈ ತಪ್ಪೊಪ್ಪಿಗೆಗೂ ವಿಶಾಲೂ ಕಣ್ಣಲ್ಲಿ ಕಾವೇರಿ ನಿಲ್ಲುವ ಸೂಚನೆಯಿರಲಿಲ್ಲ!
’ತಪ್ಪಾಯ್ತು ಅಂದ್ನಲ್ಲ..? ಇನ್ನು ಸುಮ್ಮನಾಗು ಮಹರಾಯ್ತಿ. ಕನ್ನಡಿಗರ ಕಣ್ಣಲ್ಲಿ ನೀರು ಹರಿಯೋ ಸುದ್ದಿ ತಿಳಿದ್ರೆ ತಮಿಳುನಾಡು ಸಿ.ಎಮ್ಮು ಐವತ್ತು ಟಿ.ಎಂ.ಸಿ ನೀರು ಕೇಳಿ ಸುಪ್ರೀಂ ಕೋರ್ಟು ಹತ್ತಿಬಿಡ್ತಾರೆ! ಸೆಂಟರ್ನೇ ಅಲ್ಲಾಡಿಸಿಬಿಡ್ತಾರೆ!’ ತನ್ನ ಜೋಕಿಗೆ ತಾನೇ ನಗುತ್ತಾ ಷೇವಿಂಗ್ ಮುಗಿಸಿ ಬಚ್ಚಲು ಮನೆಯ ಬಾಗಿಲು ಹಾಕಿಕೊಂಡ ವಿಶ್ವ.
ನಾಗರಹಾವು ಸಿನಿಮಾದ ಒನಕೆ ಓಬವ್ವ ಜಯಂತಿ ಸ್ಟೈಲಿನಲ್ಲಿ ಸೀರೆಯ ಸೆರಗನ್ನು ಸೊಂಟಕ್ಕೆ ಸಿಕ್ಕಿಸಿಕೊಂಡು ಅವಡುಗಚ್ಚಿ ವಿಶಾಲೂ ದೃಢ ನಿರ್ಧಾರದೊಂದಿಗೆ ಅಡಿಗೆಮನೆ ಹೊಕ್ಕಳು!
’ಹಾ..!’ ಎಂದು ಛೀರಿ ವಿಶ್ವ ಮೂರಡಿ ಮೇಲಕ್ಕೆ ಹಾರಿದ ಡೈನಿಂಗ್ ಚೇರಿನಿಂದ! ಒಂದೇ ತುತ್ತು ವಿಶಾಲೂ ಮಾಡಿದ ಉಪ್ಪಿಟ್ಟಿನ್ನು ಬಾಯಿಗಿಟ್ಟ ಕ್ಷಣ! ’ಖಾರ…ಖಾರ..!’ ಎಂದು ಬೊಬ್ಬೆ ಹಾಕುತ್ತಾ ವಿಲಿವಿಲಿ ಒದ್ದಾಡಿದ!
’ಎಷ್ಟು ಮೆಣಸಿನಕಾಯಿ ಹಾಕಿದೆಯೇ ಮಹರಾಯ್ತಿ..?’ ಕಿರಿಚಿದ.
’ಬರೀ ಕಾಲು ಕೆಜಿ ಅಷ್ಟೆ! ನಮ್ಮಪ್ಪನ ಬಗ್ಗೆ ಮತ್ತೆ ಮಾತಾಡಿದ್ರೆ ಅದು ಅರ್ಧ ಕೆಜಿಗೆ ಏರುತ್ತೆ!’
’ಎಷ್ಟು ಖಾರ ಇದೆ ಗೊತ್ತಾ..? ತಿಂದು ನೋಡು-ಗೊತ್ತಾಗುತ್ತೆ!! ಹೊಟ್ಟೆ ಸುಟ್ಟು ಹೋಗುತ್ತೆ’ ದಡಬಡನೆ ಎದ್ದು ಫ್ರಿಜ್ಜಿನಿಂದ ಮೊಸರು ತೆಗೆದುಕೊಂಡು ಉಪ್ಪಿಟ್ಟಿಗೆ ತಟ್ಟೆಗೆ ಸುರಿದುಕ್ಕೊಳ್ಳುತ್ತ್ತಾ ಹೇಳಿದ ವಿಶ್ವ!
’ನಾವು ಬೇರೆ ಮಾಡ್ಕೊಂಡಿದ್ದೀವಿ’ ಎಂದು ತಣ್ಣಗೆ ಹೇಳಿದಳು ವಿಶಾಲೂ! ಅವಳ ಮುಖದಲ್ಲಿ ಸೇಡು ತೀರಿಸಿಕೊಂಡ ತೃಪ್ತಿಯಿತ್ತು!
ವಿಶ್ವ ಇಂಗುತಿಂದ ಮಂಗನಂತಾಗಿದ್ದ!! ಅನ್ನಲಾರ-ಅನುಭವಿಸಲಾರೆ ಎನ್ನುವಂತಾಗಿತ್ತು! ವಿಶಾಲೂ ಮಾತಿಗೆ ಉತ್ತರಿಸಲು ಪದಗಳಿಗೆ ತಡಕಿದ.
’ಇದು ಕಾಗೆ ಪಕ್ಷದವರಿಗೆ ಮಾಡಿರೋದು. ಕೋಗಿಲೆ ಪಕ್ಷದವರಿಗೆ ಬೇರೆ ಉಪ್ಪಿಟ್ಟಿದೆ!!’ ವಿಶಾಲೂ ಮುಂದುವರಿಸಿದಳು.
’ಅದ್ಯಾವುದೇ ಅದು ಕಾಗೆ ಪಕ್ಷ ಮತ್ತು ಕೋಗಿಲೆ ಪಕ್ಷ?’ ವಿಶ್ವ ಕನಲಿದ! ಮೊಸರು ಹಾಕಿದ್ದಕ್ಕೆ ಉಪ್ಪಿಟ್ಟಿನ ಖಾರ ಕೊಂಚ ಕಮ್ಮಿಯಾಗಿ ಸ್ವಲ್ಪ ಸುಧಾರಿಸಿಕೊಂಡಿದ್ದ.
’ಕೋಗಿಲೇನ ದರಿದ್ರ ಅಂತೀರಲ್ಲಾ..? ನೀವು ಕಾಗೆ ಪಕ್ಷದವರು! ನಾವು ಮತ್ತು ನನ್ನ ಮಕ್ಕಳು, ಕೋಗಿಲೆ ಹಾಡನ್ನ ಇಷ್ಟಪಡುವವರು ಕೋಗಿಲೆ ಪಕ್ಷದವರು’ ವಿಶಾಲೂ ವಿವರಣೆಗೆ ವಿಶ್ವ ಹಣೆ ಚಚ್ಚಿಕೊಂಡ-ಬಲಗೈ ಉಪ್ಪಿಟ್ಟಾಗಿದೆ ಎನ್ನುವುದನ್ನು ಮರೆತು! ಹಣೆಗೆಲ್ಲಾ ಉಪ್ಪಿಟ್ಟಿನ ಲೇಪನವಾಯಿತು!
ವಿಶಾಲೂ ಪಕಪಕನೆ ನಕ್ಕಳು! ವಿಶ್ವ ಭುಗಿಲೆದ್ದ ಕೋಪವನ್ನು ನುಂಗಿಕೊಂಡ. ತಟ್ಟೆಯಲ್ಲಿ ಉಳಿದಿದ್ದ ಉಪ್ಪಿಟ್ಟನ್ನು ಪ್ರಶ್ನಾರ್ಥಕವಾಗಿ ನೋಡಿದ. ತಿನ್ನಲಾರೆ ತಿನ್ನದೆ ಇರಲಾರೆ ಎಂದಿತು ಮನಸ್ಸು. ತಿನ್ನದಿದ್ದರೆ ಮಧ್ಯಾನ್ಹ ಫ್ಯಾಕ್ಟ್ರಿ ಕ್ಯಾಂಟೀನಿನ ಬಾಗಿಲು ತೆರೆಯುವತನಕ ಹಸಿದುಕೊಂಡಿರಬೇಕು! ತಿಂದರೆ ಹೊಟ್ಟೆಯುರಿ! ಹೇಗೂ ಮೆಡಿಕಲ್ ಸೆಂಟರ್ನಲ್ಲಿ ಹೊಟ್ಟೆಯುರಿಗೆ ಏನಾದ್ರೂ ತಗೊಂಡರಾಯಿತು ಎಂದು ವಿಶ್ವ ಕಷ್ಟಪಟ್ಟು ಉಪ್ಪಿಟ್ಟು ಮುಗಿಸಿದ.
’ಛೆ ಅವರಪ್ಪನನ್ನ ಒಂದೇ ಮಾತು ಅಂದಿದಕ್ಕೆ ಈ ಪಾಟಿ ರಂಪಾಟ ಮಾಡಿದಳಲ್ಲ..? ಇನ್ನು ಮನಸ್ಸಲ್ಲಿ ಇರುವುದನ್ನೆಲ್ಲಾ ಹೇಳಿಬಿಟ್ಟರೆ ಏನು ಗತಿ?’ ಎಂದು ವಿಶ್ವ ಉಪ್ಪಿಟ್ಟಿನ ಕಾರಕ್ಕೋ ಮನಸ್ಸಿನಲ್ಲಿ ಮೂಡಿದ ಯೋಚನೆಗೋ ಬೆವರಿದ ವಿಶ್ವ.
ವಿಶಾಲೂ ತಂದಿಟ್ಟ ತಣ್ಣಗಿನ ಕಲಗಚ್ಚಿನಂತ ಕಾಫಿಯನ್ನು ಒಂದೇ ಗುಟುಕಿಗೆ ಕುಡಿದು ’ಎಂತಾ ಅದ್ವಾನದ ಕಾಫಿ ಇದು’ ಎಂದು ಕಿವುಚಿದ ಮುಖ ಭಾವದಲ್ಲೇ ವಿಶಾಲೂಗೆ ಸಂದೇಶ ನೀಡಿ ವಿಶ್ವ ಫ್ಯಾಕ್ಟ್ರಿಗೆ ಹೊರಟ.
ಮನೆಯೊಳಗೆ ನಡೆಯುತ್ತಿರುವ ಕುರುಕ್ಷೇತ್ರದ ಸುಳಿವಿಲ್ಲದ ಕೋಗಿಲೆ ತನ್ನ ಪಾಡಿಗೆ ತಾನು ಹಾಡುತ್ತಿತ್ತು!
ವಿಶಾಲೂ ಕಿಟಿಕಿಯ ಬಳಿ ನಿಂತು ಕೋಗಿಲೆಯ ಇನಿದನಿಯ ಜಾಡು ಹಿಡಿದು, ಕೋಗಿಲೆಯನ್ನು ನೋಡುವ ಪ್ರಯತ್ನ ಮಾಡಿದಳು.
ವಿಶ್ವ ಕಾಂಪೌಂಡಿನಿಂದೀಚೆ ಕಾರು ತೆಗೆದು ಗೇಟು ಹಾಕುವ ಮುನ್ನ ಮನೆಯ ಮುಂದಿದ್ದ ಮರವನ್ನು ಕತ್ತೆತ್ತಿ ನೋಡಿದ-ಕೋಗಿಲೆಗಾಗಿ. ಅಲ್ಲಿ ಕಂಡಿದ್ದು ಎರಡು ಕಾಗೆಗಳು! ವಿಶ್ವನನ್ನು ನೋಡುತ್ತಲೇ ಕುಕ್ಕಲು ಹಾರಿ ಬಂದವು! ವಿಶ್ವ ಬೇಗನೆ ಕಾರಿನೊಳಗೆ ತೂರಿಕೊಂಡ!
’ದರಿದ್ರದವು, ಪ್ರತಿವರ್ಷವೂ ಇದೇ ರಾಮಾಯಣ! ಗೂಡು ಕಟ್ಟೋದು, ಮರಿಗಳಿಗೆ ತೊಂದ್ರೆ ಮಾಡ್ತಾರೇನೋಂತ ಮರದೆ ಕೆಳಗೆ ನಿಂತವರನ್ನೆಲ್ಲಾ ಕುಕ್ಕೋದು!’ ವಿಶ್ವ ಗೊಣಗುತ್ತಾ ಕಾರು ಸ್ಟಾರ್ಟ್ ಮಾಡಿದ.
* * * * * *
ಸಂಜೆ ಏಳರವರೆಗೆ ಫ್ಯಾಕ್ಟ್ರಿಯಲ್ಲಿ ಬಳಲಿ-ಬೆಂಡಾಗಿ, ಹಣ್ಣಾಗಿ ಮನೆ ಸೇರಿದ ವಿಶ್ವ. ಫ್ಯಾಕ್ಟ್ರಿಯ ರಣರಂಗದಲ್ಲಿ ಚಕ್ರವ್ಯೂಹ ಭೇಧಿಸಿ ಹೋರಾಡಿ ಜರ್ಝರಿತನಾದ ಸೈನಿಕನಾಗಿ ಹಿಂತಿರುಗಿದ್ದ. ಟಾರ್ಗೆಟ್ಟು, ಕ್ವಾಲಿಟಿ, ಕೆಲಸಗಾರರ ಬಂಡಾಟ, ಮೊಂಡಾಟ, ಮೇಲಿನವರ ವಾಗ್ಭಾಣ, ಯೂನಿಯನ್ನಿನವರ ಧಮಕಿಗಳ ಒತ್ತಡಗಳನ್ನೆಲ್ಲಾ ಯಶಸ್ವಿಯಾಗಿ ಎದುರಿಸಿ ಅರೆಜೀವವಾಗಿ ಮರಳಿದ್ದ ಮನೆಗೆ-ಎಂದಿನಂತೆ!
ಗೇಟು ತೆರೆಯುತ್ತಲೇ ಬೆಳಿಗ್ಗೆ ವಿಶಾಲೂ ಹೇಳಿದ್ದು ನೆನಪಾಯಿತು. ಕಾಗೆ ಪಕ್ಷವಂತೆ! ಕೋಗಿಲೆ ಪಕ್ಷವಂತೆ!! ತನ್ನದು ಕಾಗೆ ಪಕ್ಷವಂತೆ!! ಅವಳು ಮತ್ತು ಮಕ್ಕಳದೆಲ್ಲಾ ಕೋಗಿಲೆ ಪಕ್ಷವಂತೆ!! ಎಂತಾ ಕಲ್ಪನೆಗಳು..? ಇವಳು ಏಕ್ತಾಕಪೂರಳಂತೆ ನೂರಾರು ಮೆಗಾಸೀರಿಯಲ್ ಹೊಸಯಬಲ್ಲಳು ಎನಿಸಿತು! ಉಪ್ಪಿಟ್ಟಿನ ಖಾರದ ನೆನಪೂ ಬಂದು ಕೆಮ್ಮುವಂತಾಯಿತು.
ಗೇಟಿನ ಮುಂದೆ ನಿಂತು ತಲೆಯೆತ್ತಿ ನೋಡಿದ. ಕತ್ತಲಾಗಿದ್ದರಿಂದ ಕಾಗೆಗಳಾಗಲೀ ಕೋಗಿಲೆಯಾಗಲೀ ಕಾಣಲಿಲ್ಲ. ಕೋಗಿಲೆಯ ಕೂಗೂ ಕೇಳಲಿಲ್ಲ್ಲ.
ಬೆಳಿಗ್ಗೆ ರೇಗಿಸಿದಂತೆ ವಿಶಾಲೂನ ರೇಗಿಸಿ ಊಟಕ್ಕೆ ಕಲ್ಲು ಹಾಕಿಕ್ಕೊಳ್ಳಬಾರದೆಂಬ ಜಾಣ ನಿರ್ಧಾರಕ್ಕೆ ಬಂದಿದ್ದ ವಿಶ್ವ. ಮನೆಯ ವರಾಂಡಕ್ಕೆ ಕಾಲಿಡುತ್ತಲೇ ಹಿತವಾದ, ಬಾಯಲ್ಲಿ ನೀರೂರಿಸುವ ಕಮ್ಮನೆಯ ವಾಸನೆ ನಾಸಿಕಕ್ಕೆ ಮುದನೀಡಿತು! ಬೇಗನೆ ಷೂ ಕಳಚಿ ಡೈನಿಂಗಿಗೆ ಬಂದಾಗ ಟೇಬಲ್ ಮೇಲಿನ ಬೌಲಿನ ತುಂಬಾ ಘಮಘಮಿಸುವ ಆಲೂಬೋಂಡಾ ತುಂಬಿರುವುದು ಕಂಡಿತು. ಪವನ, ಪಿಂಕಿಯ ಜೊತೆಗೆ ವಿಶಾಲೂ ಬಾಯಾಡಿಸುತ್ತಿರುವುದು ಕಂಡಿತು!
’ಬೇಗ ಬಾ ಡ್ಯಾಡಿ, ಬೋಂಡಾ ಸೂಪರಾಗಿದೆ! ಬಿಸಿ ಆರೋಕ್ಮುಂಚೆ ತಿಂದರೆ ಮಜಾ ಬರುತ್ತೆ’ ಪಿಯುಸಿ ಹುಡುಗರ ಭಾಷೆಯಲ್ಲಿ ಪವನ ಹೇಳಿದ.
ಏನಿದು..? ಒಂದೊಂದು ಕೋರ್ಸಿನವರು ಒಂದೊಂದು ಭಾಷೆ ಮಾತಾಡುತ್ತಾರೆಯೆ ಎಂದು ನಿಮಗೆ ಅಚ್ಚರಿಯಾಗಬಹುದು. ಇದು ವಿಶ್ವನ ವಿಶಿಷ್ಟವಾದ ಸಂಶೋಧನೆ! ಅವನು ಯುವಕ, ಯುವತಿಯರ ಮಾತನ್ನು ಕೇಳುತ್ತಲೇ ಅವರು ಯಾವ ಕೋರ್ಸಿನಲ್ಲಿ ವ್ಯಾಸಂಗ ಮಾಡುತ್ತಿದ್ದಾg, ಅಥವಾ ಅವರು ಯಾವ ವೃತ್ತಿಯವರು ಎಂದು ಹೇಳುವ ನಿಪುಣತೆಯನ್ನು ಪಡೆದಿದ್ದ!
’ಡ್ಯಾಡ್, ಬೋಂಡಾ ಸಖತ್ತಾಗಿದೆ’ ಪಿಂಕಿಯ ಎಸ್.ಎಸ್.ಎಲ್.ಸಿ ಭಾಷೆ ಉಲಿಯಿತು!
’ಮೊದ್ಲು ಬೋಂಡಾ ತಿಂದ್ಬಿಡಿ, ಆಮೇಲೆ ಕೈಕಾಲು ತೊಳೆಯುವಿರಂತೆ’
ಅಪ್ಪಟ ಗೃಹಿಣಿ ವಿಶಾಲೂ ತನ್ನ ಭಾಷಾ ಪ್ರಯೋಗ ಮಾಡಿದಳು. ಪುಣ್ಯ! ಬೆಳಗಿನ ಘಟನೆ ಮರೆತಿದ್ದಾಳೆ ಎಂದುಕೊಂಡ ವಿಶ್ವ.
ಕೈತೊಳೆದು, ಅವರೊಂದಿಗೆ ಬೋಂಡಾ ಸವಿಯತೊಡಗಿದ ವಿಶ್ವ.
’ಡ್ಯಾಡ್, ಇವತ್ತು ಬೆಳಿಗ್ಗೇನೆ ಕೋಗಿಲೆ ಹಾಡ್ತಿತ್ತು ಕೇಳಿದ್ರಾ..?’ ಪಿಂಕಿ ಕೇಳಿದಳು.
’ಕೇಳಿದ್ದೂ ಆಯ್ತು, ಜಗಳವೂ ಆಯ್ತು’ ವಿಶ್ವ ನಿಟ್ಟುಸಿರಿಟ್ಟ-ಬೆಳಗಿನ ಉಪ್ಪಿಟ್ಟಿನ ಖಾರ ನೆನಸಿಕೊಂಡು!
’ಏನು..? ಕೋಗಿಲೆ ಜೊತೆ ಜಗಳಾನ..?’ ಪವನ ಅಚ್ಚರಿಯಿಂದ ಕೇಳಿದ.
’ಅಯ್ಯೋ ಪವಿ, ಅವರ ಮಾತು ಕಟ್ಕೋ..! ನಿಮ್ಮಪ್ಪನಿಗೆ ಯಾವಾಗ ? ಎಲ್ಲಿ? ಏನು ಮಾತಾಡ್ಬೇಕೂನ್ನೋದು ಯಾವತ್ತಾದ್ರೂ ತಿಳಿದಿತ್ತಾ..? ಇವತ್ತೂ ಹಾಗೇ ಏನೇನೋ ಮಾತಾಡಿ ಎಡವಟ್ಟು ಮಾಡ್ಕೊಂಡ್ರು..’ ವಿಶಾಲೂ ಲಘುವಾಗಿ ಹೇಳಿದಳು. ವಿಶ್ವ ಕಸಿವಿಸಿಯಾದರೂ ನುಂಗಿಕೊಂಡ.
’ಮಮ್ಮಿ, ಪ್ರತಿ ವರ್ಷಾನೂ ಇದೇ ಟೈಮಿಗೆ ಕೋಗಿಲೆ ಬಂದು ಕಾಗೆ ಗೂಡಲ್ಲಿ ಮೊಟ್ಟೆ ಇಟ್ಟು ಹೋಗುತ್ತಲ್ವಾ..?’ ಪಿಂಕಿ ಕೋಗಿಲೆ ಬಗೆಗೆ ತಾನು ಓದಿದ್ದನ್ನು ನೆನಸಿಕೊಂಡು ಕೇಳಿದಳು.
’ಹೌದು ಪುಟ್ಟಿ. ಅದು ಕೋಗಿಲೆಯ ವಿಶಿಷ್ಟ ಗುಣ ಕೋಗಿಲೆ ಮೊಟ್ಟೆಗೂ, ಕಾಗೆ ಮೊಟ್ಟೆಗೂ ಅಂತಾ ವ್ಯತ್ಯಾಸವೇನೂ ಕಾಣೊಲ್ಲ! ಮರಿಗಳಲ್ಲೂ ಶುರುನಲ್ಲಿ ವ್ಯತ್ಯಾಸ ಕಾಣೊಲ್ಲ. ಕೋಗಿಲೆ ಮರೀನ ತನ್ನ ಮರೀಂತಾನೇ ಕಾಗೆ ಸಾಕುತ್ತೆ. ಕೋಗಿಲೆ ಮರಿ ರೆಕ್ಕೆ ಬಲಿತ ಮೇಲೆ ಒಂದು ದಿನ ಹಾರಿ ಹೋಗುತ್ತೆ’ ವಿಶಾಲೂ ವಿವರಣೆ ಕೊಟ್ಟಳು. ಮಾತಿನ ನಡುವೆಯೇ ಬೋಂಡಾಗಳ ಸಂಖ್ಯೆ ಕಡಿಮೆಯಾಗುತ್ತಿತ್ತು.
ವಿಶ್ವ ಮಾತಾಡಲು, ವಿಶಾಲೂವನ್ನು ಹಣಿಸಲು ಅವಕಾಶ ಕಾಯುತ್ತಿದ್ದ. ಇಲ್ಲೊಂದಿಷ್ಟು ಸ್ಕೋಪ್ ತಗೋಬಹುದು ಅನ್ನಿಸಿತು.
’ನೋಡಿದ್ಯಾ ಪಿಂಕಿ! ಕೋಗಿಲೇದು ಎಂತಾ ಕಂತ್ರೀ ಬುದ್ಧಿ..? ಎಷ್ಟು ಮೋಸ ಮಾಡುತ್ತೆ ಕಾಗೆಗೆ? ಈಗ ನೀನೇ ಜಡ್ಜ್ ಮಾಡಿ ಹೇಳು, ಕಾಗೆ ಒಳ್ಳೇದೋ..? ಕೋಗಿಲೆ ಒಳ್ಳೇದೋ..? ಹೇಳು ಪುಟ್ಟಿ’ ಮಗಳನ್ನು ಪುಸಲಾಯಿಸಿದ ವಿಶ್ವ.
’ಅಬ್ವಿಯಸ್ಲೀ ಕಾಗೆ! ಪಾಪ, ತನ್ನದಲ್ಲದ ಮೊಟ್ಟೇನ ಮರಿ ಮಾಡಿ, ಸಾಕುತ್ತೆ. ಕೋಗಿಲೇದು ಕನ್ನಿಂಗ್ ಬುದ್ಧಿ’
’ಭೇಷ್ ಮಗಳೆ! ಸರಿಯಾಗಿ ಜಡ್ಜ್ ಮಾಡಿದೆ. ಈಗ ಅದರ ಸ್ವರ ತುಂಬಾ ಮೆಲೋಡಿಯಸ್ ಅನ್ಸುತ್ತಾ..?’ ವಿಶ್ವ ಸಿಕ್ಕ ಅವಕಾಶ ಸರಿಯಾಗಿ ಉಪಯೋಗಿಸಿದ್ದ.
’ಸ್ವರವೇನೋ ಸರಿ, ಅದ್ರೆ ಅದರ ಬುದ್ಧಿ..? ನೋ, ನನಗೆ ಕೋಗಿಲೆ ಸ್ವಭಾವ ಇಷ್ಟವಾಗಲಿಲ್ಲ’ ಪಿಂಕಿ ಮುಖ ಕಿವುಚಿದಳು, ಕೊನೆಯ ಬೋಂಡಾವನ್ನು ತಟ್ಟೆಯಿಂದ ತೆಗೆದುಕ್ಕೊಳ್ಳುತ್ತಾ.
ವಿಶಾಲೂ ಕಡೆ ನೋಡುತ್ತಾ ವಿಜಯದ ನಗೆ ನಕ್ಕ ವಿಶ್ವ! ಪ್ರತಿಯಾಗಿ ವಿಶಾಲೂ ದೂರ್ವಾಸ ದೃಷ್ಟಿ ಬೀರಿದಳು. ಗಂಡ ತನ್ನನ್ನೇ ಟಾರ್ಗೆಟ್ ಮಾಡಿರುವುದು ಸ್ಪಷ್ಟವಾಗಿ ಗುರುತಿಸಿದ್ದಳು!
’ಪಿಂಕಿ, ಕೋಗಿಲೆ ಸ್ಮಾರ್ಟ್ ಅನ್ನಿಸೊಲ್ಲವಾ..? ಕಾಗೆ ಪೆದ್ದು ಅನ್ನಿಸೊಲ್ಲವಾ..?’ ವಿಶಾಲೂ ಮಗಳ ಯೋಚನೆಯ ಧಾಟಿ ಬದಲಾಯಿಸಲು ಪ್ರಯತ್ನಿಸಿದಳು.
’ಅಫ್ ಕೋರ್ಸ್..’ ಅರೆಬರೆ ಮನಸ್ಸಿನಿಂದ ಪಿಂಕಿ ಉತ್ತರಿಸಿದಳು.
’ನೀನು ಯಾವ ಪಕ್ಷ ಸೇರ್ತೀಯಾ ಪಿಂಕಿ..? ಪೆದ್ದು ಕಾಗೇದೋ..? ಇಲ್ಲಾ ಸೂಪರ್ ಸ್ಮಾರ್ಟ್ ಕೋಗಿಲೇದೋ..?’
ಪವನನಿಗೆ ಏನೋ ಅನುಮಾನ ಕಾಡಿತು. ಅಪ್ಪ-ಅಮ್ಮನ ಕಡೆ ಪರೀಕ್ಷಿಸುವಂತೆ ನೋಡಿದ. ಅವರ ಮುಖದ ಭಾವ, ಪರಸ್ಪರರನ್ನು ಮಾತಿನಲ್ಲೇ ತಿವಿಯುವಂತಿರುವ ಧಾಟಿ ಅವನನ್ನು ಎಚ್ಚರಿಸಿತು! ಏನಾಗಿದೆ ಎನ್ನುವುದನ್ನು ಅಂದಾಜು ಮಾಡಿಯೇಬಿಟ್ಟ!
’ಲೇ..ಪಿಂಕಿ ಇರು ಮಾತಾಡ್ಬೇಡ! ಬೆಳಿಗ್ಗೆ ಅಪ್ಪ-ಅಮ್ಮ ಕಾಗೆ-ಕೋಗಿಲೆ ವಿಷಯಕ್ಕೆ ಜಗಳ ಆಡಿರೋ ಹಾಗೆ ಕಾಣ್ಸುತ್ತೆ!’
ಪವನ ತಂಗಿಯನ್ನು ಎಚ್ಚರಿಸಿದ.
’ಹೌದೇನೋ..?’ ಪಿಂಕಿ ಅಚ್ಚರಿಪಟ್ಟಳು.
’ಹೌದು ಕಣೆ. ಇವರು ಕಾಗೆ ಮತ್ತು ಕೋಗಿಲೆ ಪಕ್ಷಗಳನ್ನು ಕಟ್ಟಿರೋ ಹಾಗೆ ಕಾಣ್ಸುತ್ತೆ! ಅದಕ್ಕೇ ನಮ್ಮನ್ನ ಅವರವರ ಪಾರ್ಟಿಗೆ ಸೇರಿಸ್ಕೊಳ್ಳೋ ಪ್ರಯತ್ನ ಮಾಡ್ತಿದ್ದಾರೆ! ನಮಗೆ ಯಾವ ಪಕ್ಷಾನೂ ಬೇಡ! ಎದ್ದೇಳು..ಬೋಂಡಾ ಮುಗೀತು! ಮಮ್ಮಿ ತ್ಯಾಂಕ್ಸ್ ಫಾರ್ ಡೆಲಿಷಿಯಸ್ ಬೋಂಡಾಸ್’
ಪವನನ ಮಾತಿಗೆ ವಿಶ್ವ-ವಿಶಾಲೂ ಪರಸ್ಪರ ಮುಖ ನೋಡಿಕೊಂಡರು!
’ಡ್ಯಾಡ್ ಮತ್ತು ಮಮ್..ನಾವಿನ್ನೂ ಚಿಕ್ಕವರಲ್ಲ! ಕಾರಣ ಇಲ್ಲದೆ ಜಗಳ ಆಡೋದನ್ನ ಮೊದಲು ಬಿಡಿ! ಕಾಗೆ ಕೋಗಿಲೇನ ಅವರ ಪಾಡಿಗೆ ಬಿಡಿ. ನೇಚರ್ ಹೇಗಿದೆಯೋ ಹಾಗೆ ಅವಿರ್ತಾವೆ. ಸುಮ್ನೆ ಜಗಳ ಆಡಿ ಮನಸ್ಸು ಕೆಡಿಸ್ಕೋಬೇಡಿ! ಇದು ನಮ್ಮ ಮೇಲೂ ಪರಿಣಾಮ ಬೀರುತ್ತೆ. ಬೆಳಿಗ್ಗೆ ಏನದ್ರೂ ಜಗಳ ಆಡಿದ್ದರೆ ಮೊದ್ಲು ಕಾಂಪ್ರೊಮೈಸ್ ಮಾಡ್ಕೊಳ್ಳಿ..ಇಲ್ಲಾಂದ್ರೆ…?’ ಪವನ ಧಮಕೀ ಹಾಕಿದ!
’ಏನೋ ನಮ್ಮನ್ನೇ ಹೆದ್ರಿಸ್ತೀಯಾ..? ಈ ಮಟ್ಟಕ್ಕೆ ಬಂದೆಯಾ..?’ ವಿಶ್ವ ವಿಶಾಲೂ ಗುರುಗುಟ್ಟಿದರು.
’ನೋಡು ಡ್ಯಾಡ್, ನೀನು ಕೂಲ್ ಆದ್ರೆ ಸರಿ ಇಲ್ಲಾಂದ್ರೆ ಮಮ್ಮಿ ಅಪ್ಪನ್ನ ಐ ಮೀನ್ ನಿಮ್ಮ ಮಾವ ಹರಿಕತೆ ಅಪ್ಪಣ್ಣನವರನ್ನ ಕರೆಸಿಬಿಡ್ತೀನಿ!’
’ಏನೋ ನಮ್ಮಪ್ಪ ಅಷ್ಟು ಕೆಟ್ಟವರೇನೋ..?’ ವಿಶಾಲೂ ಕಂಗಾಲಾಗಿ ಕೇಳಿದಳು.
’ಮಮ್ಮಿ ನೀನೂ ಅಷ್ಟೆ! ಸುಮ್ಮನೆ ಜಗಳ ತೆಗೆದರೆ ಡ್ಯಾಡಿ ಅಮ್ಮನ್ನ ಐ ಮೀನ್ ನಿಮ್ಮತ್ತೆ ಬೊಂಬಾಯಿ ಸಾವಿತ್ರಮ್ಮನ್ನ ಕರೆಸಿಬಿಡ್ತೀನಿ’
’ಲೇ..ಏನೋ ಅದು..? ನಮ್ಮಮ್ಮನ್ನ ಬೊಂಬಾಯಿ ಅಂತಿದ್ದೀಯ..?’ ವಿಶ್ವ ಗದರಿಸಿದ.
’ಸೂಪರ್ ಐಡಿಯಾ ಕಣೋ ಅಣ್ಣ! ಇಬ್ರೂ ಹೀಗೆ ಜಗಳ ಅಡ್ತಿದ್ದರೆ ಐಡಿಯಾನ ಇಂಪ್ಲಿಮೆಂಟ್ ಮಾಡಿಬಿಡೋಣ! ಆಗ ಇಬ್ರೂ ಕಂಟ್ರೋಲಿಗೆ ಬರ್ತಾರೆ’
ಮಾವನ ಹರಿಕತೆ ನೆನಸಿಕೊಂಡು ವಿಶ್ವ ಅಧೀರನಾದ!! ಅತ್ತೆ ಬಾಯಿಯನ್ನು ನೆನಸಿಕೊಂಡು ವಿಶಾಲೂ ತೆಪ್ಪಗಾದಳು!
ಕಾಗೆ ಮತ್ತು ಕೋಗಿಲೆಗಳ ಪಕ್ಷ ಹುಟ್ಟುವುದಕ್ಕೆ ಮುಂಚೆಯೇ ಭೇಷರತ್ತಾಗಿ ವಿಸರ್ಜನೆಯಾಗಿದ್ದವು!
*******
ವಾವ್….ಚೆನ್ನಾಗಿದೆ !
ಚೆನ್ನಾಗಿದೆ….ರೀ…
ha ha.. chennagide 🙂
Wonderful
nice hasya